ಶುಕ್ರವಾರ, ಆಗಸ್ಟ್ 30, 2013

ಲಕ್ಷ್ಮೀ ಚಂದ್ರಶೇಖರ್

ಲಕ್ಷ್ಮೀ ಚಂದ್ರಶೇಖರ್

ಲಕ್ಷ್ಮೀ ಚಂದ್ರಶೇಖರ್ ಅವರು ರಂಗಭೂಮಿ ಮತ್ತು ದೂರದರ್ಶನದ ಧಾರವಾಹಿಗಳಲ್ಲಿ ತಮ್ಮ  ಕ್ರಿಯಾಶೀಲತೆ ಮತ್ತು ಶ್ರೇಷ್ಠ ಅಭಿವ್ಯಕ್ತಿಗಳಿಂದ ಪ್ರಸಿದ್ಧರಾಗಿದ್ದಾರೆ.

ಮೂಲತಃ ಹಾಸನದವರಾದ ಲಕ್ಷ್ಮೀ ಚಂದ್ರಶೇಖರ್ ಅವರು ಜನಿಸಿದ ದಿನ ಏಪ್ರಿಲ್ 21, 1950.  ಅವರ ಶಾಲಾ ವಿದ್ಯಾಭ್ಯಾಸ ಚನ್ನರಾಯಪಟ್ಟಣದ ನವೋದಯದಲ್ಲಿ ನೆರವೇರಿತು.  ಮುಂದೆ ಬೆಂಗಳೂರಿನ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಪದವಿ, ಮೈಸೂರಿನ ರೀಜನಲ್ ಕಾಲೇಜ್ ಆಫ್ ಎಜುಕೇಷನ್ ನಲ್ಲಿ ಬಿ.ಎ.ಎಡ್.( ಇಂಗ್ಲಿಷ್) ಪದವಿ, ಹಾಗೂ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ ಅವರು ಇಂಗ್ಲಿಷ್ ಸ್ನಾತಕೋತ್ತರ ಪದವಿ ಗಳಿಸಿದುದರ ಜೊತೆಗೆ ಲೀಡ್ಸ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ.   ತಾವು ಪದವಿ ವಿದ್ಯಾಭ್ಯಾಸ ನಡೆಸಿದ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿಯೇ ಅಧ್ಯಾಪನವನ್ನು ನಡೆಸಿದ ಅವರು ಹಲವು ವರ್ಷಗಳ  ಹಿಂದೆ ಐಚ್ಚಿಕ ನಿವೃತ್ತಿ ಪಡೆದಿದ್ದಾರೆ.

ಸಣ್ಣ ವಯಸ್ಸಿನಲ್ಲಿ  ತಮ್ಮ ಮನೆಯ ಬಳಿಯ ಬಯಲಿನಲ್ಲಿ  ಹಲವಾರು ದಿನಗಳವರೆಗೆ ಬೀಡುಬಿಟ್ಟಿದ್ದ ನಾಟಕ ತಂಡದ ಅಭ್ಯಾಸಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ಲಕ್ಷ್ಮೀ ಚಂದ್ರಶೇಖರ್ ಅವರಿಗೆ ಮುಂದೊಂದು ದಿನ ತಾವೂ ಅದರಲ್ಲಿ ಪಾತ್ರಧಾರಿಯಾಗಬಹುದೆಂಬ ಕಲ್ಪನೆಯೇ ಇರಲಿಲ್ಲ.  ಅವರಿಗೆ ಸಾಹಿತ್ಯವನ್ನು ಓದಿ ಬರಹಗಾರ್ತಿಯಗಬೇಕೆಂಬ ಪ್ರಬಲ ಇಚ್ಛೆ ಇತ್ತು.     ಮೈಸೂರಿನಲ್ಲಿ ಅವರು ಓದುತ್ತಿದ್ದ ದಿನಗಳಲ್ಲಿ ಅವರ ಅಧ್ಯಾಪಕರಾಗಿದ್ದ ಯು. ಆರ್. ಅನಂತಮೂರ್ತಿ ಮುಂತಾದವರಿಂದ ಅವರಿಗೆ ರಂಗಭೂಮಿಯಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಿತು.  ಕ್ರಮೇಣದಲ್ಲಿ ಅವರು ಸಮತೆಂತೋತಂಡದಲ್ಲಿ ಭಾಗಿಯಾಗತೊಡಗಿದರು.

ಪ್ರೊ. ಬಿ. ಕೆ. ಚಂದ್ರಶೇಖರ್ ಅವರನ್ನು ವರಿಸಿದ ನಂತರದಲ್ಲಿ ಅವರು ಎರಡು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ವಾಸ್ತವ್ಯ ಹೂಡಬೇಕಾಯಿತು.  1977ರಿಂದ ಮೊದಲುಗೊಂಡಂತೆ   ರಂಗ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಬದಲಾವಣೆಯ ಆಶಯ ಹೊತ್ತ ಸಮುದಾಯ’  ರಂಗತಂಡದಲ್ಲಿ  ಸಕ್ರಿಯವಾಗಿ ಪಾಲ್ಗೊಳ್ಳತೊಡಗಿದರು. ಇದುವರೆಗೆ ಅವರು ಕನ್ನಡ ಮತ್ತು ಇಂಗ್ಲಿಷ್ ಈ ಎರಡೂ ಭಾಷೆಗಳ ರಂಗಭೂಮಿಗಳಲ್ಲೂ  ಸುಮಾರು 40  ರಂಗಪ್ರಯೋಗಗಳಲ್ಲಿ ಪಾಲ್ಗೊಂಡಿದ್ದಾರೆ.  ಜೆ.ಎಂ. ಸೈಂಗಸ್‌ ಅವರ ವೆಲ್‌ ಆಫ್‌ ದ ಸೈಂಟ್ಸ್’,  ಪೀಟರ್‌ ಕೋರ್‌ ಅವರ ಸ್ನೇಕ್‌ ಪಿಟ್‌’, ಬ್ರೆಕ್ಟರ ಗೆಲಿಲಿಯೋ’, ಪ್ರಸನ್ನ ಅವರ ದಂಗೆಯ ಮುಂಚಿನ ದಿನಗಳು’, ಎಂ.ಎಸ್‌. ಸತ್ಯು ಅವರ ಕುರಿ’, ಯು.ಆರ್‌. ಅನಂತಮೂರ್ತಿಗಳ  ಸಂಸ್ಕಾರ’,  ಡಾ| ಅಂಕುರ ಮ್ಯಾಕ್ಸಿಂಗೊರ್ಕಿ ಅವರ ಲೋಯರ್‌ ಡೆಪ್ತ್', ಸಿಂಗಾಪುರದ ನಾಟಕಕಾರ ಸ್ಟೆಲ್ಲಾ ಕೋನ್‌ರ ಎಮಿಲಿ ಆಫ್‌ ಎಮರಾಲ್ಡ್‌ ಹಿಲ್‌ಆಧಾರಿತ  ಕಿತ್ತಲೆ ಮನೆ ಕಾವೇರಿಮುಂತಾದ ಪ್ರಸಿದ್ಧ ನಾಟಕಗಳು  ಇವುಗಳಲ್ಲಿ ಸೇರಿವೆ. 

ಮುಂದೆ 1998ರಲ್ಲಿ ಅವರು ಅಮೆರಿಕಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ  ಭಾರತೀಯತೆಯನ್ನು ಪ್ರತಿನಿಧಿಸುವ ಏನನ್ನಾದರೂ ವಿಶಿಷ್ಟವಾಗಿ ಹೇಳಬೇಕೆನಿಸಿತು.  ಈ ನಿಟ್ಟಿನಲ್ಲಿ  ಅವರು ಭಾರತೀಯ ಜಾನಪದ, ಸಾಹಿತ್ಯ ಮತ್ತು  ಪುರಾಣಗಳನ್ನು ಅಭಿವ್ಯಕ್ತಿಸುವ  ಸ್ತ್ರೀ ಪಾತ್ರಗಳಾದ ಗಾಂಧಾರಿ, ಸೀತಾ, ದ್ರೌಪದಿಯಂತಹ ಪಾತ್ರಗಳ ಜೊತೆ  ಜೊತೆಗೆ ಸಮಕಾಲೀನ ವ್ಯಕ್ತಿಗಳಾದ ರೂಪ ಕನ್ವರ್, ಭನ್ವಾರಿ ದೇವಿ ಹೀಗೆ ಒಟ್ಟು ಏಳು ವಿವಿಧ ಸ್ತ್ರೀ ಪಾತ್ರಗಳನ್ನು ಒಳಗೊಂಡ ಜಸ್ಟ್ ಎ ವುಮೆನ್ಎಂಬ ಏಕವ್ಯಕ್ತಿ ಅಭಿನಯದ ನಾಟಕವನ್ನು (solo play) ಪ್ರದರ್ಶಿಸಿದರು.  ಇದರ ಕನ್ನಡದ ರೂಪದ ಹೆಸರು ಹೆಣ್ಣಲ್ಲವೆ’.   ಚಂದ್ರಶೇಖರ ಕಂಬಾರರ ಸಿಂಗಾರೆವ್ವ ಮತ್ತು ಅರಮನೆಯರಂಗ ಅಳವಡಿಕೆಯನ್ನು ಸಹಾ ಅವರು ಇಂಗ್ಲಿಷಿನಲ್ಲಿ  ಸಿಂಗಾರೆವ್ವ ಅಂಡ್ ಪ್ಯಾಲೇಸ್ಎಂಬ ಹೆಸರಿನಲ್ಲಿ ಏಕ ವ್ಯಕ್ತಿ ನಾಟಕವನ್ನಾಗಿ ಪ್ರದರ್ಶಿಸಿದ್ದಾರೆ.    ಮೀಡಿಯಾ ಅಂಡ್ ಎದ್ದೇಳು’, ‘ಕಿತ್ತಲೆಮನೆ ಕಾವೇರಿ’  ಅವರ ಇತರ ಪ್ರಸಿದ್ಧ ಏಕಪಾತ್ರ ಅಭಿವ್ಯಕ್ತಿಯ ರಂಗಪ್ರದರ್ಶನಗಳಾಗಿವೆ.   ಭಾರತದ ಹಲವಾರು ರಂಗ ಉತ್ಸವಗಳು, ಅಮೆರಿಕ, ಯೂರೋಪಿನ ಹಲವಾರು ದೇಶಗಳೇ ಅಲ್ಲದೆ, ಲಕ್ಷ್ಮೀ ಚಂದ್ರಶೇಖರ್ ಅವರು ಇನ್ನಿತರ ಅನೇಕ ರಾಷ್ಟ್ರಗಳಲ್ಲಿ ಸಹಾ ರಂಗಪ್ರದರ್ಶನಗಳನ್ನು ನೀಡಿದ್ದಾರೆ.

ಹೀಗೆ ರಂಗಭೂಮಿಯಲ್ಲಿ ಮಹತ್ವದ ಸಾಧನೆಗೈದ ಲಕ್ಷ್ಮೀ ಚಂದ್ರಶೇಖರ್ ಅವರು, ಕಿರುತೆರೆಯಲ್ಲಿ ಟಿ. ಎನ್. ಸೀತಾರಾಂ ಅವರ ಪ್ರಸಿದ್ಧ ಧಾರಾವಾಹಿಯಾದ ಮಾಯಾಮೃಗದಲ್ಲಿನ ಸಾಂಪ್ರದಾಯಿಕ ಗೃಹಿಣಿ ಕಮಲು  ಪಾತ್ರದ  ಸುಂದರ ನಿರ್ವಹಣೆಯಿಂದ  ಮನೆಮಾತಾದರು.  ಗಿರೀಶ್ ಕಾಸರವಳ್ಳಿಯವರ ಎಸ್. ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ಗೃಹಭಂಗದಲ್ಲಿನ ಗಂಗವ್ವನ ಪಾತ್ರದಲ್ಲಿನ  ಅವರ ಅಭಿನಯ ಮತ್ತೊಂದು ಮೇರುಮಟ್ಟದ್ದು.   ಮಾಲ್ಗುಡಿ ಡೇಸ್‌, ಕಾಮನಬಿಲ್ಲು, ನೀನಡೆವ ದಾರಿಯಲ್ಲಿಸ್ತ್ರೀ, ಬಾಂಧವ್ಯ, ಸಾಹಸ ಲಕ್ಷ್ಮೀಯರು, ಮಂಥನ, ಬೃಂದಾವನ ಮುಂತಾದವು ಅವರ ಅಭಿನಯದ ಇನ್ನಿತರ ಕೆಲವು ಧಾರವಾಹಿಗಳು.

ಅಧ್ಯಾಪನ, ರಂಗಭೂಮಿ, ಕಿರುತೆರೆಯಲ್ಲಿನ ವೈವಿಧ್ಯತೆಗಳ ಜೊತೆಗೆ ಲಕ್ಷ್ಮೀ ಚಂದ್ರಶೇಖರ್ ಅವರು ದಿ ಹಿಂದೂಮುಂತಾದ ಪ್ರಸಿದ್ಧ ಪತ್ರಿಕೆಗಳಲ್ಲಿ ಅಂಕಣಗಾರ್ತಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಮಾಯಾಮೃಗ, ಗೃಹಭಂಗ ಮುಂತಾದ ಕಿರುತೆರೆಯ ಪಾತ್ರಗಳು ಲಕ್ಷ್ಮೀ ಚಂದ್ರಶೇಖರ್ ಅವರಿಗೆ ಪ್ರಶಸ್ತಿಗಳನ್ನು ತಂದಿವೆ. ರಂಗಭೂಮಿಯಲ್ಲಿನ ಅವರ ಸಾಧನೆಗಾಗಿ ವಿಶ್ವದಾದ್ಯಂತ ಹಲವಾರು ಸಂಘ ಸಂಸ್ಥೆಗಳ ಗೌರವ ಅವರಿಗೆ ಲಭಿಸಿದೆ.  ಇವೆಲ್ಲಕ್ಕೂ ಮಿಗಿಲಾಗಿ ಕನ್ನಡ ಜನರ ಪ್ರೀತಿ, ಅಭಿಮಾನ, ಪ್ರೋತ್ಸಾಹಗಳು ಅವರೊಡನೆ ನಿರಂತರವಾಗಿ ಜೊತೆಯಾಗಿವೆ.


ನಮ್ಮ ಮಹಾನ್ ಕಲಾವಿದರಲ್ಲೋಬ್ಬರಾದ ಲಕ್ಷ್ಮೀ ಚಂದ್ರಶೇಖರ್ ಅವರಿಗೆ ಹೃತ್ಪೂರ್ವಕ ಶುಭ ಹಾರೈಕೆಗಳು.

Tag: Lakshmi Chandrashekar

ಕಾಮೆಂಟ್‌ಗಳಿಲ್ಲ: