ಶನಿವಾರ, ಆಗಸ್ಟ್ 31, 2013

ಮೇರಿ ಕೋಮ್

ಮೇರಿ ಕೋಮ್

ಭಾರತದ ಕ್ರೀಡಾ ಇತಿಹಾಸದಲ್ಲಿನ ಮಹತ್ವಪೂರ್ಣ ತಾರೆ ಮೇರಿ ಕೋಮ್ ಅವರು ಜನಿಸಿದ ದಿನ ಮಾರ್ಚ್ 1, 1983. ಅವರ ಹೆಸರು ಮಂಗ್ಟೆ ಚುಂಗ್ನೇಜಾಂಗ್ ಮೇರಿ ಕೋಮ್. ಇಂದು ಅವರು ತಮ್ಮ ಸಾಧನೆಗಳಿಂದ ಮೆಗ್ನಿಫಿಷಿಯಂಟ್ ಮೇರಿ ಎನಿಸಿದ್ದಾರೆ. ಮಣಿಪುರದ ಚುರಾಚನಪುರದ ಕಂಗಾಥೈ ಎಂಬ ಗ್ರಾಮದಲ್ಲ್ಲಿ ಬುಡಕಟ್ಟು ಜನಾಂಗದ ಕುಟುಂಬದಿಂದ ಬಂದವರು ಈ ಮೇರಿ ಕೋಮ್. ತಂದೆ ತಾಯಿಯರು ಜೂಮ್ ತೋಟಗಳಲ್ಲಿನ ಕಾರ್ಮಿಕರು.

ಮೊಯಿರಾಂಗ್ ಗ್ರಾಮದಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣಗಳನ್ನು ನಡೆಸಿದ ಮೇರಿ ಮುಂದೆ ಇಂಫಾಲದಲ್ಲಿ ಹೈಸ್ಕೂಲು ವ್ಯಾಸಂಗಕ್ಕೆ ಸೇರಿದರು. ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗದ ಕಾರಣ ಪುನಃ ಶಾಲೆಗೆ ಹೋಗಲಿಚ್ಚಿಸದ ಅವರು ಪ್ರತ್ಯೇಕವಾಗಿ ಓದಿ, ಮುಂದೆ ಚುರಾಚಾಂದ್ಪುರದ ಕಾಲೇಜಿನಲ್ಲಿ ಪಧವೀಧರೆಯೂ ಆದರು.

ಶಾಲಾ ದಿನಗಳಿಂದಲೂ ಅಥ್ಲೆಟಿಕ್ಸ್ ಕ್ರೀಡೆಗಳತ್ತ ಮೇರಿ ಕೋಮ್ ಆಕರ್ಷಿತರಾಗಿದ್ದರು. ಆದರೆ 2000ದ ವರ್ಷದಲ್ಲಿ ಡಿಂಗ್ಕೋ ಸಿಂಗ್ ಅವರು ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗೆದ್ದಾಗ ಆ ಕ್ರೀಡೆಯತ್ತ ಒಲವು ಮೂಡಿಸಿಕೊಂಡರು. ಹಾಗಾಗಿ ಮಣಿಪುರ ರಾಜ್ಯದ ಬಾಕ್ಸಿಂಗ್ ಕೋಚ್ ಆದ ಎಂ ನರಜಿತ್ ಸಿಂಗ್ ಅವರಿಂದ ನೇರ ತರಬೇತಿ ಪಡೆದರು.

ಮುಂದೆ ನಡೆದದ್ದು ಇತಿಹಾಸ ಅವರು ಐದು ಬಾರಿ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್ ಎನಿಸಿದರು. ಅಷ್ಟು ಮಾತ್ರವಲ್ಲ ಭಾಗವಹಿಸಿದ ಆರೂ ವಿಶ್ವ ಚಾಂಪಿಯನ್ ಸ್ಪರ್ಧೆಗಳಲ್ಲೂ ಪದಕ ಗೆದ್ದ ವಿಶ್ವದ ಏಕೈಕ ಮಹಿಳೆ ಎಂಬ ಕೀರ್ತಿ ಅವರದ್ದು. 2012ರ ಒಲಿಂಪಿಕ್ಸ್ ಸ್ಪರ್ಧೆಗಳಿಗೆ ಬಾಕ್ಸಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಭಾರತದಿಂದ ಅರ್ಹತೆ ಲಭಿಸಿದ್ದು ಅವರೊಬ್ಬರಿಗೆ ಮಾತ್ರ. 51 ಕೆ ಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾಗವಹಿಸಿದ ಅವರು ದೇಶಕ್ಕೆ ಕಂಚಿನ ಪದಕ ಗಳಿಸಿ ಕೀರ್ತಿ ತಂದರು. 2014 ವರ್ಷ ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕದ ಗೆಲುವಿನ ವರೆವಿಗೆ ಅವರ ಸಾಧನೆ ನಿರಂತರವಾಗಿ ಮುಂದುವರೆಯುತ್ತಾ ಸಾಗಿದೆ.

ಇದು ಒಬ್ಬ ವ್ಯಕ್ತಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಆ ಆಸಕ್ತಿಯಿಂದ ಅವರಿಗೆ ಪದಕ ಗೆಲ್ಲಲು ಸಾಧ್ಯವಾಯಿತು ಎಂಬ ಸಾಧಾರಣ ವ್ಯಾಖ್ಯಾನದಲ್ಲಿ ನಿರೂಪಿತವಾಗುವಂತಹ ವಿಷಯವಲ್ಲ. ಮೇರಿ ಕೋಮ್ ಅವರು ಈ ಸಾಧನೆಗಳನ್ನು ಮಾಡಲು ತಮಗಿದ್ದ ವ್ಯವಸ್ಥಾತ್ಮಕ ತೊಂದರೆಗಳ ಜೊತೆಗೆ, ಪ್ರತೀಕೂಲವಾಗಿದ್ದ ಭಾವನಾತ್ಮಕ ಕೋಟೆ ಕೊತ್ತಲಗಳನ್ನು ಸಹಾ ದಾಟಬೇಕಾದ ಅನಿವಾರ್ಯತೆ ಇತ್ತು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

“ನಾನು ಮದುವೆ ಆಗುವ ಸಂದರ್ಭದಲ್ಲಿ ಬಾಕ್ಸಿಂಗ್‌ಗೆ ವಿದಾಯ ಹೇಳಬೇಕೆಂಬ ಒತ್ತಡ ನನ್ನ ಕುಟುಂಬದಿಂದಲೇ ಬಂದಿತ್ತು. ಅದಕ್ಕೂ ನಾನು ಮಣಿದಿರಲಿಲ್ಲ. ಅವಳಿ ಮಕ್ಕಳಾದ ಬಳಿಕ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದೆ. ಆಗಲೂ ಬಾಕ್ಸಿಂಗ್ ತ್ಯಜಿಸು ಎಂದು ಒತ್ತಡ ಹೇರಿದ್ದರು. ಆದರೆ ದೊಡ್ಡ ಸಾಧನೆಯ ಭರವಸೆ ನೀಡಿ ಎಲ್ಲರ ಮನವೊಲಿಸಿದ್ದೆ. ಆ ಮಾತನ್ನು ಉಳಿಸಿಕೊಂಡಿದ್ದೇನೆ”. ಇದು ಲಂಡನ್ ಒಲಿಂಪಿಕ್ಸ್ ಕ್ರೀಡೆಯಲ್ಲಿ ಕಂಚಿನ ಪದಕ ಗೆದ್ದ ಬಗ್ಗೆ ಮೇರಿ ಕೋಮ್ ತಮ್ಮ ಬಾಕ್ಸಿಂಗ್ ಹಾದಿಯನ್ನು ಚುಟುಕಾಗಿ ತೆರೆದಿಡುವ ಪರಿ.

ಕೆ ಓನರ್ ಕೋಮ್ ಅವರ ಪತ್ನಿಯಾಗಿರುವ ಮೇರಿ ಅವರು ಕೇವಲ ಪುಟಾಣಿ ಮಕ್ಕಳ ತಾಯಿ ಅಷ್ಟೆ ಅಲ್ಲ, ಅದೆಷ್ಟೊ ಮಹಿಳೆಯರಿಗೆ ಸ್ಫೂರ್ತಿ. ಮದುವೆಯಾದ ಮೇಲೆ ಹೆಚ್ಚಿನ ಮಹಿಳೆಯರು ಕ್ರೀಡಾ ಕ್ಷೇತ್ರ ತೊರೆಯುತ್ತಾರೆ. ಅದರಲ್ಲೂ ಮಕ್ಕಳಾದರೆ ಮುಗಿಯಿತು. ಅಂಥದ್ದರಲ್ಲಿ ಅವಳಿ ಮಕ್ಕಳ ತಾಯಿ ಮೇರಿ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಪದಕ ಗೆದ್ದಿರುವ ಸಾಧನೆ ಅಮೋಘ. ಒಲಿಂಪಿಕ್ಸ್ ಸಿದ್ಧತೆಗಾಗಿ ಒಂದೂವರೆ ವರ್ಷದ ಅವಧಿಯಲ್ಲಿ 300 ದಿನ ತರಬೇತಿ ಹಾಗೂ ಸ್ಪರ್ಧೆ ಎಂದು ಕೋಮ್ ತಮ್ಮ ಪುಟ್ಟ ಮಕ್ಕಳಿಂದ ದೂರ ಉಳಿದಿದ್ದರು. ಇದು ಭಾರತೀಯ ನಾರಿಯರ ಪದಕಎಂದು ಒಲಿಂಪಿಕ್ಸ್ ವಿಜಯ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಅವರು ಪ್ರತಿಕ್ರಿಯಿಸಿದ್ದರು. ದೇಶದ ಮಹಿಳೆಯರಿಗೆ ಈ ಪದಕ ಅರ್ಪಣೆ. ಇಂತಹ ಸಾಧನೆ ಮಾಡುವ ಶಕ್ತಿ ಅದೆಷ್ಟೊ ಮಹಿಳೆಯರಿಗಿದೆ. ಆದರೆ ಆ ಹಾದಿಯಲ್ಲಿ ಎದುರಾಗುವ ಅಡತಡೆಗಳನ್ನು ಧೈರ್ಯದಿಂದ ದಾಟಿ ನಿಲ್ಲಬೇಕು ಅಷ್ಟೆ. ಮದುವೆಯಾದ ಮಾತ್ರಕ್ಕೆ ಕ್ರೀಡೆ ತೊರೆಯಬಾರದು.ಇದು ಮಹಿಳಾ ಕ್ರೀಡಾಪಟುಗಳಿಗೆ ಮೇರಿ ಕೋಮ್ ಅವರು ನೀಡುವ ಸಂದೇಶ

ನಾನು ಬಡಕುಟುಂಬದಿಂದಲೇ ಬೆಳೆದು ಬಂದವಳು. ನನಗೆ ಬಹುಮಾನ ರೂಪದಲ್ಲಿ ಈಗ ಸಾಕಷ್ಟು ಹಣ ಬರುತ್ತಿರಬಹುದು. ಆದರೆ ಬೆಳಿಗ್ಗೆ ಬೇಗ ಎದ್ದು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಸಂಜೆ ಮಕ್ಕಳು ಮನೆಗೆ ಬರುವ ಹಾದಿಯನ್ನು ಕಾಯುತ್ತಿರಬೇಕೆಂಬ ಆಸೆ ನನಗೂ ಇದೆ. ತಾಯಿ ಸದಾ ತಮ್ಮ ಜೊತೆಗಿರುವುದನ್ನು ಮಕ್ಕಳೂ ಇಷ್ಟಪಡುತ್ತಾರೆ. ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ತುಡಿತವಿದೆ. ಆದರೆ ಇಷ್ಟಕ್ಕೇ ನಾನು ಬದ್ಧವಾಗಿದ್ದಿದ್ದರೆ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದನ್ನು ಗಳಿಸಲು ಇನ್ನೊಂದನ್ನು ಸ್ವಲ್ಪಮಟ್ಟಿಗೆ ಕಳೆದುಕೊಳ್ಳಬೇಕಾಗುತ್ತದೆಎನ್ನುತ್ತಾರೆ ಮೇರಿ.

ಇತ್ತೀಚಿನ ವರ್ಷಗಳಲ್ಲಿ ಮೇರಿ ಕೋಮ್ ಅವರಿಗೆ ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಹಾಗೂ ಪದ್ಮಭೂಷಣ ಪ್ರಶಸ್ತಿಗಳು  ಸಂದಿವೆ. ಬಹುಮಾನ ರೂಪದಲ್ಲಿ ಅಷ್ಟಿಷ್ಟು ಬೆಂಬಲವೂ ದೊರೆತಿದೆ. ಇವರ ಜೀವನದ ಕುರಿತು ಚಲನಚಿತ್ರ ಕೂಡಾ ಮೂಡಿಬಂದಿದೆ. ಇವೆಲ್ಲವನ್ನೂ ಬಾಕ್ಸಿಂಗ್ ಅಕಾಡೆಮಿಗೆ ವಿನಿಯೋಗಿಸಿ ಉತ್ತಮ ಬಾಕ್ಸಿಂಗ್ ಪಟುಗಳನ್ನು ತಯಾರುಮಾಡುವ ಕನಸು ಮೇರಿ ಕೋಮ್ ಅವರದ್ದು. ಪ್ರಾಣಿಗಳ ಸ್ವಾತಂತ್ರ್ಯದ  ಕುರಿತಾದ ಕಾಳಜಿಗಳನ್ನು ಎಲ್ಲೆಡೆ ಅವರು ವ್ಯಕ್ತಪಡಿಸುತ್ತಾ ಬಂದಿರುವ  ಮೇರಿ ಕೋಮ್  ಪ್ರಾಣಿಗಳನ್ನು  ಹಿಂಸಿಸದೆ ಆಪ್ತವಾಗಿ  ಕಾಣುವ  ಶಿಕ್ಷಣವನ್ನು  ಶಾಲೆಗಳಲ್ಲಿ  ಅಳವಡಿಸಬೇಕು  ಎಂಬ ಅಭಿಪ್ರಾಯದವರಾಗಿದ್ದಾರೆ. 


ಮೇರಿ ಕೋಮ್ ಅವರು ತಾವು ಬಯಸಿದ ಎಲ್ಲಾ ಶ್ರೇಷ್ಠ ಸಾಧನೆಗಳನ್ನೂ ಮಾಡುವಂತಾಗಲಿ ಅವರಿಗೆ ಎಲ್ಲ ರೀತಿಯ ಬೆಂಬಲವೂ ದೊರೆಯಲಿ ಅವರಿಂದ ಭಾರತೀಯ ಕ್ರೀಡಾಪಟುಗಳಿಗೆ ನಿರಂತರ ಮಾರ್ಗದರ್ಶನ, ಸ್ಫೂರ್ತಿ ದೊರಕುತ್ತಿರಲಿ ಎಂದು ಆಶಿಸುತ್ತಾ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.


Tag: Mary Kom

ಕಾಮೆಂಟ್‌ಗಳಿಲ್ಲ: