ಶುಕ್ರವಾರ, ಆಗಸ್ಟ್ 30, 2013

ಕಿರಣ್ ಮಜುಂದಾರ್

ಕಿರಣ್ ಮಜುಂದಾರ್

ಬಯೋಕಾನ್ ಸಂಸ್ಥೆಯ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಅವರು ಮಾರ್ಚ್ 23, 1953ರ ವರ್ಷದಲ್ಲಿ ಜನಿಸಿದರು.  ಬೆಂಗಳೂರಿನಲ್ಲಿ ಕಾಲೇಜುವರೆಗಿನ ಶಿಕ್ಷಣ ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಶಿಕ್ಷಣ ಪಡೆದ ಕಿರಣ್ ಮಜುಂದಾರ್ ಇಂದು ತಮ್ಮ 'ಬಯೋಕಾನ್' ಸಂಸ್ಥೆಯನ್ನು ವಿಶ್ವದ ಪ್ರತಿಷ್ಠಿತ ಸಂಸ್ಥೆಯಾಗಿ ಪರಿವರ್ತಿಸಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಪ್ರತಿಷ್ಠಿತ ಉತ್ಪನ್ನಗಳನ್ನು ನೀಡುತ್ತಿರುವ ಬಯೋಕಾನ್  ಸಂಸ್ಥೆಯನ್ನು ಕಿರಣ್ ಮಜುಂದಾರ್ ಅವರು ಪ್ರಾರಂಭಿಸಿದ್ದು ಕೇವಲ ಹತ್ತು ಸಾವಿರ ರೂಪಾಯಿಗಳ ಬಂಡವಾಳದ ಮೂಲಕ, ತಮ್ಮ ಮನೆಯ ಶೆಡ್ ಒಂದರಲ್ಲಿ.  ಅಂದಿನ ದಿನದಲ್ಲಿ ಅವರಿಗೆ ಯಾರೂ ಸಹಾಯಕ್ಕೆ ಬರಲಿಲ್ಲ.  ತಮ್ಮ ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಇಂದು ಬಯೋಕಾನ್ ಸಂಸ್ಥೆ ಆ ಮಾದರಿಯ ಸಂಸ್ಥೆಗಳಲ್ಲಿ ವಿಶ್ವದಲ್ಲೇ ಏಳನೇ ಅತಿ ದೊಡ್ಡ ಸಂಸ್ಥೆಯಾಗಿದೆ.

ಕಿರಣ್ ಮಜುಂದಾರ್ ಅವರಿಗೆ ಅವರ ಸಾಧನೆಗಾಗಿ ಭಾರತ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಸಂದಿವೆ.  ಪ್ರತಿಷ್ಠಿತ ಟೈಮ್ಸ್ ಪತ್ರಿಕೆ ಹೆಸರಿಸಿರುವ ನೂರು ಜನ ವಿಶ್ವ ಪ್ರಮುಖರಲ್ಲಿ ಮತ್ತು ಫೋರ್ಬ್ಸ್ನ್  ಹೆಸರಿಸಿರುವ ನೂರು ಪ್ರಮುಖರ ಪಟ್ಟಿಯಲ್ಲಿ ಮತ್ತು ಫೈನಾನ್ಸಿಯಲ್ ಟೈಮ್ಸ್ ಹೆಸರಿಸಿರುವ ಐವತ್ತು ಪ್ರಮುಖರ ಪಟ್ಟಿಯಲ್ಲಿ ಕಿರಣ್ ಮಜುಂದಾರ್ ಅವರು ವಿರಾಜಿಸಿದ್ದಾರೆ.

ನಿರಂತರ ತಮ್ಮ ಸಂಸ್ಥೆಯ ಆರ್ಥಿಕ ಉನ್ನತಿಯ ಸಾಧನೆಯಲ್ಲದೆ, ಗ್ರಾಮೀಣ ಪರಿಸರದ ಉನ್ನತೀಕರಣ, ಗ್ರಾಮೀಣ ಜನರಿಗೆ ಔದ್ಯೋಗಿಕ ಮತ್ತು ಶಿಕ್ಷಣ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಹಾ ಕಿರಣ್ ಮಜುಂದಾರ್ ಅವರು ಗಣನೀಯ ಕೊಡುಗೆಗಳನ್ನು ನೀಡುತ್ತಿದ್ದಾರೆ.

ಕಿರಣ್ ಮಜುಂದಾರ್ ಅವರ ಸಾಧನೆ ಮತ್ತು ಅವರು ನಡೆಸುತ್ತಿರುವ ಬಯೋಕಾನ್ ಸಂಸ್ಥೆಗಳ ಸಾಧನೆ ಮುಂದೆಯೂ ಬೆಳಗುತ್ತಿರಲಿ, ಅವರ ಕೀರ್ತಿ ಪತಾಕೆ ಮತ್ತು ಉತ್ತಮ ಕೊಡುಗೆಗಳ ಸಂವರ್ಧನೆ ನಿರಂತರ ಮೆರುಮಟ್ಟಕ್ಕೆ ಏರುತ್ತಿರಲಿ ಎಂದು ಹಾರೈಸಿ ಈ ಮಹಾನ್ ಸಾಧಕಿ ಕಿರಣ್ ಮಜುಂದಾರ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸೋಣ.


Tag: Kiran Majumdar

ಕಾಮೆಂಟ್‌ಗಳಿಲ್ಲ: