ಬುಧವಾರ, ಆಗಸ್ಟ್ 28, 2013

ನಾಗರಾಜರಾವ್‌ ಹವಾಲ್ದಾರ್

ನಾಗರಾಜರಾವ್‌ ಹವಾಲ್ದಾರ್

ಹಿಂದೂಸ್ಥಾನಿ ಸಂಗೀತದ ಪ್ರಸಿದ್ಧ ಸಂಗೀತಗಾರರಾದ ಡಾ. ನಾಗರಾಜರಾವ್ ಹವಾಲ್ದಾರ್  ಅವರು ಜುಲೈ 17, 1959ರ ವರ್ಷದಲ್ಲಿ ಕರ್ನಾಟಕದ ಹೊಸಪೇಟೆಯಲ್ಲಿ ಜನಿಸಿದರು.  ತಂದೆ ರಾಮರಾವ್ ಹವಾಲ್ದಾರ್ ಅವರು.  ತಾಯಿ ಅಂಬುಜಾಬಾಯಿಯವರು.  ನಾಗರಾಜರಾವ್ ಅವರು ಖಯಾಲ್ ಗಾಯನದ ಮೇರು ಶಿಖರರಾದ ಡಾ. ಭೀಮಸೇನ ಜೋಶಿ ಅವರ ಪ್ರಸಿದ್ಧ ಶಿಷ್ಯರಾದ ಮಾಧವ ಗುಡಿಯವರ ಶಿಷ್ಯರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಆರು ವರ್ಷಗಳ ಸಂಗೀತ ರತ್ನ ಪದವಿಯನ್ನು ಪಡೆಯುವ ಹಾದಿಯಲ್ಲಿ ನಾಗರಾಜ ರಾವ್ ಅವರಿಗೆ ಪಂಡಿತ ಮಲ್ಲಿಕಾರ್ಜುನ ಮನ್ಸೂರ್, ಪಂಚಾಕ್ಷರಿ ಸ್ವಾಮಿ ಮಟ್ಟಿಗತ್ತಿ, ಬಸವರಾಜ ರಾಜಗುರು, ಪಂಡಿತ್ ಸಂಗಮೇಶ್ವರ ಗುರವ್ ಮತ್ತು ಡಾ. ಬಿ. ಡಿ. ಪಾಠಕ್ ಮುಂತಾದ ಅಗ್ರವರೇಣ್ಯರ ಮಾರ್ಗದರ್ಶನ ದೊರೆತಿತ್ತು.  ಇದಲ್ಲದೆ ಅವರು ಪುರಾತತ್ತ್ವಶಾಸ್ತ್ರದಲ್ಲಿ ಸ್ಷರ್ಣಪದಕದೊಂದಿಗೆ ಎಂ.ಎ. ಪದವಿಯನ್ನೂ,    ಶಿಲಾಶಾಸನ ಶಾಸ್ತ್ರದಲ್ಲಿ ಡಿಪ್ಲೋಮಾ ಪದವಿಯನ್ನೂ ಪಡೆದಿರುವುದರ ಜೊತೆಗೆ, “ಕರ್ನಾಟಕದಲ್ಲಿ ಸಂಗೀತದ ಐತಿಹಾಸಿಕ ಬೆಳವಣಿಗೆಗೆ ಮೈಸೂರು ಅರಸರ ಕೊಡುಗೆ” ಎಂಬ ಮಹಾಪ್ರಬಂಧ ಮಂಡಿಸಿ ಪಿ.ಎಚ್‌..ಡಿ ಪದವಿಯನ್ನೂ ಗಳಿಸಿದ್ದಾರೆ.  ಕೆಲಕಾಲ ಅವರು ಹುಬ್ಬಳಿ ಆಕಾಶವಾಣಿ ನಿಲಯದಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ತಾವು ಶಿಷ್ಯತ್ವ ಪಡೆದ ಸಂಗೀತ ಶ್ರೇಷ್ಠರಲ್ಲಿ ಹಲವಾರು ಅಪರೂಪದ ಅಪ್ರಚಲಿತ ಜೋಡುರಾಗಗಳಲ್ಲಿ ವಿಶೇಷ ತರಬೇತಿ ಪಡೆದ ನಾಗರಾಜ ರಾವ್ ಅವರು ವಿಶ್ವದೆಲ್ಲೆಡೆ ತಮ್ಮ ಸಂಗೀತ ಕಚೇರಿಗಳನ್ನು ನಡೆಸಿಕೊಡುತ್ತ ಬಂದಿದ್ದಾರೆ.  ಕುಂದಗೋಳದ ಸವಾಯಿ ಗಂಧರ್ವ ಪುಣ್ಯತಿಥಿ ಸಂಗೀತೋತ್ಸವ, ಧಾರವಾಡ, ಹುಬ್ಬಳ್ಳಿ ಆರ್ಟ್ಸ್ ಸರ್ಕಲ್‌ ಆಶ್ರಯದ ಸಂಗೀತ ಕಾರ್ಯಕ್ರಮ, ಗದುಗಿನ ವೀರೇಶ್ವರ ಪುಣ್ಯಾಶ್ರಮ, ಬೆಂಗಳೂರು, ಮೈಸೂರು ದಸರಾ ದರ್ಬಾರ್ ಹಾಲ್‌, ಹಂಪಿ ಉತ್ಸವ, ವಾರಣಾಸಿಯ ಸಂಕಟ್ ಮೋಚನ್ ಸಮಾರೋಹ್,  ಮಂಗಳೂರು, ಕಾರವಾರಗಳಲ್ಲದೆ ಪುಣೆ, ಮುಂಬೈ, ಕೋಲ್ಕತ್ತಾ, ಚೆನ್ನೈ, ದೆಹಲಿಯಲ್ಲೂ ಅವರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.  ಅಮರಿಕ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ಡಂ, ಸಿಂಗಪುರ್ ಮುಂತಾದ ಕಡೆಗಳಲ್ಲಿ ಅವರ ಸಂಗೀತ ಕಚೇರಿಗಳು ವ್ಯಾಪಕವಾಗಿ ನೆರವೇರಿವೆ.  ಕಿರಾಣಾ ಘರಾನಾದ ಶ್ರೇಷ್ಠರಲ್ಲಿ ಸಂಗೀತವನ್ನು ಸುದೀರ್ಘವಾಗಿ ಅಭ್ಯಸಿಸಿರುವ ನಾಗರಾಜ ರಾವ್ ಅವರು ಜೈಪುರ್-ಅತ್ರೌಲಿ ವೈಶಿಷ್ಟ್ಯವೆಂದು ಹೆಸರಾಗಿರುವ ಬಸಂತಿ ಕೇದಾರ್, ಬಾಸ್ಮತಿ ಕನಾಡಾ ಮಾತು ನಾಟ ಮಲ್ಹಾರ್ ಲೀಲಾಜಾಲವಾಗಿ ನಾದಪ್ರವಹಿಸುತ್ತಾರೆ.  ವಚನ, ಹರಿದಾಸ ಸಾಹಿತ್ಯ ಮತ್ತು ಸಮಕಾಲೀನ ಕನ್ನಡ ಸಾಹಿತ್ಯವನ್ನು ಅಳವಡಿಸಿಕೊಂಡು ಕನ್ನಡ ಖಯಾಲ್ ಸಂಗೀತವನ್ನು ಅವರು  ಜನಪ್ರಿಯಗೊಳಿಸಿರುವ ರೀತಿ ವ್ಯಾಪಕವಾಗಿ ಜನಪ್ರಿಯತೆಯನ್ನು ಗಳಿಸಿದೆ.

ಸಂಗೀತ ಕಚೇರಿಗಳ ಜೊತೆಗೆ ನಾಗರಾಜರಾವ್ ಹವಾಲ್ದಾರ್ ಅವರು ಹಲವಾರು ಆಲ್ಬಂಗಳಲ್ಲಿ ಖಯಾಲ್ ಮತ್ತು ಲಘು ಸಂಗೀತದ ಧಾರೆಯಲ್ಲಿ ತಮ್ಮ ಧ್ವನಿಯನ್ನು ಹರಿಸಿದ್ದಾರೆ.  ದಾಸಾಂಜಲಿ, ಅಕ್ಕಕೇಳವ್ವ (ವಚನ) ಮುಲ್ತಾನಿ, ಕೃಷ್ಣ ಇನ್‌ ಟ್ರೆಡಿಷ್‌ನಲ್‌ ಖಯಾಲ್‌, ಸಿಡಿ ಹಾಗೂ ಕ್ಯಾಸೆಟ್‌ಗಳು, ಕನ್ನಡದ ಖಯಾಲ್‌ ಗಾಯನದ ಮೊಟ್ಟಮೊದಲ ಪ್ರಯತ್ನವೆಂಬ ಹೆಗ್ಗಳಿಕೆ ಪಡೆದಿವೆ. ಅವರು ಸ್ಥಾಪಿಸಿರುವ ಸುನಾದ ಆರ್ಟ್ ಫೌಂಡೇಶನ್ ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸುವುದಕ್ಕೆ ನಿಷ್ಠವಾಗಿ ದುಡಿಯುತ್ತಿದೆ.

ಸಂಗೀತ ನಿರ್ದೇಶನದಲ್ಲೂ ಹೆಸರಾಗಿರುವ ಡಾ. ನಾಗರಾಜರಾವ್ ಹವಲ್ದಾರರು ಹಲವಾರು ದೂರದರ್ಶನ ಧಾರವಾಹಿಗಳು ಮತ್ತು  ರಂಗಪ್ರಯೋಗಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ.  ಅವುಗಳಲ್ಲಿ ಗಿರೀಶ್ ಕಾರ್ನಾಡರ ತಲೆದಂಡ, ಪಿ. ಲಂಕೇಶರ ಗುಣಮುಖ, ದೂರದರ್ಶನಕ್ಕೆ ಅಳವಡಿತವಾದ ಮಾಸ್ಟರ್ ಹಿರಣ್ಣಯ್ಯನವರ ಲಂಚಾವತಾರ, ಟಿ ಎನ್. ಸೀತಾರಾಮ್ ಅವರ ದೂರದರ್ಶನ ಧಾರಾವಾಹಿ ಮುಖಾಮುಖಿ ಮುಂತಾದವು ಪ್ರಮುಖವಾಗಿವೆ.  ಇದಲ್ಲದೆ ಅವರು ಇಂಡಿಯಾನಾಪೊಲಿಸ್ ಪ್ರಾಂತ್ಯದ ರಂಗತಂಡವೊಂದು ಪ್ರಸ್ತುತಪಡಿಸಿದ  ಆಧ್ಯಾತ್ಮಿಕ ತಳಹದಿಯ ಸಂಗೀತಾಧಾರಿತ ರಂಗಪ್ರದರ್ಶನಕ್ಕೂ ಕೈಜೋಡಿಸಿದ್ದಾರೆ.

ಡಾ. ನಾಗರಾಜರಾವ್ ಹವಾಲ್ದಾರ್ ಅವರು ಸಂಗೀತಾಧಾರಿತ ಉಪನ್ಯಾಸ ಮತ್ತು ಕಾರ್ಯಾಗಾರಗಳನ್ನೂ ನಿರಂತರವಾಗಿ ನಡೆಸುತ್ತಿದ್ದು, ಸಂಗೀತದ ಮೂಲಕ  ಮಾನಸಿಕ ಒತ್ತಡ ನಿರ್ವಹಣೆ, ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಕುರಿತಾದ ತಿಳುವಳಿಕೆಯ ಕಾರ್ಯಶಿಬಿರಗಳು ಪ್ರಸಿದ್ಧ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲೂ ನಡೆಯುತ್ತಿವೆ.  ‘ಹಾಯ್‌ ಬೆಂಗಳೂರು ಪತ್ರಿಕೆ’ಯಲ್ಲಿ  ಸಂಗೀತ ದಿಗ್ಗಜರೊಡನೆ ಅನುಭವಿಸಿದ ಆತ್ಮೀಯ ರಸನಿಮಿಷಗಳ ಪ್ರಸ್ತುತಿಯ ಅಂಕಣಕಾರರಾಗಿಯೂ ಅವರು ಪ್ರಸಿದ್ಧಿ ಪಡೆದಿದ್ದಾರೆ.

ಡಾ. ನಾಗರಾಜ ಹವಾಲ್ದಾರರು ಬೆಂಗಳೂರು, ಅಮೆರಿಕ, ಯೂರೋಪುಗಳಲ್ಲಿನ ಶಿಷ್ಯರಿಗೆ ನಿರಂತರವಾಗಿ ಸಂಗೀತವನ್ನೂ ಹೇಳಿಕೊಡುತ್ತಿದ್ದು ಅನೇಕ ಉತ್ತಮ ಶಿಷ್ಯರನ್ನೂ ತಯಾರು ಮಾಡುತ್ತಿದ್ದಾರೆ.  ಅವರ ಪುತ್ರ ಓಂಕಾರನಾಥ ಹವಾಲ್ದಾರ್ ಹಿಂದೂಸ್ಥಾನಿ ಸಂಗೀತದಲ್ಲಿ ಹೆಸರಾಗಿದ್ದಾರೆ.  ಕನ್ನಡದ ಹಿನ್ನೆಲೆಗಾಯಕಿ ಹೆಚ್. ಜಿ. ಚಿತ್ರಾ ನಾಗರಾಜರಾವ್ ಹವಾಲ್ದಾರರ ಶಿಷ್ಯೆ.    ಅವರ ಮತ್ತೊಬ್ಬ ಪುತ್ರ ಕೇದಾರನಾಥ್ ತಬಲಾ ವಾದನದಲ್ಲಿ ಪರಿಣಿತರಾಗಿ ಖ್ಯಾತಿಗಳಿಸುತ್ತಿದ್ದಾರೆ.

ಡಾ. ನಾಗರಾಜರಾವ್ ಅವರಿಗೆ ವಿಶ್ವದ ವಿವಿಧ ವೇದಿಕೆಗಳಲ್ಲಿ ಸಂದ ಗೌರವಗಳ ಜೊತೆಗೆ ಆರ್ಯಭಟ ಪ್ರಶಸ್ತಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗೌರವಗಳು ಸಂದಿವೆ.

ಈ ಮಹನೀಯರಿಗೆ ಜನ್ಮದಿನದ ಹಾರ್ದಿಕ ಶುಭ ಹಾರೈಕೆಗಳು.

Tag: Nagaraja Rao Hawaldar

ಕಾಮೆಂಟ್‌ಗಳಿಲ್ಲ: