ಬುಧವಾರ, ಆಗಸ್ಟ್ 28, 2013

ಎಂ. ಟಿ. ವಿ. ಆಚಾರ್ಯ


ಎಂ. ಟಿ. ವಿ. ಆಚಾರ್ಯ

ಚಂದಮಾಮ ಎಂದರೆ ಮೊದಲು ನೆನಪಾಗುವುದು ಅದರಲ್ಲಿನ ಸುಂದರ ಚಿತ್ರಗಳು ಮತ್ತು ಮೋಹಕ ಕಥೆಗಳು.  ಬಹುಷಃ ನಮ್ಮ ಕಾಲದಲ್ಲಿ ಈ ಚಂದಮಾಮ ಓದದೆ, ಅದರಲ್ಲಿನ ಕಥೆ ಕೇಳದೆ, ಅದರಲ್ಲಿನ ಚಿತ್ರಗಳನ್ನು ನೋಡದ ಮಕ್ಕಳೇ ಇರಲಿಲ್ಲ.  ಚಂದಮಾಮದ ನೆನಪನ್ನು ನಮ್ಮ ನೆನಪುಗಳಲ್ಲಿ ಮುದವಾಗಿ ಉಳಿಸಿರುವ ವರ್ಣ ಚಿತ್ರಗಳಲ್ಲಿ ನಮ್ಮ ಕನ್ನಡಿಗರಾದ ಎಂ. ಟಿ. ವಿ. ಆಚಾರ್ಯರ ಕೊಡುಗೆಯೂ ಪ್ರಧಾನವಾದುದು.  ಚಂದಮಾಮ ಆಚಾರ್ಯರೆಂದೇ ಪ್ರಖ್ಯಾತರಾಗಿದ್ದ ಎಂ.ಟಿ. ವಿ. ಆಚಾರ್ಯರು ಜುಲೈ 28, 1920ರಂದು ಜನಿಸಿದರು.  ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಆಚಾರ್ಯರ ಚಿತ್ರಗಳು ಮೈಸೂರು ದಸರಾ ಪ್ರದರ್ಶನ ಸಂದರ್ಭದಲ್ಲಿ ಬಹುಮಾನ ಗಳಿಸುತ್ತಿದ್ದವು. 

ಮೈಸೂರಿನಲ್ಲಿ ಹೈಸ್ಕೂಲಿನವರೆಗಿನ ಶಿಕ್ಷಣ ಮುಗಿಸಿದ ಅಚಾರ್ಯರು ವೃತ್ತಿ ಶಿಕ್ಷಣ ಶಾಲೆಯಲ್ಲಿ ಶಿಕ್ಷಣ ಪಡೆದು ಕಲೆಯಲ್ಲಿ ಜೀವನ ಸಾಗಿಸಲಾರದೆ, ಬೆಂಗಳೂರಿನ ಹಿಂದೂಸ್ಥಾನ್ ವಿಮಾನ ಕಾರ್ಖಾನೆಯಲ್ಲಿ ಟ್ರೇಸರ್ ಆಗಿ ಕೆಲಸಕ್ಕೆ ಸೇರಿದರು.  ಆ ಕೆಲಸದಲ್ಲಿ ಬಹುಬೇಗ ನಿರಾಸಕ್ತಿ ತಳೆದ  ಅವರು ಖ್ಯಾತ ವಕೀಲರೂ ಹಾಗೂ ನಿವೃತ್ತ ನ್ಯಾಯಾಧೀಶರೂ ಆಗಿದ್ದ ಪಿ.ವಿ. ಶ್ರೀನಿವಾಸ ಅಯ್ಯಂಗಾರ್ ಅವರ ಕೃಪೆಯಿಂದ ಮದರಾಸಿನಲ್ಲಿ ತಮ್ಮ ಚಿತ್ರಕಲಾ ಜೀವನಕ್ಕೆ ಹೊಸ ಆಯಾಮ ದೊರಕಿಸಿಕೊಂಡರು.  1942ರ ಅವಧಿಯಲ್ಲಿ ಅವರು ಸುಮಾರು 80 ಚಿತ್ರಗಳನ್ನು ರಚಿಸಿ-ಪ್ರದರ್ಶಿಸಿ ಪ್ರಸಿದ್ಧಿ ಪಡೆದರು.  ಆಚಾರ್ಯರ ಹೆಸರಾಂತ ಕೃತಿಗಳಾದ ಹಳ್ಳಿಯ ಉಪಾಧ್ಯಾಯ, ಗೃಹಲಕ್ಷ್ಮಿ, ಕಲಾವಿದನ ಸಮಸ್ಯೆ, ಬಾಳಿನ ಸಂಜೆ, ಮುಗ್ಧಪ್ರೇಮಿಗಳು ಈ ಅವಧಿಯಲ್ಲಿ ಸೃಷ್ಟಿಗೊಂಡವು.

ಮುಂದೆ ಸ್ವತಂತ್ರ ಜೀವನವನ್ನು ಪ್ರಾರಂಭಿಸಿದ ಆಚಾರ್ಯರು ಹಲವು ಚಲನಚಿತ್ರಗಳಿಗೆ ಕಲಾನಿರ್ದೇಶಕರಾಗಿ ಹಾಗೂ ಕಾರ್ಟೂನು ಫಿಲಂ ತಯಾರಿಕೆಗೆ ಸಹಾಯಕರಾಗಿ ಕಾರ್ಯನಿರ್ವಹಿಸಿದರು.  1946ರಲ್ಲಿ ಕಲ್ಕತ್ತದ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆ ನಡೆಸಿದ  ಅಖಿಲ ಭಾರತ ಕಲಾ ಪ್ರದರ್ಶನದಲ್ಲಿ ಅಚಾರ್ಯರ ಆರು ಕೃತಿಗಳು ಪ್ರದರ್ಶಿತಗೊಂಡವು.  ಅಲ್ಲಿ ನಂದಲಾಲ್ ಬೋಸ್, ಅಬನೀಂದ್ರನಾಥ ಠಾಗೂರ್ ಮುಂತಾದ ಮಹಾನ್ ಚಿತ್ರಕಾರರನ್ನು ಭೇಟಿಮಾಡಿದ ಆಚಾರ್ಯರು  ಶಾಂತಿನಿಕೇತನವನ್ನೂ ಸಂದರ್ಶಿಸಿದರು.

ಒಮ್ಮೆ ಕಲಾವಿದ ರುಮಾಲೆ ಚೆನ್ನಬಸವಯ್ಯನವರು ಮದರಾಸಿಗೆ ಬಂದಿದ್ದಾಗ ಆಚಾರ್ಯರನ್ನು ಚಂದಮಾಮ ಪತ್ರಿಕೆಯ ನಾಗಿರೆಡ್ಡಿ ಹಾಗೂ ಚಕ್ರಪಾಣಿಯವರಿಗೆ ಪರಿಚಯಿಸಿದರು.  ಆಚಾರ್ಯರ ಕಲೆಗೆ ಮಾರುಹೋದ ಈ ಮಹನೀಯರು  ಚಂದಮಾಮ ಪತ್ರಿಕೆಯ ಮುಖಚಿತ್ರ ರಚನೆಯ ಜವಾಬ್ದಾರಿ ನೀಡಿದರು.  ಇದರ ಫಲವಾಗಿ ಎಂ.ಟಿ.ವಿ ಆಚಾರ್ಯ ಅವರು ರಚಿಸಿದ ಬಹುವರ್ಣ ಚಿತ್ರಗಳು ಭಾರೀ ಜನಪ್ರಿಯತೆ ಗಳಿಸಿದವು.  ಆ ಸಮಯದಲ್ಲೇ ಚಂದಮಾಮ ಕನ್ನಡ ಸಂಚಿಕೆಯ ಸಂಪಾದಕತ್ವವೂ  ಆಚಾರ್ಯರಿಗೆ ದೊರಕಿತು.  ಆರು ವರ್ಷಗಳ ಕಾಲ ಈ ಕಾರ್ಯ ನಿರ್ವಹಿಸಿದ ನಂತರದಲ್ಲಿ ಸಂಪಾದಕತ್ವವನ್ನು ತೊರೆದು, ತಮ್ಮ ಜೀವನದ ತಪಸ್ಸಾದ ಮಹಾಭಾರತ ಸರಣಿಯ ಚಿತ್ರಗಳನ್ನು ರಚಿಸಿದರು.  ಈ ಮೂಲಕ ಜನಸಾಮಾನ್ಯರು ಚಿತ್ರಕಲೆಯನ್ನು ಕುರಿತು ಗಂಭೀರ ಆಸಕ್ತಿ ತಳೆಯುವಂತೆ ಮಾಡಿದರು. 

1954ರಲ್ಲಿ ಚಂದಮಾಮ ತೊರೆದರೂ ಮತ್ತೆ ಚಂದಮಾಮದ ನಂಟು ಅವರನ್ನು ಬಿಡದೆ 1957ರಲ್ಲಿ ಅದಕ್ಕೇ ಹಿಂದಿರುಗಿ 1963ರವರೆಗೆ ಅಲ್ಲಿಯೇ ಮುಂದುವರೆದರು.  ಈ ಮಧ್ಯೆ ಅಮೆರಿಕದಲ್ಲಿ ಕಲಾಶಿಕ್ಷಣ ಪಡೆಯಲು ಶಿಷ್ಯವೇತನ ದೊರೆತರೂ ಸಹಾ, ಪ್ರಾರಂಭದಲ್ಲಿ ಇವರ ಭಾಗದ ಖರ್ಚನ್ನು ವಹಿಸಲು ಸಹಾ ಹಣ ಸಾಲದೇ ಇದ್ದುದರಿಂದ ಶಿಷ್ಯವೇತನವನ್ನೇ ನಿರಾಕರಿಸಬೇಕಾಯಿತು.  ಕೊನೆಗೆ ಚಂದಮಾಮ ತೊರೆದ ನಂತರದಲ್ಲಿ ಬೆಂಗಳೂರಿನಲ್ಲಿ ತಾಯಿನಾಡು ಪತ್ರಿಕಾ ಗುಂಪಿನಲ್ಲಿ ಪ್ರಧಾನ ಕಲಾವಿದರಾದರು.  ಜೊತೆಗೆ ಅಂದಿನ ಗೋಕುಲ ಮತ್ತು ಕೈಲಾಸ ಪತ್ರಿಕೆಗಳಲ್ಲೂ ಇವರ ಕಲೆ ಮೆರೆಯಿತು.  ಗಾಂಧೀನಗರದಲ್ಲಿ ಇವರದೇ ಆದ ಕಲಾ ಸ್ಟುಡಿಯೋ ಸಹಾ ಸ್ಥಾಪನೆಯಾಯಿತು.  ಮುಂದೆ ಆಚಾರ್ಯ ಕಲಾಭವನ ಮತ್ತು ಎ.ಸಿ.ಬಿ ಅಂಚೆ ಶಿಕ್ಷಣವನ್ನು ಆರಂಭಿಸಲು ತಮ್ಮ ಸ್ವಂತ ಮನೆಯನ್ನೂ ಮಾರಿದರು.  ಅವರ ಈ ಮಹತ್ಕಾರ್ಯದಿಂದ ಸಾವಿರಾರು ಕಲಾಭ್ಯಾಸಿಗಳಿಗೆ ಶಿಕ್ಷಣ ದೊರಕುವುದು ಸಾಧ್ಯವಾಯಿತು.

ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಿಯೋಗವೊಂದರ ಮುಖಂಡರಾಗಿ ಆಚಾರ್ಯರು ಸೋವಿಯತ್ ಯೂನಿಯನ್  ಪ್ರವಾಸದಲ್ಲಿ ಪಾಲ್ಗೊಂಡಿದ್ದರು.  ಹೀಗಾಗಿ ಆಚಾರ್ಯರ ಕಲಾಕೃತಿಗಳು ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಪ್ರಖ್ಯಾತಿ ಪಡೆದವು.  ಇವರ ಕಲಾಸಾಧನೆಗಾಗಿ ಹಲವಾರು ಕೀರ್ತಿ ಪ್ರಶಸ್ತಿಗಳು ಹುಡುಕಿಕೊಂಡು ಬಂದವು.  ತಮ್ಮ ದೀರ್ಘ ಜೀವನದ ಅನುಭವಗಳನ್ನು ಕುರಿತಾದ ಕಲೆ ಮತ್ತು ನಾನುಎಂಬ ಪುಸ್ತಕವನ್ನು ಆಚಾರ್ಯರು ಬರೆದರು.


ಈ ಕಲಾಚಾರ್ಯ ಎಂ.ಟಿ.ವಿ. ಆಚಾರ್ಯರು ಸೆಪ್ಟೆಂಬರ್ 6, 1992ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: M. T. V. Acharya

ಕಾಮೆಂಟ್‌ಗಳಿಲ್ಲ: