ಗುರುವಾರ, ಆಗಸ್ಟ್ 29, 2013

ಎ. ಎನ್. ಮೂರ್ತಿರಾವ್

ಎ. ಎನ್. ಮೂರ್ತಿರಾವ್

ಶತಾಯುಷಿಗಳಾಗಿ ನೂರಾ ನಾಲ್ಕು ವರ್ಷಗಳ ಕಾಲ ಬಾಳಿದ ಎ. ಎನ್ ಮೂರ್ತಿರಾಯರು ಮೂರು ಶತಮಾನಗಳಲ್ಲಿ ಬಾಳಿದ ಅಪರೂಪದ ಮಹನೀಯರು.   ಮೂರ್ತಿರಾಯರು ಹುಟ್ಟಿದ್ದು ಜೂನ್ 16, 1900ರ ವರ್ಷದಲ್ಲಿ.  ಅವರು 24ನೆ ಆಗಸ್ಟ್ 2003ರ ವರೆವಿಗೂ ಈ ಭುವಿಯಲ್ಲಿದ್ದರು.  ಪ್ರೊ. ಅಕ್ಕಿಹೆಬ್ಬಾಳು ನರಸಿಂಹಮೂರ್ತಿ ರಾಯರು ಕಳೆದ ಶತಮಾನದ ಮಾನವ ಸದ್ಗುಣಗಳ ಒಬ್ಬ ಪ್ರತಿನಿಧಿ ಮತ್ತು ಜೀವನದ ಸದ್ಮೌಲ್ಯಗಳ ಪ್ರತೀಕರು.  ಶ್ರೀಯುತರನ್ನು ಡಾ. ಪ್ರಭುಶಂಕರರು ಮಾನವ ಚೇತನ ವಿಕಾಸದ ಹಾದಿಯಲ್ಲಿ ಒಂದು ಮೈಲುಗಲ್ಲುಎಂದು ಬಣ್ಣಿಸಿದ್ದಾರೆ.

ಮೂರ್ತಿರಾಯರ ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯ ವಿದ್ವತ್ತು ಅಪಾರ.  ಸಂಸ್ಕೃತ ಭಾಷೆಯನ್ನು ಚೆನ್ನಾಗಿ ಬಲ್ಲವರು.  ಫ್ರೆಂಚ್ ಭಾಷೆಯನ್ನು ಕಲಿತವರು.  ಸಂಗೀತದ ಅಪಾರ ಪ್ರೇಮಿಗಳು ಮತ್ತು ಅದರಲ್ಲಿ ಅಷ್ಟೇ ತಿಳುವಳಿಕೆಯುಳ್ಳವರು.  ಅವರನ್ನು ಭೇಟಿ ಮಾಡಿ ನಾಲ್ಕು ಮಾತನಾಡಿ ಅವರನ್ನು ಸಂಭಾಷಣೆಗೆ ಎಳೆದ ಕೂಡಲೇ ಅವರ ನಿಷ್ಕಲ್ಮಶವಾದ ಮನಸ್ಸಿನಲ್ಲಿ ಬರುವ ವಿಚಾರಗಳು ಎಳೆಎಳೆಯಾಗಿ ಕೇಳುಗನನ್ನು ಆಕರ್ಷಿಸುತ್ತಾ ಕೇಳುಗನ ಮನಸ್ಸನ್ನು ಒಳ್ಳೆಯ ಆಲೋಚನೆಗಳಿಗೆ ಪರಿವರ್ತಿಸುವಂತಿದ್ದವು.  ಅವರೊಡನೆ ಮಾತನಾಡುವುದು ತಿಳಿಯಾದ ನೀರಿರುವ ಶುಭ್ರವಾದ ನದಿಯಲ್ಲಿ ಮಿಂದ ಹೊಸ ಲವಲವಿಕೆಯನ್ನು ಪಡೆಯುವ ಅನುಭವ ಕೊಡುವಂತದ್ದು.  ಒಬ್ಬ ವ್ಯಕ್ತಿಯ ಒಳ್ಳೆಯ ಗುಣಗಳನ್ನು ಮಾತ್ರ ಹೇಗೆ ಗ್ರಹಿಸಬೇಕು ಮತ್ತು ಅವರ ದುರ್ಬಲ ಭಾಗಗಳನ್ನು ಯಾಕೆ ನಿರ್ಲಕ್ಷಿಸಬೇಕು ಎನ್ನುವ ಹೊಸ ಪಾಠವೇ ಅವರನ್ನು ಭೇಟಿಮಾಡಿದವರಿಗೆ ಲಭಿಸುತ್ತಿತ್ತು.  ಒಟ್ಟಿನಲ್ಲಿ ಪ್ರೊ. ಮೂರ್ತಿರಾಯರು ತಮ್ಮ ತುಂಬು ಜೀವನವನ್ನು ಚೆನ್ನಾಗಿ ಅನುಭವಿಸಿ ಅದನ್ನು ವಸ್ತುನಿಷ್ಠತೆಯಿಂದ ವಿಮರ್ಶಿಸಿ ಪ್ರಾಮಾಣಿಕತೆಯಿಂದ ತಮ್ಮ ಅನಿಸಿಕೆಗಳನ್ನು ಎಲ್ಲರೊಡನೆ ಹಂಚಿಕೊಂಡವರು.

ಪ್ರೊ. ಮೂರ್ತಿರಾಯರು ತಮ್ಮ ಬಾಲ್ಯವನ್ನು ಹುಟ್ಟೂರಾದ ಅಕ್ಕಿಹೆಬ್ಬಾಳಿನಲ್ಲಿ ಕಳೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದು ಅಲ್ಲಿಯ ಮಹಾರಾಜಾ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪಡೆದು ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಮಾಡಿ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿ, ಆ ನಂತರದ ತಮ್ಮ ಸೇವಾವಧಿಯಲ್ಲಿ ಶಿವಮೊಗ್ಗ, ಚಿತ್ರದುರ್ಗ ಕಾಲೇಜುಗಳಲ್ಲಿ ಕೆಲವು ವರ್ಷಗಳನ್ನು ಕಳೆದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ 1955ರಲ್ಲಿ ನಿವೃತ್ತರಾದರು.  ಈ ಮಧ್ಯದಲ್ಲಿ ಕೆಲವು ಕಾಲ ಆಗಿನ ಮೈಸೂರು ಆಕಾಶವಾಣಿಯ ನಿರ್ದೇಶಕರಾಗಿದ್ದು, ನಿವೃತ್ತಿಯ ನಂತರ ಕರ್ನಾಟಕ ಸರ್ಕಾರದ ಕೋರಿಕೆಯ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.  ಅವರು ತಮ್ಮ ಸೇವಾವಧಿಯಲ್ಲಿ ಮತ್ತು ಅನಂತರದ ಜೀವನದಲ್ಲಿ ಸದಾಕಾಲ ಸ್ನೇಹಿತರುಗಳಿಂದ, ಸಹೋದ್ಯೋಗಿಗಳಿಂದ, ಸಾರ್ವಜನಿಕರಿಂದ ಮತ್ತು ಬಂಧು ಬಳಗದವರಿಂದ ಅಪಾರ ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾದರು.  ವರಕವಿ ಪುತಿನ, ಡಾ.ಎಂ. ವಿ. ಗೋವಿಂದಸ್ವಾಮಿ, ತೀನಂಶ್ರೀ, ನಾ. ಕಸ್ತೂರಿ, ಡಿ.ಎಲ್.ಎನ್ ಮತ್ತು ಇನ್ನೂ ಅನೇಕರಿಗೆ ಪ್ರಿಯ ಸ್ನೇಹಿತರಾದ ಮೂರ್ತಿರಾಯರಿಗೆ ಜನರ ಸಾನ್ನಿಧ್ಯ ಸದಾ ಪ್ರಿಯವಾದುದು.  ಆದ್ದರಿಂದಲೇ ಅವರ ತುಂಬು ಜೀವನ ಅವರಿಗೆ ಚಿರಪಾಠಶಾಲೆ.

ಪ್ರೊ. ಮೂರ್ತಿರಾಯರು ಕೆಲವು ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಕನ್ನಡದ ಪ್ರತಿನಿಧಿಯಾಗಿದ್ದರು.  ಅವರು ನಿವೃತ್ತಿಯ ನಂತರ ಫಿಲಿಪೈನ್ಸ್, ಇಂಗ್ಲೆಂಡ್, ಕೆನ್ಯಾ ಮತ್ತು ಅನೇಕ ಸಾರಿ ಅಮೇರಿಕಾ ದೇಶಗಳಲ್ಲಿ ಪ್ರವಾಸ ಮಾಡಿ ಬಂದಿದ್ದರು.  ಎರಡು ಮೂರು ವರ್ಷಗಳಿಗೊಮ್ಮೆ ಮೊಮ್ಮಕ್ಕಳ ಮೋಹದ ಮೇಲೆ ಅಮೆರಿಕಕ್ಕೆ ಹೋಗಿ ಬರುತ್ತಿದ್ದ ಅವರು, ಮತ್ತೆ ಬರಲಾಗುವುದಿಲ್ಲ ಎಂದು ಹೇಳಿ ಬರಲು ಹೋಗಲೇಬೇಕಲ್ಲವೇ ಎಂದು ತಿಳಿಹಾಸ್ಯದಲ್ಲಿ ತಮ್ಮ ಪ್ರವಾಸವನ್ನು ಸಮರ್ಥಿಸಿಕೊಳ್ಳುವುದಿತ್ತು!

ಅವರ ಚಿತ್ರಗಳು ಪತ್ರಗಳುಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಸಂಜೆಗಣ್ಣಿನ ಹಿನ್ನೋಟಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ದೇವರುಪುಸ್ತಕಕ್ಕೆ ಕನ್ನಡ ಸಾಹಿತ್ಯದ ಅತ್ಯುನ್ನತ ಪಂಪ ಪ್ರಶಸ್ತಿ ದೊರಕಿದವು.  ಕೈವಾರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರನ್ನು ಕನ್ನಡ ಸಾಹಿತ್ಯ ಪ್ರಪಂಚ ಗೌರವಿಸಿತು.  ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಸನ್ಮಾನಿಸಿತು.  ಪ್ರೊ. ಮೂರ್ತಿರಾಯರೊಡನೆ ಮಾತನಾಡುತ್ತಿದ್ದವರಿಗೆ ಅವರಿಗೆ ದೊರೆತ ಯಾವುದೇ ಔನ್ನತ್ಯಗಳ ಪರಿವೆಯೇ ಮೂಡುತ್ತಿರಲಿಲ್ಲ.  ಅಂತಹ ಸರಳವ್ಯಕ್ತಿ ಮೂರ್ತಿರಾಯರು.

ಪ್ರೊ. ಮೂರ್ತಿರಾಯರು ಆ ಕಾಲದಲ್ಲಿ ಎಲ್ಲರಂತೆಯೇ ಮೊದಲು ಕವಿತೆಗಳ ರಚನೆಯಲ್ಲಿ ಪ್ರವೇಶ ಮಾಡಿದರಂತೆ.  ಆದರೆ ಅಗ್ನಿಯನ್ನು ಬಿಟ್ಟು ಯಾರಿಗೂ ಅದನ್ನು ತೋರಿಸಲಿಲ್ಲವಂತೆ!  ಆದರೆ ಮೂರ್ತಿರಾಯರು ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳಿಗೆ ಒಂದು ಹೊಸ ಹೆದ್ದಾರಿಯನ್ನೇ ನಿರ್ಮಾಣ ಮಾಡಿದವರು.  ಅವರ ಹಗಲುಗನಸುಗಳು’, ‘ಅಲೆಯುವಾ ಮನಮತ್ತು ಮಿನುಗು ಮಿಂಚುಅಂತಹ ಪ್ರಬಂಧ ಸಂಕಲನಗಳ ಶೀರ್ಷಿಕೆಗಳೇ ಅವರ ವಿಚಾರಲಹರಿಯ ಸ್ಥೂಲ ಪರಿಚಯವನ್ನು ನಮಗೆ ಮಾಡಿಕೊಡುತ್ತದೆ.  ಅವರು ಎಲ್ಲಿಯೋ ಅನುಭವಿಸಿದ ಒಂದು ಪ್ರಸಂಗ, ಭೇಟಿ ಮಾಡಿದ ವ್ಯಕ್ತಿ, ನೋಡಿದ ಊರು ಅಥವಾ ಮನಸ್ಸಿಗೆ ಬಂದ ಒಂದು ವಿಚಾರ ಮತ್ತು ಸಂಸಾರ ಸ್ವಾರಸ್ಯಗಳು ಅವರ ಲಲಿತ ಪ್ರಬಂಧಗಳಿಗೆ ಒಂದು ಕೇಂದ್ರಬಿಂದುವಾಗಿ ಅದರ ಸುತ್ತ ಅವರ ವಿಚಾರ ದೃಷ್ಟಿ, ಸೂಕ್ಷ್ಮವಾದ ಯಾರ ಮನಸ್ಸನ್ನೂ ನೋಯಿಸದ ಹಾಸ್ಯದೊಡನೆ ಬೆಳೆಯುತ್ತದೆ.  ಲಲಿತೆಯ ವಿದ್ಯಾಭ್ಯಾಸಮತ್ತು ದಿವಾನಖಾನೆಯ ಅಂದಚಂದದಂತಹ ಪ್ರಬಂಧಗಳಲ್ಲಿ ಬಾಹ್ಯಪ್ರಪಂಚದ ಅವಶ್ಯಕತೆಯ ಚೌಕಟ್ಟು ಹೇಗೆ ಸಂಸಾರದ ಪ್ರೀತಿ, ಪ್ರೇಮಗಳಿಗೆ ಅಡ್ಡಿ ತರುತ್ತವೆ ಎನ್ನುವುದನ್ನು ನೋಡಬಹುದು. ಇಂತಹ ಪ್ರಬಂಧಗಳನ್ನು ಓದಿದ ಮೇಲೂ ಅದನ್ನು ಮತ್ತೆ ಮತ್ತೆ ಮೆಲಕು ಹಾಕುತ್ತಿರಬೇಕೆನಿಸುತ್ತದೆ.

ಹಾಗೆ ನೋಡಿದರೆ ಪ್ರೊ. ಮೂರ್ತಿರಾಯರ ಬರವಣಿಗೆ ಅವರು ನಿವೃತ್ತರಾದ ನಂತರವೇ ಹೆಚ್ಚು ಹುಲುಸಾಯಿತು.  ಶೇಕ್ಸ್ ಪಿಯರನ ಸುಖಾಂತ ನಾಟಕಗಳ ಮೇಲಿನ ಅವರ ಪುಸ್ತಕ ಈ ಸಾಹಿತ್ಯಕ್ಕೆ ಬಹುವಿದ್ವತ್ಪೂರ್ಣವಾದ ಮತ್ತು ಪ್ರಮಾಣೀಭೂತವಾದವಾದ ಕೊಡುಗೆಯಾಗಿದ್ದುಇದರ ವ್ಯಾಸಂಗಕ್ಕೆ ಒಂದು ಆಕರ ಗ್ರಂಥವಾಗಿದೆ.

ಅನುವಾದದಲ್ಲೂ ಮೂರ್ತಿರಾಯರದು ತುಂಬಾ ಪಳಗಿದ  ಕೈ.  ಅವರಿಗೆ ತುಂಬಾ ಕೀರ್ತಿಯನ್ನು ತಂದುಕೊಟ್ಟು. ಬೆಳಗಾಗುವುದರೊಳಗೆ ಅವರ ಹೆಸರು ಎಲ್ಲರ ಬಾಯಲ್ಲಿ ನಲಿಯುವಂತೆ ಮಾಡಿದ ಮೊದಲ ಕೃತಿ  1931ರಲ್ಲಿ ಮೊಲಿಯೇರನ ತಾರ್ತುಫ್ ನಾಟಕದ ರೂಪಾಂತರಿತ ಕೃತಿಯಾದ  ಆಷಾಢ ಭೂತಿ’.  ‘ಚಂಡಮಾರುತಕೂಡಾ ಮೋಲಿಯರನ ಕೃತಿಯ ಅನುವಾದ.  ಸಾಕ್ರಟಿಸನ ಕೊನೆಯ ದಿನಗಳು, ಪಾಶ್ಚಾತ್ಯ ಸಣ್ಣ ಕತೆಗಳು, ಯೋಧನ ಪುನರಾಗಮನ, ಅಮೆರಿಕನ್ ಸಾಹಿತ್ಯ ಮೂರ್ತಿರಾಯರ ಇನ್ನಿತರ ಅನುವಾದಿತ ಕೃತಿಗಳು.  ಸ್ವತಃ ಅನುವಾದಗಳನ್ನು ಮಾಡಿ, ಅನುವಾದ ಕೃತಿಗಳ ಬಗೆಗೆ ಚರ್ಚಿಸಿ ಅನುವಾದ ಕಲೆಯ ವಿಚಾರವಾಗಿಯೂ ಅವರು ಚಿಂತಿಸಿದ್ದಾರೆ.

ವಿಮರ್ಶೆಯನ್ನು ಕುರಿತಾದ ಜಗತ್ತು ಮೂರ್ತಿರಾಯರಿಗೆ ತುಂಬಾ ಪ್ರಿಯವಾದದ್ದು.  ಇದರ ಪರಿಣಾಮ ಸಾಕಷ್ಟು ವಿಮರ್ಶನ ಬರಹಗಳು.  ಮಾಸ್ತಿ, ಬಿ.ಎಂ.ಶ್ರೀ, ಷೇಕ್ಸ್ಪಿಯರ್, ಕಾಳಿದಾಸ, ಭವಭೂತಿ ಮೊದಲಾದವರ ಕೃತಿಗಳ ವಿಮರ್ಶೆಯಲ್ಲಿ ಒಂದು ಬಗೆಯ ಅನುಸೃಷ್ಟಿಯ ಪ್ರತಿಭೆಯನ್ನು ಕಾಣಬಹುದಾಗಿದೆ.

ಮೂರ್ತಿರಾಯರು ತಮ್ಮ ಪ್ರಿಯಸ್ನೇಹಿತರಾದ ತೀನಂಶ್ರೀ ಅವರೊಡನೆ ಸುಮಾರು 25-30 ವರ್ಷಗಳಲ್ಲಿ ಮಾಡಿದ ವ್ಯವಹಾರ ಸುಮಾರು 70 ಪತ್ರಗಳು ಮತ್ತು ತಮ್ಮ ಮಕ್ಕಳಿಗೆ ಬರೆದ 45 ಪತ್ರಗಳು ಮತ್ತು ಅವರ ಗುರುಗಳು, ಸ್ನೇಹಿತರುಗಳು ಮತ್ತು ಇತರರ ಮೇಲಿನ 12  ವ್ಯಕ್ತಿಚಿತ್ರಗಳ ಸಂಕಲನವಾದ ಅವರ ಚಿತ್ರಗಳು ಪತ್ರಗಳುಪುಸ್ತಕ ಕನ್ನಡ ಸಾಹಿತ್ಯಕ್ಕೆ ಒಂದು ನೂತನ ಕೊಡುಗೆಯಾಗಿದೆ.  ಈ ಪತ್ರಗಳಲ್ಲಿ ಮತ್ತು ಚಿತ್ರಗಳಲ್ಲಿ ಕಾಣುವ ಅಂದಿನ ದಶಕಗಳ ಶೈಕ್ಷಣಿಕ ವಾತಾವರಣ, ವ್ಯಕ್ತಿಗಳ ವಿದ್ವತ್ತು ಮತ್ತು ಕರ್ತವ್ಯನಿಷ್ಠೆ ಮತ್ತು ಅದಕ್ಕಿಂತ ಹೆಚ್ಚಾಗಿ ಮಹಾರಾಜಾ ಕಾಲೇಜಿನ ಕಾಮನ್ ರೂಮಿನ ಅನುಭವಗಳನ್ನು ಓದಿದಾಗ ನಮ್ಮ ಮೈನವಿರೇಳುತ್ತದೆ.  ಮುಂದಿನ ದಶಕಗಳಲ್ಲಿ ನಾವು ಎಷ್ಟರಮಟ್ಟಿಗೆ ಅವುಗಳಿಂದ ವಂಚಿತರಾಗಿದ್ದೇವೆ ಎನ್ನುವ ವಿಷಾದ ತುಂಬುತ್ತದೆ.  ಇಲ್ಲಿ ಅನೇಕ ವ್ಯಕ್ತಿಗಳ ಉಲ್ಲೇಖವಾಗಿದೆ.  ಅವರ ಬಗ್ಗೆ ಬಹು ವಸ್ತುನಿಷ್ಠವಾದ ವಿಮರ್ಶೆಯಿದೆ.  ಆದರೆ ಯಾವ ವ್ಯಕ್ತಿಯ ವಿಷಯದಲ್ಲೂ ಎಲ್ಲೂ ಅಗೌರವದ ಸೋಂಕೂ ಕಾಣುವುದಿಲ್ಲ.

ಮೂರ್ತಿರಾಯರ ಅಪರವಯಸ್ಕನ ಅಮೆರಿಕ ಯಾತ್ರೆಪುಸ್ತಕ ಪ್ರವಾಸದ ಒಂದು ದಿನಚರಿಯಾಗದೆ ಭಾರತ ಮತ್ತು ಅಮೆರಿಕ ದೇಶಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನದ ಕಂಪನ್ನು ನಮಗೆ ನೀಡುತ್ತದೆ.  ಅವರು ತಮ್ಮ ಅಮೆರಿಕದ ಸೊಸೆಯನ್ನು ತಮ್ಮ ಮನೆಗೆ ಸ್ವೀಕರಿಸುವ ಪ್ರಸಂಗ ಮತ್ತು ಆ ಬೀಗರುಗಳ ಆತಿಥ್ಯದ ವರ್ಣನೆಯನ್ನು ಓದುವಾಗ ಮೂರ್ತಿರಾಯರ ಹೃದಯಾರ್ದ್ರತೆಯ ವಿಸ್ತಾರದ ಅರಿವು ನಮಗೆ ಮೂಡಿ ಬರುತ್ತದೆ.  ಅದರೊಡನೆ ತಮಗೆ ಈ ವಿವಾಹಕ್ಕೆ ಒಪ್ಪಿಗೆ ಇರದಿದ್ದ ವಿಷಯವನ್ನು ಕೂಡಾ ಅಷ್ಟೇ ಪ್ರಾಮಾಣಿಕತೆಯಿಂದ ತಿಳಿಸುತ್ತಾರೆ.  ನ್ಯೂಯಾರ್ಕಿಗೆ ಮೊದಲನೆಯ ಸಾರಿ ಭೇಟಿನೀಡಿದಾಗ ಅವರ ಕಿರಿಯ ಸ್ನೇಹಿತ ಶೇಖರಿ, ನಗರವನ್ನು ಒಂದು ಸುತ್ತು ಹಾಕಿ ಬರೋಣವೆಂದು ಸೂಚಿಸಿದಾಗ, “ಅದಕ್ಕಿಂತ ಹರಟೆ ಮುಖ್ಯ, ಈ ನಗರಕ್ಕೆ ಬಂದೂ ತನ್ನನ್ನು ಕಡೆಗಣಿಸುವವರಿದ್ದಾರೆ ಎಂದು ನ್ಯೂಯಾರ್ಕ್ ತಿಳಿದುಕೊಳ್ಳಲಿಎಂದು ಹಾಸ್ಯಮಿಶ್ರಿತವಾಗಿ ಅವರದೇ ಶೈಲಿಯಲ್ಲಿ ಹೇಳುವಾಗ, ಅಹಂಕಾರದ ವ್ಯಕ್ತಿಗಳೊಡನೆ ತೋರಿಸಬೇಕಾದ ನಿಲುವಿನ ಬಗೆಗೆ ಮಾನವಕುಲಕ್ಕೊಂದು ಸಂದೇಶವನ್ನೇ ನೀಡುತ್ತಾರೆ.

ಮೂರ್ತಿರಾಯರ ಆತ್ಮಚರಿತ್ರೆಯೇ ಆದ ಸಂಜೆಗಣ್ಣಿನ ಹಿನ್ನೋಟದಲ್ಲಂತೂ ಅವರ ಜೀವನದ ಘಟ್ಟಗಳ ಒಂದು ಚಿತ್ರವೇ ನಮ್ಮೆದುರಿಗೆ ತೆರೆದಂತಾಗುತ್ತದೆ.  ತಮ್ಮ ತಂದೆಯವರ ವಿಷಯದಲ್ಲಿ ಅವರಿಗಿದ್ದ ಅಭಿಪ್ರಾಯಗಳು, ತಮ್ಮ ಭಾವಮೈದುನನೊಡನಿದ್ದ ಮೊದಲ ಭಿನ್ನಾಭಿಪ್ರಾಯ ಮತ್ತು ನಂತರದ ಉತ್ಕಟವಾದ ಪ್ರೀತಿ ಮತ್ತು ತಮ್ಮ ಕುಟುಂಬದ ನಾನಾ ಸಮಸ್ಯೆಗಳು ಎಲ್ಲವನ್ನೂ  ಮುಚ್ಚುಮರೆಯಿಲ್ಲದೆ ಇಲ್ಲಿ ತೆರೆದಿಟ್ಟಿದ್ದಾರೆ.  ಈ ಆತ್ಮಚರಿತ್ರೆ  ಜೀವನದ ಕೆಲಸಕಾರ್ಯಗಳ ಅಥವಾ ಪ್ರಶಸ್ತಿಗಳ ಪಟ್ಟಿಯಾಗದೆ ಅನೇಕ ವಿಚಾರಗಳಲ್ಲಿ ಜಾತಿಯ ಸಮಸ್ಯೆ, ರಾಜಭಕ್ತಿ, ಶಿಕ್ಷಣ ಪದ್ಧತಿ, ಮೂಢ ನಂಬಿಕೆಗಳು, ಆಚಾರ ವ್ಯವಹಾರಗಳು ಇತ್ಯಾದಿಗಳ ಒಂದು ಪ್ರಬುದ್ಧ ಪರಿಶೀಲನೆಯ ಮತ್ತು ಪರಾಮರ್ಶನೆಯ ಸೃಜನಶೀಲ ಗ್ರಂಥವಾಗಿದೆ.   ಅಷ್ಟೇ ವಸ್ತುನಿಷ್ಠೆಯ ಪ್ರಾಮಾಣಿಕವಾದ ಆತ್ಮವಿಶ್ಲೇಷಣೆಯೂ ಇದರಲ್ಲಡಗಿದೆ.  ಇದನ್ನು ಓದಿದ ನಂತರ ಮೂರ್ತಿರಾಯರಿಗೆ ಆತ್ಮವಂಚನೆ ಸಾಧ್ಯವೇ ಇರಲಿಲ್ಲ ಎನ್ನುವ ಅರಿವು ನಮಗೆ ಆಗುತ್ತದೆ.  ಅವರು ಬಹುಶುಚಿಯಾದ ಪ್ರೇಮಪೂರಿತವಾದ ಸಂಸಾರ ಜೀವನವನ್ನೂ ಸವಿದವರು.  ಆದರೆ ಪತ್ನಿ ಜಯಮ್ಮನವರ ಅಕಾಲಿಕ ನಿಧನದಲ್ಲಿ ಅಪಾರ ದುಃಖವನ್ನು ಅನುಭವಿಸಿದ ಅವರು ತಮ್ಮ ಜೀವನ ದೃಷ್ಟಿಯನ್ನು ವ್ಯಗ್ರಗೊಳಿಸಿಕೊಂಡವರಲ್ಲ.  ಈ ಹಿನ್ನೆಲೆಯಲ್ಲಿಯೇ ಅವರ ಸಾಹಿತ್ಯ ಇನ್ನೂ ಹೆಚ್ಚು ಪ್ರಕಾಶಗೊಂಡಿತು.

ಮೂರ್ತಿರಾಯರು ಇಂಗ್ಲಿಷಿನಲ್ಲಿ The Return to the Soil (ಕಾರಂತರ ಮರಳಿ ಮಣ್ಣಿಗೆ) ಮತ್ತು B. M.  Srikanataiah ಎಂಬ ಪುಸ್ತಕಗಳನ್ನು ಬರೆದಿದ್ದಾರೆ.

ಕೊನೆಯಲ್ಲಿ ದೇವರೊಬ್ಬನಿದ್ದಾನೆಯೇ?’ ಎನ್ನುವ ಮೂಲಭೂತವಾದ ಪ್ರಶ್ನೆಗೆ ಕೈ ಹಾಕಿದ ಮೂರ್ತಿರಾಯರು ಈ ವಿಷಯದಲ್ಲಿ ಪ್ರಾಮಾಣಿಕವಾದ ಅನಿಸಿಕೆ ಮತ್ತು ವಿಶ್ಲೇಷಣೆಯನ್ನು ದೇವರುಪುಸ್ತಕದಲ್ಲಿ ಕೊಟ್ಟಿದ್ದಾರೆ.  ಮೂರ್ತಿರಾಯರಿಗೆ ಸಂತೋಷ ಮುಖ್ಯ. ಅದೇ ಅವರಿಗೆ ದೇವರು.  ಬೇರೆ ಪ್ರತಿರೂಪ ಬೇಕಿಲ್ಲ.  ಅವರು ದೇವರ ಮಂತ್ರಗಳನ್ನು ಪಠಿಸುವುದರಲ್ಲಿ ಮತ್ತು ಬೇರೆಯವರ ಸುಶ್ರಾವ್ಯವಾದ ಮಂತ್ರಗಳ ಪಠನೆಯನ್ನು ಆಲಿಸುವುದರಲ್ಲಿ ಅಪಾರ ಸಂತೋಷವನ್ನು ಪಡೆದವರು.  ಇಂಥಹ ಸೂಕ್ಷ್ಮವಾದ ವಿಷಯದಲ್ಲಿ ಬಹುಜನರ ಅಭಿಪ್ರಾಯಕ್ಕೆ ವಿರೋಧವಾದ ನಿಲುವನ್ನು ತಳೆದ ದೇವರುಪುಸ್ತಕ ಅಲ್ಪ ಸಮಯದಲ್ಲೇ ಬಹುಜನಪ್ರಿಯವಾಗಿ ಬಹಳಷ್ಟು ಮರುಮುದ್ರಣಗಳನ್ನು ಕಂಡಿದೆ.  ಈ ಪುಸ್ತಕದ ಬಗ್ಗೆ ಅವರಿಗೆ ಬಂದಿರುವ ಪರವಾದ ಮತ್ತು ಭಿನ್ನಾಭಿಪ್ರಾಯಗಳ ಪತ್ರಗಳನ್ನೆಲ್ಲಾ ಸೇರಿಸಿ ಅಚ್ಚು ಹಾಕಿದರೆ ಒಂದೆರಡು ದೊಡ್ಡ ಸಂಪುಟಗಳೇ ಆದೀತು.  ಇಷ್ಟರಮಟ್ಟಿಗೆ ಜನರ ಗಮನವನ್ನು ಸೆಳೆದಿರುವ ಪುಸ್ತಕ ಸಾರಾಂಶ ಅವರ ಮಾತಿನಲ್ಲೇ ಹೇಳುವುದಾದರೆ, “ಮನುಕುಲಕ್ಕೆ, ನನ್ನಂಥ ನಿರೀಶ್ವರವಾದಿಗಳಿಗೂ  ಸೇರಿದಂತೆ, ಕರುಣಾರ್ದ್ರ ಹೃದಯನೂ ಪ್ರೆಮಸ್ವರೂಪಿಯೂ ಆದ ದೇವರು ಬೇಕು.  ನಾನು ದೇವರು ಇಲ್ಲಎಂದುಕೊಳ್ಳುವಾಗ ನನ್ನ ಮನಸ್ಸಿನಲ್ಲಿರುವುದು ಸಂತೋಷವಲ್ಲ... ಅದನ್ನು ವಿಷಾದಎಂದೇ ಕರೆಯಬಹುದೇನೋ!... ಜೀವಕೋಟಿಯ ಎಲ್ಲಾ  ಸಂಕಟವನ್ನೂ ಪರಿಹರಿಸಬಲ್ಲ ದೇವರು ಅಂಥ ದೇವರಿದ್ದರೆ ಯಾರು ಬೇಡಎನ್ನುತ್ತಾರೆ

ಮೂರ್ತಿರಾಯರ ದೇವರುಕೃತಿಗೆ ಪಂಪಪ್ರಶಸ್ತಿಬಂದಾಗ ದೇವರ ಅಸ್ತಿತ್ವದಲ್ಲಿ ಮತ್ತೆ ಅವರನ್ನು ಪ್ರಶ್ನಿಸಿದಾಗ ಅವರ ವಿಶಾಲಹೃದಯದಿಂದ ಬಂದ ಉತ್ತರ ಈ ಮೂರ್ತಿರಾಯ ಈಗಲಾದರೂ ನನ್ನನ್ನು ನಂಬಲಿ ಎಂದು ದೇವರೇ ಅದನ್ನು ಕೊಡಿಸಿರಬೇಕು’,    ಅವರ ದೀರ್ಘವಯಸ್ಸಿಗೆ ಕಾರಣವೇನೆಂದು ಕೇಳಿದರೆ ಬಹುಷಃ ನಾನು ನಂಬದಿರುವ ದೇವರೇ ಕಾರಣಎಂದು ಅವರ ಅಭಿಪ್ರಾಯ.

ದೇವರುಕೃತಿಗೆ ಪ್ರಶಸ್ತಿ ಬಂದದ್ದರ ಬಗ್ಗೆ ಮತ್ತೊಂದು ಸಮಯದಲ್ಲಿ  ಅವರು ಹೇಳಿದ್ದ ಮಾತು  ನೆನಪಾಗುತ್ತಿದೆ.  ನಾನು ದೇವರಿಲ್ಲ ಎಂದು ಬರೆದ ದೇವರುಕೃತಿಗೆ ಪಂಪ ಪ್ರಶಸ್ತಿ ಬಂತು.  ಪು.ತಿ.ನ ಅವರು ದೇವರ ಅಸ್ತಿತ್ವವನ್ನು ನಿರೂಪಿಸುವ ಶ್ರೀಹರ್ಷಚರಿತೆಗೆ ಕೂಡಾ ಪಂಪ ಪ್ರಶಸ್ತಿ ಬಂತು.  ಒಟ್ಟಿನಲ್ಲಿ ದೇವರಂತೂ ನಿಷ್ಪಕ್ಷಪಾತಿ.

ದೇವರನ್ನು ಕುರಿತಂತೆ ನಮ್ಮ ನಮ್ಮಲ್ಲಿನ ಅಭಿಪ್ರಾಯಗಳು ಏನೇ ಇರಲಿ ಮೂರ್ತಿರಾಯರು ಈ ಲೋಕದಲ್ಲಿ ಅವತರಿಸಿದ ಬಹಳಷ್ಟು ಶ್ರೇಷ್ಠ ಪುರುಷರಂತೆ, ತಾವು ಪ್ರಮಾಣಿಸಿ ಕಾಣದ್ದನ್ನು, ತಾವು ಅನುಭಾವಿಸದಿದ್ದುದನ್ನು ಕುರುಡುತನದಿಂದ ಒಪ್ಪುವ ಮನೋಭಾವದವರಾಗಿಲ್ಲ ಎಂಬುದು ಬಹುಮುಖ್ಯವಾಗಿದ್ದು ಅವರು ಸಕಲ ಸದ್ಗುಣಗಳ ಗಣಿಯಾಗಿದ್ದು ತಮ್ಮ ಸುತ್ತಲಿದ್ದ ಜನ ಸಮುದಾಯಕ್ಕೆ ಹಿತವಾಗುವಂತೆ ಬದುಕಿದ್ದರು.  ಹಾಗಾಗಿ ಅವರು ನೂರಾ ನಾಲ್ಕು ವರ್ಷಗಳು ಈ ಭುವಿಯಲ್ಲಿದ್ದರೂ ಹಿತಭಾವದಲ್ಲೇ ಬದುಕನ್ನು ಅನುಭಾವಿಸಿ ತನ್ನ ಸುತ್ತಲಿನವರಿಗೂ ಅದನ್ನು ಹಂಚಿದರು.  ಅಂತಹವರನ್ನು ತಾನೇ ಲೋಕ ಮತ್ತಷ್ಟು ಬೇಕು ಎನ್ನುವುದು.

ಈ ಮಹಾನ್ ಚೇತನಕ್ಕೆ ನಮ್ಮ ಗೌರವಪೂರ್ವಕ ಸಾಷ್ಟಾಂಗ ಪ್ರಣಾಮಗಳು.

(ಆಧಾರ: ಕನ್ನಡ ಸಂಪದ ಪ್ರಕಟಿಸಿದ ಸಾಹಿತ್ಯ ರತ್ನಗಳು ಕೃತಿಗಾಗಿ ತೀನಂಶ್ರೀ ಅವರ ಪುತ್ರ ತೀ.ಶ್ರೀ.ನಾಗಭೂಷಣ ಅವರು ಬರೆದ ಲೇಖನ ಮತ್ತು ಅ.ರಾ ಮಿತ್ರರ ಬರಹಗಳನ್ನು ಈ ಲೇಖನಕ್ಕೆ ಆಧರಿಸಿದ್ದೇನೆ).

ಚಿತ್ರಕೃಪೆ: www.kamat.com


Tag: A. N. Murthy Rao

ಕಾಮೆಂಟ್‌ಗಳಿಲ್ಲ: