ಸೋಮವಾರ, ಆಗಸ್ಟ್ 26, 2013

ಮಿರ್ಜಿ ಅಣ್ಣಾರಾಯ

ಮಿರ್ಜಿ ಅಣ್ಣಾರಾಯ

ಮಿರ್ಜಿ ಅಣ್ಣಾರಾಯ ಎಂಬುದು ಹೊಸಗನ್ನಡ ಸಾಹಿತ್ಯದಲ್ಲಿ ಚಿರಪರಿಚಿತ ಹೆಸರು.  ಅನುಭವಿ ಶಿಕ್ಷಕ, ಮಿತಭಾಷಿ, ಆದರ್ಶಜೀವಿ, ಸತತಾಭ್ಯಾಸಿ, ಬಹುಮುಖಿ ಸಾಹಿತ್ಯಕಾರ ಈ ಪಂಚ ಸೂತ್ರಗಳಲ್ಲಿ ಹಿರಿಯ ಸಾಹಿತಿ ಮಿರ್ಜಿ ಅಣ್ಣಾರಾಯರ ಒಟ್ಟು ವ್ಯಕ್ತಿತ್ವ ಹರಳುಗೊಳ್ಳುತ್ತದೆ.

ಬೆಳಗಾವಿಯಿಂದ ಉತ್ತರಕ್ಕೆ ಸುಮಾರು 125 ಕಿ.ಮೀ ದೂರದ ಹಳ್ಳಿ ಸೇಡಬಾಳ ಮಿರ್ಜಿ ಅಣ್ಣಾರಾಯರ ಕಾರ್ಯಕ್ಷೇತ್ರ.  ಅಣ್ಣಾರಾಯರ ಹೆಸರಿನಲ್ಲಿರುವ ಮಿರ್ಜಿ ಎಂಬುದು ಅಣ್ಣಾರಾಯರ ಪೂರ್ವಜರಿದ್ದ ಊರು. ಸೇಡಬಾಳ ಕರ್ನಾಟಕದ ಜನಮನದ ನೆನಪಿನಲ್ಲಿ ನಿಂತಿರುವುದು ಮಿರ್ಜಿ ಅಣ್ಣಾರಾಯರಿಂದ.  ಬೆಳಗಾವಿಯಂತೆಯೇ, ಆ ಜಿಲ್ಲೆಗೆ ಸೇರಿದ ಸೇಡಬಾಳವೂ ಕರ್ನಾಟಕದ ಗಡಿಯಲ್ಲಿದೆ.  ಈ ಗಡಿಯನ್ನು ಕರ್ನಾಟಕದ ಸೆರಗಿನೊಳಗೇ ನಿಲ್ಲುವಂತೆ ಮೂರುವರೆ ದಶಕಗಳ ಕಾಲ ದುಡಿದವರು, ಪ್ರತಿಫಲಾಪೇಕ್ಷೆಯಿಲ್ಲದೆ ಶ್ರಮಿಸಿದವರು ಅಣ್ಣಾರಾಯರು.

ತಮ್ಮ ಹಡೆದವರನ್ನು ಕುರಿತು ಅಣ್ಣಾರಾಯರು ಹೇಳುತ್ತಾರೆ,  “ನನ್ನ ತಂದೆ ತಾಯಂದಿರು ಅಕ್ಷರಗಳನ್ನು ಕಲಿತವರಲ್ಲ, ಆದರೆ ತುಂಬಾ ಸುಸಂಸ್ಕೃತರು”.  ಹೀಗೆ ಶ್ರೀಸಾಮಾನ್ಯರ ಮನೆತನದಲ್ಲಿ ಆಗಸ್ಟ್ 25,1918ರಲ್ಲಿ ಜನಿಸಿದ ಅಣ್ಣಾರಾಯರು ತಮ್ಮ 57 ವರ್ಷಗಳ ಜೀವಿತ ಕಾಲದಲ್ಲಿ ಮಾಡಿಮಟ್ಟಿದ್ದು ಮಾತ್ರ ಅಸಾಮಾನ್ಯವಾದದ್ದು.  ಅಣ್ಣಾರಾಯರು ನಿಧನರಾದದ್ದು 23, ಡಿಸೆಂಬರ್ 1975ರಲ್ಲಿ. 

ಅಣ್ಣಾರಾಯರು ವಿದ್ಯಾರ್ಥಿಯಾಗಿ ಕಾಲೇಜು ಮೆಟ್ಟಿಲು ಹತ್ತಿದವರಲ್ಲಅವರು ಬರೆದ ಪುಸ್ತಕಗಳು ಮಾತ್ರ ಸ್ನಾತಕೋತ್ತರ ತರಗತಿಗಳಿಗೂ ಪಠ್ಯಗಳಾಗಿವೆ.  ಸಾಹಿತ್ಯ ಕೃತಿಗಳಾಗಿ ಮನ್ನಣೆ ಹೊಂದಿವೆ.  ಮಠಕ್ಕೆ  ಹಾಜರಾಗಿ ಅವರು ಕಲಿತದ್ದು ಪ್ರಾಥಮಿಕ ಶಾಲೆಯವರೆಗೆ.  ಅಲ್ಲಿಂದ ಆಚೆ ಮನೆಯಲ್ಲಿ ಕುಳಿತೇ ಸ್ವಾಧ್ಯಾಯ ಕಲಿಕೆ.  ಖಾಸಗಿಯಾಗಿ ಕಲಿಯುತ್ತಾ ಸಾಹಿತ್ಯ ಪರಿಷತ್ತಿನ ಜಾಣಪರೀಕ್ಷೆಗೆ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡು, 1938ರಲ್ಲಿ ಜಾಣರಾದರು.  ಮರುವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾದರು.  ವ್ಯವಹಾರಕ್ಕೆಂದು ತಕ್ಕಮಟ್ಟಿನ ಇಂಗ್ಲಿಷ್ ಮತ್ತು ಗುಜರಾತಿ ಕಲಿತರು.  ಸಂಸ್ಕೃತ, ಪ್ರಾಕೃತಗಳ ಪರಿಶ್ರಮವಿತ್ತು.  ವಿಶ್ವವಿಖ್ಯಾತ ವಿದ್ವಾಂಸ ಡಾ. ಆ. ನೇ. ಉಪಾಧ್ಯೆಯವರ ಮಾರ್ಗದರ್ಶನದಲ್ಲಿ ಪ್ರೌಢ ಕೃತಿಗಳನ್ನೂ ಅಭ್ಯಸಿಸಿದರು. 

ಇಪ್ಪತ್ತರ ಹರಯದಲ್ಲಿ ಅಣ್ಣಾರಾಯರ ರಾಗಲಾಲಸೆಗಳು ಸಾಹಿತ್ಯ ಸೀಮೆಗೆ ಧಾವಿಸಿದವು.  1945ರಲ್ಲಿ ಮಿರ್ಜಿ ಅಣ್ಣಾರಾಯರ ಚಿರಂಜೀವಿ ಕೃತಿಯಾದ ನಿಸರ್ಗಕಾದಂಬರಿ ಕನ್ನಡದಲ್ಲಿ ನವವಿಕ್ರಮವನ್ನು ಸಾಧಿಸಿತು.  ನಿಸರ್ಗ ಕಾದಂಬರಿ ಅಚ್ಚಿನ ಮನೆಯಿಂದ ಹೊರಬರುತ್ತಿದ್ದಂತೆ ತನ್ನ ತಾಜಾತನದಿಂದ ವಿಮರ್ಶಕರ ಮೈನವಿರೇಳಿಸಿತು.   ಅದರಲ್ಲಿನ ಮಣ್ಣಿನ ವಾಸನೆಗೆ ಅವರು ನಿಬ್ಬೆರಗಾದರು.  ವಸ್ತುವಿನ ಸಹಜತೆ, ಭಾಷೆಯ ವೀರ್ಯವಂತಿಕೆ, ದೇಸಿಗುಣ, ಸರಳ ಕಲಾತ್ಮಕ ನಿರೂಪಣೆ, ಬದುಕಿನ ಜೀವಂತ ಚಿತ್ರಣ-ಇವುಗಳಿಂದ ನಿಸರ್ಗಹೊಸ ದಾಖಲೆ ಸ್ಥಾಪಿಸಿತು.  ಸಾಹಿತ್ಯ ಪರಿಷತ್ತು, ಮುಂಬೈ ಸರ್ಕಾರ, ದೇವರಾಜ ಬಹದ್ದೂರ್ ಪಾರಿತೋಷಕಗಳ  ಮನ್ನಣೆ ಪಡೆಯಿತು.  ನಿರಂಜನರು ಹೇಳುವಂತೆ – “ನಿಸರ್ಗ ಜೀವನದ ಒಂದು ಕೈಪಿಡಿ.  ಸಮಾಜ ಸ್ಥಿತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಬೇಕೆಂದು ಇಚ್ಚಿಸುವವರು, ಹೊಸ ನಾಡನ್ನು ನಿರ್ಮಿಸಬೇಕೆಂದು ಹಂಬಲಿಸುವವರು ಅವಶ್ಯ ಓದಬೇಕಾದ ಕಾದಂಬರಿ ನಿಸರ್ಗ. 

ಅಣ್ಣಾರಾಯರು ಅಹಂಭಾವ ಎರಡು ಧ್ರುವಗಳು.  ಸರಳತೆ, ಸೌಜನ್ಯ, ಸ್ನೇಹಪರತೆ, ಅವ್ಯಾಜ ಅಂತಃಕರಣ ಇವು ಅವರ ಹೆಸರುಗಳು.  ತಮ್ಮ ಮೊದಲ ಕೃತಿಗೆ ದೊರೆತ ಮರ್ಯಾದೆಯಿಂದ ಅವರ ತಲೆ ತಿರುಗಲಿಲ್ಲ.  ಬದಲು ದೇಶದ ಸ್ವಾತಂತ್ರ್ಯ ಆಂದೋಲನ ಕಾವಿನಿಂದ ಬಿರುಸಾಗಿ ನಡೆಯುತ್ತಿದ್ದುದಕ್ಕೆ ಸ್ಪಂದಿಸಿದರು.  ಗಾಂಧೀತಾತನ ಕರೆಗೆ ಓಗೊಟ್ಟರು.  ಗಾಂಧೀ ಟೋಪಿ, ಖಾದಿ ಜುಬ್ಬಾ, ಕಚ್ಚೆ ಪಂಚೆ ಅವರ ನಿತ್ಯದ ವೇಷಭೂಷಣವಾಯಿತು.  ಹುಟ್ಟಿನಿಂದ, ಆಚರಣೆಯಿಂದ, ಧೋರಣೆಯಿಂದ, ಅಣ್ಣಾರಾಯರು ಅಹಿಂಸಾವಾದಿ.  ರಾಷ್ಟ್ರಜೀವನದಲ್ಲಿಯ ಪರ್ವಕಾಲದಲ್ಲಿ ಸ್ಥಿತ್ಯಂತರಗಳನ್ನು ಪ್ರತ್ಯಕ್ಷ ಸಾಕ್ಷಿಗಳಾಗಿ ಕಂಡುಂಡ ಅಣ್ಣಾರಾಯರು, ಸ್ವಾತಂತ್ರೋದಯ ವರ್ಷದಲ್ಲಿ ರಾಷ್ಟ್ರಪುರುಷಕಾದಂಬರಿಯನ್ನು ಹೊರತಂದರು.  ಬಿಡುಗಡೆಯ ಹೋರಾಟದಲ್ಲಿ ಹಿಂದೂ ಮುಸ್ಲಿಂ ಭ್ರಾತೃತ್ವವೂ ಬೆಸೆದುಕೊಂಡಿತ್ತೆಂಬುದನ್ನು ಪ್ರತಿಪಾದಿಸುವ ರಾಷ್ಟ್ರಪುರುಷದಲ್ಲಿ ಅಜಿತನ ಪಾತ್ರ ಉದಾತ್ತವಾಗಿ ನಿರೂಪಿತವಾಗಿದೆ.  ಮುಂಬಯಿ ಷಹರಿನ ಹಾಗೂ ಗ್ರಾಮ ಜೀವನದ ಸೊಗಡು ಮೂಗಿಗೆ ಬಡಿಯುವಷ್ಟು ಸಹಜವಾಗಿದೆ.

1947ರ  ವರ್ಷದಲ್ಲಿ ಅಣ್ಣಾರಾಯರು ಪ್ರತಿ ಸರಕಾರಕಾದಂಬರಿ ಪ್ರಕಟಿಸಿದರು.  ಅಣ್ಣಾರಾಯರ ಮುಂದಿನ ಕಾದಂಬರಿ 1948ರಲ್ಲಿ ಪ್ರಕಟವಾದ ರಾಮಣ್ಣ ಮಾಸ್ತರ’.  ಹಳ್ಳಿಯ ಶಾಲೆಯ ಮಾಸ್ತರನು ಕಾದಂಬರಿಯ ನಾಯಕ ಪಟ್ಟವನ್ನು ಏರಿದುದಕ್ಕೆ ಶಿಕ್ಷಕರು ಹೆಮ್ಮೆ ಪಟ್ಟುಕೊಳ್ಳಬಹುದು.  ತಮ್ಮ ಜೀವನದ, ಅನುಭವದ ತಿರುಳಿನಂತಿರುವ ಈ ಕಾದಂಬರಿಯನ್ನು ಅವರು ಮೆಚ್ಚಿಕೊಳ್ಳಬಲ್ಲರು, ಇತರರಿಗೂ ಈ ಅನುಭವವು ಮೆಚ್ಚುಗೆಯಾದೀತು.  ಇದರ ಬೆನ್ನ ಹಿಂದೆಯೇ ಬಂದ ಕಾದಂಬರಿ ಅಶೋಕಚಕ್ರ’.  ಇದರಲ್ಲಿ ಆರ್ಥಿಕ ವ್ಯವಸ್ಥೆಯ ಅಸಮಾನತೆಯ ವಿವಿಧ ಮುಖಗಳು ಮತ್ತು ಪರಿಣಾಮವನ್ನೂ, ಹಳ್ಳಿಗರ ಅಸಹಾಯಕ ಸ್ಥಿತಿಯನ್ನೂ, ಅದರಿಂದ ನಡೆಯುವ ಶೋಷಣೆಯ ಕರಾಳತೆಯನ್ನೂ ಕಾದಂಬರಿಕಾರರು ಹೃದಯ ವಿದ್ರಾವಕವಾಗುವಂತೆ ವರ್ಣಿಸಿದ್ದಾರೆ.  ವ್ಯಾಸರಾಯ ಬಲ್ಲಾಳರು ಅಶೋಕ ಚಕ್ರವನ್ನು ಮೊದಲನೆಯ ವರ್ಗದ ಕನ್ನಡ ಕಾದಂಬರಿ ಎಂದಿದ್ದಾರೆ.

1954-55ರಲ್ಲಿ ಪ್ರಕಟವಾದ ಶ್ರೇಯಾಂಸ’  ಕಾದಂಬರಿಯಲ್ಲಿ ಎರಡು ಭಾಗಗಳಿವೆ.  ಎರಡು ಹೆಜ್ಜೆ’, ‘ಹದಗೆಟ್ಟ ಹಳ್ಳಿ’, ‘ಭಸ್ಮಾಸುರ’, ಮುಂತಾದವು ಅಣ್ಣಾರಾಯರ ಇತರ ಕಾದಂಬರಿಗಳು.  ಸಾಮ್ರಾಟ್ ಶ್ರೇಣಿಕ’, ‘ಚಾವುಂಡರಾಯ’, ‘ಸಿದ್ಧಚಕ್ರಚಾರಿತ್ರಿಕ ಕಾದಂಬರಿಗಳು.  ಋಷಭದೇವಪೌರಾಣಿಕ ಕಾದಂಬರಿ. 

ಕಥಾಸಾಹಿತ್ಯಕ್ಕೂ ಅಣ್ಣಾರಾಯರ ಕಾಣಿಕೆ ಕಡಿಮೆಯದೇನಲ್ಲ.  ಪ್ರಣಯ ಸಮಾಧಿ’, ‘ಅಮರ ಕಥೆಗಳು’, ‘ವಿಜಯಶ್ರೀಎಂಬ ಕಥಾ ಸಂಕಲನಗಳು ಪ್ರಕಟವಾಗಿವೆ.

ವಿಸ್ತಾರದಂತೆ ವೈವಿಧ್ಯ ಅಣ್ಣಾರಾಯರ ಸಾಹಿತ್ಯ ರಚನೆಯಲ್ಲಿದೆ.  ಅಣ್ಣಾರಾಯರ ಬಹುಮುಖ ಸಾಹಿತ್ಯ ರಚನೆಯ ಕೃಷಿ ಕಂಡಾಗ ಒಬ್ಬ ಪ್ರಾಥಮಿಕ ಶಾಲಾ ಅಧ್ಯಾಪಕರು ಎಷ್ಟೊಂದು ಕೆಲಸ ಮಾಡಿದ್ದಾರೆಂದು ಮನವರಿಕೆಯಾಗುತ್ತದೆ.  ಸನ್ಮತಿ, ವಿವೆಕಾಭ್ಯುದಯ, ಗುರುದೇವ, ಜೀವನ, ಪ್ರಬುದ್ಧ ಕರ್ನಾಟಕ ಮುಂತಾದ ಹತ್ತಾರು ನಿಯತಕಾಲಿಕೆಗಳಲ್ಲಿ ನಾನಾ ವಿಷಯಗಳ ಕುರಿತು ಅವರು ನೂರಾರು ಲೇಖನಗಳನ್ನು ಬರೆದಿದ್ದಾರೆ.  ಮೂಲ ಶಿಕ್ಷಣ ಮೌಲ್ಯಮಾಪನ, ಭಾಷಾ ಶಿಕ್ಷಣ, ಲೇಖನ ಕಲೆ ಮುಂತಾದ ಶೈಕ್ಷಣಿಕ ಗ್ರಂಥಗಳಿವೆ.  ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ನಾಲ್ಕು ಚಿತ್ರಗಳು, ಕನ್ನಡ ಸಾಹಿತ್ಯದ ಒಲವುಗಳು ಇವು ವಿಮರ್ಶೆಯ ಕೃತಿಗಳು.  ಕಲ್ಯಾಣ ಕೀರ್ತಿ ಕವಿಯ ಚಿನ್ಮಯಿ ಚಿಂತಾಮಣಿ, ಭರತೇಶ ವೈಭವದ ಶೋಭನ ಸಂಧಿಗಳು ಅವರು ಸಂಪಾದಿಸಿದ ಗ್ರಂಥಗಳು.

ವ್ಯಕ್ತಿಚಿತ್ರಗಳಲ್ಲೂ ಅಣ್ಣಾರಾಯರು ಎತ್ತಿದ ಕೈ.  ಇಸ್ಲಾಂ, ಜೈನ, ಬೌದ್ಧ ಧರ್ಮಗಳ ಮಹಾಪುರುಷರ ಜೀವನ ಚರಿತ್ರೆಗಳನ್ನು ಹೊರತಂದಿದ್ದಾರೆ.  ಮಹಾಪುರುಷ, ಪ್ರಿಯದರ್ಶಿನಿ, ಭಾರತದ ಬೆಳಕು, ಖಾರವೇಲ, ಭಗವಾನ್ ಮಹಾವೀರ, ಬುದ್ಧನ ಕಥೆ, ಮಹಮ್ಮದ್ ಪೈಗಂಬರ, ಶಾಂತಿಸಾಗರರು, ತೀರ್ಥಂಕರ ಮಹಾವೀರ ಮೊದಲಾದವನ್ನು ಉಲ್ಲೇಖಿಸಬಹುದು.  ಇವುಗಳಲ್ಲಿ ಮಕ್ಕಳ ಸಾಹಿತ್ಯವೂ ಸೇರಿದೆ. 

ಅಣ್ಣಾರಾಯರ ಬರಹಗಳಲ್ಲಿ 900 ಪುಟಗಳ ಜೈನಧರ್ಮ ಅಣ್ಣಾರಾಯರ ಮೇರುಕೃತಿ.  ಸಂಸ್ಕೃತದಲ್ಲಿ ಪೂರ್ವ ಪುರಾಣ ಉತ್ತರ ಪುರಾಣ ಎಂಬ ಎರಡೂ ಭಾಗಗಳು ಸೇರಿ ಆದ ಮಹಾಪುರಾಣವು  ದೊಡ್ಡ ಮಹಾಕಾವ್ಯ.  ಈ ವಿದ್ವತ್ ಕೃತಿಗಳ ಶ್ರೇಣಿಗೆ ಸೇರಿದ ಮತ್ತೊಂದು ಗ್ರಂಥ ರತ್ನ ಕರಂಡಕ ಶ್ರಾವಕಾಚಾರಎಂಬ ಪ್ರಕಾಂಡ ಪಂಡಿತ ತಾರ್ಕಿಕ ಸಮಂತ ಭದ್ರಾಚಾರರೇ ಬರೆದುದೆಂದು ಪ್ರಚುರವಾಗಿರುವ ಈ ಉತ್ಕೃಷ್ಟ ಕೃತಿಯನ್ನು ಅದರ ವ್ಯಾಖ್ಯಾನದೊಡನೆ, ಡಾ. ಆ. ನೇ. ಉಪಾಧ್ಯೆ ಅವರ ಸೂಚನೆಗಳೊಡನೆ ಅಣ್ಣಾರಾಯರು ಕನ್ನಡದಲ್ಲಿ ಸಾದರಪಡಿಸಿದ್ದಾರೆ.  ಉನ್ನತ ತರಗತಿಗಳಿಗೆ ಕನ್ನಡವನ್ನು ಬೋಧಿಸುವ ಕಾಲೇಜು ಅಧ್ಯಾಪಕರಿಗೆ ಇದರ ನೆರವು ಅಪಾರ.   ಭಾರತೀಯ ಜ್ಞಾನಪೀಠದ ಆಧಾರಸ್ಥಂಭರೆನಿಸಿದ್ದ  ಡಾ. ಹೀರಾಲಾಲ್ ಜೈನ್ ಅವರ ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆಎಂಬ 600 ಪುಟಗಳ ಕೃತಿಯನ್ನು ಮಿರ್ಜಿ ಅಣ್ಣಾರಾಯರು ಕನ್ನಡಿಸಿದ್ದಾರೆ. 

ವರಕವಿ ಬೇಂದ್ರೆಯವರ ವ್ಯಕ್ತಿ-ಕೃತಿ ಪರಿಚಯ ಮಾಡಿಕೊಡುವ ಕೃತಿಯೊಂದನ್ನು ಅಣ್ಣಾರಾಯರು ದತ್ತವಾಣಿಎಂಬ ಹೆಸರಿನಿಂದ ಅಚ್ಚುಹಾಕಿಸಿದ್ದಾರೆ.  ಡಾ. ಸಿದ್ಧಯ್ಯ ಪುರಾಣಿಕರನ್ನು ಪರಿಚಯಿಸುವ ಕಾವ್ಯಾನಂದ, ಡಾ. ರಂ. ಶ್ರೀ. ಮುಗಳಿಯವರನ್ನು ಪರಿಚಯಿಸುವ ರಸಿಕರಂಗ’  ಮೊದಲಾದ ಅಭಿನಂದನ ಗ್ರಂಥಗಳಿಗೆ ಸಂಪಾದಕರಾಗಿದ್ದಾರೆ.  ಇವು ಅಣ್ಣಾರಾಯರ ಅಮತ್ಸರ ಗುಣಕ್ಕೆ ಕನ್ನಡಿ ಹಿಡಿಯುವ ಕೃತಿಗಳು. 

ಒಬ್ಬ ಮೇಲು ಮಟ್ಟದ ಲೇಖಕರಾಗಿ ಮಿರ್ಜಿಯವರು ಮಾಡಿದ ಅದ್ಭುತ ಸಾಧನೆಗಳು ಒಂದು ಮುಖವಾದರೆ, ಇನ್ನು ವ್ಯಕ್ತಿಯಾಗಿ ಸಾರ್ವಜನಿಕ ರಂಗದಲ್ಲಿಯೂ ಅವರು ಮಾಡಿದ ಪ್ರಗತಿಪರ ಹಾಗೂ ಸಂಘಟನಾ ಕಾರ್ಯಗಳು ಇನ್ನೊಂದು ಮುಖವಾಗಿವೆ.  ಅವರು ಹೇಳಿ ಕೇಳಿ ಒಬ್ಬ ಶಾಲಾಶಿಕ್ಷಕರು.  ಹಳ್ಳಿಯ ಮಕ್ಕಳ ಓಜರಾಗಿ 35ವರ್ಷಗಳ ಪಾಠ ಹೇಳಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ.  ನಿಷ್ಠೆಯ ಆಚಾರ್ಯರು ಎಂದು ರಾಜ್ಯದ ವಿದ್ಯಾ ಇಲಾಖೆಯಲ್ಲಿ ಅವರು ಮನ್ನಣೆ ಗಳಿಸಿದರು.  ರಾಜ್ಯ ಸರ್ಕಾರದಿಂದ ಆದರ್ಶ ಶಿಕ್ಷಕರೆಂಬ ಪ್ರಶಸ್ತಿ ಪಡೆದರು.  ಅದರೊಂದಿಗೆ ಭಾರತ ಸರ್ಕಾರದಿಂದಲೂ ಪುರಸ್ಕೃತರಾಗಿ ರಾಷ್ಟ್ರಾಧ್ಯಕ್ಷರಿಂದ ಪ್ರಶಸ್ತಿಗೆ ಪಾತ್ರರಾದರು.  ಅಣ್ಣಾರಾಯರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಸಾಹಿತ್ಯ ಅಕಾಡೆಮಿಯು 1970ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು.  ಸರ್ಕಾರದ ಹಲವು ಪಠ್ಯ ಪುಸ್ತಕಗಳ ಸಮಿತಿಯಲ್ಲಿ ಅಣ್ಣಾರಾಯರು ಮುಖ್ಯ ಸದಸ್ಯರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿಗೂ ಅಣ್ಣಾರಾಯರಿಗೂ ಮಧುರವಾದ ಬಾಂಧವ್ಯ. 

ಮಿರ್ಜಿ ಅಣ್ಣಾರಾಯರು ಸೇಡಬಾಳದಲ್ಲಿ ಶಾಂತಿ ಸೇವಾ ಸದನವನ್ನು ತೆರೆದು, ಅನೇಕ ಹೊಸ ಬರಹಗಾರರಿಗೆ ತರಬೇತಿ ಕೊಟ್ಟು, ಅವರು ಇರುವವರೆಗೆ 45 ಪುಸ್ತಕಗಳನ್ನು ಪ್ರಕಾಶಪಡಿಸಿದ್ದರು. ಶಾಂತಿ ಸೇವಾ ಸದನದ ಆಶ್ರಯದಲ್ಲಿ ಉಪನ್ಯಾಸ ನಡೆಯುತ್ತಿದ್ದವು.  ಸಭೆ, ಸಮಾರಂಭಗಳಲ್ಲದೆ ವಾಚನಾಲಯ ಅನುಕೂಲವೂ ಊರಿನವರಿಗೆ ಸಿಗುತ್ತಿತ್ತು.  ಪುಸ್ತಕ ಪ್ರಕಾಶನ, ಸಾಂಸ್ಕೃತಿಕ ಚಟುವಟಿಕೆಗಳಲ್ಲದೆ ಶಿಕ್ಷಣ ಶಿಬಿರಗಳನ್ನೂ ಏರ್ಪಡಿಸಿದ್ದರು.  1970ರಿಂದ ಚದ್ರಗಂಗಾ ಜ್ಞಾನಪೀಠವೆಂಬ ಹೊಸ ವಿಶ್ವಸ್ಥ ಮಂಡಳಿಯೊಂದಿಗೆ ವಿನೂತನ ಪೀಠ ತೆರೆದರು.  ಅದರ ಉದ್ದೇಶಗಳು ಉದ್ದಾತ್ತವಾಗಿದ್ದವು.  ಸಾರ್ವಜನಿಕ ಸೌಕರ್ಯಕ್ಕಾಗಿ ಗ್ರಂಥಾಲಯ, ಸಾಹಿತಿಗಳು, ವಿದ್ವಾಂಸರು ಬಂದಿಳಿದುಕೊಳ್ಳಲು ತಂಗುಮನೆ, ಸ್ಥಳದಲ್ಲಿಯೇ ವಾಸವಾಗಿದ್ದು ಬರವಣಿಗೆ, ಅನ್ವೇಷಣೆ, ಆಲೋಚನೆಗಳಿಗೆ ಅವಕಾಶ ಕಲ್ಪನೆ, ಮುದ್ರಣಾಲಯ, ಸಾಹಿತ್ಯ ಪ್ರಸಾರ, ವ್ಯಾಖ್ಯಾನ ಮಾಲೆ, ಗಾಯನ ಸ್ಪರ್ಧೆ ಮೊದಲಾದ ಪ್ರಶಂಸನೀಯ ಯೋಜನೆಗಳನ್ನೊಳಗೊಂಡ ಚಂದ್ರಗಂಗಾ ಜ್ಞಾನಪೀಠವು ಮಿರ್ಜಿ ಅಣ್ಣಾರಾಯರ ದೂರದೃಷ್ಟಿ ಹಾಗೂ ತ್ಯಾಗಬುದ್ಧಿಯ ಉದ್ದಾತ್ತ ಸಂಸ್ಥೆ.  ಒಂದರ್ಥದಲ್ಲಿ ಅದು ಅವರ ಜೀವಿತ ಗೆಯ್ಮೆಯ ಭವ್ಯ ಸ್ಮಾರಕ.  ತಾವು ಸಾಯುವುದಕ್ಕೆ ಎರಡು ವರ್ಷ ಮೊದಲು ಒಂದು ಮುದ್ರಣಾಲಯವನ್ನೂ ತೆರೆದಿದ್ದರು.  ಚಂದ್ರಗಂಗಾ ಜ್ಞಾನಪೀಠದ ವತಿಯಿಂದ ಸಾಹಿತ್ಯ ಸಂಸ್ಕೃತಿ ಪ್ರಚಾರೋಪನ್ಯಾಸಗಳನ್ನು ಏರ್ಪಡಿಸಿದ್ದರಲ್ಲದೆ ಆರು ಪುಸ್ತಕಗಳನ್ನೂ ಪ್ರಕಟಿಸಿದ್ದರು. 

ಯಾರ ಮರ್ಜಿಯನ್ನೋ ಅನುಸರಿಸದೆ ಸ್ವತಂತ್ರ ಧೀಶಕ್ತಿಯಿಂದ ಬಾಳಿದ ಸಾಹಿತಿಗಳಿಂದ ಸಾಮಾನ್ಯರವರೆಗೆ ಸಮಾಜದಲ್ಲಿ ಎಲ್ಲರ ಒಲವನ್ನೂ ಸೂರೆಗೊಂಡು ಎಲ್ಲರ ಪಾಲಿಗೆ ಅಣ್ಣನಾಗಿದ್ದರು.  ಎಲ್ಲರ ಗೌರವಕ್ಕೆ ಅರ್ಹರಾದ ರಾಯರಾಗಿದ್ದು ಪಾರ್ಥಿವ ಶರೀರವನ್ನು ಬಿಟ್ಟು ನಡೆದ ಅಣ್ಣಾರಾಯರು ಹಲವು ಕೃತಿಗಳ ಮತ್ತು ಶ್ರೇಷ್ಠ ಕೆಲಸಗಳ ಮೂಲಕ ಜನತೆಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

(ಆಧಾರ:  ಕಮಲ ಹಂಪನಾ ಅವರ ಮಿರ್ಜಿ ಅಣ್ಣಾರಾಯರ ಕುರಿತಾದ ಬರಹ)

ಫೋಟೋ ಕೃಪೆ: www.kamat.com

Tag: Mirji Annaraya

ಕಾಮೆಂಟ್‌ಗಳಿಲ್ಲ: