ಮಂಗಳವಾರ, ಆಗಸ್ಟ್ 27, 2013

ಮತ್ತೂರು ಕೃಷ್ಣಮೂರ್ತಿ

ಮತ್ತೂರು ಕೃಷ್ಣಮೂರ್ತಿ

ಸಂಸ್ಕೃತ, ವೇದ, ಉಪನಿಷತ್ತುಗಳಲ್ಲಿ ಪಾಂಡಿತ್ಯ ಗಳಿಸಿದ್ದ ಡಾ.ಮತ್ತೂರು ಕೃಷ್ಣಮೂರ್ತಿ ಅವರು ಗಮಕ ವ್ಯಾಖ್ಯಾನಕಾರರಾಗಿ ಸಾಕಷ್ಟು ಜನಪ್ರಿಯರಾಗಿದ್ದವರು. ಉನ್ನತ ಶಿಕ್ಷಣ ಪಡೆಯದಿದ್ದರೂ ಸ್ವಂತ ಪರಿಶ್ರಮದಿಂದ ಪಾಂಡಿತ್ಯ ಗಳಿಸಿ ಭಾರತದ ಸಾಂಸ್ಕೃತಿಕ ರಾಯಭಾರಿ` ಎಂಬ ಮನ್ನಣೆಗೆ ಪಾತ್ರರಾಗಿದ್ದವರು.  ಆ ಮೂಲಕ ಪ್ರತಿಷ್ಠಿತ `ಪದ್ಮಶ್ರೀ` ಪ್ರಶಸ್ತಿಗೆ ಭಾಜನರಾದವರು.

ಜವಾಹರಲಾಲ್ ನೆಹರು, ರಾಜಾಜಿ, ಕಾಮರಾಜ್, ಕಂಚಿ ಪರಮಾಚಾರ್ಯರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುತ್ತಿದ್ದ ಶ್ರೇಷ್ಠ ಅನುವಾದಕರಾಗಿದ್ದ ಅವರು, ಭಾರತೀಯ ವಿದ್ಯಾಭವನದ ಬೆಳವಣಿಗೆಗೆ ಶ್ರಮಿಸಿದರು.

ರಾಮಕೃಷ್ಣಯ್ಯ ಹಾಗೂ ನಂಜಮ್ಮ ಅವರ ಎಂಟನೇ ಹಾಗೂ ಕೊನೆಯ ಪುತ್ರರಾಗಿ ಕೃಷ್ಣಮೂರ್ತಿ ಅವರು 1929ರ ಆಗಸ್ಟ್ 8ರಂದು ಶಿವಮೊಗ್ಗ ಬಳಿಯ ಮತ್ತೂರಿನಲ್ಲಿ ಜನಿಸಿದರು. ಕೃಷ್ಣ ಜನ್ಮಾಷ್ಟಮಿಯಂದು ಜನಿಸಿದ ಕಾರಣಕ್ಕೆ ಮಗುವಿಗೆ ಕೃಷ್ಣಮೂರ್ತಿ ಎಂಬ ಹೆಸರನ್ನಿಡಲಾಯಿತು. ಮರಗೆಲಸ ಮಾಡುತ್ತಿದ್ದ ರಾಮಕೃಷ್ಣಯ್ಯ ಅವರ ದುಡಿಮೆಯಿಂದ ದೊಡ್ಡ ಸಂಸಾರದ ನಿರ್ವಹಣೆ ಕಷ್ಟಕರವಾಗಿತ್ತು. ಹಾಗಾಗಿ ಕೃಷ್ಣಮೂರ್ತಿ ಅವರು ವಾರಾನ್ನ ಮಾಡಿ ಪ್ರಾಥಮಿಕ ಶಿಕ್ಷಣ ಪೂರೈಸಿದರು.

ಅಣ್ಣನೊಂದಿಗೆ ಅಂದಿನ ದಿನಗಳಲ್ಲಿ ಮದ್ರಾಸಿಗೆ ತೆರಳಿದ ಬಾಲಕನಿಗೆ ಮಹಾತ್ಮ ಗಾಂಧೀಜಿ ಅವರನ್ನು ಕಾಣುವ ಅವಕಾಶ ದೊರೆಯಿತು. ಅವರನ್ನು ನೋಡಲೇಬೇಕೆಂಬ ತವಕದಿಂದ ಮೂರೇ ದಿನದಲ್ಲಿ ಹಿಂದಿ ಓದು-ಬರಹ ಕಲಿತ ಬಾಲಕ, ಮೂರು ವಾರಗಳ ಕಾಲ ಗಾಂಧೀಜಿ ಅವರ ಕೊಠಡಿಯ ಕಾವಲು ಸೇವೆಗೆ ನಿಯೋಜನೆಗೊಂಡ. ಗಾಂಧೀಜಿ ಅವರ ಪ್ರವಚನ, ಇತರೆ ಹಿರಿಯರ ಮಾತುಗಳು ಬಾಲಕನ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದುವು.

ಬಳಿಕ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದರು. ಅಂದಿನ ಜನಪ್ರಿಯ ತಮಿಳು ನಟ ಶಿವಾಜಿ ಗಣೇಶನ್ ಅವರ ಪರಿಚಯದಿಂದ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಒದಗಿ ಬಂದರೂ ಅಭಿನಯಿಸಲು ಆಸಕ್ತಿ ತೋರಲಿಲ್ಲ. ಬಳಿಕ ಕ್ಯಾಂಟೀನೊಂದರಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲ ತಿಂಗಳು ಕಾರ್ಯ ನಿರ್ವಹಿಸಿದರು.

ನಂತರ ಬೆಂಗಳೂರಿಗೆ ಬಂದ ಅವರು ಬಸವನಗುಡಿಯಿಂದ ಶಿವಾಜಿನಗರಕ್ಕೆ ಸಂಚರಿಸುತ್ತಿದ್ದ ಸಿಟಿ ಬಸ್ಸಿನ ಕಂಡಕ್ಟರ್ ಆಗಿ ಮೂರು ತಿಂಗಳ ಕಾಲ ಕಾರ್ಯ ನಿರ್ವಹಿಸಿದರು. ನಂತರ ಟಿಕೆಟ್ ಇನ್‌ಸ್ಪೆಕ್ಟರ್ ಆಗಿ ಬಡತಿ ಪಡೆದರು. ರಾಜಾ ಮಿಲ್ಲು, ಮಿನರ್ವ ಮಿಲ್ಲುಗಳಲ್ಲಿ ಕೆಲ ಸಮಯ ಕೆಲಸ ಮಾಡಿದರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರಾಗಿ ಆಯ್ಕೆಯಾದ ಅವರು ನಂತರ ಉಪಸಂಪಾದಕರಾಗಿ 12 ವರ್ಷಕಾಲ ಕಾರ್ಯನಿರ್ವಹಿಸಿದರು. ಈ ನಡುವೆ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರೂಪಕರಾಗಿ ಕೆಲಕಾಲ ದುಡಿದರು.

ಕೆ.ಎಂ. ಮುನ್ಷಿ ಅವರು ಸ್ಥಾಪಿಸಿದ್ದ ಭಾರತೀಯ ವಿದ್ಯಾಭವನದ ಮದ್ರಾಸ್ ಶಾಖೆಯ ನಿರ್ದೇಶಕರಾಗಿದ್ದ ಎಸ್. ರಾಮಕೃಷ್ಣನ್ ಅವರು ಬೆಂಗಳೂರಿನ ಶಾಖೆಗೆ ಅರ್ಹ ವ್ಯಕ್ತಿಯೊಬ್ಬರ ಹುಡುಕಾಟದಲ್ಲಿ ತೊಡಗಿದ್ದರು. ಮತ್ತೂರು ಕೃಷ್ಣಮೂರ್ತಿ ಅವರ ವ್ಯಕ್ತಿತ್ವದ ಬಗ್ಗೆ ಆಕರ್ಷಿತರಾದ ಅವರು, 1969ರಲ್ಲಿ ಭವನದ ಬೆಂಗಳೂರು ಶಾಖೆಯ ರಿಜಿಸ್ಟ್ರಾರ್ ಆಗಿ ನೇಮಿಸಿದರು. ಅಲ್ಲಿಂದ ಭವನದಲ್ಲಿ ಅವರ ಸೇವಾ ಕಾರ್ಯ ಆರಂಭವಾಯಿತು.

ಇವರ ಕಾರ್ಯವೈಖರಿಯಿಂದ ಪ್ರಭಾವಿತರಾದ ರಾಮಕೃಷ್ಣನ್ ಅವರು ಲಂಡನ್‌ನಲ್ಲಿ ಆರಂಭಿಸಲು ಉದ್ದೇಶಿಸಿದ ವಿದ್ಯಾಭವನದ ಮೊದಲ ಕೇಂದ್ರಕ್ಕೆ ಕೃಷ್ಣಮೂರ್ತಿ ಅವರನ್ನು ರಿಜಿಸ್ಟ್ರಾರ್ ಆಗಿ ನೇಮಿಸಿದರು. ಹಾಗಾಗಿ ಕೃಷ್ಣಮೂರ್ತಿ ಅವರು 1972ರಲ್ಲಿ ಲಂಡನ್ನಿಗೆ ತೆರಳಿದರು. ಅಲ್ಲಿ ಕಾವ್ಯ ವ್ಯಾಖ್ಯಾನ, ಉಪನ್ಯಾಸಗಳ ಮೂಲಕ ಗಮನ ಸೆಳೆದ ಅವರು, ರಾಮಾಯಣ, ಮಹಾಭಾರತ, ಭಗವದ್ಗೀತೆ, ತಿರುಕ್ಕುರಳ್ ಮತ್ತಿತರ ಗ್ರಂಥಗಳು ಹಾಗೂ ದೇಶೀಯ ಸಂಸ್ಕೃತಿ ಕುರಿತು ಸಾಕಷ್ಟು ಉಪನ್ಯಾಸ ನೀಡಿದರು. ಅವರು ಅಲ್ಲಿರುವಾಗಲೇ ಅಂದಿನ ಬ್ರಿಟಿಷ್ ಸರ್ಕಾರದ ಪ್ರಧಾನಿಗಳಾಗಿದ್ದ ಜೇಮ್ಸ ಕಲೆಹನ್, ಮಾರ್ಗರೇಟ್ ಥ್ಯಾಚರ್ ಹಾಗೂ ಇತರ ಪ್ರಮುಖರು ಲಂಡನ್ನಿನಲ್ಲಿರುವ ವಿದ್ಯಾಭವನಕ್ಕೆ ಭೇಟಿ ನೀಡಿದರು. ಲಂಡನ್‌ನಲ್ಲಿ ಒಟ್ಟು 23 ವರ್ಷ ಅವರು ಕಾರ್ಯ ನಿರ್ವಹಿಸಿದರು.

1995ರಲ್ಲಿ ಬೆಂಗಳೂರಿಗೆ ಹಿಂತಿರುಗಿದ ಅವರು ಮೇ 15ರಂದು ಕಾರ್ಯಕಾರಿ ನಿರ್ದೇಶಕರಾಗಿ ನೇಮಕಗೊಂಡರು. ತಮ್ಮ ಸ್ನೇಹಿತ ಗಮಕಿ ಎಚ್. ಆರ್. ಕೇಶವಮೂರ್ತಿ ಅವರೊಂದಿಗೆ ಭವನದಲ್ಲೇ ಆರಂಭಿಸಿದ ಕುಮಾರವ್ಯಾಸ ಭಾರತ ವಾಚನ-ವ್ಯಾಖ್ಯಾನ ಕಾರ್ಯಕ್ರಮ ಜನರನ್ನು ಅಪಾರ ಸಂಖ್ಯೆಯಲ್ಲಿ ಭವನದತ್ತ ಸೆಳೆಯಲಾರಂಭಿಸಿತು.

ಮತ್ತೂರರು ಇಡೀ ಕುಮಾರವ್ಯಾಸ ಭಾರತದ ಪದ್ಯಗಳಿಗೆ ವ್ಯಾಖ್ಯಾನ-ಸಾಹಿತ್ಯ ಬರೆದು 90 ನಿಮಿಷಗಳ ಧ್ವನಿಮುದ್ರಿಕೆ ರೂಪಿಸಿದರು. ಈ ಧ್ವನಿಮುದ್ರಿಕೆ ಕೇಳಿ ಪ್ರಭಾವಿತರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಗಾಂಧಿ ಸಂಪುಟಗಳ ಯೋಜನೆಗೆ ಸರ್ಕಾರದ ವತಿಯಿಂದ ಪ್ರತಿ ಸಂಪುಟಕ್ಕೆ ತಲಾ ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿಸಿಕೊಟ್ಟರು.

ಸಾಕಷ್ಟು ಶ್ರಮವಹಿಸಿ ಮೈಸೂರಿನಲ್ಲಿ ಭವನದ ಕೇಂದ್ರ ತೆರೆಯುವಲ್ಲಿ ಕೃಷ್ಣಮೂರ್ತಿ ಅವರು ಯಶಸ್ವಿಯಾದರು. ಅಲ್ಲದೇ ಬೆಂಗಳೂರಿನ ಬಸವನಗುಡಿಯಲ್ಲಿ ಮತ್ತೊಂದು ಕೇಂದ್ರ ಪ್ರಾರಂಭಿಸಿದರು. ಹಾಗೆಯೇ ಮಡಿಕೇರಿ, ಬಾಗಲಕೋಟೆ ಮುಂತಾದೆಡೆಗಳಲ್ಲಿ ಕೇಂದ್ರಗಳು ತಲೆಯೆತ್ತಿದವು. ಹಾಸನ, ಬಳ್ಳಾರಿಯಲ್ಲೂ ಕೇಂದ್ರ ಸ್ಥಾಪಿಸುವ ಇರಾದೆ ಅವರಿಗಿತ್ತು.

ಕೇಂದ್ರ ಸರ್ಕಾರದ ಪದ್ಮಶ್ರೀ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಧರ್ಮಸ್ಥಳ ಧರ್ಮ ಸಮ್ಮೇಳನ ಪ್ರಶಸ್ತಿ, ಕರ್ನಾಟಕ ಸಂಗೀತ ಮತ್ತು ನೃತ್ಯ ಕಲಾ ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿ-ಸಿರಿ ಪುರಸ್ಕಾರ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಮತ್ತೂರು ಕೃಷ್ಣಮೂರ್ತಿ ಅವರಿಗೆ ಸಂದಿವೆ.

ಮತ್ತೂರು ಕೃಷ್ಣಮೂರ್ತಿ ಅವರು ಅನುವಾದ ಸಾಹಿತ್ಯ ಸೇರಿದಂತೆ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅಲೈ ಓಷೈ, ದೀಪ ಧಾರಿಣಿ, ಹಿಮಾಲಯದ ವೀರರು, ರಾಮಕಥಾಸಾರ, ನಮ್ಮೆಲ್ಲರ ಶ್ರೀರಾಮ, ಯೋಗಕ್ಷೇಮಂ ವಹಾಮ್ಯಹಂ, ಗಾಂಧಿ ಉಪನಿಷತ್, ಉಪಖ್ಯಾನ ಪಂಚಕ, ಧರ್ಮರಾಜ ಯುಧಿಷ್ಠಿರ... ಅವರ ಪ್ರಮುಖ ಕೃತಿಗಳು. ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ ಅವರ `ಇನ್‌ಸೈಡರ್` ಆತ್ಮಕತೆಯನ್ನು `ಅಂತಃದೃಷ್ಟಿ` ಹೆಸರಿನಲ್ಲಿ ಅನುವಾದ ಮಾಡಿದ್ದರು.

ನನ್ನೊಡನೆ ಮತ್ತೂರರು....

ಸುಮಾರು 1995ರ ಅವಧಿಯಲ್ಲಿ ನಾನು ಕಾರ್ಯ ನಿರ್ವಹಿಸುತ್ತಿದ್ದ ಎಚ್ ಎಮ್ ಟಿ ಸಂಸ್ಥೆಯಲ್ಲಿನ  ಕನ್ನಡ ಸಂಪದದ ಮೂಲಕ ನೀನಾಸಂ ಸಾಹಿತ್ಯ ಶಿಬಿರ ಏರ್ಪಡಿಸಲು ಭಾರತೀಯ ವಿದ್ಯಾಭವನದಲ್ಲಿ ಅವಕಾಶ ಕೇಳಲು ಹೋದ ದಿನ ಇಂದೂ ನನ್ನ ನೆನಪಿನಲ್ಲಿದೆ.  ಅಲ್ಲೊಬ್ಬರು ನಗೆಮೊಗದ ಹಿರಿಯರು ಕುಳಿತಿದ್ದರು.  ಅತ್ಯಂತ ಸಾಮಾನ್ಯನಾದ ನನಗೆ ಅದೆಂತದ್ದೋ ಸಾಂಸ್ಕೃತಿಕ ಸುಸ್ವಾಗತ ನೀಡುವ  ಹೃದಯಸ್ಪರ್ಶಿ ಮುಗುಳುನಗೆ ಅಲ್ಲಿತ್ತು.  ಇದ್ದಕ್ಕಿದ್ದಂತೆ ನನ್ನಲ್ಲಿ ಪ್ರಸನ್ನತೆ ಆವರಿಸಿತ್ತು.  ಆ ಹಿರಿಯರು ಕೇಳಿದರು,  “ಏನು ಇಷ್ಟೊಂದು ಸಂತೋಷವಾಗಿದ್ದೀರಲ್ಲ?”.  “ಸಾರ್ ನಿಮ್ಮ ಹೃದಯಸ್ಪರ್ಶಿ ವ್ಯಕ್ತಿತ್ವ ನನ್ನಲ್ಲಿ ಅವ್ಯಕ್ತವಾದ ಪ್ರಸನ್ನತೆ ತಂದಿದೆ” ಎಂದೆ.  ಆ ಹಿರಿಯರು ಮತ್ತಷ್ಟು ನಕ್ಕರು.  ನಾನು ಬಂದ ವಿಷಯ ತಿಳಿಸಿದಾಗ ತಾವೇ ಖುದ್ದು ಭಾರತೀಯ ವಿದ್ಯಾಭವನದಲ್ಲಿ ಅಂದು ಲಭ್ಯವಿದ್ದ ವ್ಯವಸ್ಥೆಗಳನ್ನೆಲ್ಲಾ  ಒಂದೊಂದಾಗಿ ಕರೆದೊಯ್ದು ತೋರಿದರು.  ನಂತರದಲ್ಲಿ ಅಗತ್ಯವಾದ ಒಪ್ಪಿಗೆ ನೀಡಿ ಅಲ್ಲಿಂದ ಹೊರಡುವಾಗ ಆ ಹಿರಿಯರು ನನ್ನೊಡನೆಯೇ ಹೊರಬಂದರು.  ಬಂದು ಲಿಫ್ಟ್ ಬಾಗಿಲು ತೆಗೆದರು.   ನಾನು ಲಿಫ್ಟ್ ಒಳಸೇರಿದಾಗ ಆ ಹಿರಿಯರೂ ನನ್ನ  ಜೊತೆ ಹೊರಗೆಲ್ಲೋ ಹೋಗಲು ಬರುತ್ತಿದ್ದಾರೆ ಎಂದು ನಿರೀಕ್ಷಿಸಿದ್ದ ನನಗೆ ಅಚ್ಚರಿ.  ಲಿಫ್ಟ್ ಬಾಗಿಲು ಸರಿಸಿ ಸರಳಿನ ಮಧ್ಯದಲ್ಲಿ ಕಾಣಿಸುತ್ತಿದ್ದ ನನಗೆ ನಮಸ್ಕಾರ ಆಗಾಗ ಬರುತ್ತಿರಿ ಎಂದರು.  ಅದೊಂದು ಅವಿಸ್ಮರಣೀಯ ಅನುಭವ.  ಆ ಹಿರಿಯರು ಬೇರೆ ಇನ್ಯಾರೂ ಅಲ್ಲ.  ಇದೇ ಅಂತರರಾಷ್ಟೀಯ ಮಟ್ಟದಲ್ಲಿ ಎಲ್ಲರಿಗೂ ಪರಿಚಿತರಾದ  ಪದ್ಮಶ್ರೀ ವಿಜೇತ ಮತ್ತೂರು ಕೃಷ್ಣಮೂರ್ತಿಯವರು.  ನಾಡಿನ ಹಿರಿಯರೆಲ್ಲರೂ ಅವರಿಗೆ ಕೊಡುತ್ತಿದ್ದ ಗೌರವವನ್ನು ಬಹಳಷ್ಟು ಬಾರಿ ಕಣ್ಣಾರೆ ನೋಡಿದ್ದೇನೆ.  ಭಿತ್ತಿಯಲ್ಲಿ  ಡಾ. ಎಸ್. ಎಲ್. ಭೈರಪ್ಪನವರು ಮತ್ತೂರರ ಸ್ನೇಹವನ್ನು ಅಪಾರವಾಗಿ ಕೊಂಡಾಡಿದ್ದಾರೆ.  ಮತ್ತೂರರ ಒಡನೆ ಅಮಿತಾಬ್ ಬಚ್ಚನ್ ಒಳಗೊಂಡಂತೆ ಅನೇಕ ಮಹನೀಯರ ಚಿತ್ರಗಳನ್ನು ಅವರ ಮನೆಯಲ್ಲಿ ಕಂಡಿದ್ದೇನೆ.   ನಾನು ಅವರನ್ನು ಭೇಟಿ ಮಾಡಿದ ಕೆಲವೇ ತಿಂಗಳುಗಳ ಹಿಂದೆಯಷ್ಟೇ ಅವರು ಭಾರತೀಯ ವಿದ್ಯಾಭವನದ ಲಂಡನ್ ಕಾರ್ಯಾಲಯವನ್ನು ಬಿಟ್ಟು ಬೆಂಗಳೂರಿನ ವಿದ್ಯಾಭವನ ಕೆಂದ್ರದ ಕಾರ್ಯದರ್ಶಿಗಳಾಗಿ ಅಧಿಕಾರ ವಹಿಸಿಕೊಂಡಿದ್ದರು.  ಇಂದು ಕರ್ನಾಟಕ ವಲಯದ ಭಾರತೀಯ ವಿದ್ಯಾಭವನ ಸಾಧಿಸಿರುವ ಅದಮ್ಯ ಪ್ರಗತಿ ಮತ್ತೂರರ ಅದಮ್ಯ ಕ್ರಿಯಾಶೀಲ ಪ್ರವೃತ್ತಿಗೆ ಹಿಡಿದ ಕನ್ನಡಿಯಾಗಿದೆ.  ಈ ಗೌರಾವಾನ್ವಿತರು ನನಗೆ ಅಂದು ಕೊಟ್ಟ ಗೌರವ ಅವಿಸ್ಮರಣೀಯ.   ಬಹುಷಃ ಯಾರು ಕಿಂಚಿತ್ ವ್ಯಕ್ತಿಗಳನ್ನೂ ಗೌರವಿಸುತ್ತಾರೋ ಅವರನ್ನು ಲೋಕವೇ ಪೂಜಿಸುತ್ತದೆಯೇನೋ!

ಆ ಅನುಭವ ಮುಂದೆ ನನ್ನನ್ನು ಮತ್ತೂರು ಕೃಷ್ಣಮೂರ್ತಿಗಳಿಗೆ ಅವರ ಪ್ರಿಯ ಕಿರು ಮಿತ್ರನನ್ನಾಗಿಸಿತ್ತು.  ಭಾರತೀಯ ವಿದ್ಯಾಭವನಕ್ಕೆ ಅಗತ್ಯವಿದ್ದ ಕೆಲವೊಂದು ಸಣ್ಣಪುಟ್ಟ ಸಾಫ್ಟ್ವೇರ್ ವ್ಯವಸ್ಥೆಗಳನ್ನು ಮಾಡುವ ಕೆಲಸವನ್ನು ಸಹಾ ಅವರು  ನನಗೆ ವಹಿಸಿದ್ದರು.  ಜೊತೆಗೆ ಅವರಿಗೆ ಕಂಪ್ಯೂಟರ್ ಕಲಿಯುವ  ಬಗ್ಗೆ ಬಹಳ ಆಸೆಯಿತ್ತು.  ಮೊದಲ ದಿನ ನಾನು ಮಾಡಿದ ಪಾಠಕ್ಕೆ ಮುಂಚೆ ನೂರು ರೂಪಾಯಿ ದಕ್ಷಿಣೆ ಇಟ್ಟು ತಾಂಬೂಲ ನೀಡಿದ್ದರು.  ಮುಂದೆ ಅವರ ಮನೆಗೆ ಹಲವು ಬಾರಿ ಹೋಗಿ ಅವರ ಪತ್ನಿ, ಅವರ ಅತ್ತೆ ಮತ್ತು ಕುಟುಂಬದವರ  ಅತಿಥಿ ಸತ್ಕಾರ ಸ್ವೀಕರಿಸುವ ಭಾಗ್ಯ ಕೂಡಾ ನನ್ನದಾಗಿತ್ತು.

ಸಂಸ್ಕೃತಕ್ಕೆ ಪ್ರಖ್ಯಾತವಾದ ಮತ್ತೂರಿನವರಾದ ಮತ್ತೂರು ಕೃಷ್ಣಮೂರ್ತಿಯವರು ಬಡತನದಲ್ಲಿ ಮೇಲೆ ಬಂದವರು.  ಅವರೇ ಹೇಳಿದ ಅವರ ಬಾಲ್ಯದ ಒಂದು ಘಟನೆ ನೆನಪಿಗೆ ಬರುತ್ತಿದೆ.  ಅವರು ಹೈಸ್ಕೂಲಿನಲ್ಲಿ ಓದುತ್ತಿದ್ದ ಒಂದು ಸಂದರ್ಭದಲ್ಲಿ ಇಬ್ಬರು ಹುಡುಗರು ಬಂದು ನಮಗೆ ಪಾಠ ಹೇಳಿಕೊಡಲು ಸಾಧ್ಯವೇ ಎಂದು ಭಿನ್ನವಿಸಿದರು.  ಅದಕ್ಕೆ ಒಪ್ಪಿದ ಕೃಷ್ಣಮೂರ್ತಿಯವರು ಕೇಳಿದರು:  ನನಗೆ ಒಂದು ವಾರ ಕೊಡಿಸಲು ಸಾಧ್ಯವೇ?” ಎಂದು.  ಆ ಹುಡುಗರು ಮನೆಯಲ್ಲಿ ಕೇಳಿಬಂದು ಸರಿ ಎಂದರು.  ವಾರಾನ್ನಕ್ಕೆ ಕೃಷ್ಣಮೂರ್ತಿಯವರು ಹೋಗುತ್ತಿದ್ದ ಆ ಮನೆ ಬಡವರ ಮನೆ.  ಮನೆ ತುಂಬಾ ಮಕ್ಕಳಿದ್ದ ಆ ಮನೆಯಲ್ಲಿ ಎಲ್ಲರಿಗೂ ಊಟ ಬಡಿಸುತ್ತಿದ್ದ ಆ ಮನೆಯ ತಾಯಿ ಕೃಷ್ಣಮೂರ್ತಿಯವರ ಬಳಿ ಬಂದಾಗ ಮಾತ್ರ ಒಂದು ಹಿಡಿ ಬಿಸಿ ಅನ್ನ ತಂದು ಬಡಿಸುತ್ತಿದ್ದರು.  ಇದನ್ನು ಗಮನಿಸಿದ ಕೃಷ್ಣಮೂರ್ತಿಗಳು ಒಂದು ದಿನ, ಆಕೆ ಹಾಗೆ ಮಾಡುವಾಗ “ಅಮ್ಮಾ ಒಂದು ನಿಮಿಷ.  ನೀವು ಎಲ್ಲರಿಗೂ ಏನು ಬಡಿಸುತ್ತಿದ್ದೀರೋ ಅದೇ (ತಂಗಳು) ಅನ್ನವನ್ನೇ ನನಗೂ ಹಾಕಿ” ಎಂದರು.  ಅದಕ್ಕೆ ಆ ತಾಯಿ ನುಡಿದರಂತೆ ಅಪ್ಪಾ, ನನ್ನ ಮಕ್ಕಳು ಕಾಯಿಲೆ ಬಿದ್ದರೆ ನಾನಿದ್ದೇನೆ.  ನೀನು ಕಾಯಿಲೆ ಬಿದ್ದರೆ ಯಾರಿದ್ದಾರಪ್ಪಾ” ಎಂದರಂತೆ.  ಅದನ್ನು ನೆನೆದು  ನಮ್ಮೊಡನೆ ಹೇಳುವಾಗ ಧಾರಾಕಾರವಾಗಿ ಕಣ್ಣೀರು ಸುರಿಸುತ್ತಿದ್ದರು - ಈ ಮೃದುಹೃದಯಿ ಮತ್ತೂರು ಕೃಷ್ಣಮೂರ್ತಿಗಳು”.

ಹಾಗೆ ನೋಡಿದರೆ ಮತ್ತೂರರು ತುಂಬಾ ಭಾವುಕರು.  ಅವರು ಮತ್ತು ಹೊಸಹಳ್ಳಿ ಆರ್ ಕೇಶವಮೂರ್ತಿಗಳು ಜಂಟಿಯಾಗಿ ನಡೆಸಿಕೊಡುತ್ತಿದ್ದ ಕುಮಾರವ್ಯಾಸ ಭಾರತದ ಪ್ರವಚನ ಅನುಭವಿಸದ ಕನ್ನಡಿಗನೇ ಇಲ್ಲ.  ಕೇಶವಮೂರ್ತಿಗಳ ಸುಶ್ರಾವ್ಯ ಕಂಠಶ್ರೀಗೆ  ಮತ್ತೂರರು ಇದೇನು ಇವರು ಇಷ್ಟೊಂದು ಭಾವುಕರಾದರೆ ಹೇಗೆ ಎನ್ನುವಷ್ಟು ತೀವ್ರ ಆಳದಲ್ಲಿ  ನೀಡುತ್ತಿದ್ದ ಪ್ರವಚನ ನಮ್ಮನ್ನು ವಿಸ್ಮಯಲೋಕಕ್ಕೆ ಕೊಂಡೊಯ್ಯುತ್ತಿತ್ತು. 

ಮತ್ತೂರರು ಅತ್ಯಂತ ಚಟುವಟಿಕೆಯ ವ್ಯಕ್ತಿ.  ಯಾರು ಬೇಕಾದರೂ ಅವರನ್ನು ನೇರವಾಗಿ ಭೇಟಿ ಮಾಡಬಹುದಿತ್ತು.  ಈಗಾಗಲೇ ಮೇಲೆ ಹೇಳಿದ ಹಾಗೆ ಮತ್ತೂರರು ಬರೆದಿರುವ ಪುಸ್ತಕಗಳ ಸಂಖ್ಯೆ ಅಪಾರ.  ಶ್ರೀಮದ್ ಅಂಡವನ್ ಸ್ವಾಮಿಗಳು ಬರೆದ ತಮಿಳಿನ ರಾಮಾಯಣವನ್ನು ಮತ್ತೂರರು ಕನ್ನಡದ ಒಂದು ಮೋಹಕ ರಾಮಯಣ ಗದ್ಯಕೃತಿಯನ್ನಾಗಿಸಿ ಕನ್ನಡಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ.  ಇದಂತೂ ನಮ್ಮ ಮನೆಗಳಲ್ಲಿ ನಮ್ಮ ಹಿರಿಯರ ಕಾಲದಿಂದ ಪಾರಾಯಣ ಗ್ರಂಥವೇ ಆಗಿದೆ.   ಕುಮಾರವ್ಯಾಸ ಭಾರತದ ಬಗ್ಗೆ ಕನ್ನಡನಾಡಿನಲ್ಲೆಲ್ಲಾ ಕೇಶವಮೂರ್ತಿಗಳ ಜೊತೆಗೂಡಿ  ಅವರು ಮೂಡಿಸಿದ ಜಾಗೃತಿ ಅಪೂರ್ವವಾದದ್ದು.  ಭಾರತೀಯ ವಿದ್ಯಾಭವನವನ್ನು ಸಾಂಸ್ಕೃತಿಕ ಮತ್ತು ಶಿಕ್ಷಣ ಕೇಂದ್ರವಾಗಿ ಮೂಡಿಸುವಲ್ಲಿ ಅವರು ನೀಡಿದ ಕೊಡುಗೆ ಅದ್ಭುತವಾದದ್ದು.  ಮಹಾತ್ಮ ಗಾಂಧಿಯವರ ವಿಚಾರಧಾರೆಯನ್ನು ಅವರು ಗಾಂಧೀ ಉಪನಿಷತ್ತು ಎಂದೇ ಭಾವಿಸಿದ್ದರು.  ಅಂತೆಯೇ ಭಾರತೀಯ ವಿದ್ಯಾಭವನದಲ್ಲಿ ಗಾಂಧೀ ಸಾಹಿತ್ಯವಂತೂ ಒಂದು ಬೃಹತ್ ಉಪಶಾಖೆಯಂತೆಯೇ ಇತ್ತು.   ದೂರದರ್ಶನದಲ್ಲಿ ಅವರು ನೀಡುತ್ತಿದ್ದ ಸಾಂಸ್ಕೃತಿಕ ದರ್ಶನಗಳು, ಹಿತಚಿಂತನೆಗಳು ಅಪೂರ್ವವಾದದ್ದು.  ಅವರು ಲಂಡನ್ನಿನಲ್ಲಿದ್ದಾಗ ಹಬ್ಬಗಳ ಕುರಿತಾಗಿಯೇ ಒಂದು ಕ್ಯಾಸೆಟ್ ಮಾಡಿ ಎಲ್ಲಾ ಆಸಕ್ತರಿಗೆ ಹಂಚಿದ್ದು ನೆನಪಿದೆ 


ಸಾಂಸ್ಕೃತಿಕ ಲೋಕದ ಹಿರಿಯ ಹಾಗೂ ನಮ್ಮಂತಹ ಲಕ್ಷಾಂತರ ಜನರಿಗೆ ಪ್ರೀತಿ ಎರೆದು ತಮ್ಮ ಬಂಧುಗಳನ್ನಾಗಿ ಮಾಡಿಕೊಂಡು ಪ್ರೀತಿ ಎರೆದಿದ್ದ ಮತ್ತೂರು ಕೃಷ್ಣಮೂರ್ತಿಯವರು 2011ರ ವಿಜಯದಶಮಿಯಂದು ಈ ಲೋಕವನ್ನಗಲಿದರು ಎಂಬುದನ್ನು ಇಂದೂ ಊಹಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ.  ಈಗಲೂ ಮೈಸೂರು ಬೆಂಗಳೂರುಗಳಲ್ಲಿ ಭಾರತೀಯ ವಿದಾಭವನದ ಬಳಿ ಹಾದುಹೋಗುವಾಗ; ಮಲ್ಲೇಶ್ವರದ ಹದಿನೆಂಟನೆಯ ಕ್ರಾಸಿನ ಚಿತ್ರಕೂಟ ಅಪಾರ್ಟ್ಮೆಂಟಿನ ಬಳಿ ಹಾದು ಹೋಗುವಾಗ ಮತ್ತೂರರನ್ನು ಭೇಟಿ ಆಗುವ ಆಪ್ತ ಇಚ್ಛೆ ಕಾಡುತ್ತದೆ.  ತಕ್ಷಣವೇ ಅವರಿಲ್ಲ ಎಂದು ಪಿಚ್ಚೆನಿಸುತ್ತದೆ.  ಮತ್ತೊಂದೆಡೆ ಅವರು ನಮ್ಮಲ್ಲಿ ಶಾಶ್ವತವಾಗಿದ್ದಾರಲ್ಲ ಎಂಬ ಸಮಾಧಾನದ ಧ್ವನಿ ಎಲ್ಲೋ ಅಂತರಾಳದಲ್ಲಿ ಮೂಡಿದಂತಾಗುತ್ತದೆ.  ಈ ನಮ್ಮೊಳಗೆ ಆಳವಾಗಿರುವ ಈ ಆಪ್ತತೆಗೆ ಹೃದಯಪೂರ್ವಕವಾಗಿ ಸಾಷ್ಟಾಂಗ ನಮನಗಳು.

Tag: Mathoor Krishnamurthy, Mattoor Krishnamurthy, Mattur Krishnamurthy

ಕಾಮೆಂಟ್‌ಗಳಿಲ್ಲ: