ಶನಿವಾರ, ಆಗಸ್ಟ್ 31, 2013

ಚಾರ್ಲ್ಸ್ ಡಿಕನ್ಸ್

ಚಾರ್ಲ್ಸ್ ಡಿಕನ್ಸ್

ಮಹಾನ್ ಕಥೆಗಾರ ಚಾರ್ಲ್ಸ್ ಡಿಕನ್ಸ್  ಇಂಗ್ಲೆಂಡಿನ ಪೋರ್ಟ್ಸ್ ಮೌತ್ ಎಂಬಲ್ಲಿ ಫೆಬ್ರುವರಿ 7, 1812ರ ವರ್ಷದಲ್ಲಿ ಜನಿಸಿದರು.   ಆತ ತನ್ನ ತಂದೆ ತಾಯಂದಿರ ಎಂಟನೆಯ ಮಗು.  ಆತನ ತಾಯಿ ರಾಜಮನೆತನದ ಸೇವಕಿಯಾಗಿಯೂ, ತಂದೆ ನೌಖಾದಳದಲ್ಲಿನ ಗುಮಾಸ್ತರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.  ಚಾರ್ಲ್ಸ್ ಇನ್ನೂ ಬಾಲ್ಯದಲ್ಲಿರುವಾಗಲೇ ಆತನ ತಂದೆ ಅತೀವ ಸಾಲ ಮಾಡಿ ಜೈಲು ಸೇರಿಬಿಟ್ಟ.  ಹೀಗಾಗಿ  ಚಾರ್ಲ್ಸ್ ಕಪ್ಪು ಪಾಲೀಶ್ ತಯಾರಿಕಾ ಘಟಕದಲ್ಲಿ ಬಾಲ ಕಾರ್ಮಿಕನಾಗಿ ಅತ್ಯಂತ ದಾರುಣ ಬಡತನದ ದಿನಗಳಲ್ಲಿ ಬದುಕನ್ನು ಸವೆಸುವ ದುರ್ದೆಶೆಯನ್ನು ಅನುಭವಿಸಿದ.  ಈ ತೆರನಾದ ಆತನ ಬದುಕಿನ ಎಳೆಯನ್ನು ಆತನ ಬದುಕಿನ ಒಂದು ಭಾಗವೇ ಎಂಬಂತಿರುವ  ಡೇವಿಡ್ ಕಾಪರ್ ಫೀಲ್ಡ್ಕಥಾನಕ ಕಣ್ಣಮುಂದೆ ನಿಲ್ಲುವಂತೆ ಮಾಡುತ್ತದೆ.  ಬದುಕಿನ ಈ ದಾರುಣ ಅನುಭವಗಳು ಆತನಲ್ಲಿ ಸಾಮಾಜಿಕ ಸಮಾನತೆ ಮತ್ತು ಮಾನವನ ಬದುಕಿನ ರೀತಿಯಲ್ಲಿ ಆಗಬೇಕಾದ ಸುಧಾರಣೆಗಳ ಬಗೆಗೆ ಕೂಲಂಕಷವಾಗಿ ಚಿಂತಿಸಲು ಪ್ರೇರೇಪಣೆ ನೀಡಿದವು.

ಬದುಕಿನಲ್ಲಿ ದಾರುಣ ಸ್ಥಿತಿ ಎದುರಾಗಿದ್ದರೂ ಓದಿನ ಹವ್ಯಾಸ ಚಾರ್ಲ್ಸ್ ಡಿಕನ್ಸನಲ್ಲಿ ಮನೆಮಾಡಿಕೊಂಡಿತ್ತು.  ಆ ಕಾಲದ ಶ್ರೇಷ್ಠ ಕಲಾತ್ಮಕ ಮತ್ತು ಸಾಹಿತ್ಯಕ ಕೃತಿಗಳ ಬಗ್ಗೆ ಆತ ಅಭಿರುಚಿ ಬೆಳೆಸಿಕೊಂಡು ಮೇರುಮಟ್ಟದ ಚಿಂತಕನಾಗಿ ರೂಪುಗೊಳ್ಳತೊಡಗಿದ್ದ.  ಚಿಕ್ಕವಯಸ್ಸಿನಲ್ಲಿ ಆತನನ್ನು ನೋಡಿಕೊಳ್ಳುತ್ತಿದ್ದ ದಾದಿ ಹೇಳುತ್ತಿದ್ದ ಕಥೆಗಳು ಮತ್ತು ರಂಗಮಂಚದಲ್ಲಿ ಕಂಡ ಪ್ರದರ್ಶನಗಳು ಆತನನ್ನು ಅತೀವವಾಗಿ ಪ್ರಭಾವಿಸಿದ್ದವು.  ಜೊತೆಗೆ ಓದುವ ಹವ್ಯಾಸ ಆತನಿಗೆ ಪ್ರಿಯವೆನಿಸಿತ್ತು.  ಮಿಗೆಲ್ ದೆ ಸೆರವಾಂಟಸ್ ಬರೆದ  ಡಾನ್ ಕಕ್ವಿಕ್ಸೋಟ್’, ಹೆನ್ರಿ ಫೀಲ್ಡಿಂಗನ ಟಾಮ್ ಜೋನ್ಸ್ಮತ್ತು ಅರೇಬಿಯನ್ ನೈಟ್ಸ್’  ಮುಂತಾದ ಸಾಹಸ ಕಥೆಗಳು ಆತನಿಗೆ ಬಲು ಇಷ್ಟವಾಗಿದ್ದವು.  ಈ ಎಲ್ಲ ಪ್ರಭಾವಗಳು ಆತನ ಕೃತಿ ರಚನೆಗಳನ್ನು ಕುತೂಹಲಕಾರಿ ಧಾರಾವಾಹಿಯಾಗಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದವು.

ತಂದೆ ಸೆರೆಮನೆಯಿಂದ ಬಿಡುಗಡೆಗೊಂಡ ನಂತರದಲ್ಲಿ ಡಿಕನ್ಸನು ವೆಲ್ಲಿಂಗ್ಟನ್ ಹೌಸ್ ಅಕಾಡೆಮಿ ಶಾಲೆಯಲ್ಲಿ ಒಂದಿಷ್ಟು ಕಲಿತ.  ಆತ ಶಾಲೆಯಲ್ಲಿ ಕಲಿತದ್ದು ಕಡಿಮೆ.  ಆದರೂ ಶೀಘ್ರಲಿಪಿಯನ್ನು ತಾನೇ ಸ್ವಯಂ ಅಭ್ಯಸಿಸಿ ಪತ್ರಕರ್ತನಾಗಿ ತನ್ನ ಭವಿತವ್ಯವನ್ನು ಬರೆಯ ಹೊರಟ.  ತನ್ನ ಹದಿನಾರನೆಯ ವಯಸ್ಸಿನಲ್ಲಿ ಕೋರ್ಟಿನಲ್ಲಿ ವರದಿಗಾರನಾಗಿ ಹುದ್ದೆ ಗಳಿಸಿದ ಡಿಕನ್ಸ್ ಮುಂದೆ ಪಾರ್ಲಿಮೆಂಟಿನ ಕಲಾಪಗಳನ್ನು ಭಿತ್ತರಿಸುವ  ಮಿರರ್ ಆಫ್ ಪಾರ್ಲಿಮೆಂಟ್ಪತ್ರಿಕೆಯ ವರದಿಗಾರನಾದ.  ಈ ಸಮಯದಲ್ಲಿ ಬ್ರಿಟಿಷ್ ಗ್ರಂಥಾಲಯದಲ್ಲಿ ತೀವ್ರ ಅಧ್ಯಯನ ನಿರತನಾಗುವುದರ ಜೊತೆಗೆ  ಹವ್ಯಾಸಿ ರಂಗ ತಂಡಗಳೊಂದಿಗೆ ಅಭಿನಯಿಸತೊಡಗಿದ.  ಅಭಿನಯ ಕಲೆಯಲ್ಲಿ ಆತ ಹೊಂದಿದ್ದ ಅನುಭೂತಿಗಳು ಆತನಿಗೆತನ್ನ ಪಾತ್ರಗಳ ಸೃಷ್ಟಿಯಲ್ಲಿ ತನ್ನನ್ನೇ ತಾನು ಅಭಿವ್ಯಕ್ತಿಸಿಕೊಳ್ಳಬಲ್ಲ ಪ್ರಾವೀಣ್ಯತೆಯನ್ನು ಮೈಗೂಡಿಸಿದ್ದವು.     

ರಾಜಕೀಯದ ವಿಚಾರಗಳಿಂದ ಬೇಸತ್ತ ಚಾರ್ಲ್ಸ್ ಡಿಕನ್ಸ್ ಟ್ರೂ ಸನ್ಎಂಬ ಕ್ರಾಂತಿಕಾರಕ ಪತ್ರಿಕೆಯಲ್ಲಿ ಸಾಮಾಜಿಕ ಕ್ರಾಂತಿಯ ಕುರಿತಾಗಿ ಆಸ್ಥೆಯಿಂದ ಬರೆಯಲು ಮೊದಲುಮಾಡಿದ.  ಆತನ ಮುಖ್ಯವಾದ ಆಸ್ಥೆ ಕಥಾನಕ  ಬರಹದಲ್ಲಿದ್ದರೂ ತನ್ನ  ಅಂತಿಮ ದಿನಗಳವರೆಗೂ  ಡೈಲಿ ನ್ಯೂಸ್’, ‘ಹೌಸ್ಹೋಲ್ಡ್ ವರ್ಡ್ಸ್’, ‘ಆಲ್ ದಿ ಯಿಯರ್ ರೌಂಡ್ಮುಂತಾದ ಪತ್ರಿಕೆಗಳ ಸಂಪಾದಕನಾಗಿ ಕೆಲಸಮಾಡಿದ.    ಹಲವಾರು ಪತ್ರಿಕೆಗಳಲ್ಲಿ ರಾಜಕೀಯ ಪತ್ರಕರ್ತನಾಗಿ ಕೆಲಸ ಮಾಡಿದ್ದ ಸಂಪರ್ಕಗಳು ಆತನಿಗೆ ತನ್ನ ಪ್ರಾರಂಭಿಕ ಕೃತಿಗಳನ್ನು ಪ್ರಕಟಪಡಿಸುವಲ್ಲಿ  ಸಹಾಯಕವಾದವು.  ಚಾರ್ಲ್ಸ್ ಡಿಕನ್ಸ್ ಹದಿನೈದು ಪ್ರಖ್ಯಾತ ಕಾದಂಬರಿಗಳನ್ನು ಬರೆದ.  ಆತನ ಕಡೆಯ ಕೃತಿಯಾದ ದಿ ಮಿಸರಿ ಆಫ್ ಎಡ್ವಿನ್ ಡ್ರೂಡ್ಆತನ ಮರಣದ ಸಮಯದಲ್ಲಿ ಅಪೂರ್ಣವಾಗುಳಿಯಿತು.    

ಹಲವಾರು ಪತ್ರಿಕೆಗಳಲ್ಲಿ ಕೆಲವೊಂದು ಬರಹಗಳನ್ನು ಡಿಕನ್ಸ್ ಮೂಡಿಸಿದರೂ ಆತ ಪ್ರಖ್ಯಾತನಾದದ್ದು 1836-37ರ ವರ್ಷದ ಅವಧಿಯಲ್ಲಿ  ಧಾರಾವಾಹಿಯಾಗಿ ಪ್ರಕಟಿಸಿದ ದಿ ಪಿಕ್ವಿಕ್ ಪೇಪರ್ಸ್ಕಥಾನಕದಿಂದ.  ಹಲವು ತಿಂಗಳುಗಳ ಕಂತುಗಳಲ್ಲಿ ದಿ ಪಿಕ್ವಿಕ್ ಪೇಪರ್ಸ್ಪ್ರಕಟಗೊಂಡಾಗ ಅಂದಿನ ದಿನಗಳಲ್ಲಿ ಇದು ಪ್ರಕಟಗೊಂಡ ಪ್ರತೀ ಪತ್ರಿಕೆಯ ಪ್ರತಿಯೂ  ತಲಾ ನಲವತ್ತು ಸಾವಿರ ಪ್ರತಿಗಳಷ್ಟು ಮಾರಾಟವಾದವು.  ಧಾರಾವಾಹಿ ಬರಹಗಳನ್ನು ಅತ್ಯಂತ ಲಾಭದಾಯಕವಾಗಿ ಪ್ರಸಿದ್ಧಿಪಡಿಸಿದ ಕೀರ್ತಿ ಚಾರ್ಲ್ಸ್ ಡಿಕನ್ಸ್ ಅವರಿಗೆ ಸಲ್ಲುತ್ತದೆ.  ಜೊತೆಗೆ ಪುಸ್ತಕಗಳನ್ನು ಕೊಳ್ಳಲು ಸಾಧ್ಯವಿಲ್ಲದ ಸಾಮಾನ್ಯ ಜನತೆಗೆ ಕೂಡಾ ಓದುವುದರಲ್ಲಿ ಅಭಿರುಚಿಯನ್ನು ಮೂಡಿಸಿದ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ. 

ಹೀಗೆ ಕೆಲವೇ ವರ್ಷಗಳಲ್ಲಿ ಚಾರ್ಲ್ಸ್ ಡಿಕನ್ಸ್ ತಮ್ಮ ಸಮಕಾಲೀನ ಬರಹಗಾರರಲ್ಲಿ ಅತ್ಯಂತ ಯಶಸ್ವೀ ಬರಹಗಾರರಾಗಿಬಿಟ್ಟರು.  ಅಂದಿನ ದಿನಗಳಲ್ಲಿ ಕಡೇ ಪಕ್ಷ ಹತ್ತರಲ್ಲಿ ಒಬ್ಬ ಇಂಗ್ಲೆಂಡಿನವ ಅವರ ಬರಹಗಳ ಆರಾಧಕನಾಗಿದ್ದ.  ಮುಂದೆ ಆಲಿವರ್ ಟ್ವಿಸ್ಟ್ಮತ್ತು ನಿಕೊಲಸ್ ನಿಕ್ಕಲ್ ಬೈಕೃತಿಗಳು ಕೂಡಾ  ಧಾರಾವಾಹಿಯಾಗಿಯೇ  ಪ್ರಕಟಗೊಂಡವು.  ಈ ಕೃತಿಗಳಲ್ಲಿ  ಚಾರ್ಲ್ಸ್ ಡಿಕನ್ಸ್ ಅವರಲ್ಲಿದ್ದ ಕೆಳವರ್ಗದ ಜನರ ಕುರಿತಾದ ಅರಿವು ಮತ್ತು ಶ್ರೇಷ್ಠ ಕಥಾನಕ ಗುಣಗಳೆರಡೂ ಸುಲಲಿತವಾಗಿ  ಮೇಳೈಸಿಕೊಂಡಿವೆ.  ಎ ಕ್ರಿಸ್ಮಸ್ ಕೆರೋಲ್ಎಂಬುದು ಅವರ ಪ್ರಸಿದ್ಧ ಪ್ರಕಟಣೆ.  ಮೇಲ್ವರ್ಗದ ಜನ ಹಣದ ಮದದಿಂದಲೇ ತಮ್ಮ ಅಂತಸ್ತನ್ನು ಕಂಡುಕೊಳ್ಳುವ  ಅನಿಷ್ಟದ ವಿರುದ್ಧ ಚಾರ್ಲ್ಸ್ ಡಿಕನ್ಸ್ ಈ ಕೃತಿಯಲ್ಲಿ ತಮ್ಮ ಅಸಹನೆಯನ್ನು ಸ್ಪಷ್ಟಪಡಿಸುತ್ತಾರೆ. 

1840ರ ದಶಕದಲ್ಲಿ ಅಮೆರಿಕ ಮತ್ತು ಯೂರೋಪುಗಳಲ್ಲಿ ವ್ಯಾಪಕವಾಗಿ ಸಂಚರಿಸಿದ ಚಾರ್ಲ್ಸ್ ಡಿಕನ್ಸ್ ಅವರ ಬದುಕಿನಲ್ಲಿ ಹೊಸದೊಂದು ಅಧ್ಯಾಯ ಪ್ರಾರಂಭಗೊಂಡಿತು.  ಅವರ ಬರಹಗಳು ಸುದೀರ್ಘವೂ ಗಂಭೀರವೂ ಆಗತೊಡಗಿದವು.  1849-50ರ ಅವಧಿಯಲ್ಲಿ ಬಂದ  ಡೇವಿಡ್ ಕಾಪರ್ಫೀಲ್ಡ್ಅವರು ಬಾಲಕನಾಗಿ ಕಂಡುಕೊಂಡ ಅಸಹನೀಯ ವಿಶ್ವವನ್ನು ಮತ್ತೊಮ್ಮೆ ತೆರೆದಿಡುತ್ತದೆ.  ಡಿಕನ್ಸ್ ತಮ್ಮ ಪ್ರಸಿದ್ಧ ಕಾದಂಬರಿಗಳಾದ ಎ ಟೇಲ್ ಆಫ್ ಟೂ ಸಿಟೀಸ್ಮತ್ತು ಗ್ರೇಟ್ ಎಕ್ಸ್ಪೆಕ್ಟೇಷನ್ಸ್’  ಕೃತಿಗಳನ್ನೂ ನಿಯತಕಾಲಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದರು. 

1860ರ ದಶಕದಲ್ಲಿ ಚಾರ್ಲ್ಸ್ ಡಿಕನ್ಸರ ಆರೋಗ್ಯವು ಕ್ಷೀಣಿಸಲಾರಂಭಿಸಿತು.  1858ರ ಅವಧಿಯಲ್ಲಿ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ಅವರು, ಸಾರ್ವಜನಿಕವಾಗಿ ತಮ್ಮ ಕೃತಿಗಳನ್ನು ಓದುವ ಕಾರ್ಯಕ್ರಮಗಳನ್ನು ನಡೆಸತೊಡಗಿದರು.  ಇದು ಅವರಿಗೆ ಬಹಳಷ್ಟು ಲಾಭವನ್ನು ತಂದುಕೊಟ್ಟಿತಾದರೂ ಅವರ ಆರೋಗ್ಯದ ಮೇಲೆ ಗಂಭೀರ ಪ್ರಭಾವವನ್ನು ಬೀರತೊಡಗಿತು.  ಜೂನ್ 9, 1870ರಲ್ಲಿ ಅವರು ತಮ್ಮ ಕೊನೆಯ ಉಸಿರೆಳೆದರು.  ಕವಿಗಳ ಒಕ್ಕೂಟವೆಂದೇ ಪ್ರಖ್ಯಾತವಾದ ವೆಸ್ಟ್ ಮಿನಿಸ್ಟರ್ ಅಬ್ಬೆಯ ಪೊಯೆಟ್ಸ್ ಕಾರ್ನರಿನಲ್ಲಿ ಅವರ ಅಂತಿಮ ಸಂಸ್ಕಾರ ಜರುಗಿತು.  ಚಾರ್ಲ್ಸ್ ಡಿಕನ್ಸ್ ಸಮಾಜದ ದುರ್ಬಲ ಜನಾಂಗದ ಶೋಷಣೆ ಮತ್ತು ಶ್ರೀಮಂತ ಜನಾಂಗದ ಧೋರಣಾತ್ಮಕ ಮನೋಭಾವಗಳನ್ನು ಮನಮುಟ್ಟುವಂತೆ ತಮ್ಮ ಕೃತಿಗಳಲ್ಲಿ ಚಿತ್ರೀಕರಿಸಿ ಅಮರರಾಗಿದ್ದಾರೆ.   ಹಣಕ್ಕಾಗಿ ಮನುಷ್ಯತ್ವ ಮೂಲೆಗುಂಪಾಗುವ ಸಮಾಜದ ನ್ಯೂನತೆಗಳ ಮಧ್ಯದಲ್ಲಿ ಪ್ರೀತಿ ತುಂಬಿದ ಹೃದಯದ ಅನುಭೂತಿಗಳು  ಅವರ ಕೃತಿಗಳಲ್ಲಿ ಹೃದಯಂಗಮವಾಗಿ ಮೂಡಿಬಂದಿವೆ.  ಆಂಗ್ಲ ಬರಹಗಾರರುಗಳ ಪೈಕಿ ಕೃತಿಗಳ ಪ್ರಸಿದ್ಧಿ ಮತ್ತು ಜನಪ್ರಿಯತೆಯ ದೃಷ್ಟಿಯಿಂದ ಶೇಕ್ಸ್ಪಿಯರ್ ನಂತರದಲ್ಲಿ ಅತ್ಯಂತ ಪ್ರಭಾವಿಯೆಂದು ಚಾರ್ಲ್ಸ್ ಡಿಕನ್ಸ್ ಗೌರವಿಸಲ್ಪಟ್ಟಿದ್ದಾರೆ. 


ಚಾರ್ಲ್ಸ್ ಡಿಕನ್ಸ್ ಅವರ ಬದುಕಿನ ಕುರಿತು ಬರೆದಿರುವ ಕ್ಲೇರ್ ಟಾಮಲಿನ್ ಹೇಳುತ್ತಾರೆ, “ನಾವೊಮ್ಮೆ ನಮ್ಮ ಸುತ್ತ ದೃಷ್ಟಿ ಹಾಯಿಸಿದರೆ ತಿಳಿಯುತ್ತದೆ.  1840ರಲ್ಲಿ ಅವರು ಬರೆದ ಸಮಾಜ ಮತ್ತು ಅದರ ವಕ್ರರೇಖೆಗಳು ಇಂದೂ ಜೀವಂತವಾಗಿಯೇ ಇವೆ.  ಉಳ್ಳವರು ಮತ್ತು ಇಲ್ಲದವರ ನಡುವಿನ ಬೃಹತ್ ಕಂದಕ, ಭ್ರಷ್ಟ ಹೂಡಿಕೆದಾರರು, ಭ್ರಷ್ಟ ರಾಜಕಾರಣಿಗಳು ಹೀಗೆ ನೀವು ಯಾವ ಯಾವ ಹೆಸರಿನಿಂದ ಕರೆಯುತ್ತೀರೋ ಅವೆಲ್ಲಾ ಇನ್ನೂ ಹಾಗೆಯೇ ಇವೆ.”  ಹೀಗಾಗಿ ಚಾರ್ಲ್ಸ್ ಡಿಕನ್ಸ್ ಅವರ ಬರಹಗಳು ಇಂದೂ, ಅಂದೂ, ಎಂದೂ ಸಲ್ಲುತ್ತವೆ.

Tag: Charles Dickens

ಕಾಮೆಂಟ್‌ಗಳಿಲ್ಲ: