ಬುಧವಾರ, ಆಗಸ್ಟ್ 28, 2013

ಅಲ್ಲೂರಿ ಸೀತಾರಾಮ ರಾಜು

ಅಲ್ಲೂರಿ ಸೀತಾರಾಮ ರಾಜು

ಭಾರತದ ನೆಲದಲ್ಲಿ ತಮ್ಮದೇ ಆದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ, ಈ ನೆಲದ ನಿಜ-ವಾರಸುದಾರರೆಂದು ಹೇಳಲಾಗುವ ಆದಿವಾಸಿಗಳ ಹಕ್ಕು ಕುರಿತಂತೆ ಈ ದೇಶದಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತಿದ್ದು ಆಂಧ್ರ ಪ್ರದೇಶದ ಉತ್ತರ ತೆಲಂಗಾಣದ ಅಲ್ಲೂರಿ ಸೀತಾರಾಮ ರಾಜು ಎಂಬ ಒಬ್ಬ ಅಪ್ರತಿಮ ನಾಯಕ ಮತ್ತು ದೇಶಭಕ್ತ. ಇಂದಿನ ಬಸ್ತಾರ್ ಅರಣ್ಯ ಪ್ರದೇಶವೆಂದು ಕರೆಯುವ ಆಂಧ್ರ ಗಡಿ ಭಾಗದ ಅರಣ್ಯ ಸೇರಿದಂತೆ ಮಧ್ಯಪ್ರದೇಶ, ಒರಿಸ್ಸಾ, ಆಂಧ್ರದ ಗಡಿಭಾಗದ ಅರಣ್ಯದಲ್ಲಿ ವಾಸವಾಗಿರುವ ಚೆಂಚು ಎಂಬ ಬುಡಕಟ್ಟು ಜನಾಂಗದ ಪರವಾಗಿ 1920ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಪ್ರಥಮ ಬಾರಿಗೆ ಧ್ವನಿ ಎತ್ತಿ ಹೋರಾಡಿ ಅವರಿಂದ ಅಮಾನುಷವಾಗಿ ಹತ್ಯೆಯಾದ ಹುತಾತ್ಮ ಮತ್ತು ಸ್ವಾತಂತ್ರ್ಯ ಹೋರಾಟಗಾರ ಈ ಅಲ್ಲೂರಿ ಸೀತಾರಾಮ ರಾಜು.

1897 ರ ಜುಲೈ 4 ರಂದು ವಿಶಾಖಪಟ್ಟಣ ಜಿಲ್ಲೆಯ ಪಂಡುರಂಗಿ ಎಂಬ ಗ್ರಾಮದದಲ್ಲಿ ಜನಿಸಿದ ರಾಜುವಿನ ತಂದೆ ಆಗಿನ ಬ್ರಿಟಿಷ್ ಆಳ್ವಿಕೆಯ ಸರ್ಕಾರದಲ್ಲಿ ರಾಜಮಂಡ್ರಿ ಸರೆಮನೆಯಲ್ಲಿ ಪೋಟೊಗ್ರಾಪರ್ ಆಗಿ ಕೆಲಸಮಾಡುತಿದ್ದರು.  ಅಲ್ಲೂರಿ ಸೀತಾರಾಮ ರಾಜು ಬಾಲ್ಯದಿಂದಲೇ ತಮ್ಮ ತಂದೆಯಿಂದ ಆತ್ಮಗೌರವ, ಪರೋಪಕಾರ ಮುಂತಾದ ಗುಣಗಳನ್ನು ಕಲಿತಿದ್ದರು. ಪುಟ್ಟ ಬಾಲಕನಾಗಿದ್ದಾಗ ಇವರು ಒಮ್ಮೆ ಆಂಗ್ಲ ಅಧಿಕಾರಿಗೆ ಸೆಲ್ಯೂಟ್ ಹೊಡೆದಿದ್ದಕ್ಕೆ ತಮ್ಮ ತಂದೆಯಿಂದ ಪೆಟ್ಟುತಿಂದು, ದೇಶವನ್ನಾಕ್ರಮಿಸಿ ಆಡಳಿತ ನಡೆಸುವ ಆಂಗ್ಲರು ತಮ್ಮ ಶತ್ರುಗಳು ಎಂಬುದನ್ನರಿತರು. ಇವರ ತಂದೆ ವೆಂಕಟರಾಮರಾಜು ಮಹಾ ದೇಶಭಕ್ತರಾಗಿದ್ದರಿಂದ ಮಗನಿಗೆ ದೇಶಭಕ್ತಿಯ ಮೊದಲ ಪಾಠ ಅವರಿಂದಲೇ ನಡೆಯಿತು.  ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಸೀತಾರಾಮ ರಾಜು ನಂತರ ತಂದೆಯ ಊರಾದ ಭೀಮಾವರಂ ಸಮೀಪದ ಮೊಗಳ್ಳು ಗ್ರಾಮದಲ್ಲಿ ಚಿಕ್ಕಪ್ಪನಾದ ರಾಮಚಂದ್ರ ರಾಜು ಎಂಬುವರ ಆಶ್ರಯದಲ್ಲಿ ಬೆಳೆಯಬೇಕಾಯಿತು. ಚಿಕ್ಕಪ್ಪ ಪಶ್ಚಿಮ ಗೋದಾವರಿ ಜಲ್ಲೆಯ ನರಸಾಪುರದಲ್ಲಿ ತಹಶಿಲ್ದಾರ್ ಆಗಿ ಕೆಲಸ ನಿರ್ವಹಿಸುತಿದ್ದರಿಂದ ಸೀತಾರಾಮು ರಾಜುವಿಗೆ ಅರ್ಥಿಕವಾಗಿ ನೆರವಾಗಿದ್ದರು. ಕಾಲೇಜು ಶಿಕ್ಷಣಕ್ಕಾಗಿ ತಾಯಿಯ ತವರೂರಾದ ವಿಶಾಖಪಟ್ಟಣಕ್ಕೆ ಬಂದ ಈತ ಅಲ್ಲಿ ಎ.ವಿ.ಎನ್. ಕಾಲೇಜಿಗೆ ದಾಖಲಾದರು.  1912-13ರ ವೇಳೆಗೆ ಮೆಟ್ರಿಕ್ ಓದುತಿದ್ದಾಗಲೇ ಕ್ರಾಂತಿಕಾರಿ ವಿಚಾರಗಳಿಂದ ಪ್ರಭಾವಿತರಾಗಿದ್ದ ರಾಜು, ಭಾರತದ ಸ್ವಾತಂತ್ರಕ್ಕಾಗಿ ಹೋರಾಡಲು ಪಣ ತೊಟ್ಟಿದ್ದರು

ಇದೇ ವೇಳೆಗೆ ಬ್ರಿಟಿಷರು ಆದಿವಾಸಿ ಬುಡಕಟ್ಟು ಜನಾಂಗಗಳ ವಿರುದ್ಧ ಜಾರಿಗೆ ತಂದ 1882ರ ಅರಣ್ಯ ಕಾಯ್ದೆಯ ಕಾನೂನು ಆತನ ಹೋರಾಟಕ್ಕೆ ವೇದಿಕೆಯಾಯಿತು. ಬ್ರಿಟಿಷರ ವಿರುದ್ಧ ಪ್ರತಿಭಟಿಸುವ ಸಲುವಾಗಿ ಶಿಕ್ಷಣ ತೊರೆದು ಆದಿವಾಸಿಗಳನ್ನು ಸಂಘಟಿಸುವುದರ ಮೂಲಕ ಅವರ ಪರ ಹೋರಾಟಕ್ಕೆ ರಾಜು ಇಳಿದರು. ಅರಣ್ಯ ಕಾಯ್ದೆ ಪ್ರಕಾರ ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಆದಿವಾಸಿಗಳು ತಮ್ಮ ಪೋಡುಗಳನ್ನು( ಹಳ್ಳಿ) ಬಿಟ್ಟು ಬೇರೊಂದೆಡೆ ವಲಸೆ ಹೋಗಬಾರದು. ಇದು ಆದಿವಾಸಿಗಳ ಸಹಜ ಬದುಕಿನ ಮೇಲೆ ನಿಯಂತ್ರಣ ಹೇರುವ ಕಾನೂನಾಗಿತ್ತು.  ಕೃಷಿ ಚಟುವಟಿಕೆ ಮತ್ತು ಪ್ರಾಣಿಗಳ ಬೇಟೆ, ಅರಣ್ಯದ ಕಿರು ಉತ್ಪನ್ನಗಳನ್ನು ನಂಬಿ ಬದುಕುತಿದ್ದ ಈ ಜನರು ಬೇಸಾಯಕ್ಕಾಗಿ ಬೇರೆಡೆ ಹೋಗುವುದು ಅನಿವಾರ್ಯವಾಗಿತ್ತು. ಏಕೆಂದರೆ, ಅವರು ಒಂದು ಪ್ರದೇಶದಲ್ಲಿ ಒಮ್ಮೆ ಬೆಳೆ ತೆಗೆದ ನಂತರ ನಂತರ ಭೂಮಿಯನ್ನು ಹಲವಾರು ವರ್ಷಗಳ ಕಾಲ ಹಾಗೆಯೇ ಬಿಡುವುದು ವಾಡಿಕೆಯಾಗಿತ್ತು. ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳುವ ಮತ್ತು ನಿಸರ್ಗಕ್ಕೆ ಎರವಾಗದ ರೀತಿ ಇದ್ದ ಅವರ ದೇಶಿ ಜ್ಞಾನ ಆದಿವಾಸಿಗಳ ಬದುಕಿನೊಳಗೆ ಪರಂಪರಾನುಗತವಾಗಿ ಬೆಳೆದು ಬಂದಿತ್ತು. ಅಕ್ಷರ ಲೋಕದಿಂದ ವಂಚಿತರಾಗಿ, ನಾಗರೀಕತೆಯಿಂದ ದೂರವಾಗಿದ್ದ ಚಂಚು ಬುಡಕಟ್ಟು ಜನರ ಪರವಾಗಿ ಅಲ್ಲೂರಿ ಸೀತಾರಾಮ ರಾಜು ನಡೆಸಿದ ಹೋರಾಟ “ರಂಪ ದಂಗೆ” ಎಂದು ಆಂಧ್ರದ ಇತಿಹಾಸದಲ್ಲಿ ದಾಖಲಾಗಿದೆ.

ಸೀತಾರಾಮ ರಾಜು ಮನ್ಯಂ ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿದ್ದ ಗುಡ್ಡಗಾಡು ಜನಾಂಗದ ಪರವಾಗಿ ಹೋರಾಡಿ ಅವರ ಆರಾಧ್ಯ ದ್ಯೆವವೇ ಆದರು.  ಈ ಜನಾಂಗದಲ್ಲಿ ಬೇರು ಬಿಟ್ಟಿದ್ದ ನರಬಲಿ ಪದ್ಧತಿ ಮತ್ತು ಅನೇಕ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಿದ್ದಲ್ಲದೆ,  ಈ ಜನಾಂಗವನ್ನು ಮದ್ಯದ ದಾಸ್ಯದಿಂದ ಮುಕ್ತಿಗೊಳಿಸಿದರು. ಈ ಆದಿವಾಸಿ ಜನರ ಮೇಲೆ ಆಂಗ್ಲ ಅಧಿಕಾರಿಗಳು ನಡೆಸುತ್ತಿದ್ದ ದಬ್ಬಾಳಿಕೆಯನ್ನು ತಡೆಗಟ್ಟಲು ಸ್ವಾತಂತ್ರವೊಂದೇ ಮಾರ್ಗವೆಂದರಿತು, ಆಳರಸರ ವಿರುದ್ಧ ಹೋರಾಟ ಪ್ರಾರಂಭಿಸಿದರು. ಅವರ ಬಳಿ ದೇಶಕ್ಕಾಗಿ ಬಲಿದಾನ ನೀಡಲು ಸಿದ್ಧರಿದ್ದ ದೊಡ್ಡ ಪಡೆಯೇ ಇತ್ತು.   ಈ ಸೇನೆ ಅನೇಕ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿತ್ತು ಮಾತ್ರವಲ್ಲದೆ   ಇವರ ಮೇಲೆ ಕ್ರಮಕೈಗೊಳ್ಳಲು ಅರಣ್ಯಕ್ಕೆ ಬಂದ ಬಂದ ಅನೇಕ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿತ್ತು.  ಹೀಗಾಗಿ ಅಲ್ಲೂರಿ ಸೀತಾರಾಮ ರಾಜು ಸರ್ಕಾರಕ್ಕೆ ಸಿಂಹಸ್ವಪ್ನರಾಗಿದ್ದರು.

ಈ ಬೆಳವಣಿಗೆಯಿಂದ ವಿಚಲಿತವಾದ ಬ್ರಿಟಿಷ್ ಸರ್ಕಾರ 1922 ರಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಹೋರಾಡಿ ಅನುಭವ ಇದ್ದ ಅಸ್ಸಾಂ ರೈಫಲ್ ಸೇನೆಯನ್ನು ಆಂಧ್ರಕ್ಕೆ ಕರೆಸಿಕೊಂಡಿತು. ಸೇನೆಯು ಬಸ್ತರ್ ಪ್ರದೇಶದ ಗಡಿಭಾಗದ ಅರಣ್ಯಕ್ಕೆ ಆಗಮಿಸಿದಾಗ, ಅರಣ್ಯದಲ್ಲಿ ಭೂಗತನಾಗಿದ್ದುಕೊಂಡು ಹೋರಾಟ ನಡೆಸುತಿದ್ದ ಸೀತಾರಾಮ ರಾಜುವನ್ನು 1924ರಲ್ಲಿ ಆಂದ್ರದ ಪೊಲೀಸ್ ಪಡೆ ಸೆರೆಹಿಡಿಯಿತು.  ಸೀತಾರಾಮ ರಾಜುವನ್ನು  ಮರವೊಂದಕ್ಕೆ ಕಟ್ಟಿಹಾಕಿ, ಅವರೊಬ್ಬ ದರೋಡೆಕೋರನೆಂದು ನಿಂದಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸೀತಾರಾಮ ರಾಜು ‘ಮೋಸದಿಂದ ಭಾರತವನ್ನು ಕೊಳ್ಳೆ ಹೊಡೆಯುತ್ತಿರುವ ನೀವು ದರೋಡೆಕೋರರು’ ಎಂದಬ್ಬರಿಸಿದರು. ಕೊನೆಗೆ ಮೇಜರ್ ಗಡಾಲ್,  ಅವರನ್ನು ಕೊಲ್ಲಲು ಆಜ್ಞೆ ನೀಡಿದಾಗ ಸೀತಾರಾಮ ರಾಜು, ‘ನೀವು ಒಬ್ಬ ರಾಜುವನ್ನು ಕೊಲ್ಲಬಹುದು, ಆದರೆ ನಮ್ಮ ಭಾರತಮಾತೆ ಬಂಜೆಯಲ್ಲ. ಅವಳ ರತ್ನ ಗರ್ಭದಲ್ಲಿ ಕೋಟ್ಯಂತರ ರಾಜುಗಳು ಹುಟ್ಟಿ ನಿಮ್ಮ ಹುಟ್ಟಡಗಿಸುತ್ತಾರೆ. ಒಂದಲ್ಲಾ ಒಂದು ದಿನ ನೀವು ಇಲ್ಲಿಂದ ತೆರಳಲೇ ಬೇಕಾಗುತ್ತದೆ’ ಎಂದು ಗುಡುಗಿದರು. ಕೊನೆಗೆ ಅವರನ್ನು ಮೇ 7, 1924ರಂದು  ಅಮಾನುಷವಾಗಿ ಕೊಲ್ಲಲಾಯಿತು.

ಆದಿವಾಸಿಗಳ ಮತ್ತು ಉತ್ತರ ತೆಲಂಗಾಣದ ಜನರ ಬಾಯಲ್ಲಿ “ಮಾನ್ಯಂ ವೀರುಡು” (ಅರಣ್ಯದ ನಾಯಕ) ಎಂದು ಕರೆಸಿಕೊಳ್ಳುವ ಈ ಹುತಾತ್ಮರ ಬಗ್ಗೆ ಸ್ವಾತಂತ್ರ್ಯಾನಂತರ ಅಸ್ತಿತ್ವಕ್ಕೆ ಆಂಧ್ರ ಸರ್ಕಾರ ಒರಿಸ್ಸಾ, ಮಧ್ಯಪ್ರದೇಶ (ಇಂದಿನ ಛತ್ತೀಸ್‌ಗಡ್), ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ ಇರುವ ಅರಣ್ಯ ಪ್ರದೇಶಕ್ಕೆ ಅಲ್ಲೂರಿ ಸೀತಾರಾಮ ರಾಜು ಅರಣ್ಯ ವಲಯ ಎಂದು ಘೋಷಿಸಿ ಗೌರವಿಸಿದೆ. ವಿಶಾಖಪಟ್ಟಣ ನಗರದ ಕಡಲ ತಡಿಯ ರಸ್ತೆಗೆ (ಬೀಚ್ ರೋಡ್) ಸೀತಾರಾಮ ರಾಜುವಿನ ಹೆಸರಿಟ್ಟು, ಪ್ರತಿಮೆಯನ್ನು ಸಹ ನಿಲ್ಲಿಸಲಾಗಿದೆ. ಭಾರತ ಸಕಾರ 1997 ರಲ್ಲಿ ಈತನ ಜನ್ಮಶತಾಬ್ಧಿಯ ಅಂಗವಾಗಿ ಅಂಚೆ ಚೀಟಿಯನ್ನು ಹೊರತಂದಿತ್ತು.  

‘ಸೀತಾರಾಮ ರಾಜು ಇನ್ನಾವ ದೇಶದಲ್ಲಾದರೂ ಜನಿಸಿದ್ದರೆ ಇಲ್ಲಿಗಿಂತಲೂ ಹೆಚ್ಚು ಗೌರವ ಪಡೆಯುತ್ತಿದ್ದ’ ಎಂದು ಸುಭಾಷ್ ಚಂದ್ರ ಬೋಸರು ಒಂದೆಡೆ ಹೇಳಿದ್ದಾರೆ.

ಈ ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ನಮ್ಮ ನಮನ.

ಮಾಹಿತಿ ಕೃಪೆ:   ಡಾ.ಎನ್.ಜಗದೀಶ್ ಕೊಪ್ಪ ಅವರ ‘ವರ್ತಮಾನ ಪತ್ರಿಕೆಯಲ್ಲಿನ ಲೇಖನ ಮತ್ತು ಪ್ರೊ. ಎಂ. ಎನ್. ಸುಂದರರಾಜ್ ಅವರ ಬರಹ

Tag: Alluri Sitaram Raju

ಕಾಮೆಂಟ್‌ಗಳಿಲ್ಲ: