ಶುಕ್ರವಾರ, ಆಗಸ್ಟ್ 30, 2013

ಶೆಹನಾಯಿ ವಾದನದ ಮಾಂತ್ರಿಕ ಭಾರತರತ್ನ ಬಿಸ್ಮಿಲ್ಲಾಖಾನ್

ಬಿಸ್ಮಿಲ್ಲಾಖಾನ್

ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನರು ಜನಿಸಿದ್ದು ಮಾರ್ಚ್ 21, 1916ರಲ್ಲಿ.  ಬಿಸ್ಮಿಲ್ಲಾ ಖಾನರು ಮೂಲತಃ ಮುಸ್ಲಿಮರಾದರೂ ಹಿಂದೂ ಧರ್ಮೀಯರ ಪರಿಸರದಲ್ಲಿ ಬೆಳೆದರು.  ಬಿಸ್ಮಿಲ್ಲಾ ಖಾನರ ಪೂರ್ವಜರು ಭೋಜಪುರ ರಾಜ ಮನೆತನದ ಆಸ್ಥಾನದಲ್ಲಿ ಶೆಹನಾಯಿ ವಿದ್ವಾಂಸರಾಗಿದ್ದರಂತೆ.  ಬಿಸ್ಮಿಲ್ಲಾ ಖಾನರ ತಂದೆ ಬಿಹಾರದ ಪ್ರಾಂತ್ಯವೊಂದರ ದೊರೆಯಾಗಿದ್ದ ಮಹಾರಾಜ ಕೇಶವ ಚಂದ್ರ ಪ್ರತಾಪರ ಆಸ್ಥಾನದಲ್ಲಿ ಶೆಹನಾಯ್ ವಿದ್ವಾಂಸರಾಗಿದ್ದರು. 

ಆರು ವಯಸ್ಸಿನ  ಬಿಸ್ಮಿಲ್ಲಾ ಖಾನರು ವಾರಣಾಸಿಯಲ್ಲಿದ್ದ ತಮ್ಮ ಚಿಕ್ಕಪ್ಪ, ಅಲಿ ಬಕ್ಸ್ ವಿಲಾಯತು ಅವರ ನೆಲೆಗೆ ಬಂದು ಶಹನಾಯಿ ವಾದನ ಕಲಿಯತೊಡಗಿದರು. ಅಲಿ ಬಕ್ಸ್ ವಿಲಾಯತುರವರು ವಾರಣಾಸಿಯ ವಿಶ್ವನಾಥ ದೇವಾಲಯದೊಂದಿಗಿದ್ದವರು.  ಹೀಗಾಗಿ ಬಿಸ್ಮಿಲ್ಲಾಖಾನರ ಮನೆಯವರು ಕಾಶೀ ವಿಶ್ವನಾಥನ ದಿನ ನಿತ್ಯದ ದರ್ಶನಾರ್ಥಿಗಳಾಗಿದ್ದು ಆ ಸನ್ನಿಧಾನದಲ್ಲಿ ಪರಮಾಪ್ತತೆಯನ್ನು ಹೊಂದಿದ್ದರು.  ಜ್ಞಾನ ಮತ್ತು ಕಲೆಗಳ ಅದಿದಿದೇವತೆಯಾದ ಸರಸ್ವತಿ ಮಾತೆಯ ಬಗೆಗೆ ಅವರು ಅಪಾರ ಭಕ್ತಿ ಹೊಂದಿದವರಾಗಿದ್ದು ತಮ್ಮ ಸಂಗೀತ ಸೇವೆಯನ್ನೂ ಕೂಡಾ ಸರಸ್ವತಿ ಮಾತೆಯ ಸೇವೆಯೆಂದು ಹೇಳುತ್ತಿದ್ದರು.  ಸಂಗೀತಕ್ಕೆ ಯಾವುದೇ ಮತಧರ್ಮಗಳ ಸೋಂಕು ಇಲ್ಲ ಎಂಬುದು ಅವರು ಆಗಾಗ ಹೇಳುವ ಮಾತಾಗಿತ್ತು.

ಒಮ್ಮೆ ಬಿಸ್ಮಿಲ್ಲಾ ಖಾನರು ಕುಂಭಮೇಳದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ರೈಲಿನಲ್ಲಿ ಪಯಣಿಸುತ್ತಿದ್ದಾಗ ಅವರ ಬದುಕಿನಲ್ಲಿ ಒಂದು ಅವಿಸ್ಮರಣೀಯ ಘಟನೆ ನಡೆಯಿತು.  ಒಂದು ನಿಲ್ದಾಣದಲ್ಲಿ ರೈಲು ನಿಂತಾಗ ಒಬ್ಬ ಗೋಪಾಲ ಬಾಲಕನು ಇವರಿರುವ ರೈಲಿನ ಡಬ್ಬಿಗೆ ಬಂದು ಇವರ ಮುಂದೆ ಸುಶ್ರಾವ್ಯವಾಗಿ ಕೊಳಲು ನುಡಿಸಲಾರಂಭಿಸಿದನಂತೆ. ಅವರಿಗೆ ಆ ಹುಡುಗ ನುಡಿಸುತ್ತಿದ್ದ ರಾಗದ ಅರಿವು ಕೂಡಾ ಇರಲಿಲ್ಲ.   ಆ ದನಿಗೆ ಮಾರುಹೋದ ಬಿಸ್ಮಿಲ್ಲಾ ಖಾನರು ನಾನು ನಿನಗೆ ಒಂದು ನಾಣ್ಯ ಕೊಡುತ್ತೇನೆ ಇನ್ನೊಮ್ಮೆ ನುಡಿಸು ಎಂದು ಪ್ರಾರ್ಥಿಸಿದರು.  ಹೀಗೆ ಮತ್ತೊಮ್ಮೆ, ಮಗದೊಮ್ಮೆ ಎಂದು ಮುಂದುವರೆದು  ಅವರಲ್ಲಿದ್ದ ನಾಣ್ಯಗಳೆಲ್ಲಾ ಮುಗಿದವು.  ಬಿಸ್ಮಿಲ್ಲಾ ಖಾನರಿಗೆ ಆ ಹುಡುಗ ಕೃಷ್ಣ ಪರಮಾತ್ಮನಾಗಿ ಕಂಡನಂತೆ.  

ಅಂದಿನ ಕಾರ್ಯಕ್ರಮದಲ್ಲಿ ಅನೇಕ ಮಹಾನ್ ಪಂಡಿತರ ಎದುರಿನಲ್ಲಿ ಬಿಸ್ಮಿಲ್ಲಾ ಖಾನರು ಈ ರಾಗವನ್ನು ನುಡಿಸಿದರು.  ಆ ರಾಗಕ್ಕೆ ಪುನಃ ಪುನಃ ಪ್ರೇಕ್ಷಕರಿಂದ ಬೇಡಿಕೆ ಬಂತು.  ಸಭಿಕರನ್ನು ಮಂತ್ರಮುಗ್ಧವಾಗಿಸಿದ್ದ ಆ ರಾಗ ಯಾವುದು ಎಂಬುದು ಅಲ್ಲಿದ್ದ ಯಾವ ಪಂಡಿತರಿಗೂ ತೋಚಲಿಲ್ಲ.  ಬಿಸ್ಮಿಲ್ಲಾ ಖಾನರನ್ನು ಕೇಳಿದಾಗ ಅದು ಕನ್ಹೇರ ರಾಗಎಂದು ನುಡಿದರು.  ಕನ್ಹಯ್ಯ ಎಂಬುದು ಕೃಷ್ಣನ ಒಂದು  ಹೆಸರು.   ಮಾರನೆಯ ದಿನ ಪತ್ರಿಕೆಗಳಲ್ಲಿ ಹೊಸ ರಾಗವೊಂದು ಉದ್ಭವವಾದ ಮೋಡಿಯ ಬಗೆಗೆ  ಬರವಣಿಗೆಗಳು ಬಂದವು. 

ಈ ಕತೆಯ ಬಗ್ಗೆ ಸ್ವತಃ ಬಿಸ್ಮಿಲ್ಲಾ ಬಿಸ್ಮಿಲ್ಲಾ ಖಾನರೇ ಯಾವುದೇ ಪ್ರಚಾರ ಕೊಡಲಿಲ್ಲ.  ಅವರ  ಆತ್ಮೀಯ ಗೆಳೆಯ ಹರಿ ಪ್ರಸಾದ್ ಚೌರಾಸಿಯ ಅವರು ಈ ರಾಗದ  ಬಗೆಗಿನ ವಿವರ ಕೇಳಲಾಗಿ ಕಣ್ಣಲ್ಲಿ ಭಕ್ತಿಭಾವದ ಮಿನುಗು ತುಂಬಿಕೊಂಡ ಬಿಸ್ಮಿಲ್ಲಾ ಖಾನರು ಕೃಷ್ಣನೋಪಾದಿಯ ಗೋಪಾಲಬಾಲನ ಗಾಯನದಿಂದ ತಮಗಾದ ಅನುಭಾವವನ್ನು ತೆರೆದಿಟ್ಟುಕೊಂಡರಂತೆ.  ಇದನ್ನು ಕೇಳಿ ಹರಿಪ್ರಸಾದ ಚೌರಾಸಿಯಾ ಅವರ ಕಣ್ಣಾಲಿಗಳು ತುಂಬಿ ಹರಿದವು.

ಬಿಸ್ಮಿಲ್ಲಾ ಖಾನರು ತಮ್ಮ  ಕೀರ್ತಿ ಉತ್ತುಂಗಕ್ಕೇರಿದ್ದರೂ ವಾರಣಾಸಿಯ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕು  ನಡೆಸಿದವರು.  ಜೀವನದ ಕೊನೆಯವರೆಗು ತಮ್ಮ ಓಡಾಟಕ್ಕಾಗಿ ಸೈಕಲ್ ರಿಕ್ಷಾವನ್ನೇ ಅವಲಂಬಿಸಿದ್ದರು. ಬಿಸ್ಮಿಲ್ಲಾ ಖಾನ್ ಅವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಶಾಂತಿನಿಕೇತನದ ವಿಶ್ವ ಭಾರತಿ ವಿಶ್ವವಿದ್ಯಾಲಯಗಳಿಂದ ಗೌರವಪೂರ್ವಕ ಡಾಕ್ಟರೇಟ್ ಪುರಸ್ಕಾರಗಳು ಸಂದವು. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಭಾರತ ರತ್ನ ಪ್ರಶಸ್ತಿಗಳಲ್ಲದೆ ದೇಶದ ವಿವಿಧೆಡೆಗಳಲ್ಲಿನ ಪಶಸ್ತಿಗಳು ಕೂಡಾ ಅವರನ್ನರಸಿ ಬಂದವು.

ಶೆಹನಾಯಿಯನ್ನು ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಾದ್ಯವಾಗಿಸಿದ ಕೀರ್ತಿ ಬಿಸ್ಮಿಲ್ಲಾ ಖಾನ್ ಅವರಿಗೆ ಸಲ್ಲಬೇಕು. 1937ರಲ್ಲಿ ಕಲ್ಕತ್ತದಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನವು ಇವರ ವಾದ್ಯ ಕಛೇರಿ ಶೆಹನಾಯಿಯನ್ನು ಪ್ರಮುಖ ವಾದ್ಯಗಳ ಸಾಲಿನಲ್ಲಿ ತಂದು ನಿಲ್ಲಿಸಿತು.  ವಿಶ್ವದೆಲ್ಲೆಡೆ ಅವರ ನಾದಲಹರಿ ನಿರಂತರವಾಗಿ ಹರಿಯಿತು.  1977ರಲ್ಲಿ ಬಿಡುಗಡೆಯಾದ ಸನಾದಿ ಅಪ್ಪಣ್ಣಕನ್ನಡ ಚಲನಚಿತ್ರದಲ್ಲಿ ಬಿಸ್ಮಿಲ್ಲಾಖಾನರು ನುಡಿಸಿದ ಶೆಹನಾಯಿ ವಾದನ ಕನ್ನಡಿಗರ ಹೃದಯದಲ್ಲಿ ಅವಿಸ್ಮರಣೀಯವಾಗಿದೆ.


ಹೀಗೆ ಸಂಗೀತ ಲೋಕವನ್ನು ತಮ್ಮ ಶೆಹನಾಯಿಯ ನಾದದಿಂದ ತುಂಬಿದ ಈ ಮಹಾನ್ ಚೇತನರಾದ ಬಿಸ್ಮಿಲ್ಲಾಖಾನರು 2006ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಈ ಮಹಾನ್ ಸರಸ್ವತೀ ಪುತ್ರ, ಶ್ರೀಕೃಷ್ಣ ಪ್ರೀತಿಪಾತ್ರ ಸಂಗೀತ ತಪಸ್ವಿಗಳು ಹರಿಸಿದ ಸಂಗೀತ ಮಾತ್ರ ಎಂದೆಂದೂ ಚಿರಂತನ.  ಇಂಥಹ ಮಹಾನ್ ಸಂಗೀತಗಾರರ ಯುಗದಲ್ಲಿ ಜೀವಿಸಿದ್ದ ನಮ್ಮ ಪುಣ್ಯವೆಂದರೂ ಸರಿಯೇ.

Tag: Bismillah Khan

ಕಾಮೆಂಟ್‌ಗಳಿಲ್ಲ: