ಬುಧವಾರ, ಆಗಸ್ಟ್ 28, 2013

ಹೊಯಿಸಳ - ಅರಗ ಲಕ್ಷಣರಾವ್

ಹೊಯಿಸಳ - ಅರಗ ಲಕ್ಷಣರಾವ್

ಹೊಯಿಸಳಎಂಬ ಕಾವ್ಯನಾಮದಿಂದ ಮಕ್ಕಳ ಸಾಹಿತಿ ಎಂದೇ ಪ್ರಖ್ಯಾತರಾಗಿದ್ದ ಅರಗ ಲಕ್ಷ್ಮಣರಾಯರು ಮೇ 7, 1893ರಂದು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಜನಿಸಿದರು.  ಅವರ ತಂದೆ ಸುಬ್ಬಣ್ಣನವರು ಮತ್ತು ತಾಯಿ ಸುಬ್ಬಮ್ಮನವರು.

ಲಕ್ಷ್ಮಣರಾಯರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ನರಸಿಂಹರಾಜಪುರದಲ್ಲಿ ನೆರವೇರಿತು. ಅವರ  ಪ್ರೌಢಶಾಲಾ ವ್ಯಾಸಂಗ ಮೈಸೂರಿನಲ್ಲಿ ನಡೆಯಿತು. ಅನಿಬೆಸೆಂಟರು ಮದನಪಲ್ಲಿಯಲ್ಲಿ ಸ್ಥಾಪಿಸಿದ್ದ ನ್ಯಾಷನಲ್‌ ಕಾಲೇಜಿನಿಂದ ಅವರು ಬಿ. ಎ.  ಪದವಿ ಪಡೆದರು. ಕಾಲೇಜಿನಲ್ಲಿದ್ದಾಗಲೇ ಅನಿಬೆಸೆಂಟ್‌, ಸಿ.ಎಫ್‌. ಆಂಡ್ರೂಸ್, ಮತ್ತು ಕಸಿನ್ಸ್ ಅವರುಗಳ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ್ದರಿಂದ ವಿದ್ಯಾಭ್ಯಾಸಕ್ಕೆ ತಡೆಯುಂಟಾಯಿತು.  1919ರಲ್ಲಿ ಶಾಂತಿನಿಕೇತನಕ್ಕೆ ತೆರಳಿ ಸುಮಾರು 2 ವರ್ಷಗಳ ಕಾಲವಿದ್ದು ಬಂದನಂತರ ಇವರ ಬದುಕಿನ ರೀತಿಯೇ ಬದಲಾಯಿತು.

1922ರಲ್ಲಿ ಚನ್ನಪಟ್ಟಣದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ವಿವಿದೆಡೆಗಳಲ್ಲಿ ನಿವೃತ್ತರಾಗುವವರೆವಿಗೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ  ಲಕ್ಷ್ಮಣರಾಯರಿಗೆ ಅಧ್ಯಾಪಕ ವೃತ್ತಿ ಬಹಳ ತೃಪ್ತಿ ತಂದುಕೊಟ್ಟ ವೃತ್ತಿಯಾಗಿತ್ತು.  ನಿವೃತ್ತಿಯ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮ ನಿರ್ವಾಹಕರಾಗಿ ಕೆಲಕಾಲ ಕಾರ್ಯನಿರ್ವಹಿಸಿದ ಅವರು, ಪ್ರಜಾವಾಣಿ ಪತ್ರಿಕೆಯ  ಬಾಲಭಾರತಿಮಕ್ಕಳ ವಿಭಾಗವನ್ನು ಕೆಲಕಾಲ ನಡೆಸಿದರು.

ಮಕ್ಕಳು  ಹಾಡಿ ನಲಿಯುವಂತಹ ಅನೇಕ ಪದ್ಯಗಳನ್ನು ರಚಿಸಿದ ಲಕ್ಷಣರಾಯರು  ಪ್ರಧಾನವಾಗಿ ಮಕ್ಕಳ ಕವಿಎನಿಸಿಕೊಂಡವರು. ಮಕ್ಕಳಿಗಾಗಿಯೇ ನೂರಾರು ಪದ್ಯಗಳು, ಸುಮಾರು 35 ಕಥೆಗಳು ಮತ್ತು  5 ನಾಟಕಗಳನ್ನು  ಅವರು ರಚಿಸಿದರು.  ತಿರುಗಮುರುಗಎಂಬ  ಇವರ ಚೊಚ್ಚಲ ಪದ್ಯ ಪ್ರಬುದ್ಧ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡಿತು.   ಏಳುವ ಹೊತ್ತುಇವರ ಪ್ರಥಮ ಕವನ ಸಂಕಲನ. ನಂತರ ಬಂದದ್ದು  ಕಂಕಣ’.  ಇವರ ಆಯ್ದ ಪದ್ಯಗಳ ಸಂಕಲನ ಬಂದ ಬಂದ ಸಂತಂಮಣ್ಣ’.   ‘ಕಂಕಣಸಂಕಲನದಲ್ಲಿರುವ
ಕಾಂಪೌಂಡ್‌ ಬಂಗ್ಲಿ ಕಂಕಮ್ಮಂಗೆಮೂಛೆ ಬಂದಿತ್ತು ಇವರ ಪ್ರಸಿದ್ಧ ಕಥನ ಕವನ. ಇದನ್ನು ಇವರು ಹಲವಾರು ಕಾರ್ಯಕ್ರಮಗಳ ನಡುವಿನ ಬಿಡುವಿನ ಸಮಯಗಳಲ್ಲಿ  ಅಭಿನಯಪೂರ್ವಕವಾಗಿ  ಹಾಡಿ   ಪ್ರೇಕ್ಷಕರನ್ನು ರಂಜಿಸುತ್ತಿದ್ದರು.  ಮಗುವಿನ ಕೂಗು, ಚಂದಮಾಮ, ಕೋಲುಕುದುರೆ,  ಕೋಗಿಲೆ ಮುಂತಾದವು ಅವರ ಇತರ ಕವನ ಸಂಕಲನಗಳು.

ಸಂತಂಮಣ್ಣ, ಚಂದುಮಾಮ, ಒಂದು ಎರಡು ಮೂರು, ಕೋಲು ಕುದುರೆ, ತಟ್ಟುಚಪ್ಪಾಳೆ ಪುಟ್ಟ ಮಗು, ನಂಗೊತ್ತಿಲ್ಲಪ್ಪಾ ಮುಂತಾದವು ಹೊಯಿಸಳರ  ಜನಪ್ರಿಯ ಮಕ್ಕಳ ಪದ್ಯಗಳು.  ತಾವು ರಚಿಸಿದ್ದಷ್ಟೇ ಅಲ್ಲದೆ ಇತರ ಉತ್ತಮ ಶಿಶು ಸಾಹಿತ್ಯವನ್ನೂ ಆರಿಸಿ ಮಕ್ಕಳಿಗಾಗಿ ಒದಗಿಸಿದ್ದರು.

ಹೊಯಿಸಳರು ರಚಿಸಿದ ಮಕ್ಕಳ ಕಥೆಗಳು ಹೂವಿನ ಹಾಸಿಗೆ, ಪುಟ್ಟರಸು, ಪಠಾಕಿ, ಅನ್ಬು-ಬಾಟ, ಅದಕ್ಕೆ ಆ ಹೆಸರು, ಆನೆ ಇರುವೆ, ಗಂಟೆಗೋಪುರ, ಖೈದಿಗಳ ಕಷ್ಟ, ಪುಟ್ಟ ತಮ್ಮ ಯಾರು, ಪೋರಿ, ಬದುಕುವ ಮಂತ್ರ, ನಿಶ್ಚಲದಾಸ, ಅಭ್ಯಂಕು, ವೀರಕುಮಾರ, ಮಸೀದಿಯನ್ನು ಎಲ್ಲಿ ಕಟ್ಟಿದರು, ಶುಭಾಂಗ, ಬೋರನೆಟ್ಟ ಮೂಲಂಗಿ, ರಾಜನ ಬುದ್ಧಿವಂತಿಕೆ ಮುಂತಾದವುಗಳು.  ಆ ಕಾಲದಲ್ಲಿ ಹೊಯಿಸಳರ ಮಕ್ಕಳ ಕತೆಗಳಿಗಾಗಿ ಮಕ್ಕಳಲ್ಲದೆ ದೊಡ್ಡವರೂ ಕಾಯುತ್ತಿದ್ದುದು ವಿಶೇಷ.  ಹೊಯಿಸಳರು ದೊಡ್ಡವರಿಗಾಗಿ ಬರೆದ ಕೃತಿಗಳೆಂದರೆ ಕಂಚಿನ ಕನ್ನಡಿ, ಕಂಕಣ, ದಿನಾರಿ, ಹಾಡಿನ ಚಿಲುಮೆ, ಪರಿಷತ್ತಿನ ಲಾವಣ, ಗೆಲುವು-ಗುರಾಣಿ ಮುಂತಾದವುಗಳು

ಹೊಯಿಸಳರು ಮಗು, ಪ್ರಸಾದ, ವಾತಾಪಿ, ಚಂದ್ರಹಾಸ, ಅಗಲಿದ ಮಗಳು, ಮಳ್ಳ ಎಂಬ 5 ನಾಟಕಗಳನ್ನೂ ಮಕ್ಕಳಿಗಾಗಿ ರಚಿಸಿದ್ದಾರೆ.

ಜಗತ್ತಿನ ಮೊದಲಕತೆ ಈಜಪ್ತಿನ ಅನ್ಬು-ಬಾಟ’, ಠಾಕೂರರ ವಸಂತ’, ನೆಹರೂರವರ ಮಗಳಿಗೆ ತಂದೆಯ ಓಲೆಗಳುಮುಂತಾದವು ಇವರ ಮುಖ್ಯ ಅನುವಾದಗಳು.

ಹೊಯಿಸಳರು ಮಕ್ಕಳಿಗಾಗಿಯೇ ಕನಕಎಂಬ ಪತ್ರಿಕೆಯನ್ನು ಪ್ರಾರಂಭಿಸಿದರಾದರೂ ಸಾಕಷ್ಟು ಚಂದದಾರರು ದೊರೆಯದೆ ಹಣಕಾಸಿನ ತೊಂದರೆಯಿಂದಾಗಿ ಪ್ರಕಟಣೆಯನ್ನು ನಿಲ್ಲಿಸಬೇಕಾಯಿತು.

ಮಕ್ಕಳ ಸಾಹಿತ್ಯಕ್ಕೆ ಒಂದು ಹೊಸ ಆಯಾಮವನ್ನು ತಂದುಕೊಟ್ಟ ಅಗ್ಗಳಿಕೆಯ ಹೊಯಿಸಳರು ಹೆಸರಿಗಾಗಿ ಹಂಬಲಿಸಿದವರೇ ಅಲ್ಲ.  ಜೀವಿತಾವಧಿಯಲ್ಲಿ ಬಹಳಷ್ಟು ಬರೆದು ಹಿರಿಕಿರಿಯರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದ ಅರಗ ಲಕ್ಷ್ಮಣರಾಯರು 1959ರ ಅಕ್ಟೋಬರ್ 10ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.

ಮಾಹಿತಿ ಕೃಪೆ: ಕಣಜ
ಚುಕ್ಕಿ ಚಿತ್ರ ಕೃಪೆ:  ಆತ್ಮೀಯ ಗೆಳೆಯರಾದ ಮೋಹನ್ ವೆರ್ಣೇಕರ್ ಅವರದ್ದು


Tag: Hoysala, Araga Lakshmanarao

ಕಾಮೆಂಟ್‌ಗಳಿಲ್ಲ: