ಶುಕ್ರವಾರ, ಆಗಸ್ಟ್ 30, 2013

ಶಾಂತರಸ

ಶಾಂತರಸ

ಕನ್ನಡದ ಪ್ರಸಿದ್ಧ  ಬರಹಗಾರ ಮತ್ತು ಹೋರಾಟಗಾರರಾದ ದಿವಂಗತ  ಶಾಂತರಸ ಅವರು ಜನಿಸಿದ್ದು ದಿನಾಂಕ 7 ಎಪ್ರಿಲ್ 1924ರಲ್ಲಿ ರಾಯಚೂರು ಜಿಲ್ಲೆಯ  ಹೆಂಬೇರಾಳ ಎಂಬ ಚಿಕ್ಕಹಳ್ಳಿಯಲ್ಲಿ.   ಇವರ ತಂದೆ ಚನ್ನಬಸಯ್ಯನವರು  ಕನ್ನಡ ಮತ್ತು ಸಂಸ್ಕೃತ ಪಂಡಿತರಾಗಿದ್ದರು. ಶಾಂತರಸ ಎಂಬುದು ಅವರ ಕಾವ್ಯನಾಮ.  ಅವರ ನಿಜವಾದ ಹೆಸರು ಶಾಂತಯ್ಯ.

ತಮಗೆ ಸರಿಕಾಣದ್ದನ್ನು ವಿರೋಧಿಸುವ ಗುಣವನ್ನು ಹುಟ್ಟಿನಿಂದಲೇ ಬೆಳೆಸಿಕೊಂಡ ಅವರು, ಶಾಲೆಯಲ್ಲಿ ಕೆಲವೊಂದು ಮುಸ್ಲಿಂ ಅಧ್ಯಾಪಕರು ಮಾಡುತ್ತಿದ್ದ ಭೇದಭಾವ ವಿರೋಧಿಸುವುದು, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದು ಮುಂತಾದ ಕ್ರಿಯೆಗಳಲ್ಲಿ ಹಲವು ವರ್ಷ ತಮ್ಮ ಶಾಲಾ ಕಾಲೇಜುಗಳಲ್ಲಿನ  ಓದಿನ ವರ್ಷಗಳನ್ನು ಕಳೆದುಕೊಂಡರು.  ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಹೈದರಾಬಾದಿನ ನಿಜಾಮನ ಆಡಳಿತ ಕಾಲದಲ್ಲಿ ಮಾತೃ ಭಾಷೆಯಲ್ಲಿ ಓದಲಾಗದೆ ಉರ್ದು ಭಾಷೆಯಲ್ಲಿ ಶಾಲಾ ವ್ಯಾಸಂಗ ಮಾಡಬೇಕಾದ ಪರಿಸ್ಥಿತಿಯಲ್ಲಿ ತಮ್ಮ ಶಿಕ್ಷಣವನ್ನು ನಡೆಸಿದರು.    ಮೆಟ್ರಿಕ್ಯುಲೇಶನ್ ಮುಗಿಸಿ ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಲೇ ಇಂಟರ್ ಮೀಡಿಯೆಟ್, ಬಿ.ಎ., ಬಿ.ಎಡ್, ಎಂ.ಎ ಪರೀಕ್ಷೆಗಳನ್ನು ಪಾಸು ಮಾಡಿದರು.  ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ, ಹೈಸ್ಕೂಲು ಶಿಕ್ಷಕರಾಗಿ, ಕಾಲೇಜು ಅಧ್ಯಾಪಕ, ಪ್ರಿನಿಸಿಪಾಲರಾಗಿ ಹೀಗೆ ವಿವಿಧ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿದರು.

ಹೆಸರು ಶಾಂತರಸ ಎಂದಾದರೂ ಅವರು ಎಲ್ಲವನ್ನೂ ಸುಮ್ಮನೆ ನೋಡಿಕೊಂಡು ಕುಳಿತುಕೊಳ್ಳುವ ಶಾಂತರಾಗಿರಲಿಲ್ಲ.  ಸಾಹಿತ್ಯ ಕ್ಷೇತ್ರದಲ್ಲಿ ನಡೆಯುವ ಅನ್ಯಾಯ, ಪಕ್ಷಪಾತ, ಅನಾರೋಗ್ಯಕರ ಬೆಳವಣಿಗೆ, ಭಾಷೆ, ನೆಲ, ಜಲಗಳ ಮೇಲಾಗುವ ಅನ್ಯಾಯ ಮತ್ತು ಸರ್ಕಾರ ತಳೆದ ಮಲತಾಯಿ ಧೋರಣೆಯನ್ನು ಸಹಿಸಿಕೊಂಡು ಮೌನವಾಗಿ ಕುಳಿತವರಲ್ಲ.  ಅವರು ಜನರನ್ನು ಸಂಘಟಿಸಿ ನ್ಯಾಯಕ್ಕಾಗಿ ಹೋರಾಟವನ್ನು ಮಾಡಿದವರು.  ಅವರು ಸಂಘಟಿಸಿದ ಪ್ರಮುಖ ಚಳುವಳಿಗಳಲ್ಲಿ ಹೈದರಾಬಾದ್ ನಿಜಾಮ್ ಆಡಳಿತ ಕಾಲದ ಚಳುವಳಿ, ಕನ್ನಡ ಭಾಷಾ ಚಳುವಳಿ ಮತ್ತು ಸತತವಾಗಿ ಕರ್ನಾಟಕಕ್ಕೆ ದೊರೆತ ಎಲ್ಲ ಸರ್ಕಾರಗಳು ಹೈದರಾಬಾದ್ - ಕರ್ನಾಟಕ ಪ್ರಾಂತ್ಯಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ ಬಗೆಗಿನ ಚಳುವಳಿಗಳು ಪ್ರಮುಖವಾದದ್ದು.

ಶಾಂತರಸರು ಸಂಘಟನಾ ಚತುರರು.  ಆತ್ಮೀಯ ಗೆಳೆಯರಾಗಿದ್ದ ವೀರಣ್ಣಗೌಡ ನೀರಮಾನ್ವಿ ಮತ್ತು ಚೆನ್ನಬಸಪ್ಪ ಬೆಟ್ಟದೂರರನ್ನು ಕೂಡಿಕೊಂಡು ರಾಯಚೂರಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಜೀವಂತವಾಗಿಟ್ಟಿದ್ದರು.  ಮದುವೆ, ಪುರಾಣ, ಪುಣ್ಯ ತಿಥಿ, ಜಯಂತಿ, ಹಬ್ಬದಂಥ ಸಂದರ್ಭಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಆಚರಣೆಗಳನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವಗಳನ್ನಾಗಿ ಆಚರಿಸಿದರು.  ಮದುವೆಯಲ್ಲಿ ದುಂದುವೆಚ್ಚ ಮಾಡುವ ಶ್ರೀಮಂತರ ಮನವೊಲಿಸಿ ಮದುವೆಯ ನೆನಪಿಗೆ ಗ್ರಂಥಗಳನ್ನು ಪ್ರಕಟಿಸಿ ಅದೇ ಸಮಾರಂಭದಲ್ಲಿ ಬಿಡುಗಡೆ ಮಾಡಿಸಿದರು.  ಪುಣ್ಯತಿಥಿ ಆಚರಣೆಯಲ್ಲಿ ಕವಿಗೋಷ್ಠಿ, ವಿಚಾರಸಂಕಿರಣ, ಸಂಗೀತಮೇಳಗಳನ್ನು ಏರ್ಪಡಿಸಿದರು.  ಸ್ಥಳೀಯ ಕಲಾವಿದರಿಂದಲೂ, ಸಮುದಾಯ ಸಂಘಟನೆಗಳಿಂದಲೂ ನಾಟಕಗಳನ್ನು ಆಚರಿಸಿದರು.  ಹೆಸರಾಂತ ಸಾಹಿತಿಗಳನ್ನು ಕರೆಸಿ ಭಾಷಣಗಳನ್ನು ಮಾಡಿಸಿದರು.  ಇಂಥ ಕಾರ್ಯಕ್ರಮಗಳ ಮೂಲಕವೇ ಸಾಕಷ್ಟು ಸಾಹಿತಿಗಳನ್ನು, ಸಂಗೀತಗಾರರನ್ನು ಹುಟ್ಟುಹಾಕಿದರು.

ಹೈದರಾಬಾದ್ ಕರ್ನಾಟಕದ ಒಂದು ಇಡೀ ತಲೆಮಾರಿನ ಕನ್ನಡ ಲೇಖಕರಿಗೆ ಮಾದರಿಯಾಗಿದ್ದ ಶಾಂತರಸರು ಅವರನ್ನೆಲ್ಲ ಬೆಳಸಿದ ತಂದೆ ಸಮಾನರಾದ ಲೇಖಕ. ತಮ್ಮ ಪ್ರದೇಶದ ಬಗ್ಗೆ, ಅಲ್ಲಿನ ಬದುಕಿನ ಬಗ್ಗೆ ಅಪಾರವಾದ ಪ್ರೀತಿ, ವ್ಯಾಮೋಹಗಳಿದ್ದ ಶಾಂತರಸರು,  ಲಂಕೇಶರ ಅಕ್ಷರ ಹೊಸಕಾವ್ಯ ಸಂಕಲನದಲ್ಲಿ ಹೈದರಾಬಾದ್ ಕರ್ನಾಟಕದ ಕವಿಗಳಿಗೆ ಸ್ಥಾನ ದೊರೆತಿಲ್ಲವೆಂದು ಬೆನ್ನ ಹಿಂದಿನ ಬೆಳಕು' ಎಂಬ ಸಂಕಲವನ್ನು ರೂಪಿಸಿದ್ದು ಇತಿಹಾಸ. ಅದರಿಂದ ಕಲ್ಯಾಣ ಕರ್ನಾಟಕದ ಎಷ್ಟೋ ಕವಿಗಳು ಕನ್ನಡದ ಓದುಗರಿಗೆ ಪರಿಚಿತವಾದರು.

ಎತ್ತರವಲ್ಲದ ಆಕಾರ, ಬಡಕಲು ಮೈ, ದಪ್ಪ ಕನ್ನಡಕದ ಹಿಂದೆ ಉಬ್ಬಿಕೊಂಡು ಸದಾ ಅತ್ತಿತ್ತ ನೋಡುತ್ತಿದ್ದ ಕಣ್ಣುಗಳು, ಎತ್ತರದ ಧ್ವನಿಯ ನಗು, ಯಾವ ಕೆಲಸವೂ ಕಷ್ಟವಲ್ಲವೆಂಬಂಥ ವರ್ತನೆ, ಇವು ಶಾಂತರಸರನ್ನು ಬಲ್ಲವರು ಗುರುತಿಸುತ್ತಿದ್ದ ರೀತಿ. ಅವರು ಬರೆದಿದ್ದ ನೀಲಗಂಗಾ ಮತ್ತು ರೂಪಾಯಿ' ಕನ್ನಡದ ಅತ್ಯುತ್ತಮ  ಕಥೆಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.   ಉರ್ದು ಗಜಲ್‌ಗಳ ಬಗ್ಗೆ ವ್ಯಾಪಕವಾಗಿ ಅಧ್ಯಯನ ನಡೆಸಿದ್ದ ಶಾಂತರಸರು  ಹಲವು ನೂರು ಗಜಲ್‌ಗಳನ್ನು ಕನ್ನಡಕ್ಕೆ ತಂದಿದ್ದರು. ಬಾರಾಮಾಸ' ಎಂಬ ಉರ್ದು ಭಾಷೆಯಲ್ಲಿದ್ದ ಋತುವರ್ಣನೆ'ಯ ಕಾವ್ಯವನ್ನು ಕನ್ನಡೀಕರಿಸಿದ್ದರು.  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಕನ್ನಡದ ತತ್ವಪದಗಳ ಪ್ರಾತಿನಿಧಿಕ ಸಂಕಲನ ಹೊರಬರಲು ಕಾರಣರಾಗಿದ್ದರು. ಮುತ್ತಿನ ಹಾರ ಎಂಬ ಹೆಸರಿನಲ್ಲಿ ಹಳಗನ್ನಡದ ನಡುಗನ್ನಡದ ಕವಿ ಕೃತಿಗಳ ವಾಚಿಕೆಗಳನ್ನು ಹೊರತಂದಿದ್ದರು.

ಶಾಂತರಸರು 1992ರಲ್ಲಿ ತಮಗೆ ನೀಡಲಾಗಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಭ್ರಷ್ಟ ಸರಕಾರ, ಜನೋಪಯೋಗಿಯಗಿಲ್ಲದ ಸರಕಾರದಿಂದ ಪ್ರಶಸ್ತಿ ಪಡೆಯುವುದಿಲ್ಲವೆಂದು ಹೇಳಿ ತಿರಸ್ಕರಿಸಿದ್ದರು.  ಮುಂದೆ ಕನ್ನಡ ನಾಡು  2006ರ ವರ್ಷದಲ್ಲಿ  ಬೀದರದಲ್ಲಿ ಜರುಗಿದ 73ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಅವರನ್ನು ಗೌರವಿಸಿತ್ತು.

ಶಾಂತರಸರು ರಾಯಚೂರಿನಲ್ಲಿ ಸತ್ಯ ಸ್ನೇಹ ಪ್ರಕಾಶನವನ್ನು ಪ್ರಾರಂಭಿಸಿದರು. ಅವರು ಬರೆದ ಪುಸ್ತಕಗಳ ಸಂಖ್ಯೆ ಸುಮಾರು 50.  ಅವರು ತಾವು ಬರೆದುದಕ್ಕಿಂತ ಇತರರಿಂದ ಬರೆಸಿದ್ದು ಹೆಚ್ಚು.  1995ರಲ್ಲಿ ಶಾಂತರಸರು  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಅವರು ಪಠ್ಯ ಪುಸ್ತಕ ಕಮಿಟಿಯಲ್ಲೂ ಸೇವೆ ಸಲ್ಲಿಸಿದ್ದರು.

ಮಾನಸಗಳ್ಳಿ’, ‘ಬಯಲು ಸೀಮೆಯ ಬಿಸಿಲು’, ‘ಕನ್ನಡ ಗಜಲ್ಇವು ಕವನ ಶಾಂತರಸರ ಪ್ರಮುಖ ಕವನ ಸಂಕಲನಗಳು.  ತೋರಣ ಹರಿಯಲಿಲ್ಲ’, ‘ಬಡೇಸಾಬ ಪುರಾಣ’, ‘ನಾಯಿ ಮತ್ತು ಪಿಂಚಣಿ’, ‘ಸ್ವಾತಂತ್ರ್ಯ ವೀರ’,  ‘ಉರಿದ ಬದುಕು’,  ಅವರ ಕಥಾ ಸಂಕಲನಗಳು.  ಸಣ್ಣ ಗೌಡಸಾನಿಎಂಬುದು ಅವರ ಕಾದಂಬರಿ. ಶಾಂತರಸರು ಹಲವಾರು ನಾಟಕಗಳು, ವ್ಯಕ್ತಿ ಜೀವನ ಚರಿತ್ರೆ, ಪ್ರಬಂಧ, ಸಂಶೋಧನೆ, ಸಂಪಾದನೆ ಮತ್ತು ಅನುವಾದಗಳನ್ನೂ ಮಹತ್ವದ ಕೊಡುಗೆಯಾಗಿ ನೀಡಿದ್ದಾರೆ.

ಶಾಂತರಸರು 13 ಎಪ್ರಿಲ್ 2008ರಂದು ನಿಧನರಾದರು.  ಈ ದಿವ್ಯ ಚೇತನಕ್ಕೆ ನಮ್ಮ ನೆನಪಿನ ನಮನ.

ಮಾಹಿತಿ ಆಧಾರ:  ಪ್ರಭುಖಾನಾಪುರೆ ಅವರ ಲೇಖನ, ‘ಸಾಲು ದೀಪಗಳು
ಫೋಟೋ ಕೃಪೆ: ಅಶೋಕ್ ಪಾಟೀಲ್, ‘ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟಗೊಂಡದ್ದು.Tag: Shantarasa

ಕಾಮೆಂಟ್‌ಗಳಿಲ್ಲ: