ಶನಿವಾರ, ಆಗಸ್ಟ್ 31, 2013

ರವಿ ಬೆಳಗೆರೆ

ರವಿ ಬೆಳಗೆರೆ

ಹಾಯ್ ಬೆಂಗಳೂರಿನರವಿ ಬೆಳಗೆರೆಯವರಿಗೆ ಹಾಯ್ ಹೇಳುವವರು ತುಂಬಾ ತುಂಬಾ ಜನರಿದ್ದಾರೆ.  ಈಗ  ನಾವು ಅವರಿಗೆ ಹಾಯ್ ಜೊತೆಗೆ ಹುಟ್ಟು ಹಬ್ಬದ ಶುಭಾಶಯ ಕೂಡಾ ಹೇಳಬೇಕು.  ನೀವು ರಸ್ತೆಯ ಯಾವ ಮೂಲೆಯಲ್ಲೇ ಇರಲಿ ಹಾಯ್ ಬೆಂಗಳೂರಿನಮುಖ ಪುಟಗಳ ತರಾವರಿ ದೊಡ್ಡಕ್ಷರಗಳ  ಕೂಗುವಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.  ಅಂಗಡಿಗಳ ಮುಂದೆ ತೂಗು ಹಾಕಿರುವ ಪತ್ರಿಕೆಗಳ ಮೂಲಕವೋ, ಕೈಯಲ್ಲಿ ಒಬ್ಬರು ಹಿಡಿದಿದ್ದರೆ ಅದನ್ನು ಹತ್ತು ಜನ ಓದುವ ಬಸ್ಸುಗಳಲ್ಲೋ, ಕೊಂಕುಳಲ್ಲಿ ಸಿಕ್ಕಿಸಿಕೊಂಡು ಕಾಫಿ ಹೀರುವವರ ಮೂಲಕವೋ ಹೇಗೋ ಒಟ್ಟಿನಲ್ಲಿ ಅದು ಎಲ್ಲೆಲ್ಲೂ ದರ್ಶನವಾಗಲೇಬೇಕು.   

ಇಂದು ರವಿ ಬೆಳಗೆರೆ ಒಂದು ರೀತಿಯಲ್ಲಿ ವಿಶ್ವರೂಪಿಯಾಗಿದ್ದಾರೆ. ಅಂದು ಕೇವಲ ಕ್ರೈಂ ಡೈರಿಯಲ್ಲಿ ವಿಚಾರ ನಿರೂಪಿಸುತ್ತಿದ್ದ ರವಿ ಬೆಳಗೆರೆ, ವಾಹಿನಿಯೊಂದರ ಸಂಪಾದಕ ನೇತೃತ್ವ, ವಿಶ್ವದೆಲ್ಲೆಡೆ ಅವರು ನಿರೂಪಿಸುವ ಸಂಗೀತ ಕಾರ್ಯಕ್ರಮಗಳು, ವ್ಯಕ್ತಿ ಪರಿಚಯಗಳು, ಧಾರಾವಾಹಿಗಳಲ್ಲಿ ಅಲ್ಲಲ್ಲಿ ಮಿಂಚುವುದುಮಾಧ್ಯಮಗಳಲ್ಲಿನ ಜಟಾಪಟಿ, ವಿಭಿನ್ನ ಕಾದಂಬರಿಗಳು, ಅವರ  ಶಾಲೆ, ಕೆಲಸಹೀಗೆ ರವಿ ಬೆಳಗೆರೆ ಇಂದು ಎಲ್ಲ ಹಲವು ರೀತಿಯಲ್ಲಿ ಪರಿಚಿತರಾಗಿದ್ದಾರೆ.  ವಿಭಿನ್ನ ವಸ್ತುಗಳುಳ್ಳ ಅವರ ಪುಸ್ತಕಗಳೂ ಅವರ ವ್ಯಕ್ತಿತ್ವದಷ್ಟೇ ವೈವಿಧ್ಯಮಯ.

ಕನ್ನಡದ ಕಾರ್ಯಕ್ರಮಗಳಲ್ಲಿ ನಾವು ಕೇಳುತ್ತಿರುವ  ಅವರ ನಿರೂಪಣೆಗಳು ನಮ್ಮ ನಾಡಿನ ಕಲಾವಿದರು, ಸಂಸ್ಕೃತಿ, ಸಾಹಿತ್ಯ ಮತ್ತು ಕಲಾವಿದರ ಬಗ್ಗೆ ಹೆಚ್ಚು ಹೆಚ್ಚು ಆಪ್ತತೆ ಉಂಟುಮಾಡುವಂತಿವೆ, ಅವರ ಮಾತು ಇನ್ನಷ್ಟು ಕೇಳಬೇಕು ಎಂದೆನಿಸುವಂತದ್ದು  ಎಂಬ ಮಾತು ಸುಳ್ಳಲ್ಲ.  ಇವೆಲ್ಲವುಗಳ ಜೊತೆ ಜೊತೆಗೆ  ಹಲವಾರು ಟೀಕೆ, ಟಿಪ್ಪಣಿ, ವೈರುಧ್ಯ. ಗಾಳಿ ಸುದ್ಧಿಹಲವು ದ್ವಂದ್ವಾತ್ಮಕ ರೀತಿಯ ಬದುಕಿನ ನಿಲುವುಗಳಿಗೆ ಇವರು ಕೂಡಾ ಹೊರತಾಗಿಲ್ಲ ಎನ್ನುವುದು ಕೂಡಾ ಅಷ್ಟೇ ನಿಜ.

ಓದುತ್ತಿರುವ ಪುಸ್ತಕವನ್ನೊಮ್ಮೆ ಪಕ್ಕಕ್ಕಿಟ್ಟು ಕಣ್ಣಲ್ಲಿ ಒಸರುತ್ತಿರುವ ಕಣ್ಣೀರನ್ನು ಒರೆಸಿಕೊಂಡು ಪುನಃ ಓದುವಂತಾದರೆ ಅದೇ ನನಗೆ ಸಿಗುವ ಸಂತೃಪ್ತಿಎನ್ನುತ್ತಾರೆ ರವಿ ಬೆಳಗೆರೆ.  ಒಬ್ಬ ಆತ್ಮೀಯ ಓದುಗನಾಗಿ ಮತ್ತು ಬರಹಗಾರನಾಗಿ ರವಿಬೆಳಗೆಯವರು ನಡೆಸುವ ಓದು ಮತ್ತು ನಿರೀಕ್ಷಿಸುವ ಪ್ರತಿಕ್ರಿಯೆ ಈ ತೆರೆನಾದದ್ದು.  ಯಾವುದೇ ಬರಹಗಾರ ತಾನು ಬದುಕನ್ನು ಅನುಭಾವಿಸದೆ ಇಂಥಹ ಪರಿಣಾಮವನ್ನು ಓದುಗನಲ್ಲೂ ತರಲಾರ, ಮಾತ್ರವಲ್ಲದೆ ತಾನೂ ಅದರ ಸಾರ್ಥಕ್ಯವನ್ನು ಅನುಭಾವಿಸಲಾರ.  ರವಿ ಬೆಳಗೆರೆ ಅವರ ಅನುಭಾವದ  ಬದುಕನ್ನು ಅವರ ಮಾತಲ್ಲೇ ಕೇಳುವುದರಲ್ಲೂ ಒಂದು ಸೊಗಸಿದೆ.  ಕೆಲವು ವರ್ಷಗಳ  ಹಿಂದೆ ಅವರು ಹೇಳಿದ ಮಾತು ಇಂತಿದೆ:

ನಾನು ಹುಟ್ಟಿದ್ದು 1958 ರ ಮಾರ್ಚ್ 15 ರಂದು, ಬಳ್ಳಾರಿಯಲ್ಲಿ. ಎರಡು ವರ್ಷ ತುಮಕೂರಿನ ಸಿದ್ದಗಂಗಾ ಹೈಸ್ಕೂಲಿನಲ್ಲಿ ಓದಿದ್ದನ್ನು ಬಿಟ್ಟರೆ ಬಿ.ಎ. ವರೆಗಿನ ವ್ಯಾಸಂಗ ನಡೆದಿದ್ದು ಬಳ್ಳಾರಿಯಲ್ಲಿ. ನಂತರ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗಾಗಿ ಓದಿದ್ದು ಧಾರವಾಡದಲ್ಲಿ. ಕೆಲಕಾಲ ಬಳ್ಳಾರಿ, ಹಾಸನ ಮತ್ತು ಹುಬ್ಬಳಿಯ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕನಾಗಿ ಕೆಲಸ ಮಾಡಿದೆ. ಅದಕ್ಕೆ ಮುಂಚೆ ಮತ್ತು ಅದರ ನಂತರ ಸರಿಸುಮಾರು 9 ವೃತ್ತಿ ಬದಲಿಸಿದೆ. ಹೈಸ್ಕೂಲ್ ಮೇಷ್ಟ್ರು, ಹೋಟೆಲ್ ಮಾಣಿ, ರೂಂ ಬಾಯ್, ರಿಸೆಪ್ಷನಿಸ್ಟ್, ಹಾಲು ಮಾರುವ ಗೌಳಿ, ದಿನಪತ್ರಿಕೆ ಹಂಚುವ ಹುಡುಗ, ಮೆಡಿಕಲ್ ರೆಪ್ರೆಸೆಂಟೇಟಿವ್, ಪ್ರಿಂಟಿಂಗ್ ಪ್ರೆಸ್ ಮಾಲೀಕ, ಥಿಯೇಟರಿನಲ್ಲಿ ಗೇಟ್ ಕೀಪರ್‍, ಕಾಲೇಜಿನಲ್ಲಿ ಉಪನ್ಯಾಸಕ, ಮನೆಪಾಠದ ಮೇಷ್ಟ್ರು ಹೀಗೆ ನಾನಾ ಕಡೆ ಮೈಕೈ ಮೆತ್ತಗಾಗಿಸಿಕೊಂಡು ದುಡಿದೆ. ಕರ್ನಾಟಕದ ಅಷ್ಟೂ ಪತ್ರಿಕೆಗಳಿಗೆ ಬರೆದೆ. ಅನೇಕ ಪತ್ರಿಕೆಗಳಿಗೆ ಕೆಲಸ ಮಾಡಿದೆ. ತುಂಬಾ ಚಿಕ್ಕವಯಸ್ಸಿಗೇ ನನಗಿಂತ ಜಾಸ್ತಿ ವಯಸ್ಸಾದ ಪತ್ರಿಕೆಗಳಿಗೆ ಸಂಪಾದಕನಾದೆ. ಈ ತನಕ ಸರಿ ಸುಮಾರು 25ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದೆ. ಖುಷ್ವಂತ್ ಸಿಂಗ್, ಚಲಂ, ಪ್ರತಿಮಾ ಬೇಡಿ, ಬ್ರಿಗೇಡಿಯರ್‍ ಜಾನ್ ಪಿ ದಳವಿ, ಗೇಬ್ರಿಯಲ್  ಗಾರ್ಸಿಯಾ ಮಾರ್ಕ್ ವೇಜ್, ವಿನೋದ್ ಮಹ್ತಾ ಮುಂತಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿಯವರು ಪ್ರಶಸ್ತಿ ಕೊಟ್ಟಿದ್ದಾರೆ. ಸಣ್ಣ ಕಥೆ ನನ್ನ ಅತೀ ಇಷ್ಠವಾದ ಪ್ರಕಾರ. ಅದರಲ್ಲೂ ಪ್ರಶಸ್ತಿ ಬಹುಮಾನಗಳು ಬಂದಿವೆ. ಸದ್ಯಕ್ಕೆ ನಾನು ಹಾಯ್ ಬೆಂಗಳೂರ್‍!ಕನ್ನಡ ವಾರಪತ್ರಿಕೆಯ ಹಾಗೂ ಓ ಮನಸೇಪಾಕ್ಷಿಕದ ಸಂಪಾದಕ. ಪ್ರಾರ್ಥನಾ ಎಜುಕೇಷನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ. ಒಬ್ಬ ಹೆಂಡತಿಯ ಗಂಡ ಮತ್ತು ಮೂವರು ಮಕ್ಕಳ ತಂದೆ. ನನ್ನ ಬಗೆಗಿನ ಉಳಿದ ವಿವರಗಳು ಅನ್ ಇಂಟರೆಸ್ಟಿಂಗ್.” 

ಮೇಲಿನ ಅವರ ಮಾತಿಗೆ ಮುಂಚೆ ಹೇಳಿದ ಹಾಗೆ ಈ ಮಾತುಗಳು ಸ್ವಲ್ಪ ಹಿಂದೆ ಹೇಳಿದ್ದು.  ನಂತರದ  ವರುಷಗಳಲ್ಲಿ ಸ್ವಯಂ ರವಿ ಬೆಳಗೆರೆ ಅವರೇ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಇದು ಅಧಿಕೃತ! 'ನನಗೆ ಇಬ್ಬರು ಹೆಂಡಿರು, ನಾಲ್ಕು ಮಕ್ಕಳು”  ಎಂದು ಘೋಷಿಸುವುದರ ಮೂಲಕ ತಮ್ಮ ಹಿಂದಿನ ಮಾತುಗಳನ್ನು ಪರಿಷ್ಕರಿಸಿದ್ದಾರೆ.

ರವಿ ಬೆಳಗೆರೆ ಅವರು  ಕೇವಲ ಮುನ್ನೂರ ಎಂಬತ್ತು ರೂಪಾಯಿಗಳನ್ನು ಇಟ್ಟುಕೊಂಡು ಮೋಟರ್ ಬೈಕಿನ ಮೇಲೆ ಬೆಂಗಳೂರಿಗೆ ಬಂದಿಳಿದವರು.   ಕೆಲವು ವರ್ಷಗಳ ಹಿಂದೆ ಅವರೇ ಹೇಳಿಕೊಂಡ ವಿವರದ ಪ್ರಕಾರ ಅವರು  250 ಕೋಟಿಗಳ ಒಡೆಯ. (ಅದು ಇಂದು ಎಷ್ಟು ಪಟ್ಟು ಹಿಗ್ಗಿದೆಯೋ ಗೊತ್ತಿಲ್ಲ).  ನಾನು ಇವತ್ತು ಏನಾದರೂ ಆಗಿದ್ದೇನೆ ಅಂದರೆ, ಅದು ಹಾಯ್ ಬೆಂಗಳೂರ್‍!ನಿಂದಾಗಿ. ನಾನು ನನ್ನ ಓದುಗ ದೊರೆಯ ಬಳಿ ನೌಕರಿ ಮಾಡುವಾತ.  ನನ್ನ ದಣಿಗೆ ಲೆಖ್ಖ  ಒಪ್ಪಿಸುವುದು ನನ್ನ  ಕರ್ತವ್ಯ”  ಎಂದು  ಅವರು ತಮ್ಮ ಹಣಕಾಸಿನ ಸಂಪೂರ್ಣ ಅಂಕಿ ಅಂಶಗಳನ್ನೂ ಸಾರ್ವಜನಿಕವಾಗಿ ತೆರೆದಿಟ್ಟಿದ್ದುಂಟು.

ರವಿ ಬೆಳಗೆರೆಯವರ ತಮ್ಮ ಪುಸ್ತಕಗಳ ಬರಹಗಳಿಗೆ ಆಯ್ದುಕೊಂಡಿರುವ ವಿಚಾರಗಳು ಗಮನಾರ್ಹವಾದದ್ದು ಎಂಬುದನ್ನು ಅವರ ಪುಸ್ತಕಗಳ ಶೀರ್ಷಿಕೆಗಳೇ ಹೇಳುತ್ತವೆ.  ಪಾಪಿಗಳ ಲೋಕದಲ್ಲಿ, ಮೇಜರ್ ಸಂದೀಪ್ ಉನ್ನಿಕೃಷ್ಣನ್, ಹೇಳಿ ಹೋಗು ಕಾರಣಮುಸ್ಲಿಂ, ನೀನಾ ಪಾಕಿಸ್ತಾನ, ಚಲಂ, ನೀ ಹಿಂಗ ನೋಡಬ್ಯಾಡ ನನ್ನ, ದಿ ಗಾಡ್ ಫಾದರ್, ಒಮರ್ಟಾ, ಹಿಮಾಲಯನ್ ಬ್ಲಂಡರ್, ಡಯಾನಾ, ಪ್ಪ್ರೊತಿಮಾ ಬೇಡಿ ಆತ್ಮ ಚರಿತ್ರೆಯಾದ ಟೈಮ್ ಪಾಸ್, ಬ್ಲ್ಯಾಕ್ ಫ್ರೈಡೇ, ಇಂದಿರೆಯ ಮಗ ಸಂಜಯ, ಹಿಮಾಗ್ನಿ, ಉಡುಗೊರೆ, ಅಮ್ಮ ಸಿಕ್ಕಿದ್ದು, ಬಾಟಮ್ ಐಟಮ್ಸ್, ಲವ್ ಲವಿಕೆ, ಕಾಮರಾಜ ಮಾರ್ಗ, ಅನಿಲ್ ಲಾಡ್, ಖಾಸ್ ಬಾತ್, ಡಿ ಕಂಪನಿ, ಬೆಳಗೆರೆ ಕೃಷ್ಣಶಾಸ್ತ್ರಿಗಳ ಜೀವನ ಚರಿತ್ರೆ    ಇತ್ಯಾದಿ ಹಲವಾರು ಪುಸ್ತಕಗಳನ್ನು ಅವರು ಬರೆದಿದ್ದಾರೆ.  ಅವರ  ಒಲವೇ, ಕನಸೇ, ಮನಸೇ ಅಂತಹ ದೃಶ್ಯ, ಶೃವ್ಯ ಮಾಧ್ಯಮಗಳ ಕಾಂಪಾಕ್ಟ್ ಡಿಸ್ಕುಗಳು ಸಹಾ ಮಾರುಕಟ್ಟೆಯಲ್ಲಿ  ಜನಪ್ರಿಯಗೊಂಡಿವೆ. ಫಸ್ಟ್ ಹಾಫ್ಎಂಬುದು ರವಿ ಬೆಳಗೆರೆ ಅವರಿಗೆ  ಐವತ್ತು ತುಂಬಿದ ನೆನಪಲ್ಲಿ ಅವರ ಅಭಿಮಾನಿಗಳು ಮತ್ತು ಗೆಳೆಯರು ಅರ್ಪಿಸಿರುವ ಸಂಭಾವನಾ ಗ್ರಂಥ. 

ರವಿ ಬೆಳಗೆರೆ ಅವರಿಂದ ಉತ್ತಮ ಕೆಲಸಗಳಾಗಲಿ, ಅವರಿಂದ ಲೋಕ ಹಿತ ಉಂಟಾಗುವಂತಾಗಲಿ ಎಂದು ಆಶಿಸುತ್ತಾ ರವಿ ಬೆಳಗೆರೆ ಅವರಿಗೆ ಜನ್ಮದಿನದ  ಹಾರ್ದಿಕ ಶುಭಾಶಯಗಳನ್ನು ಹೇಳೋಣ.


Tag: Ravi Belagere

ಕಾಮೆಂಟ್‌ಗಳಿಲ್ಲ: