ಗುರುವಾರ, ಅಕ್ಟೋಬರ್ 13, 2011

ಅಶೋಕ್ ಕುಮಾರ್

ಅಶೋಕ್ ಕುಮಾರ್

ನಾವು ಚಲನಚಿತ್ರಗಳನ್ನು ನೋಡುವಾಗ ನಮಗರಿವಿಲ್ಲದಂತೆ ಕೆಲವೊಂದು ಪಾತ್ರಗಳ ಮೇಲೆ ಅನುಭೂತಿ ಹುಟ್ಟುತ್ತದೆ.  ಆ ಪಾತ್ರಗಳಿಗೆ ನಾವು ಪ್ರೀತಿಪಾತ್ರರಾಗಿಬಿಡುತ್ತೇವೆ.  ನಮಗರಿವಿಲ್ಲದಂತೆ ಆ ಪಾತ್ರಗಳನ್ನು ಅಭಿನಯಿಸಿದ ಕಲಾವಿದರ ಕುರಿತು ಅತ್ಯಂತ ಆಪ್ತಭಾವ ತಳೆದುಬಿಡುತ್ತೇವೆ.  ಆದರೆ ಅಂತಹ ಆಪ್ತಭಾವವನ್ನು ಸುದೀರ್ಘಕಾಲದವರೆಗೆ ಪ್ರೇಕ್ಷಕನ ಹೃದಯದಲ್ಲಿ ಉಳಿಸಿಕೊಳ್ಳುವವರು ಅತ್ಯಂತ ವಿರಳ.  ಆ ವಿರಳರಲ್ಲಿ ವಿರಳರಾದವರು ದಾದಾಮೊನಿಎಂದು ಚಿತ್ರರಂಗದಲ್ಲಿ ಆಪ್ತರಾದ ಮೇರು ಕಲಾವಿದ, ಅತ್ಯಂತ ಸಹಜ ಅಭಿನೇತಅಭಿಮಾನಿಗಳ ಹೃದಯದಲ್ಲಿ ಚಿರವಿರಾಜಿತ ಅಶೋಕ್ ಕುಮಾರ್ ಅವರು.

ಅಶೋಕ್ ಕುಮಾರ್ ಅವರು ಹುಟ್ಟಿದ್ದು, ಅಂದು ಬಂಗಾಳದಲ್ಲಿದ್ದ ಇಂದಿನ ಬಿಹಾರದಲ್ಲಿರುವ   ಭಾಗಲ್ಪುರದಲ್ಲಿ, ದಿನಾಂಕ  ಅಕ್ಟೋಬರ್ 13,  1911 ದಿನಾಂಕದಂದು.  ಓಹ್, ಹೀಗೆ ಬರೆಯುವಾಗ ಅರಿವಾಗುತ್ತಿದೆ.  ಅವರ ಹುಟ್ಟಿದ ಹಬ್ಬದ ದಿನದ ನೆನಪು ಮತ್ತೊಂದು ರೀತಿಯಲ್ಲಿ  ನೆನೆಪಾಗುತ್ತದೆ.  ಅದೆಂದರೆ ಅಕ್ಟೋಬರ್ 13, ಅಶೋಕ್ ಕುಮಾರರ ಪ್ರಸಿದ್ಧ ಸಹೋದರ ಚಲನಚಿತ್ರರಂಗದ ಮೇರು ಗಾಯಕ ನಟ ಕಿಶೋರ್ ಕುಮಾರ್ ಅವರು ನಿಧನರಾದ ದಿನ ಕೂಡಾ ಹೌದು.  ಅಭಿನಯದಲ್ಲಿ ಮಾತ್ರವಲ್ಲದೆ, ಅಶೋಕ್ ಕುಮಾರ್ 1940ರ ದಶಕದಲ್ಲೇ ಕಲ್ಕತ್ತಾ ದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದ ಮಹಾನ್ ಪ್ರತಿಭಾವಂತ. 

ಇಂದಿನ ಯುವ ಪೀಳಿಗೆಯವರಿರಲಿ, ನಮ್ಮಂತಹ ಇಂದಿನ ಮಧ್ಯವಯಸ್ಕರು ಚಿತ್ರರಂಗಕ್ಕೆ ಬರುವ ವೇಳೆಗಾಗಲೇ ಅಶೋಕ್ ಕುಮಾರ್ ಅವರು ನಮ್ಮ  ಕಾಲದ ಹೀರೋಗಳಾದ ರಾಜೇಶ್ ಖನ್ನ, ಅಮಿತಾಬ್ ಚಿತ್ರಗಳಲ್ಲಿ ಹಿರಿಯರ ಪಾತ್ರ ನಿರ್ವಹಿಸುತ್ತಿದ್ದರು.  ಅವರು ನಿರ್ವಹಿಸಿದ ಹಿರಿಯಪಾತ್ರಗಳಿಗೆ ಕೂಡಾ ಅವರು ತರುತ್ತಿದ್ದ ಘನತೆ ಭವ್ಯವಾದದ್ದು.  ಅಲ್ಲಿ ಭಾವುಕತೆ, ಹಾಸ್ಯ, ಪ್ರೀತಿ, ವಾತ್ಸಲ್ಯ, ಹಿರಿತನದಲ್ಲಿ ಹುಡುಗುತನ ಎಲ್ಲವೂ ಲೀಲಾಜಾಲವಾಗಿರುತ್ತಿತ್ತು.  ಎಂಭತ್ತರ ದಶಕದಲ್ಲಿ ಅಶೋಕ್ ಕುಮಾರ್, ಉತ್ಪಲ್ ದತ್ ಮತ್ತು ಎ ಕೆ. ಹನಗಲ್  -  ಮೂರು ಮೂವರು ಹಿರಿಯ ಮಹಾನ್ ಪ್ರತಿಭೆಗಳು ತಾವೇ ಪ್ರಧಾನ ಪಾತ್ರವಾಗಿ ನಟಿಸಿದ್ದ ಶೌಕೀನ್ಎಂಬ ಹಾಸ್ಯ ಚಿತ್ರದಲ್ಲಿ, ಒಬ್ಬರಿಗೊಬ್ಬರು ಪೂರಕವಾಗಿ, ಒಬ್ಬರನ್ನೊಬ್ಬರು ಮೀರಿಸುವಂತಹ ಅಭಿನಯ ನೀಡಿದ ಅಪೂರ್ವತೆಯನ್ನು ಮರೆಯುವಂತಿಲ್ಲ.

ಅಶೋಕ್ ಕುಮಾರ್ ಎಂತಹ ಹೀರೋ ಎಂದು ಅರಿಯಲು ಐವತ್ತು, ಅರವತ್ತು, ಎಪ್ಪತ್ತರ ದಶಕಕ್ಕೆ ಬರಬೇಕು.  ಅವರು ನಟಿಸಿದ ನೂರಕ್ಕೂ ಹೆಚ್ಚು ಚಿತ್ರಗಳು ಶತದಿನೋತ್ಸವ ಕಂಡಿವೆ ಎಂಬುದು ಒಂದು ರೀತಿಯಲ್ಲಿ ಅವಿಸ್ಮರಣೀಯ ಇತಿಹಾಸ.  ಅವರಷ್ಟು ನಿರ್ಮಾಪಕರಿಗೆ ಲಾಭದ ಸಮೇತ ಹಣ ವಾಪಸ್ಸು ತಂದುಕೊಟ್ಟ ಮತ್ತೊಬ್ಬ ನಟರಿಲ್ಲ ಎಂಬುದು ಚಿತ್ರರಂಗದಲ್ಲಿ ಪ್ರಸಿದ್ಧವಾದ ಮಾತಾಗಿತ್ತು.  1936ರ ವರ್ಷದಲ್ಲಿ ಅಛೂತ್ ಕನ್ಯಾಎಂಬ ಚಿತ್ರದಿಂದ ಮೊದಲ್ಗೊಂಡು,  1940ರಲ್ಲಿ ಬಾಂಬೆ ಟಾಕೀಸಿಗೆ ಕಾಲಿಟ್ಟು  1998ರ ವರ್ಷದವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ದಾದಮೊನಿ ಅವರು ನಾಯಕ, ಖಳನಾಯಕ, ತಂದೆ, ಮಾವ, ಅಣ್ಣ, ಹೀಗೆ ಒಟ್ಟಾರೆ 250ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದರು.  ಒಮ್ಮೆ ಹೆಣ್ಣು ಪಾತ್ರವನ್ನೂ ಅಭಿನಯಿಸಿ ಪ್ರಸಿದ್ಧಿ ಪಡೆದಿದ್ದರು. 

'ದೇವಿಕಾರಾಣಿ', 'ಲೀಲಾಚಿಟ್ನಿಸ್', 'ವನಮಾಲಾ', 'ವಾಸಂತಿ', 'ರೋಸ್', 'ನೂತನ್’, 'ಮೀನಾಕುಮಾರಿ', 'ಮಧುಬಾಲಾ', 'ಗೀತಾಬಾಲಿ', 'ಸುಮಿತ್ರ', 'ಹೇಮಾಮಾಲಿನಿ' ಹೀಗೆ ವಿವಿಧ ನಟಿಯರು ಅಶೋಕ್ ಕುಮಾರ್ ಅವರ  ನಾಯಕಿಯರು.  ಅಂದಿನ ಕಾಲದ ಪ್ರಸಿದ್ಧ ಚಿತ್ರಗಳಾದ 'ಕಿಸ್ಮತ್', 'ಕಂಗನ್', 'ಪರಿಣೀತಾ'’, 'ಏಕ್ ಹೀ ರಾಸ್ತ', 'ಪಾಕೀಜಾ', 'ಹೂಮಾಯೂನ್', 'ಮಹಲ್' ಮುಂತಾದವು ಅಶೋಕ್ ಕುಮಾರ್ ಅವರ ಪ್ರಾರಂಭಿಕ ಜೀವನದ ಪ್ರಮುಖ ಚಿತ್ರಗಳು.  ಅಂದಿನ ದಿನಗಳಲ್ಲಿ ನಾಯಕ, ನಾಯಕಿಯರು ತಾವೇ ಹಾಡುತ್ತಿದ್ದ ಕಾಲ.   ಹೀಗಾಗಿ ಅವರು ಉತ್ತಮ ಗಾಯಕರೂ ಆಗಿದ್ದರು. ಮುಂದೆ ನಮ್ಮ ಯುಗದಲ್ಲಿ ಬಂದ ಪ್ರತಿಯೊಂದು ಮಹತ್ವದ ಚಿತ್ರವೂ ಅಶೋಕ್ ಕುಮಾರರ ಪ್ರತಿಭೆಯನ್ನು ಹೊರಸೂಸುವಂತದ್ದಾಗಿತ್ತು.  ಅದರಲ್ಲೂ, ಹೃಷೀಕೇಶ್ ಮುಖರ್ಜಿ, ಬಸು ಚಟರ್ಜಿ ಮುಂತಾದ ನಿರ್ದೇಶಕರ ಉಲ್ಲಾಸ ಪೂರ್ಣ ಚಿತ್ರಗಳಲ್ಲಿ ಅವರ ಅಭಿನಯ ಅವಿಸ್ಮರಣೀಯವಾದುದು.  ಆರಾಧನಾ, ಖೂಬಸೂರತ್, ಖಟ್ಟಾ ಮೀಟಾ ಮುಂತಾದ ಚಿತ್ರಗಳೂ ಎಂದೂ ನೆನಪಲ್ಲಿ ಉಳಿಯುತ್ತವೆ. 

ಅಶೋಕ್ ಕುಮಾರರ ತಮ್ಮ ಕಿಶೋರ್ ಕುಮಾರರನ್ನು ಒಳಗೊಂಡಂತೆ ಅಶಿಸ್ತು, ಸಮತೋಲನವಿಲ್ಲದೆ ಬದುಕಿ ಬಾಳುವ ರೀತಿಗೆ ಹೆಸರಾದ ಚಿತ್ರರಂಗದಲ್ಲಿ ಅಶೋಕ್ ಕುಮಾರ್ ಒಂದು ಅಪವಾದ.  ಅಶೋಕ್ ಕುಮಾರ್ ಅವರು ಶಿಸ್ತುಬದ್ಧ ಜೀವನವನ್ನು ನಡೆಸಿದರು.  “ಹಣ ಸಂಪಾದನೆಯ ಬಗ್ಗೆ ಅವರಿಗೆ ಮೋಹವಿತ್ತು, ಆ ವಿಚಾರದಲ್ಲಿ ಅವರದ್ದು ಕಟ್ಟುನಿಟ್ಟಿನ ಮನೋಭಾವ”  ಎಂಬಂತಹ ಮಾತುಗಳು ಪತ್ರಿಕೆಯಲ್ಲಿ ಕಾಣಬರುತ್ತಿದ್ದವಾದರೂ  ಹಣ ತರುವ ವ್ಯಸನಗಳು ಅವರ ಬದುಕನ್ನು ಹಾಳುಗೆಡವಲಿಲ್ಲ.  ತೊಂಭತ್ತು ವರ್ಷದವರೆಗೆ ಬದುಕಿದ್ದ ಅವರು 86ರ ವಯಸ್ಸಿನಲ್ಲೂ ಚಿತ್ರರಂಗದಲ್ಲಿದ್ದರು.  ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಘನತೆ, ಗೌರವ, ಪ್ರತಿಭೆ, ಜನಪ್ರಿಯತೆಗಳಿಂದ  ಬಾಳಿದರು. 


ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳನ್ನು ಒಳಗೊಂಡಂತೆ ಅಶೋಕ್ ಕುಮಾರ್ ಅವರಿಗೆ ಸಂದ ಗೌರವಗಳು ಅನೇಕ.  ದಾದಾಮೊನಿ ಅವರು 2001ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಅವರ ಬಿಟ್ಟು ಹೋದ ಶ್ರೇಷ್ಠತೆಯ ಹಿರಿಮೆ ಅಜರಾಮರವಾದದ್ದು.  ಈ ಶ್ರೇಷ್ಠತೆಯ ಸವಿನೆನಪಿನಲ್ಲಿ ಆತ್ಮೀಯ ನಮನಗಳು.

Tag: Ashok Kumar

ಕಾಮೆಂಟ್‌ಗಳಿಲ್ಲ: