ಭಾನುವಾರ, ಸೆಪ್ಟೆಂಬರ್ 4, 2011

ಅನಂತನಾಗ್

ಅನಂತನಾಗ್

ಅನಂತನಾಗ್ ಅನಂತಸಾಧ್ಯತೆಗಳ ಮೇರು ಕಲಾವಿದ. 1973ರ ವರ್ಷದ ‘ಸಂಕಲ್ಪ’ ಚಿತ್ರದಿಂದ  ಮೊದಲ್ಗೊಂಡು 2016 ವರ್ಷದಲ್ಲಿ  ಇತ್ತೀಚಿನ  ‘ಗೋದಿ ಬಣ್ಣ  ಸಾಧಾರಣ ಮೈಕಟ್ಟು’  ಚಿತ್ರದವರೆವಿಗೆ  ಅನಂತನಾಗ್  ಅವರು  ಮೆರೆಯುತ್ತಾ ಬಂದಿರುವ  ಶ್ರೇಷ್ಠತೆ  ಅಸಾಧಾರಣವಾದದ್ದು.   ಅನಂತನಾಗ್ ಅವರು ಜನಿಸಿದ್ದು ಸೆಪ್ಟೆಂಬರ್ 4, 1948ರಲ್ಲಿ.  ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ.  ಪ್ರಾರಂಭಿಕ ಓದು ದಕ್ಷಿಣ ಕನ್ನಡದ  ಆನಂದ ಆಶ್ರಮದಲ್ಲಿ.  ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು.  ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್ಮರಾಠಿ ರಂಗಭೂಮಿಯನ್ನು ಎಂಟು ವರ್ಷಗಳ ಕಾಲ ಬೆಳಗಿದರು.

ಚಿತ್ರರಂಗದಲ್ಲಿ ಅವರಿವರನ್ನು , ಅವರು ಪಂಚ ಭಾಷಾ ತಾರೆ ಎಂದು ಕೆಲವರನ್ನು ಕರೆಯುವುದುಂಟು’.  ಅನಂತನಾಗ್ ಅವರ ಮುಂದೆ ಅದೆಲ್ಲಾ ಏನೂ ಲೆಖ್ಖಕ್ಕಿಲ್ಲ.  ಅವರು ಸಪ್ತಭಾಷಾ ತಾರೆ.  ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಿ ಎಲ್ಲೆಲ್ಲೂ ವಿಜ್ರಂಭಿಸಿದ್ದಾರೆ.  ತುಂಬಿದ ಕೊಡ ತುಳುಕುವುದಿಲ್ಲ.  ಅನಂತನಾಗ್ ಎಲ್ಲವನ್ನೂ ಸದ್ದುಗದ್ದಲವಿಲ್ಲದೆ ಮಾಡುತ್ತಾ ನಡೆಯುತ್ತಾರೆ.

ಅನಂತನಾಗ್ ಅವರು ಶ್ಯಾಂ ಬೆನೆಗಾಲ್ ಅವರ ಅಂಕುರ್ಚಿತ್ರದಿಂದ ಚಿತ್ರರಂಗಕ್ಕೆ ಬಂದವರು.  ನಿಶಾಂತ್, ಕಲಿಯುಗ್, ಗೆಹ್ರಾಯಿ, ಭೂಮಿಕಾ, ಮಂಗಳಸೂತ್ರ್, ಯುವ, ಕೊಂಡುರಾ,     ಉತ್ಸವ್ ಮುಂತಾದ ಹಲವಾರು ಹಿಂದಿ ಚಿತ್ರಗಳಲ್ಲಿ ಅನಂತ್ ನಟಿಸಿದ್ದಾರೆ.   ಕೆಲವೊಂದು ಪಾತ್ರಗಳಿಗೆ ಅನಂತ್ ಬೇಕೇ ಬೇಕು ಎಂದು ಬಯಸುವ ಚಿತ್ರರಂಗದ ಪ್ರಸಿದ್ಧರು ಎಲ್ಲೆಡೆಯ ಮೂಲೆ ಮೂಲೆಗಳಲ್ಲಿದ್ದಾರೆ.  ಮರಾಠಿಯ ಅಮೋಲ್ ಪಾಲೇಕರ್ ನಿರ್ದೇಶನದ ಅನಹತ್’, ಮಲಯಾಳಂನ ಸ್ವಾತಿತಿರುನಾಳ್’, ತೆಲುಗಿನ ಅನುಗ್ರಹಂ’, ಇಂಗ್ಲಿಷಿನ ಸ್ಟಂಬಲ್ಮುಂತಾದ ಹಲವಾರು ಚಿತ್ರಗಳನ್ನು ಈ ನಿಟ್ಟಿನಲ್ಲಿ ಗಮನಿಸಬಹುದು.  ಇವೆಲ್ಲಾ ಯಾರೋ ಒಬ್ಬ ನಟರು ಬಂದು ಅಭಿನಯಿಸಿ ಹೋದರು ಎಂಬಂತಹ ಪಾತ್ರಗಳಲ್ಲದೆ ರಾಷ್ಟ್ರಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹವಾದ ಚಿತ್ರಗಳು ಎಂಬುದನ್ನು ನಾವು ಗಮನಿಸಬೇಕು.

ಅನಂತನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಬಂದದ್ದು 1973ರಲ್ಲಿ ಮೂಡಿಬಂದ ಪಿ. ವಿ. ನಂಜರಾಜ ಅರಸ್ ಅವರ ಸಂಕಲ್ಪಚಿತ್ರದಿಂದ.  ಸಂಕಲ್ಪಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರ.  ನಂಜರಾಜ ಅರಸ್ ಅವರು ಅನಂತನಾಗ್ ಮತ್ತು ವಿಷ್ಣುವರ್ಧನ್ ಜೋಡಿಯಲ್ಲಿ ಅಂದು ನಿರ್ಮಿಸ ಹೊರಟಿದ್ದ ಡಾ. ಎಸ್. ಎಲ್. ಭೈರಪ್ಪನವರ ಪ್ರಸಿದ್ಧ ಕಾದಂಬರಿ ದಾಟುಕೆಲವು ದಿನಗಳ ಚಿತ್ರಣದ ನಂತರ ಸ್ಥಬ್ಧಗೊಂಡುಬಿಟ್ಟಾಗ ಅಂದಿನ ದಿನಗಳಲ್ಲಿ ಆ ಕಾದಂಬರಿಯನ್ನು ಇಷ್ಟಪಟ್ಟಿದ ನಮಗೆ ಆದ ನಿರಾಸೆ ಅಷ್ಟಿಷ್ಟಲ್ಲ. 

ಅನಂತನಾಗ್ ಅವರನ್ನು ಕನ್ನಡಕ್ಕೆ ಅಮೂಲ್ಯವಾಗಿ ಉಳಿಸಿದ ಚಿತ್ರ 1975ರಲ್ಲಿ ಮೂಡಿಬಂದ  ಜಿ.ವಿ. ಅಯ್ಯರ್ ಅವರ ಹಂಸಗೀತೆ’.  ‘ಹಂಸಗೀತೆಯಿಂದ ಅನಂತನಾಗ್ ಕಲಾ ಸಾಂಸ್ಕೃತಿಕ ಲೋಕಗಳಲ್ಲಿ ಜನಪ್ರಿಯರಾದರು.    ಮುಂದೆ 1977ರ ದೊರೈ ಭಗವಾನರ ಬಯಲುದಾರಿ’  ಅವರನ್ನು ಕನ್ನಡದ ಮನೆಮನೆಯಲ್ಲೂ ಮನಮನಗಳಲ್ಲೂ ಪ್ರತಿಷ್ಟಾಪಿಸಿತು.

ಅನಂತನಾಗ್ ಅವರ ವ್ಯಾಪ್ತಿ ಎಷ್ಟು ದೊಡ್ಡದೆಂದರೆ ಅವರನ್ನು ಯಾವುದೋ ಒಂದು ನಿಟ್ಟಿನಲ್ಲಿ ಗುರುತಿಸುವುದು ಕೆಲವು ಕುರುಡರು ಬೃಹತ್ ಆದ ಆನೆಯನ್ನು ವಿವಿಧ ದಿಕ್ಕುಗಳಲ್ಲಿ ಸ್ಪರ್ಶಿಸಿ ಇದು ಹಗ್ಗ, ಗೋಡೆ, ಕಂಬ ಹೀಗೆ ಹೇಳಿದಂತಾಗುತ್ತದೆ.  ಅನಂತ್ ಅಭಿನಯಿಸಿದ ಕೆಲವೊಂದು ಚಿತ್ರಗಳಂತೂ ಬೇರೆಯವರಿಗೆ ಅದು ಸಾಧ್ಯ ಎಂದು ಊಹಿಸಲೂ ಕಷ್ಟಕರವಾದದ್ದು.  ಅನಂತ್ ಅವರು ಅಭಿನಯಿಸಿರುವ ವಿವಿಧ ಭಾಷೆಗಳ ಪ್ರಸಿದ್ಧ ಚಿತ್ರಗಳಿರಲಿ ಕನ್ನಡದ್ದೇ ಚಿತ್ರಗಳನ್ನು ನೋಡಿದರೂ  ಹಂಸಗೀತೆ’, ‘ಕನ್ನೇಶ್ವರ ರಾಮ’, ‘ಬರ’, ‘ಅವಸ್ಥೆ’, ‘ಉದ್ಭವ’, ‘ಮಿಂಚಿನ ಓಟ’, ‘ಆಕ್ಸಿಡೆಂಟ್’, ‘ಬೆಳದಿಂಗಳ ಬಾಲೆ’, ‘ಮತದಾನ’, ‘ಮೌನಿ’, ‘ಅನುರೂಪ’, ‘ರಾಮಾಪುರದ ರಾವಣ’,  ‘ಸಿಂಹಾಸನ’, ‘ಅನ್ವೇಷಣೆ’, ‘ಮಾಲ್ಗುಡಿ ಡೇಸ್ಇವೆಲ್ಲಾ ಅನಂತ್, ನಾಸಿರುದ್ದೀನ್ ಷಾ ಅಂಥಹ ಕೆಲವರಿಗೆ ಮಾತ್ರ ಸಾಧ್ಯವಿರುವಂತದ್ದು.  ಈ  ಮಹತ್ವದ ಅನಂತನಾಗ್  ಅವರ  ಶ್ರೇಷ್ಠ  ಅಭಿನಯದ   ಚಿತ್ರಗಳ  ಸಾಲಿನಲ್ಲಿ  ಇತ್ತೀಚಿಗೆ  ಅಪಾರ  ಯಶಸ್ಸು  ಕಂಡ  ‘ಗೋದಿ ಬಣ್ಣ  ಸಾಧಾರಣ  ಮೈಕಟ್ಟು’  ಚಿತ್ರ ಕೂಡಾ  ಅವಶ್ಯ  ಸೇರ್ಪಡೆಯಾಗುವಂತದ್ದು. ಹಿರಿಯ ವಯಸ್ಸಿನ  ವ್ಯಕ್ತಿಯ ಕಷ್ಟಗಳನ್ನು  ನಿರೂಪಿಸುವ  ಈ  ಚಿತ್ರದಲ್ಲಿ  ಮರೆವಿನ  ರೋಗಕ್ಕೆ  ತುತ್ತಾದ  ಒಬ್ಬ  ವೃದ್ಧರಾಗಿ  ಅನಂತನಾಗ್  ಅವರು  ನೀಡಿರುವ  ಅಭಿನಯ  ಶ್ರೇಷ್ಠ  ಮಟ್ಟದ್ದು. 

ಅನಂತ್ ಅವರನ್ನು ಎಷ್ಟು ವಿಭಿನ್ನವಾಗಿ ಬೇಕಿದ್ದರೂ ಬಳಸಬೇಕೆಂಬುದಕ್ಕೆ ನಾನಿನ್ನ ಬಿಡಲಾರೆಚಿತ್ರ ಒಂದು ಅಪೂರ್ವ  ನಿದರ್ಶನ.  ಬಯಲು ದಾರಿಚಿತ್ರದ ನಂತರದಲ್ಲಿ ಕನ್ನಡದ ಪ್ರಸಿದ್ಧ ನಿರ್ದೇಶಕ ಜೋಡಿ ದೊರೈ ಭಗವಾನರು ಅನಂತನಾಗ್ ಅವರನ್ನು ಗುತ್ತಿಗೆಗೆ ಹಿಡಿದಷ್ಟು ಒಂದಾದ ಮೇಲೊಂದು ಸುಂದರ ಚಿತ್ರಗಳನ್ನು ನಿರ್ಮಿಸಿದರು.  ಅದರಲ್ಲೂ ಅನಂತನಾಗ್ ಲಕ್ಷ್ಮೀ ಜೋಡಿ ಅಂತೂ, ಇವರು ನಿಜ ಜೀವನದಲ್ಲಿ ಸತಿ ಪತಿಗಳು ಎಂಬ ಹೃದ್ಭಾವ ಮೂಡಿಸುವಷ್ಟು  ಸುಂದರ ಪಾತ್ರಗಳಲ್ಲಿ ಸುಂದರ ಜೋಡಿಯಾಗಿ ಕಂಗೊಳಿಸಿದರು.  ಬೆಂಕಿಯ ಬಲೆ’, ‘ಚಂದನದ ಗೊಂಬೆ’, ‘ಇಬ್ಬನಿ ಕರಗಿತು’, ಮುದುಡಿದ ತಾವರೆ ಅರಳಿತು’, ‘ಮಕ್ಕಳಿರಲವ್ವ ಮನೆತುಂಬ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ನಾ ನಿನ್ನ ಬಿಡಲಾರೆ’, ‘ಧೈರ್ಯಲಕ್ಷ್ಮಿ’, ‘ಬಿಡುಗಡೆಯ ಬೇಡಿ’  ಮುಂತಾದ ಚಿತ್ರಗಳಲ್ಲಿ ಈ ಜೋಡಿ ಸಾಮಾನ್ಯ ಜನಜೀವನವನ್ನು ಪ್ರತಿಬಿಂಬಿಸಿದ ಪಾತ್ರಗಳು ಅವಿಸ್ಮರಣೀಯ.  ಅರುಣರಾಗ’, ‘ಅನುಪಮ’, ‘ಮುಳ್ಳಿನಗುಲಾಬಿ’, ‘ಹೊಸ ನೀರು’ , ‘ದೇವರ ಕಣ್ಣು’, ‘ಜನ್ಮಜನ್ಮದ ಅನುಬಂಧ’, ‘ಬಾಡದ ಹೂವುಮುಂತಾದವು ಅನಂತ್ ಇತರ ನಟಿಯರೊಂದಿಗೆ ನಟಿಸಿದ ಇಂತದ್ದೇ ಮನಮುಟ್ಟುವ  ಚಿತ್ರಗಳ ಸಾಲಿಗೆ ಸೇರಿದಂತಹವು.

ಒಬ್ಬ ಸುರದ್ರೂಪಿ ನಟರಾಗಿದ್ದ ಅನಂತನಾಗ್ ನಾಯಕನಾಗಿ ಹಾಸ್ಯಪಾತ್ರಗಳಲ್ಲಿ ಮಿಂಚಿದ್ದು, ಚಲನಚಿತ್ರರಂಗದಲ್ಲಿ ಇನ್ಯಾವುದೇ ಹೋಲಿಕೆಗೂ ಸಿಗದಷ್ಟು ಮಿಗಿಲಾದದ್ದು.  ಚಾಲೆಂಜ್ ಗೋಪಾಲಕೃಷ್ಣ’, ‘ಗೋಲ್ ಮಾಲ್ ರಾಧಾಕೃಷ್ಣ’,  ‘ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು’, ‘ಹೆಂಡ್ತೀಗ್ಹೇಳ್ಬೇಡಿ’, ‘ಗೌರಿ ಗಣೇಶ’, ‘ಗಣೇಶ ಸುಬ್ರಮಣ್ಯ’, ‘ಮನೇಲಿ ಇಲಿ ಬೀದೀಲಿ ಹುಲಿ’, ‘ಧೈರ್ಯಲಕ್ಷ್ಮಿ’, ‘ನಾರದ ವಿಜಯ’, ‘ಹಾಸ್ಯರತ್ನ ರಾಮಕೃಷ್ಣ’, ‘ಯಾರಿಗೂ ಹೇಳ್ಬೇಡಿ’, ‘ಗಾಯತ್ರಿ ಮದುವೆ’, ‘ಇನ್ನೊಂದು ಮದುವೆ’, ‘ಯಾರಿಗೆ ಸಾಲುತ್ತೆ ಸಂಭಳ’, ‘ಉಂಡು ಹೋದ ಕೊಂಡುಹೋದ’, ‘ಉದ್ಭವ’, ‘ಹೆಂಡ್ತಿ ಬೇಕು ಹೆಂಡ್ತಿ’, ‘ಸಮಯಕ್ಕೊಂದು ಸುಳ್ಳು’, ‘ನಾನೇನೂ ಮಾಡ್ಲಿಲ್ಲ’, ‘ಸಕ್ಕರೆಇಂಥಹ ಹಲವಾರು ಚಿತ್ರಗಳನ್ನು ಈ ಪಟ್ಟಿಗೆ ಸೇರಿಸಬಹುದು. 

ತಾವು ಅಷ್ಟೊಂದು ದೊಡ್ಡ ನಟರಾದರೂ ಅನಂತ್ ಇತರ ನಾಯಕರು ಪ್ರಧಾನವಾಗಿದ್ದ ಚಿತ್ರಗಳಲ್ಲಿನ ಬೆಂಬಲಿತ ಪಾತ್ರಗಳಲ್ಲಿ ನಟಿಸಲು ಎಂದೂ ಹಿಂಜರಿದವರಲ್ಲ.  ರಾಜ್ ಕುಮಾರ್ ಅವರೊಡನೆ ಕಾಮನಬಿಲ್ಲು’; ವಿಷ್ಣುವರ್ಧನರೊಡನೆ ನಿಷ್ಕರ್ಷ’, ‘ಮತ್ತೆ ಹಾಡಿತು ಕೋಗಿಲೆ’, ‘ಜೀವನದಿ’;  ರವಿಚಂದ್ರನ್ ಅವರ ಜೊತೆ ರಣಧೀರ’, ಶಾಂತಿಕ್ರಾಂತಿ’; ಉಪೇಂದ್ರರೊಡನೆ  ಹಾಲಿವುಡ್’   ಇವೇ  ಮುಂತಾದ ಅನಂತ್  ನಟಿಸಿದ ಅನೇಕ ಚಿತ್ರಗಳನ್ನು ಈ ಪಟ್ಟಿಯಲ್ಲಿ ಸೇರಿಸಬಹುದು.

ಮುಂಗಾರುಮಳೆ’, ‘ಗಾಳಿಪಟಮುಂತಾದ ಚಿತ್ರಗಳಲ್ಲಿ ಅನಂತ್ ನಮೆಗೆಷ್ಟು ಪ್ರಿಯರಾಗುತ್ತಾರೆ ಎಂದರೆ ಅವರು ಪೋಷಕ ಪಾತ್ರ ಎಂಬ ಮಾತನ್ನು ಕೂಡಾ ಹೇಳಲು ಮನಸ್ಸು ಬಾರದಷ್ಟು.  ಅನಂತ್ ಯಾವುದೇ ಪಾತ್ರವಾದರೂ, ಎಷ್ಟೇ ಚಿಕ್ಕ ಸ್ಪೇಸ್ ಇದ್ದರೂ ಅದರ ವ್ಯಾಪ್ತಿಯನ್ನು ವಿಸ್ತೃತವಾಗಿ ಪ್ರೇಕ್ಷಕನ ಅನುಭಾವಕ್ಕೆ ತರಬಲ್ಲ ಅಸಾಮಾನ್ಯ ನಟ.  ಹೀಗಾಗಿ ಅವರು ಎಲ್ಲೇ ಇದ್ದರೋ, ಹೇಗೇ ಇದ್ದರೂ, ಯಾವುದೇ ಸಣ್ಣ ಪಾತ್ರವೇ ಇದ್ದರೂ ಯಾವುದೇ ಸೀಮೆಗಳ ಬಂಧನವಿಲ್ಲದೆ ಅನಂತರಾಗಿರುವವರು. ಅವರು ದೂರದರ್ಶನದ ಹಲವಾರು ಪ್ರಸಿದ್ಧ ಧಾರಾವಾಹಿಗಳಲ್ಲೂ ಅಷ್ಟೇ ಪ್ರಬುದ್ಧವಾಗಿ ಬದ್ಧತೆಯಿಂದ ಪಾಲ್ಗೊಂಡವರು.

ಚಿತ್ರರಂಗದಲ್ಲಿ ಜನಪ್ರಿಯ ನಟರಿಗೆ ಹಲವಾರು ಸ್ಥಾನಮಾನಗಳ ನಂಬರ್ ಕೊಡುವಿಕೆ ಇದೆ.  ಇದರಲ್ಲಿ ಮಾಧ್ಯಮಗಳು, ಹಲವಾರು ಬಾರೀ ಸ್ವಯಂ ಕಲಾವಿದರು, ಅಭಿಮಾನೀ ಸಂಘಗಳೆಂಬ ವ್ಯವಸ್ಥೆಗಳು ಇವೆಲ್ಲಾ ತಮ್ಮದೇ ಆದ ರೀತಿಯಲ್ಲಿ ಕಾರ್ಯಮಾಡುತ್ತವೆ.  ವಿಚಿತ್ರ ಮತ್ತು ಸಂತಸದ ಸಂಗತಿ ಎಂದರೆ ಅನಂತನಾಗ್ ಅಂತಹ ಕಲಾವಿದರು ಈ ಪಟ್ಟಿಗಳಲ್ಲಿ ಎಂದೂ ಮೂಡದಿರುವುದು.  ಅನಂತನಾಗ್ ಅವರು ಪಡೆದಷ್ಟು ಗೆಲುವಿನ ಯಶಸ್ಸನ್ನೂ ಇನ್ನು ಯಾವುದೇ ಪ್ರಸಿದ್ದರೂ ಪಡೆದಿಲ್ಲದಿರುವುದು ಆ ಕೃತಕ ವ್ಯವಸ್ಥೆಗಳ ಪೊಳ್ಳುತನವನ್ನು ತೋರುತ್ತದೆ.

ಒಂದು ವಿಪರ್ಯಾಸದ ಸಂಗತಿ ಎಂದರೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳ ಸಮಿತಿಗಳು ಅನಂತನಾಗ್ ಅಂತಹ  ಮಹಾನ್ ಸಾಧಕನ ಬಗೆಗೆ ಕಣ್ಣುಹಾಯಿಸದಿರುವ ವಿಚಿತ್ರ ಕುರುಡುತನ.

ಅನಂತರಿಗೆ ಇವೆಲ್ಲಾ ಯಾವುದೂ ಬೇಕಿಲ್ಲ.  ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ’.  ಅನಂತ್ ಎಂಬ ಕಲಾವಿದ ಯಾವುದರ ಬಂಧನಕ್ಕೂ ಸಿಲುಕದಂತಹ ವಿಶಿಷ್ಟ ಪ್ರತಿಭೆ.  ಅವರ ಪ್ರತಿಭೆ ನಿರಂತರವಾಗಿ ನಮ್ಮ ನಡುವೆ ರಾರಾಜಿಸುತ್ತಿರಬೇಕು.  ಅನಂತನಾಗ್ ಅವರೇ ನೀವು ನಮಗೆ ಯಾವಾಗಲೂ ಸ್ಪೆಷಲ್.  ನಿಮಗೆ ಹುಟ್ಟು ಹಬ್ಬದ ಅನಂತ ಶುಭಹಾರೈಕೆಗಳು.  ನಿಮ್ಮ ಬದುಕು ಸುಖ, ಸಂತಸ, ಭವ್ಯತೆಗಳ ಅನಂತತೆಯಲ್ಲಿ, ಕಲಾ ಲೋಕದ ಹಿರಿಮೆಯಲ್ಲಿ  ಸದಾ ವಿಹರಿಸುತ್ತಿರಲಿ.

Tag: Anantnag, Anantanag

ಕಾಮೆಂಟ್‌ಗಳಿಲ್ಲ: