ಶನಿವಾರ, ಆಗಸ್ಟ್ 31, 2013

ಥಾಮಸ್ ಆಲ್ವ ಎಡಿಸನ್

ಥಾಮಸ್ ಆಲ್ವ ಎಡಿಸನ್

ಇಂದು ನಾವೇನೇನನ್ನು ಉಪಯೋಗಿಸುತ್ತಿದ್ದೇವೋ ಅಂತಹ ಬಹುತೇಕ  ವಸ್ತುಗಳಿಗೆ ಪ್ರತ್ಯಕ್ಷವಾಗಿ ಇಲ್ಲವೇ  ಪರೋಕ್ಷವಾಗಿ ಕಾರಣಕರ್ತರಾಗಿಯೂ ಹಾಗೂ ಮುಂದೆ ಬಂದ ಹಲವಾರು ಬುದ್ಧಿವಂತ ಸಾಹಸಿಗಳಿಗೆ ಪ್ರೇರಕರೂ ಆದ ಮಹಾನ್ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ನರು ಜನಿಸಿದ ದಿನ ಫೆಬ್ರುವರಿ 11.  ಪರಿಶ್ರಮ, ಬುದ್ಧಿವಂತಿಕೆ, ವ್ಯವಹಾರ ಚಾತುರ್ಯ ಇವುಗಳ ಸಂಗಮವೇ ಯಶಸ್ಸು ಎನ್ನುವುದಕ್ಕೆ ಮಾದರಿ ಥಾಮಸ್ ಆಲ್ವಾ ಎಡಿಸನ್.

ಥಾಮಸ್ ಆಲ್ವಾ ಎಡಿಸನ್ ಅವರು ಕಂಡು ಹಿಡಿದಷ್ಟು ಹೊಸ ಹೊಸ ಆವಿಷ್ಕಾರಗಳನ್ನು ಇತ್ತೀಚಿನವರೆಗೆ ಯಾರೂ ಮಾಡಿರಲಿಲ್ಲ. ಅವರು ಸದಾ ಪರಿಶ್ರಮಿ. ಅವರೊಮ್ಮೆ ಘೋಷಣೆ ಮಾಡಿದ್ದರು, ‘ಪ್ರಯೋಜನವಿಲ್ಲದ್ದನ್ನು, ಲಾಭವಿಲ್ಲದ್ದನ್ನು ನಾನು ಕಂಡು ಹಿಡಿಯುವುದೇ ಇಲ್ಲ’. ಅವರ ಹೆಸರಿನಲ್ಲಿರುವಷ್ಟು ಪೇಟೆಂಟುಗಳು ಮತ್ತಾರ ಹೆಸರಿನಲ್ಲಿ ಇರಲಿಲ್ಲ.

ಎಡಿಸನ್ ತುಂಬ ಪರಿಶ್ರಮಪಟ್ಟು ವಿದ್ಯುತ್ ಬಲ್ಬನ್ನು ಕಂಡು ಹಿಡಿದರು. ಅದಕ್ಕಾಗಿ ಅವರು ಸುಮಾರು ಎರಡು ಸಾವಿರ ಪ್ರಯೋಗಗಳನ್ನು ಮಾಡಿದ್ದರಂತೆ. ಅಷ್ಟು ಪ್ರಯೋಗಗಳಾದ ಮೇಲೆ ಸಫಲತೆ ದೊರಕಿತ್ತು. ಯಾರೋ ಅವರನ್ನು ಕೇಳಿದರಂತೆ, ‘ನೀವು ಎರಡು ಸಾವಿರ ಬಾರಿ ವಿಫಲರಾದಿರಂತೆ’. ಅದಕ್ಕೆ ಎಡಿಸನ್, ‘ನಾನು ಎರಡು ಸಾವಿರ ಬಾರಿ ಸೋಲಲಿಲ್ಲ. ಯಾವ ರೀತಿ ಮಾಡಿದರೆ ಬಲ್ಬನ್ನು ಮಾಡುವುದು ಸಾಧ್ಯವಿಲ್ಲ ಎಂಬುದನ್ನು ದಾಖಲಿಸಿ ಇಟ್ಟಿದ್ದೇನೆಎಂದರಂತೆ. ಇದು ಅವರ ಸಕಾರಾತ್ಮಕತೆಯ ಪ್ರತೀಕ.

ಬಲ್ಬನ್ನೇನೋ ಕಂಡು ಹಿಡಿದಿದ್ದಾಯಿತು. ಅದರ ತಯಾರಿಕೆ ಪ್ರಾರಂಭವಾಯಿತು. ಫ್ಯಾಕ್ಟರಿ ಶುರುವಾಗಿ ಬಲ್ಬುಗಳು ಮಾರುಕಟ್ಟೆಗೆ ಬರತೊಡಗಿದವು. ಎಡಿಸನ್ ಲೆಕ್ಕ ಹಾಕಿದರು. ಒಂದು ಬಲ್ಬು ತಯಾರಾಗಲು ಒಂದು ಡಾಲರ್ ಖರ್ಚಾಗುತ್ತಿತ್ತು. ಆದರೆ ಎಡಿಸನ್ ಬಲ್ಬನ್ನು ನಲವತ್ತು ಸೆಂಟಿಗೆ ಮಾರತೊಡಗಿದರು. ಅಂದರೆ ಪ್ರತಿಯೊಂದು ಬಲ್ಬಿನಿಂದಲೂ ಅರವತ್ತು ಸೆಂಟು ನಷ್ಟವಾಗುತ್ತಿತ್ತು. ಕಂಪೆನಿಯ ಜನ ಎಡಿಸನ್‌ರಿಗೆ ಬುದ್ಧಿ ಹೇಳಿ ಬೆಲೆಯನ್ನು ಒಂದು ಡಾಲರನ್ನಾದರೂ ಇಡಲು ಹೇಳಿದರು. ಆದರೆ ಅವರು ಕೇಳಲಿಲ್ಲ. ನಂತರ ಮತ್ತೆ ಬ್ಯಾಂಕಿಗೆ ಹೋಗಿ ಸಾಲ ಪಡೆದು ಮತ್ತಷ್ಟು ಹೆಚ್ಚು ಬಲ್ಬುಗಳನ್ನು ತಯಾರಿಸಿದರು. ತಯಾರಿಕೆ ಹೆಚ್ಚಾದ್ದರಿಂದ ಪ್ರತಿ ಬಲ್ಬಿನ ತಯಾರಿಕಾ ವೆಚ್ಚ ಕಡಿಮೆಯಾಗಿ ಅರವತ್ತು ಸೆಂಟಯಿತು. ಆದರೂ ಎಡಿಸನ್ ಅವುಗಳನ್ನು ನಲವತ್ತು ಸೆಂಟಿಗೇ ಮಾರತೊಡಗಿದರು.

ಈಗ ಬೃಹತ್ ಪ್ರಮಾಣದಲ್ಲಿ ಬಲ್ಬು ತಯಾರಿಸಲು ಮತ್ತೆ ಬ್ಯಾಂಕಿಗೆ ಸಾಲಕ್ಕಾಗಿ ಹೋದರು. ಅವರು ಇವನಿಗೆ ಸಾಲ ಕೊಡಲು ಸಾಧ್ಯವಿಲ್ಲವೆಂದರು, ‘ನಿಮಗೇನಾದರೂ ವ್ಯವಹಾರ ಜ್ಞಾನ ಇದೆಯಾ? ತಯಾರಿಕೆಯ ವೆಚ್ಚ ಒಂದು ಡಾಲರ್ ಇದ್ದಾಗ ನೀವು ನಲವತ್ತು ಸೆಂಟಿಗೆ ಮಾರಿದಿರಿ. ನಂತರ ತಯಾರಿಕೆ ವೆಚ್ಚ ಅರವತ್ತು ಸೆಂಟ್ ಆದಾಗಲೂ ನಲವತ್ತಕ್ಕೇ ಮಾರುತ್ತಿದ್ದೀರಿ. ನೀವು ದಿವಾಳಿಯಾಗಲೇಬೇಕು ಎಂದು ಹಟ ತೊಟ್ಟಂತೆ ಕಾಣುತ್ತದೆ. ಇಂಥ ಕಂಪೆನಿಗೆ ನಾವು ಧನಸಹಾಯ ಮಾಡಲಾರೆವುಎಂದು ಖಡಾಖಂಡಿತವಾಗಿ ಹೇಳಿದರು. ಎಡಿಸನ್ ಬಿಟ್ಟಾರೆಯೇ? ಅವರೊಂದಿಗೆ ವಾದ ಮಾಡಿದರು, ಬೇಡಿಕೊಂಡರು. ತನ್ನ ಕಾರ್ಖಾನೆಯನ್ನೇ ಒತ್ತೆ ಇಡುವುದಾಗಿ ಹೇಳಿದರು. ಅವರೂ ಒಪ್ಪಿ ಸಾಲ ನೀಡಿದರು.

ಈ ಬಾರಿ ಲಕ್ಷಾಂತರ ಬಲ್ಬುಗಳನ್ನು ತಯಾರಿಸಿದರು. ಈಗ ಬಲ್ಬಿನ ತಯಾರಿಕಾ ವೆಚ್ಚ ಇಪ್ಪತ್ತು ಸೆಂಟಾಯಿತು. ಆದರೂ ಎಡಿಸನ್ ನಲವತ್ತು ಸೆಂಟಿಗೇ ಮಾರಿದರು. ಅವರಿಗೆ ಎಷ್ಟು ಲಾಭ ಬಂತೆಂದರೆ ಹಿಂದಿನ ನಷ್ಟವೆಲ್ಲ ಕೊಚ್ಚಿಹೋಯಿತು.

ಜನ ಬೆರಗಾದರು, ಅದು ಏಕೆ ಮೊದಲು ಹಾಗೆ ನಷ್ಟದಲ್ಲಿ ಮಾರಿದಿರಿ ಎಂದು ಕೇಳಿದಾಗ ಎಡಿಸನ್ ಹೇಳಿದರು, ‘ಮೊದಲಿಗೇ ನಾನು ಬೆಲೆ ಹೆಚ್ಚಿಗಿಟ್ಟಿದ್ದರೆ ಬಹಳ ಜನ ಕೊಂಡುಕೊಳ್ಳುತ್ತಿರಲಿಲ್ಲ. ಅವರಿಗೆ ವಿದ್ಯುತ್ ಬಲ್ಬಿನ ಉಪಯುಕ್ತತೆಯ ಅರಿವಾದರೆ ಅವರು ಅದನ್ನು ಬಿಟ್ಟಿರುವುದು ಸಾಧ್ಯವಿಲ್ಲ. ಆಗ ನಾನು ಬೆಲೆ ಹೆಚ್ಚು ಮಾಡಿದರೂ ಯಾರೂ ಗೊಣಗದೇ ಕೊಂಡುಕೊಳ್ಳುತ್ತಾರೆ.ಇದು ಎಡಿಸನ್‌ರ ವ್ಯವಹಾರ ಚತುರತೆ. ಆಗ ಎಡಿಸನ್ನರು ಸ್ಥಾಪಿಸಿದ ಜನರಲ್ ಎಲೆಕ್ಟ್ರಿಕ್ ಕಂಪೆನಿ ಇಂದು ಪ್ರಪಂಚದಾದ್ಯಂತ ಅನೇಕ ಸಹಸ್ರ ಕೋಟಿ ಡಾಲರ್‌ಗಳ ವ್ಯವಹಾರ ನಡೆಸುತ್ತಿದೆ.

ಪರಿಶ್ರಮ, ಬುದ್ಧಿವಂತಿಕೆ, ವ್ಯವಹಾರ ಚಾತುರ್ಯ ಇವುಗಳ ಸಂಗಮವೇ ಯಶಸ್ಸು ಎನ್ನುವುದಕ್ಕೆ ಮಾದರಿ ಥಾಮಸ್ ಆಲ್ವಾ ಎಡಿಸನ್.
         
ಥಾಮಸ್ ಆಲ್ವ ಎಡಿಸನ್ ಗ್ರಾಮಫೋನ್, ವಿದ್ಯುದ್ದೀಪ, ಕೈನಟೊಸ್ಕೋಪ್, ಸಂಚಯನ ವಿದ್ಯುತ್ಕೋಶ, ಕಬ್ಬಿಣ ಅದುರು ಬೇರ್ಪಡಿಸುವ ಕಾಂತೀಯ ಸಲಕರಣೆ, ಮೊದಲಾದ ಅಮೂಲ್ಯ ವಸ್ತುಗಳನ್ನು ಜಗತ್ತಿಗೆ ನೀಡಿದ ಮಹಾವಿಜ್ಞಾನಿ.  ಅವರು  ಫೆಬ್ರುವರಿ 11. 1847ರಂದು ಅಮೆರಿಕದ ಮಿಲಾನ್ ಎಂಬ ಪಟ್ಟಣದಲ್ಲಿ ಜನಿಸಿದರು. ತಂದೆಯ ಹೆಸರು ಸಾಮ್ಯುಯೆಲ್ ಎಡಿಸನ್, ತಾಯಿ ನ್ಯಾನ್ಸಿ.

ಚಿಕ್ಕವನಿದ್ದಾಗ ಥಾಮಸ್ ಆಲ್ವ ಎಡಿಸನ್ ತುಂಬ ಕಿಡಿಗೇಡಿಆಗಿದ್ದ. ಅದಕ್ಕಾಗಿ ಎಲ್ಲರಿಂದಲೂ ಚೆನ್ನಾಗಿ ಬೈಸಿಕೊಳ್ಳುತ್ತಿದ್ದ, ಒಮ್ಮೊಮ್ಮೆ ಏಟೂ ತಿನ್ನುತ್ತಿದ್ದ. ಆದರೆ ಈತನ ಅಂದಿನ ಕಿಡಿಗೇಡಿತನದ ಹಿಂದೆ ಎಷ್ಟು ಅದ್ಭುತವಾದ ಪ್ರತಿಭಾಶಕ್ತಿ ರೂಪಗೊಳ್ಳುತ್ತಲಿತ್ತು ಎಂಬುದು ಬಹುಶಃ ಯಾರಿಗೂ ತಿಳಿದಿರಲಿಲ್ಲ. ಮೊಟ್ಟೆಗಳಿಗೆ ಕಾವು ಕೊಡಲು ಕೋಳಿಯೇ ಆಗ ಬೇಕೆ! ಮನುಷ್ಯರೂ ಕಾವು ಕೊಡಬಹುದಲ್ಲ ಎಂದು ಭಾವಿಸಿದ ಹುಡುಗ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಟ್ಟು ಮರಿಗಳು ಹೊರಬರುವುದನ್ನು ಎದುರು ನೋಡುತ್ತ ಕುಳಿತಿದ್ದ. ಮಿಚಿಗನ್ ಪ್ರಾಂತ್ಯದ ಪೋರ್ಟ್ ಹೂರಾನ್ ನಲ್ಲಿ ಶಾಲೆಯಲ್ಲಿ ಶಿಕ್ಷಕರಿಗೆ ಕಿರಿಕಿರಿಯಾಗುವಂಥ ಪ್ರಶ್ನೆಗಳನ್ನು ಕೇಳುವುದು, ಪಾಠದ ಕಡೆಗೆ ಲಕ್ಷ್ಯ ಕೊಡದೆ ಸ್ಲೇಟಿನ ಮೇಲೆ ಏನಾದರೂ ಗೀಚುವುದು ಮಾಡುತ್ತಿದ್ದ. ಆತನ ಶಿಕ್ಷಕಿ ಚೆನ್ನಾಗಿ ಬೈದ ಮೇಲೆ ಶಾಲೆಯನ್ನೇ ಬಿಟ್ಟ. ತಾಯಿಯೇ ಆತನಿಗೆ ಮನೆಯಲ್ಲಿ ಪಾಠ ಹೇಳಬೇಕಾಯಿತು. ಬಲೂನುಗಳಿಗೆ ಅನಿಲ ತುಂಬಿದಾಗ ಅವು ಹಾರುತ್ತವೆ, ಹಾಗೆಯೇ ಅನಿಲ ತುಂಬಿದ ಮನುಷ್ಯ ಹಾರಬಹುದೆ? ಎಡಿಸನ್ ಆ ಪ್ರಯೋಗವನ್ನೂ ಮಾಡಿದ! ಅನಿಲ ಹೊರಡಿಸುವ ಸೈಡ್ ಲಿಟ್ಸ್ ಪುಡಿಯನ್ನು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬನಿಗೆ ತಿನ್ನಿಸಿದ. ಆತ ಹಾರುವ ಬದಲು ಹೊಟ್ಟೆ ನೋವಾಗಿ ನೆಲದ ಮೇಲೆ ಬಿದ್ದ. ಥಾಮಸ್ ಎಡಿಸನ್ ಗೆ ಪುನಃ ಏಟು.

ಇನ್ನೂ ಹದಿನೈದು ವರ್ಷದವನಿದ್ದಾಗಲೇ ಎಡಿಸನ್ ದಿ ವೀಕ್ಲಿ ಹೆರಾಲ್ಡ್ಎಂಬ ತನ್ನದೇ ಆದ ಒಂದು ಸಾಪ್ತಾಹಿಕ ಪತ್ರಿಕೆಯನ್ನು ಪ್ರಕಟಿಸಿದ. ರೈಲು ಡಬ್ಬಿಯನ್ನೇ ಪ್ರಯೋಗಾಲಯ ಮಾಡಿಕೊಂಡು ಪ್ರಯೋಗಗಳನ್ನೂ ಮುಂದುವರಿಸಿದ. ಒಮ್ಮೆ ರಂಜಕದ ತುಂಡು ಬಿದ್ದು ರೈಲು ಡಬ್ಬಿಗೆ ಬೆಂಕಿ ಹೊತ್ತಿದಾಗ ಗಾರ್ಡ್‌ ಆತನ ಕಿವಿ ಹಿಡಿದು ಥಳಿಸಿದ. ಥಾಮಸ್ ನ ಕಿವಿಯೇ ಕಿವುಡಾಯಿತು. ಆದರೆ ರೈಲು ನಿಲ್ದಾಣದ ಅಧಿಕಾರಿಯೊಬ್ಬನ ಮಗು ಹಳಿಗೆ ಸಿಕ್ಕು ಸಾಯುವ ಸಂದರ್ಭದಲ್ಲಿ ಎಡಿಸನ್ ತನ್ನ ಪ್ರಾಣದ ಪರಿವೆಯಿಲ್ಲದೆ ಆ ಮಗುವನ್ನು ರಕ್ಷಿಸಿದ. ಅದನ್ನು ಮೆಚ್ಚಿದ ರೈಲು ನಿಲ್ದಾಣದ ಅಧಿಕಾರಿ ಆತನಿಗೆ ಟೆಲಿಗ್ರಾಫ್ ನಿರ್ವಹಣೆ, ಮೋರ್ಸ್ ಸಂಕೇತ ಕಲಿಸಿದ. ಥಾಮಸ್ ಆಲ್ವ ಎಡಿಸನ್ ಟೆಲಿಗ್ರಾಫ್ ನಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿದರು, ಫೋನೋಗ್ರಾಮ್ ಕಂಡು ಹಿಡಿದರು, ವಿದ್ಯುದ್ದೀಪಗಳನ್ನು ತಯಾರಿಸಿದರು,

ಚಲನಚಿತ್ರ ಕ್ಯಾಮರ, ಕೈನಟೊಸ್ಕೋಪ್, ಸಂಚಯನ ವಿದ್ಯುತ್ಕೋಶ, ಕಾಂತೀಯ ಸಲಕರಣೆಗಳು ಮೊದಲಾದವುಗಳನ್ನು ಮಾರುಕಟ್ಟೆಗೆ ತಂದರು. ಕಿಡಿಗೇಡಿಯಾಗಿದ್ದ ಹುಡುಗ ಈಗ "ಪವಾಡ ಪುರುಷ" ಆದರು.     1889ರಲ್ಲಿ ವಾಕ್ ಚಲನಚಿತ್ರಗಳನ್ನು ಎಡಿಸನ್ ಪ್ರದರ್ಶಿಸಿದರು.


ಈ ಮಹಾನ್ ಸಾಧಕ ಥಾಮಸ್ ಆಲ್ವ ಎಡಿಸನ್ ಅಕ್ಟೋಬರ್ 31, 1931ರಂದು ನಿಧನ ಹೊಂದಿದರು. 1956ರಲ್ಲಿ ಅಮೆರಿಕ ದೇಶವು ವೆಸ್ಟ್ ಆರೆಂಜ್ ನಲ್ಲಿನ ಎಡಿಸನ್ ಸಂಶೋಧನಾಲಯವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಿತು.  ಈ ಮಹಾನ್ ಸಾಧಕನಿಗೆ ನಮಿಸೋಣ.

Tag: Thomas Alva Edison

ಕಾಮೆಂಟ್‌ಗಳಿಲ್ಲ: