ಗುರುವಾರ, ಆಗಸ್ಟ್ 29, 2013

ಭುವನೇಶ್ವರಿ ಹೆಗಡೆ

ಭುವನೇಶ್ವರಿ ಹೆಗಡೆ

ಹಾಸ್ಯಬರಹ, ಉಪನ್ಯಾಸ, ಪ್ರಾಧ್ಯಾಪನಗಳಲ್ಲಿ ಪ್ರಖ್ಯಾತರಾದ  ಭುವನೇಶ್ವರಿ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಕತ್ರಗಾಲದಲ್ಲಿ ಮೇ 6, 1956ರಂದು ಜನಿಸಿದರು.   ತಂದೆ ಗಣಪತಿ ಹೆಗಡೆ ಅವರು ಮತ್ತು  ತಾಯಿ ಗೌರಮ್ಮನವರು.  ಭುವನೇಶ್ವರಿಯವರು ಹೂವಿನಮನೆಯಲ್ಲಿ  ಪ್ರಾಥಮಿಕ ವಿದ್ಯಾಭ್ಯಾಸ, ಇಟಗಿಯಲ್ಲಿ ಹೈಸ್ಕೂಲು, ಶಿರಸಿಯಲ್ಲಿ  ಪದವಿ  ವಿದ್ಯಾಭ್ಯಾಸಗಳನ್ನು ಪೂರೈಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ  ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ  ಕರ್ನಾಟಕ ರಾಜ್ಯ  ಮುಕ್ತವಿಶ್ವವಿದ್ಯಾಲಯದಿಂದ  ಮನಃಶಾಸ್ತ್ರದಲ್ಲಿ  ಸ್ನಾತಕೋತ್ತರ  ಪದವಿಗಳನ್ನು ಪೂರೈಸಿದರು.  1984ರಲ್ಲಿ ಹಾಸನದಲ್ಲಿ  ಪ್ರಾಧ್ಯಾಪನ ವೃತ್ತಿಯನ್ನು  ಆರಂಭಿಸಿದ     ಭುವನೇಶ್ವರಿಯವರು 1985ರ ವರ್ಷದಿಂದ ಮಂಗಳೂರು  ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪನ ನಡೆಸಿಕೊಂಡು ಬಂದಿದ್ದಾರೆ.

ವೃತ್ತಿಯಿಂದ ಅರ್ಥಶಾಸ್ತ್ರದ ಉಪನ್ಯಾಸಕರಾದ ಭುವನೇಶ್ವರಿಯವರಿಗೆ  ಹಾಸ್ಯ ಒಲಿದದ್ದಾರೂ ಹೇಗೆ?   ಈ ಕುರಿತು  ಭುವನೇಶ್ವರಿಯವರ  ಸ್ವಯಂ ಉವಾಚ  ಇಂತಿದೆ: “ನಮ್ಮೂರಿನ  ಪ್ರತಿ ಮನೆಯಲ್ಲಿ  ಯಕ್ಷಗಾನ ಕಲಾವಿದರು,  ಭಾಗವತರು ಇದ್ದ ದಿನಗಳವು.  ನಮ್ಮ ತಂದೆಯವರದ್ದೂ  ಯಕ್ಷಗಾನ ಕುಟುಂಬ.  ತಂದೆಯ ವಿಡಂಬನಾ ಶೈಲಿ ನನಗಿಷ್ಟವಾಗಿತ್ತು.  ಆ ದಿನಗಳಲ್ಲಿ ಹರಟೆ  ಮಾಮೂಲಿಯಾಗಿತ್ತು.  ಹಳ್ಳಿಗರ  ಮುಗ್ಧ ಮಾತುಗಳು ಮತ್ತು  ಆಗುಹೋಗುಗಳ ಹರಟೆಯಲ್ಲಿ  ಮನುಷ್ಯ  ಪ್ರೀತಿ  ಎದ್ದು  ಕಾಣುತ್ತಿತ್ತು.  ಹಾಸ್ಯ ಸಾಹಿತ್ಯದ  ಮೂಲವೇ ಜೀವನ ಪ್ರೀತಿ.  ಹಾಸ್ಯದ ಅಸ್ವಾದನೆಗೂ  ಇದು ಬೇಕು.  ಇದೆಲ್ಲವನ್ನೂ  ಗೊತ್ತಿಲ್ಲದಂತೆಯೇ  ನನಗೆ  ಕಲಿಸಿಕೊಟ್ಟಿದ್ದು  ಹಳ್ಳಿಯ  ಬದುಕು.  ನಾನು ಹಾಸ್ಯದತ್ತ  ಹೊರಳಲು ಇದೇ  ಪ್ರೇರಣೆಯಾಯಿತು.”  

ಬದುಕನ್ನು  ತೆರೆದ ಮನದಿಂದ  ಕಾಣುವ   ಮನೋಭಾವ ಭುವನೇಶ್ವರಿಯವರ  ಬರಹಗಳಲ್ಲಿ  ಎದ್ದು ಕಾಣುತ್ತದೆ.  ಭುವನೇಶ್ವರಿ ಅವರು ಧಾರವಾಡದಲ್ಲಿ ಎಂ. ಎ. ಓದುವ ದಿನದಲ್ಲಿ  ಅವರ  ಪರೀಕ್ಷೆಗಳು  ಒಂದು  ತಿಂಗಳು ಮುಂದಕ್ಕೆ  ಹೋಯಿತಂತೆ.  ಆಗ  ಅವರು ಗ್ರಂಥಾಲಯದಲ್ಲಿನ  ಗ್ರಂಥಪಾಲಕರ  ಬಳಿ ಹೋಗಿ  ಅರ್ಥಶಾಸ್ತ್ರದ  ಹೊರತಾಗಿ  ಬೇರೆ  ಏನನ್ನಾದರೂ  ಓದಲು ಸಲಹೆ ಕೊಡಿ  ಎಂದಾಗ,  ಆ  ಗ್ರಂಥಪಾಲಕರು  ಲಾಂಗೂಲಾಚಾರ್ಯ  ಎಂಬ  ನಾಮಾಂಕಿತದಿಂದ ಹಾಸ್ಯ  ಸಾಹಿತ್ಯದಲ್ಲಿ  ಪ್ರಸಿದ್ಧರಾದ  ಪಾ. ವೆಂ.  ಆಚಾರ್ಯರ  ಪುಸ್ತಕ  ನೀಡಿದರಂತೆ.   ಆ  ಓದು ತಂದ  ಸ್ಫೂರ್ತಿ  ಭುವನೇಶ್ವರಿಯವರಲ್ಲಿ  ಹಾಸ್ಯ ಸಾಹಿತ್ಯ  ರಚಿಸಬೇಕು  ಎಂಬ  ಹುಮ್ಮಸ್ಸು  ಮೂಡಿಸಿತು.  ಹೀಗೆ ಅವರಿಂದ  ಮೊದಲು ಬಂದ ಹಾಸ್ಯ  ಬರಹ ‘ಏಕಾಂತ  ಸುಖ’.  ಹಾಸ್ಯಸಾಹಿತ್ಯ ಕ್ಷೇತ್ರಕ್ಕೆ  ಮೀಸಲಾಗಿ  ಮುಂದುವರೆಯಲು ಸಲಹೆ ನೀಡಿದ್ದ  ಡಾ.  ಅನುಪಮಾ  ನಿರಂಜನ  ಅವರನ್ನು ಸಹಾ  ಭುವನೇಶ್ವರಿ ಅವರು  ನೆನೆಯುತ್ತಾರೆ.

ಹಳ್ಳಿಯಲ್ಲಿ ಹುಟ್ಟಿಬೆಳೆದ ಭುವನೇಶ್ವರಿ ಹೆಗಡೆಯವರ ಪ್ರಾರಂಭದ ಲೇಖನಗಳ ವಸ್ತು ಗ್ರಾಮೀಣ ಜೀವನವಾಗಿತ್ತು.  ಅವರ ಮುಂದಿನ ಹಂತದ ಲೇಖನಗಳಲ್ಲಿ ನಗರ ಜೀವನದಲ್ಲಿನ ಹಾಸ್ಯವಿದೆ.  ಸಾಮಾನ್ಯವೆಂದು ಕಾಣಬರುವ ಅನೇಕ ಸನ್ನಿವೇಶಗಳನ್ನು ಭುವನೇಶ್ವರಿ ಹೆಗಡೆಯವರು ತಮ್ಮ ಹಾಸ್ಯ ದಂಡದಿಂದ ನಗೆ ಕೊನರುವಂತೆ ಮಾಡಿ ಓದುಗರನ್ನು ಆಕರ್ಷಿಸಬಲ್ಲರು.  ಜೀವನದಲ್ಲಿನ  ವಿಭಿನ್ನ  ಸನ್ನಿವೇಶಗಳಲ್ಲಿ ಹಾಸ್ಯ ಹುಟ್ಟುವುದಾದರೂ ಹೇಗೆ ಎಂಬುದಕ್ಕೆ  ಭುವನೇಶ್ವರಿ ಅವರು  ತಮಗೆ ಎದುರಾದ  ಸನ್ನಿವೇಶಗಳ ಕುರಿತಾಗಿ  ಹೇಳುವ  ಈ ಮಾತುಗಳು  ಮಾರ್ಮಿಕವಾಗಿವೆ:  “ಧಾರವಾಡದಲ್ಲಿದ್ದ  ನನಗೆ ಅಲ್ಲಿನ  ಭಾಷಾ  ಸೊಗಡು ಹಾಗೂ ಜೀವನ ರೀತಿ ಹಾಸ್ಯಬರಹಗಳಿಗೆ  ಸುಲಭ ವಸ್ತುವಾಗಿತ್ತು.  ಆದರೆ  ದಕ್ಷಿಣ ಕನ್ನಡಕ್ಕೆ  ಬಂದಾಗ ನನ್ನ ಪಾಲಿಗೆ  ಹಾಸ್ಯದ  ಬಾಗಿಲು ಮುಚ್ಚಿದ  ಆಗಿತ್ತು.  ಇಲ್ಲಿನ ಕ್ರಮಬದ್ಧ – ಗಂಭೀರ ಬದುಕು, ಪ್ರಕಟವಾಗದ ಭಾವತೀವ್ರತೆ ಕಂಡು, ಬರಹಕ್ಕೆ ಬೇಕಾದ ವಸ್ತು ಸಿಗದೆ ಸಪ್ಪೆ ಎನಿಸಿತ್ತು.  ಇಂತಹ ಸಂದರ್ಭದಲ್ಲಿ  ಮೂರನೇ (ಹಾಸ್ಯ) ಕಣ್ಣಿಂದ  ನೋಡು ಎಂಬ ಪಾ.ವೆಂ ಅವರ ಸಲಹೆ ವರದಾನವಾಯಿತು.  ನನ್ನ ಬರಹಕ್ಕೆ  ಬೇಕಾದಷ್ಟು ಸರಕು ಸಿಕ್ಕಿತು.  ಇಲ್ಲಿನ ಭಾಷೆಯ ಸೊಗಡು ನನ್ನನ್ನು ಬರಹಕ್ಕೆ ಮತ್ತಷ್ಟು ಪ್ರೇರೇಪಿಸಿತು.  ನನ್ನ ಹಾಸ್ಯಪ್ರಜ್ಞೆಯ  ಪ್ರಮುಖ ವಸ್ತುಗಳಾಗಿದ್ದು ತುಳು ಭಾಷೆ, ವಿದ್ಯಾರ್ಥಿಗಳು ಮತ್ತು  ಖಾಸಗಿ ಬಸ್ಸುಗಳು”.     

ಮೂರು ದಶಕಗಳಿಗೂ ಹೆಚ್ಚು ಅವಧಿಯಲ್ಲಿ ಭುವನೇಶ್ವರಿಯವರು ಐದುನೂರಕ್ಕೂ ಹೆಚ್ಚಿನ ಬರಹಗಳನ್ನು ಮೂಡಿಸಿದ್ದು ಅವು   ಹಾಸ್ಯಪ್ರಬಂಧಗಳು, ನಗೆಬರಹಗಳು ಇತ್ಯಾದಿ ರೂಪಗಳಲ್ಲಿ ಹತ್ತಾರು ಸಂಕಲನಗಳಲ್ಲಿ ವ್ಯಾಪಿಸಿಕೊಂಡಿವೆ. ಮುಗಳು’,  ‘ನಕ್ಕು ಹಗುರಾಗಿ’, ‘ಎಂಥದು ಮಾರಾಯ್ರೆ’, ‘ವಲಲ ಪ್ರತಾಪ’, ‘ಹಾಸ-ಭಾಸ’, ‘ಮೃಗಯಾವಿನೋದ’, ‘ಬೆಟ್ಟದ ಭಾಗೀರಥಿ’ , ‘ಮಾತಾಡಲು ಮಾತೇ ಬೇಕೇ?’,  ‘ಪುಟ್ಟಿಯ ಪಟ್ಟೆ ಹುಲಿ’, ‘ಕೈಗುಣ ಬಾಯ್ಗುಣ’ , ‘ಬೆಸ್ಟ್‌ ಆಫ್‌ ಭುವನೇಶ್ವರಿ ಹೆಗಡೆಮುಂತಾದವು ಭುವನೇಶ್ವರಿ ಹೆಗಡೆಯವರ ಪ್ರಸಿದ್ಧ ಹಾಸ್ಯ ಸಂಕಲನಗಳು.  ಹಾಸ್ಯಲೇಖನಗಳಷ್ಟೇ ಅಲ್ಲದೆ ಭುವನೇಶ್ವರಿಯವರು  ಕೆಲ ಪತ್ರಿಕೆಗಳಿಗೆ ಅಂಕಣಬರಹಗಳನ್ನೂ ನಿರ್ವಹಿಸುತ್ತಿದ್ದಾರೆ. ಲಂಕೇಶ್‌ ಪತ್ರಿಕೆಗಾಗಿ ಮಂಗಳೂರು ಮುಗುಳ್ನಗೆ’, ಉದಯವಾಣಿ ಪತ್ರಿಕೆಗಾಗಿ ಲಘು-ಬಗೆ’, ಕರ್ಮವೀರ ಪತ್ರಿಕೆಗಾಗಿ ಎಂಥದು ಮರಾಯ್ರೆ, ವಿಜಯವಾಣಿಯ ‘ಮುಗಳು’  ಮುಂತಾದವು ಭುವನೆಶ್ವರಿಯವರ ಪ್ರಸಿದ್ಧ ಅಂಕಣಗಳು. ಕನ್ನಡ ನಾಡಿನ ಪ್ರಸಿದ್ಧ ವಿದ್ವಾಂಸರಾದ ಬಿ. ಎಸ್. ಚಂದ್ರಶೇಖರ್ (ಬಾಗೂರು ಚಂದ್ರು) ಅವರು ಸಂಕಲನಮಾಡಿರುವ ಶತಮಾನದ ನಗೆಬರಹಗಳುಕೃತಿಯಲ್ಲಿ ಭುವನೇಶ್ವರಿ ಹೆಗಡೆಯವರ ಏಕಾಂತ ಸುಖಬರಹ ಮೂಡಿಬಂದಿದೆ.  

ಆಕಾವಾಣಿಯಲ್ಲಿಯೂ ಭುವನೇಶ್ವರಿಯವರ ಹಾಸ್ಯಭಾಷಣ, ರೂಪಕ, ಚಿಂತನ, ಹಾಗೂ ಪ್ರಹಸನಗಳು ಪ್ರಕಟಗೊಂಡಿವೆ. ಅವರ ನಗೆನಾಟಕಗಳು ಎಲ್ಲ ಬಾನುಲಿ ಕೇಂದ್ರಗಳು ಹಾಗೂ ಟಿ.ವಿ. ವಾಹಿನಿಯಲ್ಲಿ ಪ್ರಸಾರವಾಗಿವೆ. ದೂರದರ್ಶನದಲ್ಲಿ ಹರಟೆ, ಚರ್ಚೆ, ಕವಿಗೋಷ್ಠಿಗಳಲ್ಲಿ ಭಾಗಿಯಾಗಿದ್ದಾರೆ. ವಿಶ್ವದಾದ್ಯಂತ ಅನೇಕ ಹಾಸ್ಯ ಸಮ್ಮೇಳನಗಳಲ್ಲಿ ಭಾಷಣ, ಪ್ರಬಂಧ ಮಂಡನೆ ಮಾಡಿದ್ದಾರೆ.  1988ರಲ್ಲಿ ತಂಜಾವೂರಿನಲ್ಲಿ ನಡೆದ ಚತುರ್ದ್ರಾವಿಡ ಭಾಷಾ ಸಮ್ಮೇಳನದಲ್ಲಿ ಮತ್ತು 1989ರಲ್ಲಿ ನಡೆದ ದೆಹಲಿಯ ಬರಹಗಾರರ ಒಕ್ಕೂಟದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.  ಕನ್ನಡ ಪಠ್ಯಪುಸ್ತಕಗಳಲ್ಲಿ ಇವರ ಪ್ರಬಂಧಗಳು ಸೇರ್ಪಡೆಯಾಗಿವೆ. ಕರ್ನಾಟಕದ ಮೂಲೆ  ಮೂಲೆಗಳಲ್ಲೂ  ಅವರ  ಉಪನ್ಯಾಸಗಳು  ನಿರಂತರವಾಗಿ  ಜನರನ್ನಾಕರ್ಷಿಸುತ್ತಾ  ಸಾಗಿವೆ. 

1983, 84, 85ರಲ್ಲಿ ಸತತವಾಗಿ ಮೂರುಬಾರಿ ಬೀchi’ ಹಾಸ್ಯ ಪ್ರಶಸ್ತಿ ಪಡೆದು ಹ್ಯಾಟ್ರಿಕ್‌ ಸಾಧಿಸಿದ ಕೀರ್ತಿ ಭುವನೇಶ್ವರಿಯವರದು.  ಭುವನೇಶ್ವರಿ ಹೆಗಡೆಯವರ  ಮುಗುಳುಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗಡೆ ಪ್ರಶಸ್ತಿ; ‘ನಕ್ಕು ಹಗುರಾಗಿಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಡುಕೋಣೆ ರಮಾನಂದ ಪ್ರಶಸ್ತಿ; ಇನ್ಫೋಸಿಸ್ ಫೌಂಡೇಶನ್ ಪ್ರಶಸ್ತಿ, 'ಎಂಥದು ಮಾರಾಯ್ರೆಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, 'ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ' ಮುಂತಾದ ಅನೇಕ ಪ್ರಶಸ್ತಿಗಳನ್ನು ಅವರು ಗಳಿಸಿರುವುದರ ಜೊತೆ ಜೊತೆಗೆ ಏಷಿಯಾದ ಅಂತಾರಾಷ್ಟ್ರೀಯ ಸಾಧನಶೀಲ ಮಹಿಳೆಯರ ಕುರಿತಾದ ಪುಸ್ತಕ ರೆಫರೆನ್ಸ್‌ ಏಷಿಯಾದಲ್ಲಿ  ಸೇರ್ಪಡೆಯಾಗಿದ್ದಾರೆ.   ಲಂಡನ್ನಿನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನ ಯೂರೋಪ್ಗೋಷ್ಠಿಯಲ್ಲಿ ಆಹ್ವಾನಪಡೆದು ಗೌರವ ಸ್ವೀಕರಿಸಿದ್ದಾರೆ.  

ತಮ್ಮ ಹಾಸ್ಯಕ್ಕೊಂದು ಸಂಹಿತೆಯನ್ನು ವಿಧಿಸಿಕೊಂಡಿರುವ  ಭುವನೇಶ್ವರಿ ಹೆಗಡೆ ಅವರು ಮಾನಸಿಕ ಅಸ್ವಸ್ಥರು ಮತ್ತು ಅಂಗವಿಕಲರನ್ನು  ಹಾಸ್ಯದ ವಸ್ತುಗಳನ್ನಾಗಿ ಬಳಸುವುದಿಲ್ಲ.  “ನನ್ನ ಬರಹಗಳೇನಿದ್ದರೂ  ಸರಿಯಿದ್ದೂ  ಕುಂಟುವವರ  ಬಗ್ಗೆ ಮತ್ತು  ತಮ್ಮ ಬಗ್ಗೆ  ತಾವೇ ಹೇಳಿಕೊಳ್ಳುವವರ ಬಗ್ಗೆ” ಎನ್ನುವ  ಅವರು   ದೇವರು,  ಜಾತಿ ಮತ್ತು ವೃತ್ತಿಗಳನ್ನೂ   ತಮ್ಮ  ಹಾಸ್ಯ ಬರಹಗಳಿಂದ  ಹೊರಗಿಟ್ಟಿದ್ದಾರೆ.  ದೋಷಗಳ ಬಗ್ಗೆ ಹೇಳುವಾಗ  ಬೇರೆಯವರನ್ನು  ಮಾತ್ರವಲ್ಲದೆ  ತಮ್ಮನ್ನೂ  ಸೇರಿಸಿಕೊಳ್ಳುತ್ತಾರೆ.


ತಮ್ಮ ಪ್ರವೃತ್ತಿ ಮತ್ತು ಬರಹಗಳಿಂದ ಎಲ್ಲೆಡೆ ನಗೆಯನ್ನು ಚೆಲ್ಲುವ ಭುವನೇಶ್ವರಿ ಹೆಗಡೆಯವರ ಬದುಕಿನಲ್ಲಿ ನಿತ್ಯ ಸಂತಸ, ಸುಖ, ಸೌಖ್ಯಗಳು ತುಂಬಿರಲಿ.  ನಮಗೆ ಅನುದಿನವೂ ಅವರ ಸುಂದರ ನಗೆಬರಹಗಳನ್ನು ಓದುವ ಸೌಭಾಗ್ಯ ದೊರಕುತ್ತಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ತಿಳಿಸೋಣ.

Tag: Bhuvaneshwari Hegde

ಕಾಮೆಂಟ್‌ಗಳಿಲ್ಲ: