ಸೋಮವಾರ, ಆಗಸ್ಟ್ 26, 2013

ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ

ಕಿತ್ತೂರು ಸಂಸ್ಥಾನಕ್ಕೆ ಸೇರಿದ್ದ ಸಂಗೊಳ್ಳಿ ಗ್ರಾಮದವನಾಗಿದ್ದ ರಾಯಣ್ಣ ಕಿತ್ತೂರು ದೇಸಾಯಿಗಳ ಸಶಸ್ತ್ರ ಅನುಚರನಾಗಿದ್ದ ಹಾಗೂ ಸೈನ್ಯದಿಂದ ಹಲವು ಎಕರೆ ಜಮೀನನ್ನು ಗುತ್ತಿಗೆ ಮೇಲೆ ಪಡೆದಿದ್ದ ರೈತನಾಗಿದ್ದ. ಅವನು ಹಳ್ಳಿಯ ಕಾವಲುಗಾರ ಕೂಡ ಆಗಿದ್ದ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ಚೆನ್ನಮ್ಮ ದಂಗೆ ಎದ್ದಾಗ ಅದರಲ್ಲಿ ಭಾಗವಹಿಸಿದ್ದ ಐದು ಸಾವಿರ ಸಶಸ್ತ್ರ ಹೋರಾಟಗಾರರಲ್ಲಿ ಆಗಿನ್ನೂ 29 ವರ್ಷದವನಾಗಿದ್ದ ಸಂಗೊಳ್ಳಿ ರಾಯಣ್ಣ ಕೂಡ ಒಬ್ಬನಾಗಿದ್ದ.

ಕಿತ್ತೂರು ಬಂಡಾಯ ಹತ್ತಿಕ್ಕಲ್ಪಟ್ಟಾಗ ರಾಯಣ್ಣ ಬ೦ಧಿತನಾಗಿದ್ದ.  1826ರಲ್ಲಿ ಎಲ್ಲ ಬಂಧಿತರಿಗೂ ಸಾರ್ವತ್ರಿಕ ಕ್ಷಮೆ ನೀಡಿ, ಎಚ್ಚರಿಕೆಯೊಂದಿಗೆ ಬಿಡುಗಡೆ ಮಾಡಿದಾಗ ರಾಯಣ್ಣ ಕೂಡ ಹೊರಬಂದಿದ್ದ. ಬೈಲಹೊಂಗಲದಲ್ಲಿ ಚೆನ್ನಮ್ಮರನ್ನು ಸೆರೆಯಲ್ಲಿಟ್ಟಿದ್ದಾಗ ತಾನು ಆಕೆಯ ದೂರದ ಸಂಬಂಧಿ ಎಂಬ ನೆಪದಲ್ಲಿ ಸಂಗೊಳ್ಳಿ ರಾಯಣ್ಣ ಆಕೆಯನ್ನು ಜೈಲಿನಲ್ಲಿ ಭೇಟಿ ಕೂಡ ಆಗಿದ್ದ. ಕಿತ್ತೂರನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಳ್ಳಬೇಕೆಂಬ ಕಿಚ್ಚು ಆತನಲ್ಲಿ ಹುಟ್ಟಿದ್ದೇ ಚೆನ್ನಮ್ಮರನ್ನು ಜೈಲಿನಲ್ಲಿ ಕಂಡಿದ್ದರಿಂದ.

ಸಂಗೊಳ್ಳಿಗೆ ಹಿಂದಿರುಗಿದ ರಾಯಣ್ಣನಲ್ಲಿ ಜಮೀನ್ದಾರಿ ‍- ಸಾಮ್ರಾಜ್ಯಶಾಹಿಗಳ ಬಗೆಗಿನ ಕೋಪ ದ್ವಿಗುಣಗೊಳ್ಳಲಾರಂಭಿಸಿತು. ಬಾಂಬೆ ವಲಯದ ಆಡಳಿತಕ್ಕೆ ಸಂಗೊಳ್ಳಿ ಗ್ರಾಮ ಸೇರಿದ ನಂತರ ಬ್ರಿಟಿಷ್ ಕಂಪನಿಯ ಖದೀಮರು ಭೂಕಂದಾಯ ಸುಲಿಯುವ ಕಾರ್ಯಕ್ಕೆ ಕೈ ಹಾಕಿದರು. ಜಮೀನ್ದಾರಿ ಪದ್ಧತಿಯ ಕ್ರೌರ್ಯಕ್ಕೂ ‍ ಸಾಮ್ರಾಜ್ಯಶಾಹಿಗಳ ಷಡ್ಯಂತ್ರಕ್ಕೂ ಅವಿನಾಭಾವ ಸಂಬಂಧವಿದ್ದುದರಿಂದ ಕರ್ನಾಟಕದ ಬಡ ಜನತೆಯ ಮೇಲೆ ಊಳಿಗಮಾನ್ಯ ವ್ಯವಸ್ಥೆಯ ಹಿಡಿತ ಭದ್ರಗೊಂಡಿತ್ತು. ಸ್ಥಳೀಯ ಕುಲಕರ್ಣಿಯ ಕುತಂತ್ರದಿಂದಾಗಿ ರಾಯಣ್ಣನ ಅರ್ಧ ಜಮೀನು ಖಬ್ಜವಾದರೆ ಇನ್ನುಳಿದ ಅರ್ಧ ಜಮೀನಿನ ಮೇಲೆ ದೊಡ್ಡ ಮೊತ್ತದ ಕಂದಾಯವನ್ನು ವಿಧಿಸಲಾಯಿತು. ಸಂಗೊಳ್ಳಿಯ ಮುನ್ಟಗುಟ್ಟೆ ಎಂಬ ಮತ್ತೋರ್ವ ಸಶಸ್ತ್ರ ಅನುಚರನ ಕತೆಯೂ ಅದೇ ಆಗಿದ್ದಿರಬಹುದು. ರಾಯಣ್ಣನೇ ದಾಖಲಿಸಿರುವಂತೆ "ಹಳ್ಳಿಯ ಕುಲಕರ್ಣಿಯೊಂದಿಗೆ ನಡೆದ ಜಗಳದಿಂದಾಗಿ ಬೇಸತ್ತು" ರಾಯಣ್ಣ ಮತ್ತು ಮುನ್ಟಗುಟ್ಟೆ ತಮ್ಮ ಜಮೀನನ್ನು ಕಳೆದುಕೊಂಡರಲ್ಲದೇ, ಊರಿನಲ್ಲಿ ಸುರಕ್ಷಿತವಾಗಿ ಬದುಕುವುದೂ ಅಸಾಧ್ಯವಾಗಿ ಸಂಗೊಳ್ಳಿಯನ್ನೇ ಬಿಟ್ಟು ಹೋಗಬೇಕಾಯಿತು.

ಕಿತ್ತೂರು ಸಂಸ್ಥಾನವನ್ನು ಚೆನ್ನಮ್ಮನ ದತ್ತು ಪುತ್ರನಿಗೆ ನೀಡಬೇಕೆಂಬುದು ರಾಯಣ್ಣನ ರಾಜಕೀಯ ಹಕ್ಕೊತ್ತಾಯವಾಗಿದ್ದು ಅದು ಊಳಿಗಮಾನ್ಯ ವ್ಯವಸ್ಥೆಯ ಪರವಾಗಿದ್ದಂತೆ ಮೇಲುನೋಟಕ್ಕೆ ಕಂಡುಬಂದರೂ; ವಾಸ್ತವವಾಗಿ ಆತ ಆಗಿನ್ನೂ ಅಸ್ಪಷ್ಟವಾಗಿದ್ದ ಊಳಿಗಮಾನ್ಯ ‍ ಸಾಮ್ರಾಜ್ಯಶಾಹಿ ವಿರುದ್ಧದ ಆಕಾಂಕ್ಷೆಗಳನ್ನು ವ್ಯಕ್ತಪಡಿಸಲಾರಂಭಿಸಿದ್ದ. ಕಂದಾಯ ಇಲಾಖೆ ರೈತರ ಮೇಲೆ ಹೇರಿದ್ದ ಸುಸ್ತಿ ಬಡ್ಡಿಯನ್ನು ವಿರೋಧಿಸುತ್ತಿದ್ದ ರಾಯಣ್ಣ ಬಡ ರೈತರಿಗೂ, ದಾರಿದ್ರ್ಯದಲ್ಲಿ ಮುಳುಗಿದ್ದ ಒಕ್ಕಲು ಜನರಿಗೂ ಭೂ ಹಂಚಿಕೆಯಾಗಬೇಕು ಎಂಬ ಧೋರಣೆ ತಾಳಿದ್ದ.

ರೈತ ಮತ್ತು ಸೈನಿಕ ಎರಡೂ ಆಗಿದ್ದ ರಾಯಣ್ಣ ಊಳಿಗಮಾನ್ಯ ವ್ಯವಸ್ಥೆಯ ಪರವಾಗಿ ಸಶಸ್ತ್ರನಾಗಿದ್ದರೂ, ಆತನ ಅಂತಃಸಾಕ್ಷಿ ಬಲಿಷ್ಠ ಜಮೀನ್ದಾರಿ ಪದ್ಧತಿ ಮತ್ತು ಸಾಮ್ರಾಜ್ಯಶಾಹಿಗಳ ವಿರುದ್ಧವೂ ಆಗಿದ್ದುದರಿಂದ ಆತನ ಹೋರಾಟ ಮೂಲಭೂತವಾಗಿ ಬಡ ಒಕ್ಕಲು ಸಮುದಾಯದ ಪರವಾಗಿತ್ತು. ಆತನ ಈ ಉದ್ದೇಶ ಮತ್ತು ನಿಷ್ಕರ್ಷೆಗಳು ಆತನ ಈ ಉದ್ದೇಶಯಾಗಿದ್ದರಿಂದಲೇ ಸಮುದಾಯದ ಅಂಚಿನಲ್ಲಿದ್ದವರೂ ಆತನೊಂದಿಗೆ ಕೈಗೂಡಿಸುವಂತಾದದ್ದು. ರಾಯಣ್ಣನ ಸಂಗ್ರಾಮ ಕೇವಲ ನಾಲ್ಕೇ ತಿಂಗ’ಳು ನಡೆಯಿತಾದರೂ ಈ ಅಲ್ಪಾವಧಿಯಲ್ಲಿ ಯಾವ ರಾಜ ‍ ರಾಣಿಯರಿ೦ದಲೂ ಸಾಧ್ಯವಾಗದಷ್ಟು ಜನರನ್ನು ಆತ ಅಣಿಗೊಳಿಸಿ ಜಾಗೃತಗೊಳಿಸಿದ್ದನು.

ಜನಸಾಮಾನ್ಯರಿಗೆ ಸಲ್ಲಬೇಕಾದ ನ್ಯಾಯದ ಬಗ್ಗೆ ರಾಯಣ್ಣನಲ್ಲಿ ಕಳಕಳಿ ಇತ್ತು. ಸಾಮಾನ್ಯ ಜನರ ಬಗ್ಗೆ ಆತನಲ್ಲಿ ಎಷ್ಟು ಅಭಿಮಾನವಿತ್ತೆಂದರೆ ಅವರನ್ನು ಆತ ಗೌರವದಿಂದ ಕಾಣುತ್ತಿದ್ದ. ತನ್ನ ಸೈನ್ಯಾಧಿಕಾರಿಗಳಾಗಲೀ, ಸೈನಿಕರಾಗಲೀ ಜನರ ಮೇಲೆ ಅತ್ಯಾಚಾರಗಳನ್ನು ಎಸಗದಂತೆ ಎಚ್ಚರ ವಹಿಸುತ್ತಿದ್ದ; ಹಾಗೆ ಎಸಗಿದಾಗ ತನ್ನ ಸೈನಿಕರಿಗೇ ಶಿಕ್ಷೆಯನ್ನು ವಿಧಿಸುತ್ತಿದ್ದ. ಉದಾಹರಣೆಗೆ ಬಾಪು ಭಂಡಾರಿ ಎಂಬ ಸೈನ್ಯಾಧಿಕಾರಿ ಹಡಲಗಿ ಮೇಲೆ ದಾಳಿ ನಡೆಸಿದಾಗ, ಮುದುಕನೊಬ್ಬನ ಮಕ್ಕಳು ಮತ್ತು ಜಾನುವಾರುಗಳು ಬೆಂಕಿಯಲ್ಲಿ ಸಿಕ್ಕಿ ಭಸ್ಮವಾಗಿದ್ದರು. ಇದು ರಾಯಣ್ಣನಿಗೆ ಗೊತ್ತಾದ ತಕ್ಷಣ ಆ ಮುದುಕನಿಗೆ ಪರಿಹಾರ ಧನವನ್ನು ನೀಡಿದ್ದ. ಹಾಗೆಯೇ  ಮಹಿಳೆಯೊಬ್ಬಳು ಬಾಪು ಭಂಡಾರಿ ತನ್ನ ಗಂಡನನ್ನು ಕಟ್ಟಿ ಹಾಕಿ ಸಾಯಿಸುವುದಾಗಿ ಬೆದರಿಸುತ್ತಿದ್ದಾನೆ ಎಂದು ಕಣ್ಣೀರಿಟ್ಟಾಗ ತಕ್ಷಣವೇ ಆತನನ್ನು ಬಿಡುಗಡೆ ಮಾಡಬೇಕೆಂದು ರಾಯಣ್ಣ ಆದೇಶಿಸಿದ್ದ. ಆದರೆ ಈತನ ಆದೇಶ ಮುಟ್ಟುವ ಮುನ್ನವೇ ದುರಂತ ಸಂಭವಿಸಿತ್ತು.

ಅದಾದ ನಂತರ ಬಾಪು ಭಂಡಾರಿಗೆ ಶಿಕ್ಷೆಯನ್ನು ವಿಧಿಸಲಾಗಿ ರಾಯಣ್ಣನ ಸಂಗಡಿಗನೊಬ್ಬ ಕೊಟ್ಟ ಹೊಡೆತದಿಂದಲೇ ಆತ ಅಸುನೀಗಿದ್ದ. ರಾಯಣ್ಣ ಬಿಟ್ಟು ಹೋಗಿರುವ ಹೇಳಿಕೆಗಳಿಂದ ಆತ ಸಂಗ್ರಹಿಸಿದ್ದ ಅಥವಾ ವಶಪಡಿಸಿಕೊ೦ಡಿದ್ದ ಹಣದ ಲೆಕ್ಕವನ್ನು ದಕ್ಷತೆಯಿಂದ ನಿರ್ವಹಿಸಿದ್ದ ಎಂದು ಗೊತ್ತಾಗುತ್ತದೆ. ಹಾಗೆಯೇ ಆ ಹಣವನ್ನು ತನ್ನ ಸೈನಿಕರ ಆಹಾರಕ್ಕೆ ಮಾತ್ರ ವಿನಿಯೋಗಿಸಿದ್ದ ಎಂಬುದು ಕೂಡ ಮನದಟ್ಟಾಗುತ್ತದೆ. ರಾಯಣ್ಣ ಎಂದೂ ಕೊಳ್ಳೆ ಹೊಡೆಯಲಿಲ್ಲ, ಕದಿಯಲಿಲ್ಲ.

ಬಡ ರೈತಾಪಿಗಳಿಂದ ದೂರವೇ ಉಳಿಯುತ್ತಿದ್ದ ಜಮೀನ್ದಾರರನ್ನು ಹೊರತುಪಡಿಸಿ ರಾಯಣ್ಣ ಸಂಘಟಿಸಿದ ಹೋರಾಟ ರೈತಾಪಿಗಳ ಗೆರಿಲ್ಲಾ ಯುದ್ಧಕ್ಕೆ ನಾ೦ದಿ ಹಾಡಿತು. ಈ ಹೋರಾಟದ ಸಾಧನೆ ಎಂತಹದ್ದಾಗಿತ್ತು.

1830ರ ಜನವರಿ 5ರ೦ದು ಬಿಡಿ ಗ್ರಾಮದಲ್ಲಿದ್ದ ಸರ್ಕಾರಿ ಕಛೇರಿಗೆ ಬೆಂಕಿ ಹಚ್ಚುವ ಮೂಲಕ ತನ್ನ ಹೋರಾಟವನ್ನು ರಾಯಣ್ಣ ಪ್ರಾರಂಭಿಸಿದಾಗ ಅಂದು ಆತನೊ೦ದಿಗೆ ಇದ್ದವರ ಸಂಖ್ಯೆ ಕೇವಲ ನೂರು. ಆದರೆ ನಾಲ್ಕು ತಿಂಗಳ ನಂತರ ಏಪ್ರಿಲ್ 8ರಂದು ರಾಯಣ್ಣನ ಬಂಧನವಾದಾಗ ಆತನೊಂದಿಗೆ ಒಂದು ಸಾವಿರ ಬಂಡಾಯಗಾರರಿದ್ದರು. ಈ ಅಂಶವನ್ನು ಧಾರವಾಡದ ಕಲೆಕ್ಟರ್ ಆಗಿದ್ದ ನಿಸ್ಬೆಟ್‌ರವರು ತಮ್ಮ ಪತ್ರದಲ್ಲಿ ಹೀಗೆ ದಾಖಲಿಸಿದ್ದಾರೆ: "ದ೦ಗೆಕೋರರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದ್ದು, ಇದನ್ನು ತಕ್ಷಣವೇ ತಡೆಯದಿದ್ದರೆ ಇನ್ನೂ ಹೆಚ್ಚು ಜನ ಅವರನ್ನು ಸೇರುವುದರಲ್ಲಿ ಯಾವ ಸಂಶಯವೂ ಇಲ್ಲ........"

ಅಮಲ್ದಾರರ ಮುಂದೆ ರಾಯಣ್ಣ ನೀಡಿದ "ತಪ್ಪೊಪ್ಪಿಗೆ" ಹೇಳಿಕೆಯಲ್ಲಿ ಆತ ಹೇಗೆ ತನ್ನ ಹೋರಾಟಕ್ಕೆ ಜನರನ್ನು ಒಗ್ಗೂಡಿಸಿದ ಎಂದು ಕಾಣಬಹುದು; "ಮಲೆನಾಡು ಕ್ಷೇತ್ರದ ಒಂದು ಸಾವಿರ ಜನ ಸೇರಿದರು. ಅವರನ್ನು ಕರೆದೊಯ್ದು ನಾವು ಖಾನಪುರಕ್ಕೆ ಬೆಂಕಿ ಹಚ್ಚಿ ಅಲ್ಲಿ ಕೊಳ್ಳೆ ಹೊಡೆದು ಶಮ್‌ಶೇರ್‌ಗಡ್‌ಗೆ ಹಿಂದಿರುಗಿದೆವು. ಅಂದು ಮೂರು ಸಾವಿರ ಜನ ಸೇರಿಕೊಂಡರು. ಅವರನ್ನು ಇಟಗಿಗೆ ಕರೆದುಕೊಂಡು ಹೋದ ನಾವು ಅಲ್ಲಿನ ಜಮೀನ್ದಾರರಿಂದ ಐದು ಸಾವಿರ ರೂಪಾಯಿಗಳ ಚಂದಾ ಪಡೆದವು."

ಹೀಗೆ ರಾಯಣ್ಣನ ನಾಯಕತ್ವದ ಸಶಸ್ತ್ರ ಹೋರಾಟದಲ್ಲಿ ಜನರನ್ನು ಸಜ್ಜುಗೊಳಿಸಲಾಯಿತು. ಈ ಸೈನ್ಯ ನಡೆಸಿದ ಹಲವಾರು ದಾಳಿಗಳಿಗೆ ಸರ್ಕಾರಿ ಆಸ್ತಿಗಳು, ಭೂಕಂದಾಯ ದಾಖಲೆಗಳು ಗುರಿಯಾದವಲ್ಲದೇ, ಬ್ರಿಟಿಷ್ ಆಡಳಿತದಡಿ ಕುಪ್ರಸಿದ್ಧ ಭೂಮಾಲೀಕರು ಮತ್ತು ಅಧಿಕಾರಿಗಳು ಜನರಿಂದ ವಸೂಲಿ ಮಾಡಿದ್ದ ಹಣವನ್ನೂ ಹಿಂದೆ ಪಡೆಯಲಾಗಿತ್ತು. ಇಂತಹ ಪ್ರಕ್ರಿಯೆಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನಸಾಮಾನ್ಯರು ಪಾಲ್ಗೊಳ್ಳುತ್ತಿದ್ದರಲ್ಲದೇ, ಪ್ರತಿ ದಾಳಿಯ ನಂತರ ಅಲ್ಲಿನ ಜನ ರಾಯಣ್ಣನ ಸೈನ್ಯವನ್ನು ಸೇರುತ್ತಿದ್ದರು. ಅಂದರೆ, ಇದು ಬರಿ ಗೆರಿಲ್ಲಾಗಳ ಯುದ್ಧವಾಗಿರದೆ, ಜನಸಾಮಾನ್ಯರ ಯುದ್ಧವಾಗಿ ಮಾರ್ಪಟ್ಟಿತ್ತು. ಇದಕ್ಕೆ ಸಂಪ್‌ ಗಾಂವ್ ಮೇಲೆ ನಡೆದ ದಾಳಿ ಒಂದು ಉದಾಹರಣೆ ಮಾತ್ರ. ಇಂಥ ಸಶಸ್ತ್ರ ದಾಳಿಗಳು ಜನಸಾಮಾನ್ಯರನ್ನು ಸುಸಜ್ಜಿತಗೊಳಿಸಿದ್ದರಿಂದಲೇ ರಾಯಣ್ಣನ ಸೈನ್ಯ ಬೆಳೆಯಲು ಸಾಧ್ಯವಾಯಿತು.

ರಾಯಣ್ಣನ ಸಶಸ್ತ್ರ ಸಂಗ್ರಾಮಕ್ಕೆ ಜನ ಸಮುದಾಯದ ಅಪಾರ ಬೆಂಬಲವಿತ್ತಲ್ಲದೆ, ಆತನ ಚಲನವಲನದ ಬಗ್ಗೆ ಯಾವ ಮಾಹಿತಿಯನ್ನೂ ಸರ್ಕಾರದ ದೂತರಿಗೆ ನೀಡದಂತೆ ಇತರ ಅನುಚರರೂ ಸಹಕರಿಸಿದ್ದರು. ಸಂಪ್‌ಗಾಂವ್ ಮೇಲೆ ದಾಳಿ ನಡೆಸಿದ ನಂತರ, ರಾಯಣ್ಣನನ್ನು ಹಿಂಬಾಲಿಸಲು ಬ್ರಿಟಿಷರು ಯತ್ನಿಸಿ ವಿಫಲರಾಗಿದ್ದನ್ನು ಕುರಿತು ಕಲೆಕ್ಟರ್ ನಿಸ್ಬೆಟ್‌ನವರು ಹೀಗೆ ದಾಖಲಿಸಿದ್ದಾರೆ. "ಅಮಲ್ದಾರ್ ಮತ್ತು ಇತರರು ಹೇಳುವುದೇನೆಂದರೆ ಆ ಕ್ಷೇತ್ರದಲ್ಲಿನ ಹಳ್ಳಿಗಳ ಜನ ಬಂಡಾಯಗಾರರ ವಿರುದ್ಧ ಯಾವುದೇ ಮಾಹಿತಿಯನ್ನು ನೀಡಲು ತಯಾರಿಲ್ಲ. ಅಷ್ಟೇ ಅಲ್ಲ. ಆ ಹಳ್ಳಿಗರು ಬಂಡಾಯಗಾರರೊ೦ದಿಗೆ ಸಹಕರಿಸಿ, ಅವರಿಗೇ ಮಾಹಿತಿ ನೀಡುತ್ತಿದ್ದಾರಲ್ಲದೇ ಅವರ ದಾಳಿಗಳನ್ನೂ ಬೆಂಬಲಿಸುತ್ತಿದ್ದಾರೆ...."

ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ವ್ಯಾಪಿಸಿದ ಕಿತ್ತೂರು ಭೂಪ್ರದೇಶವನ್ನು ರಾಯಣ್ಣ ತನ್ನ ಗೆರಿಲ್ಲಾ ಯುದ್ಧಕ್ಕೆ ಸೂಕ್ತವಾಗಿ ಬಳಸಿಕೊಂಡನು. ಮಲೆನಾಡಿನ ಕಾಡುಗಳಂತೂ ರಾಯಣ್ಣನ ಸೈನ್ಯಕ್ಕೆ ಭದ್ರಕೋಟೆಯಂತಾಯಿತು. ಜನ ವಿರೋಧಿಗಳಾಗಿದ್ದ ಭೂಮಾಲಿಕರು, ಅಧಿಕಾರಿಗಳು ಮತ್ತು ವಸಾಹತುಶಾಹಿ ಸೈನ್ಯವನ್ನು ಮಾತ್ರ ರಾಯಣ್ಣ ಗುರಿಯಾಗಿಟ್ಟಿದ್ದರಿಂದ ಆತನಿಗೆ ಅಪಾರ ಬೆಂಬಲ ಸಿಕ್ಕಿತ್ತು. ಈ ಕಾರಣದಿಂದಾಗಿಯೇ ರಾಯಣ್ಣನನ್ನು ಯುದ್ಧದ ಮೂಲಕ ಮುಗಿಸಲಾಗುವುದಿಲ್ಲವೆಂದು ಅರಿತ ಸರ್ಕಾರ, ಆತನನ್ನು ಮೋಸದಿಂದಲೇ ಸೆರೆ ಹಿಡಿಯುವ ಸಂಚು ರೂಪಿಸಿತು. ಇದಕ್ಕೆ ಭೂಮಾಲೀಕರ ಮತ್ತು ದುಷ್ಟ ಅಧಿಕಾರಿಗಳ ಬೆಂಬಲ ಸಿಕ್ಕಿತು.

ರಾಯಣ್ಣನ ಸೈನ್ಯ ಸೇರಿ ಒಳಗಿಂದಲೇ ಈ ರೈತ ಸಂಗ್ರಾಮವನ್ನು ನಾಶ ಮಾಡುವ ಜವಾಬ್ದಾರಿಯನ್ನು ಅಮಲ್ದಾರ ಕೃಷ್ಣ ರಾವ್‌ಗೆ ವಹಿಸಲಾಯಿತು. ಖುದ್ನಾಪುರದ ಪಟೇಲ ಲಿಂಗಣ್ಣ ಗೌಡ ತಾನೂ 300ಜನರೊಂದಿಗೆ ರಾಯಣ್ಣನ ಸೈನ್ಯ ಸೇರುವುದಾಗಿ ಸೂಚಿಸಿದ. ಇದಕ್ಕೆ ರಾಯಣ್ಣ ಒಪ್ಪಿ ಮಾರ್ಚ್ ತಿಂಗಳ ಹದಿನೈದು ದಿನಗಳ ಕಾಲ ಲಿಂಗಣ್ಣ ಗೌಡ ಎಲ್ಲ ಗೆರಿಲ್ಲಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ. ಸ್ಟೋಕ್ಸ್ ದಾಖಲಿಸಿರುವ೦ತೆ; "ಒಂದು ದಿನ, ರಾಯಣ್ಣ ತನ್ನ ಶಶ್ತ್ರಾಸ್ತ್ರಗಳನ್ನು ಬದಿಗಿಟ್ಟು ಸ್ನಾನ ಮಾಡುತ್ತಿದ್ದ. ಆಗ ನೇಗಿನಹಾಳದ ಸನಾದಿ ಲಕ್ಕಪ್ಪ ಎಂಬಾತ ಇದ್ದಕ್ಕಿದ್ದಂತೆ ರಾಯಣ್ಣನ ಮೇಲೆರಗಿ ಅವನನ್ನು ಬಂಧಿಸಿದ. ಅದೇ ವೇಳೆಗೆ ಇತರರು ಅವನ ಶಸ್ತ್ರಾಸ್ತ್ರಗಳನ್ನು ಕಟ್ಟಿ ಹಾಕಿ ಆತನನ್ನು ಧಾರವಾಡಕ್ಕೆ ಕರೆತಂದರು."

ರಾಯಣ್ಣನನ್ನು ಬಂಧಿಸಲು ಸಹಾಯ ಮಾಡಿದ್ದಕ್ಕೆ ಕೃಷ್ಣ ರಾವ್‌ಗೆ ನಗದು ಬಹುಮಾನ ನೀಡಲಾಯಿತು. ರೈತರ ಸಂಗ್ರಾಮಕ್ಕೆ ದ್ರೋಹ ಬಗೆದ ಭೂಮಾಲಿಕರಿಗೂ ಪ್ರಶಸ್ತಿಗಳನ್ನು ನೀಡಲಾಯಿತು. ಅವರೆಲ್ಲರಿಗೆ ಮುನ್ನೂರು ರೂಪಾಯಿಗಳ ನಗದು ಸೇರಿದಂತೆ ಇಡೀ ಹಳ್ಳಿಗಳನ್ನೇ ಇನಾಮಾಗಿ ನೀಡಿತು ಬ್ರಿಟಿಷ್ ಸರ್ಕಾರ. ಲಿಂಗಣ್ಣ ಗೌಡನಿಗೆ ಕಿತ್ತೂರು ಸಮೀಪದ ಕಲೊಲಿ ಗ್ರಾಮ ದಕ್ಕಿದರೆ, ಯೆಂಕನ ಗೌಡನಿಗೆ ಧಾರವಾಡದ ಹತ್ತಿರದ ಧೋಂ ಗ್ರಾಮ ದಕ್ಕಿತು. ಆದರೆ ರಾಯಣ್ಣ ಮತ್ತು ಸಂಗಡಿಗರಿಗೆ ಸಿಕ್ಕಿದ್ದು ಮರಣದಂಡನೆ!

ಆದರೂ 1837-38ರಲ್ಲಿ ಕಿತ್ತೂರಿನಲ್ಲಿ ಬಂಡಾಯವೊಂದು ಸಣ್ಣದಾಗಿ ತಲೆ ಎತ್ತಿತ್ತು. ಕಿತ್ತೂರನ್ನು ಅಲುಗಾಡಿಸಿದ ಐದನೇ ಮತ್ತು ಕೊನೆಯ ಬಂಡಾಯ ಅದಾಗಿತ್ತು. ಆ ಬಂಡಾಯವನ್ನೂ ಹತ್ತಿಕ್ಕಲಾಯಿತು. ಆದರೆ ಬಂಡಾಯಕೋರರು ರಾಯಣ್ಣನಿಗೆ ದ್ರೋಹ ಬಗೆದಿದ್ದ ಖುದ್ನಾಪುರದ ಪಟೇಲ ಲಿಂಗಣ್ಣ ಗೌಡನನ್ನು ಕೊಂದುಹಾಕಿದರು. ಸೋಲಿನ ದವಡೆಯಲ್ಲಿದ್ದರೂ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಜನಸಮುದಾಯ ಆಕ್ರೋಶಭರಿತರಾಗಿದ್ದರೂ ಹೇಗೆ ತಾಳ್ಮೆಯಿಂದ ಕಾದಿದ್ದು ತಮ್ಮ ಹಠ ಸಾಧಿಸುತ್ತಾರೆ ಎಂದು ಮತ್ತೊಮ್ಮೆ ಕರ್ನಾಟಕದ ಇತಿಹಾಸ ಸಾಬೀತುಪಡಿಸಿತು.

ತಾನು ನಿರಪರಾಧಿ ಎಂದೇ ಹೇಳಿದ ಸಂಗೊಳ್ಳಿ ರಾಯಣ್ಣ ತನ್ನ ಕಾರ್ಯಗಳನ್ನು ಸಮರ್ಥಿಸಿಕೊಳ್ಳುತ್ತಾ ಕರ್ನಾಟಕದ ಜನತೆಗೆ ಒಂದು ಸಂದೇಶವನ್ನು ಬಿಟ್ಟು ಹೋಗಿದ್ದಾನೆ. ನಂದಗಡ್‌ದಲ್ಲಿ "ಕಳ್ಳತನ" ಮಾಡಿದ್ದಕ್ಕೆ ಅಲ್ಲೇ ಆತನನ್ನು ನೇಣು ಹಾಕಬೇಕೆಂದು ನಿರ್ಧರಿಸಿಲಾಯಿತು. ಸ್ಟೋಕ್ಸ್ ಹೇಳಿರುವಂತೆ "ರಸ್ತೆಯಲ್ಲಿ ರಾಯಣ್ಣ ನೇಣುಗಂಬದತ್ತ ಹಾದು ಹೋಗುತ್ತಿದ್ದಾಗ ಒಂದು ಸ್ಥಳವನ್ನು ತೋರಿಸಿ ಅಲ್ಲೇ ತನ್ನಹೆಣವನ್ನು ಹೂಳಬೇಕೆಂದು ಹೇಳಿದ. ಹಾಗೆಯೇ ಆಲದ ಮರವನ್ನು ನೆಡಬೇಕೆಂದೂ ರಾಯಣ್ಣ ಹೇಳಿದ. ಈಗ ನಂದಗಡ್ ರಸ್ತೆಯ ಬದಿಯಲ್ಲಿರುವ ಬೃಹದಾಕಾರದ ಆಲದ ಮರವೇ ರಾಯಣ್ಣನ ಸಮಾಧಿಯ ಮೇಲೆ ಬೆಳದದ್ದು ಎಂದು ಜನ ಹೇಳುತ್ತಾರೆ."

ರಾಯಣ್ಣನ ಕೊನೆ ಆಸೆಯೂ ಒಂದು ಸಾಧಾರಣ ರೈತನ ಆಸೆಯೇ ಆಗಿತ್ತು. ಹಾಗೆಯೇ ವಸಾಹತುಶಾಹಿ ವಿರೋಧಿಯೂ ಆಗಿತ್ತು. ನೇಣುಗಂಬವನ್ನೇರಿದ ಸಂಗೊಳ್ಳಿ ರಾಯಣ್ಣನ ಕೊನೇ ಮಾತುಗಳು ಇವಾಗಿದ್ದವು: "ನನ್ನ ಕೊನೆ ಆಸೆ ಯಾವುದೆಂದರೆ ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಿಂದ ಬ್ರಿಟೀಷರ ವಿರುದ್ಧ ಹೋರಾಟವನ್ನು ಮುಂದುವರಿಸುವುದು."

ಸಂಗೊಳ್ಳಿ ರಾಯಣ್ಣ ಜನಪರ ಹೋರಾಟಕ್ಕಾಗಿ ಹುತಾತ್ಮನಾದ. ಜನರ ಕಣ್ಮಣಿಯಾದ. ಆತನ ಬಗ್ಗೆ ಜನ ನೂರಾರು ಕಾವ್ಯಗಳನ್ನು ರಚಿಸಿದರು. ಅಸಹಾಯಕರ, ವರ್ಗಭೇದದ ವಿರುದ್ಧದ ಜನರ ಹೋರಾಟಕ್ಕೆ ಸಂಗೊಳ್ಳಿ ರಾಯಣ್ಣ ಸಂಕೇತವಾದ. ನಂದಗಡ್‌ದಲ್ಲಿ ಬಿತ್ತಿದ್ದ ಬೀಜ ಚಿಗುರೊಡೆಯುವ ಮುನ್ನವೇ ನಗರದಲ್ಲಿ ಗೆರಿಲ್ಲಾ ಯುದ್ಧ ಪ್ರಾರಂಭವಾಯಿತು. ಆ ಗಿಡದ ರೆಂಬೆ, ಕೊಂಬೆಗಳು ರೂಪಗೊಳ್ಳುವ ಮುನ್ನವೇ ಸಂಗೊಳ್ಳಿ ರಾಯಣ್ಣನ ತ್ಯಾಗ, ಮತ್ತಾತನ ಕ್ರಾಂತಿ ಕರ್ನಾಟಕದ ಉತ್ತರ ತುದಿಯಿಂದ ಮಲೆನಾಡಿನವರೆಗೂ ಹಬ್ಬಿ ರೈತಾಪಿ ಸಮುದಾಯವನ್ನು ಬಡಿದೆಬ್ಬಿಸಿತು.


(ಇದು  ಗೌರಿ ಲಂಕೇಶ್ ಅವರ ಅನುವಾದ [ಮೂಲ: ಸಾಕೇತ್ ರಾಜನ್‌ರವರ "ಮೇಕಿಂಗ್ ಹಿಸ್ಟರಿ ‍ ಭಾಗ ೨"]  ಕಿರುರೂಪ. ಸೌಜನ್ಯ: ಗೌರಿ ಲಂಕೇಶ್‌ರವರ "ಲಂಕೇಶ್" ಪತ್ರಿಕೆ)

Tag: Sangolli Rayanna

ಕಾಮೆಂಟ್‌ಗಳಿಲ್ಲ: