ಶುಕ್ರವಾರ, ನವೆಂಬರ್ 19, 2010

ಬಿಲ್ ಗೇಟ್ಸ್


ಬಿಲ್ ಗೇಟ್ಸ್

ಇಂದು ಅಕ್ಟೋಬರ್ 28.   ಬಿಲ್ ಗೇಟ್ಸ್ ಅವರ ಹುಟ್ಟಿದ ಹಬ್ಬ.  ಬದುಕಿನ ರೀತಿಯನ್ನು ಬದಲಿಸಿದ ಮಹತ್ವದ ವ್ಯಕ್ತಿಗಳಲ್ಲಿ ಬಿಲ್ ಗೇಟ್ಸ್ ಒಬ್ಬರು.    ಅಂದಿನ ದಿನಗಳಲ್ಲಿ ಹಲವಾರು  ಸಣ್ಣ ಹಾಳೆ ಜೊತೆ ಕಾರ್ಬನ್ ಕಾಪಿಗಳನ್ನು ಇಟ್ಟು ಬೆರಳಚ್ಚು ಯಂತ್ರದಲ್ಲಿ ಬಲವೆಲ್ಲಾ ಬಿಟ್ಟು ಕುಟ್ಟುತ್ತಿದ್ದುದು, ದೊಡ್ಡ ದೊಡ್ಡ ರಿಜಿಸ್ಟರುಗಳಲ್ಲಿ ಕಚೇರಿಗಳಲ್ಲಿ ಲೆಖ್ಖ ಬರೆಯುತ್ತಿದ್ದುದು ಇದೆಲ್ಲಾ ನೆನಪಾಗುತ್ತದೆ. 

1984ರ ಆಸು ಪಾಸು, ಇದ್ದಕ್ಕಿದ್ದಂತೆ ನಮ್ಮ ಕಚೇರಿಯಲ್ಲಿ ಕಂಪ್ಯೂಟರ್ ಬಂತು.  ಅಂದಿನ ಟೈಪ್ ರೈಟರ್ ಜೊತೆ ಹೆಣಗಿದ್ದ ನಮಗೆ ಈ ಕಂಪ್ಯೂಟರ್ ಕೀಲಿಮಣೆಯಲ್ಲಿ  ಟೈಪ್ ಮಾಡಿದ ಅನುಭವ ಮರೆಯಲಾಗದ್ದು.  ಎಷ್ಟು ಮೃಧುವಾದ ಸ್ಪರ್ಶ. ಅದೇನು ಪ್ರೀತಿ ಹುಟ್ಟಿತೋ!  ಟೈಪ್ ಮಾಡಿ ಲೆಖ್ಖ ಬರೆಯುತ್ತಿದ್ದವನಿಗೆ ಕಂಪ್ಯೂಟರ್ ಜೊತೆಗಿನ ಬದುಕು ಇಷ್ಟವಾಗಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಹಾದಿಯಲ್ಲಿ ನಡೆಯತೊಡಗಿದೆ.   ಹಾಗಾಗಿ  ಬಿಲ್ ಗೇಟ್ಸ್ ಅಂದರೆ ಒಂದು ರೀತಿಯ ಪ್ರೀತಿ.    ಆ ಡಾಸು, ವಿಂಡೋಸು, ಸುಲಲಿತ ಕೀ ಬೋರ್ಡು, ಮೌಸು ಇವೆಲ್ಲಾ ನಮ್ಮ ಮುಂದೆ ತಂದಿಟ್ಟು ನಮ್ಮ ಬದುಕಿನ ರೀತಿಯನ್ನೇ ಬದಲಿಸಿದ ಈ ಹರಿಕಾರನನ್ನು ಕೊಂಡಾಡದೆ ಇರಲು ಹೇಗೆ ತಾನೇ ಸಾಧ್ಯ.  ಈತನ ಕೊಡುಗೆಯಿಂದ ತಾನೇ ಇಂದು ನಮ್ಮ ಬೆಂಗಳೂರು ಮತ್ತು ದೇಶದ ಇತರ ಭಾಗದ ಹುಡುಗರು ಭರವಸೆಯ ಹುದ್ದೆಗಳನ್ನು ಕಾಣಲಾಗುತ್ತಿರುವುದು! 

ನಮ್ಮ ಕಾಲದ ಇಬ್ಬರು ಮಹಾನ್ ಯುವಕರಲ್ಲಿ ಒಬ್ಬ ಬಿಲ್ ಗೇಟ್ಸ್ ಮತ್ತೊಬ್ಬ ಇತ್ತೀಚಿನ ವರ್ಷದಲ್ಲಿ  ಈ ಲೋಕವನ್ನಗಲಿದ ಸ್ಟೀವ್ ಜಾಬ್ಸ್ ನಮ್ಮ ಬದುಕಿನ ರೀತಿಯನ್ನು ಬದಲಿಸಿದ ಮಹತ್ವದ ಹುಡುಗರು ಎಂದು ನನ್ನ ಅಭಿಪ್ರಾಯ.  ನಾನು  ಇತರ ವಿಜ್ಞಾನಿಗಳನ್ನ, ಇತರ ಕ್ಷೇತ್ರಜ್ಞರನ್ನ ಮತ್ತು ಇತರ ಕಂಪ್ಯೂಟರ್ ಕ್ಷೇತ್ರದ ಸಾಧಕರನ್ನು ತಿರಸ್ಕರಿಸುತ್ತಿಲ್ಲ.  ಆದರೆಈ ಹುಡುಗರು ತಮ್ಮ  ಆಕಾಂಕ್ಷೆಯಿಂದ ಮತ್ತು ಸೃಜನಶೀಲ ಮನದಿಂದ  ಪ್ರಪಂಚದ ಬದುಕಿನ ರೀತಿಯನ್ನು ಬದಲಿಸಿದ್ದು ಮಾತ್ರ ನಿಜ.  ತಮ್ಮ ಕನಸುಗಳನ್ನು ಮಾರಿದ ಈ ಸುಂದರ ಹುಡುಗರು, ಲೋಕಿಗರ ಕನಸುಗಳಿಗೂ ರೆಕ್ಕೆಪುಕ್ಕಗಳನ್ನು ಕೊಟ್ಟವರು. 

ಬಿಲ್ ಗೇಟ್ಸ್ ಜೀವನದ  ಪ್ರಾರಂಭಿಕ ಚರಿತ್ರೆಯಾದ 'ಮೇಕಿಂಗ್ ಆಫ್ ದಿ ಮೈಕ್ರೋಸಾಫ್ಟ್ಪುಸ್ತಕದ ಪ್ರಾರಂಭಿಕ ಪುಟದಲ್ಲಿ ಆತನ ಕಾರ್ಯದರ್ಶಿಯಾದ  ಮಿರಿಯಂ ಲೋಬೋ ಹೇಳುವ ಮಾತು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿದೆ.  ಆಕೆ ಹೇಳುತ್ತಾಳೆ, "ಒಬ್ಬ ವ್ಯಕ್ತಿ ಉತ್ತುಂಗಕ್ಕೆ ಬರುವುದು ಎಷ್ಟು ಮುಖ್ಯವೋ, ಆ ಉತ್ತುಂಗತೆಯನ್ನು ನಿರಂತರವಾಗಿ ಕಾಯ್ದು ಕೊಳ್ಳುವುದು ಅದಕ್ಕಿಂತ ಮುಖ್ಯ. ಈ ನಿಟ್ಟಿನಲ್ಲಿ ಬಿಲ್ ಗೇಟ್ಸ್ ಅತ್ಯಂತ ಮಹತ್ವದ ವ್ಯಕ್ತಿ". 

ತಾನು ಸಾಧಿಸಿದ ಆಕಾಂಕ್ಷೆಗಳು, ಬೆಳೆಸಿದ ವ್ಯಾಪಾರ, ಬೆಳೆಸಿದ ಐಶ್ವರ್ಯ ಮತ್ತು ಅದನ್ನು ವಿನಿಯೋಗಿಸುತ್ತಿರುವ ಔದಾರ್ಯ ಇವೆಲ್ಲದರಲ್ಲೂ ಆತ ಉತ್ತುಂಗನೇ.  ಮತ್ತೊಬ್ಬ ಮಹಾನ್ ಬುದ್ಧಿವಂತ ಶ್ರೀಮಂತ ವ್ಯಾಪಾರಸ್ಥ ವಾರೆನ್ ಬಫ್ಫೆಟ್ ಅವರು ತಮ್ಮ ಮಹತ್ ಐಶ್ವರ್ಯವನ್ನು ಬಿಲ್ ಗೇಟ್ಸ್ ಅವರ ಲೋಕ ಹಿತರಕ್ಷಣೆಯ ಉದ್ದೇಶಕ್ಕಾಗಿ ನೀಡಿದಾಗ ಹೇಳಿದ ಮಾತು ಮನನೀಯ, "ಈತನಿಗಿಂತ ಹಣದ ಸಮರ್ಥ ನಿರ್ವಹಣಾ ವ್ಯಕ್ತಿ ಇನ್ನೆಲ್ಲಿ ಸಿಗಬೇಕು!". 


ನಮ್ಮ ಕಾಲಮಾನದ ಅತ್ಯಂತ ಮಹಾನ್ ಕನಸುಗಾರ, ತನ್ನ ಕನಸುಗಳ ಮೂಲಕ ಲೋಕದ ಜನರ ಬದುಕಿನ ಮುಚ್ಚಿದ ಬದುಕಿಗಳಿಗೆ ಹೊಸ ಬಗೆಯ ದ್ವಾರಗಳನ್ನು ನಿರ್ಮಿಸಿದ ಈ ಗೇಟ್ ಅವರಿಗೆ ಸಾಟಿ ಉಂಟೆ.  'ನೀನು ಎಲ್ಲರಿಗೂ ನಮ್ಮವನೇ ಗೆಳೆಯ'.  ನಿನ್ನಂತಹವರು ಇನ್ನೂ ಹೆಚ್ಚು ಹೆಚ್ಚಾಗಿ ಈ ವಿಶ್ವದಲ್ಲಿ ಉದಯಿಸುತ್ತಿರಲಿ.  ನಿನ್ನ ಉತ್ತಮ ಕೆಲಸಗಳು ನಿರಂತರವಾಗಿ ಮುಂದುವರೆಯುತ್ತಿರಲಿ.

Tag: Bill Gates

ಕಾಮೆಂಟ್‌ಗಳಿಲ್ಲ: