ಭಾನುವಾರ, ನವೆಂಬರ್ 21, 2010

ಸೀಮಾತೀತ ಕಲಾವಿದ ಕಮಲಹಾಸನ್

ಸೀಮಾತೀತ ಕಲಾವಿದ ಕಮಲಹಾಸನ್

ಕಲೆ ಎಂಬುದು ಸೀಮಾತೀತವಾದ ಅಭಿವ್ಯಕ್ತಿ.  ಅದು ಕಲೆಯಾಗಿ ಉಳಿದಿದ್ದರೆ!  ಅದೊಂದು ಭವ್ಯ ಅಭಿವ್ಯಕ್ತಿಯಾಗಿ ಉಳಿದಿದ್ದರೆ!  ಚಾರ್ಲಿ ಚಾಪ್ಲಿನ್ ನಮಗೆಲ್ಲರಿಗೂ ಇಷ್ಟ.  ವಿಶ್ವ ಮಟ್ಟದಲ್ಲಿ ಆತನಂತ ಸೀಮಾತೀತ ನಟ ಮತ್ತೊಬ್ಬರಿಲ್ಲ.  ನಮ್ಮ ಭಾರತದ ಮಟ್ಟಿಗಾದರೂ ಅಂತಹ ಸೀಮಾತೀತ ನಟರೊಬ್ಬರಿದ್ದಾರೆ.  ಅವರೇ ಕಮಲಹಾಸನ್.  ಇಂದು ಅವರ ಜನ್ಮದಿನ. 

ಕಮಲಹಾಸನ್ ಅವರು ಹುಟ್ಟಿದ್ದು ನವೆಂಬರ್ 7, 1954ರಂದು.  ಕಮಲ್ ಕೇವಲ 5 ವರ್ಷದವನಿದ್ದಾಗ ಕಳತ್ತೂರ್ ಕಣ್ಣಮ್ಮಚಿತ್ರದಲ್ಲಿ ಅಭಿನಯಿಸಿದ.  ಈ ಹುಡುಗ ಅಭಿನಯ ನೀಡಿದ ಅಮ್ಮಾವುಂ ನೀಯೇ ಅಪ್ಪಾವುಂ ನೀಯೇಇಂದೂ ತಮಿಳಿನಲ್ಲಿ ಅತ್ಯಂತ ಪ್ರೀತಿ ಹುಟ್ಟಿಸುವ ಹಾಡಾಗಿ ಉಳಿದಿದೆ.  ಅವರೇ ಹೇಳುವಂತೆ ಅವರ ಜೀವನವನ್ನೆಲ್ಲಾ ಕಳೆದಿದ್ದೇ ಸಿನಿಮಾ ಸ್ಟುಡಿಯೋಗಳಲ್ಲಿ.  ಇನ್ನೂ ಮೀಸೆ ಬರುವ ಯುವಕನಾಗಿ ನಾವು ಅವರನ್ನು ಬಾಲಚಂದರ್ ಅವರ ಪ್ರಖ್ಯಾತ ಸಿನಿಮಾಗಳಲ್ಲಿ ನೋಡುವ ಮುಂಚೆಯೇ ಅಸಂಖ್ಯಾತ ಮಲಯಾಳಂ ಚಿತ್ರಗಳಲ್ಲಿ ಅವರು ನಟಿಸಿಯಾಗಿತ್ತು.  ಮಹಾನ್ ನಿರ್ದೇಶಕ ಕೆ. ಬಾಲಚಂದರ್ಕಮಲಹಾಸನ್ ಅವರನ್ನು ತಮ್ಮ ಅನೇಕ ಪ್ರಸಿದ್ಧ ಸಿನಿಮಾಗಳ ಆಕರ್ಷಕ ಪಾತ್ರಗಳಿಗೆ ಅಳವಡಿಸಿಕೊಂಡರು.  ಆರಂಗೇಟ್ರಂ’, ಅಪೂರ್ವ ರಾಗಂಗಳ್’, ‘ಅವರ್ಗಳ್’, ‘ಮನ್ಮಥ ಲೀಲೈ’, ‘ಮರೋ ಚರಿತ್ರ’ , ‘ವರುಮಯಿನ್ ನಿರಂ ಸಿವಪ್ಪು’ , ‘ತೂಂಗಾದೇ ತಂಬಿ ತೂಂಗಾದೆಹೀಗೆ ಅವರು ಅಂದಿನ ದಿನಗಳಲ್ಲಿ ನಿರ್ಮಿಸಿದ ಪ್ರತಿಯೊಂದು ಮಹೋನ್ನತ ಚಿತ್ರದಲ್ಲೂ ಕಮಲ್ ಅವರಿಗೆ ವಿಶಿಷ್ಟ ಪಾತ್ರ ನೀಡಿದರು.  ಮುಂದೆ ಅದೇ ಬಾಲಚಂದರ್ ಅವರು ಮರೋ ಚರಿತ್ರದ ಹಿಂದಿ ಅವತರಣಿಕೆ ಏಕ್ ದೂಜೆ ಕೆ ಲಿಯೇಚಿತ್ರದ  ಮೂಲಕ ಕಮಲಹಾಸನ್  ಅವರನ್ನು ಹಿಂದಿ ಚಿತ್ರರಂಗಕ್ಕೆ ತರುವುದರ ಮೂಲಕ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡಿಸಿದರು. 

ಒಂದು ಭಾಷೆ ಮೇರೆ ಮೀರುವುದು ಅಲ್ಲಿನ ಕಲಾವಿದರಿಂದ.  ಅಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಜನ ಯಾವುದೇ ಭಾಷೆಯ ಸೀಮಾರೇಖೆಗಳಿಲ್ಲದೆ ಉತ್ತಮ ಸಿನಿಮಾ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಿದ್ದರು ಎಂದು ನನ್ನ ಭಾವನೆ.  ಕರ್ನಾಟಕದಲ್ಲಿ ತಮಿಳು, ತೆಲುಗು ಚಿತ್ರಗಳು ಓಡುವುದು ವಿಶೇಷವಲ್ಲ.  ಆದರೆ, ಕೆ. ಬಾಲಚಂದರ್, ಬಾಲು ಮಹೇಂದ್ರ, ಮಣಿ ರತ್ನಂ, ಕೆ. ವಿಶ್ವನಾಥ್ ಇಂತಹ ಅಂದಿನ ದಿನದ ಪ್ರವರ್ಧಮಾನಕ್ಕೆ ಬರುತ್ತಿದ್ದ ನಿರ್ದೇಶಕರೆಲ್ಲ ಹೆಚ್ಚು ಗುರುತಿಸಲ್ಪಟ್ಟಿದ್ದು ಕನ್ನಡದ ಕಲಾಭಿರುಚಿಯ ಪ್ರೇಕ್ಷಕರಿಂದ.  ಅಂದಿನ ದಿನದಲ್ಲಿ ಸಂಸ್ಕಾರ’, ‘ತಬ್ಬಲಿಯು ನೀನಾದೆ ಮಗನೆ’, ‘ವಂಶವೃಕ್ಷ’, ‘ಘಟಶ್ರಾದ್ಧ’, ‘ಸಂಕಲ್ಪ’, ‘ಚೋಮನದುಡಿ’, ‘ಕಾಕನಕೋಟೆ’, ‘ಹಂಸಗೀತೆಅಂತಹ ಪ್ರಾಯೋಗಿಕ  ಚಿತ್ರಗಳು ಕೂಡ ಕನ್ನಡ ನಾಡಿನಲ್ಲಿ ಯಶಸ್ವಿಯಾದ ಪ್ರದರ್ಶನಗಳನ್ನು ಕಾಣುತ್ತಿದ್ದವು.  ರಾಮು ಕಾರಿಯತ್ ಅಂತಹ ಮಹಾನ್ ನಿರ್ದೇಶಿಸಿದ ನಮಗೆ ಅರ್ಥವಾಗದ ಮಲಯಾಳದ ಚಟ್ಟಕ್ಕಾರಿ’, 'ನೆಲ್ಲು',  ‘ದ್ವೀಪ್ಅಂತಹ ಚಿತ್ರಗಳು ಕೂಡ ಇಲ್ಲಿನ ಜನರ ಪ್ರೋತ್ಸಾಹದ ಮನ್ನಣೆ ಪಡೆದವು. ಕಲಾತ್ಮಕ ಚಿತ್ರಗಳ ಸರದಾರರಾದ  ಸತ್ಯಜಿತ್ ರೇ, ಶ್ಯಾಮ್ ಬೆನೆಗಲ್, ಗೋವಿಂದ ನಿಹಲಾನಿ ಇಲ್ಲಿ ಅಪಾರ ಜನಪ್ರಿಯರು.  ಹೀಗೆ ಕಮಲಹಾಸನ್, ಬಾಲಚಂದರ್ ಇಲ್ಲಿನ ಮನೆಮಾತಾಗಿ ಹೋಗಿದ್ದರು.  

ಕಮಲಹಾಸನ್ ಮುಂದೆ ಹೊಸ ನಿರ್ದೇಶಕರಾದ ಭಾರತೀರಾಜ ಅವರ ಪದಿನಾರು ವಯದಿನಿಲೆಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದರು. ಅವರದೇ ಮತ್ತೊಂದು ಚಿತ್ರ ಸಿಗಪ್ಪು ರೋಜಾಕ್ಕಳ್ಚಿತ್ರದಲ್ಲೂ ಅವರದು ಮರೆಯದ ಅಭಿನಯ. ಮತ್ತೊಬ್ಬ ಹೊಸ ನಿರ್ದೇಶಕ ಬಾಲು ಮಹೇಂದ್ರ ಅವರು ಕನ್ನಡದಲ್ಲಿ ತಯಾರಿಸಿದ ಕೋಕಿಲಚಿತ್ರದಲ್ಲಿ ಅಭಿನಯಿಸಿ ವಿಶಿಷ್ಟರಾಗಿ ಹೋದರು.  ಮುಂದೆ ಅದೇ ಬಾಲು ಮಹೇಂದ್ರರ ಮೂನ್ರಾಂ ಪಿರೈ’ (ಹಿಂದಿಯಲ್ಲಿ ಸದ್ಮಾ’) ದಲ್ಲಿ ನಟಿಸಿದರು.   ಮಲಯಾಳದಲ್ಲಿ ಅವರು ನಟಿಸಿದ ಕೆಲವೊಂದು  ಚಿತ್ರಗಳು ಕೂಡ ಅಣಿಮುತ್ತುಗಳೇ.  ಮುಂದೆ ಮಣಿರತ್ನಂಅವರ ಒರು ಖೈದಿಯಿನ್ ಡೈರಿಮತ್ತು  ನಾಯಗನ್ಅವರ ಅಪೂರ್ವ ಚಿತ್ರಗಳು.  ಕೆ. ವಿಶ್ವನಾಥ್ ಅವರ ಸಾಗರಸಂಗಮಂ’, ‘ಸ್ವಾತಿ ಮುತ್ಯಂತೆಲುಗು ಚಿತ್ರಗಳು ಆತನ ಸಕಲ ಅಭಿನಯ ಕಲೆಯ ಸಾರವನ್ನೇ ಹೊರಹೊಮ್ಮಿಸಿದ ಚಿತ್ರಗಳು.  ಸಂಗೀತಂ ಶ್ರೀನಿವಾಸ ರಾಯರ ಸೊಮ್ಮುಕ್ಕಡದಿ, ಸೊಕ್ಕುಕಡದಿಆತನ ಲೀಲಾಜಾಲ ಹಾಸ್ಯ ಪ್ರದರ್ಶನಕ್ಕೆ ಒಂದು ಅದ್ಭುತ ನಿರ್ದೇಶನ.  ಇದೇ ಸಂಗೀತಂ ಶ್ರೀನಿವಾಸರಾಯರು ಕನ್ನಡದ ಶ್ರಂಗಾರ್ ನಾಗರಾಜ್ ಅವರಿಗಾಗಿ ಮಾತಿಲ್ಲದ ಪುಷ್ಪಕ ವಿಮಾನಚಿತ್ರವನ್ನು ನಿರ್ದೇಶಿಸಿದರು.  ಮಾತಿಲ್ಲದ ಈ ಅದ್ಭುತ ಚಿತ್ರದಲ್ಲಿ ಕಮಲಹಾಸನ್ ಅವರ ಅಭಿನಯ ಮಾತಿನಲ್ಲಿ ವರ್ಣಿಸಲು ಅಸಾಧ್ಯವಾದದ್ದು. ಈ ಚಿತ್ರವೇ ಸಾಕು ಕಮಲಹಾಸನ್ ಎಂತಹ ಸೀಮಾತೀತ ಕಲಾವಿದ ಎಂದು ಬಣ್ಣಿಸಲು. ಹೀಗೆ ಹೇಳುತ್ತ ಹೋದರೆ ಆತನ ವಿಶೇಷ ಚಿತ್ರಗಳ ವಿಶ್ಲೇಷಣೆ ಇರಲಿ, ಕೇವಲ ಹೆಸರು ಬರೆಯುವುದಕ್ಕೂ ಪುಟಗಳು ಮಿಕ್ಕಿ ಹರಿಯುತ್ತವೆ. 

ಬಹಳಷ್ಟು ಕಲಾವಿದರು ಅಲ್ಲೊಂದು ಇಲ್ಲೊಂದು ಉತ್ತಮ ಚಿತ್ರದಲ್ಲಿ ನಟಿಸಿದರೆ, ಈ ಮಹಾನ್ ನಟ ತನ್ನ ಬದುಕಿನಲ್ಲಿ ಅಲ್ಲೊಂದು ಇಲ್ಲೊಂದು ಮಾತ್ರ ಸಾಧಾರಣ ಚಿತ್ರದಲ್ಲಿ ನಟಿಸಿದರೇನೋ ಎನಿಸುತ್ತದೆ.  ಖ್ಯಾತ ಲೇಖಕ ಶಿವ ಖೇರ ಹೇಳುವುದು ನೆನಪಾಗುತ್ತದೆ- “Successfull people don’t do different things. They do things differently”. ಈ ನಿಟ್ಟಿನಲ್ಲಿ ಹೇಳುವುದಾದರೆ ಕಮಲಹಾಸನ್ ಅವರು ಮಾಡಿದ್ದೆಲ್ಲ ವಿನೂತನವೋ, ಇಲ್ಲ ಅವರು ಮಾಡಿದ್ದನ್ನೆಲ್ಲಾ ವಿನೂತನವಾಗಿ ಮಾಡಿದರೋಎಂದು  ಯೋಚಿಸಿದರೆ ಅದೂ ಸರಿಯಾದದ್ದೇ!   ಸಾಧಾರಣ ಚಿತ್ರಗಳನ್ನೂ ವಿಶಿಷ್ಟವಾಗಿ ಮೂಡಿಸುವ ಮಹಾನ್ ಶಕ್ತಿ ಅವರದು.  ಹಲವು ನಿರ್ದೇಶಕರ ಸೃಜನಶಕ್ತಿ ಕುಂಟಿತಗೊಂಡರೂ ಈ ಮಹಾನ್ ನಟನ ಸೃಜನೆ ಕುಂದಲೇ ಇಲ್ಲ.  ದೇವರ್ ಮಗನ್’, ‘ಅಪೂರ್ವ ಸಹೋದರರ್ಗಳ್’, ‘ಇಂಡಿಯನ್’, ‘ಅವೈ ಷಣ್ಮುಗಿ’,  ‘ಪಂಚತಂತ್ರಂ’, ‘ದಶಾವತಾರಂ’, ‘ವಿಶ್ವರೂಪಂಹೀಗೆ ಅವರ ಮಹಾನ್ ಶಕ್ತಿ ಇನ್ನೂ ತ್ರಿವಿಕ್ರಮನಂತೆ ಬೆಳೆಯುತ್ತಲೇ ಇದೆ. 

ಕನ್ನಡದಲ್ಲೂ ಮೇಲೆ ಹೇಳಿದ ಕೋಕಿಲ’, ‘ಪುಷ್ಪಕ ವಿಮಾನ’, ‘ಬೆಂಕಿಯಲ್ಲಿ ಅರಳಿದ ಹೂವು’, ‘ಮಾರಿಯಾ ಮೈ ಡಾರ್ಲಿಂಗ್’, ‘ರಾಮ ಶಾಮ ಭಾಮಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.  ಹುಚ್ಚ’, ‘ಬೆಪ್ಪ’, ’ಕುರುಡ’,  ‘ಪ್ರೇಮಿ’, ‘ಸ್ವತಂತ್ರ ಹೋರಾಟಗಾರ’, ‘ಕುಬ್ಜ’, ‘ಸಂಗೀತಗಾರ’, ‘ನಾಟ್ಯಗಾರ’, ‘ಗಾಡ್ ಫಾದರ್ ಅಂತಹ ಮಾಫಿಯಾ’, ‘ವಿಲನ್’, ‘ಸನ್ಯಾಸಿ’, ‘ಚಾರ್ಲಿ ಚಾಪ್ಲಿನ್ ಅಂತಹ ನಟನ ಅಣಕ’, ‘ಶಿಕ್ಷಕ’, ‘ಪೊಲೀಸ್’, ’ಕಳ್ಳ’, ‘ಹುಡುಗಿ’, ‘ಮುದುಕಿ’  ಹೀಗೆ  ಪಾತ್ರಗಳನ್ನೂ ಅವರು ಮಾಡಿಯಾಗಿದೆ.  ಪ್ರತೀ ಭಾರೀ ಹೊಸ ಹೊಸ ಸೋಜಿಗ ನೀಡುತ್ತಾ ದಶಾವತಾರಂಚಿತ್ರದಲ್ಲಿ ಹತ್ತು ಪಾತ್ರಗಳನ್ನೂ ಮುಖಾಮುಖಿಯಾಗಿಸಿಕೊಂಡು ಅಪೂರ್ವ ರೀತಿಯಲ್ಲಿ ಅಭಿನಯಿಸಿದ್ದಾರೆ.  ಆತನ ದಶಾವತಾರಂ ಚಿತ್ರದಲ್ಲಿ ಆತ ನಿರ್ವಹಿಸಿದ ಹತ್ತು ಪಾತ್ರಗಳನ್ನು ನೋಡುವಾಗ ಪತ್ರಿಕೆಗಳಲ್ಲಿ ದೂರದರ್ಶನದಲ್ಲಿ ಜನರಿಂದ ಅಷ್ಟೊಂದು ಕೇಳಿದ್ದರೂ ಇದು ಸಾಧ್ಯವೇ, ಒಂದಕ್ಕೊಂದು ಹೋಲಿಕೆಯೇ ಇಲ್ಲದ ಅಭಿನಯದ ಪಾತ್ರಗಳು ಇವು ಎಂದು ನಂಬಲಸಾಧ್ಯ ಭಾವ ಹುಟ್ಟಿಸುತ್ತವೆ.    ಅವರಷ್ಟು ರಾಷ್ಟ್ರಮಟ್ಟದಲ್ಲಿ, ಹಾಗೂ ವಿವಿಧ ರಾಜ್ಯ ಮಟ್ಟಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದವರು ಮತ್ತೊಬ್ಬರಿಲ್ಲ. 

ಅತ್ಯಂತ ಸಾಧಾರಣ ಎನ್ನುವ ಕತೆಯಿರುವ ಚಿತ್ರಗಳು ಕೂಡ ಕಮಲಹಾಸನ್ ಅವರ ವೈವಿಧ್ಯತೆಯಲ್ಲಿ ವಿಶೇಷ ಎನಿಸಿಬಿಡುತ್ತವೆ.  ಜಾರ್ಜ್ ಬರ್ನಾಡ್ ಷಾ ಅವರು, ಚಾರ್ಲಿ ಚಾಪ್ಲಿನ್ ಬಗ್ಗೆ ಹೇಳುತ್ತ, “he is the only genius in the film landಎಂದರು.  ಅದು ಬಹುಷಃ ಜಾರ್ಜ್ ಬರ್ನಾಡ್ ಷಾ ಅವರ ಕಾವ್ಯಮಯ ನುಡಿ ಇರಬೇಕು.  ಅದೇನೇ ಇರಲಿ, ನಮ್ಮ ಕಾಲದಲ್ಲೂ ಒಬ್ಬ Genius ಆದ ನಟರಿದ್ದಾರೆ.  ಅವರೇ ಕಮಲಹಾಸನ್’.  ಬಹಳಷ್ಟು ಜನ ಉತ್ಕೃಷ್ಟ ಕಲಾವಿದರು ಚಲನಚಿತ್ರ ಪ್ರಪಂಚದಲ್ಲಿದ್ದಾರೆ ನಿಜ.  ಬಹಳಷ್ಟು ಜನಪ್ರಿಯರೂ ಇದ್ದಾರೆ ನಿಜ.  ಆದರೆ ಕಮಲಹಾಸನ್ ಅವರಂತೆ ಬುದ್ಧಿವಂತ ಮತ್ತು ಸಾಮಾನ್ಯ ಪ್ರೇಕ್ಷಕನ ಅಭಿರುಚಿಯ ಮಟ್ಟಕೆ ಕಲೆಯ ಶ್ರೇಷ್ಠತೆಯನ್ನು ಬೆಳೆಸಿದ  ಕಲಾವಿದರು ತುಂಬಾ ಅಪರೂಪ.   

ಇಷ್ಟೊಂದು ಸಾಧನೆ ಮಾಡಿರುವ ಕಮಲಹಾಸನ್ಅವರಿಗೆ ಇನ್ನೂ 61 ವರ್ಷ.  ಈ 61 ವರ್ಷಗಳಲ್ಲಿ 56 ವರ್ಷಗಳನ್ನು ಚಿತ್ರರಂಗದಲ್ಲಿಯೇ ಕಳೆದಿದ್ದಾರೆ.  ಈ ಮಹಾನ್ ನಟನ ಬದುಕಿನಲ್ಲಿ ಬಹಳಷ್ಟು ನವ  ವಸಂತಗಳು ಮೂಡುತ್ತಿರಲಿ.  ಅವರಿಂದ ಕಲಾ ಪ್ರಪಂಚ ಬೆಳಗುತ್ತಲೇ ಇರಲಿ ಎಂದು ಹಾರೈಸೋಣ.

Tag: Kamala Hassan

ಕಾಮೆಂಟ್‌ಗಳಿಲ್ಲ: