ಶನಿವಾರ, ಆಗಸ್ಟ್ 31, 2013

ಆಲ್ಬರ್ಟ್ ಐನ್ ಸ್ಟೈನ್

ಆಲ್ಬರ್ಟ್ ಐನ್ ಸ್ಟೈನ್

ಮಾರ್ಚ್ 14 ಈ ವಿಶ್ವಕಂಡ ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಅವರ ಜನ್ಮದಿನ.  ಆಲ್ಬರ್ಟ್ ಐನ್ ಸ್ಟೈನರು ಮಾರ್ಚ್ 14, 1879ರಂದು ಜರ್ಮನಿಯ ಉರ್ಟೆಂಬರಿನ ಉಲ್ಮ್ ಎಂಬಲ್ಲಿ ಜನಿಸಿದರು.  ಐನ್ ಸ್ಟೈನರ ಕುಟುಂಬವು ಅಲ್ಲಲ್ಲಿ  ವಲಸೆ ಹೋದ ಪರಿಣಾಮವಾಗಿ ಅವರ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸವು ಲಿಯೋಪಾಲ್ಡ್   ಜಿಮ್ನಾಸಿಯಂ, ಇಟಲಿಯ ಆರಾವ್ ಮುಂತಾದೆಡೆಗಳಲ್ಲಿ ನೆರವೇರಿತು.  ಶಾಲೆಯ ಜೀವನ ಅವರಿಗೆ ಇರುಸು ಮುರುಸಾಗಿ ಶಾಲೆಯಿಂದ ಹೊರಬಂದು ಹಲವಾರು ವರ್ಷ ಶಾಲೆಗೇ ಹೋಗದೆ ಮನೆಯಲ್ಲಿದ್ದುಬಿಟ್ಟರು.  ಪ್ರತಿಯೊಂದನ್ನೂ ಕುರಿತು ಅಂತರ್ಮುಖವಾಗಿ ಚಿಂತಿಸುತ್ತಿದ್ದ ಆತನನ್ನು ದಡ್ಡ ಎಂದು ಕೆಲವು ಶಿಕ್ಷಕರೂ, ಎಲ್ಲವನ್ನೂ ಪ್ರಶ್ನಿಸುವ ವಿಚಿತ್ರದ ಪ್ರಾಣಿ ಎಂದೂ ಕೆಲವರು ಭಾವಿಸಿ ಆತನನ್ನು ಸಾಮಾನ್ಯರ ಪರಿಧಿಯಿಂದ ಹೊರಗಿಟ್ಟುಬಿಟ್ಟಿದ್ದರು.   ಹೋದೆಡೆಗಳಲ್ಲಿ ಯೆಹೂದಿಯೆಂಬ ತಿರಸ್ಕಾರವೂ ಅವರನ್ನು ಎದುರುಗೊಳ್ಳುತ್ತಿತ್ತು. 

ಹೀಗೆ ಶಾಲೆಯ ಬಗ್ಗೆ ದ್ವೇಷ ಮೂಡಿಸಿಕೊಂಡಿದ್ದ ಐನ್ ಸ್ಟೈನ್ತಮ್ಮ  ಚಿಕ್ಕಪ್ಪನವರ ಬಳಿ ನಾನು ಜ್ಯಾಮಿತಿ ಮತ್ತು ಬೀಜಗಣಿತವನ್ನು ದ್ವೇಷಿಸುತ್ತೇನೆ ಎಂದಾಗ, ಅವರು ಆತನಿಗೆ ಈ ವಿಷಯಗಳಲ್ಲಿ ಅಡಗಿರುವ ಸ್ವಾರಸ್ಯವನ್ನು  ರಸವತ್ತಾಗಿ ವರ್ಣಿಸಿ ಐನ್ ಸ್ಟೈನ್ ಅವರಲ್ಲಿ ಆ ಕುರಿತಾಗಿ ಅಪಾರವಾದ   ಆಸಕ್ತಿ ಹುಟ್ಟುವಲ್ಲಿ ಪ್ರೇರೇಪಣೆ ಹುಟ್ಟಿಸಿದರಂತೆ.   ಮುಂದೆ ಅವರ ವಿದ್ಯಾಭ್ಯಾಸವು  ಸ್ವಿಟ್ಜರ್ಲ್ಯಾಂಡಿನಲ್ಲಿನ  ಜ್ಯೂರಿಚ್ ಪ್ರದೇಶದ   ಸ್ವಿಸ್ ಫೆಡೆರಲ್ ಪಾಲಿಟೆಕ್ನಿಕ್  ಶಾಲೆಯಲ್ಲಿ ನಡೆದು,   ಅವರೊಬ್ಬ ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರದ  ಶಿಕ್ಷಕರಾಗಿ ರೂಪುಗೊಂಡರು.  1901ರ ವರ್ಷದಲ್ಲಿ ಡಿಪ್ಲೋಮಾ ಪದವಿ ಪಡೆದ ಐನ್ ಸ್ಟೈನರು ಸ್ವಿಸ್ ರಾಷ್ಟ್ರೀಯತೆಯನ್ನು ಪಡೆದರು.  ಡಾಕ್ಟರೇಟ್ ಪದವಿಗಾಗಿ ಅನಿಲಗಳ ಚಲನ ಸಿದ್ಧಾಂತದ ಬಗ್ಗೆ ಒಂದು ಮಹಾ ಪ್ರಬಂಧವನ್ನು ಬರೆದು ಜ್ಯೂರಿಚ್ ವಿಶ್ವವಿದ್ಯಾಲಯಕ್ಕೆ ಒಪ್ಪಿಸಿದರು.  ಮುಂದೆ ವಿಶ್ವದ ಮಹಾನ್ ಮೇಧಾವಿಯೆನಿಸಿದ ಈ ಮಹಾನುಭಾವರಿಗೆ ಎಷ್ಟು ಕಷ್ಟಪಟ್ಟರೂ ಶಿಕ್ಷಕ ಹುದ್ಧೆ ಮಾತ್ರ ಸಿಗಲೇ ಇಲ್ಲ.  ಹಾಗಾಗಿ ಸಿಕ್ಕಿದ್ದಷ್ಟೇ ಲಾಭ ಎಂದುಕೊಂಡು ಸ್ವಿಸ್ ಪೇಟೆಂಟ್ ಕಚೇರಿಯಲ್ಲಿ ಸಹಾಯಕ ತಂತ್ರಜ್ಞನಾಗಿ ಕೆಲಸಕ್ಕೆ ಸೇರಿದರು. 

ಐನ್ ಸ್ಟೈನ್ ತಾವು ಕಾರ್ಯನಿರ್ವಹಿಸುತ್ತಿದ್ದ ಪೇಟೆಂಟ್ ಕಚೇರಿಯ ಕಾರ್ಯಗಳ  ಮಧ್ಯೆ  ತಮಗೆ ದೊರೆತ ಬಿಡುವಿನ ವೇಳೆಯಲ್ಲಿ ಅದ್ಬುತವಾದ ಕೆಲಸಗಳನ್ನು ಮಾಡಿದರು.  1908ರ ವರ್ಷದಲ್ಲಿ ಅವರು ಬರ್ನೆ ಎಂಬಲ್ಲಿ  ಖಾಸಗಿ ಉಪಾಧ್ಯಾಯನಾಗಿ ಕೆಲಸ ಮಾಡತೊಡಗಿದರು.  1909ರ ವರ್ಷದಲ್ಲಿ ಜ್ಯೂರಿಚ್ನಲ್ಲಿ ಹಾಗೂ 1911ರಲ್ಲಿ ಪ್ರೇಗ್ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರೆನಿಸಿದ ಅವರು  ಮುಂಬಂದ  ವರ್ಷದಲ್ಲಿ ಅದೇ ಹುದ್ಧೆಯನ್ನು ಜ್ಯೂರಿಚ್ನಲ್ಲಿ ಪಡೆದರು.  1914ರಲ್ಲಿ ಅವರು ಕೈಸರ್ ವಿಹೆಲ್ಮ್ ಫಿಸಿಕಲ್ ಇನ್ಸ್ಟಿಟ್ಯೂಟ್ ಸಂಸ್ಥೆಯ ನಿರ್ದೇಶಕರಾಗಿಯೂಮುಂದೆ ಜರ್ಮನಿಗೆ ಮರಳಿ ಬರ್ಲಿನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿಯೂ ನೇಮಕಗೊಂಡರು. 

ಐನ್ ಸ್ಟೈನರು ಭೌತಶಾಸ್ತ್ರದ ವಿವಿಧ ಸಮಸ್ಯೆಗಳ ಬಗ್ಗೆ ತೀವ್ರವಾದ ಚಿಂತನೆಯನ್ನು ನಡೆಸಿ ಅವುಗಳಿಗೆಲ್ಲಾ ಪರಿಹಾರ ಕಂಡುಹುಡುಕುವುದರಲ್ಲಿ ತೀವ್ರ ರೀತಿಯಲ್ಲಿ ಮಗ್ನರಾದರು.  ಈ ನಿಟ್ಟಿನಲ್ಲಿ ತಮ್ಮ ಗುರಿಸಾಧನೆಗಾಗಿ ವಿವಿಧ ಹಂತಗಳ ಕಾರ್ಯಸೂಚಿಯನ್ನು ಸ್ವಯಂ ವಿಧಿಸಿಕೊಂಡ ಐನ್ ಸ್ಟೈನರು ತಾವು ಪ್ರತಿಯೊಂದು ಹಂತದಲ್ಲಿ ಪಡೆದ ಯಶಸ್ಸನ್ನೂ ಮುಂದಿನ ಸಾಧನೆಗಳ ಮೆಟ್ಟಿಲುಗಳನ್ನಾಗಿಸಿಕೊಂಡರು.  ಸಾಪೇಕ್ಷತಾ ಸಿದ್ಧಾಂತದ ಸರಿಯಾದ ನಿರೂಪಣೆಯು ಗುರುತ್ವಾಕರ್ಷಣ ಸಿದ್ಧಾಂತವನ್ನೂ ನಿರೂಪಿಸುತ್ತದೆ ಎಂದು ನಂಬಿದ್ದ ಐನ್ ಸ್ಟೈನರು 1916ರ ವರ್ಷದಲ್ಲಿ ತಮ್ಮ ಜನರಲ್ ಥಿಯರಿ ಆಫ್ ರಿಲೇಟಿವಿಟಿಎಂಬ ಸಾಪೇಕ್ಷ ಸಿದ್ಧಾಂತದ ಕುರಿತಾದ ಪ್ರಬಂಧವನ್ನು ಪ್ರಕಟಪಡಿಸಿದರು.  ಅದೇ ಸಮಯದಲ್ಲಿ ಅವರು ಲೋಹಗಳ ಮೇಲೆ ಬೆಳಕು ಬಿದ್ದಾಗ ಲೋಹದ ಮೈಯಿಂದ ಹೊರಬೀಳುವ ಎಲೆಕ್ಟ್ರಾನುಗಳ ಅಧ್ಯಯನ ಶಾಸ್ತ್ರವೆನಿಸಿರುವ ದ್ಯುತಿ ವಿದ್ಯುತ್ ಪರಿಣಾಮ ಮತ್ತು ಆ ಕುರಿತ ಮಾಹಿತಿ ಅಧ್ಯಯನ ಮಾನದಂಡಗಳಲ್ಲಿರುವ ಸಮಸ್ಯೆಗಳ ಕುರಿತೂ ಬೆಳಕು ಚೆಲ್ಲಿದರು.  

1905ರಲ್ಲಿ ಐನ್ ಸ್ಟೈನ್ ಅಣುಗಳ ಚಲನೆಯ ಬಗ್ಗೆ ಕ್ರಮವಾಗಿ ಲೇಖನಗಳನ್ನು ಬರೆದರು.  ಅದರಲ್ಲಿ ಪ್ರಸಿದ್ಧವಾದ ಒಂದು ಸಂಶೋಧನಾ ಪ್ರಬಂಧ ಬ್ರೌನಿಯನ್ ಚಲನೆಯ ಕುರಿತಾಗಿತ್ತು.  ಅದರಲ್ಲಿ ಅವರು ಸೂಕ್ಷ್ಮದರ್ಶಕದ ಮೂಲಕ ಕಾಣಿಸುವ ಸಣ್ಣ ಕಣಗಳು ದ್ರವದಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುವುದನ್ನು ವಿವರಿಸಿದರು.  ಇಂತಹ ಕಣಕ್ಕೆ ಎಲ್ಲ ದಿಕ್ಕುಗಳಿಂದ ಡಿಕ್ಕಿಯಾಗುವ ದ್ರವದ ಅಣುಗಳು ದ್ರವದಲ್ಲಿರುವ ಈ ಕಣವನ್ನು ಎದ್ವಾ ತದ್ವಾ ಅಲೆಯುವಂತೆ ಮಾಡುತ್ತವೆ ಎಂದು ಐನ್ ಸ್ಟೈನ್ ತೋರಿಸಿಕೊಟ್ಟರು.  ಈ ರೀತಿಯ ಚಲನೆಯನ್ನು ಐನ್ ಸ್ಟೈನರಿಗಿಂತ  ಮೊದಲೇ ರಾಬರ್ಟ್ ಬ್ರೌನ್ ಎಂಬ ಸ್ಕಾಟ್ಲೆಂಡಿನ ಸಸ್ಯ ವಿಜ್ಞಾನಿ ಗಮನಿಸಿದ್ದರು.  ಹೀಗಾಗಿಯೇ ಅದಕ್ಕೆ ಬ್ರೌನಿಯನ್ ಚಲನೆ ಎಂಬ ಹೆಸರು ಬಂತು.  ಆದರೆ ಈ ರೀತಿಯ ಚಲನೆಗೆ ಸ್ಪಷ್ಟವಾದ ಕಾರಣವನ್ನು ನೀಡಿದ್ದು ಮಾತ್ರ ಐನ್ ಸ್ಟೈನ್.  ಇಷ್ಟು ಮಾತ್ರವಲ್ಲದೆ ಅಣುಗಳ ಡಿಕ್ಕಿಯಿಂದ ಗೊತ್ತು ಗುರಿಯಿಲ್ಲದೆ ಕಣವೊಂದು ಸದಾ ಅತ್ತಿತ್ತ ಚಲಿಸುತ್ತದೆ ಎಂದಿಟ್ಟುಕೊಂಡರೆ ನಿರ್ದಿಷ್ಟ ಅವಧಿಯ ಅನಂತರ ಈ ಕಣ ತನ್ನ ಆರಂಭದ ಸ್ಥಾನದಿಂದ ನಿಶ್ಚಿತ ದೂರಕ್ಕೆ ಸರಿಯುವ ಸಂಭವನೀಯತೆಯನ್ನು ಸಹಾ ಐನ್ ಸ್ಟೈನ್ ಲೆಕ್ಕಹಾಕಿದರು.  ಅವರು ಪಡೆದ ಈ ಸಮೀಕರಣದಿಂದ ಅಣುಗಳ ಗಾತ್ರವನ್ನು ಅಂದಾಜು ಮಾಡಲು ಸಾಧ್ಯವಾಯಿತು.  ಅಣು-ಪರಮಾಣುಗಳ ಅಸ್ತಿತ್ವದ ಬಗ್ಗೆ ಅನೇಕ ವಿಜ್ಞಾನಿಗಳ ಸಂದೇಹವನ್ನು ಐನ್ ಸ್ಟೈನ್ ನೀಡಿದ ಈ ವಿವರಣೆ ದೂರಮಾಡಿತು. 

ಐನ್ ಸ್ಟೈನರ ಮತ್ತೊಂದು ಪ್ರಮುಖ ಸಾಧನೆ ನಡೆದದ್ದು ದ್ಯುತಿ ವಿದ್ಯುತ್ ಪರಿಣಾಮ ಕ್ಷೇತ್ರದಲ್ಲಿ.  ಕೆಲವು ಲೋಹಗಳ ಮೇಲೆ ಬೆಳಕು ಬಿದ್ದಾಗ ಇಲೆಕ್ಟ್ರಾನುಗಳು ಲೋಹದ ಮೈಯಿಂದ ಹೊರಬೀಳುತ್ತವೆ.  ಇದನ್ನು ದ್ಯುತಿ ವಿದ್ಯುತ್ ಪರಿಣಾಮ ಎನ್ನುತ್ತಾರೆ.  1900ನೆಯ ವರ್ಷ ಜರ್ಮನಿಯ ಮಾಕ್ಸ್ ಪ್ಲಾಂಕ್ ಎಂಬ ಭೌತ ವಿಜ್ಞಾನಿ ಬೆಳಕನ್ನು ವಸ್ತುವೊಂದು ಹೊರ ಸೂಸುವುದಾಗಲೀ ಹೀರುವುದಾಗಲೀ ಶಕ್ತಿಯ ಬೇರೆ ಬೇರೆ ತುಣುಕುಗಳಾಗಿ ಮಾತ್ರಎಂಬ ಊಹೆಯನ್ನು ಮುಂದಿಟ್ಟುಇಂಥಹ ತುಣುಕನ್ನು ಕ್ವಾಂಟಮ್ಎಂದು ಕರೆದರು.    ಇದು ಕ್ವಾಂಟಮ್ ಸಿದ್ಧಾಂತ ಎಂದೇ ಹೆಸರು ಪಡೆಯಿತು.  ಈ ಸಿದ್ಧಾಂತದಲ್ಲಿ ಪ್ಲಾಂಕ್ ಒಂದು ನಿಬಂಧನೆ ವ್ಯಕ್ತಪಡಿಸಿದ್ದರು.  ಅದೆಂದರೆ ಹೀರುವ ಮತ್ತು ಹೊರ ಸೂಸುವ ಸಂದರ್ಭಗಳನ್ನು ಬಿಟ್ಟರೆ ಉಳಿದ ಎಲ್ಲ ಸನ್ನಿವೇಶಗಳಲ್ಲೂ ಬೆಳಕು ತರಂಗ ರೂಪದಲ್ಲಿಯೇ ಇರುತ್ತದೆಎಂದು ಪ್ಲಾಂಕ್ ಪ್ರತಿಪಾದಿಸಿದ್ದರು.  ಈ ಬಗ್ಗೆ ಸಂಶೋಧನೆ ನಡೆಸಿದ  ಐನ್ ಸ್ಟೈನ್ ಶಕ್ತಿಯ ತುಣುಕುಗಳಂತಿರುವ ಬೆಳಕು ಎಲ್ಲ ಸಂದರ್ಭಗಳಲ್ಲೂ ಕಣಗಳಂತೆ ವರ್ತಿಸುತ್ತವೆಎಂದು ಸೂಚಿಸಿದರು.  ಆ ಬೆಳಕಿನ ಕಣಗಳು ಮುಂದೆ ಫೋಟಾನ್ ಎಂದೇ ಹೆಸರು ಪಡೆಯಿತು.  ಫೋಟಾನುಗಳು ಪದಾರ್ಥದ ಪರಮಾಣುಗಳೊಂದಿಗೆ ಡಿಕ್ಕಿಯಾಗುತ್ತವೆ, ಪ್ರತಿಯೊಂದು ಪರಮಾಣುವಿನಲ್ಲೂ ಎಲೆಕ್ಟ್ರಾನುಗಳಿವೆಒಂದೊಂದು ಫೋಟಾನಿನ ಶಕ್ತಿಯ ವಿನಿಮಯದಿಂದ ಒಂದೊಂದು ಎಲೆಕ್ಟ್ರಾನ್ ಬಿಡುಗಡೆಯಾಗುತ್ತದೆ.  ಒಂದೊಂದು ಪದಾರ್ಥದಿಂದ ಇಲೆಕ್ಟ್ರಾನ್ ಬಿಡುಗಡೆಯಾಗಲು ಕನಿಷ್ಠ, ಶಕ್ತಿ ಪ್ಲಾಂಕ್ ಸ್ಥಿರಾಂಕ, ಮತ್ತು ಆವೃತ್ತಿಗಳ ಗುಣಲಬ್ಧಕ್ಕೆ ಸಮ ಅಂದರೆ E=hg ಎಂದು ತೋರಿಸಿಕೊಟ್ಟರು.  ಈ ಮಹತ್ವದ ಈ ಸಂಶೋಧನೆಗಾಗಿ ಐನ್ ಸ್ಟೈನ್ 1921ರ ಭೌತಶಾಸ್ತ್ರದ ನೊಬೆಲ್ ಪಾರಿತೋಷಕವನ್ನು ಪಡೆದರು.  ಆದರೆ ಪ್ರಶಸ್ತಿ ಸ್ವೀಕರಿಸಲು ಅವರು ಯೂರೋಪಿನಲ್ಲಿರಲಿಲ್ಲ.  ಅವರಿಗೆ ಬಂದ ಹಣವನ್ನೂ ವಿಚ್ಚೇದನಗೊಂಡಿದ್ದ ಅವರ ಪತ್ನಿಗೆ ಸಲ್ಲುವಂತಹ ಒಪ್ಪಂದವನ್ನು ಮಾಡಿಕೊಂಡಿದ್ದರು.  

ಐನ್ ಸ್ಟೈನ್ ಅವರು ನೀಡಿದ ದ್ಯುತಿ ವಿದ್ಯುತ್ ಪರಿಣಾಮವನ್ನು ಬಳಸುವ ಸಾಧನಗಳು ವ್ಯಾಪಕಗೊಂಡವು.  ಮಳಿಗೆಯನ್ನು ಸಮೀಪಿಸುವಾಗ ತಮ್ಮಷ್ಟಕ್ಕೇ ತೆರೆದುಕೊಳ್ಳುವ ಬಾಗಿಲುಗಳು, ಕತ್ತಲಾಗುತ್ತಿರುವಂತೆ ಬೀದಿ ದೀಪಗಳನ್ನು ಪ್ರಕಾಶಿಸುವ ಸಾಧನಗಳು, ಕ್ಯಾಮರಾಗಳಲ್ಲಿ ಎಕ್ಸ್ ಪೋಷರ್ ಅವಧಿಯ ನಿಯಂತ್ರಣ, ದುರ್ಬಲವಾದ ಬೆಳಕಿನ ಸಂಜ್ಞೆಯನ್ನು ಬಲಗೊಳಿಸುವುದು, ಸೌರಶಕ್ತಿಯಿಂದ ವಿದ್ಯುತ್ತನ್ನು ಪಡೆಯುವುದು, ಉಪಗ್ರಹ ಗ್ರಹಶೋಧಕ ರೋವರ್ ವಾಹನಗಳಿಗೆ ಶಕ್ತಿ ಸರಬರಾಜು ಇಂಥ ಅನೇಕಾನೇಕ ದಿನನಿತ್ಯದ ಕೆಲಸಗಳಲ್ಲಿ ದ್ಯುತಿ ವಿದ್ಯುತ್ ಪರಿಣಾಮದ ಬಳಕೆಯಾಗುತ್ತಿದೆ.  

ನ್ಯೂಟನ್ ವಿಜ್ಞಾನಿಯ ತತ್ವಗಳಲ್ಲಿನ ಅಪೂರ್ಣತೆಗಳ ಬಗೆಗೆ ಚಿಂತಿಸಿದ ಐನ್ ಸ್ಟೈನರು ನ್ಯೂಟನ್ನನ ಆಯಸ್ಕಾಂತೀಯ ತತ್ವಗಳಿಗೆ ಪೂರಕವಾದ ಯಾಂತ್ರಿಕ ತತ್ವಗಳ ಸಹಯೋಗದಲ್ಲಿ ಹೊಸದೊಂದು ಪ್ರಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡರು.  ಇದು ಐನ್ ಸ್ಟೈನರ ಥಿಯರಿ ಆಫ್ ರಿಲೇಟಿವಿಟಿ ಎಂಬ ಸಾಪೇಕ್ಷತಾ ಸಿದ್ಧಾಂತಕ್ಕೆ ಮುನ್ನುಡಿ ಎನಿಸಿತು.  ಸ್ಟಾಟಿಸ್ಟಿಕಲ್ ಮೆಕಾನಿಕ್ಸ್ ಎಂದು ಕರೆಯಲ್ಪಡುವ ಸಂಖ್ಯಾಮಾಹಿತಿ ಶಾಸ್ತ್ರದಲ್ಲಿನ ಮಾನದಂಡಗಳಲ್ಲಿ ಎದುರಾಗುವ ಸೂಕ್ಷ್ಮತರ ತೊಡರುಗಳನ್ನು ಐನ್ ಸ್ಟೈನರು ಸುದೀರ್ಘವಾಗಿ ಅಭ್ಯಸಿಸಿದರು. 

ನ್ಯೂಟನ್ನರ ಎರಡು ಸಿದ್ಧಾಂತಗಳ ಬಗ್ಗೆ ಐನ್ ಸ್ಟೈನ್ ವಿಭಿನ್ನ ನಿಲುವು ತಾಳಿದ್ದರು..  ನ್ಯೂಟನ್ ಅವರ ಪ್ರಕಾರ ಸಮಯಕ್ಕೆ ನಿರ್ಬಂಧವಿಲ್ಲ.  ಅದು ಇಡೀ ವಿಶ್ವದಲ್ಲಿ ಒಂದೇ ರೀತಿಯಾಗಿರುತ್ತದೆ.  ಇದರಿಂದಾಗಿ ಏಕಕಾಲದಲ್ಲಿ ಬೇರೆ ಬೇರೆ ಘಟನೆಗಳು ನಡೆಯಬಹುದು.  ಆದರೆ ಐನ್ ಸ್ಟೈನರ ಪ್ರಕಾರ ಸಮಯ ಎನ್ನುವುದು ಘಟನೆಯ ಕಾಲಮಾನದ ಮೇಲೆ ಅವಲಂಬಿತವಾಗಿಲ್ಲ.  ಬದಲಾಗಿ ಯಾವ ಬಿಂದುವಿನಲ್ಲಿ ಅಳೆಯಲ್ಪಟ್ಟಿದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ತೋರಿಸಿದರು. 

ಎರಡನೆಯದು ಪ್ರದೇಶ.  ನ್ಯೂಟನ್ನರ ಪ್ರಕಾರ ವಿಶ್ವವನ್ನು ಕೇಂದ್ರವಾಗಿಟ್ಟುಕೊಂಡರೆ ಒಂದು ವಸ್ತುವಿನ ಅಂತರಿಕ ಕ್ರಿಯೆಗಳ ಬದಲಾವಣೆ ಆ ವಸ್ತುವಿನ ಸ್ಥಾನ ಪಲ್ಲಟನೆ ಮಾಡುತ್ತದೆ.  ಆದರೆ ಐನ್ ಸ್ಟೈನ್ ಪ್ರಕಾರ ಪ್ರದೇಶವು ವಸ್ತುವಿನ ವರ್ತನೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.  ಅದು ಅವುಗಳ ತೂಕಗಳ ನಡುವಿನ ಆಂತರಿಕ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ.  ಈ ಚಿಂತನೆಗಳ ಆಧಾರದಲ್ಲಿ ಅವರು ಸೃಷ್ಟಿಸಿದ ಸಿದ್ಧಾಂತವೆ ಸಾಪೇಕ್ಷ ಸಿದ್ಧಾಂತಎಂಬ ಹೆಸರು ಪಡೆಯಿತು.  

ಮುಂದೆ ಐನ್ ಸ್ಟೈನ್ ಹೊಸ ಸಾಪೇಕ್ಷ ಸಿದ್ಧಾಂತವನ್ನು ಮಂಡಿಸಿದರು.  ಅದರಲ್ಲಿ ಅವರು ನಿರಪೇಕ್ಷ ಚಲನೆ ಯನ್ನು ವಿವರಿಸಿದರು.  ಅದೇನೆಂದರೆ ಒಂದು ವಸ್ತುವು ಸಂಬಂಧಿತ ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಾನಪಲ್ಲಟಗೊಳ್ಳುವುದು.   ಉದಾಹರಣೆಗೆ, ಒಂದು ಹಡಗಿನಲ್ಲಿರುವ ವಸ್ತು ಹಡಗಿನೊಂದಿಗೆ ಚಲಿಸುತ್ತಿರುತ್ತದೆ.  ಭೂಮಿ ವಿಶ್ರಾಂತಿಯಲ್ಲಿದ್ದು, ಹಡಗು ಚಲಿಸುತ್ತಿದ್ದರೆ ವಸ್ತುವು ಹಡಗಿನ ವೇಗದೊಂದಿಗೆ ಚಲಿಸುತ್ತಿರುತ್ತದೆ.  ಒಂದು ವೇಳೆ ಭೂಮಿಯೂ ಚಲಿಸುತ್ತಿದ್ದರೆ, ವಸ್ತು ಭಾಗಶಃ ಭೂಮಿಯ ಚಾಲನೆ ಹಾಗೂ ಭಾಗಶಃ ಹಡಗಿನ ಚಾಲನೆಯ ವೇಗದೊಂದಿಗೆ ಚಲಿಸುತ್ತದೆ.  ಇಂತಹ ಚಿಂತನೆಗಳು ಶಾಸ್ತ್ರಿಯವಾದ ನಂಬಿಕೆಗಳನ್ನು ಬುಡಮೇಲು ಮಾಡಿತ್ತು.  ಈ ಸಿದ್ಧಾಂತದ ಪ್ರಕಾರ ವಿಶ್ರಾಂತಿಯಲ್ಲಿರುವಾಗ ಒಂದು ವಸ್ತುವಿನ ದ್ರವ್ಯರಾಶಿಯಲ್ಲಿ ಹಾಗೂ ಚಲನೆಯಲ್ಲಿರುವಾಗ  ಆ ವಸ್ತುವಿನ ದ್ರವ್ಯರಾಶಿಯಲ್ಲಿಯೂ ವೆತ್ಯಾಸವಿರುತ್ತದೆ.  ಅದು ಅತ್ಯಲ್ಪ ವೆತ್ಯಾಸವಾದರೂ ಚಲನೆ ವಸ್ತುವಿನ ತೂಕವನ್ನು ಹೆಚ್ಚಿಸುವ ಮೂಲಕ ಅದರ ಶಕ್ತಿಯನ್ನು ಹೆಚ್ಚಿಸುತ್ತದೆ.  ಈ ಎಲ್ಲಾ ಫಲಿತಾಂಶಗಳಿಂದ ಐನ್ ಸ್ಟೈನ್ E=mc2 ಎಂಬ ಸೂತ್ರವನ್ನು ಕೊಟ್ಟರು.  (E ಎಂಬುದು ಶಕ್ತಿ m ದ್ರವ್ಯ ರಾಶಿ c ಬೆಳಕಿನ ವೇಗ).  ಈ ಸಮೀಕರಣವು ಬೆಳಕಿನ ವೇಗದೊಂದಿಗೆ ಅತ್ಯಲ್ಪ ದ್ರವ್ಯರಾಶಿಯು ಅಗಾಧವಾದ ಶಕ್ತಿಗೆ ಸಮ ಎಂಬುದನ್ನು ತೋರಿಸುತ್ತದೆ.  ಬೆಳಕಿನ ವೇಗ ಎಲ್ಲಾ ಮಾಧ್ಯಮದಲ್ಲಿಯೂ ಒಂದೇ ರೀತಿಯದ್ದಾಗಿರುತ್ತದೆ ಎಂದು ಅವರು ತೋರಿಸಿಕೊಟ್ಟರು. ಈ ಚಿಂತನೆಗಳು ಪರಮಾಣು ವಿಜ್ಞಾನದ ಕ್ಷೇತ್ರದಲ್ಲಿ ವ್ಯಾಪಕವಾದ ಅಭಿವೃದ್ಧಿ ಪಡೆಯಲು ಸಹಾಯಕವೆನಿಸಿದವು.   

ಜರ್ಮನಿಯಲ್ಲಿದ್ದ ಐನ್ ಸ್ಟೈನರಿಗೆ ಜರ್ಮನಿಯ ಆಡಳಿತದ ಆಕ್ರಾಮಕ ಗುಣಗಳು ಹಿಡಿಸಲಿಲ್ಲ.  ಯುದ್ಧಘೋಷಣೆಯ ಪ್ರಸ್ತಾಪಗಳನ್ನು ಅಂದಿನ ಬಹುತೇಕ ಜರ್ಮನಿಯ ವಿಜ್ಞಾನಿಗಳು ಸಹಿ ಹಾಕಿ ಬೆಂಬಲ ವ್ಯಕ್ತಪಡಿಸಿದಾಗಲೂ ಅವರು ಯುದ್ಧವನ್ನು ವಿರೋಧಿಸುವ ಪ್ರತಿಪ್ರಸ್ತಾಪಕ್ಕೆ ಬೆಂಬಲ ಸೂಚಿಸಿದರು.   ಯಹೂದಿಗಳಾಗಿದ್ದ ಐನ್ ಸ್ಟೈನರ ಮೇಲೆ ಹಿಟ್ಲರ್ ಆಡಳಿತದ ಕೆಂಗಣ್ಣು ಬಿದ್ದ ಸಮಯದಲ್ಲಿ ಐನ್ ಸ್ಟೈನ್ ಅಮೆರಿಕಕ್ಕೆ ತೆರಳಿ  ಪ್ರಿನ್ಸ್ಟನ್ ಎಂಬಲ್ಲಿ ಪ್ರೊಫೆಸರ್ ಆಫ್ ಥಿಯೋರಿಟಿಕಲ್ ಫಿಸಿಕ್ಸ್ ಹುದ್ದೆಯನ್ನು ಅಂಗೀಕರಿಸಿದರು.  1940ರ ವರ್ಷದಲ್ಲಿ ಅಮೆರಿಕದ ಪೌರತ್ವ ಸ್ವೀಕರಿಸಿದ ಐನ್ ಸ್ಟೈನರು 1945ರಲ್ಲಿ ತಮ್ಮ ಹುದ್ಧೆಯಿಂದ ನಿವೃತ್ತರಾದರು. 

ವಿಶ್ವಮಹಾಯುದ್ಧದ ನಂತರದಲ್ಲಿ ಅತ್ಯಂತ ಪ್ರಭಾವಿ ನಾಯಕರೆನಿಸಿದ್ದ ಐನ್ ಸ್ಟೈನರನ್ನು ಇಸ್ರೇಲ್ ಸಾಮ್ರಾಜ್ಯದ ಅಧ್ಯಕ್ಷ ಪದವಿಗೆ ಆಹ್ವಾನಿಸಲಾಯಿತು.  ಯಾವಾಗಲೂ ವೈಜ್ಞಾನಿಕ ಚಿಂತನೆಗಳಲ್ಲಿ ಮುಳುಗಿದ್ದ ಐನ್ ಸ್ಟೈನ್  ಆ ಕರೆಯನ್ನು ನಿರಾಕರಿಸಿದರಾದರೂ  ಡಾ. ಚೈಮ್ ವೀಜ್ಮನ್ ಅವರೊಂದಿಗೆ ಜೆರುಸಲೇಂ ವಿಶ್ವವಿದ್ಯಾಲಯ ಸ್ಥಾಪನೆಯಾಗಲು ಸಹಕಾರ ನೀಡಿದರು. 

ತಮ್ಮ ನಿವೃತ್ತಿಯ ನಂತರದಲ್ಲೂ ತಮ್ಮ ವೈಜ್ಞಾನಿಕ ಸಂಶೋಧನೆಗಳನ್ನು  ಮುಂದುವರಿಸಿದ ಐನ್ ಸ್ಟೈನ್ ಹಲವಾರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು.  ಸ್ಪೆಷಲ್ ಥಿಯರಿ ಆಫ್ ರಿಲೇಟಿವಿಟಿ, ರಿಲೇಟಿವಿಟಿ, ಜನರಲ್ ಥಿಯರಿ ಆಫ್ ರಿಲೇಟಿವಿಟಿ ಅಲ್ಲದೆ ಇನ್ವೆಸ್ಟಿಗೇಶನ್ಸ್ ಆನ್ ಥಿಯರಿ ಆಫ್ ಬ್ರೌನಿಯನ್ ಮೊಮೆಂಟ್ಎವಲ್ಯೂಶನ್ ಆಫ್ ಫಿಸಿಕ್ಸ್ ಮುಂತಾದವು ಅವರ ಪ್ರಸಿದ್ಧ ವೈಜ್ಞಾನಿಕ ಪ್ರಕಟಣೆಗಳು.  ಅವರ ವಿಜ್ಞಾನೇತರ ಲೇಖನಗಳಲ್ಲಿ ಎಬೌಟ್ ಜಿಯೊನಿಸಂ, ವೈ ವಾರ್, ಮೈ ಫಿಲಾಸಫಿ ಅಂಡ್ ಔಟ್ ಆಫ್ ಮೈ ಲೇಟರ್ ಇಯರ್ಸ್  ಮುಂತಾದವು ಪ್ರಮುಖವಾಗಿವೆ. 

ಆಲ್ಬರ್ಟ್ ಐನ್ ಸ್ಟೈನರು ವಿಜ್ಞಾನ, ವೈದ್ಯಕೀಯ ಮತ್ತು ತತ್ವಶಾಸ್ತ್ರಗಳ ಪ್ರತಿಪಾದನೆಗಾಗಿ ಬಹಳಷ್ಟು ಯೂರೋಪ್ ಮತ್ತು ಅಮೇರಿಕಾ ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಗೌರವಗಳನ್ನುಸ್ವೀಕರಿಸಿದರು.  ಹಲವಾರು ಗೌರವಗಳು ಅವರನ್ನು ಅರಸಿ ಬಂದವು.  ನೋಬಲ್ ಪಾರಿತೋಷಕವೇ ಅಲ್ಲದೆ ರಾಯಲ್ ಸೊಸೈಟಿ ಪಾರಿತೋಷಕ, ಫ್ರಾಂಕ್ಲಿನ್ ಪಾರಿತೋಷಕ, ಮುಂತಾದವು ಇವುಗಳಲ್ಲಿ ಪ್ರಮುಖವಾದವು 

ಅವರಿಗೆ ವಯಲಿನ್ ವಾದನ ಅತ್ಯಂತ ಪ್ರಿಯವಾಗಿತ್ತು.  ಮಹಾತ್ಮಗಾಂಧಿಯವರ ತತ್ವ ಪ್ರಿಯರೂ ಆಗಿದ್ದರು.  ಭಾರತದ ಸತ್ಯೇಂದ್ರನಾಥ  ಬೋಸರು ತಮ್ಮ ಚಿಂತನೆಗಳ ಕುರಿತು ಪತ್ರ ಬರೆದಾಗ ಅದನ್ನು ಮನಸಾರೆ ಒಪ್ಪಿ ಆ ಲೇಖನವನ್ನು ತರ್ಜುಮೆಗೊಳಿಸಿ ಸೂಕ್ತವಾಗಿ ಪ್ರಕಟಗೊಂಡು ಗೌರವಯುಕ್ತವಾಗುವಂತೆ ಶ್ರಮವಹಿಸಿದರು.  ಈ ಮಹಾನ್ ವಿಜ್ಞಾನಿ ಏಪ್ರಿಲ್ 18, 1955ರಂದು ಈ  ಲೋಕವನ್ನಗಲಿದರು. 

ನಮ್ಮ ಭಾರತೀಯ ಪರಂಪರೆಯಲ್ಲಿ ಸತ್ಯವನ್ನು ಸಂಶೋಧಿಸುವ ಪರಂಪರೆಗೆ ಋಷಿ ಪರಂಪರೆ ಎನ್ನುತ್ತೇವೆ.  ಒಂದು ರೀತಿಯಲ್ಲಿ ಐನ್ ಸ್ಟೈನ್ ಅವರಂತಹ ಮಹಾನ್ ವಿಜ್ಞಾನಿಗಳು ಸಹಾ ಋಷಿ ಪರಂಪರೆಗೆ ಸೇರಿದವರೇ ಆಗುತ್ತಾರೆ.  ಈ ಚಿತ್ರದಲ್ಲಿ ಹೇಳುತ್ತಿರುವಂತೆ ಐನ್ ಸ್ಟೈನರು ಕೂಡಾ ಜ್ಞಾನ ಚಕ್ಷು ಎಂಬ ‘intuitive mind’ ಬಗ್ಗೆ ಹೇಳುತ್ತಿದ್ದಾರೆ ಎಂಬುದು ಮನನೀಯವಾದದ್ದು.  ಈ ಮಹಾನ್ ಪರಂಪರೆಗೆ ಹಾಗೂ ಇಂತಹ ಪರಂಪರೆಯ ಶಾಶ್ವತ ನಕ್ಷತ್ರವಾದ ಐನ್ ಸ್ಟೈನ್ ಎಂಬ ಚೇತನಕ್ಕೆ ನಮ್ಮ ನಮನಗಳು. 

ಅವರ ಒಂದು ಸಂದೇಶ ತುಂಬಾ ಇಷ್ಟವಾಗುತ್ತದೆ.  ಯಾವುದೇ ಒಂದು ವಸ್ತು ಅಥವಾ ವ್ಯಕ್ತಿಯೊಂದಿಗಿನ ವ್ಯಾಮೋಹಕ್ಕೆ ನಿನ್ನನ್ನು ಸಿಲುಕಿಸಿಕೊಳ್ಳಬೇಡ.  ಮಹತ್ವದ ಉದ್ದೇಶದಲ್ಲಿ ನಿನ್ನನ್ನು ತೊಡಗಿಸಿಕೋ”.  ಈ ಮಹಾನ್ ವ್ಯಕ್ತಿಯ ಚಿಂತನೆ ನಮ್ಮೆಲ್ಲರ ಆದರ್ಶವಾಗಲಿ.


(ಆಧಾರ:  ಅಂತರ್ಜಾಲದಲ್ಲಿ ದೊರೆತ ವಿವಿಧ ಮಾಹಿತಿಗಳು  ಮತ್ತು ಸ್ಟೂಡೆಂಟ್ಸ್ಜೀವನಚರಿತ್ರೆ ಮಾಲೆಯಲ್ಲಿ  ಪ್ರಕಟಗೊಂಡಿರುವ  ಆಲ್ಬರ್ಟ್ ಐನ್ಸ್ಟೈನ್ ಅವರ ಕುರಿತಾದ ಕವಿತಾ ಅವರಿಂದ ರಚಿತವಾದ ಕಿರುಹೊತ್ತಗೆ)

Tag: Albert Einstein

ಕಾಮೆಂಟ್‌ಗಳಿಲ್ಲ: