ಶುಕ್ರವಾರ, ಆಗಸ್ಟ್ 30, 2013

ವಸುಮತಿ ಉಡುಪ

ವಸುಮತಿ ಉಡುಪ

ಕನ್ನಡದ ಪ್ರಖ್ಯಾತ ಕಥೆಗಾರ್ತಿ ವಸುಮತಿ ಉಡುಪ ಅವರು ಏಪ್ರಿಲ್ 18, 1948ರಂದು ಹೊಸನಗರ ತಾಲ್ಲೂಕಿನ ನಗರಎಂಬಲ್ಲಿ ಜನಿಸಿದರು. ಅವರ  ತಂದೆ ಕಿರಣಗೆರೆ ರಂಗಾಭಟ್ಟರು ಮತ್ತು  ತಾಯಿ ತ್ರಿಪುರಾಂಬ ಅವರು. ತೀರ್ಥಹಳ್ಳಿಯಲ್ಲಿ ಪಿ.ಯು.ಸಿ ವರೆಗೆ ಓದಿದ ವಸುಮತಿ ಉಡುಪರಿಗೆ ಕಂಕಣಬಲ ಕೂಡಿಬಂದಾಗ ಓದಿಗೆ ಮಂಗಳಹಾಡಬೇಕಾಗಿ ಬಂತು.

ವಸುಮತಿ ಉಡುಪರು ಸರಳ ಭಾಷೆ, ನಿರೂಪಣೆ, ನೇರ ಶೈಲಿಯಿಂದ ಗಮನ ಸೆಳೆಯುವ ಲೇಖಕಿ. ಕಾದಂಬರಿ, ಕಥಾಸಂಕಲನ, ಪ್ರಬಂಧ ಹೀಗೆ ವಿವಿಧ ರೀತಿಯ ಬರಹಗಳಲ್ಲಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.   ಅವರು, ಕತೆ ಹೇಳುವ ರೀತಿಯಲ್ಲಿ ಕ್ಲಿಷ್ಟತೆಯಿಲ್ಲ. ಮಹಿಳಾ ಓದುಗರಿಗಂತೂ ಅವರ ಕಥೆಗಳು ಅಚ್ಚುಮೆಚ್ಚು. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕಥೆಗಳ ವಸ್ತು.  ಸುತ್ತಮುತ್ತಲಿನ ಪ್ರಪಂಚದಲ್ಲಿ ಕಾಣಸಿಗುವ ಮಧ್ಯಮ, ಕೆಳಮಧ್ಯಮ ವರ್ಗದ ನೋವು ನಲಿವುಗಳೇ ಇವರ ಕಥೆಯ ಜೀವಾಳ.

ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ ಮುಂತಾದುವು ಇವರ ಕಾದಂಬರಿಗಳು. ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ, ಸಂಕ್ರಮಣ, ಅಂತರಂಗದ ಪಿಸುನುಡಿ, ಬದುಕು ಮಾಯೆಯ ಮಾಟ ಮುಂತಾದವು ಅವರ ಕೆಲವೊಂದು ಕಥಾ ಸಂಕಲಗಳು. ಇವರ  ಪ್ರಬಂಧ ಸಂಕಲನ ಸೀತಾಳದಂಡೆ’.   ಇವರ ಕಥೆಗಳ ಸಂಖ್ಯೆ ಇನ್ನೂರಕ್ಕೂ ಹೆಚ್ಚಿನದು.  ಇವರ ಅನೇಕ ಕೆಥೆಗಳು ಹಿಂದಿ, ತೆಲುಗು ಮುಂತಾದ ಹಲವಾರು ಭಾಷೆಗಳಿಗೆ ತರ್ಜುಮೆಗೊಂಡು ಜನಪ್ರಿಯವಾಗಿವೆ.   ಇವರ ಬರಹಗಳು ದೂರದರ್ಶನದಲ್ಲಿ ಮೂಡಿಬಂದಿವೆಯಲ್ಲದೆ, 'ಮೃಗತೃಷ್ಣ' ಮತ್ತು ಇನ್ನಿತರ ನಾಟಕಗಳಾಗಿ ಸಹಾ ಪರಿವರ್ತನಗೊಂಡಿವೆ.

ವಸುಮತಿ ಉಡುಪರಿಗೆ  ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ಗ್ರಂಥಾಲಯ ಕಾದಂಬರಿ ಬಹುಮಾನ, ಮುಂಬೈ ಕನ್ನಡಿಗರ ಕೂಟದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ, ಕಥಾರಂಗ ಸಂಸ್ಥೆಯಿಂದ ಕನ್ನಡ ಕವಿತಾ ಪ್ರಶಸ್ತಿ, ದು.ನಿಂ. ಬೆಳಗಲಿ ಸಾಹಿತ್ಯ ಪ್ರಶಸ್ತಿ  ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.

ವಸುಮತಿ ಉಡುಪರಿಗೆ ಜನ್ಮದಿನದ ಹಾರ್ದಿಕ ಶುಭ ಹಾರೈಕೆಗಳು.


Tag: Vasumati Udupa

ಕಾಮೆಂಟ್‌ಗಳಿಲ್ಲ: