ಬುಧವಾರ, ಆಗಸ್ಟ್ 28, 2013

ನೇಮಿಚಂದ್ರ

ನೇಮಿಚಂದ್ರ

ನೇಮಿಚಂದ್ರ ಕನ್ನಡದ ವೈಶಿಷ್ಟ್ಯಪೂರ್ಣ ಕತೆಗಾರ್ತಿ.   ಸಣ್ಣಕತೆ, ಕಾದಂಬರಿ ಹಾಗೂ ವಿಚಾರಪೂರ್ಣ ಲೇಖನಗಳ ಮೂಲಕ ಕಳೆದ ಮೂರು ದಶಕಗಳಲ್ಲಿ ಕನ್ನಡಿಗರಿಗೆ ಚಿರಪರಿಚಿತರಾಗಿರುವ ನೇಮಿಚಂದ್ರ ಅವರು ಹುಟ್ಟಿದ್ದು ಜುಲೈ 16, 1959ರಂದು.  ಓದಿದ್ದು ಇಂಜಿನಿಯರಿಂಗ್, ಮುಂದೆ ಎಂ. ಎಸ್ ಮಾಡಿ ಬೆಂಗಳೂರಿನ  ವಿಮಾನ  ಕಾರ್ಖಾನೆಯಾದ  ಎಚ್ಎಎಲ್ ಸಂಸ್ಥೆಯಲ್ಲಿ  ತಂತ್ರಜ್ಞ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಾ  ಪ್ರಸಕ್ತದಲ್ಲಿ  ನಿರ್ದೇಶಕ  ಹುದ್ದೆಯನ್ನು  ಅಲಂಕರಿಸಿದವರಾಗಿದ್ದರೂ   ಕನ್ನಡದಲ್ಲಿ ಅವರ ಚಿಂತನಪೂರ್ಣ ಅಲೆಯುವ ಮನ ಸಾಕಷ್ಟನ್ನು ಸಾಧಿಸಿ ಅಪಾರ ಓದುಗ ಬಳಗವನ್ನು ಸೃಷ್ಟಿಸಿಕೊಂಡಿದೆ.

ನೇಮಿಚಂದ್ರರ ಕತೆಗಳನ್ನು ಅವರ ಪ್ರಬುದ್ಧ ಭಾಷೆಯಲ್ಲಿ ಎಂಭತ್ತರ ದಶಕದಲ್ಲೇ ಓದಿದ್ದ ನೆನಪಿದೆ.  ಹಾಗಾಗಿ ಅವರು ತಮ್ಮ ಓದಿನ ದಿನಗಳಲ್ಲೇ ಬರವಣಿಗೆಯನ್ನು ಪ್ರಾರಂಭಿಸಿರಬೇಕು.  ಇಂದು ಅವರು ಕ್ರಮಿಸಿರುವ ಹಾದಿ ವಿಶಾಲವಾದದ್ದು.  ನೇಮಿಚಂದ್ರರ ಕಥೆಗಳುಒಂದು ದೊಡ್ಡ ಸಂಕಲನವಾಗಿ ಹೊರಬಂದಿದೆ. ಹಿಂದೆ ಬಿಡಿ ಸಂಕಲನಗಳಾಗಿ ನಮ್ಮ ಕನಸುಗಳಲ್ಲಿ ನೀವಿದ್ದೀರಿ’, ‘ಮತ್ತೆ ಬರೆದ ಕಥೆಗಳು’, ‘ಕಳೆಯ ಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆಇತ್ಯಾದಿ ರೂಪಗಳಲ್ಲಿ ಬಂದ ಈ ಸಂಕಲನದಲ್ಲಿನ ಕಥೆಗಳು  ಓದುಗರನ್ನು ಅಪಾರವಾಗಿ ಸೆಳೆದಿವೆ. 

ನೇಮಿಚಂದ್ರ ಕಾದಂಬರಿಗಳೂ ಅಪಾರವಾದ ಜನಪ್ರಿಯತೆ ಗಳಿಸಿಕೊಂಡಿವೆ.  ವಿಜ್ಞಾನದ ವಸ್ತಗಳನ್ನು ಒಳಗೊಂಡ ಅವರ ಕಥಾ ಹರಹು ಕನ್ನಡ ಸಾಹಿತ್ಯ ಲೋಕಕ್ಕೇ ಒಂದು ಮೆರುಗು ತಂದಿದೆ.  ಯಾವುದೇ ಒಂದು ಕಥಾ ವಸ್ತುವನ್ನು ರೂಪಿಸುವಾಗ ಅದರ ಹಿನ್ನಲೆಯನ್ನು ಅತ್ಯಂತ ಸನಿಹದಲ್ಲಿ ಅನುಭಾವಿಸಿ ಬರೆಯುವುದಕ್ಕಾಗಿ ಅವರು ನಡೆಸಿದ ತಿರುಗಾಟ ಮತ್ತು ಅಭಿವ್ಯಕ್ತಿಸಿರುವ ರೀತಿ ಅಚ್ಚರಿ ಹುಟ್ಟಿಸುವಂತದ್ದು.  ಮೆಚ್ಚುವಂತದ್ದು.  ಇದಕ್ಕೊಂದು ಉದಾಹರಣೆ ಕನ್ನಡಿಗರ ಮಾನಸದಲ್ಲಿ ಭಿತ್ತಿಗೊಂಡಿರುವ ನೇಮಿಚಂದ್ರರ ಯಾದ್ ವಶೇಮ್’.  ಮಹಾಯುದ್ಧ ಕಾಲದ ಹಿನ್ನಲೆಯನ್ನು ಇಟ್ಟುಕೊಂಡು ಚಿತ್ರಿತವಾಗಿರುವ ಈ ಕಥೆಯಲ್ಲಿನ ಹುಡುಗಿ ಅಂದಿನ ನಾಜಿ ರಕ್ಕಸರ ಕೈಯಿಂದ ತಪ್ಪಿಸಿಕೊಂಡು ನಮ್ಮ ಹಳೆಯ ಬೆಂಗಳೂರಿನಲ್ಲಿ ಬೆಳೆಯುತ್ತಾಳೆ.  ತನ್ನ ಕಳೆದುಹೋದ ಕುಟುಂಬವನ್ನು ಅರಸುತ್ತ ಹೊರಟ ಈ ಹುಡುಗಿ ಜರ್ಮನಿ, ಅಮೆರಿಕವನ್ನು ಸುತ್ತಿ, ಕಡೆಗೆ ಯುದ್ಧಗ್ರಸ್ಥವಾದ ಇಸ್ರೇಲ್ - ಪ್ಯಾಲೆಸ್ಟೇನಿನ ವಾತಾವರಣದಲ್ಲಿ ಬಂದಿಳಿಯುವುದು  ಚಿಂತನಪೂರ್ಣ, ಮತ್ತು ಅದು ಓದಿಸಿಕೊಂಡು ಹೋಗುವ ರೀತಿಯಲ್ಲಿಯೇ  ಹೇಳುವುದಾದರೆ ರೋಚಕ ಚಿತ್ರಣವಾಗಿದೆ.  ಇದಕ್ಕಾಗಿ ನೆಮಿಚಂದ್ರರು ಕೈಯಿಂದ ಖರ್ಚುಮಾಡಿಕೊಂಡು ಎಲ್ಲೆಲ್ಲೂ ಅಲೆದಿದ್ದಾರೆ.  ಅದಕ್ಕೂ ಮಿಗಿಲಾಗಿ ತಮ್ಮ ಆಂತರ್ಯದ ಆಳದಲ್ಲಿ ಹೃದಯಕ್ಕೆ ಮಾತ್ರ ಕಾಣಬಹುದಾದದ್ದನ್ನು  ಕಾಣುವ ಸುದೀರ್ಘ ಪ್ರಯಾಣ ಮಾಡಿದ್ದಾರೆ.

ನೇಮಿಚಂದ್ರರ ವೈಜ್ಞಾನಿಕ ಬರಹಗಳಲ್ಲಿ ಜೀವನ ಚರಿತ್ರೆಗಳು ವಿಶೇಷವೆನಿಸುತ್ತವೆ.  ಮೇರಿ ಕ್ಯೂರಿ’,  ವೆಲ್ಲೂರು ಆಸ್ಪತ್ರೆಯ ಸಂಸ್ಥಾಪಕರಾದ ಡಾ. ಇಡಾ  ಸ್ಕಡರ್’, ‘ಥಾಮಸ್ ಆಲ್ವ ಎಡಿಸನ್’, ‘ನೊಬೆಲ್ ವಿಜೇತ ಮಹಿಳೆಯರು’, ‘ಮಹಿಳಾ ವಿಜ್ಞಾನಿಗಳು, ‘ಜೇನ್ ಗುಡಾಲ್’ ಜನಪ್ರಿಯವೆನಿಸಿವೆ. 

ನೇಮಿಚಂದ್ರರ ಚಿಂತನಶೀಲ ಮನಸ್ಸು ವೈವಿಧ್ಯಪೂರ್ಣವಾಗಿದ್ದು ಸಾಮಾಜಿಕ ಚಿಂತನೆಗಳಲ್ಲೂ ಅಪಾರವಾದ ಪಾತ್ರ ನಿರ್ವಹಿಸಿವೆ. ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರುಈ ನಿಟ್ಟಿನಲ್ಲಿ ಒಂದು ಗಮನಾರ್ಹ ಕೃತಿ.   ನನ್ನ ಕಥೆ, ನಮ್ಮ ಕಥೆಎಂಬುದು ಮಹಿಳೆಯೊಬ್ಬಳು ಮನೆಯಲ್ಲಿನ ದೌರ್ಜನ್ಯದ ವಿರುದ್ಧ ಬಂಡೇಳುವ ಕಥೆಯೊಂದರ ಅನುವಾದವಾಗಿದೆ.  ಹೇಮಲತಾ ಮಹಿಷಿ ಅವರೊಡನೆ ಅವರು ನಿರೂಪಿಸಿರುವ  ನ್ಯಾಯಕ್ಕಾಗಿ ಕಾದ ಭಾಂವ್ರಿ ದೇವಿ ಕಥೆನಮ್ಮನ್ನು ಅಲುಗಿಸುವಂತದ್ದು.  ಬಾಲ್ಯವಿವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾನು  ಮಾಡಿದ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕೆಲಸಕ್ಕಾಗಿ, ರಾಕ್ಷಸೀಯ ದೌರ್ಜನ್ಯಕ್ಕೆ ಬಲಿಯಾದ ಭಾಂವ್ರಿ ದೇವಿ ಅವರು  ನ್ಯಾಯಕ್ಕಾಗಿ ಕಾದು ಕುಳಿತ ಕಥೆನಮ್ಮ ಸಮಾಜದ ಹಿತ್ತಲಿನ ಸಾಮ್ರಾಜ್ಯದ ಕರಾಳತೆಯನ್ನು ರಾಚಿಸುವಂತಿದೆ.

ಸ್ವಾತಂತ್ರ ಪೂರ್ವದ ಕನ್ನಡದ ಮಹಾನ್ ಕವಯತ್ರಿ ಬೆಳೆಗೆರೆ ಜಾನಕಮ್ಮ’, ‘ನೋವಿಗದ್ದಿದ ಕುಂಚಎಂಬ ಮಹಾನ್ ಡಚ್ ಕಲಾವಿದ ವ್ಯಾನ್ ಗೋನ ಅವರ ಜೀವನ ಚರಿತ್ರೆ ಇವೆಲ್ಲಾ ನೇಮಿಚಂದ್ರ ಇನ್ನಿತರ ವಿಶಾಲ ಆಸಕ್ತಿಗಳನ್ನು ತೋರುತ್ತವೆ.

ಒಂದು ಕನಸಿನ ಪಯಣ’, ‘ಪೆರುವಿನ ಪವಿತ್ರ ಕಣಿವೆಯಲ್ಲಿಕೃತಿಗಳು  ನೇಮಿಚಂದ್ರರ ಪ್ರವಾಸ ಕಥನಗಳಾಗಿವೆ.  ನೇಮಿಚಂದ್ರರ ವಿಚಾರ ಪೂರ್ಣ ಲೇಖನಗಳಾದ ಸಾಹಿತ್ಯ ಮತ್ತು ವಿಜ್ಞಾನ’, ‘ಬದುಕು ಬದಲಿಸಬಹುದು’, ‘ಸಾವೇ ನಾಳೆ’, ‘ಸೋಲೆಂಬುದು  ಅಲ್ಪ ವಿರಾಮ’, ದುಡಿವ ಹಾದಿಯಲ್ಲಿ ಜೊತೆಯಾಗಿ’, ‘ಮಹಿಳಾ ಅಧ್ಯಯನ’, ‘ನಿಮ್ಮ ಮನೆಗೊಂದು ಕಂಪ್ಯೂಟರ್,  ‘ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೋಟರ್ಸ್’ , ‘ಮಹಿಳಾ ಲೋಕ’ (ಸಂಪಾದಿತ) ಇವೆಲ್ಲಾ ನೇಮಿಚಂದ್ರರ ಚಿಂತನಪೂರ್ಣ ಬರಹಗಳ ಮತ್ತಷ್ಟು  ವಿಶಾಲತೆಆಳ, ಬದುಕಿನ ಕುರಿತಾದ ವಿಶಾಲ ದೃಷ್ಟಿಗಳನ್ನು ಅಭಿವ್ಯಕ್ತಿಸುತ್ತವೆ.

ನೇಮಿಚಂದ್ರರು 'ತರಂಗ' ಮುಂತಾದ ನಿಯತಕಾಲಿಕೆಗಳಲ್ಲಿ  ಆಗಾಗ ನಡೆಸಿರುವ ಸಂದರ್ಶನ ಲೇಖನಗಳು, ‘ಉದಯವಾಣಿಮುಂತಾದ ಪತ್ರಿಕೆಗಳಲ್ಲಿ  ಮೂಡುತ್ತಿರುವ ಅಂಕಣಗಳು  ಕೂಡಾ ಸುದೀರ್ಘ ವ್ಯಾಪ್ತಿಯ ಆಳದ್ದಾಗಿವೆ.

ನೇಮಿಚಂದ್ರರ 'ಬೆಳಕಿನೊಂದು ಕಿರಣ ಮೇರಿ ಕ್ಯೂರಿ', 'ಪೆರುವಿನ ಪವಿತ್ರ ಕಣಿವೆಯಲ್ಲಿ' ಮತ್ತು 'ಯಾದ್ ವಶೇಮ್' ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. ಯಾದ್ ವಶೇಮ್ಕೃತಿಗೆ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ 2009ಅಕ್ಕಪ್ರಶಸ್ತಿ,  ಸೃಜನಶೀಲ  ಹಾಗೂ  ಚೈತನ್ಯಶೀಲ  ಮಹಿಳಾಮಣಿಗಳಿಗೆ  ಸಲ್ಲುವ  ‘ದೇವಿ  ಪ್ರಶಸ್ತಿ’, ‘ಡಾ. ಕೃಷ್ಣಾನಂದ ಕಾಮತ ಸ್ಮರಣಾರ್ತ ಪ್ರಶಸ್ತಿ’   ಮುಂತಾದ  ಅನೇಕ   ಪ್ರಶಸ್ತಿಗೌರವಗಳು ಸಹಾ ಲಭಿಸಿವೆ.


ನೇಮಿಚಂದ್ರರು ಕ್ರಮಿಸಿರುವ ಹಾದಿ ದೊಡ್ಡದು.  ಇನ್ನೂ ಹೆಚ್ಚು ಕ್ರಮಿಸಿ ನಮಗೆ ಮತ್ತಷ್ಟು ವೈವಿಧ್ಯಪೂರ್ಣ ಬದುಕಿನ ದರ್ಶನಗಳನ್ನು ನೀಡುತ್ತಿರುತ್ತಾರೆ ಎಂಬುದು ಅವರ ಆತ್ಮೀಯ  ಓದುಗರಿಗೆ ತಿಳಿದಿದೆ.  ನೇಮಿಚಂದ್ರರಿಗೆ ಹೃತ್ಪೂರ್ವಕವಾದ ಹುಟ್ಟು ಹಬ್ಬದ ಶುಭ ಹಾರೈಕೆಗಳು.  ನಿಮ್ಮ ಬದುಕು ಆರೋಗ್ಯ, ಸಂತಸ, ಸೌಭಾಗ್ಯ, ಸಂಪದಗಳಿಂದ ನಳನಳಿಸುತ್ತಿರಲಿ.

Tag: Nemichandra

ಕಾಮೆಂಟ್‌ಗಳಿಲ್ಲ: