ಶನಿವಾರ, ಆಗಸ್ಟ್ 31, 2013

ಕನಸು ಬಿತ್ತಿದವರು

ಕನಸು ಬಿತ್ತಿದವರು
-ಎಸ್ ಸುರೇಶ್ ಕುಮಾರ್

ಮೂರು ತಲೆಮಾರಿನ ಮಹಿಳೆಯರು ನನ್ನ ಬದುಕಿನ ಮೇಲೆ ಬಹುವಾಗಿ ಪ್ರಭಾವ ಬೀರಿದ್ದಾರೆ. ನನ್ನ ತಾಯಿ ಸುಶೀಲಮ್ಮ, ಹೆಂಡತಿ ಕೆ.ಎಚ್.ಸಾವಿತ್ರಿ ಹಾಗೂ ಮಗಳು ದಿಶಾ. ಈ ಮೂವರೂ ಹಂತ ಹಂತವಾಗಿ ನನ್ನ ವ್ಯಕ್ತಿತ್ವವನ್ನು ತಿದ್ದಿ ತೀಡಿದ್ದಾರೆ.

ನನ್ನೊಳಗೆ ಎಂದಿಗೂ ಆಶಾಭಾವನೆ ಬತ್ತದೇ ಇರುವುದಕ್ಕೆ ಇವರೇ ಕಾರಣ. ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಇದೆ.

ಆದರೆ ನನ್ನ ಮನೆಯಲ್ಲಿ ನನಗೆ ಶೇ 33ರಷ್ಟು ಮೀಸಲಾತಿ, ಉಳಿದ ದರ್ಬಾರ್ ಎಲ್ಲ ಇವರದ್ದೇ. ಇವರಿತ್ತ ಪ್ರೀತಿಯನ್ನು ಅಳೆದು ನೋಡಲು ಸಾಧ್ಯವೇ ಇಲ್ಲ.

ಅಮ್ಮ ಶಾಲಾ ಶಿಕ್ಷಕಿ. ಅವಳ ಮಾರ್ಗದರ್ಶನ ಇಲ್ಲದೇ ಹೋಗಿದ್ದರೆ ನಾನು ಈ ಮಟ್ಟಿಗೆ ಬೆಳೆಯಲು ಆಗುತ್ತಿರಲಿಲ್ಲ. ಅಮ್ಮನಿಗೆ ನಾನೊಬ್ಬನೇ ಮಗ. ಅವಳು ಶಿಕ್ಷಕಿಯಾಗಿದ್ದರಿಂದ ವಾತ್ಸಲ್ಯವನ್ನು ಉಣಬಡಿಸುತ್ತಲೇ ನನಗೇ ಅರಿವಿಲ್ಲದಂತೆ ಶಿಕ್ಷಣ ನೀಡಿದಳು.

`ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು' ಎಂಬುದು ನನ್ನ ಪಾಲಿಗೆ ಅಕ್ಷರಶಃ ನಿಜವಾಗಿತ್ತು. ಶಿಕ್ಷಕಿಯಾಗಿದ್ದರಿಂದ ಮಗನಾಗಿ, ಶಿಷ್ಯನಾಗಿ ಸ್ವೀಕರಿಸಿ ಏಕಕಾಲಕ್ಕೆ ಪ್ರೀತಿಯಿಂದಲೇ ತಿದ್ದುವ ಕಾರ್ಯ ಮಾಡಿದಳು.

ಅವಳ ಪ್ರಾಮಾಣಿಕ ಮತ್ತು ನಿಸ್ಪೃಹ ಬದುಕು ನನಗೆ ಎಂದಿಗೂ ಮಾರ್ಗ ತೋರಿಸುತ್ತದೆ. ಅವಳ ಪ್ರತಿ ಮಾತೂ ಎದೆಯಾಳದಲ್ಲಿ ಕೂತು ಬಲವಾಗಿ ನನ್ನನ್ನು ರೂಪಿಸಿದೆ.

`ಇತರರ ಸ್ವತ್ತಿಗೆ ಎಂದಿಗೂ ಆಸೆ ಪಡಬಾರದು, ನಿನ್ನತನವನ್ನು ಕೈಬಿಟ್ಟು ಏನನ್ನೂ ಪಡೆಯಬಾರದು' ಎಂಬ ಅವಳ ಮಾತು ಇಂದಿಗೂ ನನ್ನಲ್ಲಿ ಅಚ್ಚಾಗಿ ಉಳಿದು ಮುನ್ನಡೆಸುತ್ತಿದೆ.

ಇವಳಾದ ಮೇಲೆ ನನ್ನ ಬದುಕಿಗೆ ಜತೆಯಾದವಳು ಪತ್ರಕರ್ತೆ ಕೆ.ಎಚ್.ಸಾವಿತ್ರಿ. ಅಕ್ಷರದೊಂದಿಗೆ ಆಟವಾಡುವ ಜಾಣೆ ಹೃದಯವನ್ನಾಳಿದಳು. ಮದುವೆಯೇ ಆಗಬಾರದೆಂದು ನಿಶ್ಚಯ ಮಾಡಿದ್ದವನ ಬಾಳಲ್ಲಿ ಸಂಚಲನ ಮೂಡಿಸಿದವಳು. ಈಕೆ ನನ್ನ ಬದುಕಿನ ಬಹುದೊಡ್ಡ ಪ್ರೇರಕ ಶಕ್ತಿ.

ಪ್ರತಿ ಹಂತದ ನಿರ್ಧಾರಕ್ಕೂ ನನ್ನವಳ ಬಲ, ಬೆಂಬಲ ಇದೆ. ಕುಟುಂಬ, ರಾಜಕೀಯ ಯಾವುದೇ ವಿಚಾರದಲ್ಲಿ ತಲೆ ಕೆಡಿಸಿಕೊಂಡು ಕೂತಾಗ ಮಗುವನ್ನು ಸಂತೈಸುವ ತಾಯಿಯಾಗುತ್ತಾಳೆ. ಈ ಪ್ರಪಂಚದಲ್ಲಿ ಗಂಡು ನಿಜಕ್ಕೂ ಅದೃಷ್ಟವಂತ. ಇಬ್ಬಿಬ್ಬರು ತಾಯಂದಿರು ಸಿಕ್ಕು ಮಗುವಾಗುವ ಸಂಭ್ರಮವೇ ಬೇರೆ.

ಇನ್ನು ಮಗಳು ದಿಶಾ ಉತ್ಸಾಹದ ಚಿಲುಮೆ. ಒತ್ತಡದ ಬದುಕಿನಲ್ಲಿ ಬರಡು ಮನಃಸ್ಥಿತಿ ಆವರಿಸುವ ಮುನ್ನವೇ ಪುಟಿದೇಳುವ ಸ್ಫೂರ್ತಿಯಾಗಿ ಕಾಣುತ್ತಾಳೆ ಮತ್ತು ಕಾಡುತ್ತಾಳೆ. ನನ್ನೆಲ್ಲ ಕಾರ್ಯದ ಹಿಂದೆ ವಿಮರ್ಶಕಿಯಂತೆ ಕಾರ್ಯ ನಿರ್ವಹಿಸುತ್ತಾಳೆ.

ನಡೆ, ನುಡಿ ಎಲ್ಲವನ್ನೂ ತನ್ನದೇ ರೀತಿಯಲ್ಲಿ ವಿಮರ್ಶಿಸಿ ಅದನ್ನು ಇನ್ನಷ್ಟು ಉತ್ತಮವಾಗಿಸಿಕೊಳ್ಳುವಂತೆ ಮಾಡುತ್ತದೆ ಅವಳ ಮಾರ್ಗದರ್ಶನ. ನಾ ಬರೆಯುವ ಲೇಖನಗಳ ಮೊದಲ ಓದುಗಳು, ನಾ ಮಾಡುವ ರಾಜಕೀಯ ಭಾಷಣದ ಮೊದಲ ಕೇಳುಗಳು ಇವಳೇ.

ತಾಯಿ, ಹೆಂಡತಿ, ಮಗಳು ನನ್ನ ಬದುಕಿನ, ಭಾವನೆಯ ಆತ್ಮಸ್ಥೈರ್ಯದ ಭಾಗ. ಆಯಾಯ ಕಾಲಕ್ಕೆ ವ್ಯಕ್ತಿತ್ವವನ್ನು ಮಾಗಿಸಿ, ಪ್ರೌಢಿಮೆ ತಂದುಕೊಟ್ಟ ಧೀರೆಯರು.

ಕನಸುಗಳನ್ನು ಬಿತ್ತಿ, ಕಲ್ಪನೆಯನ್ನು ತೀಡಿ, ಯೋಜನೆಯನ್ನು ರೂಪಿಸುವಂತೆ ಮಾಡಿ, ಸಾಧನೆಯ ಮೆಟ್ಟಿಲುಗಳನ್ನು ಏರಿದಾಗ ಮಕ್ಕಳಂತೆ ಖುಷಿ ಪಟ್ಟ ನನ್ನ ಪಾಲಿನ ತಾಯಂದಿರು.

ಕೃಪೆ: ಪ್ರಜಾವಾಣಿ

Tag: S Suresh Kumar

ಕಾಮೆಂಟ್‌ಗಳಿಲ್ಲ: