ಬುಧವಾರ, ಆಗಸ್ಟ್ 28, 2013

ಟಿ. ಎಸ್. ನರಸಿಂಹನ್

ಶ್ರೇಷ್ಠ ನಿರ್ಮಾಪಕ ಟಿ. ಎಸ್. ನರಸಿಂಹನ್ ಇನ್ನಿಲ್ಲ

'ಮಾಲ್ಗುಡಿ ಡೇಸ್' ಧಾರಾವಾಹಿಯಂತಹ ಶ್ರೇಷ್ಠ ದೂರದರ್ಶನ ಧಾರಾವಾಹಿಗಳು ಮತ್ತು ಕನ್ನಡದ ಹಲವಾರು ಶ್ರೇಷ್ಠ ಚಿತ್ರಗಳನ್ನು ನಿರ್ಮಿಸಿ ಶ್ರೇಷ್ಠ  ನಿರ್ಮಾಪಕರೆನಿಸಿದ್ದ  ಟಿ.ಎಸ್. ನರಸಿಂಹನ್   26.07.2013 ಶುಕ್ರವಾರ ರಾತ್ರಿ ಬೆಂಗಳೂರಿನ  ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.  ಅವರಿಗೆ 86ವರ್ಷ ವಯಸ್ಸಾಗಿತ್ತು.   ಶಂಕರ್‌ನಾಗ್ ನಿರ್ದೇಶನದ `ಮಾಲ್ಗುಡಿ ಡೇಸ್' ನರಸಿಂಹನ್ ಅವರಿಗೆ ಎಲ್ಲೆಡೆ ವಿಶೇಷ ಮನ್ನಣೆ ತಂದುಕೊಟ್ಟಿತ್ತು. 1986ರಲ್ಲಿ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದು ವಿಶ್ವಪ್ರಖ್ಯಾತಿ ಪಡೆದ ಈ ನಿರ್ಮಾಣ ದೂರದರ್ಶನದಲ್ಲಿ  39 ಕಂತುಗಳಲ್ಲಿ ಪ್ರಸಾರಗೊಂಡಿತ್ತು.  ಟಿ. ಎಸ್. ನರಸಿಂಹನ್ ಅವರು ಉತ್ತಮ ಚಿತ್ರಕಥೆಗಾರರೂ ಆಗಿದ್ದರು.

ಟೆಲಿಕಾಂ ಎಂಜಿನಿಯರ್ ಹಾಗೂ ಉದ್ಯಮಿಯಾಗಿದ್ದ  ನರಸಿಂಹನ್ ಬಳಿಕ ಚಿತ್ರರಂಗದಲ್ಲಿ ಹಲವಾರು ಶ್ರೇಷ್ಠ ಕೊಡುಗೆಗಳನ್ನು ನೀಡಿದವರಾಗಿದ್ದಾರೆ. 1971ರಲ್ಲಿ `ಕೆಸರಿನ ಕಮಲ' ಚಿತ್ರಕ್ಕೆ ಕತೆ ಬರೆಯುವುದರ ಜೊತೆಗೆ ಅವರು  ಅದರ ನಿರ್ಮಾಪಕರೂ ಆದರು. ಬಿ.ಎಸ್. ಸೋಮಸುಂದರ್ ಜೊತೆಗೂಡಿ 'ಹೊಂಬಿಸಿಲು', 'ಬಂಗಾರದ ಜಿಂಕೆ' ಹಾಗೂ 'ಬ್ಯಾಂಕರ್ ಮಾರ್ಗಯ್ಯ'  ಮುಂತಾದ ಸುಂದರ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದರು.  ಹೊಸ ಅಲೆಯ ಚಿತ್ರ 'ಬ್ಯಾಂಕರ್ ಮಾರ್ಗಯ್ಯ' ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪಡೆದಿತ್ತು.  ವಾದಿರಾಜ್ ನಿರ್ದೇಶಿಸಿದ್ದ ಮಕ್ಕಳ ಚಿತ್ರ  'ದಂಗೆಯೆದ್ದ ಮಕ್ಕಳು' ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಪಾತ್ರವಾಗಿತ್ತು. ಆರ್.ಕೆ. ನಾರಾಯಣ್ ಅವರ `ಸ್ವಾಮಿ ಅಂಡ್ ಹಿಸ್ ಫ್ರೆಂಡ್ಸ್' ಕತೆ ಆಧರಿಸಿದ್ದ `ಸ್ವಾಮಿ' ಚಿತ್ರಕ್ಕೂ ಇವರು ದುಡಿದಿದ್ದರು.

'ಸ್ಟೋನ್ ಬಾಯ್' ಹಾಗೂ 'ತೆನಾಲಿರಾಮ' ಧಾರಾವಾಹಿಗಳನ್ನೂ ನರಸಿಂಹನ್ ನಿರ್ಮಿಸಿದ್ದರು. ಅವರದೇ ಕತೆ ಹೊಂದಿದ್ದ, ಮಾಸ್ಟರ್ ಮಂಜುನಾಥ್ ಅಭಿನಯಿಸಿದ್ದ  'ಸ್ಟೋನ್ ಬಾಯ್' ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಅನಾರೋಗ್ಯದಿಂದಾಗಿ ಐದಾರು ವರ್ಷ ಬಣ್ಣದಲೋಕದಿಂದ ದೂರ ಉಳಿದ ಅವರು ಬಳಿಕ ಜನಪ್ರಿಯತೆಯ ಉತ್ತುಂಗಕ್ಕೇರಿದ್ದು `ಕಥಾಸರಿತ' ಸರಣಿಯ ಮೂಲಕ.  ಕಲಾಗಂಗೋತ್ರಿ ಮಂಜು ನಿರ್ದೇಶಿಸಿದ್ದ ಈ ಧಾರಾವಾಹಿ ಹಲವು ಭಾಷೆಗಳಿಗೆ ಅನುವಾದಗೊಂಡಿತ್ತು. ಅಲ್ಲದೆ ಅವರು ತಯಾರಿಸಿದ ಅನೇಕ ಸಾಕ್ಷ್ಯಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದವು.

ನರಸಿಂಹನ್ ಅವರು ವಿವಿಧ ರೀತಿಯಲ್ಲಿ ಸಕ್ರಿಯರಾಗಿದ್ದರು.  ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ, ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಂತಾದ ಸಂಸ್ಥೆಗಳಲ್ಲಿ ಅವರ ಸೇವೆ ಸಂದಿತ್ತು.  ಕರ್ನಾಟಕಕ್ಕೆ ಮಕ್ಕಳ ಚಲನಚಿತ್ರ ಮಳಿಗೆ (Children Film Complex) ತರಬೇಕು ಎಂದು ಅವರು ನಿರಂತರವಾಗಿ ಶ್ರಮಿಸಿದ್ದರಾದರೂ ಅವರ ಶ್ರಮ ಕೈಗೂಡಲಿಲ್ಲ.  ಅವರು ನಿರ್ಮಿಸಿದ ಜ್ಯೋತಿ ಎಡಿಟಿಂಗ್ ಲ್ಯಾಬೋರೇಟರಿ ಕೇಂದ್ರ ಹಲವಾರು ಶ್ರೇಷ್ಠ ಚಿತ್ರಗಳಿಗೆ ಸಂಕಲನ ಸೌಲಭ್ಯವನ್ನು ಒದಗಿಸಿತ್ತು.

ಚಿತ್ರರಂಗ ಹಾಗೂ ಕಿರುತೆರೆಗೆ ಟಿ. ಎಸ್. ನರಸಿಂಹನ್ ಅವರು  ನೀಡಿದ ಕೊಡುಗೆಯನ್ನು ಗೌರವಿಸಿ ರಾಜ್ಯ ಸರ್ಕಾರ 2000-2001ನೇ ಸಾಲಿನ ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿತ್ತು.

ಉತ್ತಮ ಅಭಿರುಚಿ ಎಂಬುದೇ ಕ್ಷೀಣವಾಗುತ್ತಿರುವ ಈ ದಿನಗಳಲ್ಲಿ ಟಿ. ಎಸ್. ನರಸಿಂಹನ್ ಅಂಥಹ ಶ್ರೇಷ್ಠ ನಿರ್ಮಾಪಕ, ಕ್ರಿಯಾಶೀಲ ವ್ಯಕ್ತಿಯನ್ನು ಕಳೆದುಕೊಂಡಿರುವ ಕಲಾ ಲೋಕ ಮತ್ತಷ್ಟು ಬಡವಾಗಿದೆ.  ಈ ಮಹಾನ್ ಚೇತನಕ್ಕೆ ನಮಿಸಿ, ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ,  ಅವರನ್ನು ಕಳೆದುಕೊಂಡ ಕುಟುಂಬಕ್ಕೆ ಈ ದುಃಖವನ್ನು ಬರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸೋಣ.

Tag: T. S. Narasimhan

ಕಾಮೆಂಟ್‌ಗಳಿಲ್ಲ: