ಶನಿವಾರ, ಆಗಸ್ಟ್ 31, 2013

ಎಚ್.ಆರ್.ಲೀಲಾವತಿ

ಎಚ್.ಆರ್.ಲೀಲಾವತಿ

ಎಚ್. ಆರ್. ಲೀಲಾವತಿ ಕರ್ನಾಟಕ ಸುಗಮ ಸಂಗೀತ ಕಲಾವಿದರಲ್ಲಿ ಪ್ರಮುಖರು.  ಪದ್ಮಚರಣ್, ಲೀಲಾವತಿ, ಎಚ್. ಕೆ. ನಾರಾಯಣರನ್ನು ಸುಗಮ ಸಂಗೀತದ ತ್ರಿವಳಿಗಳೆಂದು ಕರೆಯಲಾಗುತ್ತಿತ್ತು.  ಪದ್ಮಚರಣರ ಶಿಷ್ಯೆಯಾಗಿ ಸುಗಮಸಂಗೀತ ಕ್ಷೇತ್ರಕ್ಕೆ ಬಂದು ಈ ಕ್ಷೇತ್ರದಲ್ಲಿ ಎಚ್. ಆರ್. ಲೀಲಾವತಿಯವರು ಅಪಾರ ಸಾಧನೆ ಮಾಡಿದ್ದಾರೆ.  ಗಾಯಕಿಯಾಗಿ, ಸಂಗೀತ ಸಂಯೋಜಕಿಯಾಗಿ, ಕವಯತ್ರಿಯಾಗಿ ಲೀಲಾವತಿಯವರು ನೀಡಿದ ಕೊಡುಗೆ ಮಹತ್ವವಾದದ್ದು.  

ಸಂಗೀತ ಸಂಸ್ಕಾರದ  ಅಠಾಣ ರಾಮಣ್ಣ ಹಾಗೂ ಗಾಯಕಿ ಜಯಲಕ್ಷ್ಮಮ್ಮನವರ ಮಗಳಾಗಿ  ಲೀಲಾವತಿಯವರು 1934ರ ಫೆಬ್ರವರಿ 8ರಂದು ಬೆಂಗಳೂರಿನಲ್ಲಿ ಜನಿಸಿದರು.   ತಾಯಿಯ ಜೋಗುಳದ ಹಾಡು, ಸಾಂಪ್ರದಾಯಿಕ ಗೀತೆಗಳು ಹೀಗೆ ವಿವಿಧ ಪ್ರಕಾರಗಳ ಸಂಗೀತದ ಅಲೆಗಳೊಂದಿಗೆ ಲೀಲಾವತಿ ಬಾಲ್ಯವನ್ನು ಕಳೆದರು.

ಪ್ರತಿದಿನ ಮನೆಯವರೊಂದಿಗೆ ಭಜನೆಗಳನ್ನು ಹಾಡಿ, ಸ್ತೋತ್ರಗಳನ್ನು ಪಠಿಸುವುದೆಂದರೆ ಲೀಲಾವತಿಯವರಿಗೆ ಅತೀವ  ಅಕ್ಕರೆ.  ಮನೆಯಲ್ಲಿ  ಗ್ರಾಮಫೋನಿನಲ್ಲಿ ಕೇಳುತ್ತಿದ್ದ ಹಿಂದೂಸ್ತಾನಿ ಶಾಸ್ತೀಯ ಸಂಗೀತ ಹಾಗೂ ಹಿಂದಿ ಚಲನ ಚಿತ್ರಗೀತೆಗಳು ಇವರ ಸಂಗೀತಾಭಿರುಚಿಯ ಮೇಲೆ ಮತ್ತಷ್ಟು ಪ್ರಭಾವ ಬೀರಿತ್ತು.  ಹೀಗೆ ಹಿಂದಿ ಚಿತ್ರಗೀತೆಗಳನ್ನು ಹಾಡುವ ಅಭಿರುಚಿ ಅವರಲ್ಲಿ ಮೊಳೆತಿತು. ಇವರ ಮಧುರವಾದ ಕಂಠ ಕೇಳುಗರನ್ನು ಮೋಡಿ ಮಾಡುತ್ತಿತ್ತು.  ಇದರಿಂದ ಸಂತಸಗೊಂಡ ತಂದೆ ತಾಯಿಯರು ಲೀಲಾವತಿಗಯವರಿಗೆ ಸಂಗೀತ ವಿದ್ವಾನ್ ರಾಮಸ್ವಾಮಿಗಳಿಂದ ಕರ್ನಾಟಕ ಶಾಸ್ತೀಯ ಸಂಗೀತ ಕಲಿಕೆಯ ವ್ಯವಸ್ಥೆ ಕಲ್ಪಿಸಿದರು.    ಮುಂದೆ ಟಿ ನರಸಿಪುರದಲ್ಲಿದ್ದಾಗ ವಿದ್ವಾನ್ ಸಂಪತ್  ನಂತರ ಮೈಸೂರಿನಲ್ಲಿ ಪುನಃ  ವಿದ್ವಾನ್ ಎನ್. ಚೆನ್ನಕೇಶವಯ್ಯನವರಲ್ಲಿ ಸಂಗೀತದ ಪಾಠಗಳ ಪರಿಣತಿ ಲೀಲಾವತಿ ಅವರಿಗೆ ಒದಗಿತು.   ಬಹಳಷ್ಟು ವರ್ಷ ಚೆನ್ನಕೇಶವಯ್ಯನವರೊಂದಿಗೆ ಸಂಗೀತ ಕಲಿತ ಲೀಲಾವತಿ ಅವರಿಗೆಇವರ ಒಡನಾಟದಿಂದ ಮೈಸೂರು ವಾಸುದೇವಾಚಾರ್ಯ, ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ, ಚಿಂತನಪಲ್ಲಿ ವೆಂಟಕರಾಯರು ಮುಂತಾದ ಸಂಗೀತದ ಘನವೇತ್ತರ ಆಶೀರ್ವಾದ ಕೂಡಾ ದೊರಕಿತು.

ಮೈಸೂರು ಆಕಾಶವಾಣಿ ಕೇಂದ್ರವು ಏರ್ಪಡಿಸಿದ್ದ ಗಾಯನ ಸ್ಪರ್ಧೆಯಲ್ಲಿ ಹಾಡಿ ಬಹುಮಾನ ಗೆದ್ದ ಲೀಲಾವತಿ ಬಹಳಷ್ಟು  ಹೆಸರಾದರು.  ಒಮ್ಮೆ ಬಾನುಲಿಯಲ್ಲಿ  ಪ್ರಸಾರವಾದ ಕೃಷ್ಣಮಾಚಾರ್ಯರ (ಪದ್ಮಚರಣ್ ಅವರ) ಸಂಯೋಜನೆಗೆ ಮನಸೋತು ನೇರ ಕೃಷ್ಣಮಾಚಾರ್ಯರಿಂದಲೇ ಸುಗಮ ಸಂಗೀತ ಕಲಿಯಲಾರಂಭಿಸಿದರು.  ಜೊತೆಗೆ ಅಕಾಶವಾಣಿಯ ವಿವಿಧ ಕಾರ್ಯಕ್ರಮಗಳಿಗೆ ಸಕ್ರಿಯವಾಗಿ ದನಿಗೂಡಿಸಲಾರಂಭಿಸಿದರು.  ಹೀಗೆ ಮೈಸೂರಿನ ಈ  ಗಾನ ಕೋಗಿಲೆಯ ಕಂಠವು ಶ್ರೋತೃಗಳಿಗೆ ಸುಪರಿಚಿತವಾಯಿತು.  ವಿವಿಧ ಭಾಷೆಗಳ ಗೀತೆಗಳನ್ನು ಹಾಡುತ್ತಿದ್ದ ಲೀಲಾವತಿಯವರಿಗೆ ಕನ್ನಡ ಗೀತೆಗಳನ್ನು ಹಾಡುವುದೆಂದರೆ ಎಲ್ಲಿಲ್ಲದ ಅಕ್ಕರೆ.  ಹಲವಾರು  ಸಂಘ ಸಂಸ್ಥೆಗಳಿಗೆ ಆಹ್ವಾನಿತರಾಗಿ ಹೋಗಿ ಹಾಡಿ ಮನೆಮಾತಾದರು. ಎರಡು ದಶಕಗಳಿಗೂ ಹೆಚ್ಚು  ಕಾಲ ಪದ್ಮಚರಣರ ಸಂಯೋಜನೆಗಳಿಗೆ ದನಿಯಾದ ಕೀರ್ತಿ ಲೀಲಾವತಿಯವರದು.   ಅವರು ಕೆಲವು ಚಲನಚಿತ್ರಗೀತೆಗಳಿಗೆ ಕೂಡಾ  ಹಿನ್ನಲೆ ಗಾಯಕಿಯಾಗಿದ್ದರು. 

ಇಷ್ಟೆಲ್ಲಾ ಸಾಧಿಸಿದರೂ ನಿಲ್ಲದ ಲೀಲಾವತಿಯವರು ಕೊಲ್ಕತ್ತೆಯ ರಾಬಿನ್ ರೇ ಅವರಲ್ಲಿ ರಬೀಂದ್ರ ಸಂಗೀತವನ್ನು ಕಲಿತು, ಕೊಲ್ಕತ್ತ, ರಾಂಚಿ, ಪಾಟ್ನಾ, ಚೆನ್ನೈ, ಗೌಹಾತಿಯ ಆಕಾಶವಾಣಿ ಕೇಂದ್ರಗಳಲ್ಲೂ ಹಾಡಿ ಅಪಾರ ಮೆಚ್ಚುಗೆ ಪಡೆದರು .

ಹಾಡುವುದಲ್ಲದೇ ಸಂಯೋಜನೆಗೂ ಹೆಸರಾಗಿದ್ದ ಲೀಲಾವತಿಯವರು 1976ರಲ್ಲಿ ಆಕಾಶವಾಣಿಯ ಸಂಗೀತ ಸಂಯೋಜಕರಾಗಿ  ನೇಮಕಗೊಂಡರು.  ಲೀಲಾವತಿಯವರು ತಮ್ಮ  ವಿಭಿನ್ನ ಶೈಲಿಯ ಸಂಯೋಜನೆಗಳಿಂದ ಎಲ್ಲ ಕನ್ನಡಿಗರ ಮನೆಮಾತಾದರು. ಹಾಗೆಯೇ ತಮ್ಮಲ್ಲಿರುವ ಕಲೆಯನ್ನು ಇತರರಿಗೆ ಬೋಧಿಸುವ ಸಲುವಾಗಿ ಆಸಕ್ತರಿಗೆ ಶಾಸ್ತ್ರೀಯ ಸಂಗೀತವನ್ನು ಕೂಡಾ ಹೇಳಿಕೊಡಲಾರಂಭಿಸಿದರು. ದಿನಕಳೆದಂತೆ ವಿದ್ಯಾರ್ಥಿಗಳ ಸಂಖ್ಯೆ ಬೆಳೆಯತೊಡಗಿತು. ಶಿಷ್ಯರ  ಆಸಕ್ತಿಗಾಗಿ ಭಾವಗೀತೆ, ವಚನ, ದೇವರನಾಮ, ಜನಪದ ಗೀತೆಗಳ ಪಾಠವೂ ಜರುಗತೊಡಗಿತು.  ವಿದ್ಯಾರ್ಥಿಗಳ ಬೆಳವಣಿಗೆಗಾಗಿ, ಉತ್ತಮ ವೇದಿಕೆಯ ನಿರ್ಮಾಣಕ್ಕಾಗಿ ಸುಗಮ ಸಂಗೀತ ಅಕಾಡೆಮಿ ಎಂಬ ಸಂಸ್ಥೆಯನ್ನು 1985ರಲ್ಲಿ  ಮೈಸೂರಿನಲ್ಲಿ ಹುಟ್ಟುಹಾಕಿದರು.  ಈ  ಸಂಸ್ಥೆ ಇಂದೂ ಕೂಡ ಸಂಗೀತ ಶಿಕ್ಷಣ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಹೆಮ್ಮೆಯ ಸಾಧನೆ ಮಾಡುತ್ತಿದೆಯಷ್ಟೇ ಅಲ್ಲದೆ ಸಾಂಸ್ಕೃತಿಕ ವಲಯದಲ್ಲಿನ ಹಿರಿಯರನ್ನು ಗೌರವಿಸುವ ಮಹತ್ವದ ಕೆಲಸವನ್ನು ಮಾಡುತ್ತಿದೆ.  ಹಲವು ಬಾರಿ ವಿದೇಶಗಳಲ್ಲಿ ಪರ್ಯಟನೆ ಕೈಗೊಂಡು ಕನ್ನಡದ ಕಂಪನ್ನು ಹರಿಸಿ ಬಂದ ಹೆಗ್ಗಳಿಕೆ ಕೂಡಾ ಲೀಲಾವತಿಯವರದ್ದಾಗಿದೆ.

ಸಂಗೀತವಷ್ಟೇ ಅಲ್ಲದೆ, ಸಾಹಿತ್ಯದೆಡೆಯೂ ಮುಖಮಾಡಿ ಕತೆ, ಕವನ, ಹಾಸ್ಯ ಲೇಖನ, ಚುಟುಕ, ಮಕ್ಕಳ ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವ ಲೀಲಾವತಿಯವರು ಹಲವಾರು ಕೃತಿಗಳನ್ನು ಪ್ರಕಟಿಸಿದ್ದು , ಈ ಸಾಧನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಲೀಲಾವತಿಯವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕರ್ನಾಟಕ ಕಲಾತಿಲಕ ಪ್ರಶಸ್ತಿ ನೀಡಿ ಗೌರವಿಸಿತು.  ಇದಲ್ಲದೆ ರಾಜ್ಯೋತ್ಸವ ಪ್ರಶಸ್ತಿ, ಸುಗಮ ಸಂಗೀತದ ಪರಮೋಚ್ಚ  ಸಂತ ಶಿಶುನಾಳ ಶರೀಫ ಪ್ರಶಸ್ತಿಗಳು ಈ ಮಹಾನ್ ಸಾಧಕರಿಗೆ ಸಂದಿವೆ.  ಬೆಂಗಳೂರು ಗಾಯನ ಸಮಾಜವು 1995ರ ವರ್ಷದ ಸಂಗೀತ ಸಮ್ಮೇಳನದ ವರ್ಷದ ಕಲಾವಿದೆ ಪ್ರಶಸ್ತಿಯನ್ನಿತ್ತು  ಲೀಲಾವತಿಯವರನ್ನು ಗೌರವಿಸಿರುವುದು ಶಾಸ್ತ್ರೀಯ ಸಂಗೀತದಲ್ಲಿನ ಅವರ ಸಾಧನೆಗಳಿಗೆ ಸಾಕ್ಷಿಯಾಗಿ ನಿಂತಿದೆ.   ಇವರ ಬಹುಮುಖ ಪ್ರತಿಭೆಯ ಸಾಧನೆಗೆ ಗೌರವ ಸಲ್ಲಿಸಲು ಸರ್ಕಾರ ಇವರನ್ನು ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತ್ತು.  ಈ ಅಕಾಡೆಮಿಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿ ಯುವ ಹಾಗೂ ಹಿರಿಯ ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸಿದ ಕೀರ್ತಿ ಲೀಲಾವತಿಯವರದು.  ಅಕಾಡೆಮಿಯ ಕಲಾಚೇತನದಲ್ಲಿ ಎಚ್. ಆರ್. ಲೀಲಾವತಿ ಅವರು ತಮ್ಮ ಕಾಲದ ಶ್ರೇಷ್ಠ ಸುಗಮಸಂಗೀತಕಾರರನ್ನು ಪರಿಚಯಿಸಿರುವ ರೀತಿ ಸಹಾ ಮನಮುಟ್ಟುವಂತಿದ್ದು ಅವರ ಬರವಣಿಗೆಯ ಕೌಶಲಕ್ಕೆ ಮತ್ತು ಮತ್ಸರರಹಿತ ಸ್ನೇಹಪೂರ್ಣ ನಡೆನುಡಿಗಳಿಗೆ ಸಾಕ್ಷಿ ಎಂಬಂತಿವೆ.  

ಇವರು ಸಂಯೋಜಿಸಿ ಹಾಡಿರುವ ಧ್ವನಿ ಸುರುಳಿಗಳಲ್ಲಿ ಪ್ರಸಿದ್ಧವಾದ ಕೆಲವು ಗೀತೆಗಳನ್ನು ನೆನೆಯುವುದಾದರೆ  ನೀ ಬರುವ ದಾರಿಯಲ್ಲಿ, ನೆನಪಿನ ದೋಣಿಯಲ್ಲಿ ಗೀತೆಗಳು ನೆನಪಿಗೆ ಬರುತ್ತವೆ.  ಉಡುಗಣವೇಷ್ಠಿತ ಚಂದ್ರ ಸುಶೋಭಿತ. ಗೀತೆಯನ್ನು ಲೀಲಾವತಿಯವರ ಕಂಠಸಿರಿಯಲ್ಲಿ  ಕೇಳುವುದೇ ಒಂದು ವಿಶಿಷ್ಟ ಅನುಭವ.  ರತ್ನಮಾಲಾ ಪ್ರಕಾಶರು ಹಾಡಿರುವ ಬಿ.ಎಂ. ಶ್ರೀ ಅವರ  ಕರುಣಾಳು ಬಾ ಬೆಳಕೆಗೀತೆ  ಲೀಲಾವತಿಯವರ ಸಂಯೋಜನೆಯಲ್ಲಿ ಹಲವು ದಶಕಗಳಿಂದ ಕನ್ನಡಿಗರ ಹೃದಯವನ್ನು ಬೆಳಗುತ್ತಿದೆ. 

ಈ ಹಿರಿಯ ಸಾಧಕರಾದ ಎಚ್. ಆರ್. ಲೀಲಾವತಿಯವರಿಗೆ ಜನ್ಮದಿನದ ಹಾರ್ದಿಕ ಶುಭ ಹಾರೈಕೆಗಳು. 


(ಮಾಹಿತಿ ಕೃಪೆ:www.sugamasangeeta.com)

Tag: H. R. Leelavati

ಕಾಮೆಂಟ್‌ಗಳಿಲ್ಲ: