ಗುರುವಾರ, ಆಗಸ್ಟ್ 29, 2013

ನಿರಂಜನ

ನಿರಂಜನ

ಕನ್ನಡ  ಸಾಹಿತ್ಯಲೋಕದ  ಮಹತ್ವದ  ಬರಹಗಾರರಲ್ಲೊಬ್ಬರಾದ   ನಿರಂಜನ ಅವರು 1924ರ ಜೂನ್ 15ರಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕುಳಕುಂದ ಎಂಬ ಚಿಕ್ಕ ಹಳ್ಳಿಯಲ್ಲಿ ಜನಿಸಿದರು.  ಅವರ ತಂದೆ ತಾಯಿ ಇಟ್ಟ ಹೆಸರು ಶಿವರಾಯ ಎಂದು.  ಬಾಲ್ಯದಿಂದಲೂ ಓದು ಬರಹಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲೂ ಶಿವರಾಯರಿಗೆ ತುಂಬಾ ಆಸಕ್ತಿ.  1935ರಲ್ಲಿ ಶಿವರಾಮ ಕಾರಂತರು ಪುತ್ತೂರಿನಲ್ಲಿ ಮಕ್ಕಳ ಸಮ್ಮೇಳನ ನಡೆಸಿದಾಗ ಬಾಲಕ ಶಿವರಾಯರು ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದರು.  ಗಾಂಧೀಜಿ ಸುಳ್ಯದ ಮೂಲಕ ಹಾದು ಹೋಗಿದ್ದು, ಪುತ್ತೂರಿನಲ್ಲಿ ನೆಹರೂ ಭಾಷಣ ಕೇಳಿದ್ದು ಮುಂತಾದವೆಲ್ಲಾ  ಅವರ ನೆನಪಿನಲ್ಲಿ ಹಸಿರಾಗಿತ್ತು.  1938ರಲ್ಲಿ, ಹೈಸ್ಕೂಲು ವಿದ್ಯಾಭ್ಯಾಸ ಮುಗಿಸುವ ವೇಳೆಗಾಗಲೇ ಕಿಶೋರಕಾವ್ಯನಾಮದಲ್ಲಿ ಸುಮಾರು ಹದಿನೈದು ಕಥೆಗಳನ್ನು ಬರೆದು ಪ್ರಕಟಿಸಿದ್ದರು.

ಹೈಸ್ಕೂಲಿನಲ್ಲಿ ಓದುತ್ತಿದ್ದಾ ಗಲಿಂದ ಕಮ್ಮ್ಯೂನಿಸ್ಟ್ ಚಟುವಟಿಕೆಗಳು ಶಿವರಾಯರನ್ನು ಆಕರ್ಷಿಸಿದ್ದವು.  ನಿರಂಜನರೇ ಒಂದು ಕಡೆ ಹೇಳುವ ಹಾಗೆ ಬ್ರಿಟಿಷ್ ಸರ್ಕಾರಕ್ಕೆ ಕಮ್ಯುನಿಸ್ಟ್ ಕ್ರಾಂತಿಕಾರಿ ಆಗ ಸಿಂಹಸ್ವಪ್ನ’.  ಕ್ರಾಂತಿಯ ಗಂಧ ಹೀರಿದ್ದ  ನಿರಂಜನರ ಚಿರಸ್ಮರಣೆಕಾದಂಬರಿಗೆ ಕೈಯೂರ ರೈತ ಸಂಘಟನೆಯೇ ವಸ್ತುವಾಗಿದೆ.  ಪತ್ರಿಕೋದ್ಯಮಿಯಾಗುವ ಆಸೆ ಹೊತ್ತಿದ್ದ ಶಿವರಾಯರು  ರಾಷ್ಟ್ರಬಂಧು’, ‘ತಾಯಿ ನಾಡು’, ‘ಜನವಾಣಿ’, ‘ಸಂಯುಕ್ತ ಕರ್ನಾಟಕ’, ‘ವಾಹಿನಿ ಪತ್ರಿಕೆಮುಂತಾದವುಗಳಲ್ಲಿ ಕೆಲಸ ಮಾಡಿದರು.  ಅವರು ದೀರ್ಘಕಾಲ, ವ್ಯಾಪಕವಾಗಿ ಪತ್ರಕರ್ತರಾಗಿ ಕೆಲಸಮಾಡಿದ್ದು ಪ್ರಜಾಮತದಲ್ಲಿ.  ಭಾರತೀಯ ಕಮ್ಯುನಿಸ್ಟ್ ಪಕ್ಷವು ಹುಬ್ಬಳ್ಳಿಯಲ್ಲಿ ಜನಶಕ್ತಿಪ್ರಕಟಿಸಲು ಪ್ರಾರಂಭವಾದಾಗ ಶಿವರಾಯರಿಗೆ ಆಹ್ವಾನ ಹೋಯಿತು.  ಪತ್ರಿಕೆ ಆರಂಭವಾದ ಒಂದೇ ವರ್ಷದಲ್ಲಿ ನಿಷೇಧಿಸಲ್ಪಟ್ಟಿತು.  ಶಿವರಾಯರು ಮೂರು ವರ್ಷಕಾಲ ಕಮ್ಯುನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದು ತೆಲಂಗಾಣ ಚಳವಳಿ ಬಗ್ಗೆ ಭಾಷಣ ಮಾಡುವುದು, ಬರೆಯುವುದು ಮಾಡುತ್ತಾ ಭೂಗತ ಚಟುವಟಿಕೆಗಳನ್ನು ನಡೆಸುತ್ತಿದ್ದರು.  ಕುಳಕುಂದ ಶಿವರಾಯರು ನಿರಂಜನಎಂಬ ಗುಪ್ತನಾಮವನ್ನು ಧರಿಸಿದ್ದು ಆಗಲೆ.  ಮುಂದೆ ಇದೇ ಹೆಸರಿನಿಂದ ಅವರು ಸಾಹಿತ್ಯ ಪ್ರಪಂಚದಲ್ಲಿ ಪ್ರಸಿದ್ಧರಾದರು.  1951ರಲ್ಲಿ ಬಂಧಿತರಾಗಿ, ಸಾಕಷ್ಟು ವಿಚಾರಣೆಯ ನಂತರ ಬಿಡುಗಡೆ ಹೊಂದಿದರು.  1953ರಲ್ಲಿ ಅವರು ಕಮ್ಮ್ಯೂನಿಸ್ಟ್ ಪಕ್ಷದಿಂದ ಹೊರಬಂದರು.

ನಿರಂಜನರು ಅನುಪಮಾ ಅವರನ್ನು ಮೊದಲು ಭೇಟಿಯಾದದ್ದು 1950ರಲ್ಲಿ.  ಸಾಹಿತ್ಯದಲ್ಲಿ ಆಸಕ್ತಿ ಹೊಂದಿ ಆ ವೇಳೆಗಾಗಲೇ ಕೆಲವು ಕಥೆಗಳನ್ನು ಬರೆದಿಟ್ಟುಕೊಂಡು ಪ್ರಕಾಶನಕ್ಕಾಗಿ ಕಾಯುತ್ತಿದ್ದ ವಿಧ್ಯಾರ್ಥಿನಿ ಅನುಪಮಾ ಅವರಿಗೂ ನಿರಂಜನರಿಗೂ ನಿಕಟ ಪರಿಚಯ ಬೆಳೆದು, ಅಭಿರುಚಿಗಳೂ-ಜೀವಿತ ಧ್ಯೇಯಧೋರಣೆಗಳೂ ಪರಸ್ಪರ ಹೊಂದಿಕೊಂಡು, ಸುಮಾರು ಐದು ವರ್ಷಗಳ ಅನಂತರ, 1956ರಲ್ಲಿ ಸಾಹಿತಿ ನಿರಂಜನ-ವೈದ್ಯೆ ಅನುಪಮಾ ದಂಪತಿಗಳಾದರು.  ತಂದೆತಾಯಿಯರ, ಬಂಧುಬಳಗದ ಕಣ್ಣು ತಪ್ಪಿಸಿ ಸ್ನೇಹಿತರ ನೆರವಿನಿಂದ ಆದ ಅಂತರ್ಜಾತೀಯ ವಿವಾಹ ಇವರದು.

1964ರಲ್ಲಿ ಇಂಡಿಯಾ ನ್ಯೂಸ್ ಅಂಡ್ ಫೀಚರ್ ಅಲಯನ್ಸ್ (ಇನ್ಫಾ)ಸಂಸ್ಥೆಗೆ ಬೆಂಗಳೂರಿನ ಬಾತ್ಮೀದಾರರಾಗಿ ನೇಮಕಗೊಂಡ ನಿರಂಜನರು 1967ರವರೆಗೂ ತುಂಬಾ ದಕ್ಷತೆಯಿಂದ ಆ ಕೆಲಸ ನಿರ್ವಹಿಸಿದರು.  ಈ ಅವಧಿಯಲ್ಲಿ ಅವರು ಪತ್ರಿಕೆಗಳಿಗೆ ಬರೆದ ಲೇಖನಗಳು ರಾಜಧಾನಿಯಿಂದಎಂಬ ಶೀರ್ಷಿಕೆಯಲ್ಲೂ, ಪ್ರಜಾಮತ ವಾರಪತ್ರಿಕೆಯಲಿದ್ದಾಗ ಬರೆದ ಲೇಖನಗಳು ಅಂಕಣ’, ‘ದಿನಚರಿಯಿಂದಎಂಬ ಹೆಸರುಗಳಿಂದಲೂ ಪ್ರಕಟವಾಗಿವೆ.  ಕರ್ನಾಟಕದ ಅಂಕಣ ಬರಹಗಾರರಲ್ಲಿ ನಿರಂಜನರಿಗೆ ಮಹತ್ವದ ಸ್ಥಾನವಿದೆ.

ಕರ್ಣಾಟಕ ಸಹಕಾರೀ ಪ್ರಕಾಶನಎಂಬ ಸಂಸ್ಥೆಯು ಕಿರಿಯರಿಗಾಗಿ ವಿಶ್ವಕೋಶವೊಂದನ್ನು ತಯಾರಿಸುವ ಯೋಜನೆ ಹಾಕಿಕೊಂಡಾಗ ಅದರ ಸಂಪೂರ್ಣ ಜವಾಬ್ದಾರಿ ಹೊರಲು ಮುಂದಾದವರು ನಿರಂಜನ.  1969ರ ಆಗಸ್ಟ್ ತಿಂಗಳಿನಲ್ಲಿ ಆರಂಭವಾಗಿ 1974ನೇ ಮಾರ್ಚ್ ತಿಂಗಳಲ್ಲಿ ಈ ದೊಡ್ಡ ಸಾಹಸ ಪೂರ್ಣಗೊಂಡಿತು.  ಕೇವಲ ನಾಲ್ಕು ವರ್ಷ ಒಂಬತ್ತು ತಿಂಗಳಲ್ಲಿ ಜ್ಞಾನಗಂಗೋತ್ರಿಯ ಎಲ್ಲ ಸಂಪುಟಗಳನ್ನೂ ಸಿದ್ಧಪಡಿಸಿ, ಇಪ್ಪತ್ತು ಸಾವಿರ ಪ್ರತಿಗಳನ್ನೂ ಅಚ್ಚುಮಾಡಿಸಿ, ವಿತರಣೆಯನ್ನೂ ವ್ಯವಸ್ಥೆಗೊಳಿಸಿದ್ದು ನಿರಂಜನರ ಕಾರ್ಯದಕ್ಷತೆ, ಶಿಸ್ತು, ಸಾಧನೆಗಳಿಗೆ ಉಜ್ವಲ ನಿದರ್ಶನ.

1980-83ರ ಅವಧಿಯಲ್ಲಿ, ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಸಂಸ್ಥೆಯವರಿಗಾಗಿ, ನಾನಾದೇಶಗಳಿಂದ, ನಾನಾಭಾಷೆಗಳಿಂದ ಆಯ್ದ ಸುಮಾರು ನಾಲ್ಕುನೂರು ಸಣ್ಣಕಥೆಗಳನ್ನು ನಿರಂಜನರು ಇಪ್ಪತ್ತೈದು ಸಂಪುಟಗಳಲ್ಲಿ ಸಂಪಾದಿಸಿಕೊಟ್ಟರು.  ಭಾರತೀಯ ಭಾಷೆಗಳಲ್ಲೇ ಪ್ರಪ್ರಥಮ ಎನ್ನಬಹುದಾದದ್ದು ಈ ಯೋಜನೆ.  ವಿಶ್ವಕಥಾಕೋಶದ ಪ್ರಥಮ ಸಂಪುಟ ಕನ್ನಡ ಕಥೆಗಳಿಗಾಗಿ ಮೀಸಲಾಗಿದೆ.  ಅನಂತರದ ಸಂಪುಟಗಳಲ್ಲಿ ಆಫ್ರಿಕಾಖಂಡದಿಂದ, ವಿಯಟ್ನಾಂನಿಂದ ಹಿಡಿದು ದಕ್ಷಿಣ ಅಮೇರಿಕಾ ಖಂಡದವರೆಗಿನ ಎಲ್ಲ ದೇಶಗಳ-ವಿಶೇಷವಾಗಿ ಸಮಾಜವಾದೀ ದೇಶಗಳ ಮತ್ತು ಆ ಮನೋಭಾವಗಳ-ಕಥೆಗಳೂ ಸೇರಿವೆ.  ಕಥೆಗಳ ಆಯ್ಕೆಯಲ್ಲಿ ನಿರಂಜನರ ತಾತ್ವಿಕ ದೃಷ್ಟಿಕೋನ, ಸಹೃದಯತೆ, ಸೂಕ್ಷ್ಮ ಸಂವೇದನೆಗಳನ್ನು ನಿಚ್ಚಳವಾಗಿ ಗುರುತಿಸಬಹುದು.  ಜನ ಮುಗಿಬಿದ್ದು ಕೊಂಡುಕೊಂಡ ಈ ಪುಸ್ತಕಮಾಲೆಯನ್ನು ನವಕರ್ನಾಟಕ ಪ್ರಕಾಶನವು ಇತ್ತೀಚಿನ ವರ್ಷದಲ್ಲಿ  ಮತ್ತೊಮ್ಮೆ ಬಿಡುಗಡೆ ಮಾಡಿರುವುದು ಈ ಕಥಾಮಾಲೆಯ ಸಾರ್ವಕಾಲಿಕ ಜನಪ್ರಿಯತೆಗೆ  ದ್ಯೋತಕವಾಗಿದೆ.

ಬಾಲ್ಯದ ಬಡತನ, ಯೌವ್ವನದ ಸಂಘರ್ಷಗಳನ್ನೆಲ್ಲಾ ಮೀರಿಸುವಂತಹ ದಾರುಣಕರವಾದ ಆಘಾತವೊದಗಿದ್ದು ನಿರಂಜನರ ನಡುಪ್ರಾಯದಲ್ಲಿ.   ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದ ನಿರಂಜನರು 1971ರ ವರ್ಷದಲ್ಲಿ ಸೆನೆಟ್ ಸಭೆಯಲ್ಲಿ ಮಾತಾಡಿ ಕುಳಿತೊಡನೆಯೇ ಪಾರ್ಶ್ವವಾಯುವಿಗೆ ತುತ್ತಾಗಿ ಕುಸಿದುಬಿದ್ದರು.  ಅಂದಿನ ದಿನದಲ್ಲಿ ಸಾವಿತ್ರಿ ಸತ್ಯವಾನನನ್ನು ಉಳಿಸಿಕೊಂಡ ಹಾಗೆ ಅನುಪಮಾ ನನ್ನನ್ನು ಉಳಿಸಿಕೊಂಡರುಎಂದು ನಿರಂಜನರು ತಮ್ಮ ಪತ್ನಿಯಬಗ್ಗೆ ಅಭಿಮಾನ ತುಂಬಿದ ಕೃತಜ್ಞತೆಗಳಲ್ಲಿ ಸ್ಮರಿಸುತ್ತಿದ್ದರು. ತಮಗೆ ದೊರಕಿದ ಶುಶ್ರೂಷೆಯ ಬೆಂಬಲ ಮತ್ತು ಬಲಭಾಗದ ದೇಹದಲ್ಲಿ ಉಳಿದಿದ್ದ ಶಕ್ತಿ, ಬಾಧಿಸಲ್ಪಡದ ವಾಕ್ ಶಕ್ತಿ, ಕುಂಟಿತಗೊಳ್ಳದ ಅಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಮತ್ತು ಸೃಜನಶೀಲತೆಗಳ ದೆಸೆಯಿಂದ ನಿರಂಜನರು ತಮ್ಮ ಕಾಯಕವನ್ನು ಮುಂದುವರೆಸಿದರು.  ಇಂತಹ ಆಘಾತವನ್ನು ಅನುಭವಿಸಿದ ಮೇಲೂ ಜ್ಞಾನ ಗಂಗೋತ್ರಿಯ ಕೆಲಸ ಪೂರೈಸಿದ್ದು, ‘ವಿಶ್ವಕಥಾಕೋಶವನ್ನು ಸಿದ್ಧಪಡಿಸಿದ್ದು ಮತ್ತು ಮೃತ್ಯುಂಜಯದಂಥ ಮಹತ್ವಾಕಾಂಕ್ಷೆಯ  ಕಾದಂಬರಿ ರಚಿಸುವುದು ಇವೆಲ್ಲ ನಿರಂಜನರ ಅದಮ್ಯ ಚೇತನಕ್ಕೆ ಮಾತ್ರ ಸಾಧ್ಯವಾಗಬಹುದಾದ ಕೆಲಸಗಳು.

ವಿವಿಧ ಕ್ಷೇತ್ರಗಳಲ್ಲಿ ಕೆಲಸಮಾಡಿದ ನಿರಂಜನರು ನೂರಾರು ಪ್ರಕಟಣೆಗಳನ್ನು ಮಾಡಿದ್ದಾರೆ.  ಕಥಾ ಸಂಗ್ರಹಗಳು, ಕಾದಂಬರಿಗಳು, ನಾಟಕಗಳು, ಜೀವನಚರಿತ್ರೆ, ಅಂಕಣ ಬರಹ ಸಂಕಲನಗಳು, ರಾಜಕೀಯ ಚರ್ಚೆ, ಭಾಷಾಂತರ ಕೃತಿಗಳು, ಜ್ಞಾನಗಂಗೋತ್ರಿ ಸಂಪುಟಗಳು, ವಿಶ್ವಕಥಾ ಸಂಪುಟಗಳು ಹೀಗೆ ಹಲವು ವಿಧದಲ್ಲಿ. 

ನಿರಂಜನರು ಬಾಲಕ ಶಿವರಾಯನಾಗಿ ಎಣ್ಣೆ ಚಿಮಣಿ ಎಣ್ಣೆ ಎಂಬ ಕತೆಯನ್ನು ರಾಷ್ಟ್ರಬಂಧು ಪತ್ರಿಕೆಗೆ ಬರೆದಾಗ ಅದರ ಸಂಪಾದಕರಾಗಿದ್ದ  ಕಡೆಂಗೋಡ್ಲು ಶಂಕರಭಟ್ಟರು ಬ್ರಿಟಿಷ್ ಸರ್ಕಾರದ ವಿಚಾರಣೆ ಎದುರಿಸಬೇಕಾಯಿತು.  ನಾಸ್ತಿಕ ಕೊಟ್ಟ ದೇವರುಎಂಬುದು ಹನ್ನೆರಡು ಕಥೆಗಳ ಸಂಕಲನ. 

ಐವತ್ತನೆಯ ದಶಕದಲ್ಲಿ ಸಾಧನ ಸಂಚಯದ ಮೂಲಕ ಆರಂಭವಾದ ನಿರಂಜನರ ಅಂಕಣ ಬರಹಗಳ ವ್ಯವಸಾಯವು ಸಮೃದ್ಧವಾದದ್ದು.  ಅವರ ಬರಹಗಳಲ್ಲಿದ್ದ ವಿಚಾರಪರತೆ, ತೀಕ್ಷ್ಣವಾದ ಟೀಕೆ, ವ್ಯಂಗ್ಯ ಅಪೂರ್ವವಾದದ್ದು. 

ವಿಮೋಚನೆ’, ‘ಬನಶಂಕರಿ’, ‘ರಂಗಮ್ಮನ ವಠಾರ’, ‘ಅಭಯ’, ‘ನಂದಗೋಕುಲಮುಂತಾದವು ಸಾಮಾಜಿಕ ಕಾದಂಬರಿಗಳು.  ಕಲ್ಯಾಣ ಸ್ವಾಮಿ’, ‘ಸ್ವಾಮಿ ಅಪರಂಪಾರಇತಿಹಾಸಪ್ರಜ್ಞೆಯ ಕೃತಿಗಳು.  ಚಿರಸ್ಮರಣೆ’, ಮತ್ತು ಮೃತ್ಯುಂಜಯಗಳಲ್ಲಿ ಬಂಡಾಯ ಅಥವಾ ಕ್ರಾಂತಿತತ್ವ ಬೆನ್ನೆಲುಬಾಗಿದೆ.

ನಿರಂಜನರು ಸುಮಾರು ಹತ್ತು ಕಥಾ ಸಂಗ್ರಹಗಳು, ಇಪ್ಪತ್ತೈದು ಕಾದಂಬರಿಗಳು, ಮೂರು ನಾಟಕಗಳು, ಜೀವನ ಚರಿತ್ರೆಗಳನ್ನು ಬರೆದಿದ್ದಾರೆ.  ಜ್ಞಾನಗಂಗೋತ್ರಿಯ ಏಳು ಸಂಪುಟಗಳು, ವಿಶ್ವಕಥಾಕೋಶದ ಇಪ್ಪತ್ತೈದು ಸಂಪುಟಗಳು, ಪಸಿದ್ಧ  ಅಂಕಣಗಳ ಸಂಗ್ರಹಗಳು, ಹಲವಾರು ವಿಚಾರಪೂರ್ಣ ಚಿಂತನಾ ಪ್ರಕಟಣೆಗಳು  ಮುಂತಾದವುಗಳನ್ನೆಲ್ಲಾ ಒಟ್ಟು ಮಾಡಿ ನೋಡಿದಾಗ ಅವರು ತಮ್ಮ ಇನ್ನಿತರ ಬಿಡುವಿಲ್ಲದ ಕೆಲಸದೊಡನೆ ಸಾಧಿಸಿದ ಈ ಅಗಾಧತೆಯ ಪರಿ ಅಚ್ಚರಿ ಹುಟ್ಟಿಸುತ್ತದೆ.

ಹಲವಾರು ಗೌರವಗಳನ್ನು ಪಡೆದಿದ್ದ ಈ ಅಪ್ರತಿಮ ಸಾಧಕರು ಮಾರ್ಚ್ 13, 1991ರ ವರ್ಷದಲ್ಲಿ ನಿಧನರಾದರು.  ಅವರು ಕನ್ನಡ ನಾಡಿನಲ್ಲಿ ಸಾಧಿಸಿದ ಕೆಲಸ ಮತ್ತು ಗಳಿಸಿದ ಕೀರ್ತಿ ಚಿರಂತನವಾದದ್ದು. 

(ಆಧಾರ: ಕೆ.ಎಲ್. ಗೋಪಾಲಕೃಷ್ಣಯ್ಯನವರ ನಿರಂಜನ ಅವರ ಕುರಿತ ಬರಹ)

ಫೋಟೋ ಕೃಪೆ: www.kamat.com

Tag: Niranjana

ಕಾಮೆಂಟ್‌ಗಳಿಲ್ಲ: