ಶುಕ್ರವಾರ, ನವೆಂಬರ್ 19, 2010

ಇಂದಿರಾ ಗಾಂಧಿ


ಇಂದಿರಾ ಗಾಂಧಿ

ಜನನ: ನವೆಂಬರ್ 19. 1917; ಮರಣ: ಅಕ್ಟೋಬರ್ 31, 1984

ಇಂದಿರಾ ಗಾಂಧಿ ಎಂದರೆ ಮಿಶ್ರ ಭಾವಗಳು ಒಮ್ಮೆಲೆ ಬಂದು ಆವರಿಸುತ್ತವೆ. ಅವರನ್ನು ಇಷ್ಟಪಡಬೇಕೋ ಬೇಡವೋ ಎಂಬ ವಿಚಿತ್ರ ಪ್ರಶ್ನೆಗಳು ಮೂಡುತ್ತವೆ! ಈ ನಿಟ್ಟಿನಲ್ಲಿ ಆಕೆ ನಮ್ಮ ಜೀವಮಾನದ ಮಹಾನ್ ಶಕ್ತಿಶಾಲಿ ಮಹಿಳೆ.
  
ಅರಮನೆಯಂತಹ ಮನೆಯಲ್ಲಿ ಯಾವಾಗಲೂ ರಾಜಕಾರಣವನ್ನೇ ನೋಡಿ ಬೆಳೆದ ಹುಡುಗಿ. ಮನೆಯಲ್ಲಿ ಆಡಲು ಬೇರೆ ಮಕ್ಕಳಿಲ್ಲ. ದೊಡ್ಡತನದ ಮನೆಯಿಂದ ಹೊರಗೆ ಹೋಗಿ ಆಡುವ ಸಂಭವ ಇಲ್ಲ. ಅಪ್ಪ ತಾತಂದಿರೋ ಯಾವಾಗಲೂ ಜೈಲು, ಪ್ರವಾಸ ಮತ್ತು ಅಪ್ಪಿತಪ್ಪಿ ಮನೆಯಲ್ಲಿದ್ದಾಗ ಬರೀ ಲೋಕೋದ್ಧಾರದ ರಾಜಕಾರಣ. ಅಮ್ಮನೋ ರೋಗಿಷ್ಟೆ. ಸೋದರತ್ತೆಯರೊಂದಿಗೆ ಅಸಹನಾತ್ಮಕ ಸಹಜೀವನ. ಹೀಗೆ ಇಂದಿರಾ ಪ್ರಿಯದರ್ಶಿನಿ ತಮ್ಮ ಬಾಲ್ಯವನ್ನು ಕಳೆದರು. ಓದಿದ್ದು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ. ಅಲ್ಲಿ ರಾಜಕೀಯದಲ್ಲಿ ಕ್ರಿಯಾಶೀಲನಾಗಿದ್ದ ಫಿರೋಜ್ ಗಾಂಧಿ ಅವರ ಪರಿಚಯ. ಓದಿನ ದಿನಗಳಲ್ಲಿ ಅಪ್ಪನ ಜೊತೆ ಉದ್ದುದ್ದದ ಪತ್ರ ಬರೆಯುವ ಹವ್ಯಾಸ. ಹೀಗೆ ಆಕೆಯಲ್ಲಿ ಕಲಿಯುವ ಮತ್ತು ಚಿಂತಿಸುವ ಪ್ರವೃತ್ತಿಗಳು ಕೂಡ ಕಾಣುತ್ತದೆ. ಆಕೆಯ ಗೆಳತಿಯಾದ ಪ್ರಸಿದ್ಧ ಬರಹಗಾರ್ತಿ ಪಫುಲ್ ಜಯಕರ್ ಅವರು, ನೆಹರೂ ಮತ್ತು ಇಂದಿರಾ ಗಾಂಧಿ ಅವರಲ್ಲಿನ ಓದಿನ ಗುಣಕ್ಕೂ ಮತ್ತು ಮುಂದಿನ ತಲೆಮಾರಿನ ಸಂಜಯ್ ಮತ್ತು ರಾಜೀವ್ ಗಾಂಧಿ ಅವರಲ್ಲಿ ಓದಿನ ಗುಣವಿಲ್ಲದ ವ್ಯಕ್ತಿ ಚಿತ್ರಣಗಳನ್ನು ಸುಂದರಾವಾಗಿ ವಿಶ್ಲೇಷಿಸಿದ್ದಾರೆ. ಮುಂದೆ 18ನೆಯ ವಯಸ್ಸಿನಲ್ಲಿ ತಾಯಿ ಕಮಲಾ ಅವರನ್ನೂ ಕಳೆದುಕೊಂಡಳು, ಬೆಳೆಯುತ್ತಿರುವ ಹುಡುಗಿ. ಮುಂದೆ ಅಪ್ಪನ ಇಚ್ಚೆಗೆ ವ್ಯತಿರಿಕ್ತವಾಗಿ ಫಿರೋಜ್ ಗಾಂಧಿಯ ಜೊತೆ ಮದುವೆ. ಹೀಗೆ ಚಿಕ್ಕವಯಸ್ಸಿನಿಂದಲೇ ಗಟ್ಟಿಗತನದ ಸ್ವಾವಲಂಭಿ ಜೀವನಕ್ಕೆ ಪೂರಕವಾದಂತಹ ಅಂಶಗಳು ಆಕೆಯ ಪ್ರಾರಂಭಿಕ ಜೀವನದಲ್ಲಿ ಕುರುಹುಗಳಾಗಿ ದಾಖಲಾಗಿವೆ. ೧೯೪೨ರಲ್ಲಿ ಮದುವೆಯ ನಂತರ ಗಂಡ-ಹೆಂಡತಿ ಇಬ್ಬರೂ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಬಂಧನಕ್ಕೆ ಒಳಗಾದರು. ಎರಡು ಮಕ್ಕಳಾದ ಮೇಲೆ ಅವರ ವಿವಾಹಜೀವನದಲ್ಲಿ ಬಿರುಕು ಕಾಣಿಸಿಕೊಂಡು ಬೇರೆ ಆಗಿ, ಮುಂದೆ ಫಿರೋಜ್ ಗಾಂಧಿಯ ಕೊನೆಯ ದಿನಗಳಲ್ಲಿ ಪುನಃ ಒಟ್ಟಿಗಿದ್ದರಂತೆ.

ನೆಹರೂ ಅವರು ಮಗಳನ್ನು ತಮ್ಮ ಅನಧಿಕೃತ ರಾಜಕೀಯ ಸಹಾಯಕರನ್ನಾಗಿ ಮಾಡಿಕೊಂಡಿದ್ದರೂ ಆಕೆಯನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಬಿಟ್ಟಿರಲಿಲ್ಲ. ಇದಕ್ಕೆ ನೆಹರೂ ಅವರಿಗೆ ಸ್ವಜನಪಕ್ಷಪಾತ ಇಷ್ಟವಿರಲಿಲ್ಲ ಎಂಬ ವ್ಯಾಖ್ಯಾನವಿದೆ. ಆದರೆ 1959 ಮತ್ತು 1960 ರಲ್ಲಿ ಆಕೆ ರಾಷ್ಟ್ರೀಯ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಮುಂದೆ ನೆಹರು ಅವರು 1964ರಲ್ಲಿ ನಿಧನರಾದಾಗ ಲಾಲ ಬಹದ್ದೂರ್ ಶಾಸ್ತ್ರಿ ಅಧಿಕಾರವಹಿಸಿಕೊಂಡರು. ಶಾಸ್ತ್ರಿ ಅವರ ಕೋರಿಕೆಯ ಮೇರೆಗೆ ಎಂದು ಬಣ್ಣಿಸಲಾಗಿರುವ ಘಟನೆಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಅವರ ಮಂತ್ರಿಮಂಡಲದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಮಂತ್ರಿ ಆದರು. ಶಾಸ್ತ್ರಿ ಅವರ ಆಡಳಿತದ ದಿನಗಳಲ್ಲಿ ಮದರಾಸು ರಾಜ್ಯದಲ್ಲಿ ಮೂಡಿದ ಹಿಂದಿ ವಿರುದ್ಧದ ಚಳುವಳಿ ಸಮಯದಲ್ಲಿ ಅಲ್ಲಿನ ರಾಜಕೀಯ ಮುಖಂಡರ ಜೊತೆ ಮಾತುಕತೆ ನಡೆಸಿ ಶಾಂತಿ ಸಂಧಾನದ ಕ್ರಿಯೆಯಲ್ಲಿ ಪಾಲ್ಗೊಂಡರು. 1965ರ ಯುದ್ಧದ ಸಮಯದಲ್ಲಿ ಗಡಿಪ್ರದೇಶದಲ್ಲಿ ನಿಂತು ಸುದ್ಧಿ ಮಾಧ್ಯಮಗಳಲ್ಲಿ ನಿರಂತರವಾಗಿ ಮಿಂಚಿದರು. ಮುಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವಿನ ನಂತರದಲ್ಲಿ ಕಾಮರಾಜ್ ಅವರ ಬೆಂಬಲದಿಂದ ಮುರಾರ್ಜಿ ಅವರ ಹಿರಿತನಕ್ಕೆ ಸೋಲುಣಿಸಿ ಭಾರತದ ಪ್ರಧಾನಿ ಆದರು.

ನಿಕ್ಸನ್ ಅವರ ಜೊತೆ ಅವರಿಗೆ ಭಯಂಕರ ವೈರುಧ್ಯ. ಆದ್ದರಿಂದ ಅವರು ಹೆಚ್ಚು ಸೋವಿಯತ್ ರಷ್ಯಾ ಕಡೆಗೆ ವಾಲಿದರು. 1971ರ ಯುದ್ಧದಲ್ಲಿ ಭಾರತ ಜಯಗಳಿಸಿ ಬಾಂಗ್ಲಾ ದೇಶ ಪಾಕಿಸ್ತಾನದಿಂದ ಬೇರ್ಪಡವಂತಾಯಿತು. ಈ ಗೆಲುವು ಇಂದಿರಾ ಗಾಂಧಿಯವರ ಸಾಧನೆ ಎಂದು ಪ್ರತಿಬಿಂಭಿಸುವ ಕೆಲಸ ಕೂಡ ಆಗಿದೆ. ವಿಶ್ವದ ವಿರೋಧ ಕಡೆಗಣಿಸಿ ಭಾರತ ಪರಮಾಣು ಶಸ್ತ್ರಗಳ ಬಗೆಗೆ ಚಿಂತನೆ ನಡೆಸುವತ್ತ ಆಕೆ ಪ್ರಥಮ ಹೆಜ್ಜೆ ಇಟ್ಟರು. ಸ್ವಾಮಿನಾಥನ್ ಅವರ ಚಿಂತನೆಯ ವ್ಯವಸಾಯ ಕ್ಷೇತ್ರದ ಹಸಿರು ಕ್ರಾಂತಿಮತ್ತು ವರ್ಗೀಸ್ ಕುರಿಯನ್ ಅವರ ಹಾಲಿನ ಹೊಳೆಯ ಶ್ವೇತ ಕ್ರಾಂತಿಅವರ ಆಡಳಿತ ಸಮಯದಲ್ಲಿ ಮೂಡಿದ ಯಶಸ್ಸಿನ ಕಾರ್ಯಕ್ರಮಗಳು.

ಅವರ ನೆಚ್ಚಿನ ಘೋಷಣೆ ಗರೀಭೀ ಹಟಾವೋಕಾರ್ಯದಲ್ಲಿ ಪ್ರಚಾರಕ್ಕೆ ಖರ್ಚಾದ ಹಣ ಕೂಡ ದೇಶದ ಬಡಜನರಿಗೆ ಮುಟ್ಟಲಿಲ್ಲ ಎಂಬುದು ಇಡೀ ವಿಶ್ವಕ್ಕೆ ಜಗಜ್ಜಾಹೀರಾದ ಸತ್ಯವಾಗಿ ಹೋಯಿತು. ರಾಜಕಾರಣದಲ್ಲಿ, ಆಡಳಿತ ಯಂತ್ರದಲ್ಲಿ ಸಾರಾಸಗಟಾಗಿ ಉತ್ತುಂಗಕ್ಕೆ ಏರಿದ ಭ್ರಷ್ಟಾಚಾರಕ್ಕೆ ಅವರು ಕಡಿವಾಣ ಹಾಕಿದ ಪ್ರಯತ್ನಗಳು ಹೆಚ್ಚು ಕಾಣುವುದಿಲ್ಲ.

ಚುನಾವಣಾ ಅಕ್ರಮಗಳ ಕುರಿತಾಗಿ ಅಲಹಾಬಾದ್ ಹೈಕೋರ್ಟ್ ಆಕೆಯ ಚುನಾವಣಾ ಆಯ್ಕೆಯನ್ನು ಅನೂರ್ಜಿತಗೊಳಿಸಿದಾಗ ಅದನ್ನು ಮುಕ್ತವಾಗಿ ಸ್ವೀಕರಿಸುವ ಮನೋಧರ್ಮ ತೋರುವುದು ಅವರಿಗೆ ಸಾಧ್ಯವಾಗಲಿಲ್ಲ. ದೇಶದಲ್ಲಿರುವ ಬುದ್ಧಿವಂತರ ಕೂಡ ಮಾತುಕತೆ ನಡೆಸಿ ಏನು ಮಾಡಬೇಕೆಂದು ತೀರ್ಮಾನಿಸುವ ಬದಲು ಮನೆ ಮುಂದೆ ಅವರಿಗೆ ಬೆಂಬಲವಾಗಿ ಜಯಕಾರ ಹಾಕಿದ ಜನರ ಘೋಷಣೆಗಳು ಅವರಿಗೆ ಪ್ರಿಯವಾಗಿ ಹೋಯಿತು. ಮುಂದೆ ಸುಪ್ರೀಂ ಕೋರ್ಟಿಗೆ ಹೋಗಿ ಅಧಿಕಾರದಲ್ಲಿ ಮುಂದುವರೆಯುವ ಹಾದಿಯಲ್ಲಿ ತಮ್ಮ ವಿರುದ್ಧ ಬಂದ ಕೂಗುಗಳನ್ನು ಬಗ್ಗುಬಡಿಯುವುದರ ಜೊತೆಗೆ ಇಂದಿರಾ ಇಲ್ಲದೆ ಭಾರತವಿಲ್ಲಎಂದು ಕಾವ್ಯ ಬರೆಯಿಸಿ ಪ್ರಚಾರಗಳ ಮಳೆಯನ್ನು ಎಲ್ಲೆಲ್ಲೂ ಭಿತ್ತಿದರು. ಮುಂದೆ ಜಯಪ್ರಕಾಶ್ ನಾರಾಯಣರ ಆಂದೋಲನದ ಬಿಸಿ ತಡೆಯಲು ಸಾಧ್ಯವಿಲ್ಲವಾಗಿ ತುರ್ತು ಪರಿಸ್ಥಿತಿ ಘೋಷಿಸಿ ಎಲ್ಲ ಅಧಿಕಾರಗಳನ್ನೂ ತಮ್ಮ ಕೈಗೆ ತೆಗೆದುಕೊಂಡು ಫಕ್ರುದ್ದೀನ್ ಆಲಿ ಅಹ್ಮದ್ ಅಂತಹ ವ್ಯಕ್ತಿಗಳು ಈ ದೇಶದ ರಾಷ್ಟ್ರಪತಿ ಹುದ್ಧೆಯನ್ನು ಎಷ್ಟು ಕೆಳಮಟ್ಟಕ್ಕೆ ಇಳಿಸಿದರು ಎಂಬುದನ್ನು ವೇದ್ಯವಾಗಿಸಿದರು. ತಮಗೆ ಸಹ್ಯವಾಗದ ರಾಜ್ಯಗಳ ಆಡಳಿತವನ್ನು ಬೇಕೆಂದಾಗ ಕಿತ್ತೊಗೆದು ರಾಷ್ಟ್ರಪತಿ ಆಡಳಿತ ಹೇರುವಂತಹ ಕೆಟ್ಟ ನೀತಿಗಳಿಗೆ ಯತೇಚ್ಛವಾಗಿ ಚಾಲನೆ ನೀಡಿದರು. ಅವರ ಮಗ ಸಂಜಯಗಾಂಧಿ ಮತ್ತು ಇತರರು ನಡೆಸಿದ ಪುಂಡಾಟಗಳು ಈ ಮಹಾತಾಯಿಯವರ ಕಣ್ಣಿಗೆ ಕಾಣದಷ್ಟು ದೃತರಾಷ್ಟ್ರ ಮೋಹ ಅವರನ್ನು ಕವಿದು ಬಿಟ್ಟಿತ್ತು. ತಾವು ಅಧಿಕಾರದಲ್ಲಿದ್ದಾಗಲೇ ಭಾರತ ರತ್ನಪ್ರಶಸ್ತಿ ಪಡೆದದ್ದು ಅವರಿಗೆ ಜನಪ್ರಿಯತೆಗಳ ಬಗ್ಗೆ ಇದ್ದ ವ್ಯಾಮೋಹದ ಸೂಚಕ ಎನಿಸುವಂತೆ ಮಾಡುತ್ತದೆ.

ಮುಂದೆ ಏನು ಮಾಡುವುದೆಂದು ತೋಚದ ಸ್ಥಿತಿಯಲ್ಲಿದ್ದ ಅವರಿಗೆ ತಮ್ಮ ಅಧ್ಯಾತ್ಮಿಕ ಗುರು ಜಿ. ಕೃಷ್ಣಮೂರ್ತಿ ಅವರೊಡನೆ ನಡೆಸಿದ ಮಾತುಕತೆಯ ಪ್ರೇರಣೆ ಚುನಾವಣೆ ನಡೆಸುವಂತೆ ಮಾಡಿತು. ಆ ಮೇರೆಗೆ ಚುನಾವಣೆಗಳನ್ನು ಘೋಷಿಸಿ ಚುನಾವಣೆಯಲ್ಲಿ ವೈಯಕ್ತಿಕವಾಗಿ ತಮಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮೊದಲ ಬಾರಿಯ ಚುನಾವಾಣೆ ಸೋಲು ಕಂಡರು. ತಾವು ಗೆದ್ದೆವು ಎಂಬ ಹುರುಪಿನಲ್ಲಿ ತಮ್ಮನ್ನು ಚಿತ್ರವಧೆ ಗೈಯುತ್ತಿದ್ದ ವಿರೋಧಿಗಳನ್ನು ತಾಳಲಾರದೆ ಮತ್ತೊಮ್ಮೆ ಚಿಕ್ಕಮಗಳೂರಿನಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಂದರೂ ಅವರನ್ನು ಬಂಧಿಸಿ, ಅವಮಾನಿಸಿದ ಜನತಾ ಸರ್ಕಾರ ಮತ್ತೊಮ್ಮೆ ಅವರನ್ನು ಉಚ್ಚಾಟಿಸಿತು. ಜೀವನ ಪೂರ್ತಿ ವಿವಿಧ ರಾಜಕೀಯ ಪಕ್ಷಗಳಲ್ಲಿ ವಿರೋಧಿ ಮಾತುಗಳನ್ನಾಡುತ್ತಾ ಬುದ್ಧಿವಂತಿಕೆಯ ಬದುಕು ನಡೆಸುತ್ತಿದ್ದ ಜನತಾ ಸರ್ಕಾರದ ಪ್ರತಿನಿಧಿಗಳಿಗೆ ತಾವು ಆಡಳಿತದಲ್ಲಿದ್ದಾಗಲೂ ವಿರೋಧಪಕ್ಷದವರಂತೆ ಭ್ರಮಾನಕ ರಾಜಕೀಯ ಜೀವನ ಸಾಗಿತ್ತು. ಹೀಗೆ ಸಾಗಿದ ಅವರ ಮೋಜಿನ ಕಪಿತನಗಳು ಕೆಲವೇ ತಿಂಗಳುಗಳಲ್ಲಿ ಅಧಿಕಾರ ಲಾಲಸೆಯಾಗಿಯೂ ಪರಿವರ್ತನಗೊಂಡಾಗ ಅದು ಯಾದವೀ ಕಲಹವಾಗಿ ರೂಪಗೊಂಡು ಮತ್ತೊಮ್ಮೆ ಅಧಿಕಾರವೆನ್ನುವುದು ಇಂದಿರಾಗಾಂಧಿ ಅವರನ್ನು ಅನಾಯಾಸವಾಗಿ ಹುಡುಕಿಕೊಂಡು ಬಂತು.

ಮಗ ಸಂಜಯಗಾಂಧಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ. ಜರ್ನೈಲ್ ಸಿಂಗ್ ಬಿಂದ್ರನ್ ವಾಲೆ ತನ್ನ ಉಪಟಳದಿಂದ  ಇಡೀ ಪಂಜಾಬನ್ನು ಆಕ್ರಮಿಸಿ ಸ್ವರ್ಣ ಮಂದಿರದಲ್ಲಿ ಶಸ್ತ್ರಾಸ್ತ್ರಗಳನ್ನು ಪೇರಿಸತೊಡಗಿದ. ಅದನ್ನು ಹತ್ತಿಕ್ಕಲು ಬ್ಲೂ ಸ್ಟಾರ್ ಕಾರ್ಯಾಚರಣೆ ನಡೆಸಲು ಆದೇಶಿಸಿ ಸಿಕ್ ಉಗ್ರಗಾಮಿಗಳಿಗೆ ಇತಿಶ್ರೀ ಹಾಡಿದರು. ಮುಂದೆ ರೂಪಾಯಿ ವಿಶ್ವದೆಲ್ಲೆಡೆ ಅಪಮೌಲ್ಯಗೊಳ್ಳುವ ತಾಪತ್ರಯಗಳು ಕೂಡ ಉಂಟಾಯಿತು. ಮಗ ಸಂಜಯ್ ಗಾಂಧಿ ಇಲ್ಲದೆ ರಾಜಕೀಯ ಸಹಾಯಕ್ಕೆ ಒಲ್ಲದ ಮನಸ್ಸಿನ ರಾಜೀವ್ ಗಾಂಧಿಯನ್ನು ಕರೆತಂದರು. ದೇವರಾಜ ಅರಸು ಅಂತಹ ಹಲವು ನಿಷ್ಟರನ್ನು ದೂರ ಮಾಡಿಕೊಂಡರು. ಎನ್ ಟಿ ರಾಮರಾವ್ ಅಂತಹ ಜನಪ್ರಿಯರನ್ನು ರಾಜಕೀಯದಲ್ಲಿ ಕ್ರಿಯಾತ್ಮಕವಾಗಿ ಎದುರಿಸುವ ಬದಲು ಮತ್ತೊಮ್ಮೆ ಬಿನ್ನಮತ ಸೃಷ್ಟಿ, ವಿರೋಧಿ ಸರ್ಕಾರಗಳ ಉಚ್ಚಾಟನೆ ಇಂತಹ ಕ್ಷುದ್ರ ಪ್ರಯತ್ನಗಳಿಗೆ ಹೆಚ್ಚು ಒತ್ತು ಕೊಟ್ಟರು.

1984 ರಲ್ಲಿ ತಮ್ಮ ರಕ್ಷಣಾ ಸಿಬ್ಬಂಧಿಯಲ್ಲಿದ್ದ ಇಬ್ಬರು ಉಗ್ರಗಾಮಿಗಳ ಗುಂಡಿಗೆ ಇಂದಿರಾ ಗಾಂಧಿ ಅಸು ನೀಗಿದರು. ಆಕೆಯ ಹತ್ಯೆಯ ಸಮಯದಲ್ಲಿ ಉಂಟಾದ ಸಿಖ್ಖರ ವಿರೋಧಿ ಹಿಂಸಾಚಾರದ ಘಟನೆಗಳು ಅವರು ಬೆಳೆಸಿದ ರಾಜಕೀಯ ಶಕ್ತಿಗಳ ಸಾರವನ್ನು ಸಾರುವಂತಿತ್ತು!

ಇಷ್ಟಾದರೂ ಅವರ ರಾಜಕೀಯ ನಾಯಕತ್ವದಲ್ಲಿ ಆಕೆ ತೋರಿದ ಶೌರ್ಯ ಸಾಹಸಗಳಿಂದ ಆಕೆ ಇಂದೂ ಕೂಡ ಜನಮನದಲ್ಲಿ ಪ್ರಖ್ಯಾತರಾಗಿದ್ದಾರೆ. ಬಡ ಜನರೊಂದಿಗೆ ಆಕೆ ಒಬ್ಬಳಾಗಿ ಬೆರೆತು ಗಳಿಸಿದ ಪ್ರೀತಿ ವಿಶ್ವಾಸಗಳು ಇನ್ಯಾವುದೇ ಭಾರತೀಯ ರಾಜಕಾರಣಿಯಲ್ಲೂ ಕಾಣದಷ್ಟು ಅಪೂರ್ವವಾದದ್ದು. ಆ ನಿಟ್ಟಿನಲ್ಲಿ ಇಂದಿರಾ ಗಾಂಧಿಗೆ ಇಂದಿರಾ ಗಾಂಧಿ ಅವರೇ ಸಾಟಿ.

ವೈಯಕ್ತಿಕವಾಗಿ ನೆನೆದಾಗ ಇಂದಿರಾ ಗಾಂಧಿ ಅವರು ನನ್ನ ಶಾಲಾ ದಿನಗಳಲ್ಲಿ 1971 ರ ಯುದ್ಧದ ಜಯದ ಹಿನ್ನಲೆಯಲ್ಲಿ ಪ್ರಖ್ಯಾತರಾಗಿದ್ದ ನೆನಪಿದೆ. ಸಮಾಜದ ಕೆಳವರ್ಗ ಮತ್ತು ಮಧ್ಯಮ ವರ್ಗಗಳಲ್ಲಿ ಆಕೆಯ ಬಗೆಗೆ ಇದ್ದ ಪ್ರೀತಿಯನ್ನು ನೋಡಿ ಕೇಳಿ ಆಶ್ಚರ್ಯಪಟ್ಟಿದ್ದೇನೆ. ಹಲವು ಬಾರಿ ಇಂದಿರಾ ಗಾಂಧಿ-ಸರೋಜಿನಿ ಮಹಿಷಿ ಜೋಡಿಯ ಇಂಗ್ಲೀಷ್-ಕನ್ನಡ ಭಾಷಣಗಳನ್ನು ಜನಸ್ತೋಮದ ಮಧ್ಯೆ ಕೇಳಿದ್ದೇನೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅವರ ಪರ ವಿರೋಧಿ ನಿಲುವುಗಳನ್ನೂ ನೋಡಿದ್ದೇನೆ. ಪ್ರಜಾಪ್ರಭುತ್ವದ ದೃಷ್ಟಿಯಿಂದ ನಾನು ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಲ್ಲಿ ಅವರ ತುರ್ತು ಪರಿಸ್ಥಿತಿ ನಿರ್ಣಯದ ಬಗ್ಗೆ ವಿರೋಧಿ ಮನೋಭಾವ ಹೊಂದಿದ್ದೆ. 1984ರ ಸೆಪ್ಟೆಂಬರ್ 20ರಂದು ಅಂದರೆ ಅವರು ಹತ್ಯೆಗೀಡಾದ 40 ದಿನಗಳ ಮುಂಚೆ ಅವರನ್ನು ಕಾರ್ಮಿಕ ನಿಯೋಗದ ಮೂಲಕ ಭೇಟಿ ಆದಾಗ ಅವರು ಮಾತನಾಡಿದ ರೀತಿ, ಅವರಲ್ಲಿದ್ದ ನಗೆಮೊಗ, ಅವರು ಕನ್ನಡದಲ್ಲಿ ನೀಡಿದ ಆಟೋಗ್ರಾಫ್ ಕುರಿತು ಬಹಳ ಸಂತೋಷಿಸಿದ್ದೇನೆ.

ಹೀಗೆ ವಿವಿಧ ಮುಖಗಳ ಇಂದಿರಾ ಗಾಂಧಿ ಅವರ ಬದುಕು ವೈವಿಧ್ಯಮಯವಾದದ್ದು. ಅವರ ಆಡಳಿತದ ಬಗ್ಗೆ ಪ್ರಶ್ನೆಗಳೇನೇ ಇರಲಿ ಅವರು ದೇಶದ ಬಗ್ಗೆ ಇಲ್ಲಿನ ಬಡಜನರ ಬಗ್ಗೆ ಹೊಂದಿದ್ದ ಪ್ರೀತಿ ಪ್ರಶ್ನಾತೀತ. ಈ ದೇಶದ ಪ್ರಧಾನಿ ಆಗಿ ಸೇವೆ ಸಲ್ಲಿಸಿದ್ದ ಅವರಿಗೆ ನನ್ನ ಗೌರವಗಳು.


Tag: Indira Gandhi

ಕಾಮೆಂಟ್‌ಗಳಿಲ್ಲ: