ಗುರುವಾರ, ಆಗಸ್ಟ್ 29, 2013

ಕಾಲು ಕಳೆದುಕೊಂಡ ಅರುಣೀಮ ಏರಿದರು ಮೌಂಟ್ ಎವರೆಸ್ಟ್

ಕಾಲು ಕಳೆದುಕೊಂಡ ಅರುಣೀಮ ಏರಿದರು ಮೌಂಟ್ ಎವರೆಸ್ಟ್

ಅರುಣೀಮ ಸಿನ್ಹಾ ಹಿಂದೆ ಭಾರತದ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯಾಗಿದ್ದವರು.  ಎರಡು ವರ್ಷಗಳ ಹಿಂದೆ ಓಡುತ್ತಿದ್ದ ರೈಲಿನಿಂದ ದುಷ್ಕರ್ಮಿಗಳಿಂದ ಹೊರದಬ್ಬಲ್ಪಟ್ಟ ಅರುಣೀಮ ತನ್ನ ಬಲಗಾಲನ್ನು ಕಳೆದುಕೊಳ್ಳಬೇಕಾಯಿತು.  ತನ್ನ ಕಳೆದುಕೊಂಡ ಕಾಲಿಗೆ ಕೃತಕ ಕಾಲನ್ನು ಅಳವಡಿಸಿಕೊಂಡ ಅರುಣೀಮ ಇಂದು ಬೆಳಿಗ್ಗೆ 10 ಗಂಟೆ 55 ನಿಮಿಷಕ್ಕೆ ಎವರೆಸ್ಟ್ ಶಿಖರದ ತುತ್ತ ತುದಿಯನ್ನು ಮುಟ್ಟಿ, ಕೃತಕ ಕಾಲಿನವರೊಬ್ಬರು ಎವೆರೆಸ್ಟ್ ಹತ್ತಿದ ಮೊಟ್ಟಮೊದಲನೆಯವರೆಂದು, ತಮ್ಮ ಹೆಸರನ್ನು ಚರಿತ್ರೆಯ ಪುಟಗಳಲ್ಲಿ ದಾಖಲಿಸಿದ್ದಾರೆ. ಆಕೆ ಟಾಟಾ ಎಕ್ಸ್ಪೆಡಿಷನ್ ತಂಡದ ಸದಸ್ಯೆಯಾಗಿದ್ದರು.

ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ನಿವಾಸಿಯಾದ ಅರುಣೀಮ ಸಿನ್ಹಾ ಏಪ್ರಿಲ್ 12, 2011ರ ದಿನದಂದು  ಲಕ್ನೋದಿಂದ ಪದ್ಮಾವತಿ ಎಕ್ಸ್ ಪ್ರೆಸ್ ರೈಲಿನ ಸಾಮಾನ್ಯ ಬೋಗಿಯೊಂದರಲ್ಲಿ  ಸಂಚರಿಸುತ್ತಿದ್ದ ವೇಳೆಯಲ್ಲಿ ಯಾರದ್ದೋ ಚಿನ್ನದ ಸರವನ್ನು ಅಪಹರಿಸಲು ಯತ್ನಿಸುತ್ತಿದ್ದ ದುಷ್ಕರ್ಮಿಗಳನ್ನು  ಪ್ರತಿಭಟಿಸ ಹೋದಾಗ, ಆ ದುಷ್ಕರ್ಮಿಗಳು ಈಕೆಯನ್ನು ಓಡುತ್ತಿದ್ದ ರೈಲಿನಿಂದ ಹೊರಕ್ಕೆ ತಳ್ಳಿಬಿಟ್ಟರು.   ಇದರಿಂದ ತೀವ್ರಪೆಟ್ಟಿಗೊಳಗಾದ ಅರುಣೀಮ ತಮ್ಮ ಬಲಗಾಲನ್ನು ಕಳೆದುಕೊಳ್ಳಬೇಕಾಯಿತು.

ಕಾಲನ್ನು ಕಳೆದುಕೊಂಡ ಅರುಣೀಮಾಗೆ, ಎಲ್ಲರೂ ಸಂತಾಪ ಸೂಚಿಸುವವರೇ ಆಗಿಬಿಟ್ಟರು.  ಆ ಸಂದರ್ಭದಲ್ಲಿ ಆಕೆಗೆ “ನಾನು ಈ ಸಂತಾಪ ಸೂಚಕ ಮಾತುಗಳನ್ನು ಕೇಳದೆ ಬದುಕುವಂತಹ ಸಾಧನೆಯನ್ನೇನಾದರೂ ಮಾಡಲೇಬೇಕು ಎಂಬ ಛಲ ಹುಟ್ಟಿತು.”

ಈ ಸಮಯದಲ್ಲಿ ಕ್ರಿಕೆಟ್ ಪಟು ಯುವರಾಜ್ ಸಿಂಗ್  ಕ್ಯಾನ್ಸರಿನಿಂದ ಹೊರಬಂದು ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡತೊಡಗಿದ್ದು ಅರುಣೀಮ ಅವರಿಗೆ  ಪ್ರೇರಣೆಯಾಯಿತಂತೆ. ಅರುಣೀಮ ಸಿನ್ಹಾ ತಾವು ಮೌಂಟ್ ಎವರೆಸ್ಟ್ ಆರೋಹಣಕ್ಕೆ ತೊಡಗುತ್ತಿದ್ದ  ದಿನಗಳಲ್ಲಿ  ನೀಡಿದ ಸಂದರ್ಶನವೊಂದರಲ್ಲಿ  “ಯುವರಾಜ್ ಸಿಂಗ್ ಅವರಂತೆಯೇ, ನಾನೂ ಏನಾದರೂ ಮಾಡಿ ನನ್ನ ಎಂದಿನ ಸಹಜ ಬದುಕನ್ನು ನಡೆಸುವಂತಾಗಬೇಕು ಎಂಬ ಅನಿಸಿಕೆ ತೀವ್ರವಾಯಿತು” ಎಂದು ನುಡಿದಿದ್ದರು. “ಯುವರಾಜ್ ಸಿಂಗ್ ಅವರು, ನಾನು  ಅವರು ಆಸ್ಪತ್ರೆಯಲ್ಲಿದ್ದ ವೇಳೆಯಲ್ಲಿ ಒಂದು ಲಕ್ಷ ರೂಪಾಯಿಯನ್ನು ನೀಡಿದ್ದರ ಜೊತೆಗೆ, ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತುಂಬಾ ಆತ್ಮವಿಶ್ವಾಸ ತುಂಬಿದರು” ಎಂದು ಅರುಣೀಮ ಕೃತಜ್ಞತೆಯಿಂದ ನುಡಿಯುತ್ತಾರೆ.

ಅರುಣೀಮ ಅವರು  ಟಾಟಾ ಸ್ಟೀಲ್ ಪ್ರತಿಷ್ಠಾನದ ಮುಖ್ಯಸ್ಥರಾದ  ಮೌಂಟ್ ಎವರೆಸ್ಟ್ ಹತ್ತಿದ ಮೊದಲ ಮಹಿಳೆ  ಬಚೆಂದ್ರಿ ಪಾಲ್ ಅವರೊಡನೆ ನಡೆದ ಪ್ರಥಮ  ಭೇಟಿಯ ಸಂದರ್ಭವನ್ನು ನೆನೆಯುತ್ತಾ ,   “ಬಚೆಂದ್ರಿ ಪಾಲ್ ಅವರನ್ನು ಭೇಟಿ ಮಾಡಿ, ನನ್ನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಯಿತು” ಎಂದು ನುಡಿಯುತ್ತಾರೆ.

"ಬದುಕಿನಲ್ಲಿ ಏನನ್ನೇ ಕಳೆದುಕೊಂಡಾಗಲೂ ದೃಢ ಸಂಕಲ್ಪ, ಆತ್ಮ ವಿಶ್ವಾಸ ಮತ್ತು ಶ್ರಮ ಪಡುವ ಮನಸ್ಸನ್ನು ಹೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಅರುಣೀಮ ಸಿನ್ಹಾ ಮತ್ತೊಂದು ಜ್ವಲಂತ ಸಾಕ್ಷಿಯಾಗಿದ್ದಾರೆ."

ಅರುಣೀಮ ಸಿನ್ಹಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.  “ಸಹೋದರಿ, ನಿಮ್ಮ ಈ ಸಾಧನೆ ನಮಗೆಲ್ಲರಿಗೂ ನಮ್ಮ ಬಾಳನ್ನು ಉತ್ತಮ ಧ್ಯೇಯದಿಂದ ಬಾಳುವುದಕ್ಕೊಂದು ದಾರಿದೀಪದಂತಿದೆ” ಎಂದು ಹೇಳುತ್ತಾ ಅವರಿಗೆ ಹೃತ್ಪೂರ್ವಕವಾಗಿ ಶುಭಹಾರೈಸೋಣ.

Tag: Aruneema

ಕಾಮೆಂಟ್‌ಗಳಿಲ್ಲ: