ಶುಕ್ರವಾರ, ಆಗಸ್ಟ್ 30, 2013

ಬಿ ವಿ ವಿದ್ಯಾನಂದ ಶೆಣೈ

‘ಭಾರತದ ದರ್ಶನ’ದ ಬಿ ವಿ ವಿದ್ಯಾನಂದ ಶೆಣೈ

ಭಾರತದಲ್ಲಿ ಜನಿಸಿದ ನಮಗೆ ನಮ್ಮ ದೇಶ ಎಷ್ಟು ಶ್ರೇಷ್ಠವಾದದ್ದು ಎಂದು ತಮ್ಮ  ‘ಭಾರತ ದರ್ಶನ’ ಪ್ರವಚನಗಳ  ಮುಖೇನ  ದರ್ಶನ ಮಾಡಿಸಿದ ಮಹನೀಯರು ಬಿ. ವಿ. ವಿದ್ಯಾನಂದ ಶೆಣೈ.  ಶೆಣೈ ಅವರು ಈ ಲೋಕವನ್ನಗಲಿದ ದಿನವಿದು.

ಪೂಜ್ಯ ವಿದ್ಯಾನಂದ ಶೆಣೈ ಅವರ ಪ್ರವಚನ ಕೇಳುವುದೆಂದರೆ ಕರ್ಣಾನಂದಕರ ಸಂಗೀತವನ್ನು ಅಂತರಾಳದಿಂದ ಅನುಭಾವಿಸುವಂತಹ ಒಂದು ಅಪೂರ್ವ ಸಂಯೋಗ.  ಅವರ ವಿದ್ವತ್ತು, ಸ್ಪಷ್ಟತೆ, ಇಂಪಾದ ಧ್ವನಿ, ಅಪೂರ್ವ ಸಾಹಿತ್ಯಕ ಮೌಲ್ಯ ಮತ್ತು ಅವೆಲ್ಲವನ್ನೂ ಮೀರಿಸುವಂತಹ ಅದಮ್ಯ ದೇಶಭಕ್ತಿ, ಕೇಳುಗನೊಂದಿಗೆ ಅಪೂರ್ವ ಅನುಭೂತಿ  ಇವೆಲ್ಲಾ ಇನ್ನಿಲ್ಲದಂತೆ ನಮ್ಮ ಹೃನ್ಮನಗಳನ್ನು ಸೆಳೆಯುತ್ತವೆ.

ವಿದ್ಯಾನಂದ ಶೆಣೈ ಅವರ ‘ಭಾರತ ದರ್ಶನ’ದಲ್ಲಿ, “ಭಾರತದ ಮಾತೃಸ್ವರೂಪ, ಪಿತೃಸ್ವರೂಪ, ಗುರು ಸ್ವರೂಪಗಳ ಪರಿಚಯ; ನದಿ ಪರ್ವತಗಳ ಸುತ್ತ ಎದ್ದುನಿಂತ ಏಕಾತ್ಮತೆಯ ಪ್ರತೀಕಗಳು; ಮತ್ತು ಪ್ರಮುಖ ತೀರ್ಥಗಳು, ಅಗಲಿದ ಕ್ಷೇತ್ರಗಳು, ಅಖಂಡ ಭಾರತದ ಆರಾಧನೆ” ಎಂಬ ವಿಷಯಗಳ ಕುರಿತಾಗಿ ಗೀತಭಾರತಿಯ  ಕ್ಯಾಸೆಟ್ಟುಗಳು ಮತ್ತು  ಸಿ ಡಿ ಗಳ  ಮೂಲಕ ಕನ್ನಡಿಗರ ಮನೆ ಮನೆಗಳನ್ನೂ ತಲುಪಿ ಅಲ್ಲಿನ ಹೃದಯಗಳನ್ನು ಪುನೀತಗೊಳಿಸಿದ್ದಾರೆ. ಇದು ಕನ್ನಡ ಭಾಷೆಯಲ್ಲಿ ಲಭ್ಯವಿರುವಷ್ಟೇ ಸುಂದರವಾಗಿ ಇಂಗ್ಲಿಷ್, ಹಿಂದೀ ಭಾಷೆಗಳಲ್ಲೂ ಲಭ್ಯವಿದೆ.

ಗಾಯಂತಿ ದೇವಾಃ ಕಿಲ ಗೀತಕಾನಿ ಧನ್ಯಾಸ್ತು ಯೇ ಭಾರತ ಭೂಮಿಭಾಗೇ |
ಸ್ವರ್ಗಾಪವರ್ಗಾಸ್ಪದಹೇತುಭೂತೇ ಭವಂತಿ ಭೂಯಃ ಪುರುಷಾಃ ಸುರತ್ವಾತ್ ||
ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಮ್ |
ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ||

ಇದು ವಿಷ್ಣುಪುರಾಣದಲ್ಲಿ ಬರುವ ಒಂದು ಶ್ಲೋಕ.  ಇಂತಹ ಅನೇಕ ದಿವ್ಯ ಶ್ಲೋಕಗಳ ಸ್ಮರಣೆ ಮತ್ತು  ಅರ್ಥವಿವರಣೆ ‘ಭಾರತ ದರ್ಶನ’ದಲ್ಲಿ ವ್ಯಾಪಿಸಿದೆ.  ಕಡಲತಡಿಯಿಂದ ಹೈಮಾಚಲದವರೆಗೆ, ಕಚ್ ಇಂದ ಕಾಮರೂಪದವರೆಗೆ ಭಾರತದ ಭವ್ಯಪರಂಪರೆ, ಪುರಾಣೇತಿಹಾಸಗಳಲ್ಲಿ ದಾಖಲಾದ ಪವಿತ್ರಸ್ಥಳಗಳು, ನದಿಸಮೂಹ.... ಈ ಪ್ರತಿಯೊಂದರದ್ದೂ ಅತಿ ಮಹತ್ವದ ಪಾತ್ರವಿದೆ.  ಭರತ ಖಂಡವನ್ನು ಸುದೃಢ – ಸುಭಿಕ್ಷ ನಾಡನ್ನಾಗಿ ಮಾಡಲು ಶ್ರಮಿಸಿದ ಮಹಾರಾಜರು, ಸಂಸ್ಕೃತಿಯ ಮೈತಳೆದಂಥ ಮಹಾಪುರುಷರು, ಜ್ಞಾನ-ಶೌರ್ಯಗಳನ್ನು ಮೆರೆದ ವನಿತೆಯರು.... ಈ ಎಲ್ಲರೂ ನಮ್ಮ ನಾಡಿನ ಉತ್ತುಂಗತೆಯ ಪ್ರತೀಕಗಳು.  ಇಂಥಹ ಮಹಾನ್ ರಾಷ್ಟೀಯ ಜೀವನಾಡಿಯ ಪರಿಚಯವೇ ಬಿ ವಿ ವಿದ್ಯಾನಂದ ಶೆಣೈ ಅವರು ಮಾಡಿಕೊಟ್ಟಿರುವ ‘ಭಾರತ ದರ್ಶನ’.

ಭಾರತ ದರ್ಶನದ ಕುರಿತು ಸಂತ ಭದ್ರಗಿರಿ ಅಚ್ಯುತದಾಸರ ಮಾತುಗಳು ಇಂತಿವೆ: “ಇದೊಂದು ಚೇತೋಹಾರಿ ಕಥಾನಕ.  ಒಂದು ಮಗು ತನ್ನ ತೊಡೆಯ ಮೇಲೆ ಕುಳಿತು ಅವಳನ್ನು ವರ್ಣಿಸಿದಂತೆ ಮೋಹಕವಾಗಿ ಸಾಗಿದೆ ಈ ಉಪನ್ಯಾಸದ ಪ್ರವಾಹ”.  ಕನ್ನಡಿಗರ ಕಣ್ಮಣಿ ರಾಜ್ ಕುಮಾರ್ ನುಡಿದಿದ್ದಾರೆ “ಭಾರತ ದರ್ಶನದಲ್ಲಿ ವಿವರಣೆಗಳನ್ನು ಕೇಳುವಾಗ ನನಗೆ ಕಣ್ತುಂಬಿ ಬರುತ್ತದೆ.  ಆ ಭಾಷೆ, ವರ್ಣನೆ, ಅಬ್ಬಬ್ಬಾ!  ಎಂಥ ದೇಶ ನಮ್ಮದು!  ಎಲ್ಲರೂ ಕೇಳಬೇಕು”.

ಬಿ. ವಿ. ವಿದ್ಯಾನಂದ ಶೆಣೈ ಅವರು ತಮ್ಮ ಜೀವಿತದ 56ವರ್ಷಗಳಲ್ಲಿ ಬ್ರಹ್ಮಚರ್ಯವನ್ನು ಪಾಲಿಸಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯಕರ್ತರಾಗಿ ಕಾರ್ಯನಿವಹಿಸಿದರು.  ಪರಿಷತ್ತಿನ ನಿರ್ವಹಣಾ ಕಾರ್ಯದರ್ಶಿಯಾಗಿ ಸಹಾ ಸೇವೆ ಸಲ್ಲಿಸಿದ್ದರು.  ಭಾರತ ದರ್ಶನ ಉಪನ್ಯಾಸ ಮಾಲಿಕೆಯ ಮೂಲಕ ಅಪ್ರತಿಮ ಖ್ಯಾತಿ ಗಳಿಸಿದ್ದ ಅವರು ರಾಜ್ಯದಲ್ಲಿ 1100ಕ್ಕೂ ಅಧಿಕ ಉಪನ್ಯಾಸ ನೀಡಿದ್ದರು.  ಅವರು ಹೊರತಂದಿದ್ದ ‘ಭಾರತ ದರ್ಶನ’ ಧ್ವನಿ ಸುರುಳಿಗಳು 60,000ಕ್ಕೂ ಹೆಚ್ಚು ಸೆಟ್ಟುಗಳ ಮಾರಾಟ ದಾಖಲೆಯನ್ನು ನಿರ್ಮಿಸಿವೆ.

ಈ ಮಹಾನ್ ರಾಷ್ಟ್ರಭಕ್ತರು ದಿನಾಂಕ 26 ಏಪ್ರಿಲ್ 2007ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಇಂದು ದೇಶ ಎದುರಿಸುತ್ತಿರುವ ಹಲವಾರು ಸಂದಿಗ್ಧಗಳಲ್ಲಿ ವಿದ್ಯಾನಂದ ಶೆಣೈ ಅವರ ಮಾತುಗಳ ಅರ್ಥೈಕೆ ಹೆಚ್ಚು ಹೆಚ್ಚು ಜನರನ್ನು ತಲುಪಬೇಕಾದ ಅವಶ್ಯಕತೆಯಿದೆ.  ಈ ಮಹನೀಯ ಚೇತನದ ನೆನಪಿಗೆ ನಮ್ಮ ವಂದನೆಗಳು.  ಈ ಮಹನೀಯರ ಆತ್ಮ ನಿತ್ಯ ಶಾಂತಿಯಲ್ಲಿರಲಿ.  ಆ ಶಾಂತಿ ದಿವ್ಯ ಜ್ಞಾನಗಳು ನಮ್ಮ ಬದುಕಿಗೆ  ದಾರಿದೀಪವಾಗಿರಲಿ.

ಪೂಜ್ಯ ವಿದ್ಯಾನಂದ ಶೆಣೈ ಅವರ ಭಾರತದರ್ಶನದ ಕಿರುಅನುಭಾವ ಇಲ್ಲಿದೆ https://www.youtube.com/watch?v=qvLLBcIAKT0

Tag: B. V. Vidyananda Shenoy

ಕಾಮೆಂಟ್‌ಗಳಿಲ್ಲ: