ಭಾನುವಾರ, ಸೆಪ್ಟೆಂಬರ್ 1, 2013

ಬೆಂಜಮಿನ್ ಫ್ರಾಂಕ್ಲಿನ್

ಬೆಂಜಮಿನ್ ಫ್ರಾಂಕ್ಲಿನ್

ಬೆಂಜಮಿನ್ ಫ್ರಾಂಕ್ಲಿನ್ ಒಬ್ಬ ವಿಜ್ಞಾನಿಯಾಗಿ, ಲೇಖಕನಾಗಿ, ರಾಜಕಾರಣಿಯಾಗಿ, ಸಂಗೀತಗಾರನಾಗಿ ಮುತ್ಸದ್ದಿಯಾಗಿ ಅಮೆರಿಕದಲ್ಲಿ ಹೆಸರು ಮಾಡಿದವರು.  ಅಮೆರಿಕದ ಪ್ರಥಮ ಪೋಸ್ಟ್ ಜನರಲ್ ಆಗಿದ್ದವರು.  ಇವರಿಗೆ ಮಿಂಚೆಂಬುದು ವಿದ್ಯುತ್ ಸಂಬಂಧವಾದ ವಿದ್ಯಮಾನವಾಗಿ ಅರಿವಾಯಿತು.  ಅದನ್ನು ಲೋಕಕ್ಕೆ ತೋರಿಸಿಕೊಟ್ಟರು ಕೂಡ.  ಅಲ್ಲದೆ ಮಿಂಚುಕೋಲು, ಫ್ರಾಂಕ್ಲಿನ್ ಸ್ಟೌವ್, ಓಡೋಮೀಟರ್ , ಬೈಫೋಕಲ್ ಕನ್ನಡಕದ ಗಾಜು ಹೀಗೆ ಅನೇಕ ವಸ್ತುಗಳ ಜನಕರವರು. 

ಫ್ರಾಂಕ್ಲಿನ್ ಜನವರಿ 17, 1706ರಂದು  ಅಮೆರಿಕ ಸಂಯುಕ್ತ ಸಂಸ್ಥಾನದ ಬೋಸ್ಟನ್ ನಲ್ಲಿ ಜನಿಸಿದರು.   1790ರ ವರ್ಷದ ವರೆಗೆ ಜೀವಿಸಿದ್ದ ಅವರು ಅಮೆರಿಕದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದರು.

ಬೆಂಜಮಿನ್ ಫ್ರಾಂಕ್ಲಿನ್  ವಿಜ್ಞಾನ ಕ್ಷೇತ್ರದಲ್ಲಿ ವಿದ್ಯುಚ್ಛಕ್ತಿ ಸಂಬಂಧಿಸಿದ ಸಂಶೋಧನೆಗೆ ಮತ್ತು ಭೌತಶಾಸ್ತ್ರದ ಇತಿಹಾಸದ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. 1752ರಲ್ಲಿ ಗುಡುಗು, ಬಿರುಗಾಳಿಯ ಸಂದರ್ಭದಲ್ಲಿ ಆಕಾಶದಲ್ಲಿ ಗಾಳಿಪಟವನ್ನು ಹಾರಿಸುವಾಗ, ಮಿಂಚಿನಲ್ಲಿ ವಿದ್ಯುತ್ ಇದೆ ಎಂದು ಕಂಡುಕೊಂಡರು. ಈ ಘಟನೆ ಫ್ರಾಂಕ್ಲಿನ್ ಅವರಿಗೆ ಮಿಂಚುವಾಹಕಗಳನ್ನು ತಯಾರಿಸಲು ಪ್ರೇರೇಪಣೆಯಾಯಿತು.   1753ರ ನಂತರ ಅಮೆರಿಕದಲ್ಲಿ ಅನೇಕ ಮಿಂಚುವಾಹಕಗಳನ್ನು ತಯಾರಿಸಿ, ಎಡ್ ಸ್ಟೋನ್ ಲೈಟ್ ಹೌಸ್, ಇಟಲಿಯ ಸಿಡಿಮದ್ದು ಪುಡಿ ಭಂಡಾರ, ಬ್ರಿಟಿಷ್ ಸಿಡಿಮದ್ದು ಉಗ್ರಾಣ ಮುಂತಾದ ಬಹುಮುಖ್ಯ ಕಟ್ಟಡಗಳನ್ನು ರಕ್ಷಿಸಲಾಯಿತು.

ಬೆಂಜಮಿನ್ ಫ್ರಾಂಕ್ಲಿನ್ ಒಮ್ಮೆ ಇಂಗ್ಲೆಂಡಿಗೆ ಆಗಮಿಸಿದ್ದರು.  ಅಲ್ಲಿನ ಲಂಡನ್ನಿನ ಕ್ಲೆಫಾಮ್ ಕಾಮನ್ ಸರೋವರದ ದಡದಲ್ಲಿ  ಕುಳಿತಿದ್ದರು.   ಗಾಳಿಯ ಅತ್ಯಧಿಕ ಬೀಸುವಿಕೆಯಿಂದ ಸರೋವರವು ಪ್ರಕ್ಷುಬ್ದವಾಗಿತ್ತು.  ನೀರಿನ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದವು.  ಅಲ್ಲಿ ನಿಂತಿದ್ದವರಿಗೆ ತಾನು ಇನ್ನೈದು ನಿಮಿಷಗಳಲ್ಲಿ ಸರೋವರವನ್ನು ಶಾಂತಗೊಳಿಸುವುದಾಗಿ ತಿಳಿಸಿದರು.  ಇಂದೊಂದು ಇಂದ್ರಜಾಲವೇ ಸರಿ ಎಂದು ನಂಬಿದ ಜನ ಸಮುದಾಯ ಸ್ವಲ್ಪ ಸಮಯದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಸೇರತೊಡಗಿತ್ತು.  ಫ್ರಾಂಕ್ಲಿನ್ ಒಂದು ಚಮಚದಲ್ಲಿ  ಆಲಿವ್ ಎಣ್ಣೆಯನ್ನು ತೆಗೆದುಕೊಂಡು ಸರೋವರಕ್ಕೆ ಸುರಿದರು.  ಬೀಸುತ್ತಿದ್ದ ಗಾಳಿಯಿಂದ ಕೆಲವೇ ನಿಮಿಷಗಳಲ್ಲಿ  ಆಲಿವ್ ಎಣ್ಣೆ ಸರೋವರದ ನೀರಿನ ಮೇಲ್ಪದರದಲ್ಲಿ ಹರಡಿತು.  ಏನಾಶ್ಚರ್ಯ!  ನೋಡುತ್ತಿದ್ದಂತೆ ನೀರು ಒಮ್ಮೆಲೆ ಶಾಂತವಾಯಿತು.  ಅಲ್ಲಿ ಸೇರಿದ್ದ ಜನರಿಗೆ ಆಶ್ಚರ್ಯವೋ ಆಶ್ಚರ್ಯ.  ಆಗ ಫ್ರಾಂಕ್ಲಿನ್ ಹೇಳಿದರು, “ಇದರಲ್ಲಿ ಯಾವ ಪವಾಡವೂ ಇಲ್ಲ.  ಆಶ್ಚರ್ಯ ಪಡುವಂತೆಯೂ ಇಲ್ಲ.  ಆಲಿವ್ ಎಣ್ಣೆ ನೀರಿನಲ್ಲಿ ಬೆರೆಯದೆ ಇರುವುದರಿಂದ ಹಾಗೂ ಅದು ನೀರಿಗಿಂತ ಹಗುರಾಗಿ ಇರುವುದರಿಂದ ಅದರ ತೆಳುವಾದ ಪದರ ನೀರಿನ ಮೇಲೆಲ್ಲಾ ಹರಡಿಕೊಂಡು ನೀರಿನ ಪ್ರಕ್ಷುಬ್ದತೆಯನ್ನು ನಿವಾರಿಸಿ ನೀರನ್ನು ಶಾಂತವಾಗಿರುವಂತೆ ಮಾಡುತ್ತದೆಎಂದು ವಿವರಿಸಿದರು. 

ಬೆಂಜಮಿನ್ ಫ್ರಾಂಕ್ಲಿನ್ ಅವರ ಪ್ರಸಿದ್ಧ ಉದ್ಘೋಷ ಹೀಗಿದೆ.  ಎಲ್ಲರೊಂದಿಗೆ ಸಜ್ಜನಿಕೆಯಿಂದಿರು; ಸಾರ್ವಜನಿಕದಲ್ಲಿ ಬಹಳಷ್ಟು ಜನರೊಂದಿಗಿರು; ಕೆಲವರಿಗೆ ಪರಿಚಯಸ್ಥನಾಗಿರು; ಒಬ್ಬರಿಗೆ ಗೆಳೆಯನಾಗಿರು; ಯಾರಿಗೂ ಶತ್ರುವಾಗಿರಬೇಡ”.

ಬೆಂಜಮಿನ್ ಫ್ರಾಂಕ್ಲಿನ್ ವಿಜ್ಞಾನಿ ಮಾತ್ರವಲ್ಲದೆ  ಲೇಖಕರು, ಮಾನವ ಹಕ್ಕುಗಳ ಹೋರಾಟಗಾರರು, ರಾಜನೀತಿಶಾಸ್ತ್ರಜ್ಞರು, ಸಂಶೋಧಕರು, ಮುದ್ರಕರು ಮತ್ತು ರಾಯಭಾರಿಯೂ ಆಗಿದ್ದರು. ಚಿಕ್ಕಂದಿನಿಂದಲೇ ವಿಜ್ಞಾನದಲ್ಲಿ ಆಸಕ್ತಿ. ಮುದ್ರಣಾಲಯದಲ್ಲಿ ಮೊಳೆ ಜೋಡಿಸುವುದರಿಂದ ಹಿಡಿದು, ಲೇಖನ ಬರೆಯುವವರೆಗೂ ಎಲ್ಲ ಕೆಲಸಗಳನ್ನು ಮಾಡಿದರು.

ಬೆಂಜಮಿನ್ ಫ್ರಾಂಕ್ಲಿನ್ ಅವರಿಗೆ ಲಂಡನ್ನಿನ ರಾಯಲ್ ಸೊಸೈಟಿಯ ಸದಸ್ಯತ್ವ  ಲಭಿಸಿತು. ಇವರ ಗೌರವಾರ್ಥ ಪಟ್ಟಣವೊಂದಕ್ಕೆ ಹೆಸರಿನಿಟ್ಟ ಸಂದರ್ಭದಲ್ಲಿ  ಒಂದು ಶಬ್ದ ಮಾಡುವ ಗಂಟೆಯನ್ನು ಆ ನಗರದಲ್ಲಿ ಪ್ರತಿಷ್ಠಾಪಿಸಲು ಕಳುಹಿಸಿಕೊಡಬೇಕೆಂದು ಫ್ರಾಂಕ್ಲಿನ್ ಅವರನ್ನು ಕೇಳಿಕೊಳ್ಳಲಾಯಿತಂತೆ.  ಅದಕ್ಕೆ ಉತ್ತರವಾಗಿ ಅವರು ಹಲವಾರು ಪುಸ್ತಕಗಳನ್ನು ಕಳುಹಿಸಿಕೊಟ್ಟು ಶಬ್ಧಕ್ಕಿಂತ ಜ್ಞಾನ ಮುಖ್ಯಎಂಬ ಸಂದೇಶವನ್ನು ರವಾನಿಸಿದರು.  ಆ ಪುಸ್ತಕಗಳ ಸಂಗ್ರಹವೇ ಒಂದು ಗ್ರಂಥಾಲಯವಾಗಿ ರೂಪುಗೊಂಡು ಅಮೆರಿಕದ ಪ್ರಥಮ ಗ್ರಂಥಾಲಯವೆನಿಸಿದೆ.  ಅವರು ಅಂದು ಕಳುಹಿಸಿಕೊಟ್ಟ ಪುಸ್ತಕಗಳು ಹಲವಾರು ತಲೆಮಾರುಗಳು ಓದಿ ಮಲಿನವಾಗಿದ್ದರೂ ಇಂದೂ ಸುರಕ್ಷಿತವಾಗಿ ಸಂರಕ್ಷಿಸಲ್ಪಟ್ಟಿವೆ.


ಬ್ರಿಟಿಷರ ಮೇಲಿನ ಯುದ್ಧದಲ್ಲಿ ಬೆಂಜಮಿನ್ ಫ್ರಾಂಕ್ಲಿನ್ ಅವರ ರಾಯಭಾರತ್ವದಿಂದ ಫ್ರಾನ್ಸ್ ದೇಶ ಅಮೆರಿಕಕ್ಕೆ ಸಹಾಯ ಒದಗಿಸಿತು.  ಅಮೆರಿಕಾದ ದಕ್ಷಿಣ ಭಾಗದಲ್ಲಿ ಯಾವುದೇ ರೀತಿಯ ಬೆಂಬಲ ಪಡೆಯಲು ವಿಫಲರಾದ ಬ್ರಿಟೀಷರು 1781ರ ಅಕ್ಟೋಬರ್‌ನಲ್ಲಿ ಅಮೆರಿಕನ್ನರಿಗೆ ಶರಣಾಗತರಾದರು. ಕ್ರಿ.ಶ.1783ರಲ್ಲಿ ಪ್ಯಾರಿಸ್ ಒಪ್ಪಂದವಾಯಿತು. ಬೆಂಜಮಿನ್ ಫ್ರಾಂಕ್ಲಿನ್, ಜಾನ್ ಆಡಮ್ಸನ್ ಮತ್ತು ಜಾನ್ ಜೇಯು ಅಮೆರಿಕಾವನ್ನು ಪ್ರತಿನಿಧಿಸಿದ್ದರು. ಬ್ರಿಟನ್ ಅಮೆರಿಕಾದಲ್ಲಿ ಅದುವರೆವಿಗೂ ತನ್ನ  ಹತೋಟಿಯಲ್ಲಿದ್ದ ಹದಿಮೂರು ವಸಾಹತುಗಳ ಸ್ವಾತಂತ್ರ್ಯ, ಹಕ್ಕುಗಳು  ಹಾಗೂ ಸಾರ್ವಭೌಮತೆಯನ್ನು ಒಪ್ಪಿಕೊಂಡಿತು. ಅಮೆರಿಕದ ಪ್ರಥಮ ಪ್ರಜೆ ಎಂಬ ಗೌರವ ಹೊಂದಿದ್ದ ಬೆಂಜಮಿನ್ ಫ್ರಾಂಕ್ಲಿನ್ 1790ರ ವರ್ಷದ ಏಪ್ರಿಲ್ 17ರಂದು ಈ ಲೋಕವನ್ನಗಲಿದರು.

Tag: Benjamin Franklin

ಕಾಮೆಂಟ್‌ಗಳಿಲ್ಲ: