ಭಾನುವಾರ, ಸೆಪ್ಟೆಂಬರ್ 4, 2011

ಪರ್ವತವಾಣಿ

ಪರ್ವತವಾಣಿ

ಕನ್ನಡದ ಪ್ರಸಿದ್ಧ ನಾಟಕ ರಚನೆಕಾರ, ರಂಗಕರ್ಮಿ, ನಿರ್ದೇಶಕ, ನಟ ಪರ್ವತವಾಣಿ ಅವರು ಜನಿಸಿದ ದಿನ ಸೆಪ್ಟೆಂಬರ್ 2, 1911.   ಇತ್ತೀಚಿನ ಪೀಳಿಗೆಯವರಿಗೆ ಅವರನ್ನು ನೆನೆಸುವುದಾದರೆ, 'ರಾಜ್ ಕುಮಾರ್ ಅವರ ಪ್ರಸಿದ್ಧ ಚಿತ್ರ 'ಭಾಗ್ಯದ ಲಕ್ಷ್ಮಿ ಭಾರಮ್ಮ' ದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದನ್ನು ಹೆಸರಿಸಬಹುದು.  ನಾವು ಕಂಡ ಹಾಸ್ಯ ಭಾಷಣಕಾರಲ್ಲಂತೂ ಪರ್ವತವಾಣಿ ಅವಿಸ್ಮರಣೀಯರು. 

ಅಂದಿನ ದಿನಗಳಲ್ಲಿ ರೇಡಿಯೋದಲ್ಲಿ ಬರುತ್ತಿದ್ದ ಎಂ.ಎಸ್.ಐ.ಎಲ್ ಪ್ರಾಯೋಜಕತ್ವದ 'ಗೀತಲಹರಿ' ಕಾರ್ಯಕ್ರಮ ಕೇಳಿದವರಂತೂ ಅವರ ಅಭಿಮಾನಿಗಳಾಗದೆ ಇರುವುದು ಸಾಧ್ಯವೇ ಇಲ್ಲ.   ಅವರ ಎಲ್ಲ ರೀತಿಯ ರೇಡಿಯೋ ಕಾರ್ಯಕ್ರಮಗಳು ನಮ್ಮ ಕಾಲದಲ್ಲಿ ತುಂಬಾ ಜನಪ್ರಿಯ.  ಅವರು ಮೇಕಪ್ ನಾಣಿ ಅವರಿಗೆ ದೂರದರ್ಶನದಲ್ಲಿ ಲವಲವಿಕೆಯಿಂದ, ಹಾಸ್ಯಪೂರ್ಣವಾಗಿ ನೀಡಿದ ಸಂದರ್ಶನ ನನ್ನ ಮನದಲ್ಲಿ ಚಿರಸ್ಥಾಯಿಯಾಗಿ ನಿಂತಿದೆ.  ಪರ್ವತವಾಣಿಯವರ ಬಹದ್ದೂರ್ ಗಂಡ, ಕಲಹ ಕುತೂಹಲ, ಮೀನಾ ಮದ್ವೆ, ಲಂಚಾಮೃತ ಮುಂತಾದವು ನಾಡಿನಾದ್ಯಂತ ಅತ್ಯಂತ ಜನಪ್ರಿಯವಾಗಿದ್ದ ನಾಟಕಗಳು.

ಅವರ ಬಗ್ಗೆ ಇತರರು ಹೇಳುವುದಕ್ಕಿಂತ ಅವರೇ ಬರೆದಿರುವ ಈ ಬರಹ ಅತ್ಯಂತ ಸಂತೋಷ ಕೊಡುವಂತದ್ದಾಗಿದೆ. 

ನನ್ನ ಕತೆ” – ಪರ್ವತ ವಾಣಿ ಅವರ ಹಾಸ್ಯಪೂರ್ಣ ಆತ್ಮಕತೆಯ ಬರಹ

ನಮ್ಮ ಪುಣ್ಯ ಭಾರತದಲ್ಲಿ ಯಾವುದಕ್ಕೂ ಕೊರತೆಯಿಲ್ಲ.  ತುಂಬ ಸಪದ್ಭರಿತ ಭೂಮಿ.  ಮಕ್ಕಳ ಭಾಗ್ಯದಲ್ಲಂತೂ ಬಹುಶಃ ನಾವು ಅಗ್ರಮಾನ್ಯರು.  ಇಂಥ ದೇಶದಲ್ಲಿ ನನ್ನ ತಂದೆ-ತಾಯಿ ಮದುವೆಯಾಗಿ ಹನ್ನೆರಡು ವರ್ಷಗಳಾದರೂ ತಂದೆ  ತಾಯಿ ಆಗಲೇ ಇಲ್ಲವಂತೆ.  ಅನೇಕ ಹರಕೆಗಳನ್ನು ಹೊತ್ತರಂತೆ.  ಸೇವೆಗಳನ್ನು ಮಾಡಿದರಂತೆ; ವ್ರತ, ಉಪವಾಸ, ಏನೇನೋ!   ಏನಾದರೂ ಉಪಯೋಗವಾಗಲಿಲ್ಲವಂತೆ. 

ಗೋಪಾಲರಾಯರು, ಪಾಪ, ಬಡ ಗುಮಾಸ್ತೆ.  ಗೋಪಾಲರಾಜ ಅರಸರೇನಾದರೂ ಆಗಿದ್ದಿದ್ದರೆ ಪುತ್ರಕಾಮೇಷ್ಠಿಯಾಗ ಮಾಡಿಸಿಬಿಡುತ್ತಿದ್ದರು. ಎಂಥ ಮಹಾನುಭಾವ ಜನಿಸುತ್ತಿದ್ದನೋ!

ಕಡೆಗೊಂದು ದಿನ ನನ್ನ ತಾಯಿ, ರುಕ್ಮಿಣಿಯಮ್ಮ ಹಟಾತ್ತಾಗಿ ವಾಂತಿ ಮಾಡಿಕೊಂಡಾಗ, ಇಡೀ ಸಿದ್ಧಿಕಟ್ಟೆಯೇ (ಬೆಂಗಳೂರಿನ ಕೆ.ಆರ್ ಮಾರ್ಕೆಟ್ಟಿನ ಅತಿ ಸಮೀಪದ ಒಂದು ಬಡಾವಣೆ) ಸಂತೋಷ, ಸಂಭ್ರಮಗಳಲ್ಲಿ ಕುಣಿದಾಡಿತಂತೆ.  ಹೆಣ್ಣುಮಗು ಹುಟ್ಟಿತು.  ಅಮ್ಮ ತೊಟ್ಟಿಲು ತೂಗುವುದನ್ನು ಅಭ್ಯಾಸ ಮಾಡಿಕೊಳ್ಳುವ ಮೊದಲೇ ಅದೇನು ಅವಸರವೋ ಮಗು ಸತ್ತು ಹೋಯಿತಂತೆ.  ಮನೆಯವರೆಲ್ಲಾ ಅತ್ತರಂತೆ.  ನಗಿಸಲು ನಾನು ಹುಟ್ಟಿದೆ 2.9.1911ರಂದು.  ಅದೇ ಸಿದ್ಧಿ ಕಟ್ಟೆ ಸಂದಿಯ ಇಂದಿಗೂ ಇರುವ ಮನೆಯಲ್ಲಿ.  (ಮುಂದೆ ಒಂದಲ್ಲ ಒಂದು ದಿನ ಹುಚ್ಚರು ಸೇರಿ ಇದನ್ನು ಪುಣ್ಯಸ್ಥಳ ಮಾಡಿ ಬಿಡುತ್ತಾರೆ).  ಜಾತಕ ಬರೆಸಿದಾಗ, “ಮಗುವನ್ನು ಯಾರಿಗಾದರೂ ದಾನ ಮಾಡಿ ಕೈ ತೊಳೆದುಕೊಳ್ಳಿ; ಇಲ್ಲದಿದ್ದರೆ ನಿಮ್ಮನ್ನು ನುಂಗಿಬಿಡುತ್ತದೆ ಈ ಕೂಸು" ಎಂದು ಹಿತೈಷಿಗಳು ಒತ್ತಾಯಿಸಿದರಂತೆ ಅಪ್ಪ, ಅಮ್ಮ ಏನು ಮಾಡುತ್ತಿದ್ದರೋ, ಅಜ್ಜಿ ನೋ ಎಂದಳಂತೆ.  ಅಪಾಯಗಳಿಗೆಲ್ಲಾ ಉಪಾಯವಿದ್ದೇ ಇರುತ್ತದೆ.  ಉಪಾಯವನ್ನು ಮೊದಲು ಭದ್ರ ಮಾಡಿದ ನಂತರವೇ ಅಪಾಯಗಳನ್ನು ಸೃಷ್ಟಿಸುತ್ತಿದ್ದರು, ಅಂದಿನ ಜಾಣರು ಎಂದು ನನ್ನ ಖಚಿತ ನಂಬಿಕೆ.  ಪುರೋಹಿತರನ್ನು ಕರೆಸಿ ಶಾಂತಿ ಮಾಡಿಸಿದರಂತೆ. ಊಟ, ದಕ್ಷಿಣೆ ವಗೈರೆ ಹೊಟ್ಟೆ, ಕೈಗಳಿಗೆ ತೃಪ್ತಿ ಕೊಟ್ಟಿರಬೇಕು.  ತುಷ್ಟ ಮನಸ್ಸಿನಿಂದ ಹರಸಿರಬೇಕು  ಅಮ್ಮ ಸತ್ತಾಗ ಎಂಬತ್ತೊಂಬತ್ತು ವರ್ಷ.  ಅಪ್ಪ ಹೆಂಡತಿಯ ಬೆನ್ನು ಹತ್ತಿ ಹೋದಾಗ ತೊಂಬತ್ತೇಳು ವರ್ಷ!  ಅವರ ಕತೆ ಇರಲಿ, ನನ್ನದು ಪ್ರಸ್ತುತ.

ಪಿ. ನರಸಿಂಗರಾವ್ ಎಂದು ನಾಮಕರಣ ಮಾಡಿದರು.  ಪಿ ಎಂದರೇನು ಈಗಿನ ಹೊಸೂರಿನಿಂದ 29 ಮೈಲಿ ದೂರದ ಒಂದು ಕಾಲದಲ್ಲಿದ್ದ, ಈಗ ಇಲ್ಲದ ಹಳ್ಳಿ  ಪರ್ವತವಾಡಿ.  ಕನ್ನಡದ ತಮಿಳಿನ  ಇಂಗ್ಲೀಷಿನಲ್ಲಿ ಪಿ ಆದ್ದರಿಂದ, ನಾನು ಪ. ನರಸಿಂಗರಾವ್ ಹುಟ್ಟಿದೆ.  ಬೆಳೆಯಲಿಲ್ಲ.  ಒಂದಲ್ಲ ಒಂದು ವ್ಯಾಧಿ.  ಮೇಜರ್ ಐಟೆಂಸ್ ಮಾತ್ರ ಉಲ್ಲೇಖಿಸುತ್ತೇನೆ.

ಎರಡು ವರ್ಷ ವಯಸ್ಸು.  ಬಚ್ಚಲುಮನೆಯಲ್ಲಿ ಅಮ್ಮ ಎಣ್ಣೆ-ನೀರು ಹಾಕುತ್ತಿದ್ದಳು.  ಅತ್ತೆ. (ಯಾವ ರಾಕ್ಷಸ ಮಗು ನಗುತ್ತದೆ?).  ಮಾಮೂಲು ಅಳು ಎಂದುಕೊಂಡು, ಎರಡೇಟು, ಶೀಗೆಕಾಯಿ, ಬಿಸಿ-ನೀರು-ಮುಗಿಸಿದಳು ನನ್ನ ಅಭ್ಯಂಜನ ನಾನು ಅಳು ಮುಗಿಸಲಿಲ್ಲ.  ಕಣ್ಣು, ಕಣ್ಣು ಎಂದು ಕೂಗಿಕೊಳ್ಳುತ್ತಿದ್ದೆ.  ಶೀಗೆ ನೀರೋ, ಪುಡಿಯೋ ಬಿದ್ದಿರಬೇಕೆಂದು ಅಷ್ಟು ಗಮನ ಕೊಡದೆ ಇದ್ದವರಿಗೆ, ಕ್ರಮೇಣ ತಿಳಿಯಿತು, ನನ್ನ ಕಣ್ಣಿಗೆ ಏನೂ ಕಾಣಿಸುತ್ತಿಲ್ಲವೆಂದು.  ಗಾಬರಿಯಾದರು.  ವಠಾರದವರೆಲ್ಲ ತಮತಮಗೆ ತೋರಿದ್ದು ಹೇಳಿ, ಕಡೆಗೆ ಹತ್ತಿರವಿದ್ದ ಮಿಂಟೋ ಆಸ್ಪತ್ರೆಗೆ ಕರೆದುಕೊಂಡು ಹೋದರು.   ಅಲ್ಲಿ ನನ್ನ ಕಣ್ಣು ಶಾಶ್ವತವಾಗಿ ನಾಶವಾಗಿದೆಯೆಂದು ವೈದ್ಯರು ಹೇಳಿದರಂತೆ.  ಸುಮಾರು ಆರು ತಿಂಗಳು, ಕುರುಡು ಕೂಸು, ಕಣ್ಣಿಲ್ಲದ ಕಪೋತನಾಗಿ ಕೂತುಬಿಟ್ಟಿತು.  ನನ್ನ ತಾಯಿಯ ಸೋದರ ಮಾವ ಮಂತ್ರಾಲಯದಿಂದ ರಾಯರ ಮೃತ್ತಿಕೆ ತರಿಸಿ, ನಲವತ್ತೆಂಟು ದಿನ ಸೇವೆ ಮಾಡು ಎಂದರಂತೆ, ಅಮ್ಮ ಮಾಡಿದಳು.  ಕಣ್ಣು ಬಂದದ್ದು ನನಗೆ ಚೆನ್ನಾಗಿ ಜ್ಞಾಪಕ.  ಕಾಣುತ್ತೆ, ಕಾಣುತ್ತೆ ಎಂದು ಬೀದಿ ಬೀದಿ ಓಡಿದ್ದು ಜ್ಞಾಪಕ.  ಮಿಂಟೋ ಆಸ್ಪತ್ರೆಯ ಅದೇ ವೈದ್ಯರು ಮೂಗಿನ ಮೇಲೆ ಬೆರಳಿಟ್ಟು ಬೆರಗಾಗಿ ಹುಡುಗನ ಕಣ್ಣುಗಳು ತುಂಬಾ ಚೆನ್ನಾಗಿವೆ.  ನೀವೇನೋ ಹೇಳುತ್ತೀರಿ, ನಾನು ಏನೂ ಹೇಳಲಾರೆ,” ಎಂದು ಎಂದರಂತೆ.  ಈಗ ಕಣ್ಣುಗಳೂ ಇವೆ, ನಾಲ್ಕು ಜೊತೆ ಕನ್ನಡಕಗಳೂ ಇವೆ!

ಆಗಿನ ಕಾಲದಲ್ಲಿ ಬೆಂಗಳೂರಿನ ಹವ ತುಂಬಾ ತಣು.  ಶ್ವಾಸಕೋಶಗಳ ತೊಂದರೆ ಇದ್ದ ಕಾರಣ ಮೈಗೆ ಆಗುವುದಿಲ್ಲವೆಂದು ಸ್ಥಳ ಬದಲಾಯಿಸಲು ಸಲಹೆ ಮಾಡಿದರು.  ಶ್ರೀಮಂತರು ಬೇಸಗೆಯಲ್ಲಿ ತಂಪು ಮಾಡಿಕೊಳ್ಳಲು ಊಟಿಗೋ, ಸಿಮ್ಲಾಕ್ಕೋ ಹೋಗುವುದಿಲ್ಲವೇ ಹಾಗೆ, ಬಡ ನನ್ನನ್ನು ಬೆಚ್ಚಗಿಡಲು ತುಮಕೂರಿಗೆ ರವಾನಿಸಿದರು, ನನ್ನ ಅಜ್ಜಿಯ ಜೊತೆಗೆ.   ಅಲ್ಲೇ, ಕೆರೆಯ ಬಳಿಯ ಶಾಲೆಯಲ್ಲೇ, ಅ ಆ ಇ ಈ, ಒಂದೊಂದ್ಲ ಒಂದು ಕಲಿತದ್ದು!  ಕೈಯಲ್ಲೇನೂ ಹರಿಯುತ್ತಿರಲಿಲ್ಲ.  ಚೆಂಡು, ದಾಂಡುಗಳಾಟಕ್ಕೆ  ನಾಲಾಯಖ್ಖು.  ಮನೆಯ ಹತ್ತಿರವೇ ಗುಡಿ.  ಅಂಗಳದಲ್ಲಿ ಪ್ರತಿ ಸಂಜೆ ವೆಂಕಣ್ಣದಾಸರ ಹರಿಕತೆ  ತಪ್ಪದೆ ಹೋಗಿ ಕೂತು ಕೇಳುತ್ತಿದ್ದೆ.  ಕೆಲ ಕಾಲ ಮದ್ರಾಸಿಗೆ  ಇನ್ನೂ ಒಣ ಹವ ಅಲ್ಲವೇ? – ಹೋಗಿ ನಿಂತೆ.  ಒಣ್ಣು, ರೆಂಡು, ಮೂಣು, ವಾಡ, ಪೋಡ ಕಲಿತೆ.  ಕನ್ನಯ್ಯ ಕಂಪನಿಯ ಅಷ್ಟೂ ಅದ್ಭುತ ನಾಟಕ ಪ್ರದರ್ಶನಗಳನ್ನೂ ನೋಡಿದೆ.  ಸಂಗೀತ ನರ್ತನಗಳಲ್ಲಿ ಆಸಕ್ತಿ ಹುಟ್ಟಿದ್ದೂ ಮದ್ರಾಸಿನಲ್ಲೇ.

ಒಂದು ಸಾರಿ ತಂದೆಯ ಜೊತೆ ಹಳ್ಳಿಗೆ ಹೋದೆ.  ನೆಂಟರಿಗೆ ಬಲು ಸಂತೋಷ. ಪೈಯ್ಯವಂದ ಅಂತ ನನ್ನನ್ನು ಎತ್ತಿ ತೊಡೆಯ ಮೇಲೆ ಕೂಡಿಸಿಕೊಂಡು, ಮುದ್ದಾಡಿ – “ಮದ್ದಿಟ್ಟರು!”  ಆಗಿನ ಕಾಲದಲ್ಲಿ ಅದೊಂದು ಕೆಟ್ಟ ಚಟ.  ಪರಿಣಾಮ ದಿನ ದಿನಕ್ಕೆ ಕರಗುತ್ತ ಹೋದೆ.  ಗಾಬರಿಯಲ್ಲಿ ಸಿದ್ಧಿಕಟ್ಟೆಯ ಸಮೀಪ ಇದ್ದ ಒಬ್ಬ ಹಕೀಮರ ಬಳಿಗೆ ಕರೆದೊಯ್ದರು.  ಆತ ಏನನ್ನೋ ತಿನ್ನಿಸಿ, ಕುಡಿಸಿ, ‘ಮದ್ದಿನ ಉಂಡೆಯನ್ನು ವಾಂತಿ ಮಾಡಿಸಿದ.  ಇನ್ನೊಂದು ತಿಂಗಳು ಬಿಟ್ಟಿದ್ದರೆ ಕೈಮೀರಿ ಹೋಗುತ್ತಿತ್ತು ಎಂದನಂತೆ.  ಮುಂದೆ ನಾನು ಕಲ್ಲುಗುಂಡಾಗಿ ಬದುಕಲಿ ಎಂದು ಗುಂಡು ಎಂಬ ಅಡ್ಡ ಹೆಸರನ್ನೂ ಪಟ್ಟಿಗೆ ಸೇರಿಸಿದರು.

ಏನೇ ಆದರೂ ರೋಗದ ಗೋಮಾಳವೇ.  ಬೆಂಗಳೂರಲ್ಲಿ ಇಂಟರ್ ಮೀಡಿಯೇಟ್  ಪ್ಯಾಸ್ ಮಾಡಿದಾಗ ನನ್ನ ಎತ್ತರ ನಾಲ್ಕಡಿ ಹತ್ತಂಗುಲ.  ತೂಕ ಅರವತ್ತೊಂಬತ್ತು ಪೌಂಡುಗಳು!  ವೈದ್ಯರು ಮುಂದಿನ ಓದಿಗೆ ಕತ್ತರಿ ಹಾಕುವುದು ಯೋಗ್ಯವೆಂದು ಬರೆದುಕೊಟ್ಟರು.

ಆದರೇನು?  1929ರಲ್ಲಿ ಮೈಸೂರಿಗೆ ಹೋದೆ.  ಮಹಾರಾಜಾ ಕಾಲೇಜ್ ಸೇರಿದೆ.  ಹಾಸ್ಟೆಲ್ನಲ್ಲಿ ನನ್ನದು ಒಂದನೆಯ ಬ್ಲಾಕು, ರೂಂ ನಂಬರು ಎಂಟು.  ಅಲ್ಲಿ ಮೈ ಬೆಳೆಸಿದೆ.  ಡಾಕ್ಟರ್ ಎಂ.ವಿ ಗೋಪಾಲಸ್ವಾಮಿ ಅವರು ಹಾಸ್ಟೆಲಿನಲ್ಲಿ ಯೋಗಾ ತರಗತಿ ನಡೆಸಿದರು.  ನಾನು ಸೇರಿಕೊಂಡೆ.  ಪಟ್ಟ ಶಿಷ್ಯನಾದೆ.  ಇತರ ಬಗೆ ವ್ಯಾಯಾಮ  ಹಗ್ಗ ಹತ್ತುವುದು, ಏಣಿ ಹತ್ತುವುದು, ಇತ್ಯಾದಿ ಮಾಡಿದೆ.  ತಿಂದೆ, ಕುಡಿದೆ.  ನಂಬಿದರೆ ನಂಬಬಹುದು, ಬಿಟ್ಟರೆ ಬಿಡಬಹುದು.  ಸ್ವಾತಂತ್ರ್ಯ ಪೂರ್ವದಲ್ಲಿ ಮಹಾರಾಜರ ಆಳ್ವಿಕೆಯಲ್ಲಿ ಹಾಲು ರೂಪಾಯಿಗೆ ಎಂಟು ಸೇರು.  ದಿನಾ ಒಂದೂವರೆ ಸೇರು ಕುಡಿಯುತ್ತಿದ್ದೆ.  ಮೊಟ್ಟೆ ಎಂಟು ಕಾಸಿಗೆ ಒಂದು.  ದಿನಾ ಮೂರು ನುಂಗುತ್ತಿದ್ದೆ.  ಕಿತ್ತಲೆ ಹಣ್ಣು ಡಜನ್ನಿಗೆ ಎರಡೇ ಆಣೆ.  ಹನ್ನೆರಡು ಹನ್ನೆರಡು ಹಣ್ಣು ತಿನ್ನುತ್ತಿದ್ದೆ.  ಜೊತೆಗೆ ಎರಡು ಆಣೆ ಬಾದಾಮಿ, ಎರಡು ಆಣೆ ಒಣ ದ್ರಾಕ್ಷಿ, ವಿಂಕಾರ್ನಿಸ್ ಎಂಬುದೊಂದು ಟಾನಿಕ್ ವೈನ್.  ಒಂದೂವರೆ ಸೀಸೆ ತಿಂಗಳಿಗೆ.  ಒಂಬತ್ತೇ ರೂಪಾಯಿ.  ಬಿಡುವು ಸಿಕ್ಕಾಗ ಅಷ್ಟಿಷ್ಟು ಓದಿದ ಶಾಸ್ತ್ರ ಮಾಡಿ 1932ರಲ್ಲಿ  ಅರ್ಥಶಾಸ್ತ್ರದಲ್ಲಿ ಆನರ್ಸ್ ಡಿಗ್ರಿ ಪಡೆದು ಬೆಂಗಳೂರಿಗೆ ಹಿಂದಿರುಗಿದಾಗ ನನ್ನ ಎತ್ತರ ಐದಡಿ ಏಳೂವರೆ ಅಂಗುಲ, ತೂಕ ನೂರ ಅರವತ್ತೊಂಬತ್ತು ಪೌಂಡುಗಳು!  ವಯಸ್ಸು ಇಪ್ಪತ್ತೂವರೆ ವರ್ಷ.

1929ರಲ್ಲಿ ಮೈಸೂರಿಗೆ ಹೋಗುವ ವೇಳೆಗೇ ನನಗೆ ಹನ್ನೊಂದು ವರ್ಣಗಳು, ಅರವತ್ತು ಕೀರ್ತನೆಗಳ ಪಾಠವಿತ್ತು.  ಮೈಸೂರಿನಲ್ಲಿ ಮೂರು ವರ್ಷ ಬಿಡಾರಂ ಕೃಷ್ಣಪ್ಪ, ವಾಸುದೇವಾಚಾರ್, ದೇವೇಂದ್ರಪ್ಪ, ಸುಬ್ಬಣ್ಣ, ಕೇಶವಮೂರ್ತಿ ಇವರುಗಳ ಸಂಗೀತದ ಕೇಳಿಕೆಯಲ್ಲಿ ನನ್ನ ಮನೋಧರ್ಮ ಸಾಕಷ್ಟು ಪುಷ್ಠಿಗೊಂಡಿತು.

ಮಹಾರಾಜ ಕಾಲೇಜಿನಲ್ಲಿ ನಾಟಕ ಕಲೆಗೆ ಅಧ್ಯಾಪಕರು ತುಂಬಾ ಪ್ರೋತ್ಸಾಹ ಕೊಡುತ್ತಿದ್ದರು.  ಡ್ರಾಮಾ ಹಾಲ್ ಎಂತಲೇ ಒಂದು ಸಭಾಂಗಣವಿತ್ತು.  ವರಪರೀಕ್ಷೆ’, ‘ಗಗ್ಗಯ್ಯನ ಗಡಿಬಿಡಿ’, ‘ಕಾಡಾನೆ’, ‘ಸಾವಿನ ಸಮಸ್ಯೆ’, ‘ಸೊಹ್ರಾಬ್ ರುಸ್ತುಂ’, ‘ಆಷಾಢಭೂತಿ’, ‘ಗದಾಯುದ್ಧ’, ಮೊದಲಾದ ನಾಟಕಗಳ ಜೊತೆಗೆ ಇಂಗ್ಲೀಷ್ ನಾಟಕಗಳನ್ನೂ ಪ್ರದರ್ಶಿಸುತ್ತಿದ್ದರು.  ನಾರಾಯಣಶಾಸ್ತ್ರಿ, ವಿ.ಕೆ. ಶ್ರೀನಿವಾಸನ್, ಜಯರಾವ್, ಕೃಷ್ಣ (ತುಪ್ಪ), ಪುಟ್ಟನಂಜಪ್ಪ, ಚೆನ್ನಭಟ್ಟ, ನಾರಾಯಣ ಸ್ವಾಮಿ, ನಟೇಶ ಮೊದಲಿಯಾರ್, ಕಸ್ತೂರಿ, ಜಿ.ಪಿ. ರಾಜರತ್ನಂ ಇವರೆಲ್ಲಾ ಘಟಾನುಘಟಿ ನಟರು. ರಂಗ ತಾಲೀಮು ಪ್ರದರ್ಶನ ಸಮಯಗಳಲ್ಲಿ ನಾನು ತಪ್ಪದೆ ಇವರ ಸಂಗಡ ಇರುತ್ತಿದ್ದೆನಾದರೂ, ಏಕೋ ಏನೋ ಒಂದು ಸಾರಿಯೂ ಬಣ್ಣ ಹಚ್ಚಲಿಲ್ಲ.  ಹಚ್ಚಿಕೋ ಎಂದು ಯಾರೂ ಹೇಳಲಿಲ್ಲ.

1930ರಲ್ಲಿ ಓದುತ್ತಿರುವಾಗಲೇ ಮದುವೆಯಾಗಿತ್ತು.  1932ರಿಂದ 1935ರವರೆಗೆ ನಿರುದ್ಯೋಗ.  ತಿನ್ನೋಕೆ ಉಣ್ಣೋಕೆ ತಾಪತ್ರಯವಿರಲಿಲ್ಲ.  ಅಪ್ಪ ಇನ್ನೂ ಆಫೀಸಿಗೆ ಹೋಗುತ್ತಿದ್ದರು.  ಈ ವಿರಾಮ ವೇಳೆಯಲ್ಲಿ ಹಗಲೆಲ್ಲಾ ಲೈಬ್ರರಿ ಪುಸ್ತಕ ಓದುವುದು, ಸಂಜೆ ಅರಿಯಾಕ್ಕುಡಿ, ಮುಸುರಿ, ಪಲ್ಲಡಂ, ಮಹಾರಾಜಪುರಂ, ಶಮ್ಮಂಗುಡಿ ಇವರುಗಳ ಸಂಗೀತ ಕೇಳುವುದು, ರಾತ್ರಿ-ಕಮಲ, ಅಂದರೆ ನನ್ನ ಹೆಂಡತಿ ಜೋತೆಗಿರುತ್ತಿದ್ದಳು.  ಸಂತಾನಾಭಿವೃದ್ದಿಯೂ ಆಯಿತೆನ್ನಿ. 

1935ರಲ್ಲಿ ಅರಣ್ಯ ಇಲಾಖೆಯಲ್ಲಿ ಕಾರಕೂನನ ನೌಕರಿ ಸಿಕ್ಕಿತು.  ಭದ್ರಾವತಿಯಲ್ಲಿ 25ರೂ ಸಂಬಳ.  ಮಲೆನಾಡ ಆಲೋಯೇನ್ಸ್ ರೂಪಾಯಿಗೆ ಒಂದಾಣೆ.  ಮನೆ ಬಾಡಿಗೆ, ಸುಳ್ಳಲ್ಲ, ಒಂದು ರೂಪಾಯಿ.  ಎರಡು ರೂಮು, ಹಾಲು, ಆಡಿಗೆ ಬಚ್ಚಲು ಊಟದ ಮನೆಗಳು, ನಲ್ಲಿ  ಎಲ್ಲವೂ ಇದ್ದವು!  ಈ ಮನೆ ಸಿಕ್ಕಿ, ಹೆಂಡತಿಯನ್ನು ಕರೆಸಿಕೊಳ್ಳುವವರೆಗೂ ಮೆಸ್ನಲ್ಲಿ ಊಟ ಮಾಡುತ್ತಿದ್ದೆ.  ಅಲ್ಲಿ ಸ್ನಾನ ಮಾಡುವಾಗ ಹಾಡುತ್ತಿದ್ದೆ.  ಈ ಹಾಡಿಕೆ ನನ್ನನ್ನು 1936ರಲ್ಲಿ ರಂಗಮಂಚ ಹತ್ತಿಸಿತು.  ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ವಾರ್ಷಿಕೋತ್ಸವ ಬಹಳ ವೈಭವದಿಂದ ಆಚರಿಸುತ್ತಿದ್ದರು.  ಶ್ರೀಕೃಷ್ಣ ಪಾರಿಜಾತ ನಾಟಕ ಆರಿಸಿದ್ದರು.  ಎನ್. ವಿ. ಕೃಷ್ಣಪ್ಪ ಎಂಬುವರು ಕೃಷ್ಣನ ಪಾತ್ರಕ್ಕೆ ನನ್ನನ್ನು ಸೂಚಿಸಿದರು.  ಜನರಲ್ ಮ್ಯಾನೇಜರ್ ವಿಶ್ವನಾಥ ಅವರು ನನ್ನ ಕೇಳಿದಾಗ ನಾನು ಅಂತಿಂಥ ಶೆಡ್ಡುಗಳಲ್ಲಿ ಪಾರ್ಟು ಮಾಡುವುದಿಲ್ಲ.  ಇಲ್ಲಿ ಜಾಗ ಇದೆ, ಇಲ್ಲೊಂದು ಥಿಯೇಟರ್ ಕಟ್ಟಿಸಿ ಅಂದೆ.  ಸುಳ್ಳಲ್ಲ.  ಅವರು ಭಲೆ ಎಂದು ಕಟ್ಟಿಸಿಯೇ ಬಿಟ್ಟರು.  ಹದಿನೈದೇ ದಿನಗಳಲ್ಲಿ!  ಈಗಲೂ ಇರುವ ನ್ಯೂಟೌನ್ ಥಿಯೇಟರ್ ಇದೇ.  ಕೃಷ್ಣನಾಗಿ ರಂಗಪ್ರವೇಶ ಮಾಡಿದೆ.  ಅಂದಿನಿಂದ ಅಲ್ಲೇ ನಿಂತೆ.  ಮುಂದಿನ ವರ್ಷ ಕಬೀರನಾದೆ.  ಮುಂದಿನ ವರ್ಷ ದುಷ್ಯಂತನಾಗುವುದರೊಳಗೆ ಬೆಂಗಳೂರಿಗೆ ವರ್ಗವಾಗಿ ಬಂದುಬಿಟ್ಟೆ. 

ಪಾರ್ಟು ಮಾಡುವ ಗೀಳು ಹತ್ತಿತು.  ನಾಟಕವಿರಲಿಲ್ಲ.  ಇದ್ದ ಕೆಲವೇ ಕೆಲವನ್ನು ಆಡಿಯಾಗಿತ್ತು.  1939ರಲ್ಲಿ ಬರೆದು ನೋಡೋಣವೆಂದೆ, ಬರೆದೆ, ಗೆದ್ದೆ, ಬರೆಯುತ್ತಾ ಬಂದೆ.  1935ರಿಂದ 1966ರವರೆಗೆ ಅರಣ್ಯ ಇಲಾಖೆಯಲ್ಲಿ ಕ್ಲಾರ್ಕಿನಿಂದ ಮ್ಯಾನೇಜರ್ ವರೆಗೂ ಏರಿ ನಿವೃತ್ತನಾದೆ.

ನಾಟಕ ಪ್ರಪಂಚದಲ್ಲಿ ನಟಿಸುತ್ತಾ ನಾಟಕ ರಚಿಸುತ್ತಾ ಇನ್ನೂ ನಿವೃತ್ತನಾಗಿಲ್ಲ.  ಗಳಿಸಿದ ಲಾರಲ್ಸ್: ಕನ್ನಡ ಸಾಹಿತ್ಯ ಪರಿಷತ್–1970, ರಾಜ್ಯ ಸಾಹಿತ್ಯ ಅಕಾಡೆಮಿ -1974, ಕೇಂದ್ರ ಸಂಗೀತ ನಾಟಕ ಅಕಾಡೆಮಿ–1980, ಕರ್ನಾಟಕ ರಾಜ್ಯ ಪ್ರಶಸ್ತಿ–1983.  1985ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ದೊರೆಯಿತು.
ಶ್ರೀ ಲಂಕೇಶರ ಪಲ್ಲವಿ’, ‘ಅನುರೂಪ’, ವಾದಿರಾಜರ ದಂಗೆಯೆದ್ದ ಮಕ್ಕಳು ಮತ್ತು  ಭಾಗ್ಯದ ಲಕ್ಷ್ಮಿ ಬಾರಮ್ಮಾ ಚಿತ್ರದಲ್ಲೂ ಪಾತ್ರವಹಿಸಿದೆ.

ನನಗೆ ಮತ್ತು ಸಾವಿರಾರು ಶ್ರೋತೃಗಳಿಗೆ ತೃಪ್ತಿ ಕೊಟ್ಟದ್ದು ಎಂದರೆ ನಾನು ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಸಂಸ್ಥೆಯವರಿಗಾಗಿ ನಡೆಸಿಕೊಟ್ಟ ಗೀತಲಹರಿ ಕಾರ್ಯಕ್ರಮ.  ಇಂದೊಂದು ವಿಕ್ರಮವೆಂದೇ ಎಲ್ಲರೂ ಒಪ್ಪಿದ್ದಾರೆ.  ರೇಡಿಯೋಕ್ಕಾಗಿ ನಾಟಕ ಬರೆದಿದ್ದೇನೆ (ನನಗೆ ಬರೆಯೋಕ್ಕೆ ಬರುತ್ತೆ), ಪಾತ್ರ ಮಾಡಿದ್ದೇನೆ. ಪ್ರೊಡ್ಯೂಸೂ ಮಾಡಿದ್ದೇನೆ.

1978ರಲ್ಲಿ ಹೈದರಾಬಾದಿನಲ್ಲಿ ಜರುಗಿದ ವಿಶ್ವ ಹಾಸ್ಯ ಸಮ್ಮೇಳನಕ್ಕೆ ಕರ್ನಾಟಕದಿಂದ ಹದಿಮೂರು ಕಲಾವಿದರ ತಂಡವನ್ನು ಲೀಡ್ ಮಾಡುವ ಸೌಭಾಗ್ಯ ನನ್ನದಾಗಿತ್ತು. 

1980ರಲ್ಲಿ ನಂಕಂಪ್ನಿ ಎಂಬ ತಂಡವನ್ನು ಹುಟ್ಟು ಹಾಕಿ ಈ ವರೆಗೆ 27 ಪ್ರದರ್ಶನಗಳನ್ನು ಕೊಟ್ಟಿರುವೆ.

ಸರ್ಕಾರವು ನನಗೆ 1976ರಲ್ಲಿ ಇತ್ತ ಗೌರವಧನಯೋಗದಿಂದ ನಾನು ನನ್ನ ಏಳು ನಾಟಕ ಲೋಕಗಳನ್ನು ಪ್ರಕಟಮಾಡಿರುವೆ.  ಇನ್ನೂ ಮಾಡುವುದು ಬ್ರಹ್ಮಾಂಡ ಇದೆ.

ಅರಣ್ಯ ವಿಭಾಗ ನನ್ನನ್ನು ಗೌರವ ವೃಕ್ಷ ರಕ್ಷಕ ಎಂದು ನೇಮಿಸಿದೆ.  ದೂರದರ್ಶನ ಮತ್ತು ಆಕಾಶವಾಣಿಯ ದಕ್ಷಿಣ ವಿಭಾಗಕ್ಕೆ ಹಾಸ್ಯ ಕಾರ್ಯಕ್ರಮಗಳಿಗೆ ನೇಮಿತರಾದ ಕೇಂದ್ರ ಸಲಹಾ ಸಮಿತಿಯ ಐವರು ಸದಸ್ಯರಲ್ಲಿ ನಾನೂ ಒಬ್ಬ.

ಕಡೆಗೆ ಕೌಟುಂಬಿಕ ಜೀವನದ ಬಗ್ಗೆ ಒಂದು ಮಾತು.  ಆಸೆಗೆ ಕೊನೆಯಿಲ್ಲ.  ಆಸೆ ಬಿಟ್ಟೆ. ಅತಿ ತೃಪ್ತಿ ಅಂದರೆ ಹುಮ್ಮಸ್ಸು ಇರುವುದಿಲ್ಲ. ತೃಪ್ತಿಯನ್ನೂ ಬಿಟ್ಟೆ. ಆಸೆ  ತೃಪ್ತಿ ಈ ಎರಡೂ ಕುದುರೆಗಳನ್ನೂ ನನ್ನ ರಥಕ್ಕೆ ಕಟ್ಟಿ ಓಡಿಸುತ್ತಿದ್ದೇನೆ.  ಕಮಲ ನನ್ನ ಅರ್ಧಾಂಗಿ, 1933ರಿಂದ 1948ರವರೆಗೆ 9-2 ಮಕ್ಕಳನ್ನು ಪ್ರೆಸೆಂಟ್ ಮಾಡಿ, ಬದುಕಿನ ಉದ್ದಕ್ಕೂ ನನ್ನನ್ನು ಚೆನ್ನಾಗಿ ನೋಡಿಕೊಂಡು 1982ರಲ್ಲಿ ಬಿಟ್ಟು ಹೋದಳು.  1967ರಲ್ಲಿ ಕಟ್ಟಿದ ಸ್ವಂತ ಮನೆಯಲ್ಲಿ 4 ಗಂಡು ಮಕ್ಕಳು, 4 ಸೊಸೆಯರು, ಮಗಳು ಮತ್ತು ಅಳಿಯ, 7 ಮೊಮ್ಮಕ್ಕಳು, ಅಡಿಗೆಯಾಕೆ, ಕೆಲಸದ ಹೆಂಗಸು, 1 ನಾಯಿ ಅಂಡ್ ನಾನು  ನೆಮ್ಮದಿಯಿಂದಿದ್ದೇವೆ.

---

ಪರ್ವತವಾಣಿಯವರು 17-3-1994ರಂದು ತಮ್ಮ 83ನೆಯ ವಯಸ್ಸಿನಲ್ಲಿ ನಿಧನರಾದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.

(ಕೃಪೆ:  ಕರ್ನಾಟಕ ನಾಟಕ ಅಕಾಡೆಮಿ ಪರ್ವತವಾಣಿ ಸನ್ಮಾನ ಸಮಿತಿ ಪ್ರಕಟಿಸಿದ ಕನ್ನಡ ರಂಗಭೂಮಿಯ ಪರ್ವತವಾಣಿ ಅಭಿನಂದನೆ ಗ್ರಂಥ - 1985).


Tag: Parvatavani

2 ಕಾಮೆಂಟ್‌ಗಳು:

M P Keshava ಹೇಳಿದರು...

ಹಲವು ವರ್ಷಗಳ ಹಿಂದೆ ಒಂದು ವಾರಪತ್ರಿಕೆಯಲ್ಲಿ (ನನಗೆ ನೆನಪಿರುವಂತೆ ಸುಧಾ) ಪರ್ವತವಾಣಿಯವರು ಒಂದು ಪ್ರಬಂಧವನ್ನು ಬರೆದಿದ್ದರು. ಅದರ ವಿಶೇಷ ಎಂದರೆ ಅದು ಅವರು ಪ್ರೌಢಶಾಲೆಯಲ್ಲಿದ್ದಾಗ ಬರೆದ ಪ್ರಬಂಧ. ಅವರ ಉಪಾಧ್ಯಾಯರು ನಿಮ್ಮ ಬೇಸಿಗೆ ರಜೆಯ ಬಗ್ಗೆ ಒಂದು ಪ್ರಬಂಧ ಬರೆಯಿರಿ ಎಂದು ಹೇಳಿದಾಗ, ಅವರು ಬರೆದ ಪ್ರಬಂಧ. ಅದನ್ನು ಓದಿದ ಉಪಾಧ್ಯಾಯರು ಬೆರಗಾದರು. ನಾವೆಲ್ಲರೂ ಈ ಪ್ರಬಂಧವನ್ನು ಶಾಲೆಯಲ್ಲಿ ಬರೆದಿದ್ದೇವೆ.ಸಾಮಾನ್ಯವಾಗಿ ಈ ಪ್ರಬಂಧಗಳು ನಮ್ಮ ಚಟುವಟಿಕೆಗಳ ಪಟ್ಟಿಯ ತರಹ ಇರುತ್ತವೆ. ಆದರೆ ಪರ್ವತವಾಣಿಯವರ ಪ್ರಬಂಧ ಒಬ್ಬ ಲೇಖಕರು ಬರೆದಂತೆ ಇದ್ದಿತು. ಉಪಾಧ್ಯಾಯರು ಬಹಳ ಸಂತಸದಿಂದ "ನೀನು ಖ್ಯಾತ ಸಾಹಿತಿ ಆಗುತ್ತೀಯಾ" ಎಂದು ಆಶೀರ್ವದಿಸಿದರು. ಆ ಪ್ರಬಂಧ ಯಾರಿಗಾದರೂ ಸಿಕ್ಕರೆ ದಯವಿಟ್ಟು ಪ್ರಕಾಶ ಪಡಿಸಿರಿ ಎಂದು ವಿನಂತಿ ಮಾಡುತ್ತೇನೆ. ನಮಸ್ಕಾರ.

Unknown ಹೇಳಿದರು...

ಪರ್ವತವಾಣಿಯವರ ಆತ್ಮಕಥೆ ಅದ್ಭುತವಾಗಿದೆ. ಹಾಸ್ಯವಾಗಿಯೇ ಎಲ್ಲಾ ವಿಚಾರ ತಿಳಿಸಿರುವ ರೀತಿ ಬಹಳ ಮೆಚ್ಚುಗೆ ಆಗುತ್ತೆ.