ಸೋಮವಾರ, ಆಗಸ್ಟ್ 26, 2013

ಎಂ. ವೆಂಕಟಕೃಷ್ಣಯ್ಯ

ಎಂ. ವೆಂಕಟಕೃಷ್ಣಯ್ಯ

ಎಂ. ವೆಂಕಟಕೃಷ್ಣಯ್ಯನವರು ಕರ್ನಾಟಕಕ್ಕೆ ಮಾಡಿರುವ ಕೆಲಸ ಅಷ್ಟಿಷ್ಟಲ್ಲ. ಪತ್ರಿಕೋದ್ಯಮದಲ್ಲಿ ಪತ್ತಿಕೋದ್ಯಮ ಪಿತಾಮಹರೆಂಬ ಬಿರುದು. ವಿದ್ಯಾಭಿವೃದ್ಧಿಯಲ್ಲಿ ವಿದ್ಯಾರ್ಥಿಗಳಿಂದ ತಾತಯ್ಯಎಂಬ ನಾಮಾಂಕಿತ, ಬಡ-ಬಗ್ಗರ ಸೇವೆಯನ್ನು ತೆಗೆದುಕೊಂಡರೆ ದಯಾಸಾಗರಎಂಬ ಹಿರಿಮೆ. ಗಾಂಧಿಯವರಿಂದ ಭೀಷ್ಮಾಚಾರ್ಯಎಂಬ ಪ್ರಶಂಸೆ. ಜನ ಸೇವೆಯೇ ಜನಾರ್ಧನ ಸೇವೆಎಂದು ನುಡಿದುದನ್ನು ನಡೆಯಲ್ಲಿ ತೋರಿಸಿ ತಮ್ಮ ಹೆಸರನ್ನು ಮನೆಯ ಮಾತನ್ನಾಗಿ ಮಾಡಿ ಮಹತ್ವಪೂರ್ಣ, ಚಿರಸ್ಮರಣೀಯವಾದ ಜೀವನವನ್ನು ನಡೆಸಿದವರು.

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯ ಮಗ್ಗೆ ಎಂಬಲ್ಲಿ,  ಸುಬ್ಬಯ್ಯ ಮತ್ತು ಭಾಗೀರಥಮ್ಮ ಎಂಬ ದಂಪತಿಗಳಿಗೆ,  1844ನೇ ಆಗಸ್ಟ್ ತಿಂಗಳ 20ನೆಯ ದಿನಾಂಕ ಶ್ರಾವಣ ಬಹುಳ ಗೋಕುಲಾಷ್ಟಮಿಯ ದಿನ ವೆಂಕಟಕೃಷ್ಣಯ್ಯನವರು  ಜನಿಸಿದರು.  ತಂದೆ ಸುಬ್ಬಯ್ಯನವರು ವೇದವನ್ನು ಅಭ್ಯಾಸ ಮಾಡಿದ್ದರು. ಸ್ವಲ್ಪ ಜಮೀನಿತ್ತು. ತಮ್ಮ ಮನೆಗೆ ಬೇಕಾದ ಸೌದೆ, ಊಟದೆಲೆಗಳನ್ನು ತಾವೇ ಕಾಡಿನಿಂದ ತರುತ್ತಿದ್ದರು. ದೊಡ್ಡ ಸಂಸಾರ. ಇವರಿಗೆ ಇಬ್ಬರು ಹೆಣ್ಣುಮಕ್ಕಳು, ಪೆದ್ದ ಅಮ್ಮಣಮ್ಮ ಮತ್ತು ಚಿನ್ನ ಅಮ್ಮಣಮ್ಮ.  ವೆಂಕಟಕೃಷ್ಣಯ್ಯ ಬಾಲಕರಾಗಿದ್ದಾಗ ಆ ಊರಿನಲ್ಲಿ ತೊಂಬತ್ತು ವರ್ಷ ವಯಸ್ಸಿನ ಅರುಣಾಚಲ ಶಾಸ್ತ್ರಿಗಳು ಅನೇಕ ಶಾಸ್ತ್ರಗಳ ಪಂಡಿತರಾಗಿದ್ದು ಪುಣ್ಯ ಕಥೆಗಳನ್ನು ಹೇಳುತ್ತಿದ್ದರು. ಇವು ಬಾಲಕ ವೆಂಕಟಕೃಷ್ಣಯ್ಯನವರ ಮೇಲೆ ಬಹಳ ಪ್ರಭಾವವನ್ನುಂಟು ಮಾಡಿತು.

1855ರಲ್ಲಿ ತಂದೆ ಸುಬ್ಬಯ್ಯನರು ನಿಧನರಾದರು. ಆಗ ವೆಂಕಟಕೃಷ್ಣಯ್ಯನಿಗೆ ಒಂಬತ್ತು-ಹತ್ತು ವರ್ಷ.  ಭಾಗೀರಥಮ್ಮನವರು ತಮ್ಮ ನಾಲ್ಕು ಮಕ್ಕಳನ್ನು ಕರೆದುಕೊಂಡು ಮೈಸೂರಿಗೆ ಬಂದರು. ಅರಮನೆಯಲ್ಲಿ ಕೆಲಸದಲ್ಲಿದ್ದ ಭಾಗವತ ಸುಬ್ಬರಾಯರು ಇವರಿಗೆ ತಮ್ಮ ಮನೆಯ ಲಾಯದಲ್ಲಿದ್ದ ಒಂದು ಚಿಕ್ಕ ಮನೆಯನ್ನು ಕೊಟ್ಟರು. ಹೆಣ್ಣುಮಕ್ಕಳು ಬೇರೆಯವರ ಮನೆಗೆ ಕಾರಂಜಿ ಕೆರೆಯಿಂದ ನೀರು ತಂದು ಕೊಡುತ್ತಿದ್ದರು; ಅದಕ್ಕೆ ಅವರು ಕೊಡ ಒಂದಕ್ಕೆ ಒಂದು ಕಾಸನ್ನು ಕೊಡುತ್ತಿದ್ದರು. ಇದರಿಂದ ಬಂದ ಆದಾಯದಲ್ಲಿ ಜೀವನ ಸಾಗಬೇಕಾಗಿತ್ತು. ಹೀಗೆ ತಾಯಿ ಮತ್ತು ಅಕ್ಕಂದಿರು ವೆಂಕಟಕೃಷ್ಣಯ್ಯನನ್ನು ಬೆಳೆಸಿದರು. ಭಾಗವತ ಸುಬ್ಬರಾಯರಿಂದ ಈತನಿಗೆ ಉಪನಯನ ಆಯಿತು.

ವೆಂಕಟಕೃಷ್ಣಯ್ಯನವರು  ಮೊದಲು ರಾಜಾ ಸ್ಕೂಲ್ ಎಂಬ ಶಾಲೆಗೆ ಸೇರಿದರು. ಮೂರು ವರ್ಷಗಳಾದ ಮೇಲೆ ವೆಸ್ಲಿನ್ ಮಿಷನ್ ಶಾಲೆಯಲ್ಲಿ ಅವರ ವ್ಯಾಸಂಗ ನಡೆಯಿತು. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಯಿತು. ಇವರಿಗೆ ಯಾವಾಗಲೂ ಓದುವುದರ ಮೇಲೆ ಮಮತೆ. ಗಂಭೀರವಾದ ವಿಚಾರಗಳನ್ನೊಳಗೊಂಡ ಪುಸ್ತಕಗಳನ್ನು ಯಾರಿಂದಲಾದರೂ ತಂದು ಓದುತ್ತಿದ್ದರು. ಪಠ್ಯಪುಸ್ತಕಗಳ ಜೊತೆಗೆ ಮತ, ವಿಜ್ಞಾನ ಮುಂತಾದ ವಿಷಯಗಳನ್ನು ಕುರಿತು ಇಂಗ್ಲಿಷ್ ಗ್ರಂಥಗಳನ್ನು ಓದುತ್ತಿದ್ದರು. ಬಡತನದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೂ ಬರೆಯುವ ಶಕ್ತಿ, ಮಾತನಾಡುವ ಚಾತುರ್ಯ, ಜ್ಞಾನಸಂಪತ್ತು ಇವುಗಳಲ್ಲಿ ಯಾವ ಪದವೀಧರನಿಗೂ  ಕಡಿಮೆ ಇರಲಿಲ್ಲ. ಮೆಟ್ರಿಕ್ಯುಲೇಷನ್ ಆದಮೇಲೆ ಕೆಲಸ ಸಿಕ್ಕುವವರೆಗೂ ಮನೆಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಜೀವನ ಸಾಗಿಸಲಾರಂಭಿಸಿದರು.

ಆಗ ಸಿ. ರಂಗಾಚಾರ್ಲು ಮೈಸೂರು ಅರಮನೆಯ ಮೇಲ್ವಿಚಾರಕರಾಗಿದ್ದರು. ನಜರಾಬಾದ್ ಹತ್ತಿರದ ಕುಪ್ಪಣ್ಣ ತೋಟದಲ್ಲಿದ್ದ ಟೆನಿಸ್ ಕ್ಲಬ್‌ನಲ್ಲಿ ಸ್ತ್ರೀ ವಿದ್ಯಾಭ್ಯಾಸದ ಬಗ್ಗೆ ಒಂದು ಚರ್ಚೆ ಆಯಿತು. ಅದರಲ್ಲಿ ವೆಂಕಟಕೃಷ್ಣಯ್ಯನವರೂ ಭಾಗವಹಿಸಿದ್ದರು. ಇವರ ಭಾಷಣವನ್ನು ಕೇಳಿ ರಂಗಾಚಾರ್ಲು ತುಂಬಾ ಮೆಚ್ಚಿಕೊಂಡರು. ಹೀಗೆ ಅವರ ಪರಿಚಯ ಆಯಿತು. ಅವರು ವೆಂಕಟಕೃಷ್ಣಯ್ಯನವರಿಗೆ, “ನೀನು ಸರ್ಕಾರಿ ಕೆಲಸಕ್ಕೆ ಸೇರಬೇಡ, ಖಾಸಗಿ ಶಾಲೆಯ ಉಪಾಧ್ಯಾಯನಾಗಿ ಪತ್ರಿಕೋದ್ಯಮವನ್ನು ಆರಂಭಿಸಿ ಪತ್ರಿಕೋದ್ಯಮಿಯಾಗುಎಂದು ಹೇಳಿದರು. ಅಂದಿನಿಂದ ವೆಂಕಟಕೃಷ್ಣಯ್ಯನವರು ದೇಶಸೇವಾ ದೀಕ್ಷೆಯನ್ನು ವಹಿಸಿದರು.

ಮೈಸೂರಿನ ಗುರಕಾರ್ ಮರಿಮಲ್ಲಪ್ಪ ಎಂಬವರು ಒಂದು ಶಾಲೆಯನ್ನು ಕಟ್ಟಿಸಿದರು. ರಂಗಾಚಾರ್ ಎಂಬುವರನ್ನು ಮುಖ್ಯ ಉಪಾಧ್ಯಾಯರನ್ನಾಗಿಯೂ ವೆಂಕಟಕೃಷ್ಣಯ್ಯನವರನ್ನು ಸಹ ಉಪಾಧ್ಯಾಯರನ್ನಾಗಿಯೂ ನೇಮಿಸಿದರು. ಕೆಲವು ದಿನಗಳನಂತರ ರಂಗಾಚಾರ್ ಸರ್ಕಾರಿ ನೌಕರಿಗೆ ಸೇರಿದ ಮೇಲೆ, ವೆಂಕಟಕೃಷ್ಣಯ್ಯನವರೇ ಶಾಲೆಯ ಮುಖ್ಯ ಉಪಾಧ್ಯಾಯರಾದರು. ವೆಂಕಟಕೃಷ್ಣಯ್ಯನವರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮುಡಿಪಾಗಿಹೋದರು. 1879ರಲ್ಲಿ ಮದರಾಸು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಇವರು ತಯಾರು ಮಾಡಿದ ವಿದ್ಯಾರ್ಥಿಗಳೆಲ್ಲಾ ಮೊದಲನೇ ಬಾರಿಗೇ ತೇರ್ಗಡೆಯಾದರು. ಆಗ ವ್ಯವಸ್ಥಾಪಕ ಮಂಡಳಿಗೆ ಸಂತೋಷವೋ ಸಂತೋಷ. ವೆಂಕಟಕೃಷ್ಣಯ್ಯನವರ ಕೀರ್ತಿ ಹಬ್ಬುತ್ತಿತ್ತು. ಶಾಲೆಗೆ ಸೇರಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿತ್ತು. ಸ್ಥಳ ಸಾಲದ ಹಾಗಾಯಿತು. ಈ ಹೊತ್ತಿಗೆ ಮರಿಮಲ್ಲಪ್ಪನವರೂ ತೀರಿಕೊಂಡಿದ್ದರು. ಇನ್ನಷ್ಟು ಹಣ ಕೊಟ್ಟು ಶಾಲೆಗೆ ಸಹಾಯ ಮಾಡಬೇಕೆಂದು ವೆಂಕಟಕೃಷ್ಣಯ್ಯನವರು ಮರಿಮಲ್ಲಪ್ಪನವರ ಹೆಂಡತಿಯವರನ್ನು ಪ್ರಾರ್ಥಿಸಿದರು. ಅವರು ಹನ್ನೆರಡು ಸಾವಿರ ರೂಪಾಯಿಗಳನ್ನು ಕೊಟ್ಟರಲ್ಲದೆ, ಸಂತೇಪೇಟೆಯ ಶಾಲೆಯನ್ನು ಮಾರಿ ಉಪಯೋಗಿಸಿಕೊಳ್ಳಿ ಎಂದು ಉದಾರವಾಗಿ ದಾನ ಮಾಡಿದರು. ವ್ಯವಸ್ಥಾಪಕ ಮಂಡಳಿಯವರ ಸಹಾಯದಿಂದ ವೆಂಕಟಕೃಷ್ಣಯ್ಯನವರು ರಮಾವಿಲಾಸದ ಅಗ್ರಹಾರದಲ್ಲಿ ಶಾಲೆಯನ್ನು ಕಟ್ಟಿಸಿದರು.

ಶಾಲೆಯಲ್ಲಿ ಇವರೊಬ್ಬರು ಆದರ್ಶ ಉಪಾಧ್ಯಾಯರಾಗಿದ್ದರು. ಅವರ ಪಾಠಪ್ರವಚನ ಹೇಳುವ ಕ್ರಮವೇ ವಿಶಿಷ್ಟವಾದದ್ದು. ವಿದ್ಯಾರ್ಥಿಗಳು ಕಾಲಕಾಲಕ್ಕೆ ಬರಬೇಕು.  ಉಪಾಧ್ಯಾಯರುಗಳಿಗೆ ಮರ್ಯಾದೆ ಕೊಡಬೇಕು, ಗುರುಭಕ್ತಿ ಇಡಬೇಕೆಂದು ಹೇಳುತ್ತಿದ್ದರು. ಶಾಲೆಯಲ್ಲಿ ದಡ್ಡರಿಗೂ ಪ್ರವೇಶವಿರಬೇಕು, ಬರೇ ಜಾಣರನ್ನು ವಿದ್ಯಾವಂತರನ್ನಾಗಿ ಮಾಡುವುದು ದೊಡ್ಡ ಕೆಲಸವಲ್ಲ; ಬುದ್ಧಿವಂತರಲ್ಲದವರಿಗೆ ಪಾಠ ಕಲಿಸುವುದು ನಿಜವಾಗಿ ದೊಡ್ಡ ಕೆಲಸ ಎಂದು ಹೇಳುತ್ತಿದ್ದರು. ಹಾಗೆಯೇ ಬುದ್ದಿವಂತರಲ್ಲದವರನ್ನೂ ಶಾಲೆಗೆ ಸೇರಿಸಿಕೊಳ್ಳುತ್ತಿದ್ದರು. ಶಾಲೆಯಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಧಾನ್ಯತೆಯನ್ನು ಕೊಟ್ಟಿದ್ದರು. ಸೊಗಸಾಗಿ  ಪಾಠ  ಹೇಳುತ್ತಿದ್ದರು.  ತಮ್ಮ ಶಾಲೆಯಲ್ಲಿ ಸೊಗಸಾದ ಗ್ರಂಥ ಭಂಡಾರವನ್ನೂ ವಾಚನಾಲಯವನ್ನೂ ವ್ಯವಸ್ಥೆ ಮಾಡಿದ್ದರು.  ಅಂದಿನ ದಿನಗಳಲ್ಲಿ ಕಾಲೇಜುಗಳಲ್ಲಿಯೂ ಅಷ್ಟು ಒಳ್ಳೆಯ ಗ್ರಂಥಭಂಡಾರವಾಗಲೀ ವಾಚನಾಲಯವಾಗಲೀ ಇರಲಿಲ್ಲವಂತೆ. ಗರಡಿ, ಕ್ರಿಕೆಟ್, ಬ್ಯಾಡ್ ಮಿಂಟನ್, ಫುಟ್ ಬಾಲ್ ಆಟಗಳಿಗೆ ಪ್ರೋತ್ಸಾಹ ಕೊಟ್ಟರು. ಚರ್ಚಾಕೂಟಗಳನ್ನು ಏರ್ಪಡಿಸುತ್ತಿದ್ದರು.

ಮುಂದೆ ವೆಂಕಟಕೃಷ್ಣಯ್ಯನವರು ಅನಾಥ ಮಕ್ಕಳಿಗೆ  ಅನುಕೂಲವಾಗುವಂತೆ ನಾರಾಯಣಶಾಸ್ತ್ರಿ ಆನಾಥಾಲಯವನ್ನು  ಸ್ಥಾಪಿಸಿದರು. ಬಡ ಹುಡುಗರಿಗೆ ತಮ್ಮ ಸಂಬಳದಿಂದಲೇ ಫೀಸನ್ನು ಕೊಡುತ್ತಿದ್ದರು, ಪುಸ್ತಕ ತೆಗೆದುಕೊಡುತ್ತಿದ್ದರು. ಮಾಧ್ಯಮಿಕ ಶಾಲೆಯಾಗಿದ್ದ ಶಾರದಾ ವಿಲಾಸ ಸ್ಕೂಲ್ಇವರ ಪ್ರಯತ್ನದಿಂದ ಪ್ರೌಢಶಾಲೆಯಾಯಿತು. ಮೈಸೂರಿನ ಕೃಷ್ಣಮೂರ್ತಿಪುರದಲ್ಲಿ ವಿಶಾಲವಾದ ನಿವೇಶನದಲ್ಲಿ ಸೊಗಸಾದ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದರು. ತಾವು ನಡೆಸುತ್ತಿದ್ದ ಅನಾಥಾಲಯದಲ್ಲಿ ಆಗಿನ ಕಾಲಕ್ಕೆ ಟೈಪ್ ರೈಟಿಂಗ್, ಶೀಘ್ರಲಿಪಿ, ಅಕೌಂಟೆನ್ಸಿ, ಹೊಲಿಗೆ, ನೇಯುವುದು ಮೊದಲಾದ ಜೀವನ ಸಂಪಾದನೆಗೆ ನೆರವಾಗುವ ವಿಷಯಗಳನ್ನು ಹೇಳಿಕೊಡಲು ವ್ಯವಸ್ಥೆ ಮಾಡಿದರು. ಮೈಸೂರಿನಲ್ಲಿ ಅರ್ಯಬಾಲಿಕಾ ಪಾಠಶಾಲೆ, ಸದ್ವಿದ್ಯಾ ಶಾಲೆ, ದಳವಾಯಿ ಮಾಧ್ಯಮಿಕ ಶಾಲೆ, ಕೈಗಾರಿಕಾ ಶಾಲೆ, ಚಾಮ ರಾಜೇಂದ್ರ ಟಿಕ್ನಿಕಲ್ ಇನ್‌ಸ್ಟಿಟ್ಯೂಟ್, ಕುರುಡು-ಕಿವುಡು-ಮೂಗರ ಶಾಲೆ ಇವೆಲ್ಲ ಸ್ಥಾಪನೆಯಾಗಲು ಶ್ರಮಿಸಿದರು. ವೈದ್ಯಕೀಯ ಕಾಲೇಜ್ ಆಗಬೇಕೆಂದು ಸರ್ಕಾರವನ್ನು ಒತ್ತಾಯಮಾಡಿ ಯಶಸ್ವಿಗಳಾದರು. 43 ವರ್ಷಗಳ ಅವಧಿಯಲ್ಲಿ ವೆಂಕಟಕೃಷ್ಣಯ್ಯನವರು ಸುಮಾರು ಇಪ್ಪತ್ತು ಸಾವಿರ ಮಂದಿ ವಿದ್ಯಾರ್ಥಿಗಳಿಗೆ ಪಾಠ ಹೇಳಿದರು.  ಒಮ್ಮೆ, ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿಬನ್ನಿ ಎಂದು ಮಿತ್ರರೊಬ್ಬರು ಇವರಿಗ ಐದು ಸಹಸ್ರ ರೂಪಾಯಿಗಳನ್ನು ಕೊಟ್ಟರು. ಇವರು ಆ ಹಣವನ್ನು ತಾವೇ 1919ರಲ್ಲಿ ಪ್ರಾರಂಭಿಸಿದ್ದ ಶಾರದಾ ವಿಲಾಸ ವಿದ್ಯಾ ಸಂಸ್ಥೆಗೆ ದಾನವಾಗಿ ನೀಡಿದರು.

ಅನೇಕ ತತ್ವಶಾಸ್ತ್ರಜ್ಞರ ಜೀವನ ಚರಿತ್ರೆಯನ್ನು ಓದಿದ್ದುದರಿಂದ, ವೆಂಕಟಕೃಷ್ಣಯ್ಯನವರಲ್ಲಿ ಸ್ವತಂತ್ರ ಮನೋಭಾವ ಬೇರೂರಿತ್ತು. ದಾದಾಭಾಯಿ ನವರೋಜಿಯವರಂತಹ ಅನೇಕ ಮಂದಿ ಭಾರತೀಯ ನಾಯಕರ ಪುಸ್ತಕಗಳನ್ನು ಓದಿದ್ದರು. ದೇಶಕ್ಕೆ ಬ್ರಿಟಿಷರಿಂದ ಆಗುತ್ತಿದ್ದ ಅನ್ಯಾಯದ ಪೂರ್ಣ ಅರಿವು ಅವರಿಗಿತ್ತು.  ಮೈಸೂರಿನ ಮೊದಲ ದಿವಾನರಾಗಿದ್ದ ಸಿ. ರಂಗಾಚಾರ್ಲು ಅವರು ಇವರ ಮೊದಲ ರಾಜಕೀಯ ಗುರು. ಎರಡನೆಯ ದಿವಾನರಾದ ಶೇಷಾದ್ರಿ ಅಯ್ಯರ್ ಅವರು ರಾಜಕೀಯದಲ್ಲಿ ಇವರಿಗೆ ವಿರೋಧಿಗಳಾದರೂ ಇವರಲ್ಲಿ ಅವರಿಗೆ  ತುಂಬಾ ಗೌರವ. ವೆಂಕಟಕೃಷ್ಣಯ್ಯನವರು 1892 ರಲ್ಲಿ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರ ಸ್ಥಾಯೀ ಸಮಿತಿಗೆ ಕಾರ್ಯದರ್ಶಿಯಾದರು. ವೆಂಕಟಕೃಷ್ಣಯ್ಯನವರು ಪ್ರತಿನಿಧಿ ಸಭೆಯಲ್ಲಿ, ‘ನಮ್ಮ ಸಂಸ್ಥಾನದ ಪ್ರಜಾವರ್ಗದವರೇ ನಮ್ಮಲ್ಲಿ ಅಧಿಕಾರ ಪದವಿಗಳನ್ನು ಅಲಂಕರಿಸಬೇಕು. ಮೈಸೂರು ಮೈಸೂರಿನವರಿಗೇಎಂಬ ನೀತಿಯನ್ನು ಬಹು ಸ್ಪಷ್ಟವಾಗಿ ಪ್ರತಿಪಾದಿಸಿದ್ದರು. 

ಶೇಷಾದ್ರಿ ಅಯ್ಯರ್ ಅವರ ರೀತಿನೀತಿಗಳನ್ನು ಹಲವು ವರ್ಷಗಳ ಕಾಲ ವೆಂಕಟಕೃಷ್ಣಯ್ಯನವರು ನಿಷ್ಠುರವಾಗಿ ವಿರೋಧಿಸಿದ್ದರು. ಅವರು ನಿಧನರಾದ ಸಂದರ್ಭದಲ್ಲಿ  ಪತ್ರಿಕೆಯಲ್ಲಿ ಅವರನ್ನು  ಹೊಗಳಿ ಲೇಖನವನ್ನು ಬರೆದು, ‘ಅವರೊಬ್ಬರು ನನ್ನ ರಾಜಕೀಯ ವಿರೋಧಿಯಾಗಿದ್ದರೇ ಹೊರತು ವೈಯಕ್ತಿಕ ವೈರಿಯಲ್ಲಎಂದು  ಸ್ಪಷ್ಟಪಡಿಸಿದ್ದರು. ಶೇಷಾದ್ರಿ ಅಯ್ಯರ್ ಅವರ ಪ್ರತಿಮೆಯನ್ನು ನಿರ್ಮಿಸಬೇಕೆಂದು ಸಲಹೆ ಇತ್ತರು. ಶೇಷಾದ್ರಿ ಅಯ್ಯರ್ ಸಹ ವೆಂಕಟಕೃಷ್ಣಯ್ಯನವರ ಶಾಲೆಗೇ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದರು.

ವೆಂಕಟಕೃಷ್ಣಯ್ಯನವರು ತಮ್ಮ ಜೀವಿತ ಕಾಲದಲ್ಲಿ ರಂಗಾಚಾರ್ಲು ಅವರಿಂದ ಮಿರ್ಜಾ ಇಸ್ಮಾಯಿಲ್‌ರವರೆಗೆ ಹತ್ತು ಮಂದಿ ದಿವಾನರುಗಳನ್ನು ನೋಡಿದರು. ಯಾವಾಗಲೂ ಅವರು ಒಳ್ಳೆಯ ಕೆಲಸವನ್ನು ಮೆಚ್ಚುವರು, ತಪ್ಪು ಎಂದು ಕಂಡದ್ದನ್ನು ನಿರ್ಭಯವಾಗಿ ಟೀಕಿಸುವರು.  ಪತ್ರಿಕೆಗಳು ಇನ್ನೂ ಹೆಚ್ಚಾಗಿಲ್ಲದಿದ್ದ ಕಾಲದಲ್ಲಿ, ಬಹು ಕಷ್ಟಗಳನ್ನು ಎದುರಿಸಬೇಕಾಗಿದ್ದ ಕಾಲದಲ್ಲಿ ವೆಂಕಟಕೃಷ್ಣಯ್ಯನವರು ಪತ್ರಿಕೆಗಳನ್ನು ನಡೆಸಿದರು. ಪತ್ರಿಕಾಕರ್ತರಾಗಿ, ಧೀರರಾಗಿ ನಡೆದುಕೊಂಡರು. ಕನ್ನಡ ಪತ್ರಿಕೆಗಳ ಇತಿಹಾಸದಲ್ಲಿ ಬಹು ಹಿರಿಯ ಸ್ಥಾನವನ್ನು ಗಳಿಸಿಕೊಂಡರು. ವೈಯಕ್ತಿಕವಾಗಿ  ಪತ್ರಿಕೆಗಳಿಂದ ಬಹುನಷ್ಟವನ್ನೇ  ಅನುಭವಿಸಿದರೂ  ಎದೆಗುಂದಲಿಲ್ಲ.  ನಿರ್ಭಯವಾಗಿ ಮಾತನಾಡಿ, ಬರೆದು ಪತ್ರಿಕೆಗಳನ್ನು ನಡೆಸಿದ ಗಂಡುಗಲಿ ವೆಂಕಟ ಕೃಷ್ಣಯ್ಯನವರು, ಸತ್ಯನಿಷ್ಠೆ, ನಿರ್ಭೀತಿಗಳಿಂದ ಪತ್ರಿಕೋದ್ಯಮಕ್ಕೇ ಅಂದೂ ಮುಂದೂ ಮೇಲ್ಪಂಕ್ತಿಯಾದರು. ವೆಂಕಟಕೃಷ್ಣಯ್ಯನವರು 1885ರಲ್ಲಿ ವೃತ್ತಾಂತ ಚಿಂತಾ ಮಣಿಎಂಬ ವಾರಪತ್ರಿಕೆಯನ್ನು ಆರಂಭಿಸಿದರು. ಇದರ ಯಶಸ್ಸಿನಿಂದಾಗಿ ಕನ್ನಡ ಮತ್ತು ಇನ್ನೂ ಅನೇಕ ಪತ್ರಿಕೆಗಳನ್ನು ಪ್ರಕಟಿಸುವ ಹುಮ್ಮಸ್ಸು ಬಂತು. ಎಂ.ಎಸ್.ಪುಟ್ಟಣ್ಣನವರು ನಡೆಸುತ್ತಿದ್ದ ಹಿತ ಬೋದಿನಿಎಂಬುದನ್ನು ವೆಂಕಟ ಕೃಷ್ಣಯ್ಯನವರು ನಡೆಸಿಕೊಂಡುಬಂದರು. ಅನಂತರ ವೇದಾಮತ ಚಿಂತಾಮಣಿ’, ‘ಸಂಪದಭ್ಯುದಯ’, ‘ಸಾಧ್ವಿ’, ‘ಪೌರ ಸಾಮಾಜಿಕ ಪತ್ರಿಕೆಎಂಬುವನ್ನು ಕನ್ನಡದಲ್ಲಿಯೂ ಮೈಸೂರು ಪೇಟ್ರಿಯಟ್’, ‘ಮೈಸೂರು ಹೆರಾಲ್ಡ್ಎಂಬುವನ್ನು ಇಂಗ್ಲಿಷಿನಲ್ಲಿಯೂ ನಡೆಸಿದರು.

ದಿವಾನ್ ಪಿ.ಎನ್.ಕೃಷ್ಣಮೂರ್ತಿ ಮತ್ತು ವಿ.ಪಿ.ಮಾಧವ ರಾಯರು ಪತ್ರಿಕೆಗಳ ಸಂಪಾದಕರುಗಳಿಗೆ ಸರ್ಕಾರವನ್ನು ಕಟುವಾಗಿ ಟೀಕಿಸಬಾರದು ಎಂದು ಎಚ್ಚರಿಕೆ ನೀಡಿದರು. ಆದರೂ ಅವರು ಬಿಡಲಿಲ್ಲ. ಆಗ ಮೈಸೂರಿನ ನ್ಯಾಯ ವಿಧಾಯಕ ಸಭೆಯು 1908ರಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ  ಕಡಿವಾಣ ಹಾಕುವ ಒಂದು ಶಾಸನವನ್ನು ಮಾಡಿತು. ಆ  ಶಾಸನವನ್ನು  ವಿರೋಧಿಸಿದ್ದಕ್ಕಾಗಿ  ಸರ್ಕಾರವು ಕನ್ನಡ ನಡೆಗನ್ನಡಿಸಂಪಾದಕರನ್ನು ಗಡೀಪಾರು ಮಾಡಿತು. ಶಾಸನವನ್ನು ಟೀಕಿಸಿ ಬರೆದುದಕ್ಕೆ ಸೂರ್ಯೋದಯ ಪ್ರಕಾಶಿಕಾಪತ್ರಿಕೆಯನ್ನು  ನಿಲ್ಲಿಸಿತು. ವೆಂಕಟಕೃಷ್ಣಯ್ಯನವರ ಮುದ್ರಣಾಲಯವನ್ನು ಜಪ್ತಿ ಮಾಡಿ ವಶಪಡಿಸಿಕೊಂಡಿತು. ಮೈಸೂರು ಸರ್ಕಾರ ಮತ್ತು ಬ್ರಿಟಿಷ್ ಸರ್ಕಾರದ ಕ್ರಮಗಳಿಂದ ಪ್ರಸಿದ್ಧ ಪತ್ರಿಕೆಗಳು ನಿಂತವು. ಇದಕ್ಕಾಗಿ ಪತ್ರಿಕೆಗಳನ್ನು ನಡೆಸುತ್ತಿದ್ದವರು ವೆಂಕಟಕೃಷ್ಣಯ್ಯನವರ ನೇತೃತ್ವದಲ್ಲಿ ಸಭೆ ಸೇರಿ ಎಲ್ಲಾ ಪತ್ರಿಕೆಗಳನ್ನು ನಿಲ್ಲಿಸಬೇಕೆಂದು ತೀರ್ಮಾನಿಸಿದರು. ವೆಂಕಟಕೃಷ್ಣಯ್ಯನವರೇ ಮತ್ತೆಮತ್ತೆ ದಿವಾನರುಗಳನ್ನು ಕಂಡು, “ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದರಿಂದ ಜನತೆಯ ಜನ್ಮಸಿದ್ಧ ಹಕ್ಕುಗಳಿಗೆ ಕುಂದು ಬರುವುದುಎಂದರು. ಅದಕ್ಕೂ ಸರ್ಕಾರ ಒಪ್ಪಲಿಲ್ಲ. ಹೋರಾಟ ಮುಂದುವರಿಯಿತು. ಕೈಬರಹದ ಭಿತ್ತಿಪತ್ರಗಳು ಸರ್ಕಾರದ ವಿರುದ್ಧವಾಗಿ ಹೊರಬಂದವು. ವೆಂಕಟಕೃಷ್ಣಯ್ಯನವರು ಆರೋಗ್ಯಕ್ಕೆ ಸಂಬಂಧಪಟ್ಟ ನೇಚರ್ ಕ್ಯೂರ್ಎಂಬ ಪತ್ರಿಕೆಯನ್ನು ಪ್ರಕಟಿಸಿದರು. ಇದು ಸುದ್ದಿ ಕೊಡುವ ಪತ್ರಿಕೆಯಲ್ಲ. ಆರೋಗ್ಯ, ನೀತಿ, ಜನ ಜೀವನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಹಾಕಲು ಸರ್ಕಾರದ ಅಪ್ಪಣೆ ಬೇಕಿಲ್ಲ ಎಂದು ಅವರು ಸರ್ಕಾರದ ಅಪ್ಪಣೆ ಕೇಳದೆ ಪ್ರಕಟಿಸಿದರು. ಮತ್ತೆ ಅದನ್ನು ನಿಲ್ಲಿಸಬೇಕಾಯಿತು. 1911ರಲ್ಲಿ ವೆಂಕಟಕೃಷ್ಣಯ್ಯನವರು ಸಾಧ್ವಿ’ (ಕನ್ನಡ) ಮತ್ತು ಮೈಸೂರ್ ಪೇಟ್ರಿಯಟ್’ (ಇಂಗ್ಲಿಷ್) ವಾರಪತ್ರಿಕೆಗಳನ್ನು ಪ್ರಾರಂಭಿಸಿದರು.  ವಿಶ್ವೇಶ್ವರಯ್ಯನವರು ದಿವಾನರಾದ ಮೇಲೆ ಪತ್ರಿಕಾ ಶಾಸನವನ್ನು ಬದಲಾಯಿಸಿ ಪತ್ರಿಕೆ ನಡೆಸುವವರಿಗೆ ಇನ್ನಿಷ್ಟು ಸ್ವಾತಂತ್ರ್ಯವಿರುವಂತೆ ಅವಕಾಶ ಮಾಡಿಕೊಟ್ಟರು.

ಪತ್ರಿಕೆಯ ಬಗ್ಗೆ ವೆಂಕಟಕೃಷ್ಣಯ್ಯನವರ ಕರ್ತವ್ಯನಿಷ್ಠೆಗೆ ಒಂದು ನಿದರ್ಶನ:  1903ರಲ್ಲಿ ಅವರಿಗೆ ಪುತ್ರ ವಿಯೋಗವಾಯಿತು. ಆಗ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವ ಮೊದಲು, “ಈ ಹೊತ್ತಿನ ಲೇಖನ ಬರೆಯಲಿಲ್ಲವೇನೋ ಕಾಗದ ಕಡ್ಡಿ ತೆಗೆದುಕೊಂಡು ಬಾಎಂದು ಹೇಳಿ ಲೇಖನ ಬರೆದು ಮುಗಿಸಿ ನಡೆದರು. ವೆಂಕಟಕೃಷ್ಣಯ್ಯನವರು ಎಷ್ಟು ನಿರ್ಭಯವಾಗಿ ಬರೆಯುತ್ತಿದ್ದರೆಂದರೆ, ಇವರು ಪ್ರಜಾಪ್ರತಿನಿಧಿ ಸಭೆಯಿಂದ ನ್ಯಾಯ ವಿಧಾಯಕ ಸಭೆಗೆ ಚುನಾಯಿತರಾದಾಗ ದಿವಾನ್ ವಿ.ಪಿ. ಮಾಧವರಾಯರು ಚುನಾವಣೆಯನ್ನೇ ರದ್ದು ಮಾಡಿದರು. ಇವರ ಟೀಕೆಗಳನ್ನು ತಾಳಲಾರದೆ ದಿವಾನರೊಬ್ಬರು ಇವರನ್ನು ಮೈಸೂರು ಸಂಸ್ಥಾನದಿಂದ ಗಡೀಪಾರು ಮಾಡಬೇಕು ಎಂದು ಯೋಚಿಸಿದರು. ಆಗ ನಾಲ್ಮಡಿ ಕೃಷ್ಣರಾಜ ಒಡೆಯರು ಮಹಾರಾಜರು. ಅವರಿಗೆ ವೆಂಕಟಕೃಷ್ಣಯ್ಯನವರಲ್ಲಿ ಗೌರವ. ಅವರು ಒಪ್ಪಲಿಲ್ಲ.

ವೆಂಕಟಕೃಷ್ಣಯ್ಯನವರೇ ಮೈಸೂರು ಪತ್ರಿಕೋದ್ಯಮದ ಆದಿಗುರು. ವಿಶ್ವವಿದ್ಯಾನಿಲಯದ ಮಟ್ಟದಲ್ಲೂ ಪತ್ರಿಕೋದ್ಯಮ ಶಿಕ್ಷಣ ಕೊಡಬೇಕು ಎಂದು ಅದಕ್ಕಾಗಿ ಎರಡು ಸಾವಿರ ರೂಪಾಯಿಗಳ ದತ್ತಿಯನ್ನು ಕೊಟ್ಟರು. ಇದರಿಂದ ಪತ್ರಿಕೋದ್ಯಮದಲ್ಲಿ ಯಶಸ್ಸು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಕೊಡಬೇಕೆಂದು ತಿಳಿಸಿದರು. ಆದರೆ ಅದು ಅವರು ತೀರಿಹೋದ ಮೇಲೆ ಅಂದರೆ 1950ರಲ್ಲಿ ಆರಂಭವಾಯಿತು. ಈಗಲೂ ವೃದ್ಧಪಿತಾಮಹ ವೆಂಕಟಕೃಷ್ಣಯ್ಯ ಬಹುಮಾನಎಂದು ಅವರ ಜ್ಞಾಪಕಾರ್ಥವಾಗಿ ಕೊಡುತ್ತಿದ್ದಾರೆ.

ವೆಂಕಟಕೃಷ್ಣಯ್ಯನವರು ಸಮಾಜಕ್ಕೆ ಹಲವು ರೀತಿಗಳಲ್ಲಿ ಸೇವೆ ಸಲ್ಲಿಸಿದರು. ಹೆಂಗಸರಿಗೆ ವಿದ್ಯಾಭ್ಯಾಸವಾಗುವುದು ದೇಶದ ದೃಷ್ಟಿಯಿಂದ ಅತ್ಯಗತ್ಯ ಎಂದು ಭಾವಿಸಿದ್ದರು. ಸ್ತ್ರೀ ವಿದ್ಯಾಭ್ಯಾಸ ಬಹಳ ಹಿಂದುಳಿದಿದ್ದಾಗ ಅವರ ಹೆಂಡತಿ ಪುಟ್ಟಲಕ್ಷ್ಮಮ್ಮನವರನ್ನು ಉಪಾಧ್ಯಾಯಿನಿಯನ್ನಾಗಿ ಮಾಡಿ, ಬಾಲಿಕಾ ಪಾಠಶಾಲೆ ಮತ್ತು ವಿದ್ಯಾರ್ಥಿನಿಲಯಗಳನ್ನು ತೆರೆದರು. ಹಿಂದುಳಿದವರ ಮತ್ತು ಹರಿಜನರ ವಿದ್ಯಾಭ್ಯಾಸಕ್ಕೆ ನೆರವು ನೀಡಿದರು. ಅಸ್ಪೃಶ್ಯತೆ ಕೊನೆಗಾಣಬೇಕೆಂದು ಸ್ಪಷ್ಟವಾಗಿ ಹೇಳುತ್ತಿದ್ದರು. ಇವರಿಗೆ ಜಾತಿಬೇಧವಿರಲಿಲ್ಲ. ಬಾಲ್ಯ ವಿವಾಹಕ್ಕೆ ಅವಕಾಶವಿರಬಾರದೆಂದೂ ವಿಧವಾ ವಿವಾಹಕ್ಕೆ ಅವಕಾಶ ಇರಬೇಕೆಂದೂ ಹೋರಾಡಿದರು. ನಿರ್ಗತಿಕರು, ಅನಾಥರು ನನ್ನ ದೇವರು, ಅವರಿಗಾಗಿ ದುಡಿಯುವುದೇ ನನ್ನ ಕರ್ತವ್ಯಎನ್ನುತ್ತಿದ್ದರು.

1918ರಲ್ಲಿ ಸಾಂಕ್ರಾಮಿಕ ರೋಗ ಹರಡಿ ನೂರಾರು ಜನ ಸತ್ತರು. ವೆಂಕಟಕೃಷ್ಣಯ್ಯನವರು ರೋಗಿಗಳಿಗೆ ಗಂಜಿ ಮತ್ತು ಔಷಧ ಹಂಚಲು ಏರ್ಪಾಟು ಮಾಡಿದರು, ತಾವೇ ಅದರಲ್ಲಿ ಭಾಗವಹಿಸಿದರು. ಕಷ್ಟದಲ್ಲಿರುವವರಿಗೆ  ನೆರವಾಗಲು  ಹಗಲಿರುಳೂ  ದುಡಿದರು.
ಪ್ರಜೆಗಳ ಹರ್ಷಗಳೇನು, ಬಾಧ್ಯತೆಗಳೇನು, ಸಮಾಜದಲ್ಲಿನ ಕುಂದುಕೊರತೆಗಳೇನು, ಅವನ್ನು ಸರಿಪಡಿಸುವುದು ಹೇಗೆ? ಇವೆಲ್ಲ ಪ್ರಶ್ನೆಗಳನ್ನು ವಿದ್ಯಾವಂತರು ಸೇರಿ ಚರ್ಚಿಸುವುದು ಅಗತ್ಯ ಎಂದು ಅವರಿಗೆ ಎನ್ನಿಸಿತು. ಅವರೂ ಅವರ ಸ್ನೇಹಿತರೂ ಸೇರಿ ಇದಕ್ಕಾಗಿ ನಾಗರಿಕ ಮತ್ತು ಸಾಮಾಜಿಕ ಪ್ರಗತಿ ಸಂಘಎಂಬ ಸಂಘವನ್ನೇ ಸ್ಥಾಪಿಸಿದರು. ಮೊದಲಿನಿಂದಲೂ ವೆಂಕಟಕೃಷ್ಣಯ್ಯನವರು ಸಾಹಿತ್ಯ ಪ್ರಿಯರು. ಸ್ವತಃ ಕನ್ನಡದಲ್ಲಿ ಅನೇಕ ಪುಸ್ತಕಗಳನ್ನು ಬರೆದರು. ಆರೋಗ್ಯ ವಿಧಾನ ಪ್ರಕಾಶಿಕಎಂಬ ಪುಸ್ತಕ ಆರೋಗ್ಯವನ್ನು ಕಾಪಾಡಿಕೊಳ್ಳುವ ರೀತಿಯನ್ನು ಸರಳ ಶೈಲಿಯಲ್ಲಿ ವಿವರಿ ಸುತ್ತದೆ. ಬೂಕರ್ ಟಿ.ವಾಷಿಂಗ್‌ಟನ್ ಚರಿತ್ರೆಎಂಬುದು ಅಮೆರಿಕದ ಬಹು ದೊಡ್ಡ ವ್ಯಕ್ತಿಯೊಬ್ಬನ ಜೀವನ ಚರಿತ್ರೆ. ವಿದ್ಯಾರ್ಥಿ ಕರಭೂಷಣವಿದ್ಯಾರ್ಥಿಗಳಿಗೆ, ಉಪಾಧ್ಯಾಯರಿಗೆ, ತಂದೆ ತಾಯಿಯರಿಗೆ ನೆರವಾಗುವ ಪುಸ್ತಕ.

ವೆಂಕಟಕೃಷ್ಣಯ್ಯನವರು ಬರೆದ ನವೀನ ಭರತಖಂಡಎಂಬ ಪುಸ್ತಕ ಆಸಕ್ತಿಯನ್ನುಂಟುಮಾಡುವ ಕೃತಿ.  ನವೀನ ಭರತಖಂಡಸಂಭಾಷಣೆಗಳ ಸಂಗ್ರಹ. ಒಂದೊಂದು ಭಾಗದಲ್ಲಿ ಎರಡು ಮೂರು ಪಾತ್ರಗಳ ಸಂಭಾಷಣೆ. ಯಾವ ನಂಬಿಕೆಯನ್ನೂ ಸ್ವಂತ ಯೋಚನೆ ಇಲ್ಲದೆ ಸ್ವೀಕರಿಸಬಾರದು ಎಂಬುದು ಎಲ್ಲ ಸಂಭಾಷಣೆಗಳ ಕೇಂದ್ರ ತತ್ವ.

ಕನ್ನಡ ನಾಡು, ನುಡಿಗಳಿಗಾಗಿ ದುಡಿಯುವ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾಯಿತು. ವೆಂಕಟಕೃಷ್ಣಯ್ಯನವರು ಈ ಸಂಸ್ಥೆಯ ಕೆಲಸದಲ್ಲಿ ಸಹಕರಿಸಿದರು. 1922ರಲ್ಲಿ ದಾವಣಗೆರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು.

ಈ ಮಹಾನ್ ಸಾಧಕರು 1933ನೇ ಇಸವಿ ನವೆಂಬರ್ 8ರಂದು ನಿಧನರಾದರು.  ಈ ಮಹಾನ್  ಚೇತನಕ್ಕೆ  ನಮ್ಮ ನಮನ.


ವಿಷಯ ಕೃಪೆ:  ಬಿ.ಎಸ್.ಸ್ವಾಮಿ, ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ, ಮುಖ್ಯ ಸಂಪಾದಕರು: ಎಲ್. ಎಸ್. ಶೇಷಗಿರಿರಾವ್ (ಕಂಡದ್ದು: 'ಕಣಜ'ದಲ್ಲಿ)

Tag: M. Venkatakrishnaiah

ಕಾಮೆಂಟ್‌ಗಳಿಲ್ಲ: