ಶುಕ್ರವಾರ, ಆಗಸ್ಟ್ 30, 2013

ಬಿ. ಟಿ. ಲಲಿತಾ ನಾಯಕ್

ಬಿ. ಟಿ. ಲಲಿತಾ ನಾಯಕ್

ಲಲಿತಾ ನಾಯಕ್ ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪರಿಚಿತರಾದವರು.  ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ತಂಗಲಿ ತಾಂಡ್ಯ ಎಂಬಲ್ಲಿ ಏಪ್ರಿಲ್ 4, 1945ರ ವರ್ಷದಲ್ಲಿ ಜನಿಸಿದರು.   ತಂದೆ ಬಾಲಾಜಿನಾಯಕ್ ಮತ್ತು ತಾಯಿ ಗಂಗಾಬಾಯಿಯವರು. ತಾಂಡ್ಯ,   ಚಿತ್ರದುರ್ಗದಲ್ಲಿ ಎಂಟನೆಯ ತರಗತಿವರೆಗೆ ವಿದ್ಯಾಭ್ಯಾಸ ನಡೆಸಿದ ನಂತರದಲ್ಲಿ ವಿದ್ಯಾಭ್ಯಾಸದ ಅವಕಾಶಗಳು ಹೆಚ್ಚಿಲ್ಲದ ಅಂದಿನ ದಿನಗಳಲ್ಲಿ  ತಂದೆ ಮತ್ತು ಅಣ್ಣನ ಪ್ರೋತ್ಸಾಹದಿಂದ ಮನೆಯಲ್ಲಿಯೇ ವಿದ್ಯಾಭ್ಯಾಸ ಮಾಡಲಾರಂಭಿಸಿದರು.   ಹೀಗೆ ಅವರು  ಸಂಸ್ಕೃತ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಪರಿಣತಿ ಸಾಧಿಸಿದರು. ಬಿ.ಎ. ಓದುತ್ತಿದ್ದ ಅಣ್ಣ ಪ್ರತಿವಾರ 30. ಕಿ.ಮೀ. ದೂರದ ಚಿಕ್ಕಮಗಳೂರಿನಿಂದ ಹಳ್ಳಿಗೆ ಬಂದು ತಂಗಿಗೆ ಕಲಿಸಿ ಹೋಗುತ್ತಿದ್ದರಂತೆ.  

ಲಲಿತಾ ನಾಯಕ್ಕರ  ಕಥೆ, ಕಾದಂಬರಿ, ನಾಟಕಗಳೆಲ್ಲದರಲ್ಲಿ ಜಾತೀಯತೆ, ಮಹಿಳೆಯರ ಶೋಷಣೆ, ಬಂಡಾಯದ ದನಿ, ದಲಿತರ ನೋವುಗಳಿವೆ.  ಹಲವು ವರ್ಷಗಳ ಕಾಲ   ಲಂಕೇಶ್ ಪತ್ರಿಕೆಯ ವರದಿಗಾರ್ತಿಯಾಗಿಯೂ ಅವರು ಕಾರ್ಯನಿರ್ವಹಿಸಿದರು.  ಇವರು ರಚಿಸಿದ ಅನೇಕ  ನಾಟಕಗಳು ಧಾರವಾಡದ ಆಕಾಶವಾಣಿ ಕೇಂದ್ರದಿಂದ ಪ್ರಸಾರಗೊಳ್ಳುತ್ತಿದ್ದವು.

1986ರ ವರ್ಷದಲ್ಲಿ ರಾಮಕೃಷ್ಣ ಹೆಗಡೆಯವರ ಆಹ್ವಾನದ ಮೇರೆಗೆ ರಾಜಕೀಯ ಪ್ರವೇಶ ಮಾಡಿದ ಲಲಿತಾ ನಾಯಕ್ಕರು, 1986-92ರವರೆಗೆ ವಿಧಾನ ಪರಿಷತ್ ಸದಸ್ಯೆಯಾಗಿ,  1994ರಿಂದ 99ವರೆಗೆ ವಿಧಾನಸಭಾ  ಸದಸ್ಯರಾಗಿ, ಸಚಿವೆಯಾಗಿ ಕಾರ್ಯನಿರ್ವಹಿಸಿದರು. ಇತ್ತೀಚೆಗೆ ಅವರು ಆಮ್ ಆದ್ಮಿ ಪಕ್ಷ ಸೇರಿದ್ದಾರೆ ಎಂದು ಓದಿದ ನೆನಪು.

ಲಲಿತಾ ನಾಯಕ್ಕರ ಪ್ರಕಟಿತ ಕೃತಿಗಳು: ಚಂದ್ರಪರಾಭವ (ನಾಟಕ ಸಂಕಲನ) ; ಭಟ್ಟನ ಕನಸು (ಮಕ್ಕಳ ಕಥಾ ಸಂಕಲನ) ; ನೆಲೆ ಬೆಲೆ, ಗತಿ (ಕಾದಂಬರಿ) ; ಹಬ್ಬ ಮತ್ತು ಬಲಿ (ಕಥಾಸಂಕಲನ) ; ನಂ ರೂಪ್ಲಿ, ಇದೇ ಕೂಗು ಮತ್ತೆ ಮತ್ತೆ, ಒಡಲ ಬೇಗೆ, ಬಿದಿರು ಮೆಳೆ ಕಂಟಿಯಲ್ಲಿ, ಸವಾಸೇರು (ಕವನ ಸಂಕಲನ); ಚುಟುಕುಗಳ ಸಂಕಲನ ಮುಂತಾದವು

ಲಲಿತಾ ನಾಯಕ್ಕರ ಕಾದಂಬರಿ, ಹಲವಾರು ಕಥೆ ಮತ್ತು ಕವನಗಳು ವಿವಿಧ ವಿಶ್ವವಿದ್ಯಾಲಯಗಳ ವಿವಿಧ ತರಗತಿಗಳಿಗೆ  ಪಠ್ಯಗಳಲ್ಲಿ ಮೂಡಿದ್ದವು. 

ಲಲಿತಾ ನಾಯಕ್ಕರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜೀವ್ ಗಾಂಧಿ ಏಕತಾ ಪ್ರಶಸ್ತಿ, ಶ್ರೀಮತಿ ಸಾವಿತ್ರಮ್ಮ ದೇ.ಜ.ಗೌ. ಮಹಿಳಾ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿ, ಕಿರಣ ಪ್ರಭಾ ಪ್ರಶಸ್ತಿ, ಕಾಯಕ ಸಮ್ಮಾನ ಪ್ರಶಸ್ತಿ, ಸಮಾಜ ಸೇವಾರತ್ನ ಪ್ರಶಸ್ತಿ ಮುಂತಾದ ಹಲವಾರು ಸಾಹಿತ್ಯಕ, ಸಾಮಾಜಿಕ ಪ್ರಶಸ್ತಿ ಗೌರವಗಳು ಸಂದಿವೆ.  


ಮಾಹಿತಿ:  ಕಣಜ

Tag: B. T. Lalitha Nayak

ಕಾಮೆಂಟ್‌ಗಳಿಲ್ಲ: