ಶನಿವಾರ, ಆಗಸ್ಟ್ 31, 2013

ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ

ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ

ಇಂದು ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ಜನ್ಮದಿನ.  ಜಿ.ಎಸ್. ಸಿದ್ಧಲಿಂಗಯ್ಯನವರು ಕನ್ನಡ ನಾಡಿನ ಶಿಕ್ಷಕರಾಗಿ, ವಿದ್ವಾಂಸರಾಗಿ, ಬರಹಗಾರರಾಗಿ, ಭಾಷಣಕಾರರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಂತ ಸಂಸ್ಥೆಗಳ ಮುಖ್ಯಸ್ಥರಾಗಿ ಮಾಡಿರುವ ಕೆಲಸ ಶ್ಲಾಘನೀಯವಾದದ್ದು.  ಸ್ವಯಂ ಅವರ ಉಪನ್ಯಾಸಗಳನ್ನು ಹಲವು ಸಂದರ್ಭಗಳಲ್ಲಿ ಕೇಳಿ ಅತ್ಯಂತ ಸಂತೋಷಪಟ್ಟಿದ್ದೇನೆ.

ಸಿದ್ಧಲಿಂಗಯ್ಯನವರು ಫೆಬ್ರವರಿ 20, 1931ರಲ್ಲಿ ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಜನಿಸಿದರು.  1955ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಆನರ್ಸ್ ಪದವಿಯನ್ನೂ 1961ರಲ್ಲಿ ಕನ್ನಡ ಎಂ.ಎ ಪದವಿಯನ್ನೂ ಗಳಿಸಿದರು.  ಹಲವಾರು ವರ್ಷಗಳ ಕಾಲ ಸರ್ಕಾರಿ ಕಾಲೆಜುಗಳಲ್ಲಿ ಅಧ್ಯಾಪಕರಾಗಿಪ್ರಾಂಶುಪಾಲರಾಗಿ ಸಿದ್ಧಲಿಂಗಯ್ಯನವರು ಕಾರ್ಯ ನಿರ್ವಹಿಸಿದರು.  1988ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.  ಮುಂದೆ 1974ರಲ್ಲಿ ಸ್ವತಃ ಹಿಂದುಳಿದ ಜಾತಿ ವರ್ಗದವರಿಗಾಗಿ ವಸತಿ ಶಿಕ್ಷಣ ಶಾಲೆಯನ್ನು ಪ್ರಾರಂಭಿಸಿದರು.

ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರು ಗಣನೀಯ ಸಾಧನೆ ಮಾಡಿದ್ದಾರೆ.   ಅವರ ಮೊದಲ ಕೃತಿ ಮಹಾನುಭಾವ ಬುದ್ಧ’ 1959ರಲ್ಲಿ ಪ್ರಕಟವಾಯಿತು.    ಕವಿ ಲಕ್ಷ್ಮೀಶ, ಚಾಮರಸ ಮುಂತಾದ ಬರಹಗಳಲ್ಲದೆ  ರಸಗಂಗೆ, ಉತ್ತರ, ಚಿತ್ರ ವಿಚಿತ್ರ, ಐವತ್ತರ ನೆರಳು, ಋಷ್ಯಶೃಂಗ, ಪಂಚಮುಖ ಮುಂತಾದ  ಕಥನ ಕವನಗಳನ್ನು ರಚಿಸಿದ್ದಾರೆ.  ಹೊಸಗನ್ನಡ ಕಾವ್ಯ, ವಚನ ಸಾಹಿತ್ಯ ಒಂದು ಇಣುಕು ನೋಟ, ಶತಾಬ್ಧಿ ದೀಪ, ಜಂಗಮ ಜ್ಯೋತಿ, ಅಣ್ಣನ ನೂರೊಂದು ವಚನಗಳು ಅವರ ವಿಮರ್ಶಾ ಕೃತಿಗಳಲ್ಲಿ ಸೇರಿವೆ.  ಇವಲ್ಲದೆ ಹಲವಾರು ಗ್ರಂಥಗಳ ಸಂಪಾದನೆ, ವಿಶಿಷ್ಟ ಲೇಖನಗಳು ಹೀಗೆ ಅವರ ಬರಹಗಳ ಸಾಧನೆ ವೈಶಾಲ್ಯತೆ ಮತ್ತು ಆಳಗಳಿಂದ ವಿದ್ಮನ್ಮಣಿಗಳ ಪ್ರಶಂಸೆಗೆ ಪಾತ್ರವಾಗಿವೆ.   ಕನ್ನಡ ಸಂಪದದಲ್ಲಿ ಮೂಡಿಬಂದಿರುವ ದ.ರಾ. ಬೇಂದ್ರೆ, ಡಿ. ಆರ್. ನಾಗರಾಜ್ ಅಂಥಹ ಲೇಖಕರ ಕುರಿತಾದ ಮಾಹಿತಿಗಳಿಗೆ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರ ವಿಶಿಷ್ಟ ಬರಹಗಳು ಆಸರೆಯಾಗಿರುವುದನ್ನು ಕನ್ನಡ ಸಂಪದ ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತಿದೆ. 

1989-1992ರ ಅವಧಿಯಲ್ಲಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದರು.  ಸಾಹಿತ್ಯ ಅಕಾಡೆಮಿ ವಿಶೇಷ ಪ್ರಶಸ್ತಿ, ಬಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲಾವರು ಗೌರವಗಳಿಗೆ ಸಿದ್ಧಲಿಂಗಯ್ಯನವರು ಭಾಜನರಾಗಿದ್ದಾರೆ.

ಹಿರಿಯ ನಿಷ್ಠಾವಂತ ಕನ್ನಡ ಸೇವಕರಾದ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರಿಗೆ ಜನ್ಮ ದಿನದ ಹಾರ್ಧಿಕ ಶುಭ ಹಾರೈಕೆಗಳು. 


(ಆಧಾರ: www.kannadakavi.com)

Tag: G. S. Siddalingaiah

ಕಾಮೆಂಟ್‌ಗಳಿಲ್ಲ: