ಗುರುವಾರ, ಆಗಸ್ಟ್ 29, 2013

ಮೂರು ತಲೆಮಾರು

ತ. ಸು. ಶಾಮರಾಯರ ‘ಮೂರು ತಲೆಮಾರು’

ಯಾಕೋ ಮೂಕನಾಗಿಬಿಟ್ಟಿದ್ದೇನೆ.  ಇಂಥಹ ಪುಸ್ತಕ ಓದದೆ ಜೀವನದಲ್ಲಿ ಎಷ್ಟೊಂದು ಕಳೆದುಕೊಂಡುಬಿಟ್ಟಿದ್ದೆ ಎಂಬ ಭಾವುಕತನ ಕಾಡುತ್ತಿದೆ.   ಅಂದು ನಮ್ಮ ಕನ್ನಡ ಸಂಪದದ ಗ್ರಂಥಾಲಯಕ್ಕೆ ನಾನೇ ಕೊಂಡು ತಂದು ಅದನ್ನು ಯಾರೂ ತೆಗೆದುಕೊಂಡು ಹೋಗದೆ ಯಾವಾಗಲೂ ಕಪಾಟಿನಲ್ಲೇ ಇದ್ದರೂ ಆ ಪುಸ್ತಕ ನನ್ನ ಕೈಗೆ ಬಂದಿರಲಿಲ್ಲ.  ಕೆಲವೊಂದು ತಿಂಗಳುಗಳ ಹಿಂದೆ ನಮ್ಮ ಬಾಲ್ಯವನ್ನು ನೆನೆಸಿಕೊಂಡು ಅಣ್ಣ - ನಾನು ಮಾತನಾಡುತ್ತಿದ್ದಾಗ ನಮ್ಮ ಮನೆಯ ಬಳಿ ಇದ್ದ ತ.ಸು ಶಾಮರಾಯರ ಮನೆ ಆ ಮನೆಯ ಮುಂದಿದ್ದ ತಳುಕಿನ ವೆಂಕಣ್ಣಯ್ಯನವರ ಗ್ರಂಥಮಾಲೆ ಬರಹದ (ಆ ಬರಹ ಇಂದೂ ಇದೆ) ಕುರಿತಾಗಿ ಮಾತನಾಡುತ್ತಿದ್ದೆವು.  ಮಾತಿನ ಮಧ್ಯೆ ಸಾಹಿತ್ಯ ವಿದ್ವಾಂಸರಾದ ಅಣ್ಣ ಕೇಳಿದರು:  “ಶಾಮರಾಯರ ‘ಮೂರು ತಲೆಮಾರು’ ಓದಿದ್ದೀಯಾ?”.  ಇಲ್ಲ ಎಂದೆ.  ಮುಂದೆ ಅದು ಮರೆತೂ ಹೋಗಿತ್ತು.  ಕಳೆದ ವಾರ ಸಾರ್ವಜನಿಕ ಗ್ರಂಥಾಲಯದಲ್ಲಿ ಈ ಪುಸ್ತಕ ನೋಡಿದ ತಕ್ಷಣ ಕೈಗೆತ್ತಿಕೊಂಡು ಮನೆಗೆ ತಂದೆ.  ಎಲ್ಲಕ್ಕೂ ಕಾಲ ಕೂಡಿಬರಬೇಕು.  ಈ ಪುಸ್ತಕವನ್ನು ಓದಬೇಕೆಂದು ಕಾಲ ನನ್ನ ಮೇಲೆ ಹರಿಸಿದ ಕೃಪೆ  ದೈವ ಕೃಪೆಯೇ ಸರಿ.  ಸಣ್ಣ ವಯಸ್ಸಿನಲ್ಲಿ ತ ಸು ಶಾಮರಾಯರ ಆ ಮನೆಯ ಮುಂದೆ ಓಡಿಯಾಡಿದ ಭಾಗ್ಯವಿದ್ದರೂ ಇದ್ದೀತು.

ಮೂರು ತಲೆಮಾರು ತ. ಸು ಶಾಮರಾಯರು ಹೇಳಿರುವ ಅವರ  ವಂಶದ ಮೂರು ತಲೆಮಾರುಗಳ ಚರಿತ್ರೆ.  ಮೊದಲನೆಯ ತಲೆಮಾರಿನ ಬಗ್ಗೆ ಅವರು ಕೇಳಿದ್ದನ್ನೂ, ಎರಡನೇ ತಲೆಮಾರಿನ ಕುರಿತಾಗಿ ನೋಡಿದ್ದನ್ನೂ, ಮೂರನೆಯ ತಲೆಮಾರಿನ ಜೊತೆ ಅನುಭವಿಸಿದ್ದನ್ನೂ ಯಾವುದೇ ಅಲಂಕಾರಿಕತೆ ಇಲ್ಲದಂತೆ ಆತ್ಮೀಯವಾಗಿ ನಿವೇದಿಸಿದ್ದಾರೆ.

ಇಡೀ ಪುಸ್ತಕವನ್ನು ಓದಿದಾಗ ನಮ್ಮ ಭಾರತದಲ್ಲಿ ನಮ್ಮದು ಎನ್ನುವ ಸಿರಿ ಸಂಪತ್ತು ಏನಾದರೂ ಇದ್ದರೆ, ಅದು ಇಲ್ಲಿ ಕಾಣಬರುವ ಸಜ್ಜನಿಕೆ, ಸರಳತೆ ಮತ್ತು ಸಚ್ಚಾರಿತ್ರ್ಯವುಳ್ಳ ಇಂತಹ ತಲೆಮಾರುಗಳು ನಾವು ನಡೆದಾಡುತ್ತಿರುವ ಈ ನೆಲದಲ್ಲಿ ನಡೆದಾಡಿದ್ದರು ಎನ್ನುವುದೇ ಆಗಿದೆ.  ಜೀವನವನ್ನೆಲ್ಲ ಹಲವು ರೀತಿಯ ತಪ್ಪುಗಳಲ್ಲೇ, ನಿಷ್ಠುರತೆಯ ಲಕ್ಷಣಗಳಲ್ಲೇ ಸಾಗಿಸುವ ನಮ್ಮಂತಹ ಹೃದಗಳಲ್ಲೂ ಆಗಾಗ ಸದ್ಭಾವ ಮೂಡಿ ಮರೆಯಾಗುತ್ತದಲ್ಲ, ಅದು ಹೇಗೆ ತಾನೇ ಇದ್ದೀತು ಎಂದು ಕೆಲವೊಮ್ಮೆ ಅಚ್ಚರಿ ಹುಟ್ಟುವಂತಹ ಸಂಗತಿಗಳಿಗೆ ‘ಮೂರು ತಲೆಮಾರು’ಗಳಂತಹ ತಲೆಮಾರುಗಳು ಒಂದಷ್ಟು ಬೆಳಕು ಚೆಲ್ಲುತ್ತವೆ.  ಮಾತ್ರವಲ್ಲ, ನಮ್ಮಲ್ಲಿ ಅಪರೂಪಕ್ಕೊಮ್ಮೆ ಉಧಿಸುವ ಸದ್ಭಾವಗಳು ಒಂದು ಶತಮಾನ ಮತ್ತು ಅದಕ್ಕೂ ಹಿಂದೆ ಹಲವಾರು ತಲೆಮಾರುಗಳಲ್ಲಿ ಬಹಳಷ್ಟು ಪುಣ್ಯ ಜೀವಿಗಳಲ್ಲಿ ನಿತ್ಯ ಬದುಕಿನ ಬೆಳಕೇ ಆಗಿತ್ತು ಎಂದು ಕಾಣಬರುತ್ತದೆ.  ಅದೆಲ್ಲಕ್ಕೂ ಮುಖ್ಯವಾಗಿ ಈ ಶ್ರೇಷ್ಠ ಬದುಕುಗಳ ಸುಮನೋಹರತೆಯನ್ನು ಆಸ್ವಾದಿಸುವಾಗ, ನಮಗೂ ಅಂಥಹ ಬದುಕು ಬೇಕು ಎಂಬ ಆಶಯ ಸ್ಫುರಿಸುತ್ತದೆ.  ಹಾಗಾಗುತ್ತದೋ ಇಲ್ಲವೋ ಬಹುಷಃ ಅದು ಭಗವಂತನ ಕೃಪೆ.  ಆದರೆ ಏನೇನನ್ನೋ ವಾಂಛಿಸುವ ಈ ಬದುಕಿನಲ್ಲಿ ಕೂಡಾ ಇಂಥಹ ಆಶಯವಾದರೂ ಮೂಡಿತಲ್ಲ ಎಂಬಂತಹ ಧನ್ಯತೆ ಮೂಡಿದೆ.

ಮೂರು ತಲೆಮಾರುಗಳು ಒಂದು ರೀತಿಯಲ್ಲಿ ಇಬ್ಬರು ವೆಂಕಣ್ಣಯ್ಯ ಮತ್ತು ಒಬ್ಬರು ಸುಬ್ಬಣ್ಣನವರನ್ನು ಕೇಂದ್ರಬಿಂಧುವಾಗಿ ಮಾಡಿಕೊಂಡು ವಿವಿಧ ಕಾಲಘಟ್ಟಗಳಲ್ಲಿನ ಅತ್ಯಮೂಲ್ಯ ಬದುಕುಗಳನ್ನು ನಮಗೆ ಕಾಣಿಸಿಕೊಡುತ್ತದೆ.

ಈ ಮೂರು ತಲೆಮಾರುಗಳ ಮೂರನೆಯ ಭಾಗದಲ್ಲಿ ಬರುವವರು ನಾವೆಲ್ಲಾ ಕೇಳಿರುವ ತಳುಕಿನ ಸುಬ್ಬಣ್ಣ  ವೆಂಕಣ್ಣಯ್ಯನವರು. ಕನ್ನಡ ಸಾಹಿತ್ಯ ಲೋಕದಲ್ಲಿ ಅಪೂರ್ವವಾದ ಕೆಲಸಮಾಡಿ ಕುವೆಂಪು ಅವರನ್ನೊಳಗೊಂಡಂತೆ ಅನೇಕ  ಮಹಾನ್ ಸಾಹಿತ್ಯ ಶಿಲ್ಪಿಗಳನ್ನು ಕನ್ನಡಕ್ಕೆ ನಿರ್ಮಿಸಿಕೊಟ್ಟವರು.     ಸಾಹಿತ್ಯ ಲೋಕದಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜು, ಮೈಸೂರಿನ ಮಹಾರಾಜಾ ಕಾಲೇಜು ಮತ್ತು ಅದಕ್ಕೂ ಮುಂಚೆ ಮಗಳೂರಿನ ಬಾಸೆಲ್ ಮಿಷನ್, ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜು ಮುಂತಾದ ಕಡೆ ಕನ್ನಡ ಸಾಹಿತ್ಯ ಅಧ್ಯಯನಕ್ಕೊಂದು ಮಹಾನ್ ಗೌರವ ತಂದುಕೊಟ್ಟವರು ಟಿ ಎಸ್ ವೆಂಕಣ್ಣಯ್ಯನವರು.  ಎ. ಆರ್. ಕೃಷ್ಣಶಾಸ್ತ್ರಿಗಳು ಮತ್ತು ಟಿ ಎಸ್ ವೆಂಕಣ್ಣಯ್ಯನವರ ಜೋಡಿ ಕನ್ನಡದ ಅಶ್ವಿನಿ ದೇವತೆಗಳೆಂದೇ ಪ್ರಸಿದ್ಧಿ.  ಟಿ ಎಸ್ ವೆಂಕಣ್ಣಯ್ಯನವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರಲ್ಲಿ ಮೊಟ್ಟ ಮೊದಲಿಗರು.  ಅದಕ್ಕೂ ಹಿಂದೆ ಕನ್ನಡವನ್ನು ಓದುವುದೆಂದರೆ ‘ಏನು ಕನ್ನಡವೆ?’ ಎಂಬಂತಹ ಸ್ಥಿತಿ.  ಬಿ ಎಂ ಶ್ರೀ ಅವರಂತಹವರ ಇಚ್ಛೆ, ಟಿ ಎಸ್ ವೆಂಕಣ್ಣಯ್ಯ, ಎ. ಆರ್. ಕೃಷ್ಣಶಾಸ್ತ್ರಿ, ಡಿ.ವಿ.ಜಿ ಮುಂತಾದ ಮಹಾನ್ ಚೇತನಗಳ  ಸದುದ್ಧೇಶ ಮುಂದೆ ಕನ್ನಡಕ್ಕೊಂದು ವಿಶಿಷ್ಟ ಪರಂಪರೆಯನ್ನು ಸೃಷ್ಟಿಸಿ ಮನ್ನಡೆಸಿತು.  ಇದು ಟಿ ಎಸ್ ವೆಂಕಣ್ಣಯ್ಯನವರ ಬಗ್ಗೆ ನಾವು ಬಲ್ಲ ಬಹಿರಂಗ ಸಾಧನೆಯಾದರೆ, ಟಿ ಎಸ್ ವೆಂಕಣ್ಣಯ್ಯ ಎಂಬ ಸಜ್ಜನಿಕೆ, ಹೃದಯವಂತಿಕೆ, ವಿದ್ಯಾರ್ಥಿ ಉಪಾಧ್ಯಾಯ ಅಥವಾ ಸಾಮಾನ್ಯ ಎಂಬ ಭೇಧಭಾವದ ಲವ ಲೇಶವೂ ಇಲ್ಲದಂತಹ ಪ್ರೇಮ, ಎಲ್ಲವನ್ನೂ ಕಟುತ್ವವಿಲ್ಲದೆ ವಿಮರ್ಶಿಸುವ ನಿರೂಪಿಸುವ ಮನದಟ್ಟುಮಾಡಿಸುವ ಮೇಧಾವೀತನ, ತನ್ನ ಸುತ್ತಮುತ್ತಲಿನವರ ಹಿತಕ್ಕೆ  ಬದುಕಬೇಕೆಂದು ಯಾವುದೇ ಕಷ್ಟ ಸಂಕೋಲೆಗಳನ್ನೂ ತಮ್ಮ ಮೇಲೆ ಎಳೆದುಕೊಳ್ಳಲು ಹಿಂತೆಗೆಯದಂತಹ ಮಾನವೀಯ ಪ್ರೇಮ ಮತ್ತು ಧೈರ್ಯ,  ಈ ಎಲ್ಲ ಕಾರಣಗಳಿಂದ ದೊಡ್ಡ ಹುದ್ಧೆಯಲ್ಲಿದ್ದರೂ ಯಾವುದೇ ಶ್ರೀಮಂತಿಕೆಯ ಮೋಹದಲ್ಲಿ ಸಿಲುಕಿಕೊಳ್ಳದೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಕಷ್ಟದಲ್ಲಿ ಜೀವಿಸುವ  ಹೃದಯ ವೈಶಾಲ್ಯ, ರಾಮಾಯಣ ಪಾರಾಯಣದ ಅನುಭಾವ,  ಭಗವದ್ಗೀತೆಯ ತತ್ವಗಳ ಅಧ್ಯಯನಗಳನ್ನು ಯಾವುದೇ ಮೌಢ್ಯಗಳ ಸಂಕೋಲೆಗೊಳಗಾಗದೆ ಜೀವನಕ್ಕೆ ಅಳವಡಿಸಿಕೊಂಡ ಆಧ್ಯಾತ್ಮಿಕ ಭವ್ಯತೆ, ಇವೆಲ್ಲಾ ಅವರನ್ನು ನಿರ್ಮಿಸಿದ ಅಮೂಲ್ಯ ಪರಿಕರಗಳು ಎಂಬುದು ಈ ಓದಿನಲ್ಲಿ ನಮ್ಮ ಹೃದಯಗಳನ್ನು ಸ್ಪರ್ಶಿಸುತ್ತಾ ಸಾಗುತ್ತದೆ.

ಟಿ ಎಸ್ ವೆಂಕಣ್ಣಯ್ಯನವರು ಈ ಕೃತಿಯ ಮೂರನೆಯ ತಲೆಮಾರು.  ಇನ್ನೆರಡು ತಲೆಮಾರುಗಳು ಇಂತಹ ಭವ್ಯತೆಯ ಅಪೂರ್ವ ತಳಪಾಯಗಳಾಗಿ ನಮ್ಮ ಕಣ್ಣು ಕಟ್ಟಿ ನಿಲ್ಲುತ್ತವೆ.  ರಾಮಕೃಷ್ಣ ಪರಮಹಂಸರ ವಚನವೇದದಲ್ಲಿ ಮೂಡುವ ಒಂದು ಹೃದಯಸಂವೇದನೆಯಲ್ಲಿ ದೇವರನ್ನು ನೋಡಲಿಕ್ಕೆ ಸಾಧ್ಯವೇ? ಅದೂ ನಮಗಿರುವ ಈ ಕಣ್ಣುಗಳಿಂದಲೇ ಸಾಧ್ಯವೆ ಎಂಬಂತಹ ಸೂಕ್ಷ್ಮತೆ ವಿವೇಚನೆಗೆ ಬರುತ್ತದೆ.  “ಪರಮಾತ್ಮನನ್ನು ಪ್ರೇಮಿಸಿ ಆಪ್ತವಾಗಿ ಬಯಸಿದಾಗ ನಮಗೊಂದು ವಿಶೇಷ ಕಣ್ಣು, ವಿಶೇಷ ಶಾರೀರ ಮೂಡುತ್ತದೆ.  ಅದರಿಂದ ನಾವು ಪರಮಾತ್ಮನನ್ನು ಕಾಣಬಹುದು, ಸ್ಪರ್ಶಿಸಬಹುದು, ಅನುಭಾವಿಸಬಹುದು, ಅವನಲ್ಲೊಂದಾಗಬಹುದು” ಎಂದು ರಾಮಕೃಷ್ಣರು ಅಭಿವ್ಯಕ್ತಿಸುತ್ತಾರೆ.  ಮೂರು ತಲೆಮಾರಿನ ಮೊದಲ ಭಾಗದಲ್ಲಿ ಬರುವ ವೆಂಕಣ್ಣಯ್ಯನವರು ತಮ್ಮ ತಪ್ಪಿಲ್ಲದಿದ್ದರೂ ಕಚೇರಿಗೆ ತಪಾಸಣೆಗಾಗಿ ಬಂದ ಬ್ರಿಟಿಷ್ ಅಧಿಕಾರಿಯ ತಪ್ಪುಗ್ರಹಿಕೆಗೆ ಒಳಗಾಗಿ ಕೆಲಸದಿಂದ ಸಸ್ಪೆಂಡ್ ಆಗಿಬಿಡುತ್ತಾರೆ.  ಇಂದಿನ ದಿನಗಳಲ್ಲಿ ಅಂತಹ ಘಟನೆ ನಡೆದಾಗ ಒಂದು ರೀತಿ ಲೋಕ ಗುಮ್ಮನಾಗಿ ಸಂದೇಹಿಸುತ್ತದೆ ಇಲ್ಲವೇ ಧೂರ್ತನಾಗಿ ಸಂತೋಷಿಸುತ್ತದೆ.  ವೆಂಕಣ್ಣಯ್ಯನವರಿಗೆ ಅಂತಹ ಕಷ್ಟ ಒದಗಿದಾಗ ಹೀಗೆ ನಡೆದದ್ದು ಅನ್ಯಾಯ ಎಂದು ಇಡೀ ಲೋಕವೇ ಮರುಗುತ್ತದೆ.  ದುಡುಕಿದ ಅಧಿಕಾರಿಯೇ ತಾನು ಮಾಡಿದ ತಪ್ಪಿಗೆ ಬೇಸರಪಟ್ಟುಕೊಂಡು ವೆಂಕಣ್ಣಯ್ಯವರ ಬದುಕು ಉನ್ನತಿಗೇರುವ ಮಾರ್ಗವಾಗುತ್ತಾನೆ.  ಇದು ವೆಂಕಣ್ಣಯ್ಯ ಎಂಬ ಸತ್ವಯುತ ತೇಜಸ್ವಿ ತನ್ನ ಸುತ್ತ ನಿರ್ಮಿಸಿಕೊಂಡ ದೈವೀತೇಜಸ್ಸು.  ಇತ್ತ ಈ ಬೆಳವಣಿಗೆಗಳ ಯಾವುದೇ ಪರಿವೆಯಿಲ್ಲದೆ ವೆಂಕಣ್ಣಯ್ಯನವರು, ತನಗೆ ಹೀಗೆ ಅನ್ಯಾಯವಾಯಿತು ಎಂದು ಡಂಗುರ ಹೊಡೆಯಲಿಲ್ಲ. ಎಲ್ಲೂ ಗೋಗರೆಯಲಿಲ್ಲ.  ನೇರವಾಗಿ ನಿರ್ಜನ ಪ್ರದೇಶದಲ್ಲಿ ತಮ್ಮ ಇಷ್ಟದೈವ ರಾಮನನ್ನು ಪೂಜಿಸುತ್ತಾ ಮಾತಿಲ್ಲದೆಯೇ ಮೂಖವಾಗಿಯೋ ಎಂಬಂತೆ ಆತನ ಮುಂದೆ ಪ್ರಶ್ನೆ ಇಡುತ್ತಾರೆ.  ಹೀಗೊಬ್ಬರು ತೇಜಸ್ವಿಗಳು ಯಾರೂ ಇಲ್ಲದ ಗುಡಿಯಲ್ಲಿ ಪೂಜಿಸುತ್ತಿದ್ದಾರೆ ಎಂದು ತಿಳಿದಾಗ ಸುತ್ತಮುತ್ತಲಿನ ಊರಿನ ಜನ ಬಂದು ಅಲ್ಲಿ ಹಣ್ಣು ಕಾಯಿ ತಂದಿಟ್ಟು ಪೂಜ್ಯಭಾವದಿಂದ ನೋಡತೊಡಗುತ್ತಾರೆ.  ಕೋತಿಗಳು ಎಲ್ಲೆಲ್ಲಿಂದಲೋ ಬಂದು ಯಾವುದೇ ಚೇಷ್ಟೆಯನ್ನೂ ಮಾಡದೆ ತಮ್ಮ ಪ್ರಭುವಾದ ಶ್ರೀರಾಮನಿಗೆ ಹಣ್ಣು ಹಂಪಲುಗಳನ್ನು ನೈವೇದ್ಯಕ್ಕೆ ತಂದಿಡುತ್ತವೆ.  ಆದರೆ ಈ ನಿಷ್ಠಾವಂತ ವೆಂಕಣ್ಣಯ್ಯನವರು ಊರಿನವರು ತಂದ ಕಾಯಿ ನೈವೇದ್ಯಗಳನ್ನು ಕೋತಿಗಳಿಗೂ, ಕೋತಿಗಳು ತಂದ ಫಲವನ್ನು ಜನರಿಗೂ ನೀಡಿ ತಾವು ಮಾತ್ರ ಹುಲ್ಲಿನ ರಸವನ್ನು ಪರಮಾತ್ಮನಿಗೆ ಅರ್ಪಿಸಿ ಅದನ್ನು ಮಾತ್ರ ತಮ್ಮ ಪ್ರಸಾದವಾಗಿ ಮಾಡಿಕೊಳ್ಳುತ್ತಾರೆ.  ಕಡೆಗೆ ಅವರಿದ್ದ ಸ್ಥಳಕ್ಕೇ ಅವರ ಅಧಿಕಾರಿಗಳು ಹುಡುಕಿಕೊಂಡು ಬಂದು ಅವರಿಗೆ ಉನ್ನತ ಹುದ್ದೆಯ ಅಧಿಕಾರ ಬಂದ ಸಂತೋಷವನ್ನು ಹಂಚುತ್ತಾರೆ.

ಇನ್ನು ವೆಂಕಣ್ಣಯ್ಯನವರ ಪೂರ್ವಜರಲ್ಲಿ ಒಬ್ಬರಾದ ದೇವರ ರಂಗಮ್ಮ ಎಂಬಾಕೆ ಎಂಥಹ ಸಾಧ್ವಿ ಎಂದರೆ ದಿನಾ ಆಕೆ ಬೆಣ್ಣೆ ಕಡೆಯುವಾಗ ಸಾಕ್ಷಾತ್ ಶ್ರೀಕೃಷ್ಣಪರಮಾತ್ಮನೇ ಬಾಲಕನಾಗಿ ಬಂದು  ಆಕೆಯಿಂದ ಬೆಣ್ಣೆ ಸ್ವೀಕರಿಸುತ್ತಾನೆ, ತಾನು ತಿರುಪತಿಗೆ ಹೋಗಲಿಲ್ಲವಲ್ಲ ಎಂದು ಕೊರಗಿದಾಗ ಆ ದರ್ಶನವನ್ನೂ ಮಾಡಿಸುತ್ತಾನೆ, ಕಡೆಗೆ ಆಕೆ ಇದ್ದೆಡೆಯಲ್ಲೇ ಮೊಳಕಾಲ್ಮೂರಿನಲ್ಲಿ ವೆಂಕಟರಮಣನಾಗಿ ಬಂದು ನೆಲೆಸುತ್ತಾನೆ.  ಅವರ ಮಗ ದೇವರ ಲೀಲೆ ವೆಂಕಪ್ಪನನ್ನು ಪರಮಾತ್ಮ ಇನ್ನಿಲ್ಲದಂತೆ ಪೊರೆಯುತ್ತಾನೆ  ಒಂದು ರೀತಿಯಲ್ಲಿ ಇವೆಲ್ಲಾ ಪೌರಾಣಿಕ ಕಥೆಗಳಲ್ಲಿ ಕಾಣುವ ಮಹತ್ವಪೂರ್ಣ ತೇಜೋಮಯಪಾತ್ರಗಳಂತೆಯೇ ಕಾಣುತ್ತವೆ.  ಅಂತರಾಳದಲ್ಲಿನ ಕೊಂಡಿಯನ್ನು ಹಿಡಿದುಕೊಂಡು ಹೃದಯಾಂತರಂಗದಿಂದ ನೋಡಿದರೆ ತ ಸು ಶಾಮರಾಯರ  ಹಿತ ನಿರೂಪಣೆ ಇದೆಲ್ಲಾ ಖಂಡಿತವಾಗಿ ಸಾಧ್ಯವಾದದ್ದು ನಡೆದದ್ದು ಎಂಬ ಮನವರಿಕೆ ಮಾಡಿಕೊಡುತ್ತದೆ.

ಇನ್ನು ಎರಡನೆಯ ತಲೆಮಾರಿನ ಸುಬ್ಬಣ್ಣ ಹಿರಿಯ ವೆಂಕಣ್ಣಯ್ಯನವರ ಮಗ. ಹಾಗೂ ನಾವೆಲ್ಲಾ ಕೇಳಿರುವ, ಓದಿರುವ  ಟಿ ಎಸ್ ವೆಂಕಣ್ಣಯ್ಯನವರ ತಂದೆ.  ಇವರು ತಮ್ಮ ತಂದೆ ಹಾಕಿಕೊಟ್ಟ ಧಾರ್ಮಿಕ ಮಾರ್ಗದ ಜೊತೆಗೆ ತಮ್ಮ ಸ್ವಂತಿಕೆಯ ತೇಜೋಬಲವನ್ನೂ ಮೈಗೂಡಿಸಿಕೊಂಡು ಇಡೀ ಸಮುದಾಯವೆಲ್ಲ ತನ್ನದಾಗುವಂತೆ ನಡೆದುಕೊಳ್ಳುವ ರೀತಿ, ಸಮಾಜದ ಹಿತಕ್ಕೆ ಧರ್ಮರೂಪದಲ್ಲಿ, ಯಾವುದೇ ಉದ್ವೇಗ, ಅಹಂ, ದುಡುಕುಗಳಿಲ್ಲದೆ ಸಮಂಜಸವಾಗಿ ನಡೆದುಕೊಳ್ಳುವ ರೀತಿ ಇವೆಲ್ಲಾ ಹೃದಯವನ್ನು ತುಂಬುವಂತೆ ಮಾಡುತ್ತವೆ.  ಅಂದಿನ ಕಾಲದಲ್ಲಿ ಊರಿನಲ್ಲಿ ಪರರಿಗೆ ಒಳ್ಳೆಯದು ಮಾಡಬೇಕೆಂಬ ಜನಸಮುದಾಯ, ಒಳ್ಳೆಯವರಿಗೆ ಒಳ್ಳೆಯವರಾಗಿರುವುದೇ ನಮ್ಮ ಹಿರಿತನ ಎಂದು ಭಾವಿಸುವ ಜನ ಇವೆಲ್ಲಾ ಇದ್ದ ರೀತಿ, ಹೀಗಿದ್ದರೆ  ಬದುಕು ಎಷ್ಟು ಸುಂದರ ಎಂಬ ಸೊಗಸಿನ ಭಾವವನ್ನು ನಮ್ಮಲ್ಲಿ ಭಿತ್ತುತ್ತಾ ಹೋಗುತ್ತದೆ.  ಅಂದಿನ ಜನದಲ್ಲಿ ದುಷ್ಟತೆ ಇರಲಿಲ್ಲವೆ?  ಇತ್ತು.  ಕಳ್ಳಕಾಕರಿದ್ದರು.  ಅಸೂಯಾಪರರಿದ್ದರು. ಭೂತ ಪಿಶಾಚಿಗಳೂ ಒಮ್ಮೊಮ್ಮೆ ಈ ಮೂರು ತಲೆಮಾರಿನ ನಿರೂಪಣೆಗಳಲ್ಲಿ ಕೇಂದ್ರ ಪಾತ್ರಗಳ ಸುತ್ತ ಸುತ್ತುಹಾಕಿವೆ.  ಈ ಕೇಂದ್ರ ಪಾತ್ರಗಳು ಇವೆಲ್ಲವನ್ನೂ ಗೌಣವಾಗಿರಿಸಿಕೊಂಡು ಇಲ್ಲವೇ ಅವೆಲ್ಲವನ್ನೂ ಮೀರಿಸಿಯೋ ಎಂಬಂತೆ  ತಮ್ಮ ಸಚ್ಚಾರಿತ್ರ್ಯದ ಹೃದ್ಭಾವವನ್ನು ಮೆರೆಸಿ, ತಮ್ಮ ವೈಯಕ್ತಿಕ ಅಹಂಸ್ವರೂಪಗಳಾದ ಸಂಪತ್ತು ಗಳಿಕೆ, ಸ್ವಜನಪಕ್ಷಪಾತ, ಮತ್ತೊಬ್ಬನನ್ನು ಮೀರಿಸಿ ದೊಡ್ಡವನೆನಿಸಿಕೊಳ್ಳುವಿಕೆ ಇವೆಲ್ಲಾ ಇಲ್ಲದೆ ತಮ್ಮ ಬದುಕನ್ನು ಭವ್ಯವಾಗಿಸಿಕೊಂಡ ರೀತಿ ಮರೆಯಲಾಗದ್ದು.  ಬದುಕಿದರೆ ಇಂಥಹ ಬದುಕು ಬದುಕಬೇಕು ಎಂದು ನಮ್ಮಲ್ಲಿ ಹೃದ್ಭಾವ ಹುಟ್ಟಿಸುವಂತದ್ದು.

ಇಲ್ಲಿನ ಎಲ್ಲ ಅನುಭವವನ್ನೂ ಹೇಳಲಿಕ್ಕೆ ನನ್ನ ಶಕ್ತಿಗೆ ಮಿತಿ ಇದೆ ಎನಿಸುತ್ತದೆ.  ಒಂದು ಸಂಗತಿಯನ್ನು ಹೇಳಿ ಲೇಖನವನ್ನು ಮುಗಿಸುತ್ತೇನೆ.  ಎ. ಆರ್. ಕೃಷ್ಣಶಾಸ್ತ್ರಿಗಳು ಮತ್ತು ಟಿ ಎಸ್ ವೆಂಕಣ್ಣಯ್ಯನವರ ಸ್ನೇಹ ಎಂಥದ್ದು ಎಂಬುದರ ಬಗ್ಗೆ ಇಡೀ ಕನ್ನಡ ನಾಡೇ ಬಲ್ಲದು.  ಈ ಕುರಿತು ಮೇಲೆ ಒಂದೆರಡು ಮಾತುಗಳನ್ನು ಹೇಳಿದ್ದೇನೆ.  ಒಮ್ಮೆ ಎ ಆರ್ ಕೃಷ್ಣಶಾಸ್ತ್ರಿಗಳು ಹಾಸಿಗೆ ಹಿಡಿದರು.  ವೈದ್ಯರೂ ಕೈಬಿಟ್ಟಿದ್ದರು.  ಟಿ ಎಸ್ ವೆಂಕಣ್ಣಯ್ಯನವರು ಪ್ರಾರ್ಥಿಸಿದರಂತೆ.  ದೇವರೇ ನನ್ನಲ್ಲಿರುವ ಒಂದಿಷ್ಟು ಆಯುಸ್ಸನ್ನು ಇವರಿಗೆ ಹಂಚಿ ಇವರನ್ನು ಉಳಿಸು ಎಂದು.  ಮುಂದೆ ಆರೋಗ್ಯವಂತರಾಗಿ ಉಳಿದ ಎ. ಆರ್. ಕೃಷ್ಣಶಾಸ್ತ್ರಿಗಳಂತೂ ತಾವು ಉಳಿದಿದ್ದಕ್ಕೆ ಟಿ ಎಸ್ ವೆಂಕಣ್ಣಯ್ಯನ ಪ್ರಾರ್ಥನೆಯೇ ಕಾರಣ ಎಂದು ಭಾವಿಸಿದ್ದೇನೆ ಎನ್ನುತ್ತಿದ್ದರು.  ಇಂಥಹ ಹೃದಯವಂತ ಇಡೀ ಲೋಕಕ್ಕಾಗಿ ತನ್ನ ಬದುಕನ್ನು ಸಣ್ಣದಾಗಿಸಿಕೊಂಡು ಬದುಕಿದವರು ಎಂಬುದರಲ್ಲಿ ಅಚ್ಚರಿಯೇನಿಲ್ಲ.

ಈ ಮೂರು ತಲೆಮಾರನ್ನು ಓದಿದಾಗ “ಈ ಲೋಕದಲ್ಲಿ ಇಂತಹ ಜೀವಿಗಳೇ ತುಂಬಿದ್ದರೆ ಪರಮಾತ್ಮ ನಿನ್ನ ಗಂಟೇನು ಹೋಗುತ್ತಿತ್ತು ಎಂದು  ಆ ಪರಮಾತ್ಮನನ್ನು ಕೇಳಬೇಕಿನಿಸುತ್ತಿದೆ.”  ಆದರೆ ಅತ ನಮ್ಮ ಬಳಿ ಬರಬೇಕಲ್ಲ.  ಬಳಿ ಬಾ ಎಂದು ಕರೆಯುವ ಇಚ್ಛೆ ಮಾತ್ರ ನನ್ನಿಂದ ಹೋಗದಂತೆ ಮಾಡು ಪರಮಾತ್ಮ.

ಈ ಅಪೂರ್ವ ಕೃತಿಯನ್ನು ಕೊಟ್ಟ ಆ ಧನ್ಯಜೀವಿ  ತ.ಸು. ಶಾಮರಾಯರಿಗೆ ಶಿರಬಾಗಿ ಸಾಷ್ಟಾಂಗ ನಮಸ್ಕರಿಸುತ್ತೇನೆ.

(ಈ ಅಭಿಪ್ರಾಯಗಳನ್ನು ಹೋದ ವರ್ಷ ಮೂರು ತಲೆಮಾರು ಪುಸ್ತಕವನ್ನು ಓದಿದಾಗ ಬರೆದಿದ್ದೆ.  ಇಂದು ತ.ಸು ಶಾಮರಾಯರ ಹುಟ್ಟುಹಬ್ಬದ ಸಂದರ್ಭದಲ್ಲಿ ನೆನಪಾಗಿ ಇಲ್ಲಿರಿಸಿದ್ದೇನೆ. ಇದನ್ನು ನೆನೆದು ಮತ್ತೊಮ್ಮೆ ಮನಸ್ಸು ಮೂಖವಾಗಿದೆ)
ತ. ಸು. ಶಾಮರಾಯರ ಕುರಿತ ಲೇಖನ ಇಲ್ಲಿದೆ http://www.facebook.com/photo.php?fbid=531820606880266&set=a.104095156319482.6048.101548536574144&type=1&theater

Tag: Mooru Talemaaru, Muru Talemaru

ಕಾಮೆಂಟ್‌ಗಳಿಲ್ಲ: