ಶನಿವಾರ, ಆಗಸ್ಟ್ 31, 2013

ಕೋಪರ್ನಿಕಸ್


ಕೋಪರ್ನಿಕಸ್

ನಮ್ಮ ಜಗತ್ತಿಗೆ ಭೂಮಿ ಕೇಂದ್ರವಲ್ಲ, ಸೂರ್ಯನೇ ಕೇಂದ್ರ ಎಂಬ ವಾದವನ್ನು ಜನಗಳ ಮುಂದೆ ಮಂಡಿಸಿ, ಸ್ಥಾಪಿಸಿದ ವ್ಯಕ್ತಿಯೆಂದರೆ ನಿಕೊಲಾಸ್ ಕೋಪರ್ನಿಕಸ್.   ಖಗೋಳ ವಿಜ್ಞಾನಕ್ಕೆ ಹೊಸ ವೈಜ್ಞಾನಿಕ ತಿರುವು ಕೊಟ್ಟ ನಿಕೊಲಾಸ್ ಕೋಪರ್ನಿಕಸ್ 1473ರ ಫೆಬ್ರುವರಿ 19ರಂದು ಪೋಲೆಂಡಿನ ಥಾರ್ನ್ ಎಂಬ ಊರಲ್ಲಿ ಜನಿಸಿದರು. ಈತ ಮೂಲತಃ ಕಲಿತದ್ದು ವೈದ್ಯಶಾಸ್ತ್ರ. ಅದರಲ್ಲಿ ಪದವಿಯನ್ನೂ ಪಡೆದಿದ್ದರು. ಆದರೆ ಅವರ ಆಸಕ್ತಿಯೆಲ್ಲಾ ಖಗೋಳ ವಿಜ್ಞಾನದಲ್ಲೇ. ಅಂತಲೇ ಆತ ತಮ್ಮ ವ್ಯಾಸಂಗವನ್ನು ಬೊಲೊನ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಿ ಖಗೋಳ ಶಾಸ್ತ್ರ ಕಲಿತರು. ರೋಮ್ ವಿಶ್ವವಿದ್ಯಾಲಯದಲ್ಲಿ ಖಗೋಳಶಾಸ್ತ್ರದ ಪ್ರಾಧ್ಯಾಪಕರಾದರು. ಮುಂದೆ ಆ ವೃತ್ತಿಯನ್ನು ಬಿಟ್ಟು ವೈದ್ಯವೃತ್ತಿ ಹಿಡಿದರು.  ತುಂಬ ಕರುಣಾಮಯಿಯಾಗಿದ್ದ ಈತ ಬಡಬಗ್ಗರಿಗೆ ಪುಕ್ಕಟೆ ಔಷಧ ನೀಡುತ್ತಿದ್ದರು. 

ಆಕಾಶಕಾಯಗಳ ಚಲನೆಯನ್ನು ವಿವರಿಸಿದ ಕೋಪರ್ನಿಕಸ್ ಈ ವಿಶ್ವದ ನಟ್ಟನಡುವೆ ಸೂರ್ಯನು ಇದ್ದಾನೆಂದೂ ಅವನ ಸುತ್ತ ಭೂಮ್ಯಾದಿಗ್ರಹಗಳು ವೃತ್ತಾಕಾರದಲ್ಲಿ ಚಲಿಸುತ್ತಿವೆ ಎಂದು ಪ್ರತಿಪಾದಿಸಿದರು.  ಆಧುನಿಕ ವಿಜ್ಞಾನದ ಜನಕರೆಂದು ಗೌರವಿಸಲ್ಪಡುವ ಕೋಪರ್ನಿಕಸ್ ಈ ಭೂಮಿಯು  ಹೇಗೆ ಆಕಾಶಕಾಯಗಳಾದ ಚಂದ್ರ, ಸೂರ್ಯರೊಂದಿಗೆ ಹಾಗೂ ಸುತ್ತಮುತ್ತಲಿನ ಇತರ ಕಾಯಗಳೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ವಿವರಿಸಿದರು. 

ಕೋಪರ್ನಿಕಸ್ ತೋರಿಸಿದ ಪರಿಹಾರವನ್ನೂ ಪ್ರಾರಂಭದಲ್ಲಿ ಕೆಲವು ಚಿಂತಕರು ಅಷ್ಟಿಷ್ಟು ಊಹಿಸಿದ್ದುಂಟು.  ಆದರೆ ಆ ಎಲ್ಲಾ ಊಹೆಗಳನ್ನೂ ಆಧಾರವಾಗಿಟ್ಟುಕೊಂಡು ಪುರೋಹಿತಶಾಹಿ ಚರ್ಚಿನ ಮೌಢ್ಯದ  ವಿರುದ್ಧ ಕೆಲಸ ಮಾಡಿದ್ದು ಕೋಪರ್ನಿಕಸ್ ಮಾತ್ರ.  ಈತನ ಆಲೋಚನೆಗಳ ವಿರುದ್ಧ ದೀರ್ಘಕಾಲ ಧಾರ್ಮಿಕ ವಿರೋಧ ಇತ್ತು ಎನ್ನುವುದು ಗಮನಾರ್ಹ.  ಈತ ತೀರಿಕೊಂಡ ಒಂದೂವರೆ ಶತಮಾನದ ನಂತರವೂ ಈತನ ಸೂರ್ಯ ಕೇಂದ್ರವಾದ ಸರಿಯಾಗಿ ಬೆಳಕಿಗೆ ಬಂದಿರಲಿಲ್ಲ. 

ಮುಂದೆ ಕೆಪ್ಲರ್, ಗೆಲಿಲಿಯೋ, ನ್ಯೂಟನ್ ಅಂತಹ ವಿಜ್ಞಾನಿಗಳ  ಸಂಶೋಧನೆಗಳು ಕಾಲಾನುಕಾಲಕ್ಕೆ ತೀವ್ರವಾದ ಸವಾಲುಗಳನ್ನು ಎದುರಿಸಿಯೂ ಕೋಪರ್ನಿಕಸ್ ಅವರ ಚಿಂತನೆಯನ್ನು ಆಧರಿಸಿ ಅವರ ಶ್ರೇಷ್ಠ ಚಿಂತನೆಯನ್ನು ಇಡೀ ಜಗತ್ತು ಒಪ್ಪುವಂತೆ ಮಾಡಿತು. ಸತ್ಯದ ಸಾಕ್ಷಾತ್ಕಾರ ಮಾಡಿಕೊಂಡವನಿಗೆ ಯಾತರ ಭಯ, ಯಾವ ಮೌಢ್ಯವೇ ಆದರೂ ಸರಿ, ಸತ್ಯವನ್ನು ಎಷ್ಟು ಕಾಲ ತಾನೇ ಮುಚ್ಚಿಡಬಲ್ಲದು.  

ಕೋಪರ್ನಿಕಸ್ ಕ್ರಿಸ್ತ ಸನ್ಯಾಸಿಯೂ ಆಗಿದ್ದರು.  ರೆವಲೂಷನ್  ಪುಸ್ತಕದಲ್ಲಿ ತಿಳಿದು ಬರುವಂತೆ ತ್ರಿಕೋನಮಿತಿಯನ್ನು ಹಲವು ವಿಧದಲ್ಲಿ ಬಳಸಿದ ಈತ ಶ್ರೇಷ್ಠ ಗಣಿತಜ್ಞ.  ಈತ ಸರ್ವತೋಮುಖ ಪ್ರಜ್ಞೆಯ ವ್ಯಕ್ತಿಯೆಂದು, ಪುನರುತ್ಥಾನ ಕಾಲದ ಚಿಂತಕ ಬುದ್ಧಿಜೀವಿಗಳಲ್ಲಿ ಒಬ್ಬರೆಂದು ತಿಳಿಯಲಾಗಿದೆ.  ಇವರಿಗೆ ಕನಿಷ್ಟ ಪೊಲಿಷ್, ಜರ್ಮನ್, ಲ್ಯಾಟಿನ್, ಗ್ರೀಕ್ ಭಾಷೆಗಳು ಬರುತ್ತಿದ್ದಿರಬೇಕು. 

ಕೋಪರ್ನಿಕಸ್ ಲ್ಯಾಟಿನ್ ಭಾಷೆಯ ಮೇಲಿದ್ದ ಹಿಡಿತದಿಂದ ಅನುವಾದದ ಕೆಲಸಕ್ಕೂ ಕೈ ಹಾಕಿದ್ದರು. ಥಿಯೋಫಿಲಾಕ್ಟಸ್ ಎಂಬ ಶ್ರೇಷ್ಠ ಕವಿಯ ಕವನ ಸಂಕಲನವನ್ನು ಇದಕ್ಕಾಗಿ ಆರಿಸಿಕೊಂಡರು. 
  
ಕೊಪರ್ನಿಕಸ್ ಮೇ 24, 1543ರಂದು ಈ ಲೋಕವನ್ನಗಲಿದರು.Tag: Copernicus

ಕಾಮೆಂಟ್‌ಗಳಿಲ್ಲ: