ಸೋಮವಾರ, ಆಗಸ್ಟ್ 26, 2013

ಸಂತ ತುಳಸೀದಾಸರು

ತುಳಸೀದಾಸರು

ಭಾರತ ದೇಶವು ಪರಧರ್ಮೀಯ ಆಕ್ರಮಣಗಳಿಗೆ ಸಿಲುಕಿ  ತೊಳಲಾಡುತ್ತಿದ್ದ ಸಂದರ್ಭದಲ್ಲಿ  ತಮ್ಮ ವಿದ್ವತ್ಪೂರ್ಣ ಜನಪ್ರಿಯ ಕೃತಿ ರಾಮಚರಿತಮಾನಸವನ್ನು ರಚಿಸಿದ ಶ್ರೇಷ್ಠ ಸಂತರಾದ  ತುಳಸೀದಾಸರು ಭಾರತದ ಜನಮಾನಸದಲ್ಲಿ ನಿರಂತರವಾಗಿ ನೆಲೆಸಿದವರಾಗಿದ್ದಾರೆ.   ತುಳಸೀದಾಸರು ಬಾಲ್ಯದಲ್ಲೇ ಮನೆಯಿಂದ ಹೊರಹಾಕಲ್ಪಟ್ಟು ಭಿಕ್ಷಾಟನೆಯಿಂದ ಬದುಕು ನಡೆಸಿದರು. ರೂಪವತಿ, ವಿದುಷಿಯಾಗಿದ್ದ ಅವರ ಪತ್ನಿ ತುಳಸೀದಾಸರಿಗೆ ತನ್ನ ಬಗೆಗಿದ್ದ ಅಪಾರ ಪ್ರೇಮವನ್ನು  ಭಗವಂತನ ಕಡೆಗೆ ಹರಿಸಲು ಪ್ರೇರಣೆ ನೀಡಿದ ಅಸಾಮಾನ್ಯ ಮಹಿಳೆ.

ಕ್ರಿ.ಶ. 1532ನೆ ಇಸವಿವಿಕ್ರಮ ಸಂವತ್ಸರದ  ಶ್ರಾವಣ ಶುದ್ಧ ಸಪ್ತಮಿಯಂದು ಉತ್ತರಪ್ರದೇಶದ ಬಾಂದಾ ಜಿಲ್ಲೆಯ ರಾಜಾಪುರ ಗ್ರಾಮದಲ್ಲಿ ತುಳಸೀದಾಸರು ಜನಿಸಿದರು. ಅವರ ತಂದೆ ಪಂ. ಮುರಾರೀಲಾಲ್ ಮಿಶ್ರರು ಸರಯೂಪಾರೀಯ ಬ್ರಾಹ್ಮಣರು. ತಾಯಿ ಹುಲಸೀಯು ಶೀಘ್ರವೇ ಸ್ವರ್ಗಸ್ಥಳಾದುದರಿಂದ, ಮೂಲಾ ನಕ್ಷತ್ರದಲ್ಲಿ ಜನಿಸಿದ್ದ ಈ ಬಾಲಕನು ಅಶುಭವೆಂದು ತಂದೆಯು ಆತನನ್ನು ಮನೆಯಿಂದ ಹೊರಹಾಕಿದರು. ಹೀಗಾಗಿ ತುಳಸೀದಾಸರ ಬಾಲ್ಯವು ಅನಾಥಬಾಲಕನಂತೆ ಭಿಕ್ಷಾಟನೆಯಿಂದಲೇ ಕಳೆಯಿತು. ಆದರೆ ಈ ಸಂಕಟ ಪರಿಸ್ಥಿತಿಯಲ್ಲಿ ದೇವರ ಮೇಲೆ ಅವರ  ಶ್ರದ್ಧೆ ಭಕ್ತಿಗಳು ಮತ್ತಷ್ಟು ದೃಢಗೊಳ್ಳುತ್ತಾ ಹೋದವು. ಅವರು ರಾಮನಾಮ ಸ್ಮರಿಸುತ್ತಲೇ ತಮ್ಮ ಜೀವನ ನಿರ್ವಹಣೆ ಮಾಡತೊಡಗಿದರು. ಮುಂದೆ ಅವರು ಸೂಕರ ಕ್ಷೇತ್ರದಲ್ಲಿ ಸ್ವಾಮಿ ನರಹರಿದಾಸರನ್ನು ತಮ್ಮ ಗುರುವಾಗಿ ಸ್ವೀಕರಿಸಿದರು. ಕೆಲವು ದಿನ ಅಲ್ಲಿ ಉಳಿದುಕೊಂಡು, ಅಲ್ಲಿಂದ ಕಾಶಿಗೆ ಹೋದರು.

ತುಳಸೀದಾಸರಿಗೆ ಇಪ್ಪತ್ತೆಂಟರ ಹರೆಯದಲ್ಲಿ ವಿವಾಹವಾಯಿತು. ಅವರ ಪತ್ನಿ ರತ್ನಾವಲಿಯು ರೂಪವತಿ ಮತ್ತು ವಿದುಷಿ. ಅವರಿಗೆ ತಮ್ಮ ಪತ್ನಿಯ ಬಗ್ಗೆ ತುಂಬಾ ಪ್ರೀತಿಯಿತ್ತು. ಒಮ್ಮೆ ಆಕೆ ತನ್ನ ತವರಿಗೆ ಹೋಗಿದ್ದಳು. ತುಳಸೀದಾಸರು ಮಧ್ಯರಾತ್ರಿ ಭಾರೀ ಮಳೆಯಲ್ಲಿ ಉಕ್ಕಿ ಹರಿಯುತ್ತಿದ್ದ ನದಿಯನ್ನು ಈಜಿಕೊಂಡು ಪತ್ನಿಯನ್ನು ಭೇಟಿಯಾಗಲು ಹೋದರು. ರತ್ನಾವಲಿಯು ತನ್ನ ಪತಿಯ ಈ ಅದಮ್ಯ ಸಾಹಸವನ್ನುಕಂಡು ವಿನಯದಿಂದ ಹೇಳಿದಳು, “ನಿಮಗೆ ಇಂತಹದೇ ಆಸಕ್ತಿಯು ಪ್ರಭು ರಾಮಚಂದ್ರನ ಮೇಲೆ ಉಂಟಾದರೆ, ನಾವು ಭವ ಸಾಗರವನ್ನು ಖಂಡಿತ ದಾಟಿ ಹೋಗುವುದರಲ್ಲಿ ಸಂದೇಹವಿಲ್ಲ."

ಪತ್ನಿಯ ಈ ಪ್ರೇರಣೆಯಿಂದ ತುಳಸೀದಾಸರಿಗೆ ವೈರಾಗ್ಯವೇ ಮೂಡಿ ಬಂತು. ತಮ್ಮ ಪತ್ನಿಯನ್ನೇ ಗುರುವೆಂದು ಸ್ವೀಕರಿಸಿದ ಅವರು ಶ್ರೀ ರಾಮಚಂದ್ರ ಪ್ರಭುವಿನ ಮೇಲಿನ ಭಕ್ತಿಯಲ್ಲಿ ತಲ್ಲೀನರಾದರು. ದ್ವಾರಕೆ, ರಾಮೇಶ್ವರಂ, ಜಗನ್ನಾಥ ಪುರಿ, ಬದರೀನನಾಥ ಮುಂತಾದ ಕ್ಷೇತ್ರಗಳಲ್ಲಿ ಅವರು ಹದಿನಾಲ್ಕು ವರ್ಷಗಳವರೆಗೆ ತೀರ್ಥಯಾತ್ರೆಗಳನ್ನು ಕೈಗೊಂಡರು. ಎಲ್ಲಾ ಕಡೆಯೂ ಶ್ರೀರಾಮಕೀರ್ತನೆಯನ್ನು ಮಾಡುವುದು ಅವರ ಪ್ರಿಯ ಕಾರ್ಯವಾಗಿತ್ತು. ಕೊನೆಗೆ ಚಿತ್ರಕೂಟದಲ್ಲಿದ್ದು ಅವರು ಶ್ರೀರಾಮನ ಗುಣಗಾನ ಮಾಡತೊಡಗಿದರು. ಇಲ್ಲಿ ವಿಕ್ರಮ ಸಂವತ್ಸರ 1607ರಲ್ಲಿ ಮೌನೀ ಅಮವಾಸ್ಯೆಯ ದಿನ ಅವರಿಗೆ ಭಗವಾನ್ ಶ್ರೀರಾಮಲಕ್ಷ್ಮಣರ ಸಾಕ್ಷಾತ್ಕಾರವಾಯಿತು. ಇಲ್ಲಿಯೇ ಹನುಮಾನ್ ಕೃಪೆಯಿಂದ ಅವರು ಶ್ರೀರಾಮಚರಿತ ಮಾನಸ ಮಹಾಕಾವ್ಯದ ಅಧಿಕಾಂಶ ಭಾಗವನ್ನು ಬರೆದರು.

ತುಳಸೀದಾಸರು ತಮ್ಮ ಮಹಾಕಾವ್ಯ ರಾಮಚರಿತ ಮಾನಸದ ಮೂಲಕ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಹೆಸರು, ಚರಿತ್ರೆ ಮತ್ತು ಆದರ್ಶವನ್ನು ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲೂ ಜಾಗೃತಗೊಳಿಸಿದರು. ಭಗವಾನ್ ಶ್ರೀರಾಮನಂತೆ ಹಿಂದೂ ಸಮಾಜವೂ ಸಹ  ಆಕ್ರಮಣಕಾರಿ ಪರಧರ್ಮೀಯ ಮನೋಭಾವಗಳನ್ನು ಧೈರ್ಯ, ಸಾಹಸ ಮತ್ತು ಪರಾಕ್ರಮಗಳಿಂದ ಎದುರಿಸಲು ಪ್ರೇರಣೆನೀಡಿದರು. ಧರ್ಮ, ಸಂಸ್ಕೃತಿ ಮತ್ತು ದೇಶವನ್ನು ನಾಶಗೊಳಿಸಲು ಹವಣಿಸುತ್ತಿದ್ದ ಮತಿಹೀನ ಮತಾಸಕ್ತರ ಹೇರಿಕೆಗಳನ್ನು   ಸಮಾಜವು ಸಮರ್ಥವಾಗಿನಿಲ್ಲಲು ಶ್ರೀರಾಮ ಚರಿತ್ರೆಯ ಮೂಲಕಪ್ರೇರೇಪಿಸಿದರು.

ತುಳಸೀದಾಸರು ಉಚ್ಚ-ನೀಚ, ಅಸ್ಪೃಶ್ಯತೆ ಮತ್ತು ಜಾತಿ-ಪಂಥಗಳಿಂದ  ಹರಿದು  ಹಂಚಿ ಹೋಗಿದ್ದ ಸಮಾಜವು ಪುನಃ ಸಂಘಟಿತವಾಗಬೇಕೆಂದು ಸಂದೇಶವನ್ನು ತಮ್ಮ ರಾಮಚರಿತ ಮಾನಸದ ಮೂಲಕ ಪ್ರಚುರಗೊಳಿಸಿದರು. ಅವರ ಆರಾಧ್ಯದೈವ ಶ್ರೀರಾಮನು ನಿಷಾದರಾಜ, ಶಬರಿ ಮತ್ತು ಗಿಡುಗರಾಜ ಜಟಾಯುವನ್ನು ಸಮ್ಮಾನಿಸಿದ ರೀತಿಯಲ್ಲಿ, ತಾವು ಅಸ್ಪೃಶ್ಯರೆಂದು ಭಾವನೇಗೀಡಾಗಿದ್ದ ವರ್ಗವನ್ನು ಸಮಗ್ರ ಸಮಾಜದೊಂದಿಗೆ ಬೆಸೆಯಲು ಒತ್ತಾಸೆ ನೀಡಲು ಪ್ರಯತ್ನಿಸಿದರು.  ರಾಷ್ಟ್ರ ಕಟ್ಟುವ ವನವಾಸಿ, ಭೀಲ್, ನಿಷಾದ, ವಾನರ  ಮುಂತಾದವರ ಮಹತ್ವಪೂರ್ಣ ಯೋಗದಾನದ ಸಂದೇಶವನ್ನು ಅವರು ರಾಮಚರಿತಮಾನಸದ ಮೂಲಕ ಹಿಂದೂ ಸಮಾಜಕ್ಕೆ ನೀಡಿದರು. ತುಳಸೀದಾಸರು ಸರಳ ಮತ್ತು ಸರಸವಾದ ಜನ ಭಾಷೆಯಲ್ಲಿ ರಚಿಸಿದ ವಿಶಾಲ ಸಾಹಿತ್ಯವು ಪ್ರತಿಯೊಬ್ಬ ಹಿಂದೂವಿನ ಮನಪಟಲದಲ್ಲಿ ಗಾಢವಾಗಿ ಅಚ್ಚೊತ್ತಿತು. ಅವರ ಪ್ರಯತ್ನಗಳಿಂದಾಗಿ ಶ್ರೀರಾಮನಾಮ ಮತ್ತು ರಾಮಚರಿತಮಾನಸವು ಹಿಂದೂ ಸಮಾಜದ ಗುರುತೆನಿಸಿತು. ಕಾಲವನ್ನು ಮೆಟ್ಟಿನಿಂತ ಅವರ ಈ ಸಾಹಿತ್ಯವು ಸಮಗ್ರ ಸಮಾಜಕ್ಕೆ ಸತ್ಯ ಮತ್ತು ಧರ್ಮದಲ್ಲಿ ದೃಢವಾಗಿ ನಿಲ್ಲುವಂತೆ ಪ್ರೇರಣೆ ನೀಡುತ್ತ ಬಂದಿದೆ. ರಾಮಚರಿತ ಮಾನಸವಲ್ಲದೆ ವಿನಯ ಪತ್ರಿಕಾಎಂಬುದು ತುಳಸೀದಾಸರು ಮತ್ತೊಂದು ಪ್ರಸಿದ್ಧ ಕೃತಿ.

ಗೋಸ್ವಾಮಿ ತುಳಸೀದಾಸರು ಕ್ರಿ.ಶ 1623ರ ವರ್ಷದಲ್ಲಿ ತಮ್ಮ ತೊಂಭತ್ತೊಂದನೆಯ  ವಯಸ್ಸಿನಲ್ಲಿ ಈ ಲೋಕವನ್ನು ತೊರೆದರು.  ಈ ಮಹಾನ್ ಸಂತರ ಪಾದಕಮಲಗಳಿಗೆ ನಮ್ಮ ವಂದನೆಗಳು.

Tag: Saint Tulsidas, Santa Thulasidas, 

ಕಾಮೆಂಟ್‌ಗಳಿಲ್ಲ: