ಶುಕ್ರವಾರ, ಆಗಸ್ಟ್ 30, 2013

ನೀರ್ಪಾಜೆ ಭೀಮಭಟ್ಟ

ನೀರ್ಪಾಜೆ ಭೀಮಭಟ್ಟ

ಕನ್ನಡ, ಹಿಂದಿ ಮತ್ತು ಸಂಸ್ಕೃತಗಳ ಮಹಾನ್ ವಿದ್ವಾಂಸರಾದ ನೀರ್ಪಾಜೆ ಭೀಮಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ನೀರ್ಪಾಜೆಯಲ್ಲಿ ಏಪ್ರಿಲ್ 12, 1934ರಂದು ಜನಿಸಿದರು.  ತಂದೆ ಶಂಕರಭಟ್ಟರು ಮತ್ತು  ತಾಯಿ ಲಕ್ಷ್ಮೀ ಅಮ್ಮನವರು.  ಕಾಸರಗೋಡು ತಾಲ್ಲೂಕಿನ ಪೆರಡಾಲದ ನೀರ್ಚಾಲಿನ ಮಹಾಜನ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಯನ ಕೈಗೊಂಡು ಸಾಹಿತ್ಯ ಶಿರೋಮಣಿ ಪದವಿಗೆ ಪಾತ್ರರಾದ ಭೀಮಭಟ್ಟರು ಹಿಂದಿಯ ರಾಷ್ಟ್ರಭಾಷಾ ವಿಶಾರದರೂ ಹೌದು.

ನೀರ್ಪಾಜೆ ಭೀಮಭಟ್ಟರು ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಕಾಶ್ಮೀರ ಸಂಧಾನ ಸಮುದ್ಯಮಎಂಬ ಕೃತಿಯನ್ನು ರಚಿಸಿದ್ದರಲ್ಲದೆ ‘ಹೈದರಾಬಾದ್ ವಿಜಯಂ’, ‘ಗೋವಾ ಸ್ವತಂತ್ರಂ` ಮುಂತಾದ ನಾಟಕಗಳನ್ನು ಮೂಡಿಸಿದ್ದರು.  ಈ ನಾಟಕ ಪ್ರಯೋಗಗಳು ಕಾರಂತ, ಮಾಸ್ತಿ ಅವರಂತಹ ಹಿರಿಯರ ಮೆಚ್ಚುಗೆ ಗಳಿಸಿದ್ದವು.  ರಾಷ್ಟ್ರೀಯ ಸಂಸ್ಕೃತ ಗ್ರಂಥದಲ್ಲಿ ನೀರ್ಪಾಜೆ ಭೀಮಭಟ್ಟರನ್ನು ಕುರಿತು ಆಧುನಿಕ ನಾಟಕಕಾರೆಂಬ ಉಲ್ಲೇಖವಿದೆಯಲ್ಲದೆ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ. ಎಸ್.  ರಾಧಾಕೃಷ್ಣನ್ ಅವರು ಸಂಪಾದಿಸಿದ ಭಾರತೀಯ ಕವಿತಾ 1955’  ಸಂಪುಟದಲ್ಲಿ ನೀರ್ಪಾಜೆ ಭೀಮಭಟ್ಟರ ಕವಿತೆ ಸೇರ್ಪಡೆಯಾಗಿದೆ.

ನೀರ್ಪಾಜೆ ಭೀಮಭಟ್ಟರು ಸಂಸ್ಕೃತದಿಂದ ಅನುವಾದಿಸಿರುವ ನಾಟಕಗಳಲ್ಲಿ ಮಾಲತಿ ಮಾಧವ, ಮಣ್ಣಿನ ಬಂಡಿ, ಮಾಳವಿಕಾಗ್ನಿ ಮಿತ್ರ, ಊರ್ವಶಿ ಪ್ರಮುಖವಾದವುಗಳಾಗಿವೆ.. ಇವಲ್ಲದೆ ರಾಜಶೇಖರನ ಕಾವ್ಯಮೀಮಾಂಸೆ, ಮಹಾಕವಿ ಬಿಲ್ಹಣನ ವಿಕ್ರಮಾಂಕದೇವ ಚರಿತಂ ಮುಂತಾದವುಗಳನ್ನು ಸಹಾ ಅವರು ಕನ್ನಡಕ್ಕೆ ತಂದಿದ್ದಾರೆ.

ನೀರ್ಪಾಜೆ ಭೀಮಭಟ್ಟರು ಕಾಶ್ಮೀರದ ಸಂಸ್ಕೃತ ಕವಿ ಕಲ್ಹಣನ ರಾಜತರಂಗಿಣಿಕಾವ್ಯವನ್ನು ಸಂಸ್ಕೃತದಿಂದ ಕನ್ನಡಕ್ಕೆ ಗದ್ಯರೂಪದಲ್ಲಿ ಅನುವಾದಿಸಿ ಕೇಂದ್ರ ಸಾಹಿತ್ಯ ಅಕಾಡಮಿಯ ಪುರಸ್ಕಾರಕ್ಕೆ ಪಾತ್ರರಾದವರು.  ರಾಜತರಂಗಿಣಿಕೃತಿಯು  ಪ್ರಾಚೀನ ಕಾಲದಿಂದ ಮೊದಲ್ಗೊಂಡಂತೆ 12ನೇ ಶತಮಾನದವರೆಗಿನ ಕಾಶ್ಮೀರ ರಾಜ್ಯದಲ್ಲಿನ (ಕಲ್ಹಣನ ಕಾಲ ಸುಮಾರು 1100 - 1200) ರಾಜಮಹಾರಾಜರ ಚರಿತ್ರೆ, ಆಡಳಿತದಲ್ಲಿನ ಸಾಮಾಜಿಕ, ಆರ್ಥಿಕ ಸಮಸ್ಯೆಗಳು, ಮೂಢ ನಂಬಿಕೆ, ಸಾಮಾಜಿಕ ಅನಿಷ್ಟಗಳು, ಪ್ರಜೆಗಳ ಕಷ್ಟಕಾರ್ಪಣ್ಯಗಳು, ಸಮಾಜ ಕಂಟಕರು, ಭಷ್ಟಾಚಾರಿಗಳು, ಕಂದಾಯ ತೆರಿಗೆ ಪದ್ಧತಿ ಮುಂತಾದ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿಯೆಂದು ಪ್ರಸಿದ್ಧಿಗೊಂಡಿದ್ದುಇದನ್ನು ಕನ್ನಡಕ್ಕೆ ಗದ್ಯರೂಪದಲ್ಲಿ ತಂದ ಭೀಮಭಟ್ಟರ ಕಾರ್ಯ ಪ್ರಶಂಸನೀಯವೆನಿಸಿದೆ.  ಕರ್ನಾಟಕ ಸಾಹಿತ್ಯ ಅಕಾಡಮಿಯ ಅನುದಾನ ಪಡೆದು ಕಾಶ್ಮೀರ ರಾಜ್ಯದಲ್ಲಿ ಸಂಚರಿಸಿ ಬನಾರಸ್, ಬರೋಡ ವಿಶ್ವವಿದ್ಯಾಲಯಗಳನ್ನು ಸಂದರ್ಶಿಸಿ, ಅಗತ್ಯ ಮಾಹಿತಿ ಸಂಗ್ರಹಿಸಿ ರಚಿಸಿದ ಕೃತಿ ಇದಾಗಿದೆ.

ಪತ್ರಿಕೋದ್ಯಮದಲ್ಲೂ ತಮ್ಮನ್ನು ತೊಡಗಿಸಿಕೊಂಡ ಭೀಮಭಟ್ಟರು ಕಡೆಂಗೋಡ್ಲು ಶಂಕರಭಟ್ಟರ ರಾಷ್ಟ್ರಮತ ಪತ್ರಿಕೆಯಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದ ನಂತರ ಹುಬ್ಬಳ್ಳಿಗೆ ತೆರಳಿ ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಮುಂತಾದ ಪತ್ರಿಕೆಗಳಲ್ಲೂ ಕೆಲಕಾಲ ಕಾರ್ಯನಿರ್ವಹಿಸದರು.  ನಂತರದಲ್ಲಿ ಪುನ: ಊರಿಗೆ ಹಿಂದಿರುಗಿ ಕೃಷಿ ಕಾರ್ಯಕದಲ್ಲಿ ತೊಡಗಿಕೊಂಡರು.  ಇದೇ ಸಮಯದಲ್ಲಿ ಜನವಾಹಿನಿ, ನೇತ್ರಾವತಿ ವಾರ್ತೆ ಮುಂತಾದ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ ಕಾರ್ಯನಿರ್ವಹಿಸಿದ್ದು ಅವರ ಈ ಬರಹಗಳು  ಚೌ ಚೌ, ಚಿತ್ರಾನ್ನ, ಶೂನ್ಯವೇಳೆ, ಸೋತುಗೆದ್ದವರು, ನಾಮದ ಫಲ, ಹೆಂಡತಿ ಮತ್ತು ಪೆಟ್ಟು ಮುಂತಾದ ಸಂಕಲನಗಳಲ್ಲಿ ಮೂಡಿಬಂದಿವೆ.

ಮೇಲ್ಕಂಡ ಕೃತಿಗಳಲ್ಲದೆ ಹಸ್ತ ಶುದ್ಧಿ (ವಿಡಂಬನೆ), ರಸವತ್, ಮನನ, ಸಾಹಿತ್ಯ ಪ್ರಜ್ಞೆ (ಪ್ರಬಂಧಗಳು), ಯುಗ ಪುರುಷ ಉಡುಪರು (ವ್ಯಕ್ತಿ ಚಿತ್ರ), ಕಾಳಿದಾಸ ಸಮೀಕ್ಷೆ (ವಿಮರ್ಶೆ) ಮುಂತಾದ ಹಲವಾರು ಕೃತಿಗಳನ್ನು ಭೀಮಭಟ್ಟರು ರಚಿಸಿದ್ದಾರೆ.

ಸಾಮಾಜಿಕ ಕಾರ್ಯಗಳಲ್ಲಿಯೂ ಕ್ರಿಯಾಶೀಲರಾಗಿದ್ದ ಭೀಮಭಟ್ಟರು ಮಂಡಲ ಪಂಚಾಯತ್, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಹೀಗೆ ರಾಜಕೀಯ, ಸಾಹಿತ್ಯ, ಯಕ್ಷಗಾನ ಮುಂತಾದ ಕ್ಷೇತ್ರಗಳಲ್ಲಿ ದುಡಿದಿದ್ದಾರೆ. ತಮ್ಮದೇ ಅಭ್ಯುದಯ ಪ್ರಕಾಶನದಡಿಯಲ್ಲಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. 1998ರ ವರ್ಷದಲ್ಲಿ  ಅಭಿಮಾನಿಗಳು, ಸಾಹಿತ್ಯಾಸಕ್ತರು ಕೂಡಿ ಅರ್ಪಿಸಿದ ಗೌರವ ಗ್ರಂಥ ಅಭ್ಯುದಯ’.

ಸಾಹಿತ್ಯ ಲೋಕದಲ್ಲಿ ಮಹತ್ತರವಾದ ಕಾರ್ಯವನ್ನು ಸಾಧಿಸಿದ ನೀರ್ಪಾಜೆ ಭೀಮಭಟ್ಟರು ಭಟ್ಟರು 2002ರ ವರ್ಷದ ಡಿಸೆಂಬರ್ 12ರಂದು.ಈ ಲೋಕವನ್ನಗಲಿದರು.  2003ರ ವರ್ಷದಲ್ಲಿ ಶಿರೋಮಣಿಎಂಬ ಸಂಸ್ಮರಣ ಗ್ರಂಥವು ಪ್ರಕಟವಾಗಿದ್ದಲ್ಲದೆ ನೀರ್ಪಾಜೆಯವರ ಹೆಸರನ್ನು ಚಿರಸ್ಥಾಯಿಯಾಗಿಸಲು  2004ರಲ್ಲಿ ನೀರ್ಪಾಜೆ ಭೀಮಭಟ್ಟ ಪ್ರತಿಷ್ಠಾನವು ಪ್ರಾರಂಭಗೊಂಡಿದ್ದು, ಪ್ರತಿ ವರ್ಷವೂ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.Tag: Neerpaje Bheema Bhatta

ಕಾಮೆಂಟ್‌ಗಳಿಲ್ಲ: