ಭಾನುವಾರ, ಸೆಪ್ಟೆಂಬರ್ 1, 2013

ಶಿವಭಕ್ತ ವಿದ್ಯಾಪತಿ

ಶಿವಭಕ್ತ ವಿದ್ಯಾಪತಿ

ಅಂದು ಮಹಾಶಿವರಾತ್ರಿ.  ರಾತ್ರಿಯ ಸಮಯ ಶಿವದೇವಸ್ಥಾನ ಭಕ್ತರಿಂದ ತುಂಬಿಹೋಗಿದೆ.  ಆಸ್ಥಾನ ವಿದ್ವಾಂಸನಾದ ವಿದ್ಯಾಪತಿಯು ಮಧುರವಾದ ದನಿಯಿಂದ ಭಕ್ತಿಗೀತೆಗಳನ್ನು ಹಾಡುತ್ತಿದ್ದಾನೆ.  ಅವುಗಳನ್ನು ರಚಿಸಿರುವವನು ರಾಜಾ ಶಿವಸಿಂಗ್.  ರಾಜಾ ಶಿವಸಿಂಗ್ ಮತ್ತು ರಾಣಿ ಲಕ್ಷ್ಮೀದೇವಿಯರು ಎಲ್ಲವನ್ನೂ ಮರೆತು ಈ ಗಾನದಲ್ಲೇ ಮೈಮರೆತಿದ್ದಾರೆ.  ಇನ್ನೂ ಕೇಳುತ್ತಲೇ ಇರೋಣವೆನ್ನಿಸುವಂತಹ ದಿವ್ಯಸಂಗೀತದಲ್ಲಿ ಎಲ್ಲರೂ ತೇಲಿಹೋಗಿದ್ದಾರೆ.

ಒಂದು ರಾತ್ರಿ ವಿದ್ಯಾಪತಿ ಮಲಗಿ ನಿದ್ರಿಸುತ್ತಿದ್ದಾಗ ಕನಸಿನಲ್ಲಿ ಭಗವಾನ್ ಶಿವನು ಬಂದುನಿಂತು ಅವನ ತಲೆಯ ಮೇಲೆ ಕೈಯಿರಿಸಿ ಆಶೀರ್ವದಿಸುತ್ತಾ,  “ಮಗೂ, ನಿನ್ನ ಗಾನದಿಂದ ನಾನು ಬಹಳ ಸಂತುಷ್ಟನಾಗಿದ್ದೇನೆ.  ಆದರೆ, ರಾಧೇ ಮತ್ತು ಕೃಷ್ಣರ ನಡುವಣ ದಿವ್ಯಪ್ರೇಮವನ್ನು ಬಿಂಬಿಸುವ ಹಾಡುಗಳನ್ನು ಕೇಳಲು ನಾನು ಕಾತರನಾಗಿದ್ದೇನೆ.  ಅವುಗಳನ್ನು ಹಾಡುವ ಸಾಮರ್ಥ್ಯ ನಿನಗೆ ಲಭಿಸಲಿ” ಎಂದು ನುಡಿದನು.

“ಭಗವಾನ್, ನಿನ್ನ ಆಶೆಯನ್ನು ಈಡೇರಿಸುವುದೇ ನನ್ನ ಪರಮಭಾಗ್ಯ” ಎಂದ ವಿದ್ಯಾಪತಿಯು ಶಿವನಿಗೆ ನಮಸ್ಕರಿಸಿದನು.  ಮರುದಿನ ಮುಂಜಾನೆಯ ಹೊತ್ತಿಗೇ ವಿದ್ಯಾಪತಿಯು ಸ್ನಾನಮಾಡಿ, ಶಿವನನ್ನು ಪೂಜಿಸಲು ಕುಳಿತುಕೊಂಡನು.  ಹಠಾತ್ತನೆ, ದಿವ್ಯಶಕ್ತಿಯೊಂದು ಅವನು ಹೃದಯವನ್ನು ಆವರಿಸಿಬಿಟ್ಟಿತು.

ಆಹಾ! ಯಮುನಾನದಿಯ ದಡದಲ್ಲಿ ಶ್ರೀಕೃಷ್ಣನು ನಿಂತುಕೊಂಡಿದ್ದಾನೆ.  ರಾಧೆಯ ಪ್ರೇಮಕ್ಕೆ ಅವನು ವಶನಾಗಿಬಿಟ್ಟಿದ್ದಾನೆ.  ಮಹಾಭಾಕ್ತರಾದ ಗೋಪಿಯರು ಕೂಡ ಅಲ್ಲಿ ಸ್ತಬ್ಧರಾಗಿ ನಿಂತಿದ್ದಾರೆ.  ಹಸುಗಳು ಮತ್ತು ಪಕ್ಷಿಗಳು ಕೂಡ ಎಚ್ಚರವಿಲ್ಲದಂತೆ ನಿಂತುಬಿಟ್ಟಿವೆ.

ತಾನು ಕಂಡ ದಿವ್ಯದರ್ಶನವನ್ನು ಬಣ್ಣಿಸುವ ಒಂದು ಹಾಡನ್ನು ವಿದ್ಯಾಪತಿಯು ಆ ಕ್ಷಣದಲ್ಲಿಯೇ ರಚಿಸಿದ.  ಮರುದಿನ ರಾಜಾಸ್ಥಾನದಲ್ಲಿ ಅದನ್ನು ಹಾಡಿದ.  ಆ ಹಾಡನ್ನು ಕೇಳಿ ರಾಜನಿಗೆ ತುಂಬಾ ಕೋಪ ಬಂತು.  “ನಾನು ನಿನ್ನನ್ನು ಆಸ್ಥಾನವಿದ್ವಾಂಸನನ್ನಾಗಿ ಮಾಡಿದ್ದು ಏತಕ್ಕೆ ಗೊತ್ತೇ?  ನೀನು ಹಾಡುವ ಶಿವಸ್ತುತಿಯ ಹಾಡುಗಳನ್ನು ಕೇಳುತ್ತ ಆನಂದಿಸಲೆಂದು.  ಈ ಕ್ಷಣದಿಂದಲೇ ಈ ಪದವಿಗೆ ನೀನು ಯೋಗ್ಯನಲ್ಲ.  ನನ್ನ ರಾಜ್ಯವನ್ನು ಬಿಟ್ಟು ತೊಲಗಿಹೋಗು.”  ಎಂದು ಆಜ್ಞಾಪಿಸಿದನು.

“ಎಲ್ಲವೂ ಭಗವಂತನ ಇಚ್ಛೆ” ಎಂದು ಅಲ್ಲಿಂದ ಹೊರಟುಬಂದ ವಿದ್ಯಾಪತಿಯು ತನ್ನ ಸ್ವಗ್ರಾಮಕ್ಕೆ ಹಿಂತಿರುಗಿ, ಅಲ್ಲಿಯೇ ತನ್ನ ಭಕ್ತಿಗಾಯನವನ್ನು ಮುಂದುವರೆಸಿದನು.  ಶ್ರೀಕೃಷ್ಣನ ದಿವ್ಯನಾಮದ ಉಚ್ಛಾರಣೆ ಅಲ್ಲಿನ ದೇಗುಲದಲ್ಲಿ ಅನವರತವೂ ಸಾಗಿತು.  ಹರಿಭಕ್ತರು ಇದರಲ್ಲಿ ಪಾಲ್ಗೊಂಡು ಆನಂದಭರಿತರಾದರು.

ಕಾಲಕ್ರಮೇಣದಲ್ಲಿ ರಾಜಾ ಶಿವಸಿಂಗನ ರಾಜ್ಯವನ್ನು ದೆಹಲಿಯ ಸುಲ್ತಾನನು ಗೆದ್ದುಕೊಂಡುದೇ ಅಲ್ಲದೆ,  ರಾಜಾ ಶಿವಸಿಂಗನನ್ನು ದೆಹಲಿಯ ಸೆರೆಮನೆಯಲ್ಲಿ ಬಂಧಿಯಾಗಿಟ್ಟನು.  ಆಗ  ರಾಣಿ ಲಕ್ಷ್ಮೀದೇವಿ ವಿದ್ಯಾಪತಿಗೆ ಹೇಳಿಕಳುಹಿಸಿದಳು.  “ನಿನ್ನ ಮನಸ್ಸನ್ನು ನೋಯಿಸಿದ್ದಕ್ಕಾಗಿ ಭಗವಂತನು ರಾಜನಿಗೆ ಈ ಶಿಕ್ಷೆಯನ್ನು ಕೊಟ್ಟಿದ್ದಾನೆ.  ನೀನು ದೆಹಲಿಗೆ ಹೋಗಿ, ಸುಲ್ತಾನನ ಮುಂದೆ ರಾಜನ ಪರವಾಗಿ ಬೇಡಿಕೊಂಡರೆ ಅವನ ಬಿಡುಗಡೆಯಾಗುವುದು.  ಇದು ನನ್ನ ದೃಢವಾದ ನಂಬಿಕೆ” ಎಂದಳು.

“ನಿಮ್ಮ ಇಚ್ಛೆಯಂತೆ ನಾನು ದೆಹಲಿಗೆ ಹೋಗುತ್ತೇನೆ.  ಭಗವಂತನು ನಮಗೆ ಖಂಡಿತ ಸಹಾಯ ಮಾಡುವನು” ಎಂದನು ವಿದ್ಯಾಪತಿ.

ದೆಹಲಿಗೆ ಹೋಗುವ ದಾರಿಯಲಿ ಜಟಾಧಾರಿಯಾದ ಶಿವಭಕ್ತನೊಬ್ಬನು ವಿದ್ಯಾಪತಿಗೆ ಆಹಾರವನ್ನು ನೀಡಿದನು.  ಅಂದು ರಾತ್ರಿ ಅವನಿಗೆ ಒಂದು ಕನಸು ಬಿತ್ತು.   ಆದರಲ್ಲಿ ಆ ಅಪರಿಚಿತ ಸಾಕ್ಷಾತ್ ಶಿವನೇ ಎಂದು ವಿದ್ಯಾಪತಿಗೆ ಮನವರಿಕೆಯಾಯಿತು. “ಭಗವಾನ್, ಈ ವೇಷದಲ್ಲಿ ಬಂದು ನನಗೆ ನೆರವಾಗಿದ್ದೀಯೆ” ಎಂದು ವಿದ್ಯಾಪತಿಯು ಜಟಾಧಾರಿಗೆ ನಮಸ್ಕರಿಸಿದನು.

“ನೋಡು, ನಿನ್ನ ಸಾಧನೆಗೆ ಯಶಸ್ಸು ಸಿಕ್ಕಬೇಡವೇ? ಅದಕ್ಕೇ ನಾನು ನಿನಗೆ ಸಹಾಯ ಮಾಡುತ್ತಿದ್ದೇನೆ.  ನನ್ನ ರಹಸ್ಯವನ್ನು ನೀನು ಯಾರಿಗಾದರೂ ಬಯಲು ಮಾಡಿದೆಯೆಂದರೆ ನಿನ್ನನ್ನು ಬಿಟ್ಟುಹೋಗುತ್ತೇನೆ.  ಅದೃಶ್ಯನಾಗಿಬಿಡುತ್ತೇನೆ.  ಇದನ್ನು ನೆನಪಿನಲ್ಲಿಟ್ಟುಕೋ” ಎಂದನು ಆ ಜಟಾಧಾರಿ.

ಆ ಶಿವಭಕ್ತನ ಸಹಾಯದಿಂದ ವಿದ್ಯಾಪತಿಗೆ ಸುಲ್ತಾನನ ಭೇಟಿಯ ಅವಕಾಶ ದೊರೆಯಿತು.  ರಾಧಾಕೃಷ್ಣರ ದಿವ್ಯಪ್ರೇಮದ ಬಗೆಗಿನ ಹಾಡುಗಳನ್ನು ವಿದ್ಯಾಪತಿಯು ಅವನ ಮುಂದೆಯೂ ಹಾಡಿದನು.  ಅದನ್ನು ಕೇಳಿ ಸುಲ್ತಾನ ಮತ್ತು ಅವನ ಆಸ್ಥಾನದ ಸಭಿಕರು ಮನಸ್ಸಿನಲ್ಲಿಯೇ ಸ್ವರ್ಗಕ್ಕೇರಿದಂತೆ ಆಗಿಬಿಟ್ಟರು.

“ಓ ಹಾಡುಗಾರ!  ನನಗೆ ಬಹಳ ಸಂತೋಷವಾಗಿದೆ.  ನೀನು ಏನು ಬೇಕಾದರೂ ಕೇಳು.  ಅದನ್ನು ನಾನು ನಿನಗೆ ನೀಡುತ್ತೇನೆ” ಎಂದ ಸುಲ್ತಾನ.

“ಪ್ರಭೂ, ನನಗೇನೂ ಬೇಡ.  ರಾಜಾ ಶಿವಸಿಂಗನನ್ನು ಸೆರೆಯಿಂದ ಬಿಡಿಸು.  ಅವನ ಪದವಿ ಸಮ್ಮಾನಗಳನ್ನು ಮತ್ತೆ ವಾಪಸ್ಸು ಕೊಡು.”  ಎಂದು ನಮ್ರನಾಗಿ ನುಡಿದ ವಿದ್ಯಾಪತಿ.

ತನ್ನ ಮಾತನ್ನು ಉಳಿಸಿಕೊಂಡ ಸುಲ್ತಾನನು,  ರಾಜಾ ಶಿವಸಿಂಗನನ್ನು ಸೆರೆಮನೆಯಿಂದ ಬಿಡುಗಡೆ ಮಾಡುವಂತೆ ಆಜ್ಞೆ ಮಾಡಿದನು.  ವಿದ್ಯಾಪತಿಯು ರಾಜನೊಡನೆ ತನ್ನ ರಾಜ್ಯಕ್ಕೆ ಬಂದನು.  ಅವನ ಜೊತೆಯಲ್ಲಿಯೇ ಆ ಶಿವಭಕ್ತನೂ ಇದ್ದನು.  ಅಲ್ಲಿ ಅವರೆಲ್ಲರಿಗೂ ಭವ್ಯ ಸ್ವಾಗತ ಕಾದಿತ್ತು.

ರಾಜನನ್ನು ಬಿಡುಗಡೆ ಮಾಡಿಸಿದ್ದಕೆ ವಿದ್ಯಾಪತಿಗೆ ಅನೇಕ ಉಡುಗೊರೆಗಳು ಸಿಕ್ಕಿದವು.  ವಿಸ್ತಾರವಾದ ಜಮೀನು ಕೂಡ ದೊರಕಿತು.  ಅವನ ಹೆಂಡತಿಯಾದ ದುರ್ಗೆಗೆ ಇದರಿಂದ ಬಹಳ ಅಹಂಕಾರ ಬಂದಿತು.  ವಿದ್ಯಾಪತಿಯ ಜೊತೆಗಿದ್ದ ಆ ಶಿವಭಕ್ತನನ್ನು  ಕೇವಲ ಒಬ್ಬ ಸೇವಕನೆಂದುಕೊಂಡ ಆಕೆ,  ಪ್ರತಿನಿತ್ಯ ಆತನಿಗೆ ಬೇರೆ ಬೇರೆ ರೀತಿಯ ಕಷ್ಟದ ಕೆಲಸಗಳನ್ನು ಕೊಡಲಾರಂಭಿಸಿದಳು.  ಏನು ಕೆಲಸ ಕೊಟ್ಟರೂ ಆತ ಬೇಸರಿಸದೆ “ಆಯಿತು ತಾಯಿ, ಮಾಡುತ್ತೇನೆ.  ಭಗವದ್ಭಕ್ತರ ಸೇವೆ ಮಾಡಲೆಂದೇ ನಾನಿಲ್ಲಿಗೆ ಬಂದಿರುವುದು” ಎಂದು ನಗು ನಗುತ್ತಾ ಮಾಡುತ್ತಿದ್ದ.

ವಿದ್ಯಾಪತಿಗೆ ಈ ಸಂಗತಿ ಗೊತ್ತಿರಲಿಲ್ಲ.  ಒಂದು ದಿನ ಅವನು ಮನೆಗೆ ಹಿಂದಿರುಗುತ್ತಿದ್ದಾಗ ಆ  ಶಿವಭಕ್ತನು ಬಟ್ಟೆ ಒಗೆಯುತ್ತಿದ್ದುದನ್ನು ಕಂಡು ಗಾಬರಿಗೊಂಡನು. “ಪ್ರಭೂ ಇದೇನಿದು ಅನ್ಯಾಯ!  ನೀನು ಬಟ್ಟೆ ಒಗೆಯುವುದೇ?!” ಎಂದು ಚೀರಿದನು.  ವಿದ್ಯಾಪತಿಯ ಹೆಂಡತಿಯಾದರೋ, “ಏಕೆ ಒಗೆಯಬಾರದು?  ನಾವು ಅವನಿಗೆ ಅನ್ನ ಬಟ್ಟೆ ಕೊಡುತ್ತಿಲ್ಲವೇ?  ಇಂಥ ಕೆಲಸವನ್ನು ಅವನೇಕೆ ಮಾಡಬಾರದು?” ಎಂದಳು.

ವಿದ್ಯಾಪತಿಯು  ಆಕೆಯನ್ನು  ಫಕ್ಕಕ್ಕೆ ಎಳೆದುಕೊಂಡು ಹೋಗಿ ಹೇಳಿದ,  “ಎಂಥ ಅಪಚಾರವಾಯಿತು!  ಅವನನ್ನು ಯಾರೆಂದುಕೊಂಡೆ?  ಸಾಕ್ಷಾತ್ ಶಿವನೇ ಆ ಭಕ್ತನ ವೇಷದಲ್ಲಿ ಬಂದಿದ್ದಾನೆ.  ಅವನ ಅನುಗ್ರಹವಿಲ್ಲದೆಯೇ ನಾವು ಇಷ್ಟೊಂದು ದೊಡ್ಡ ಪದವಿಯನ್ನು ಸಂಪಾದಿಸಲು ಸಾಧ್ಯವಿತ್ತೇನು?  ಹೋಗು, ಆತನ ಕಾಲಿಗೆ ನಮಸ್ಕಾರ ಮಾಡು.  ಅವನನ್ನು ಊಟಕ್ಕೆ ಆಹ್ವಾನಿಸು.”

ಆಗ ದುರ್ಗೆಯು “ಅಯ್ಯೋ, ಇದನ್ನು ಏಕೆ ತಾನೇ ನೀವು ನನಗೆ ಮೊದಲೇ ಹೇಳಲಿಲ್ಲ?  ಅವನು ಇಡೀ ಜಗತ್ತನ್ನು ಆಳುತ್ತಿರುವ ಮತ್ತು ರಕ್ಷಿಸುತ್ತಿರುವ ಭಗವಂತನೇ?  ನಾನೆಂಥ ಪಾಪ ಮಾಡಿಬಿಟ್ಟೆ!” ಎಂದು ದುಃಖಿತಳಾಗಿ ಅವನ ಕ್ಷಮೆಯನ್ನು ಕೇಳಲು ಓಡಿಹೋದಳು.  ಅವನು ಎಲ್ಲಿಯೂ ಕಾಣಲಿಲ್ಲ.  “ನಾನೀಗ ಏನು ಮಾಡಲಿ?” ಎಂದು ಹಲುಬಿದಳು.

“ನನಗೆ ಗೊತ್ತು.  ಅವನೀಗ ಇಲ್ಲಿ ಇರುವುದಿಲ್ಲ ಎಂದು.  ನಾನು ತಪ್ಪು ಮಾಡಿಬಿಟ್ಟೆ.  ಆತನ ಎಚ್ಚರಿಕೆಯನ್ನು ಮರೆತುಬಿಟ್ಟೆ.  ಆತನನ್ನು ಮತ್ತೆ ಕಾಣದೆ ನಾನು ಏನನ್ನೂ ತಿನ್ನುವುದಿಲ್ಲ” ಎಂದ ವಿದ್ಯಾಪತಿಯು ದೇವಸ್ಥಾನಕ್ಕೆ ಹೋಗಿ ದೇವರೆದುರಿಗೆ ಕುಳಿತುಕೊಂಡನು.  ದುರ್ಗೆಯೂ ಅವನ ಜೊತೆಯಲ್ಲಿಯೇ ಕುಳಿತಳು.  ಇಬ್ಬರೂ ಉಪವಾಸವ್ರತ ಮಾಡಿದರು.

ಈ ವಿಷಯ ತಿಳಿದು ಜನ ದೇವಸ್ಥಾನದಲ್ಲಿ ಸೇರಿದರು.  ರಾಜನೂ ಬಂದನು.  ವಿದ್ಯಾಪತಿಯನ್ನು ಬಹಳವಾಗಿ ಕೇಳಿಕೊಂಡನು.  ಆದರೆ ವಿದ್ಯಾಪತಿ ತನ್ನ ನಿರ್ಧಾರದಿಂದ ಸ್ವಲ್ಪವೂ ವಿಚಲಿತನಾಗಲಿಲ್ಲ.  ಉಪವಾಸದಿಂದ ಅವನು ದಿನೇ ದಿನೇ ಕೃಶನಾದನು.  ಅಂದು, ಮಧ್ಯರಾತ್ರಿ  “ವಿದ್ಯಾಪತಿ, ಎದ್ದೇಳು.  ಇಡೀ ರಾಜ್ಯವೇ ನಿನಗಾಗಿ ಕಾದು ಕುಳಿತಿದೆ.  ನಿನ್ನ ಭಕ್ತಿಗಾನವನ್ನು ದೇಶದಲ್ಲೆಲ್ಲ ಹರಡು.  ಎಲ್ಲರಲ್ಲಿಯೂ ಭಕ್ತಿಯು ಅಭಿವೃದ್ಧಿ ಹೊಂದಲಿ.  ತೀರ್ಥಯಾತ್ರೆಗೆ ತೆರಳು” ಎಂದು ಪರಶಿವನು ನುಡಿದನು.

ಮರುದಿನ ಬೆಳಗ್ಗೆ ಬೆಳಗುತ್ತಿರುವ ಮುಖದಿಂದ ವಿದ್ಯಾಪತಿಯು ತನ್ನ ಪತ್ನಿಯೊಂದಿಗೆ ಯಾತ್ರೆಗೆ ಹೊರಟನು.  ಅವರ ಹಿಂದೆಯೇ, “ಮಹಾತ್ಮರಾದ ವಿದ್ಯಾಪತಿಗಳು ತಮ್ಮ ತಪಸ್ಸು ಮುಗಿಸಿ ಯಾತ್ರೆಗೆ ಹೊರಟಿದ್ದಾರೆ” ಎಂದು ಅನೇಕ ಜನ ಭಗವದ್ಭಕ್ತರು “ರಾಧೇಶ್ಯಾಮ, ರಾಧೇಶ್ಯಾಮ, ರಾಧಾರಮಣ, ರಾಧೇಶ್ಯಾಮ” ಎಂದು ಹಾಡುತ್ತಾ ತಾವೂ ಹೆಜ್ಜೆ ಹಾಕಿದರು.

ಶಿವಭಕ್ತನಾದ ವಿದ್ಯಾಪತಿಯು ಹಾಡಿದ ರಾಧಾಕೃಷ್ಣರ ದಿವ್ಯಪ್ರೇಮದ ಭಕ್ತಿಗಾನದಿಂದ ಇಡೀ ದೇಶವು ಅಣುರಣಿಸಿತು.  ವಯಸ್ಸಾದ ಮೇಲೆ ವಿದ್ಯಾಪತಿಯು ಗಂಗೆಯ ಪವಿತ್ರಜಲದಲ್ಲಿ ದೇಹತ್ಯಾಗ ಮಾಡಿದನು.  ಅದಾಗಿ ಬಹಳ ಕಾಲವಾದರೂ ಜನರು ಈಗಲೂ ಅವನ ರೋಮಾಂಚಕಾರಿ ಹಾಡುಗಳನ್ನು ಹಾಡುತ್ತಾರೆ.

“ಯಥಾ ಶಿವಸ್ಥತಾವಿಷ್ಣುರ್ಯಥಾ ವಿಷ್ಣುಸ್ಥತಾ ಶಿವಃ|
ಅಂತರಂ ಶಿವವಿಷ್ಣೋಶ್ಚ ಮನಾಗಪಿ ನ ವಿದ್ಯತೇ||
(ಸ್ಕಂದ ಪುರಾಣ)

“ಶಿವನು ಹೇಗೋ, ವಿಷ್ಣುವೂ ಹಾಗೆಯೇ.  ವಿಷ್ಣುವು ಹೇಗೋ, ಶಿವನು ಹಾಗೆಯೇ.  ಶಿವ ಮತ್ತು ವಿಷ್ಣುವಿನಲ್ಲಿ ಸ್ವಲ್ಪವೂ ಭೇದವಿಲ್ಲ”.

ಕೃಪೆ:  ಆರ್. ವಿ. ಅವರ ಸಚಿತ್ರ ಕಥೆ,  ಶ್ರೀರಾಮಕೃಷ್ಣಾಶ್ರಮದ  ‘ವಿವೇಕಪ್ರಭ’ ಪತ್ರಿಕೆಯಿಂದ

Tag: Vidyapati

ಕಾಮೆಂಟ್‌ಗಳಿಲ್ಲ: