ಗುರುವಾರ, ಆಗಸ್ಟ್ 29, 2013

ಸ್ವಾಮಿ ಪುರುಷೋತ್ತಮಾನಂದ

ಸ್ವಾಮಿ ಪುರುಷೋತ್ತಮಾನಂದ

ಪರಮ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರನ್ನು ನೆನೆಯುವ ಸೌಭಾಗ್ಯ ಇದೀಗ ನಮ್ಮದಾಗಿದೆ.  ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರ ಕುರಿತು ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕತೆಗಳನ್ನು ಕೇಳಿಕೊಂಡು ಬೆಳೆದಿರುತ್ತೇವೆ.  ಅದರ ಭಾವವನ್ನು ನಮ್ಮ ಅನುಭಾವಕ್ಕೆ ತಂದುಕೊಟ್ಟವರು  ಸ್ವಾಮಿ ಪುರುಷೋತ್ತಮಾನಂದರು.

ಜೂನ್ 14, 1931 ಸ್ವಾಮಿ ಪುರುಷೋತ್ತಮಾನಂದರು ಜನಿಸಿದ ದಿನ.  ದಕ್ಷಿಣ ಕನ್ನಡ ಜಿಲ್ಲೆಯ ಸಾಲಿಗ್ರಾಮದ ಬಳಿಯ ಮೂಡಹಾಡು ಎಂಬಲ್ಲಿ ರಾಮಚಂದ್ರ ಬಾಯರಿ ಆಗಿ ಜನಿಸಿದ ಸ್ವಾಮೀಜಿಯವರು ಮೆಟ್ರಿಕ್ಯುಲೇಷನ್ ಮುಗಿಸಿ ಮಲ್ಪೆ ಮತ್ತು ಮಡಿಕೇರಿಗಳಲ್ಲಿ ಅಧ್ಯಾಪನ ನಡೆಸಿದರು.  ಸ್ವಾಮೀಜಿ 1960ರ ವರ್ಷದಲ್ಲಿ ರಾಮಕೃಷ್ಣ ಪರಂಪರಗೆ ಬ್ರಹ್ಮಚಾರಿಗಳಾಗಿ ಬೆಂಗಳೂರಿನ ರಾಮಕೃಷ್ಣಾಶ್ರಮವನ್ನು ಪ್ರವೇಶಿಸಿದರು.   ಅಂದಿನ ದಿನಗಳಲ್ಲಿ ಬೆಂಗಳೂರು ರಾಮಕೃಷ್ಣಾಶ್ರಮದ ಅಧ್ಯಕ್ಷರೂ, ರಾಮಕೃಷ್ಣಾ ಆರ್ಡರಿನ ಉಪಾಧ್ಯಕ್ಷರೂ ಆಗಿದ್ದ ಸ್ವಾಮಿ ಯತೀಶ್ವರಾನಂದರು ಅವರ ಗುರುವರ್ಯರಾದರು.  ಮುಕುಂದ ಚೈತನ್ಯ ಎಂಬ ಹೆಸರಿನ ಬ್ರಹ್ಮಚಾರಿಯಾಗಿ ಸ್ವಾಮೀಜಿಯವರು ಬೇಲೂರು ಮಠದಲ್ಲಿ ಎರಡು ವರ್ಷಗಳ ತರಬೇತಿ ಪಡೆದರು.  

ಆನಂತರದಲ್ಲಿ ನಡೆದದ್ದು ನಮ್ಮಂತಹ ಸಹಸ್ರಾರು ಕರ್ನಾಟಕದ ಜನರಿಗೆ ಆಧ್ಯಾತ್ಮದ ಸಿಂಚನ ದೊರೆತಂತ ವಿಶಿಷ್ಟ ಸೌಭಾಗ್ಯ.  ಸ್ವಾಮಿ ಪುರುಷೋತ್ತಮಾನಂದರು 1993ರ ವರ್ಷದವರೆಗೆ 33 ವರ್ಷಗಳ ಕಾಲ ಬೆಂಗಳೂರಿನ ರಾಮಕೃಷ್ಣಾಶ್ರಮದಲ್ಲಿದ್ದರು.  ಅವರು ನಡೆಸಿದ ಚಟುವಟಿಕೆಗಳು ಅನಂತವಾದದ್ದು.  ವೈವಿಧ್ಯಪೂರ್ಣವಾದದ್ದು.  ವಿವೇಕಾನಂದ ಬಾಲಕ ಸಂಘ, ವಿವೇಕಾನಂದ ಯುವಕ ಸಂಘ ಮುಂತಾದ ಪ್ರಮುಖ ಸಂಯೋಜನೆಗಳ ಮೂಲಕ ಪುಟ್ಟವರು ಮತ್ತು ಯುವಕರಿಗೆ ಅವರು ತೋರಿದ ದಾರಿದೀಪ ಮಹತ್ವಪೂರ್ಣವಾದದ್ದು.  

ಅಂದಿನ ದಿನಗಳಲ್ಲಿ ಪ್ರತೀ ವಾರ  ಸ್ವಾಮಿ ಪುರುಷೋತ್ತಮಾನಂದರ ಪ್ರವಚನಗಳು ಎಂದೆಂದಿಗೂ ಹೌಸ್ ಫುಲ್.  ಪ್ರವಚನ ಕೇಳಲಿಕ್ಕೆ ಹೋದ ನಮಗೆ ಒಂದು ಭಾಷೆಯನ್ನು ಅಷ್ಟು ಸುಂದರವಾಗಿ, ಪ್ರೀತಿಪೂರ್ವಕವಾಗಿ, ಹೃದಯಪೂರ್ವಕವಾಗಿ ಅನುಭಾವಿಸಬಹುದು ಎಂಬುದು ಮನದಟ್ಟಾಗುವಂತಾಯಿತು.  ಸಾಮಾನ್ಯವಾಗಿ ಆಧ್ಯಾತ್ಮಿಕ ಪ್ರವಚನಗಳಲ್ಲಿ ನಾವೆಲ್ಲಾ ಕಾಣುವುದೆಂದರೆ ಅಂತಹ ಕಾರ್ಯಕ್ರಮಗಳಿಗೆ ಬರುವುದು ಹೆಚ್ಚಿನ ಜನ ವಯಸ್ಸಾದವರು.  ಆದರೆ ನಮ್ಮಂತಹ ಅಂದಿನ ಯುವ ಪೀಳಿಗೆಯನ್ನು ಆಧ್ಯಾತ್ಮಿಕ ಪ್ರವಚನಗಳಿಗೆ ಅವರು ಸೆಳೆದ ರೀತಿ ಮರೆಯಲಾಗದ ಒಂದು ಅನುಭಾವವೇ ಆಗಿ ನಮ್ಮ ಹೃದಯಗಳಲ್ಲಿ ನಿರಂತರವಾಗಿ ಉಳಿದುಕೊಂಡಿದೆ.  ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದ ರೀತಿ, ಕಥಾನಕಗಳನ್ನು ವರ್ಣಿಸುತ್ತಿದ್ದ ರೀತಿ, ಅದರಲ್ಲಿದ್ದ ಪ್ರೀತಿಯ ಇನಿದನಿ, ನಾವು ನಮಸ್ಕರಿಸುತ್ತಿದ್ದಾಗ ನಮ್ಮ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಯಿಂದ ಪ್ರತಿನಮಸ್ಕರಿಸುತ್ತಾ ತೋರುತ್ತಿದ್ದ ಆತ್ಮೀಯ ಭಾವ ಇವೆಲ್ಲಾ ನಾವು ಹಿಂದೆಂದೂ ಕಂಡರಿಯದಂತದಾಗಿತ್ತು.  ಒಂದು ರೀತಿಯಲ್ಲಿ ಅಂತಹದ್ದನ್ನು ಪಡೆದದ್ದೂ ನಮ್ಮ ಸುಕೃತವೇ ಎಂದರೂ ಸರಿಯೆ.  

ಸ್ವಾಮಿ ಪುರುಷೋತ್ತಮಾನಂದರರು  ಬೋಧಿಸುತ್ತಿದ್ದುದು ಕೇವಲ ಆಧಾತ್ಮವನ್ನು ಮಾತ್ರವಲ್ಲ.  ಅವರು ಸಾಹಿತ್ಯದ ವಿದಾರ್ಥಿಗಳಲ್ಲದ ನಮ್ಮಲ್ಲಿ  ಸಾಹಿತ್ಯದ ಬಗ್ಗೆ ಪ್ರೀತಿ ಹುಟ್ಟಿಸಿದರು.  ಇದಕ್ಕೊಂದು ನಿದರ್ಶನ ನೆನಪಿಗೆ ಬರುತ್ತದೆ.  ಒಂದು ಪ್ರವಚನದಲ್ಲಿ ಸ್ವಾಮೀಜಿಯವರು ಸ್ವಾಮಿ ವಿವೇಕಾನಂದರು ಅತ್ಯಂತ ಪ್ರಬುದ್ಧವಾಗಿ ಫ್ರೆಂಚ್ ಭಾಷೆಯನ್ನು ಕಲಿತ ಬಗೆಯನ್ನು ವಿವರಿಸುತ್ತಿದ್ದರು.  ಸ್ವಾಮಿ ವಿವೇಕಾನಂದರು ಆ ಭಾಷೆಯನ್ನು ಕಲಿತ ಬಗೆಗೆ ಅವರು ಹೋಲಿಕೆ ತಂದು ಕೊಟ್ಟದ್ದು  ಕನ್ನಡದ ಕವಿ ನಿಸಾರ್ ಅಹಮದ್ ಅವರು ಉದ್ಘರಿಸಿದರೆಂಬ ಮಾತಿನ ಮೂಲಕ.  ನಿಸಾರ್ ಅಹಮದ್ ಒಂದೆಡೆ ಹೇಳಿದ್ದಾರೆ “ನಾನು ಕನ್ನಡದ ಒಂದೊಂದು ಅಕ್ಷರವನ್ನೂ ಪದವನ್ನೂ ಬೆವರು ಹರಿಸಿ ಕಲಿತಿದ್ದೇನೆ” ಅಂತ.  ಸ್ವಾಮಿ ಪುರುಷೋತ್ತಮಾನಂದರು ಹೇಳುತ್ತಿದ್ದರು “ನೋಡಿ, ನನಗೆ ನಿಸಾರ್ ಅಹಮದ್ ಅವರ ಮಾತು ತುಂಬಾ ಆಳವಾಗಿ ಇಳಿದು ಬಿಟ್ಟಿದೆ.  ಬಹುಷಃ ಸ್ವಾಮಿ ವಿವೇಕಾನಂದರೂ ಸಹಾ ಫ್ರೆಂಚ್ ಭಾಷೆಯ ಒಂದೊಂದು ಅಂಶವನ್ನೂ ಬೆವರು ಹರಿಸಿ ಆತ್ಮೀಯವಾಗಿರಿಸಿಕೊಂಡವರು.”    ಹೀಗೆ ಬೇಂದ್ರೆ, ಕುವೆಂಪು, ನಿಸಾರ್ ಅಹಮದ್, ಶಿವರುದ್ರಪ್ಪ ಅಂತಹವರ ಕಾವ್ಯವನ್ನೆಲ್ಲಾ ನಾವು ಮೊದ ಮೊದಲು ಕೇಳಿದ್ದು ಸ್ವಾಮಿ ಪುರುಷೋತ್ತಮಾನಂದರಿಂದಲೇ.  ಶ್ರೀರಾಮಕೃಷ್ಣ ಪರಮಹಂಸರು, ಶಾರದಾ ಮಾತೆ ಮತ್ತು ಸ್ವಾಮಿ ವಿವೇಕಾನಂದರ ಕುರಿತು, ನಮಗೆ ಭಾಗವಹಿಸಲು ಸಾಧ್ಯವಾದ ಸ್ವಾಮಿ ಪುರುಷೋತ್ತಮಾನಂದರ ಪ್ರವಚನಗಳಷ್ಟರಲ್ಲಿಯೆ ನಮ್ಮಲ್ಲಿ ಮೂಡಿದ ಪರಿಣಾಮ ಅಗಾಧವಾದದ್ದು.   ಅವರ ಗಾಯನವನ್ನು ಕೇಳುತ್ತಾ ಕಣ್ಮುಚ್ಚಿ ಕೆಲವು ಹೊತ್ತು ಕುಳಿತದ್ದೇ ನಮಗೆ ದೊರೆತ ಅಪೂರ್ವ ಧ್ಯಾನಸ್ಥ ಭಾವ.  ನಾವು ಬೆಳೆದ ರೀತಿಯಲ್ಲಿ ಇವುಗಳು ವಹಿಸಿದ ಪಾತ್ರ ಅತ್ಯಮೂಲ್ಯವಾದದ್ದು.  ಅವರು ನಿರೂಪಿಸಿ ಮತ್ತು ನಂತರ ಪ್ರಕಟಿಸಿದ  ವೀರ ಸಂನ್ಯಾಸಿ, ವಿಶ್ವವಿಜೇತ, ವಿಶ್ವಮಾನವ ಈ ಮೂರೂ ವಿವೇಕಾನಂದರ ಗ್ರಂಥಗಳು ನಮಗೆ ಕೊಟ್ಟ ಓದುಗಳು ಅತ್ಯಂತ ಆತ್ಮೀಯವಾದದ್ದು.  

1993ರ ವರ್ಷದಲ್ಲಿ ಸ್ವಾಮಿ ಪುರುಷೋತ್ತಮಾನಂದರು ಬೆಂಗಳೂರನ್ನು ಬಿಡಬೇಕಾಯಿತು.  ಅವರಿಗೆ ಬೆಂಗಳೂರಿನ ಆಶ್ರಮ ಬಿಡುವ ಮನಸ್ಸಿರಲಿಲ್ಲ.  ಸ್ವಾಮಿ ವಿವೇಕಾನಂದರು ಕೂಡಾ ಒಮ್ಮೆ ಹೇಳುತ್ತಾರೆ “ನಾನು ಮಾನವತೆಯ ಪ್ರೇಮದಿಂದ ಬಂಧಿತನಾಗಿದ್ದೇನೆ”.  ಈ ಮಾತನ್ನು ಕೂಡಾ ಸ್ವಾಮಿ ಪುರುಷೋತ್ತಮಾನಂದರು ತಮ್ಮ ಪ್ರವಚನದಲ್ಲಿ ಆಗಾಗ ಹೇಳುತ್ತಿದ್ದರು.  ಇದು ಸ್ವತಃ ಸ್ವಾಮಿ ಪುರುಷೋತ್ತಮಾನಂದರ ಅನುಭಾವವೂ ಆಗಿತ್ತು.  ಅವರನ್ನು,  ಬೆಂಗಳೂರಿನ ಆಶ್ರಮಕ್ಕೆ ಬರುತ್ತಿದ್ದ ಜನಸ್ತೋಮದ ಪ್ರೀತಿ ಅತ್ಯಂತ ಆಪ್ತವಾಗಿ ಸುತ್ತುವರಿದಿತ್ತು.  1993ರಿಂದ 2000ದ ವರ್ಷದವರೆಗೆ ಅವರು ಕೊಡಗಿನ ಪೂನ್ನಂಪೇಟೆಯ ಆಶ್ರಮದಲ್ಲಿದ್ದರು.  ಕೊಡಗಿನಲ್ಲೂ ಸಹಾ ಅವರು ಅಪಾರವಾದ ಕಾರ್ಯ ನಿರ್ವಹಿಸಿದರು.  ನವೆಂಬರ್ 2000ದ ವರ್ಷದಿಂದ ಅವರು ಬೆಳಗಾಂ ರಾಮಕೃಷ್ಣಾಶ್ರಮದಲ್ಲಿದ್ದರು.  ಅಲ್ಲಿ ಕೂಡಾ ಅವರ ಸಾಧನೆ ಅಮೋಘವಾದದ್ದು.     ಕರ್ನಾಟಕದಲ್ಲಿ ಹಲವಾರು ಸತ್ಸಂಗಗಳು, ರಾಮಕೃಷ್ಣ ಆಶ್ರಮಗಳ ಶಾಖೆಗಳ ಪ್ರಾರಂಭಕ್ಕೆ ಅವರು ಮಹತ್ವಪೂರ್ಣ ಕೊಡುಗೆ ನೀಡಿದರು.   

ಸ್ವಾಮಿ ಪುರುಷೋತ್ತಮಾನಂದರು ರಾಮಕೃಷ್ಣರು, ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ಕುರಿತು ಹಲವಾರು ಪುಸ್ತಕಗಳನ್ನು ಬರೆದರು.  A letter to a student ಎಂಬುದು ಅವರ ಪ್ರಖ್ಯಾತ ಪುಸ್ತಕ.  Secret of Concentration, Man and Money, Youth and Vitality, Useful thoughts for youths, Build your personality, ವಿದ್ಯಾರ್ಥಿಗೊಂದು ಪತ್ರ, ಆಧ್ಯಾತ್ಮದಲ್ಲಿ ಏಕಾಗ್ರತೆ, ಧೀರತೆಯ ದುಂಧುಬಿ, ಕಬೀರ ಬೀರಿದ ಬೆಳಕು, ತಪಸ್ಸು ಯಶಸ್ಸು  ಇವೆಲ್ಲಾ ಯುವಜನತೆಗೆ ಅವರು ಕೊಟ್ಟ ಕಾಯಕಲ್ಪಗಳು.   ಅವರ ಸ್ವಾಮಿ ವಿವೇಕಾನಂದರ ಕುರಿತಾದ ಪುಸ್ತಕಕ್ಕೆ ಹಲವಾರು ಪ್ರಶಸ್ತಿ ಗೌರವಗಳೂ ಸಂದವು.  ಅವರ ಗಾಯನ ಶ್ರೇಷ್ಠತೆ ಅಪೂರ್ವವಾದದ್ದು.  ಅವರ ಗಾಯನದ ಮತ್ತು ಪ್ರವಚನದ ಹಲವಾರು ಕ್ಯಾಸೆಟ್ಟುಗಳು ಸಹಾ ಲಭ್ಯವಿದೆ.    

ನಮ್ಮ ಜೀವನದಲ್ಲಿ ಕಂಡ ಈ ಅಪೂರ್ವ ಗುರು ಫೆಬ್ರುವರಿ 25, 2005ರ ವರ್ಷದಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ತಮ್ಮ 73ನೆಯ ವಯಸ್ಸಿನಲ್ಲಿ ಇಹ ಜೀವನವನ್ನು ತ್ಯಜಿಸಿ ದಿವ್ಯಲೋಕದತ್ತ ಮುಖ ಮಾಡಿದರು.  ಈ ಮಹಾನ್ ಗುರುವಿನ ಚರಣಕ್ಕೆ ಸಾಷ್ಟಾಂಗ ನಮನ.  ಸ್ವಾಮೀಜಿ ನಿಮ್ಮ ಆಶೀರ್ವಾದ ನಮ್ಮನ್ನು ನಿರಂತರ ಕಾಯುತ್ತಿರಲಿ.

Tag: Swami Purushottamananda

ಕಾಮೆಂಟ್‌ಗಳಿಲ್ಲ: