ಶನಿವಾರ, ಆಗಸ್ಟ್ 31, 2013

ಜಮ್ನಾಲಾಲ್ ಬಜಾಜ್


ಜಮ್ನಾಲಾಲ್ ಬಜಾಜ್

ಬಜಾಜ್ ಸಂಸ್ಥೆಯ ಹೆಸರನ್ನು ಕೇಳರಿಯದವರು ಭಾರತದಲ್ಲಿ ಇಲ್ಲ.  ಹಲವು ದಶಕಗಳಿಂದ ಬಜಾಜ್ ಸಂಸ್ಥೆ ಭಾರತದ ಜನಮನದಲ್ಲಿ ಚಿರವಿರಾಜಿತ.  ಒಂದು ವ್ಯಾಪಾರೀ ಸಂಸ್ಥೆ ತನ್ನ ಉತ್ಪನ್ನಗಳಿಂದ ತನ್ನ ಲಾಭ ಗಳಿಕೆಯಿಂದ ಹೆಸರುವಾಸಿಯಾಗುವುದು ಸಹಜವೇ.  ಆದರೆ ಈ ಸಂಸ್ಥೆಗೆ ಮೂಲಭೂತ ಅಡಿಪಾಯ ಹಾಕಿದ ವ್ಯಕ್ತಿ ಒಬ್ಬ ಮಹಾನ್ ತ್ಯಾಗಿ ಮತ್ತು ಅಪ್ರತಿಮ ರಾಷ್ಟ್ರಭಕ್ತನಾಗಿ ತನ್ನೆಲ್ಲವನ್ನೂ ರಾಷ್ಟ್ರಸೇವೆಗೆ ಎರೆದು ಸಂತನಾಗಿ ಜೀವನ ನಡೆಸಿದವ ಎಂಬುದು  ಭಾರತೀಯ ಚರಿತ್ರೆಯ ಪುಟಗಳಲ್ಲಿ ಮಹತ್ವಪೂರ್ಣವೆನಿಸುವಂತೆ ದಾಖಲಾಗಿದೆ.

ಒಮ್ಮೆ ರಾಷ್ಟ್ರಪಿತ ಗಾಂಧೀಜಿಯ ಬಳಿಗೆ ಒಬ್ಬ ಯುವಕ ಬಂದ. ನಿಮ್ಮಲ್ಲಿ ನನ್ನದೊಂದು ಯಾಚನೆಯಿದೆಎಂದ. ಗಾಂಧೀಜಿಯವರು ಆಫ್ರಿಕದಿಂದ ಭಾರತಕ್ಕೆ  ಬಂದಾಗಿನಿಂದ ಈ ಶ್ರದ್ಧಾವಂತ ಯುವಕನ ಪರಿಚಯವಿತ್ತು. ಕೇಳು, ಕೊಡುವ ಶಕ್ತಿ ನನ್ನಲ್ಲಿದ್ದರೆ ಖಂಡಿತ ಕೊಡುತ್ತೇನೆಎಂದರು. ನನ್ನನ್ನು ನಿಮ್ಮ ಮಗ ಎಂದು ಭಾವಿಸಬೇಕುಎಂದು  ನಮ್ರತೆಯಿಂದ  ನುಡಿದ ಆ ಯುವಕ. ಈ ವಿಚಿತ್ರ ಬಯಕೆ ಕೇಳಿ ಗಾಂಧೀಜಿ ಸಹಾ ದಂಗಾದರು. ಸ್ವಲ್ಪ ಹೊತ್ತಿನ ನಂತರದಲ್ಲಿ ಮಹಾತ್ಮರು ನುಡಿದರು  ಒಪ್ಪಿದೆ, ಆದರೆ ನಾನೇನೂ ಕೊಡುತ್ತಿಲ್ಲ,  ಕೊಡುತ್ತಿರುವವ ನೀನೇ!’.  ಈ ಯುವಕ ತಾನು ಅಪಾರ ಆಸ್ಥಿಯನ್ನು ಹೊಂದಿದ್ದರೂ ಅವೆಲ್ಲವೂ ತನ್ನದಲ್ಲವೆನ್ನುವಂತೆ ಸಂತನಂತೆ, ಮಹಾತ್ಮರ ಅನುಯಾಯಿಯಾಗಿ, ಸ್ವಾತಂತ್ರ ಹೋರಾಟದಲ್ಲಿ ಮಹಾತ್ಮರ ನೆರಳಾಗಿ ಅವರ ಐದನೆಯ ಪುತ್ರನಂತೆ ಬದುಕಿ ಬಾಳಿದ.

ಮಕ್ಕಳಿಲ್ಲದವರು ಮಕ್ಕಳನ್ನು ದತ್ತು ಪಡೆಯುವುದರ ಬಗ್ಗೆ ಕೇಳುತ್ತೇವೆ. ಆದರೆ ತಂದೆಯನ್ನು ದತ್ತು ಪಡೆಯುವುದು ವಿಶೇಷ. ಈ ವಿಶೇಷವನ್ನು ಸಾಧಿಸಿದ್ದ ಸಾಹಸಿ ಯುವಕ. ನಿನಗೆ ಯೋಗ್ಯ ತಂದೆಯಾಗುವ ಶಕ್ತಿ ನನಗೆ ಬರಲಿಎಂದು ಗಾಂಧೀಜಿಯೇ ಹೇಳುವಂತೆ ನಡೆದುಕೊಂಡ ಈ ಅಪರೂಪದ ವ್ಯಕ್ತಿ.   ಈತನೇ ಜಮ್ನಾಲಾಲ್ ಬಜಾಜ್. ಈ ಮಹನೀಯರು ಜನಿಸಿದ ದಿನ ನವೆಂಬರ್ 4, 1889.

ರಾಜಸ್ಥಾನದ ಒಂದು ಊರು ಜಯಪುರ. ಸಿಕಾರ್ ಅಲ್ಲಿನ ಒಂದು ಜಿಲ್ಲೆ.  ಅದರಲ್ಲಿ ಒಂದು ಹಳ್ಳಿ ಕಾಶೀ ಕಾ ಬಾಸ್. ಅಲ್ಲಿ ಒಂದು ಹಳೆಯ ಮನೆ. ಆ ಮನೆಯಾಕೆ ಬಿರ್ದಿಬಾಯಿ. ಈಕೆಯ ಜೊತೆಗೆ ಸಿದೀಬಾಯಿ ಎಂಬ ಮಹಿಳೆ ಮಾತನಾಡುತ್ತಿದ್ದಳು. ತನ್ನ ಕಷ್ಟ ಸುಖ ಹೇಳಿಕೊಳ್ಳುತ್ತಿದ್ದಳು. ದತ್ತು ತೆಗೆದುಕೊಂಡ ಒಬ್ಬ ಹುಡುಗನೂ ಸತ್ತು ಹೋದ. ಈ ತಾಯಿ ಹೃದಯವನ್ನು ತಣಿಸುವವರು ಯಾರು?’ ಎಂದು ಸಂಕಟ ಪಟ್ಟಳು. ಸಾಧ್ವಿಯಾದ  ಬಿರ್ದಿಬಾಯಿ ಅನುತಾಪ ಸೂಚಿಸಿದಳು. ಆಗ ಅಲ್ಲಿಗೆ ಆಟವಾಡುತ್ತ ಐದು ವರ್ಷದ ಒಬ್ಬ ಪುಟ್ಟ ಹುಡುಗ ಬಂದ. ಈ ಮುದ್ದಾದ ಹುಡುಗ  ಯಾರ ಮಗ?’ ಎಂದು ಕೇಳಿದಳು. ಸಿದೀಬಾಯಿ ಸ್ವಂತ ಮಕ್ಕಳನ್ನು ನಿನ್ನ ಮಗಎಂದು ಪರಿಚಯ ಮಾಡಿಕೊಡುವುದು ಅಲ್ಲಿಯ ಪದ್ಧತಿ. ಇದೇ ರೀತಿ ಬಿರ್ದಿಬಾಯಿ, ಏಕೆ, ಅದು ನಿನ್ನ ಮಗಎಂದು ಹೇಳಿದಳು. ಮಗುವಿನ ವಿಚಾರವನ್ನೇ ಮಾಡುತ್ತಿದ್ದ ಸಿದೀಬಾಯಿ ಆ ಮಾತನ್ನು ನಿಜವೆಂದೇ ನಂಬಿದಳು.

ಸೇಠ್ ಬಚ್ಚಾರಾಜ್ ವರ್ಧಾದ ಒಬ್ಬ ಪ್ರಮುಖ ವ್ಯಾಪಾರಿ. ಇವರ ಪೂರ್ವಿಕರು ಸಹ ಸಿಕಾರ್‌ನವರೇ. ಹೆಂಡತಿ ಸಿದೀಬಾಯಿಯ ಜೊತೆಗೆ ದತ್ತು ಮಗುವಿಗಾಗಿ ಹುಡುಕುತ್ತಾ ಬಂದಿದ್ದರು. ಸಿದೀಬಾಯಿ ಗಂಡನಿಗೆ ಪುಟ್ಟ ಬಾಲಕನ ವಿಷಯ ತಿಳಿಸಿದಳು. ಇಬ್ಬರೂ ಬಿರ್ದಿಬಾಯಿಯ ಗಂಡ ಕನೀರಾಮ್ ಬಜಾಜರ ಬಳಿ ಹೋದರು. ನಡೆದ ವಿಷಯವನ್ನು ತಿಳಿಸಿ ಹುಡುಗನನ್ನು ದತ್ತುಕೊಡುವಂತೆ ಕೇಳಿದರು. ಪುಟ್ಟ ಜಮ್ನಾಲಾಲ್ನನ್ನು ಕೊಡುವ ಯೋಚನೆ ದಂಪತಿಗಳಿಬ್ಬರಿಗೂ ಇರಲಿಲ್ಲ. ಆದರೆ ಬಚ್ಚಾರಾಜ ದಂಪತಿ ಗಳು ಒಂದೇ ಹಠ ಹಿಡಿದರು. ಕನೀರಾಮ ಬಜಾಜರು ಯೋಚಿಸಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು. ಸಹಾನುಭೂತಿಗೇ ಆಗಲಿ ಒಂದು ಮಾತು ಹೇಳಿದ ಮೇಲೆ ಅದನ್ನು ಉಳಿಸಿಕೊಳ್ಳಬೇಕು. ಕೊಟ್ಟ ಮಾತು ಮಗನಿಗಿಂತ ದೊಡ್ಡದು.

ಕನೀರಾಮರ ನಿಲುವು ಬಚ್ಚಾರಾಜರ ಮೇಲೆ ಪ್ರಭಾವ ಬೀರಿತು. ಕೃತಜ್ಞತೆಯನ್ನು ಸೂಚಿಸಿದರು. ಹಣ ಕೊಡಲು ಮುಂದಾದರು. ಕನೀರಾಮರು ಹಣವಂತರಲ್ಲ ದಿದ್ದರೂ ಕೊಡುಗೆಯನ್ನು ಸ್ವೀಕರಿಸಲಿಲ್ಲ. ಮಾತಿಗೋಸ್ಕರ ಮಗನನ್ನು ಕೊಟ್ಟೇನೇ ವಿನಾ ಹಣಕ್ಕಲ್ಲಎಂದು ಸ್ಪಷ್ಟಪಡಿಸಿದರು. ತೀರ ಬಲವಂತ ಪಡಿಸಿದಾಗ, ‘ಕೊಡಲೇಬೇಕೆಂಬುದು ನಿಮ್ಮ ಹಠವಾದರೆ ಬಾವಿ ತೋಡಿಸಿ. ಈ ಹಳ್ಳಿಯ ನೀರಿನ ತೀವ್ರ ಅಭಾವ ಸ್ವಲ್ಪ ಮಟ್ಟಿಗಾದರೂ ನೀಗಲಿಎಂದರು.

ಜಮ್ನಾಲಾಲನಿಗೆ ಆರು ವರ್ಷ ತುಂಬಿತು. ಆಗ ವರ್ಧಾದ ಮರಾಠಿ ಶಾಲೆಗೆ ಸೇರಿದ. ನಾಲ್ಕು ವರ್ಷ ಓದು ಮುಂದುವರಿಯಿತು. ಓದು ಸಾಕು. ವ್ಯಾಪಾರ ಕಲಿಯಲಿಎಂದು ಯೋಚಿಸಿದರು ಬಚ್ಚಾರಾಜರು. ಅಲ್ಲಿಗೆ ಹುಡುಗನ ಓದು ಮುಗಿಯಿತು, ವ್ಯಾಪಾರದ ಅನುಭವ ಪ್ರಾರಂಭ ವಾಯಿತು. ನಿಜವಾಗಿ ಜಮ್ನಾಲಾಲರನ್ನು ಸುಸಂಸ್ಕೃತರ ನ್ನಾಗಿ ಮಾಡಿದ್ದು ಪುಸ್ತಕದ ಓದಲ್ಲ, ಸಾಧನೆ, ಲೋಕಾನುಭವ ಮತ್ತು ತೀವ್ರ ಬುದ್ಧಿಶಕ್ತಿ.

ವ್ಯಾಪಾರವನ್ನು ಹುಡುಗ ಆಸಕ್ತಿಯಿಂದ ಕಲಿಯಲು ಉತ್ತೇಜನ ಕೊಡಬೇಕು ಎಂದು ಬಚ್ಚಾರಾಜರಿಗೆ ಅನ್ನಿಸಿತು. ಅದಕ್ಕಾಗಿ ಹುಡುಗನಿಗೆ ಪ್ರತಿದಿನ ಒಂದು ರೂಪಾಯಿ ಕೊಡುವ ಏರ್ಪಾಟು ಮಾಡಿದರು. ಹುಡುಗ ಹಣವನ್ನು ಹಾಳುಮಾಡದೆ ಜೋಪಾನವಾಗಿ ಕೂಡಿಡುತ್ತಿದ್ದ. ಅದನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಉಪಯೋಗಿಸಬೇಕೆಂದು ನಿರ್ಧರಿಸಿದ. ಈ ಕಾಲದಲ್ಲಿ (1906) ನಾಗಪುರದಿಂದ ಮರಾಠಿ ಪತ್ರಿಕೆ ಕೇಸರಿಯ ಹಿಂದಿ ಅವತರಣಿಕೆ ಪ್ರಕಟವಾಗಲು ಪ್ರಾರಂಭವಾಯಿತು. ಇದರ ಸಂಪಾದಕರು ಲೋಕಮಾನ್ಯ ಬಾಲಗಂಗಾಧರ ತಿಲಕರು. ಜಮ್ನಾಲಾಲ್ನಿಗೆ ತಿಲಕರ ಈ ಪ್ರಯತ್ನ ಹಿಡಿಸಿತು. ಕೂಡಿಹಾಕಿದ್ದ ಹಣದಿಂದ ನೂರು ರೂಪಾಯಿ ಸಹಾಯ ಧನವನ್ನು ತಿಲಕರ ಯೋಜನೆಗೆ ಕಳುಹಿಸಿದ. ಗಿಡದ ಸ್ವಭಾವ ಮೊಳಕೆಯಲ್ಲೇ ಕಾಣಲು ಪ್ರಾರಂಭವಾಯಿತು.

ಮನೆಯಲ್ಲಿ ತನ್ನ ಪತ್ನಿ ಮತ್ತು ಹಿರಿಯ ಬಚ್ಚಾರಾಜರನ್ನು ಉಳಿದು ಇತರರ ಸಾವಿನ ಮೇಲೆ ಸಾವನ್ನು ಕಂಡು ಜಮ್ನಾಲಾಲ್ ಬಜಾಜನಿಗೆ ಜೀವನದ ಅನಿಶ್ಚಿತತೆ ಗೊತ್ತಾಯಿತು. ಇದನ್ನು ಎಂದಿಗೂ ಮರೆಯಬಾರದು ಎಂದು, ‘ಸಾವು ನಿಶ್ಚಿತ. ಅನ್ಯಾಯದಿಂದ ದೂರವಿರುಎಂದು ಬರೆದು ಗೋಡೆಯ ಮೇಲೆ ತೂಗು ಹಾಕಿದ.

1907ರಲ್ಲಿ ಸೇಠ್ ಬಚ್ಚಾರಾಜರು ಕಣ್ಣು ಮುಚ್ಚಿದರು. ತಮ್ಮ ಎಲ್ಲ ಆಸ್ತಿಯನ್ನೂ ದತ್ತು ಮೊಮ್ಮಗನಿಗೆ ಬಿಟ್ಟು ಹೋಗಿದ್ದರು. ಅವೆಲ್ಲ ಸುಮಾರು ಐದಾರು ಲಕ್ಷಗಳಾಗುತ್ತಿದ್ದವು. ಜಮ್ನಾಲಾಲ್ ಇದಕ್ಕೆ ಆಸೆ ಪಡಲಿಲ್ಲ.  ಆ ಹಣ ತಮ್ಮದಲ್ಲ ಪರೋಪಕಾರಕ್ಕಾಗಿರುವ ಹಣ ಎಂದು ತಿಳಿದರು. ಬಚ್ಚಾರಾಜರಿಂದ ಮೂಲತಃ ಎಷ್ಟು ಪಡೆದರೋ ಅದರ ಐದರಷ್ಟು ಹಣವನ್ನು ಧರ್ಮ ಕಾರ್ಯಗಳಿಗೆ ಉಪಯೋಗಿಸಿದರು.

ವ್ಯಾಪಾರದಲ್ಲಿ ಲಾಭವಾಗಬೇಕಾದರೆ ಮೋಸ ಮಾಡದೆ ವಿಧಿಯಿಲ್ಲ ಎಂದು ಕೆಲವರ ಭಾವನೆ. ಇದನ್ನು ಸುಳ್ಳು ಮಾಡಿ ಪ್ರಾಮಾಣಿಕ ವ್ಯಾಪಾರದಿಂದಲೂ, ಲಾಭ ಸಾಧ್ಯ ಎಂದು ತೋರಿಸಿದವರು ಜಮ್ನಾಲಾಲ್, ವ್ಯಾಪಾರದಲ್ಲಿ ತತ್ವನಿಷ್ಠರಾಗಿರಬೇಕು, ಉದಾರ ವರ್ತನೆ ಇರಬೇಕು ಎಂಬುದು ಅವರ ನಿಲುವು.

ಒಂದು ಸಲ ಹತ್ತಿಯ ವ್ಯಾಪಾರದಲ್ಲಿ ಹಿಂಜರಿತ ಉಂಟಾಯಿತು. ಹೀಗಾಗಿ ವ್ಯಾಪಾರಿಗಳ ನಡುವೆ ತೀವ್ರ ಸ್ಪರ್ಧೆ ಉಂಟಾಯಿತು. ಅನೇಕರು ಮೋಸದ ಹಾದಿಯನ್ನು ಹಿಡಿದರು. ಹತ್ತಿಯ ಬೇಲುಗಳ ತೂಕ ಹೆಚ್ಚಿಸಲು ಅವುಗಳನ್ನು ಒದ್ದೆ ಮಾಡಿದರು. ನೀವು ಹೀಗೇ ಮಾಡಿಎಂದು ಜಮನಾ ಲಾಲರಿಗೆ ಅವರ ಸಹೋದ್ಯೋಗಿಗಳೇ ಸಲಹೆ ಕೊಟ್ಟರು. ಇದಕ್ಕೆ ಜಮ್ನಾಲಾಲ್ ಒಪ್ಪಲಿಲ್ಲ. ಅಪಮಾರ್ಗಗಳಿಂದ ಲಾಭ ಗಳಿಸುವುದು ಅವರಿಗೆ ಬೇಡವಾಗಿತ್ತು. ಹೀಗಾಗಿ ಅವರು ಕೆಲವು ಬಾರಿ ನಷ್ಟವನ್ನು ಅನುಭವಿಸಬೇಕಾಯಿತು. ಆದರೆ ಅವರು ಧೃತಿಗೆಡಲಿಲ್ಲ.

ಜಮ್ನಾಲಾಲರ ಹತ್ತಿಯ ಬೇಲುಗಳಲ್ಲಿ ತೇವವಿರು ತ್ತಿರಲಿಲ್ಲ. ಅವು ಶುದ್ಧವಾಗಿರುತ್ತಿದ್ದವು. ಇದರಿಂದ ಅವರ ಬಿ.ಜೆ. (ಬಚ್ಚಾರಾಜ ಜಮ್ನಾಲಾಲ್) ಎಂಬ ಗುರುತು ಶುದ್ಧತೆಗೆ ಇನ್ನೊಂದು ಮಾತು ಎಂಬ ನಂಬಿಕೆ ಎಲ್ಲರಿಗೂ ಬಂತು. ವಿದೇಶಿ ಆಮದುಗಾರರು ಸಹ ಇವರ ವಾಣಿಜ್ಯ ಪ್ರಾಮಾಣಿಕತೆಯನ್ನು ತುಂಬ ಮೆಚ್ಚಿದರು. ಇದರಿಂದ ಇವರ ಹತ್ತಿಗೆ ಬೇಡಿಕೆ ಹೆಚ್ಚಿತು ಮತ್ತು ಹೆಚ್ಚು ಲಾಭಗಳಿಸುವುದು ಸಾಧ್ಯವಾಯಿತು. ಹೀಗೆ ಪ್ರಾಮಾಣಿಕತನ ಅವರಿಗೆ ಹೆಚ್ಚಿನ ಲಾಭವನ್ನು ಗಳಿಸಿಕೊಟ್ಟಿತು.

ಅನೇಕ ಸಂಸ್ಥೆಗಳು ತಮ್ಮ ಕೊಳ್ಳುವ, ಮಾರುವ ವಹಿವಾಟುಗಳನ್ನು ಜಮ್ನಾಲಾಲರ ಮುಂಬಯಿ   ಕಛೇರಿಯ ಮೂಲಕ ನಡೆಸುತ್ತಿದ್ದವು. ಇದರಿಂದ ಕಛೇರಿಗೆ ಬರುವ ಹತ್ತಿಯ ಮಾದರಿಗಳನ್ನು ಪರೀಕ್ಷಿಸುವುದು ಅಗತ್ಯ ವಾಗಿತ್ತು. ಹೀಗೆ ಪರೀಕ್ಷೆಗಾಗಿ ತೆಗೆದ ಹತ್ತಿ ಸೇರಿ ದೊಡ್ಡ ರಾಶಿಯಾಗುತ್ತಿತ್ತು. ಇದರ ಮಾರಾಟದಿಂದಲೇ ಪ್ರತಿವರ್ಷ ಸಾವಿರಾರು ರೂಪಾಯಿಗಳ ಆದಾಯವಿತ್ತು. ಈ ಬಗ್ಗೆ ಜಮ್ನಾಲಾಲರನ್ನು ಯಾರೂ ದೂರುವಂತಿರಲಿಲ್ಲ. ಆದರೂ ಅವರಿಗೆ ಈ ಹಣ ತಮ್ಮದಲ್ಲ ಎಂಬ ಭಾವನೆಯಿತ್ತು. ಆದ್ದರಿಂದ ಹೀಗೆ ಬಂದ ಹಣವನ್ನು ಎಲ್ಲ ಸಂಸ್ಥೆಗಳಿಗೂ ಹಂಚುವ ಏರ್ಪಾಟು ಮಾಡಿದರು.

1908ರಲ್ಲಿ ಜಮ್ನಾಲಾಲ್ರನ್ನು ಗೌರವ ಮ್ಯಾಜಿಸ್ಟ್ರೇಟರನ್ನಾಗಿ ಮಾಡಲಾಯಿತು. ಆಗವರಿಗೆ ಕೇವಲ ಹದಿನೆಂಟು ವರ್ಷ. ಇಷ್ಟು ಚಿಕ್ಕವಯಸ್ಸಿನಲ್ಲಿ ಅಷ್ಟು ಗೌರವ ಸಿಕ್ಕಿದರೆ ಯಾರಾದರೂ ಮೈಮರೆಯುತ್ತಾರೆ. ಆದರೆ ಜಮ್ನಾಲಾಲ್ ಹಾಗೆ ಮಾಡಲಿಲ್ಲ.

1912ನೇ ಇಸವಿ. ಜಮ್ನಾಲಾಲ್ ಅವರಿಗೆ ಆಗಿನ್ನೂ ಇಪ್ಪತ್ತೆರಡು ವರ್ಷದ ಯುವಕರು. ಸೆಂಟ್ರಲ್ ಪ್ರಾವಿನ್ಸಸ್‌ನ ಮುಖ್ಯ ಕಮೀಷನರು ಅವರನ್ನು ಒಂದು ಸಭೆಗೆ  ಆಹ್ವಾನಿಸಿ ದರು.  ಅಲ್ಲಿಗೆ ಪಾಶ್ಚಿಮಾತ್ಯ ಮಾದರಿಯ ಉಡುಗೆ ಯಲ್ಲೇ ಹೋಗಬೇಕಾಗಿತ್ತು. ಇದಕ್ಕೆ ಜಮ್ನಾಲಾಲ್ ಒಪ್ಪಲಿಲ್ಲ. ಸಾಂಪ್ರದಾಯಿಕ ಮಾರವಾಡಿ ಉಡುಪಿನಲ್ಲೇ ಬರುವುದಾಗಿ ಹಠ ಹಿಡಿದರು. ಕೊನೆಗೆ ಇವರಿಗಾಗಿ ನಿಯಮವನ್ನು ಸಡಿಲಿಸಲಾಯಿತು. ಯಾವ ಕೀಳರಿಮೆಯೂ ಇಲ್ಲದೆ ಜಮ್ನಾಲಾಲ್ ಸಭೆಯಲ್ಲಿ ಭಾಗವಹಿಸಿದರು. ಹಾಜರಿದ್ದ ಎಲ್ಲ ಭಾರತೀಯರು ಇವರ ಧೈರ್ಯ ಮತ್ತು ದೇಶಭಕ್ತಿಯನ್ನು ಮೆಚ್ಚಿದರು.  ಬ್ರಿಟಿಷ್ ಸರ್ಕಾರವು ಮೊದಲನೇ ಮಹಾಯುದ್ಧದ ಸಮಯದಲ್ಲಿ ಜಮ್ನಾಲಾಲ್ ಬಜಾಜರು  ನೀಡಿದ ಸಹಾಯನ್ನು ಮೆಚ್ಚಿ 1918 ರಲ್ಲಿ ರಾವ್ ಬಹದ್ದೂರ್ಎಂಬ ಬಿರುದನ್ನು ದಯಪಾಲಿಸಿತು.

ಸರಕಾರ ಕೊಟ್ಟ ಬಿರುದು ಜಮ್ನಾಲಾಲ್ ಬಜಾಜರ  ಗಾಂಧೀಜಿ ಮತ್ತು ಇತರ ನಾಯಕರೊಡನೆ  ಇದ್ದ ವ್ಯವಹಾರಗಳಿಗೆ ಅಡ್ಡಬರಲಿಲ್ಲ. ಇದು ಸರಕಾರಕ್ಕೆ ಹಿಡಿಸಲಿಲ್ಲ. ರಾಷ್ಟ್ರನಾಯಕರೊಡನೆ ಓಡಾಡಬಾರದು, ಅವರಿಗೆ ಆತಿಥ್ಯ ನೀಡಬಾರದು ಎಂದು ಅಧಿಕಾರಿಗಳು ಎಚ್ಚರಿಸಿದರು. ಆದರೆ ಜಮ್ನಾಲಾಲ್ ಈ ಬೆದರಿಕೆಗಳಿಗೆ ಸೊಪ್ಪು ಹಾಕಲಿಲ್ಲ. ಅಷ್ಟೇ ಅಲ್ಲ ಬಹಿರಂಗವಾಗಿಯೇ ಹೋಂರೂಲ್ಚಳುವಳಿಯಲ್ಲಿ ಧುಮುಕಿದರು. 1920ರ ಸೆಪ್ಟೆಂಬರಿನಲ್ಲಿ ಕಲ್ಕತ್ತದಲ್ಲಿ ಸೇರಿದ್ದ ಕಾಂಗ್ರೆಸ್ ವಿಶೇಷ ಅಧಿವೇಶನ ಅಸಹಕಾರ ಚಳುವಳಿಗೆ ಕರೆಯುತ್ತಿತು. ಆಗ ಜಮ್ನಾಲಾಲ್ ಬಿರುದನ್ನು ಹಿಂದಿರುಗಿಸಿ ಪೂರ್ತಿಯಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪದಾರ್ಪಣ ಮಾಡಿದರು.

ವಿದೇಶಿ ವಸ್ತ್ರಗಳನ್ನು  ತೊಡಬಾರದು ಎಂದು ನಿರ್ಧರಿಸಿದಾಗ ಜಮ್ನಾಲಾಲ್ರ ಮನೆಯಲ್ಲಿ ಸಾವಿರಾರು ರೂಪಾಯಿ ಬೆಲೆ ಬಾಳುವ ವಿದೇಶಿ ಬಟ್ಟೆಗಳಿದ್ದವು. ಅವುಗಳನ್ನು ನಿರ್ವಿಕಾರವಾಗಿ ಬೆಂಕಿಗೆ ಆಹುತಿಯಿತ್ತರು. ಆಗಿನಿಂದ ಖಾದಿ ತೊಡಲು ಪ್ರಾರಂಭಿಸಿದರು. ಖಾದಿಯ ಪ್ರಚಾರಕ್ಕೆ ಜಮ್ನಾಲಾಲ್ ದುಡಿದಷ್ಟು ಬೇರೆಯವರು ದುಡಿದಿರಲಾರರು. ಗಾಂಧೀಜಿ ಕೂಡ, ‘ಖಾದಿಯ ಮಂತ್ರವನ್ನು ಕೊಟ್ಟಿರುವುದು ನಾನಿರಬಹುದು, ಆದರೆ ಜಮ್ನಾಲಾಲ್ ತಮ್ಮ ಬುದ್ಧಿಶಕ್ತಿ, ಸಂಘಟನಾ ಚಾತುರ್ಯ ಮತ್ತು ಹಣವನ್ನು ಅದಕ್ಕಾಗಿ ಮುಡಿಪಾಗಿಟ್ಟಿದ್ದಾರೆಎಂದು ಉದ್ಘರಿಸಿದರು.

ಸುಮಾರು ಅರವತ್ತು ಎಪ್ಪತ್ತು ವರ್ಷಗಳ ಕೆಳಗೆ  ಹೆಂಗಸರು ತುಂಬ ಆಭರಣಗಳನ್ನು  ಧರಿಸುತ್ತಿದ್ದರು. ಆಭರಣಗಳಿಗಾಗಿ ಹಣವನ್ನು ಖರ್ಚುಮಾಡುವುದು ವ್ಯರ್ಥ. ಅದೇ ಹಣವನ್ನು ಇತರ ಉಪಯುಕ್ತ ಕಾರ್ಯಗಳಿಗೆ ಬಳಸಬಹುದು ಎಂದು ಗಾಂಧೀಜಿಯ ಮತ. ಅದಕ್ಕಾಗಿ ಆಭರಣಗಳ ಮೋಹವನ್ನು ಕೈಬಿಡುವಂತೆ ಮಹಿಳೆಯರಿಗೆ ಕರೆ ಕೊಟ್ಟರು. ಜಮ್ನಾಲಾಲ್ ಇದರ ಪ್ರಚಾರವನ್ನು ತ್ರಿಕರಣಪೂರ್ವಕವಾಗಿ ಕೈಗೊಂಡರು. ಮೊದಲು ಹೆಂಡತಿಗೆ ಬೋಧಿಸಿದರು. ಜಾನಕೀದೇವಿ ಸ್ವಲ್ಪವೂ ವಿಚಲಿತಳಾಗದೆ ಒಂದೊಂದಾಗಿ ಆಭರಣಗಳನ್ನು ತೆಗೆದಿರಿಸಿದಳು. ಕಾಲಗೆಜ್ಜೆ ಯನ್ನು ಸಹ ಬಿಡಲಿಲ್ಲ. ಇದು ಓರಗೆಯ ಹೆಂಗಸರಲ್ಲಿ ಆಶ್ಚರ್ಯವನ್ನುಂಟುಮಾಡಿತು. ಆಗಿನ ಪದ್ಧತಿಯಂತೆ ವಿಧವೆಯರು ಮಾತ್ರ ಕಾಲಗೆಜ್ಜೆಯನ್ನು ತೆಗೆಯುತ್ತಿದ್ದರು.

ಜುಮನಾಲಾಲರ ಹಿರಿಯ ಮಗಳು ಕಮಲ. ಆಕೆಗೆ ಮದುವೆ ಗೊತ್ತಾಯಿತು. ಜಮ್ನಾಲಾಲ್ ತಮ್ಮ ಅಂತಸ್ತಿಗೆ ತಕ್ಕಂತೆ ಅದ್ದೂರಿಯಾಗಿ ಮದುವೆ ಮಾಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಜಮ್ನಾಲಾಲ್ ಮದುವೆಯನ್ನು ಸರಳವಾಗಿ ಆಶ್ರಮದಲ್ಲಿ ನಡೆಸಲು ನಿಶ್ಚಯಿಸಿದರು. ಇಡೀ ಮದುವೆಯ ಸಂಭ್ರಮ ಒಂದೇ ಗಂಟೆಯಲ್ಲಿ  ಮುಗಿಯಿತು.

ಗಾಂಧೀಜಿ ಅಸ್ಪೃಶ್ಯರ ಉದ್ಧಾರಕ್ಕೆ ಕರೆಕೊಟ್ಟಾಗ ತಕ್ಷಣ ಜಮ್ನಾಲಾಲ್ ಓಗೊಟ್ಟರು. ಆಗ ಮನೆಗೆಲಸಕ್ಕೆ ಹರಿಜನರನ್ನು ಯಾರೂ ನೇಮಿಸುತ್ತಿರಲಿಲ್ಲ. ಜಮ್ನಾಲಾಲ್ ಅನೇಕ ಹರಿಜನರಿಗೆ ನೌಕರಿ ಕೊಟ್ಟರು. ಶಾಲಾಕಾಲೇಜುಗಳಲ್ಲಿ ಹರಿಜನರನ್ನು ಸೇರಿಸುತ್ತಿರಲಿಲ್ಲ. ಜಮ್ನಾಲಾಲ್ ವರ್ಧಾದಲ್ಲಿನ ಪ್ರೌಢಶಾಲೆ ಮತ್ತು ಮಂಬಯಿಯ ಮಾರವಾಡಿ ವಿದ್ಯಾಲಯಗಳಲ್ಲಿ ಹರಿಜನರಿಗೆ ಪ್ರವೇಶವನ್ನು ದೊರಕಿಸಿಕೊಟ್ಟರು. ಇಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರೊಂದಿಗೆ ಸಹಭೋಜನವನ್ನೂ ಏರ್ಪಾಟು ಮಾಡಿದರು. ದೇವಸ್ಥಾನಗಳಲ್ಲಿ ಸಹಾ ಹರಿಜನರಿಗೆ ಪ್ರವೇಶ ಒದಗಿಸಿಕೊಟ್ಟರು.

1923ರ ಏಪ್ರಿಲ್‌ನಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನೆನಪಿನ ದಿನವನ್ನು ದೇಶದಾದ್ಯಂತ ಆಚರಿಸಲು  ಬಾವುಟದ ಮೆರವಣಿಗೆಯಲ್ಲಿ ಪಾಲ್ಗೊಂಡು ಬಂಧನಕ್ಕೊಳಗಾದರು. ಜಮ್ನಾಲಾಲರನ್ನು ಮೊದಲನೇ ದರ್ಜೆಯ ಬಂದೀಖಾನೆಯಲ್ಲಿ ಇಡಲಾಗಿತ್ತು. ಆದರೆ ಬಹು ಮಂದಿ ಸತ್ಯಾಗ್ರಹಿಗಳು ಮೂರನೇ ದರ್ಜೆಯ ಬಂದೀಖಾನೆ ಯಲ್ಲಿದ್ದರು. ಸತ್ಯಾಗ್ರಹಿಗಳ ನಡುವೆ ಹೀಗೆ ತಾರತಮ್ಯ ಇರುವುದು ಜಮ್ನಾಲಾಲರಿಗೆ ಹಿಡಿಸಲಿಲ್ಲ. ಅವರೇ ಸ್ವಇಚ್ಛೆಯಿಂದ ಮೂರನೆ ದರ್ಜೆಯ ಸತ್ಯಾಗ್ರಹಿಗಳೊಂದಿಗೆ ಸೇರಿದರು. ಅವರು ಜೀವನದಲ್ಲಿ ಮೊದಲ ಬಾರಿಗೆ ಹಾಲು ಅಥವಾ ತುಪ್ಪವಿಲ್ಲದೆ, ಕೇವಲ ಜೋಳದ ರೊಟ್ಟಿಯನ್ನು ತಿಂದರು. ಇದರಿಂದ ಅವರ ಆರೋಗ್ಯ ಕೆಟ್ಟಿತು.  ಜಮ್ನಾಲಾಲರಿಗೆ ಕೌಟುಂಬಿಕ ಸಂತೃಪ್ತಿ, ಐಶ್ವರ್ಯ, ಸ್ಥಾನಮಾನ, ಪ್ರಭಾವ ಎಲ್ಲ ಇದ್ದವು. ಹೀಗಿದ್ದೂ ದೇಶಕ್ಕಾಗಿ ತಾವಾಗಿಯೇ ನೋವನ್ನು ಬರಮಾಡಿಕೊಂಡ ದೇಶಭಕ್ತರು ಇವರು.  ಮುಂದೆ ಹಲವು ಬಾರಿ ಅವರು ಬಂಧನಕ್ಕೊಳಗಾಗಿ ನೋವನುಭವಿಸಿದರು.  ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯಬೇಕೆಂಬ ಸಲಹೆಯನ್ನೂ ಸಾರಾಸಗಟಾಗಿ ತಿರಸ್ಕರಿಸಿದರು.

ಜಯಪುರ ಸತ್ಯಾಗ್ರಹದ ಸಮಯದಲ್ಲಿ ಬೇಕೆಂದೇ ಜಮ್ನಾಲಾಲರನ್ನು ಹಾವುಗಳಿಂದ ಕೂಡಿದ್ದ ಹಳೆಯ ಕೋಟೆಯಲ್ಲಿ ಬಂಧಿಸಿಡಲಾಗಿತ್ತು. ಅಲ್ಲಿ ಅವರನ್ನು ಅಸಭ್ಯವಾಗಿ ನೋಡಿಕೊಳ್ಳಲಾಯಿತು. ಹೀಗಾಗಿ ಮೊದಲೇ ಕ್ಷೀಣವಾಗಿದ್ದ ಅವರ ಆರೋಗ್ಯ ಮತ್ತಷ್ಟು ಕೆಟ್ಟಿತು. ಆದರೆ ನಿಜವಾದ ಸತ್ಯಾಗ್ರಹಿಯಂತೆ ಎಲ್ಲವನ್ನೂ ಸಹಿಸಿದರು. ಆದರೆ ಜನ ಸುಮ್ಮನಿರಲಿಲ್ಲ. ಇವರ ಬಂಧನವನ್ನು ಪ್ರತಿಭಟಿಸಿ ಚಳುವಳಿ ಹೂಡಿದರು. ಇದನ್ನು ಹತ್ತಿಕ್ಕುವುದು ಸರಕಾರಕ್ಕೂ ಕಷ್ಟವಾಯಿತು. ಆಗ ಬೇರೆ ಮಾರ್ಗವಿಲ್ಲದೆ ಜಮ್ನಾಲಾಲರನ್ನು ಯಾವ ಷರತ್ತೂ ಇಲ್ಲದೆ ಬಿಡುಗಡೆ ಮಾಡಲಾಯಿತು. ಸಾರ್ವಜನಿಕ ಸಭೆ ಸೇರಲು ಮತ್ತು ಮೆರವಣಿಗೆಯನ್ನು ತೆಗೆದುಕೊಂಡು ಹೋಗಲು ಇದ್ದ ನಿರ್ಬಂಧವನ್ನು ಸರ್ಕಾರ ಹಿಂತೆಗೆದುಕೊಂಡಿತು.

ಜಮ್ನಾಲಾಲ್ ಕಷ್ಟಪಟ್ಟು ದುಡಿದು ಹಣ ಸಂಪಾದನೆ ಮಾಡಿದರು. ಆದರೆ ಅದನ್ನು ತಮ್ಮ ಸುಖಕ್ಕೆ ಬಳಸಲಿಲ್ಲ. ದೇಶದ ಹಿತಕ್ಕಾಗಿ ಆ ಹಣ ಎಂದು ಅವರ ನಂಬಿಕೆ. ಖರ್ಚು ಹೆಚ್ಚಾದರೆ ಅಷ್ಟರ ಮಟ್ಟಿಗೆ ದೇಶದ ಹಣ ಪೋಲಾದಂತೆ ಎಂಬ ಚಿಂತೆ ಅವರದು. ಆದ್ದರಿಂದ ತಮ್ಮ ಸ್ವಂತ ಖರ್ಚನ್ನು ಸಾಧ್ಯವಾದಷ್ಟೂ ತಗ್ಗಿಸಿದರು. ತಿಂಗಳ ಖರ್ಚನ್ನು ಕೇವಲ ಐನೂರು ರೂಪಾಯಿಗಳಿಗೆ ಇಳಿಸಿದರು. ಇದರಲ್ಲಿ ಕಾರ್ಯದರ್ಶಿಯ ಸಂಬಳ, ಪ್ರಯಾಣದ ವೆಚ್ಚಗಳು, ಅಂಚೆ ವೆಚ್ಚ ಸೇರಿತ್ತು. ಮುಂದೆ ಇದನ್ನು ಇನ್ನೂ ಇಳಿಸಿದರು. ಇದಕ್ಕಾಗಿ ಮೂರನೇ ದರ್ಜೆಯಲ್ಲಿ ರೈಲು ಪ್ರಯಾಣ ಮಾಡುತ್ತಿದ್ದರು. ಅನೇಕ ವೇಳೆ ಹಣ ಉಳಿಸಲು ಟೆಲಿಗ್ರಾಂನಿಂದ ಕೆಲವು ಪದಗಳನ್ನು ತೆಗೆದುಹಾಕಲು ಸೂಚಿಸುತ್ತಿದ್ದರು. ಅಂಚೆಯ ಕಾರ್ಡ್ ಸಾಲುವುದಿದ್ದರೆ ಕಾಗದ ಬರೆಯಬೇಡಿ. ಕಾಗದದಿಂದಲೇ  ಕೆಲಸವಾಗುವುದಿದ್ದರೆ ಟೆಲಿಗ್ರಾಂ ಕಳುಹಿಸಬೇಡಿಎಂಬುದೇ ಅವರ ಹಿತೋಕ್ತಿ.

ಜಮ್ನಾಲಾಲ್ ಬಜಾಜರ ಆತ್ಮೀಯ ಹಿರಿಯ ನಾಯಕರಲ್ಲಿ ಸುಭಾಷ್‌ಚಂದ್ರ ಬೋಸರು ಒಬ್ಬರು.   ಗಾಂಧೀಜಿಯವರ ಒತ್ತಾಸೆಯಿಂದ ತಮಗೆ ಬಂದ ಕಾಂಗ್ರೆಸ್ ಅಧ್ಯಕ್ಷತೆಯನ್ನು ಸುಭಾಶರಿಗೆ ದೊರಕುವಂತೆ ಮಾಡಿದರು.   ಸುಭಾಶರು ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಅನೇಕ ಬಾರಿ ಬಜಾಜವಾಡಿಯಲ್ಲಿ ತಂಗಿದ್ದರು. ಕೆಲವು ಸಮಯಾನಂತರ ಅನೇಕ ಕಾರಣಗಳಿಂದ ಅವರು ಕಾಂಗ್ರೆಸನ್ನು ಬಿಡಬೇಕಾಯಿತು. ಆಗ ತಮ್ಮದೇ ಆದ ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷವನ್ನು ಕಟ್ಟಿದರು. ಅನಂತರ ಬಜಾಜವಾಡಿಯ ಎದುರಿಗೇ ಒಮ್ಮೆ ಕಾಂಗ್ರೆಸ್‌ಗೆ ವಿರುದ್ಧವಾದ ಸಭೆಯಲ್ಲಿ ಮಾತನಾಡಬೇಕಾಯಿತು. ರಾಜಕೀಯ ವ್ಯತ್ಯಾಸಗಳು ಸ್ನೇಹಕ್ಕೆ ಅಡ್ಡಿ ಬರಬಾರದು ಎಂಬುದು ಬಜಾಜರ ನಿಲುವು. ಆದ್ದರಿಂದ ಸ್ವತಃ ತಾವೇ ಹೋಗಿ ಬೋಸರನ್ನು ತಮ್ಮಲ್ಲಿ ತಂಗುವಂತೆ ಆಹ್ವಾನಿಸಿದರು. ಬೋಸರಿಗೆ ಜಮ್ನಾಲಾಲರ ಅಂತಃಕರಣ ಕಂಡು ಸಂತೋಷವಾಯಿತು.

ಮೊದಲಿನಿಂದಲೂ ಜಮ್ನಾಲಾಲರ ಮೇಲೆ ಧರ್ಮದ ಪ್ರಭಾವ ಹೆಚ್ಚು. ಸಾಧು ಸಂತರ ಉಪನ್ಯಾಸಗಳಲ್ಲಿ ಆಸಕ್ತಿ, ತುಳಸೀದಾಸರ ರಾಮಾಯಣ, ಸಂತ ತುಕಾರಾಮರ ಭಜನೆ ಇವುಗಳಲ್ಲಿ ತಲ್ಲೀನತೆಗಳನ್ನು ಬೆಳೆಸಿಕೊಂಡಿದ್ದರು. ತಾವು ಓದಿದ ಮತ್ತು ಕೇಳಿದ ಹಿತೋಕ್ತಿಗಳನ್ನು ದಿನಚರಿ ಪುಸ್ತ ಕದಲ್ಲಿ ಬರೆದಿಡುತ್ತಿದ್ದರು.  ಹಣ, ಸುಖ ಇವುಗಳ ಕಡೆಗೆ ಎಂದೂ ಅವರ ಮನಸ್ಸು ವಾಲಲಿಲ್ಲ. ಇವರ ಆಂತರಿಕ ಹಸಿವನ್ನು ಅರಿತ ಗಾಂಧೀಜಿ ಸತ್ಯಶೋಧನೆಯಲ್ಲಿ ತಮಗಾದ ಅನುಭವಗಳನ್ನು ಜಮ್ನಾಲಾಲರೊಂದಿಗೆ ಹಂಚಿಕೊಳ್ಳುತ್ತಿದ್ದರು.

ಬರಬರುತ್ತ ಜಮ್ನಾಲಾಲರಿಗೆ ವೇದಾಂತಿಕ ಮನೋಭಾವ ಬಲಿಯಿತು. ಮನಃಶಾಂತಿಗಾಗಿ ರಾಜಪುರ ಆಶ್ರಮದ ಆನಂದ ಮಾಯಿ ಅವರ ಬಳಿಗೆ ಹೋದರು. ಅವರೇ ಹೇಳಿದಂತೆ ಬಾಪು ತಂದೆಯಾದರು. ಆನಂದ ಮಾಯಿ ತಾಯಿಯಾದರು. ಅವರ ಜೀವನದ ಗುರಿಯಾದರೂ ನಿಃಸ್ವಾರ್ಥ ಸೇವೆಯಲ್ಲಿ ಕಳೆಯಬೇಕೆಂಬುದೇ ಆಗಿತ್ತು.

ಮುಂದೆ ಜಮ್ನಾಲಾಲ್ ಕಡಿಮೆ ಖರ್ಚಿನಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ಹೊಸ ಜೀವನವನ್ನು ಪ್ರಾರಂಭಿಸಿದರು. ಯಾವಾಗಲೂ ಗೋವುಗಳನ್ನು ನೋಡಿಕೊಂಡು ಗೋಶಾಲೆಯಲ್ಲೇ ಇರುತ್ತಿದ್ದರು. ಗೋವುಗಳು ನೈಸರ್ಗಿಕವಾಗಿ ಸತ್ತಮೇಲೆ ಅವುಗಳ ಕೊಂಬು, ಚರ್ಮ ಮುಂತಾದವುಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸಲು ಒಂದು ಕೈಗಾರಿಕೆಯನ್ನು ಪ್ರಾರಂಭಿಸಿದರು.

ಗೋಸೇವೆಯೆ ಜಮ್ನಾಲಾಲರ ಜೀವನದ ಅಂತಿಮ ಚಟುವಟಿಕೆಯಾಗಿತ್ತು. 1942ರ ಫೆಬ್ರವರಿ 11ರಂದು  ಈ ಲೋಕವನ್ನು ಬಿಟ್ಟರು. ತಾವು ಪಾಲಿಸುತ್ತಿದ್ದ ತತ್ವಗಳನ್ನು ಬರೆದಿಡುತ್ತಿದ್ದುದು ಜಮ್ನಾಲಾಲ್ ಅವರ ಪದ್ಧತಿ. ಅವುಗಳಲ್ಲಿ ಕೆಲವು ಹೀಗಿವೆ.

ಓದದೆಯೆ ಯಾವ ಕಾಗದಕ್ಕೂ ಸಹಿ ಹಾಕಬಾರದು.
ಕ್ಲುಪ್ತ ಕಾಲಕ್ಕೆ ಹೋಗಬೇಕು; ಒಪ್ಪಿಕೊಂಡ ಕೆಲಸವನ್ನು ತಪ್ಪಿಸಬಾರದು.
ನಿಜವಾಗಿ ಮಾಡಲು ಆಗುವುದಕ್ಕಿಂತ ಹೆಚ್ಚಿನ ಆಸೆಗಳನ್ನು ಇಟ್ಟುಕೊಳ್ಳಕೂಡದು.
ಲಾಭವಾಗಲಿ ಬಿಡಲಿ ಸತ್ಯಕ್ಕೆ ಅಂಟಿಕೊಳ್ಳಬೇಕು.
ಮಾಡಬೇಕೆಂದಿರುವುದನ್ನು ಇಂದೇ ಮಾಡಬೇಕು.
ಜಯದ ಬಗ್ಗೆಯೇ ಯೋಚಿಸು. ಜಯದ ಬಗ್ಗೆಯೇ ಮಾತನಾಡು. ಆಗ ಖಂಡಿತ ಜಯವಾಗುತ್ತದೆ.
ನಿನ್ನ ದೇಹ ಮತ್ತು ಆತ್ಮದ ಶಕ್ತಿಯ ಬಗ್ಗೆ ನಂಬಿಕೆಯಿರಲಿ.
ಕಷ್ಟಪಟ್ಟು ದುಡಿಯುವುದರಲ್ಲಿ ಯಾವ ಅವಮಾನವೂ ಇಲ್ಲ.
ನೇರವಾಗಿ ಮಾತನಾಡಲು ಯಾವಾಗಲೂ ಸಂಕೋಚ ಬೇಡ.

ಜಮ್ನಾಲಾಲ್ ಬಜಾಜರ ಪುತ್ರ ಕಮಲ್ ನಯನ್ ಬಜಾಜ್ ಅವರು ಕೂಡಾ ಮಹಾತ್ಮರ ಅನುಯಾಯಿಯಾಗಿದ್ದರು.  ಅವರ ಪುತ್ರ ರಾಹುಲ್ ಬಜಾಜ್ ಬಜಾಜ್ ಸಮೂಹ ಸಂಸ್ಥೆಗಳನ್ನು ಬೃಹತ್ ವಹಿವಾಟಿನೊಂದಿಗೆ ನಡೆಸಿ ಇಂದು ಈ ಸಂಸ್ಥೆ ಭಾರತದ ಒಂದು ಮಹಾನ್ ವ್ಯಾಪಾರೀ ಸಂಸ್ಥೆಯನ್ನಾಗಿ ರೂಪಿಸಿದ್ದಾರೆ.

ಜಮ್ನಾಲಾಲ್ ಬಜಾಜರಂತಹ ಒಬ್ಬ  ಮಹಾನ್ ವ್ಯಕ್ತಿಯ ಸ್ಮರಣೆಯ ಸೌಭಾಗ್ಯ ನಮ್ಮದು.  ಈ ಮಹಾನ್ ವ್ಯಕ್ತಿಗೆ ನಮ್ಮ ನಮನ.

(ಮಾಹಿತಿ ಕೃಪೆ:  ಕಣಜ)

Tag: Jamnalal Bajaj

ಕಾಮೆಂಟ್‌ಗಳಿಲ್ಲ: