ಸೋಮವಾರ, ಆಗಸ್ಟ್ 26, 2013

ರಹಮತ್ ತರೀಕೆರೆ

ರಹಮತ್ ತರೀಕೆರೆ 


ಕನ್ನಡದ ಪ್ರಸಿದ್ಡ ಸಂಸ್ಕೃತಿ ಚಿಂತಕರು ಹಾಗೂ ವಿಮರ್ಶಕರಾದ ರಹಮತ್ ತರೀಕೆರೆ ಅವರು ಆಗಸ್ಟ್ 26, 1959ರಂದು ತರೀಕೆರೆ ತಾಲೂಕಿನ ಸಮತಳದಲ್ಲಿ ಜನಿಸಿದರು.  ಹಳ್ಳಿಯಲ್ಲಿ ಕಮ್ಮಾರಿಕೆಯಿಂದ ಮನೆಯವರ ಹೊಟ್ಟೆ ತುಂಬುವುದು ಅಸಾಧ್ಯವಾದಾಗ ಇವರ ಕುಟುಂಬ ತರೀಕೆರೆಗೆ ಬಂತು.  ಆಗ ಇವರಿಗೆ ದೊರೆತದ್ದು ಅಕ್ಷರಶಃ ಕೊಳಗೇರಿಯ ಬದುಕು.  ಅವರಿವರ ಜೋಪಡಿಪಟ್ಟಿಗಳ ಬೆಳಕಿನಲ್ಲಿ ಹುಚ್ಚುಹಿಡಿದು ಓದುತ್ತ ಎಸ್ ಎಸ್ ಎಲ್ ಸಿ, ಪಿಯುಸಿ ಮುಗಿಸಿದರು.  ಇದಕ್ಕೆ ತಾಯಿಯ ಒತ್ತಾಸೆಯೂ ಇತ್ತು.  ತರೀಕೆರೆಯಲ್ಲಿ ಓದುವಾಗ ಅಪ್ಪ ಅಣ್ಣಂದಿರೊಂದಿಗೆ ಇವರು ಹಮಾಲಿ ಮಾಡಿದ್ದೂ ಉಂಟು.  

ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡದ ವಿಷಯವನ್ನು ಆಯ್ಕೆ ಮಾಡಿಕೊಂಡು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕಗಳೊಂದಿಗೆ ಪದವಿ ಪೂರೈಸಿದ ರಹಮತ್ ಅವರು ಮುಂದೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ 1983ರ ವರ್ಷದಲ್ಲಿ ಅದೇ ಮೇಲ್ಮಟ್ಟದ ಪ್ರಪ್ರಥಮ ಶ್ರೇಣಿ ಮತ್ತು ಸ್ವರ್ಣಪದಕಗಳ ಸಾಧನೆಯೊಂದಿಗೆ ಸ್ನಾತಕೋತ್ತರ ಪದವಿ ಪಡೆದರು.  

1983-84ರ ವರ್ಷದಿಂದ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಆರಂಭ ಮಾಡಿದ ರಹಮತ್ ತರೀಕೆರೆಯವರು 1984ರಿಂದ ಚಂದ್ರಶೇಖರ ಕಂಬಾರರ ಕರೆಯ ಮೇರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು.   ಪ್ರಸಕ್ತದಲ್ಲಿ ಕನ್ನಡ ಸಾಹಿತ್ಯ ವಿಭಾಗದ ಮುಖ್ಯಸ್ಥರಾಗಿ ಹಾಗೂ  ಭಾಷಾಕಾಯದ ಡೀನ್ ಆಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ರಹಮತ್ ತರೀಕೆರೆಯವರು ತಮ್ಮ ಓದಿನ ದಿನಗಳಲ್ಲೇ ‘ಪ್ರಪಂಚ’, ‘ಜನಪ್ರಗತಿ’, ‘ಅಂಚೆವಾರ್ತೆ’ಗಳಂಥ ಪತ್ರಿಕೆಗಳಲ್ಲಿ ಹೃದಯಸ್ಪರ್ಶಿ ಕಥೆ ಕವಿತೆಗಳನ್ನು ಪ್ರಕಟಿಸಿ ತರೀಕೆರೆ ಸೀಮೆಯ ಜನರ ಹೆಮ್ಮೆಗೆ ಪಾತ್ರರಾಗಿದ್ದರು.  ಅವರು ಆಗಲೇ ‘ಐವರು ಹೇಳಿದ ಜನಪದ ಕಥೆಗಳು’ ಎಂಬ ಸಂಪಾದನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುವಷ್ಟು ಬೆಳೆದಿದ್ದರು.  ಎಂ. ಎ. ಸೇರುವುದರೊಳಗಾಗಿ ದಾರಿ ಖಚಿತವಾಗಿತ್ತು.  ವಿದ್ಯಾರ್ಥಿ ಬದುಕಿನ ಜೀವನದುದ್ದಕ್ಕೂ ವಿದ್ಯಾಗುರುಗಳಾದ ಗೋವಿಂದರಾಜು, ಹಾಲೇಕ್, ನೋಸಂತಿ, ಎಚ್ ಎಂ ಚೆನ್ನಯ್ಯ, ಪ್ರಭುಶಂಕರ, ಜಿ. ಎಚ್ ನಾಯಕ ಮೊದಲಾದವರು ನೀಡಿದ ನೈತಿಕ ಬೆಂಬಲ ಅವರನ್ನು ಬೆಳೆಸಿತು.  

‘ಪ್ರತಿಸಂಸ್ಕೃತಿ’, ‘ಮರದೊಳಗಿನ ಕಿಚ್ಚು’, ‘ಸಂಸ್ಕೃತಿ ಚಿಂತನೆ’, ‘ಕತ್ತಿಯಂಚಿನದಾರಿ’, ‘ಚಿಂತನೆಯ ಪಾಡು’, ‘ಕರ್ನಾಟಕದ ಸೂಫಿಗಳು ಹಾಗೂ ಕರ್ನಾಟಕದ ನಾಥಪಂಥ’ ಮುಂತಾದವು ರಹಮತ್ ತರೀಕೆರೆ ಅವರ ವಿಮರ್ಶಾ ಗ್ರಂಥಗಳಾಗಿವೆ.  ‘ಮಾತು ತಲೆ ಎತ್ತುವ ಬಗೆ’, ‘ಇಲ್ಲಿ ಯಾರೂ ಮುಖ್ಯರಲ್ಲ’ ಮುಂತಾದವು ಅವರ ಸಂಶೋಧನಾ ಕೃತಿಗಳು.  ‘ಅಂಡಮಾನ್ ಕನಸು’  ಪ್ರವಾಸ ಕಥನ.  ‘ಸಾಂಸ್ಕೃತಿಕ ಅಧ್ಯಯನ’, ‘ಧರ್ಮಪರೀಕ್ಷೆ’, 'ವಸಾಹತು ಪ್ರಜ್ಞೆ ಮತ್ತು ವಿಮೋಚನೆ’,  ‘ಧರ್ಮವಿಶ್ವಕೋಶ’, ‘ಹೊಸ ತಲೆಮಾರಿನ ತಲ್ಲಣ’, ‘ಕವಿರಾಜಮಾರ್ಗ ಸಾಂಸ್ಕೃತಿಕ ಮುಖಾಮುಖಿ’, ‘ಅಕ್ಕನ ವಚನಗಳು ಸಾಂಸ್ಕೃತಿಕ ಮುಖಾಮುಖಿ’, ‘ಕುಮಾರವ್ಯಾಸ ಸಾಂಸ್ಕೃತಿಕ ಮುಖಾಮುಖಿ’, ‘ಇಂಗ್ಲಿಷ್ ಗೀತೆಗಳು ಸಾಂಸ್ಕೃತಿಕ ಮುಖಾಮುಖಿ’, ‘ಮಲೆಗಳಲ್ಲಿ ಮದುಮಗಳು ಸಾಂಸ್ಕೃತಿಕ ಮುಖಾಮುಖಿ’, ‘ತನ್ನತನದ ಹುಡುಕಾಟ’  'ಸಂಶೋಧನಾ  ಮೀಮಾಂಸೆ', 'ನೇತು ಬಿದ್ದ ನವಿಲು', 'ನಡೆದಷ್ಟೂ  ನಾಡು', 'ಕರ್ನಾಟಕದ ಮೊಹರಂ' ಮುಂತಾದವು ಅವರ ವೈಶಿಷ್ಟ್ಯಪೂರ್ಣ ಚಿಂತನ  ಕೃತಿಗಳು.  ‘ಲೋಕವಿರೋಧಿಗಳ  ಜತೆಯಲ್ಲಿ’, ‘ಐವರು ಹೇಳಿದ ಜನಪದ ಕಥೆಗಳು’ ಮುಂತಾದವು ಸಂಪಾದಿತ ಕೃತಿಗಳು.   'ಅಮೀರ್ಬಾಯ್  ಕರ್ನಾಟಕಿ'  ವ್ಯಕ್ತಿ  ಚಿತ್ರಣ.

ರಹಮತ್ ತರೀಕೆರೆಯವರಿಗೆ ‘ಕತ್ತಿಯಂಚಿನ ದಾರಿ’ ಕೃತಿಗೆ 2010ರ ವರ್ಷದ ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಪ್ರತಿಸಂಸ್ಕೃತಿ’, ‘ಕರ್ನಾಟಕದ ಸೂಫಿಗಳು’ ಹಾಗೂ ‘ಅಂಡಮಾನ್ ಕನಸು’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಧರ್ಮಕಾರಣ’ ಕೃತಿಗೆ ಲಂಕೇಶ್ ಪ್ರಶಸ್ತಿ,  ಕನ್ನಡ ಸಾಹಿತ್ಯ ಪರಿಷತ್ತಿನ ಹಾ. ಮಾ.  ನಾಯಕ ಪ್ರಶಸ್ತಿ ಹಾಗೂ   ವಿಮರ್ಶಾ ಕ್ಷೇತ್ರದ ಒಟ್ಟು ಕೊಡುಗೆಗಾಗಿ ಅವರಿಗೆ ಜಿ. ಎಸ್. ಎಸ್. ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.. 

ರಹಮತ್ ತರೀಕೆರೆ ಅವರು ತಮ್ಮ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿಯಾದ  ‘ಕತ್ತಿಯಂಚಿನ ದಾರಿ’ಯ ಕುರಿತು ಆ ಪುಸ್ತಕದಲ್ಲಿ ಬರೆದಿರುವ ಮಾತುಗಳು ಹೀಗಿವೆ: 

“ಇದೊಂದು ಬಿಕ್ಕಟ್ಟಿನ ಕಾಲ. ನನ್ನ ತಲೆಮಾರಿನ ಅನೇಕರ ನಡೆ ನುಡಿಗಳ ನಡುವೆ ಕಾಣಿಸಿಕೊಳ್ಳುವ ಕಷ್ಟ ಕೂಡ. ನಮ್ಮ ನಾಡಿನ ಚರಿತ್ರೆಯಲ್ಲಿ ಯಾವೊತ್ತೂ ಇಷ್ಟೊಂದು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಜಗತ್ತಿನ ದೊಡ್ಡ ಮಿಲಿಟರಿ ಶಕ್ತಿಗಳು, ಕೋಮುವಾದ, ಪ್ರಭುತ್ವಗಳು ಹುಟ್ಟಿಸುವ ಕ್ರೌರ್ಯ, ಅದಕ್ಕೆ ಎದುರಾಗಿ ಹುಟ್ಟಿಕೊಂಡ ಜನರ ಪ್ರತಿರೋಧಗಳು, ಮಧ್ಯಮವರ್ಗದ ಅವಕಾಶವಾದೀ ವರ್ತನೆ, ಜನರಿಗಾಗಿ ಕೆಲಸ ಮಾಡುವ ಚಳವಳಿಗಾರರ ದಮನ - ಇವೆಲ್ಲವೂ ನಮ್ಮ ಓದು ಮತ್ತು ಬರಹಗಳ ಮೇಲೆ ಹೇಗೋ ಆವರಿಸಿಕೊಂಡಿವೆ. ಇವನ್ನು ಮರೆತು ಬರೆಯುವಂತಿಲ್ಲ. ಮರೆಯದೆ ಬರೆದರೆ, ಬರೆದ ಬರೆಹ ಆತ್ಮವಿಶ್ವಾಸ ಕೂಡುವುದಕ್ಕೆ ಬದಲಾಗಿ ಪ್ರಶ್ನೆಯಾಗಿ ಎದುರು ನಿಂತು ಕಾಡುತ್ತದೆ. ಇದನ್ನೇ ಕತ್ತಿಯಂಚಿನ ದಾರಿಯಲ್ಲಿ ನಡೆಯುವ ಕಷ್ಟ ಎಂದು ನಾನು ಭಾವಿಸಿದ್ದೇನೆ. ಕತ್ತಿಯ ಅಲಗಿನ ಮೇಲೆ ನಡೆದರೆ ಕಾಲು ಕತ್ತರಿಸಿ ಹೋಗುತ್ತದೆ. ಅದನ್ನು ಬಾಗಿ ಎತ್ತಿಕೊಂಡರೆ ಕೈಯ ಆಯುಧವಾಗುತ್ತದೆ. ಅದನ್ನು ಸ್ವವಿಮರ್ಶೆಯನ್ನಾಗಿ ಮಾಡಿ ಚುಚ್ಚಿಕೊಂಡರೆ ನಮ್ಮ ಒಡಲಲ್ಲಿ ಮುರಿದು ನೋವುಂಟು ಮಾಡುತ್ತದೆ.....”  ಹೀಗೆ ಸಾಗುತ್ತದೆ ಅವರ ವಿಚಾರ ಲಹರಿ.

ಈ ಮಹಾನ್ ಚಿಂತಕ ಡಾ. ರಹಮತ್ ತರೀಕೆರೆ ಅವರಿಗೆ ನಮ್ಮ ಆತ್ಮೀಯ ಗೌರವಗಳು ಮತ್ತು  ಹುಟ್ಟು ಹಬ್ಬದ ಆತ್ಮೀಯ ಶುಭ ಹಾರೈಕೆಗಳು.

Tag: Rahamat Tarikere

ಕಾಮೆಂಟ್‌ಗಳಿಲ್ಲ: