ಗುರುವಾರ, ಆಗಸ್ಟ್ 29, 2013

ಜಿ. ಎಸ್. ಅಮೂರ

ಜಿ. ಎಸ್. ಅಮೂರ

ಡಾ. ಗುರುರಾಜ ಶ್ಯಾಮಾಚಾರ್ಯ ಅಮೂರ್ ಅವರು ಆಧುನಿಕ ಕನ್ನಡ ಸಾಹಿತ್ಯದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರಾಗಿದ್ದಾರೆ.  1925ನೇ ಇಸವಿ ಮೇ 8ರಂದು ಧಾರವಾಡ ಜಿಲ್ಲೆಯ ಬೊಮ್ಮನಹಳ್ಳಿಯಲ್ಲಿ ಜನ್ಮ ತಾಳಿದ ಅವರು ಮೊದಲಿನಿಂದಲೂ ವಿದ್ಯಾರ್ಜನೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು.  ಮುಂಬಯಿ ವಿಶ್ವವಿದ್ಯಾಲಯದಿಂದ ಬಿ.ಎ, ಎಂ.ಎ (1949) ಪದವಿಗಳನ್ನು ಗಳಿಸಿದ ಅವರು The Concept of Comedy ಎಂಬ ವಿಷಯವನ್ನು ಕುರಿತು ಪ್ರಬಂಧ ಬರೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ (1961) ಪದವಿಯನ್ನು ಪಡೆದರು.  1972ರಲ್ಲಿ ಅವರು ಸೀನಿಯರ್ ಫುಲ್ ಬ್ರೈಟ್ ಸ್ಕಾಲರ್ ಶಿಪ್ ಪಡೆದು ಅಮೆರಿಕೆಯ ಮೇಲ್ ಮತ್ತು ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನು ನಡೆಸಿದರು.  1973ರಲ್ಲಿ ಅವರು ಬ್ರಿಟಿಶ್ ಕೌನ್ಸಿಲಿನ ಆಮಂತ್ರಣದ ಮೇರೆಗೆ ಇಂಗ್ಲೆಂಡಿಗೆ ಭೇಟಿಯಿತ್ತರು.  ಮೊದಲು ಗದುಗಿನ ಜಗದ್ದುರು ತೋಂಟದಾಚಾರ್ಯ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರೆಂದು ವೃತ್ತಿಯನ್ನು ಪ್ರಾರಂಭಿಸಿದ ಅವರು ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್ ಇನ್ ಇಂಗ್ಲಿಷ್ ಆಗಿ ಸೇವೆ ಸಲ್ಲಿಸಿದರು.  ಅನಂತರ ಔರಂಗಾಬಾದಿನ ಮರಾಠವಾಡ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರೊಫೆಸರ್ ಮತ್ತು ಮುಖ್ಯಸ್ಥರೆಂದು ಸೇವೆಸಲ್ಲಿಸಿ 1988ರಲ್ಲಿ ಸೇವಾ ನಿವೃತ್ತಿ ಹೊಂದಿದರು.

ಡಾ. ಜಿ. ಎಸ್. ಅಮೂರ ಅವರು ಇಂಗ್ಲಿಷ್ ಸಾಹಿತ್ಯದ ಅತ್ಯುತ್ತಮ ಶಿಕ್ಷಕರಾಗಿದ್ದಂತೆ ಉನ್ನತ ಮಟ್ಟದ ಸಂಶೋಧಕರೂ, ವಿಮರ್ಶಕರೂ ಆಗಿದ್ದಾರೆ.  ಆದರೆ ಅವರ ಸಾಹಿತ್ಯಾಸಕ್ತಿ ಇಂಗ್ಲಿಷಿಗಷ್ಟೇ ಸೀಮಿತವಾಗಿರದೆ ಕನ್ನಡ ಮತ್ತು ಸಂಸ್ಕೃತಕ್ಕೂ ವ್ಯಾಪಿಸಿದೆ.  ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಗಮನಾರ್ಹ ಸಾಧನೆಗೈದಿದ್ದಾರೆ.  ಅವರು ಇಂಗ್ಲಿಷಿನಲ್ಲಿ ಅನೇಕ ವಿಮರ್ಶಾ ಗ್ರಂಥಗಳನ್ನು ರಚಿಸಿದ್ದಾರೆ.  The Concept of comedy (1963) , Critical Essays in Indian Writing in English (1968), Manohara Malgaoukar (1972), Adya Rangacharya(1975), A Critical Spectrum (1975), Images and Impressions(1979), A.N. Krishnarao (1983), Colonial Consciousness in Common wealth Literature(1984), Essays on Comparative Literature and Linguistics (1984), Indian Readings in Common Wealth Literature(1985), Forbidden Fruit(1992), Creations and Transcreations(1992), Perceptions of Modern Indian Literature(1996) ಮತ್ತು Critic on the Run (1999) ಎಂಬ ಅವರ ಇಂಗ್ಲಿಷ್ ಗ್ರಂಥಗಳು ಅವರ ವಿಶಾಲವಾದ ಸಾಹಿತ್ಯಾಸಕ್ತಿಯನ್ನು ತೋರಿಸುತ್ತವೆ.    ಈ ಗ್ರಂಥಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದದ್ದು ಸಾಮಾನ್ಯ ಸಾಧನೆಯೇನಲ್ಲ.  ಅಮೆರಿಕೆಯ ಸುಪ್ರಸಿದ್ಧ ಪಂಡಿತ ಪೀಟರ್ ನಝೆರತ್ ಅವರು ಡಾ. ಅಮೂರ್ ಅವರನ್ನು ಭಾರತದ ಪ್ರಥಮ ದರ್ಜೆಯ ವಿಮರ್ಶಕರೆಂದು ವರ್ಣಿಸಿದ್ದಾರೆ.  ಅವರು ಕಾಮೆಡಿಯ ಮೇಲೆ ಬರೆದ ಇಂಗ್ಲಿಷ್ ಮಹಾಪ್ರಬಂಧದ ಕೆಲವು ಭಾಗಗಳು ಜರ್ಮನ್ ಭಾಷೆಗೆ ಅನುವಾದಗೊಂಡು ಯೂರೋಪಿಯನ್ ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿವೆ.

ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ, ಡಾ. ಅಮೂರ ಅವರು ತಮ್ಮ ಕನ್ನಡತನವನ್ನು ಬಿಟ್ಟುಕೊಡಲಿಲ್ಲ.  ಕನ್ನಡ ಸಾಹಿತ್ಯದ ಬಗೆಗೆ ಅದರಲ್ಲಿಯೂ ಅಧುನಿಕ ಕನ್ನಡ ಸಾಹಿತ್ಯದ ಬಗೆಗೆ ಅವರಿಗಿದ್ದ ಜ್ಞಾನ ವಿಶಾಲವಾಗಿದೆ.  ಆದ್ದರಿಂದಲೇ ಅವರು ಕನ್ನಡದಲ್ಲಿ ಅನೇಕ ವಿಮರ್ಶಾ ಗ್ರಂಥಗಳನ್ನು ರಚಿಸಿದ್ದಾರೆ.  ‘ಮಹಾಕವಿ ಮಿಲ್ಟನ್’, ‘ಕೃತಿ ಪರೀಕ್ಷೆ’, ‘ಸಮಕಾಲೀನ ಕಥೆ-ಕಾದಂಬರಿ’, ‘ಕನ್ನಡ ಕಾದಂಬರಿಯ ಬೆಳವಣಿಗೆ’, ‘ಅ.ನ. ಕೃಷ್ಣರಾಯರು’, ‘ಅರ್ಥಲೋಕ’, ‘ಭುವನದ ಭಾಗ್ಯ’, ‘ವ್ಯವಸಾಯ’, ‘ಕಾಮೆಡಿ’, ‘ಕನ್ನಡ ಕಥನ ಸಾಹಿತ್ಯ: ಕಾದಂಬರಿ’,  ‘ಸಾತ್ವಿಕ ಪಥ’, ‘ವಿರಾಟಪುರುಷ: ಶ್ರೀರಂಗ ಸಾಹಿತ್ಯ ಸಮೀಕ್ಷೆ’, ‘ಕಾದಂಬರಿಯ ಸ್ವರೂಪ: ಹೊಸ ಚಿಂತನೆ’ ಮುಂತಾದವುಗಳು ಅವರ ಪ್ರಮುಖ ವಿಮರ್ಶಾ ಗ್ರಂಥಗಳಾಗಿವೆ.

ಅಮೂರ ಅವರ ಪ್ರಥಮ ಪುಸ್ತಿಕೆ ‘ಮಹಾಕವಿ ಮಿಲ್ಟನ್’ ಎಂಬುದು 1969ರಲ್ಲಿ ಕರ್ನಾಟಕದ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾಯಿತು.  ಅದರಲ್ಲಿ ಅವರು ಮಿಲ್ಟನ್ ಕವಿತೆಗಳನ್ನು ವಿಶೇಷವಾಗಿ ‘ಪ್ಯಾರಡೈಜ್ ಲಾಸ್ಟ್’ ಮಹಾಕಾವ್ಯವನ್ನು ಸಂಕ್ಷಿಪ್ತವಾಗಿ, ಸಮಗ್ರವಾಗಿ ಮತ್ತು ಸ್ಪಷ್ಟವಾಗಿ ವಿವೇಚಿಸಿದ್ದಾರೆ.   ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ‘ಕಾಮಿಡಿ’ ಎಂಬ ಪುಸ್ತಕದಲ್ಲಿ ತಮ್ಮ ಮೊದಲಿನ ಇಂಗ್ಲಿಷ್ ಮಹಾಪ್ರಬಂಧದ ಸಾರವನ್ನು ಉಪಯೋಗಿಸಿ ಅದರ ಬೆಳಕಿನಲ್ಲಿ ಕನ್ನಡ ವಿನೋದ ಪ್ರಕರಣಗಳನ್ನು ವಿಶ್ಲೇಷಿಸಿದ್ದಾರೆ.

‘ಸಮಕಾಲೀನ ಕಥೆ-ಕಾದಂಬರಿ: ಹೊಸ ಪ್ರಯೋಗಗಳು’ ಎಂಬ ಕೃತಿಯಲ್ಲಿ ಅಮೂರ ಅವರು ಕನ್ನಡದ ಸುಪ್ರಸಿದ್ಧ ಕಾದಂಬರಿಗಳಾದ ‘ಬೆಟ್ಟದ ಜೀವ’, ‘ಮರಳಿ ಮಣ್ಣಿಗೆ’, ‘ಸಂಸ್ಕಾರ’, ‘ಗ್ರಾಮಾಯಣ’, ‘ಹಳದಿ ಮೀನು’, ಮುಕ್ತಿ’, ‘ವಂಶವೃಕ್ಷ’, ‘ಅಳಿದ ಮೇಲೆ’ಗಳಂಥ ಕಾದಂಬರಿಗಳ ಮರುಮೌಲ್ಯಮಾಪನ ಮಾಡಿದ್ದಾರೆ.  ಅದರಂತೆ ಶಾಂತಿನಾಥ ದೇಸಾಯಿ, ಅನಂತ ಮೂರ್ತಿ ಮತ್ತು ಚಿತ್ತಾಲರ ಕಥೆಗಳ ಬಗೆಗೆ ಚರ್ಚಿಸಿದ್ದಾರೆ.

1995ರಲ್ಲಿ ಪ್ರಕಟವಾದ ‘ಸಾತ್ವಿಕ ಪಥ’ದಲ್ಲಿ ಕನ್ನಡ ನಾಟಕ, ಕಾವ್ಯ, ಕಥೆ ಮತ್ತು ಮಹಾಕಾವ್ಯಗಳನ್ನು ಕುರಿತ ಹದಿನಾಲ್ಕು ಲೇಖನಗಳಿವೆ.  ಉತ್ತರ ಕರ್ನಾಟಕದಲ್ಲಿ ಮರಾಠಿ ರಂಗಭೂಮಿಯ ಪ್ರಭಾವದಿಂದ ಕನ್ನಡ ವೃತ್ತಿ ರಂಗಭೂಮಿ, ಆಧುನಿಕ ರಂಗಭೂಮಿ ಬೆಳೆದು ಬಂದ ಬಗೆಯನ್ನು, ಅನಂತರ ವಿಲಾಸೀ ರಂಗಭೂಮಿ ಇಂಗ್ಲಿಷ್ ಮತ್ತು ಸಂಸ್ಕೃತ ನಾಟಕಗಳ ಅನುವಾದ ಇಲ್ಲವೇ ರೂಪಾಂತರದಿಂದ ಬೆಳೆದು ಬಂದ ರೀತಿಯಲ್ಲಿ ಪ್ರಮುಖ ವೃತ್ತಿರಂಗ ಸಂಸ್ಥೆಗಳು ಪ್ರಮುಖ ನಾಟಕಕಾರರು ಎದುರಿಸಿದ ಸಮಸ್ಯೆಗಳನ್ನು ಡಾ. ಅಮೂರ ಅವರು ನಿಖರವಾಗಿ ಚರ್ಚಿಸಿದ್ದಾರೆ.    ಹೀಗಾಗಿ ಅದು ಕನ್ನಡ ನಾಟಕಗಳನ್ನು ಅಭ್ಯಸಿಸುವ ಉತ್ಸಾಹಿಗಳಿಗೆ ದಿಕ್ಕು ತೋರಿಸುತ್ತದೆ.  ಹಾಗೆಯೇ ಕನ್ನಡದ ಹತ್ತು ಉತ್ತಮ ನಾಟಕಗಳು, ಶ್ರೀರಂಗರ ನಾಟ್ಯ ಪ್ರಪಂಚ, ಕಾರ್ನಾಡ, ಕಂಬಾರರ ಪ್ರಮುಖ ನಾಟಕಗಳ ಬಗೆಗೆ ಅತ್ಯಂತ ವಿಶ್ಲೇಷಣಾತ್ಮಕ ಮತ್ತು ಮಾಹಿತಿಪೂರ್ಣ ಲೇಖನಗಳಿವೆ.  ಈ ಸಂಗ್ರಹದಲ್ಲಿ ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮಹಾಕಾವ್ಯ’ವೆಂಬ ಲೇಖನದಲ್ಲಿ ಡಾ. ಅಮೂರ ಅವರು ಕುವೆಂಪು ಅವರ ‘ರಾಮಾಯಣ ದರ್ಶನಂ’, ವಿನಾಯಕರ ‘ಭಾರತಸಿಂಧು ರಶ್ಮೀ’ ಮತ್ತು ಭೂಸನೂರಮಠ ಅವರ ‘ಭವ್ಯ ಮಾನವ’ ಈ ಮೂರು ಮಹಾಕಾವ್ಯಗಳ ಬಗೆಗೆ ವಿಶ್ಲೇಷಣೆ ನಡೆಸಿದ್ದು ಇಲ್ಲಿ ಅವರ ತುಲನಾತ್ಮಕ ಸಂಶೋಧಕ ಮತ್ತು ಸಮತೋಲನ ದೃಷ್ಟಿ ಎದ್ದು ಕಾಣಿಸುತ್ತದೆ.

ಡಾ. ಅಮೂರ ಅವರ ‘ಅರ್ಥಲೋಕ’ ವಿಮರ್ಶಾ ಲೇಖನಗಳ ಸಂಗ್ರಹದಲ್ಲಿ ಬೇಂದ್ರೆ, ಅಡಿಗ, ಕುವೆಂಪು ಅವರ ಕಾವ್ಯ, ನಿರಂಜನ, ಚದುರಂಗ, ಕಾರಂತ, ಮುಲ್ಕರಾಜ್ ಆನಂದ್ ಅವರ ಕಾದಂಬರಿಗಳು ಮತ್ತು ಕನ್ನಡದ ಹತ್ತು ಶ್ರೇಷ್ಠ ಕಾದಂಬರಿಗಳು, ಡಿ.ವಿ.ಜಿ.ಯವರ ‘ಕನ್ನಡ ಮ್ಯಾಕ್ ಬೆತ್’ ಮತ್ತು ಮರಾಠೀ ಸಾಹಿತ್ಯದಲ್ಲಿ ಹೊಸ ಒಲವುಗಳು ಮುಂತಾದ ವಿಷಯಗಳನ್ನು ಕುರಿತ ಮೌಲಿಕ ಲೇಖನಗಳಿವೆ.  ಕನ್ನಡದ ಹತ್ತು ಶ್ರೇಷ್ಠ ಕಾದಂಬರಿಗಳಾದ ‘ಸುಬ್ಬಣ್ಣ’, ‘ಕಾನೂರು ಹೆಗ್ಗಡತಿ’, ‘ಬೆಟ್ಟದ ಜೀವ’, ‘ಗಂಗವ್ವ ಗಂಗಾಮಾಯಿ’, ‘ನಿಸರ್ಗ’, ‘ಕಾಡು’, ‘ಶಿಕಾರಿ’, ‘ಒಡಲಾಳ’, ಮತ್ತು ‘ಕರ್ವಾಲೊ’ ಕಾದಂಬರಿಗಳನ್ನು ಸಂಕ್ಷಿಪ್ತವಾಗಿ ಆದರೆ ವಸ್ತುನಿಷ್ಟವಾಗಿ ಚರ್ಚಿಸಿ ಅವುಗಳ ಸಾಧನೆಗಳನ್ನು ಎತ್ತಿ ತೋರಿಸಿದ್ದಾರೆ.

‘ಕನ್ನಡ ಕಥನ ಸಾಹಿತ್ಯ: ಕಾದಂಬರಿ’ ಎಂಬ ವಿಮರ್ಶಾಕೃತಿ ಡಾ. ಅಮೂರ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಬೃಹದ್ಗ್ರಂಥವಾಗಿದೆ.  ಅದರಲ್ಲಿ ಅವರು ಕನ್ನಡ ಕಾದಂಬರಿಯ ಬೆಳವಣಿಗೆಯ ವಿವಿಧ ಘಟ್ಟಗಳನ್ನು ಗುರುತಿಸಿದ್ದಾರೆ.  ಭಾರತೀಯ ಕಾದಂಬರಿ ವಸಾಹತುಶಾಹಿ ಸಂದರ್ಭದಲ್ಲಿ ಜನ್ಮ ತಾಳಿ, ವಾಸ್ತವ ಮತ್ತು ರಮ್ಯವೆಂಬ ಎರಡು ಪ್ರಮುಖ ಮಾರ್ಗಗಳನ್ನು ಅನುಸರಿಸಿ, ಪಾಶ್ಚಾತ್ಯ ಪ್ರಭಾವದಿಂದ ತಮ್ಮ ಕೃತಿಗಳನ್ನು ಬರೆದರೂ, ಗಳಗನಾಥ ಮತ್ತು ಎಂ. ಎಸ್. ಪುಟ್ಟಣ್ಣನಂಥವರು ಭಾರತೀಯ ಸಂಸ್ಕೃತಿಯನ್ನು ಹೊರಗಿನಿಂದ ನೋಡಿ ಚಿತ್ರಿಸಲಿಕ್ಕೆ ಸಾಧ್ಯವಾಯಿತು.  ಹೀಗೆ ಕೆಲವರು ಕಲ್ಪನೆಯನ್ನು ಅವಲಂಬಿಸಿದರೆ, ಇನ್ನು ಕೆಲವರು ವಾಸ್ತವ ಮಾರ್ಗವನ್ನು ಅವಲಂಬಿಸಿದರು.  ಇದರಿಂದ ಸಂಧಿಕಾಲದ ಈ ಲೇಖಕರಿಗೆ ಶ್ರೇಷ್ಠದರ್ಜೆಯ ಸೃಜನಶೀಲತೆಯನ್ನು ಮೆರೆಯಲು ಸಾಧ್ಯವಾಗಲಿಲ್ಲ.  ಮಾಸ್ತಿಯವರ ‘ಸುಬ್ಬಣ್ಣ’ದೊಂದಿಗೆ ಕನ್ನಡ ಕಾದಂಬರಿ ತನ್ನ ಪ್ರಬುದ್ಧಾವಸ್ಥೆಯನ್ನು ಮುಟ್ಟಿತೆಂದು ಡಾ. ಅಮೂರ ಅವರು ಹೇಳುತ್ತಾರೆ.  ಹೆಜ್ಜೆಗಳಿಂದ ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ ಮತ್ತು ಮಹಿಳಾ ಕಾದಂಬರಿಗಳವರೆಗೆ ಪ್ರಾತಿನಿಧಿಕ ಕೃತಿಗಳನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ವಿಶ್ಲೇಷಿಸಿದ್ದಾರೆ.  ಇದು ಕನ್ನಡದಲ್ಲಿ ಕಾದಂಬರಿ ಸಾಹಿತ್ಯವನ್ನು ಕುರಿತು ಬಂದ ಅತ್ಯುತ್ತಮ ವಿಮರ್ಶಾಕೃತಿಯೆಂದು ಹೇಳಬಹುದು.

ಡಾ. ಅಮೂರ ಅವರ ‘ಕಾದಂಬರಿಯ ಸ್ವರೂಪ: ಹೊಸಚಿಂತನೆ’ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸತ್ವದಲ್ಲಿ ಹಿರಿಯ ಕೃತಿಯಾಗಿದೆ. ಕನ್ನಡದಲ್ಲಿ ಸೈದ್ಧಾಂತಿಕ ವಿಮರ್ಶೆ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದರಿಂದ ಅಮೂರ ಅವರ ಪುಸ್ತಕ ಬಹಳ ಮೌಲಿಕವಾಗಿದ್ದು ಈ ಕೊರತೆಯನ್ನು ತುಂಬಿಕೊಡಲು ಸಹಾಯಕವಾಗಿದೆ. ನಾಟ್ಯ, ವೃತ್ತಿ, ಅದಿಕಥನ, ಸಂಜ್ಞೆಗಳು ಇವೇ ಮುಂತಾದ ಹೊಸ ಪದಪುಂಜಗಳನ್ನು ಈ ಕೃತಿಯಲ್ಲಿ ಬಳಕೆಗೆ ತಂದಿದ್ದಾರೆ.

ಡಾ. ಅಮೂರ ಅವರ ‘ಭುವನದ ಭಾಗ್ಯ’ ಬೇಂದ್ರೆಯವರ ಸಮಗ್ರ ಸಾಹಿತ್ಯವನ್ನು ಸಮಗ್ರವಾಗಿ ಸಮೀಕ್ಷಿಸುವ ಉದ್ಗ್ರಂಥವಾಗಿದೆ.  ಈ ಗ್ರಂಥಕ್ಕೆ 1997ನೆ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಬಂದದ್ದು ಅತ್ಯಂತ ಔಚಿತ್ಯಪೂರ್ಣವಾಗಿದೆ.

ಅಮೂರ ಅವರ ‘ವಿರಾಟ್ ಪುರುಷ’ ಎಂಬ ಕೃತಿ ಶ್ರೀರಂಗ ಸಾರಸ್ವತ ಸಮೀಕ್ಷೆಯಾಗಿದ್ದು, ಅದು ಅವರ ಮೇರುಕೃತಿಗಳಲ್ಲಿ ಒಂದಾಗಿದೆ.  ಕರ್ನಾಟಕದ ಬರ್ನಾಡ್ ಷಾ ಎಂದೇ ಸುಪ್ರಸಿದ್ಧರಾಗಿದ್ದ ಶೀರಂಗರ  ಅಪ್ಪಟ ವೈಚಾರಿಕತೆಯ ದೈತ್ಯಪ್ರತಿಭೆಯನ್ನು ಕುರಿತು ಡಾ. ಅಮೂರ ಅವರು ಸಮಗ್ರ ಸಾಹಿತ್ಯ ಸಮೀಕ್ಷೆಯನ್ನು ಈ ಕೃತಿಯಲ್ಲಿ ಕೈಕೊಂಡಿದ್ದಾರೆ.

ಡಾ. ಅಮೂರ ಅವರು ಸಂಪಾದಕರಾಗಿಯೂ ಸಾಹಿತ್ಯಸೇವೆ ಸಲ್ಲಿಸಿದ್ದಾರೆ.  ‘ಚಿತ್ತಾಲರ ಆಯ್ದ ಕಥೆಗಳು’ ಎಂಬ ಕೃತಿಯಲ್ಲಿ ಅವರು ಚಿತ್ತಾಲರ ಕೆಲವು ಪ್ರಮುಖ ಕಥೆಗಳನ್ನು ಮಾತ್ರ ಆಯ್ದು ಅವುಗಳಲ್ಲಿ ಕಂಡುಬರುವ ಸಾಂಕೇತಿಕತೆಯನ್ನು ವಿಶ್ಲೇಷಿಸಿದ್ದಾರೆ.  ಇದೇ ತೆರನಾಗಿ ಕೆ. ಸದಾಶಿವ ಅವರ ‘ಸಮಗ್ರ ಕೃತಿಗಳು’  ಎಂಬ ಕೃತಿಯೂ ಮಹತ್ವಪೂರ್ಣವಾಗಿದೆ.   Selected Kannada Short Stories  ಎಂಬ ಗ್ರಂಥದಲ್ಲಿ ಕನ್ನಡ ಕಥೆಗಾರರ ಪ್ರಾತಿನಿಧಿಕ ಕಥೆಗಳ ಇಂಗ್ಲಿಷ್ ಅನುವಾದಗಳನ್ನು ಸಂಕಲಿಸಿ, ಕನ್ನಡ ಸಣ್ಣ ಕಥಾ ಪ್ರಕಾರದ ವಿವಿಧ ಮಜಲುಗಳನ್ನು ಗುರುತಿಸಿದ್ದಾರೆ.   ಹಾಗೆಯೇ ಶ್ರೀ ಕೃಷ್ಣ ಆಲನಹಳ್ಳಿಯವರ ‘ಪರಸಂಗದ ಗೆಂಡೆತಿಮ್ಮ’ ಕಾದಂಬರಿಯ ಇಂಗ್ಲಿಷ್ ಅನುವಾದ ಬರೆದ ಪರಿಚಯವೂ ಮೌಲಿಕವಾಗಿವೆ.  ಕನ್ನಡ ಮಹಿಳಾ ಲೇಖಕರ ಕೆಲವು ಪ್ರಾತಿನಿಧಿಕ ಕಥೆಗಳನ್ನು ಸಂಪಾದಿಸಿ ಅವುಗಳನ್ನು ಸ್ತ್ರೀವಾದಿ ವಿಮರ್ಶೆಯ ಚೌಕಟ್ಟಿನಲ್ಲಿ ಪರಿಚಯಿಸಿದ್ದಾರೆ.

ಡಾ, ಅಮೂರ ಅವರು ಅನುವಾದಕರಾಗಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ.  ಅವರು ಕುವೆಂಪು, ಬೇಂದ್ರೆ, ಚನ್ನವೀರ ಕಣವಿ, ಜಿ.ಎಸ್. ಶಿವರುದ್ರಪ್ಪನವರ ಕೆಲವು ಕವಿತೆಗಳನ್ನು, ಸರ್ವಜ್ಞ ಮತ್ತು ಬಸವಣ್ಣನವರ ಕೆಲವು ವಚನಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

ಒಟ್ಟಿನಲ್ಲಿ ಹೇಳಬೇಕೆಂದರೆ ಡಾ. ಅಮೂರ ಅವರು ಅವ್ಯಾಹತವಾಗಿ ಕನ್ನಡ ಸಾಹಿತ್ಯ ಸೇವೆ ಮಾಡುತ್ತಲೇ ಬಂದಿದ್ದಾರೆ.  ಅಮೂರರಿಗೆ  ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಮಾಳವಾಡ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿಗಳಂತಹ ಅನೇಕ ಗೌರವಗಳು ಸಂದಿವೆ.  ಈ ನಾಡಿನ ಹಿರಿಯ ಸಾಹಿತ್ಯ ಚೇತನರಿಗೆ ನಮ್ಮ ಗೌರವಪೂರ್ವಕ ನಮನಗಳು.

(ಆಧಾರ: ಡಾ. ಬಸವರಾಜ ನಾಯ್ಕರ್ ಅವರು ಡಾ. ಜಿ. ಎಸ್ ಅಮೂರ ಅವರ ಕುರಿತು ಬರೆದಿರುವ ಲೇಖನ)
ಫೋಟೋ ಕೃಪೆ: www.kamat.com

Tag: G. S. Amoor,  G. S. Amoora

ಕಾಮೆಂಟ್‌ಗಳಿಲ್ಲ: