ಸೋಮವಾರ, ಆಗಸ್ಟ್ 26, 2013

ನಾಗತಿಹಳ್ಳಿ ಚಂದ್ರಶೇಖರ್



ನಾಗತಿಹಳ್ಳಿ ಚಂದ್ರಶೇಖರ್

ನಾಗತಿಹಳ್ಳಿ ಚಂದ್ರಶೇಖರ್ ನಮ್ಮ ನಾಡಿನ ಬಹುಮುಖ ಪ್ರತಿಭೆ.  ಸಾಂಸ್ಕೃತಿಕ ಲೋಕದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಬರವಣಿಗೆ ಪ್ರಪಂಚದಲ್ಲಿ, ಪತ್ರಿಕಾ ಅಂಕಣಗಳಲ್ಲಿ, ಸಿನಿಮಾಕಿರುತೆರೆ  ಹೀಗೆ ಅವರು ಸರ್ವವ್ಯಾಪಿಯಾಗಿ ವಿವಿಧ ಸಾಂಸ್ಕೃತಿಕ ನೆಲೆಗಳಲ್ಲಿ ಹೆಸರು ಮಾಡಿದವರು. 

ಮಂಡ್ಯ ಜಿಲ್ಲೆಯ ನಾಗತಿಹಳ್ಳಿ ಎಂಬಲ್ಲಿ ಆಗಸ್ಟ್ 15, 1958ರ ವರ್ಷದಲ್ಲಿ  ಚಂದ್ರಶೇಖರ್ ಜನಿಸಿದರು.   ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ.  ಪ್ರಾರಂಭಿಕ ಶಿಕ್ಷಣವನ್ನು ತಮ್ಮ ಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ನಡೆಸಿದರು.  ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮವಾದ ನಾಗತಿಹಳ್ಳಿಯಲ್ಲಿ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ`ಯನ್ನು ಆರಂಭಿಸುವುದರ ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ಆರಂಭಿಸಿದರು.  ಈ ವೇದಿಕೆಯು ಗ್ರಾಮೀಣರ ಆರ್ಥಿಕ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಸಂಗತಿ ನಾಗಮಂಗಲ ತಾಲ್ಲೂಕಿನ ಬಿದರಕೆರೆ, ಯರಗನಹಳ್ಳಿ, ಸಬ್ಬನಕುಪ್ಪೆ ಗ್ರಾಮಸ್ಥರಿಗೂ ಸ್ಫೂರ್ತಿ ನೀಡಿದೆ. ಈ ವೇದಿಕೆಯ ಆಶಯಗಳನ್ನೇ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ  ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.

ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸತೊಡಗಿದ ನಾಗತಿಹಳ್ಳಿ ಚಂದ್ರಶೇಖರರು ಕಥಾಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದರು.  ಇನ್ನೂ ಎಂಟನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಅವರು  ಆವರ್ತಎಂಬ ಕಥೆ ಬರೆದರು.  ಇದುವರೆಗೆ ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ಒಳಗೊಂಡ ಅವರ 21ಪ್ರಕಟಣೆಗಳು ಬೆಳಕು ಕಂಡಿವೆ.  ಹಾಡುಗಳು’, ‘ನನ್ನ ಪ್ರೀತಿಯ ಹುಡುಗನಿಗೆ’, ‘ಮಲೆನಾಡಿನ ಹುಡುಗಿ, ಬಯಲು ಸೀಮೆಯ ಹುಡುಗ’, ‘ಸನ್ನಿಧಿ’, ‘ಪ್ರೇಮ ಕಥಾ ಸಂಪುಟ’, ‘ಅಕಾಲ’, ‘ಛಿದ್ರನಾಗತಿಹಳ್ಳಿಯವರ ಪ್ರಸಿದ್ಧ ಕಥಾ ಸಂಕಲನಗಳು.  ಬಾ ನಲ್ಲೆ  ಮಧುಚಂದ್ರಕೆ’, ‘ಚುಕ್ಕಿ ಚಂದ್ರಮರ ನಾಡಿನಲ್ಲಿ’, ‘ವಲಸೆ ಹಕ್ಕಿಯ ಹಾಡುಅವರ ಕಾದಂಬರಿಗಳು.  ಆಯನ’, ‘ಅಮೆರಿಕ! ಅಮೇರಿಕಾ!!’, ‘ದಕ್ಷಿಣ ಧ್ರುವದಿಂ’, ‘ಹೊಳೆದಂಡೆಮುಂತಾದವು ಅವರ ಪ್ರವಾಸ ಕಥನಗಳು’.  ‘ನನ್ನ ಪ್ರೀತಿಯ ಹುಡುಗಿಗೆಹಲವು ಸಂಪುಟಗಳಲ್ಲಿ ಮೂಡಿಬಂದಿರುವ ಅವರ ಆತ್ಮಕಥೆಯಾಗಿದೆ.  ಶತಮಾನದಂಚಿನಲ್ಲಿಅವರ ವಿವಿಧ ಲೇಖನಗಳ ಸಂಗ್ರಹ ಸಂಪುಟವಾಗಿದೆ.  ಹೀಗೆ ಕಥೆ ಹೇಳುವುದರಲ್ಲಿ ಪ್ರೀತಿಯುಳ್ಳ ನಾಗತಿಹಳ್ಳಿ ಚಂದ್ರಶೇಖರರಿಗೆ ಕಥೆ ಹೇಳುವ ದೃಶ್ಯ ಮಾಧ್ಯಮದ ಕಡೆ ಕೂಡಾ ಒಲವು ಹರಿದು ಬಂತು.  

ಇಂದು ಕನ್ನಡ ಚಿತ್ರರಂಗದಲ್ಲಿ ನಾಗತಿಹಳ್ಳಿ ಚಂದ್ರಶೇಖರರ ಚಿತ್ರಗಳು ವಿಶಿಷ್ಟ ಸ್ಥಾನ ಪಡೆದಿವೆ.  ಅವರ ಮಾತಾಡ್ ಮಾತಾಡು ಮಲ್ಲಿಗೆಸಾಗರಗಳನ್ನು ದಾಟಿ ಕೇನ್ಸ್ ಅಂತಹ ಪ್ರತಿಷ್ಟಿತ ಉತ್ಸವಗಳಲ್ಲಿ ಪ್ರದರ್ಶನ ಕಂಡಿತು.  ತಮ್ಮ ಅಧ್ಯಾಪನದ ದಿನಗಳಲ್ಲಿ ಚಿತ್ರಕಥೆ, ಸಂಭಾಷಣೆ, ಗೀತ ರಚನೆಗಳಲ್ಲಿ ಭಾಗಿಯಾಗುತ್ತಿದ್ದ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಾಯಕಗಳು ಕಾಡಿನ ಬೆಂಕಿ’, ‘ಸಂಕ್ರಾಂತಿ’, ‘ಪ್ರಥಮ ಉಷಾ ಕಿರಣ’, ‘ಉದ್ಭವ’, ‘ಊರ್ವಶಿಮುಂತಾದ ಪ್ರಸಿದ್ಧ ಚಿತ್ರಗಳಿಗೆ ಮೆರುಗು ನೀಡಿತ್ತು.

1991ರಲ್ಲಿ ಮೂಡಿಬಂದ ಉಂಡು ಹೋದ ಕೊಂಡು ಹೋದಚಿತ್ರದಿಂದ ಮೊದಲ್ಗೊಂಡಂತೆ, ‘ಬಾ ನಲ್ಲೆ ಮಧು ಚಂದ್ರಕೆ’, ‘ಕೊಟ್ರೇಶಿ ಕನಸು’, ‘ಅಮೆರಿಕ! ಅಮೇರಿಕಾ!!’, ‘ಹೂಮಳೆ’, ‘ನನ್ನ ಪ್ರೀತಿಯ ಹುಡುಗಿ’, ‘ಸೂಪರ್ ಸ್ಟಾರ್’, ‘ಪ್ಯಾರಿಸ್ ಪ್ರಣಯ’, ‘ಅಮೃತಧಾರೆ’, ‘ಮಾತಾಡ್ ಮಾತಾಡು ಮಲ್ಲಿಗೆ’, ‘ಒಲವೆ ಜೀವನ ಲೆಖ್ಖಾಚಾರ’, ‘ನೂರೂ ಜನ್ಮಕು’, ‘ಬ್ರೆಕಿಂಗ್ ನ್ಯೂಸ್’, ‘ಇಷ್ಟಕಾಮ್ಯ’  ಮುಂತಾದ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.  ಕಲಾತ್ಮಕ ಚಿತ್ರಗಳ ಚಿಂತನಾತ್ಮಕ ಗುಣ, ಸಾಮಾಜಿಕ ಚಿತ್ರಗಳ ಸ್ಪಂದನೆ, ಆಧುನಿಕ ಬದುಕಿನ ವೈವಿಧ್ಯಮಯ ವೈರುಧ್ಯ ಇವುಗಳ ಜೊತೆಗೆ ಹಿತಮಿತದ ಸಂಗೀತ, ದೃಶ್ಯ ವೈಭವ ಇವುಗಳನ್ನೆಲ್ಲ ನಾಗತಿಹಳ್ಳಿ ತಮ್ಮ ಸೃಜನಶೀಲ ಸ್ಪರ್ಶದಲ್ಲಿ ಬೆಳ್ಳಿತೆರೆಯಲ್ಲಿ ಅಭಿವ್ಯಕ್ತಿಸಿದ್ದಾರೆ.  ಕನ್ನಡ ಚಿತ್ರರಂಗದಲ್ಲಿನ ಹಲವಾರು ಪ್ರಶಸ್ತಿ, ಗಲ್ಲಾಪೆಟ್ಟಿಗೆಯ ಯಶಸ್ಸುಗಳು ಮತ್ತು ಸೋಲುಗಳನ್ನು ನಾಗತಿಹಳ್ಳಿ ಸಮಭಾವತ್ವದಲ್ಲಿ ಸ್ವೀಕರಿಸಿ ಮುನ್ನಡೆಯುತ್ತಿದ್ದಾರೆ. ಕಿರುತೆರೆಯಲ್ಲಿ ಪ್ರತಿಬಿಂಬ, ಕಾವೇರಿ, ಅಪಾರ್ಟ್ ಮೆಂಟ್, ಒಲವೆ ನಮ್ಮ ಬದುಕು, ವಟಾರ, ನಿತ್ಯೋತ್ಸವ ಮುಂತಾದ ಧಾರವಾಹಿಗಳನ್ನು ನಾಗತಿಹಳ್ಳಿ ಪ್ರಸ್ತತಪಡಿಸಿದ್ದಾರೆ.  ಇಂದು ಕನ್ನಡ ಚಿತ್ರರಂಗದಲ್ಲಿ   ಪ್ರಸಿದ್ಧ ಚಿತ್ರಸಂಗೀತ ನಿರ್ದೆಶಕರಾಗಿರುವ ಮನೋಮೂರ್ತಿ ಅವರನ್ನು ಅಮೇರಿಕದ ಸಾಫ್ಟ್ವೇರ್ ಕ್ಷೇತ್ರದಿಂದ ಕನ್ನಡ ಚಿತ್ರ ಸಂಗೀತಕ್ಕೆ ಕರೆತಂದ ಕೀರ್ತಿ ಕೂಡಾ ನಾಗತಿ ಹಳ್ಳಿ ಚಂದ್ರಶೇಖರ್ ಅವರದ್ದು.  ಸಾಂಸ್ಕೃತಿಕ ನೆಲೆಯ  ಕಿರುತೆರೆಯ  ಚಿತ್ರಗಳಾದ  ಸುಗ್ಗಿ’,  ‘ಅವಲೋಕನ’, ‘ಕಾವ್ಯ ಸೌರಭ’  ಹಾಗೂ ಬುದ್ಧನ  ಜೀವನ ಮತ್ತು  ಸಂದೇಶದ  ಕುರಿತಾದ ಕರುಣಾಳು ಬಾ ಬೆಳಕೆಮುಂತಾದವುಗಳನ್ನು ಸಹಾ  ಪ್ರಸ್ತುತಪಡಿಸಿದ್ದಾರೆ.  ಹಲವಾರು  ಚಿತ್ರಗಳು  ಮತ್ತು  ಕಿರುತೆರೆಯ  ಧಾರಾವಾಹಿಗಳಿಗೆ  ಸಂಭಾಷಣೆಗೀತರಚನೆ ಮುಂತಾದ ಕ್ಷೇತ್ರಗಳಲ್ಲಿ  ಸಹಾ  ಅವರ  ಲೇಖನಿ  ಕಾರ್ಯನಿರ್ವಹಿಸಿದೆ. 

ಹಲವು ರೀತಿಯ ರಾಜ್ಯ ಮತ್ತು  ರಾಷ್ಟ್ರಮಟ್ಟದ  ಚಲನಚಿತ್ರ ಪ್ರಶಸ್ತಿಗಳನ್ನೂಫಿಲಂ ಫೇರ್  ಅಂತಹ  ಪ್ರಶಸ್ತಿಗಳನ್ನೂವಿವಿಧಮುಖಿ  ಸಾಧನೆಗಳಿಗಾಗಿನ  ಗೌರವಗಳನ್ನೂ   ಸ್ವೀಕರಿಸಿರುವ  ನಾಗತಿಹಳ್ಳಿ  ಚಂದ್ರಶೇಖರ್  ಅವರನ್ನು  ಮೈಸೂರು  ವಿಶ್ವವಿದ್ಯಾಲಯವು  ಗೌರವ ಡಾಕ್ಟೊರೇಟ್ ನೀಡಿ  ಗೌರವಿಸಿದೆ. 

ಈ ಅಪಾರ ಸಾಧನೆಯ ವಿದ್ವತ್ಪೂರ್ಣ ಸೃಜನಶೀಲ ನಾಗತಿಹಳ್ಳಿ ಚಂದ್ರಶೇಖರರಿಂದ ಇನ್ನೂ ಬಹಳಷ್ಟನ್ನು ನಿರೀಕ್ಷಿಸಬಹುದಾಗಿದೆ.  ಈ ಮಹಾನ್ ಪ್ರತಿಭೆಯನ್ನು ಕನ್ನಡಚಿತ್ರರಂಗ ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತಾಗಲಿ.  ನಾಗತಿಹಳ್ಳಿ ಅವರಿಂದ ಅನೇಕ ಮಹತ್ವದ ಸಾಹಿತ್ಯಕ, ಕಲಾತ್ಮಕ, ಸದಭಿರುಚಿಯ ಮನರಂಜನಾತ್ಮಕ ಅಭಿವ್ಯಕ್ತಿಗಳು ನಿರಂತರವಾಗಿ ಹರಿದು ಬರುತ್ತಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.


Tag: Nagatihalli Chandrashekar, Nagatihalli Chandrashekhar

ಕಾಮೆಂಟ್‌ಗಳಿಲ್ಲ: