ಶುಕ್ರವಾರ, ಆಗಸ್ಟ್ 30, 2013

ಶಕುಂತಲಾ ದೇವಿ

ಶಕುಂತಲಾ ದೇವಿ

ಮಹಾನ್ ಗಣಿತಜ್ಞೆ,   'ಮಾನವ ಕಂಪ್ಯೂಟರ್‌' ಎಂದು ವಿಶ್ವ ಖ್ಯಾತಿ ಗಳಿಸಿದ್ದ  ಶಕುಂತಲಾ ದೇವಿ ಜ್ಯೋತಿಷಿ, ಜಾದೂಗಾರ್ತಿಯಾಗಿ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದ್ದರು.  ಶಕುಂತಲಾ ಅವರು ಬೆಂಗಳೂರಿನಲ್ಲಿ 1939ರ ನವೆಂಬರ್ 4 ರಂದು ಜನಿಸಿದರು.

ಶಕುಂತಲಾ ದೇವಿ ಅವರ ತಂದೆಯವರದ್ದು ಅರ್ಚಕ ವೃತ್ತಿ. ಆದರೆ ಅವರು ಸರ್ಕಸ್ ಸೇರಿಕೊಂಡಿದ್ದರು. ಶಾಲೆಗಳಲ್ಲೂ ಜಾದೂ ಪ್ರದರ್ಶನ ನೀಡುತ್ತಿದ್ದರು. ಅವರ ತಾತ ಸಹ ಜಾದೂಗಾರ. ಹೀಗಾಗಿ ಜಾದೂಕಲೆ ಅವರಿಗೆ ವಂಶಪರಂಪರೆಯಾಗಿ ಬಂದಿತ್ತು. ಶಕುಂತಲಾ ಅವರು ತಮ್ಮ ಮೂರನೇ ವಯಸ್ಸಿನಲ್ಲೇ ತಂದೆಯೊಂದಿಗೆ ಕಾರ್ಡ್ ಜಾದು ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಈ ಮೂಲಕ ಶಕುಂತಲಾ ದೇವಿ ಅವರಲ್ಲಿ ಅದ್ಬುತವಾದ ಕಲೆ ಇರುವುದು ಸಣ್ಣ ವಯಸ್ಸಿನಲ್ಲೆ ಬೆಳಕಿಗೆ ಬಂದಿತ್ತು. ತಂದೆಯೊಂದಿಗೆ ಸರ್ಕಸ್ ಮಾಡುತ್ತಾ ಸುತ್ತುತ್ತಿದ್ದ ಶಕುಂತಲಾ ಅವರು ಎಲ್ಲರಂತೆ ಶಾಲೆಗೆ ಹೋಗಿ ಕಲಿಯಲೇ ಇಲ್ಲ.  ಒಮ್ಮೆ ಒಂದು  ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು,  ತಾವು ಅತ್ಯಂತ ಬಡತನದಲ್ಲಿ ಜೀವಿಸಬೇಕಾದ ಪರಿಸ್ಥಿತಿಯಿದ್ದು ತಾವು ಚಿಕ್ಕವಯಸ್ಸಿನಲ್ಲೇ ಯಕ್ಷಿಣಿ ಪ್ರದರ್ಶಿಸಿ ತಮ್ಮ ಕುಟುಂಬವನ್ನು ಪೋಷಿಸುವುದು  ಅನಿವಾರ್ಯವಾಗಿತ್ತು ಎಂದು ಹೇಳಿದ್ದರು.

ಗಣಿತದ ಅತ್ಯಂತ ಸೂಕ್ಷರಹಸ್ಯಗಳೆಲ್ಲಾ ಶಕುಂತಲಾ ದೇವಿ ಅವರಿಗೆ ಸಣ್ಣ ವಯಸ್ಸಿನಲ್ಲೇ ಕರಗತವಾಗಿದ್ದವು. ತಮ್ಮ ಐದನೇ ವಯಸ್ಸಿನಲ್ಲಿ ಶಕುಂತಲಾ ದೇವಿ ಅವರು ಗಣಿತದ ಕ್ಲಿಷ್ಟಕರವಾದ ಸಮಸ್ಯೆಗಳನ್ನು ಮನಸಲ್ಲೇ ಲೆಕ್ಕಿಸಿ ಥಟ್ ಎಂದು ಉತ್ತರ ಹೇಳುವ ಆಗಾಧ ಬುದ್ಧಿ ಶಕ್ತಿಯ ಬಾಲಕಿ ಎಂದು ಮನೆಮಾತಾದರು. ಶಕುಂತಲಾ ದೇವಿ ಅವರು ಬಾಯಿಲೆಕ್ಕದಲ್ಲಿ ಎಷ್ಟು ಜನಪ್ರಿಯರಾಗಿದ್ದರು ಎಂದರೆ ವಿಶ್ವವಿದ್ಯಾಲಯಗಳಲ್ಲಿ ಶ್ರೇಷ್ಠರೆನಿಸಿಕೊಂಡ ಪ್ರಾಧ್ಯಾಪಕರೂ ಗಣಿತದ ಕ್ಲಿಷ್ಟ ಸಮಸ್ಯೆಗಳನ್ನು ಶಕುಂತಲಾ ಅವರ ಮುಂದಿರಿಸುತ್ತಿದ್ದರು. ಈ  ಎಲ್ಲ ಪ್ರಶ್ನೆಗಳನ್ನೂ  ಶಕುಂತಲಾ ದೇವಿ ಕೆಲವೇ ಸೆಕೆಂಡುಗಳಲ್ಲಿ ಉತ್ತರಿಸುತ್ತಿದ್ದರು.

ಶಕುಂತಲಾ ಅವರ ಪ್ರಕಾರ, 'ಮನುಷ್ಯನ ಮೆದುಳಿಗೆ ಯಾವುದೇ ಕಂಪ್ಯೂಟರ್‌ಗಳಿಗಿಂತ ಅತಿ ಹೆಚ್ಚು ನೆನಪಿನ ಸಾಮರ್ಥ್ಯ ಹಾಗೂ ಅಲೋಚನಾ ಶಕ್ತಿ ಇರುತ್ತದೆ. ಅದನ್ನು ಸೂಕ್ತವಾಗಿ ಬಳಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಮನುಷ್ಯ ಗಳಿಸಿಕೊಳ್ಳಬೇಕು'. ಸುಲಭವಾಗಿ ಮತ್ತು  ಖುಷಿಯಿಂದ ಗಣಿತದ ಸಮಸ್ಯೆಗಳನ್ನು ಬಿಡಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು.

1980 ಜುಲೈ 18 ರಂದು ಲಂಡನ್ ಇಂಪಿರಿಯಲ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಗಣಿತಜ್ಞರು ಕ್ಲಿಷ್ಟವಾದ ಗುಣಾಕಾರ ಸಮಸ್ಯೆಯನ್ನು ಶಕುಂತಲಾ ದೇವಿ ಅವರಿಗೆ ಸಿದ್ಧಪಡಿಸಿದರು. ಯಾವುದೇ ತಾಂತ್ರಿಕ ಸಹಾಯವಿಲ್ಲದೆಯೇ ಬಾಯಿಲೆಕ್ಕದಲ್ಲಿ  13 ಸಂಖ್ಯೆಗಳನ್ನು ಮತ್ತೊಂದು 13 ಸಂಖ್ಯೆಗಳಿಂದ ಗುಣಿಸುವ ಸಮಸ್ಯೆ ಅದಾಗಿತ್ತು. ಶಕುಂತಲಾ ದೇವಿ ಅವರು  ತಮಗೆ ಕೊಟ್ಟ ಆ ಸಮಸ್ಯೆಯನ್ನು ಕೇವಲ 28 ಸೆಕೆಂಡುಗಳಲ್ಲಿ ಬಿಡಿಸುವ ಮೂಲಕ ಆ ಮಹಾನ್  ಗಣಿತಜ್ಞರ ಹುಬ್ಬೇರುವಂತೆ ಮಾಡಿದರು. ಇದು 1995ರ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ  ದಾಖಲಾಗಿದೆ. 1977ರಲ್ಲಿ ಅವರು ಅಮೆರಿಕದ ಡಲ್ಲಾಸ್‌ನಲ್ಲಿ 201 ಅಂಕಿಗಳ  23ನೇ ವರ್ಗಮೂಲವನ್ನು ಕೇವಲ  50 ಸೆಕೆಂಡುಗಳಲ್ಲಿ ಕಂಡು ಹಿಡಿದರು. 'ಯೂನಿವಾಕ್ 110'8 ಕಂಪ್ಯೂಟರ್‌ಗಿಂತ 10 ಸೆಕೆಂಡು ಬೇಗದಲ್ಲಿ ಅವರು ಆ  ಉತ್ತರ ನೀಡಿದ್ದರು.

ಶಕುಂತಲಾ ಅವರ ಅಸಾಮಾನ್ಯ ಗಣಿತ ಜ್ಞಾನದಿಂದ ಬೆರಗಾದ ಹಲವರು ಇದು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಳ್ಳುತ್ತಿದ್ದರು. ಪಾಶ್ಚಾತ್ಯ ರಾಷ್ಟ್ರಗಳ ಕೆಲ ಗಣಿತಜ್ಞರು ಇದು ಜಾದು ಇರಬಹುದು ಎನ್ನುತ್ತಿದ್ದರಾದರೂ ಜಾದೂವಿನ ಮೂಲಕ ಸಮಸ್ಯೆಗಳನ್ನು ಬಿಡಿಸಲು ಸಾಧ್ಯವಾಗುವುದಿಲ್ಲ ಎಂದಾಗ ಸೋಲೊಪ್ಪಿಕೊಳ್ಳುತ್ತಿದ್ದರು. ಏಕೆಂದರೆ ಶಕುಂತಲಾ ಅವರು ಮಾಡುತ್ತಿದ್ದ ಲೆಕ್ಕ ಅಷ್ಟು ನಿಖರವಾಗಿರುತ್ತಿತ್ತು.

ಶಕುಂತಲಾ ಅವರು  ಗಣಿತಜ್ಞೆ ಮಾತ್ರವಲ್ಲದೇ ವೃತ್ತಿಪರ ಜ್ಯೋತಿಷಿಗಳಂತೆ ಹುಟ್ಟಿದ ದಿನಾಂಕ, ಸಮಯ ಆಧಾರದ ಮೇಲೆ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ಹಲವಾರು ಖ್ಯಾತನಾಮರು ಶಕುಂತಲಾ ದೇವಿ ಅವರ ಬಳಿ ಜ್ಯೋತಿಷ ಕೇಳಲು ಬರುತ್ತಿದ್ದರು. ಗಣಿತ, ಒಗಟು ಬಿಡಿಸುವುದು, ನೆನೆಪಿನ ಶಕ್ತಿ, ಜ್ಯೋತಿಷ್ಯ ಮುಂತಾದ ವಿಷಯಗಳ ಬಗ್ಗೆ ಶಕುಂತಲಾ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ಬೆಂಗಳೂರಿನ ಎಚ್.ಎಸ್.ಆರ್.ಲೇಔಟ್ ನಲ್ಲಿ. ಶಕುಂತಲಾ ದೇವಿ ಅವರು ‘ಶಕುಂತಲಾ ದೇವಿ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಸೈನ್ಸ್‌ ಮತ್ತು ಪಿಯು ಕಾಲೇಜು’ ಎಂಬ ಪ್ರತಿಷ್ಠಿತ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

ಒಮ್ಮೆ ಸಂದರ್ಶನದಲ್ಲಿ ಅವರನ್ನು ತಾವು ಯಾವ ಯಾವ ದೇಶಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದೀರಿ ಎಂದು ಕೇಳಿದಾಗ, "ನಾನು ಕಮ್ಮ್ಯೂನಿಸ್ಟ್ ದೇಶಗಳ ಹೊರತಾಗಿ ಉಳಿದೆಲ್ಲಾ ದೇಶಗಳಲ್ಲಿ ನನ್ನ ಉಪನ್ಯಾಸ ಪ್ರದರ್ಶನಗಳನ್ನು ನೀಡಿದ್ದೇನೆ.  ಕಮ್ಮ್ಯೂನಿಸ್ಟ್ ದೇಶಗಳಲ್ಲಿ ನನ್ನ ಪ್ರದರ್ಶನ ಏಕೆ ಸಾಧ್ಯವಿಲ್ಲ ಎಂದರೆ, ನನ್ನಲ್ಲಿರುವ ಶಕ್ತಿಯನ್ನು ದೇವರು ಎಂಬ ಕಲ್ಪನೆ ಇಲ್ಲದ ಸ್ಥಳದಲ್ಲಿ ವಿವರಿಸಲು ಸಾಧ್ಯವಿಲ್ಲ" ಎಂದಿದ್ದರು.  ತಮ್ಮ ಪ್ರತಿಭೆಗೆ ದೇವರ ಕೃಪೆ ಕಾರಣ ಎಂಬುದು ಅವರ ಅಗಾಧ ನಂಬಿಕೆಯಾಗಿತ್ತು.

ಈ ಮಹಾನ್ ಸಾಧಕರು ಏಪ್ರಿಲ್ 21, 2013ರಂದು ನಿಧನರಾದರು. ಈ ಅದ್ಭುತ ಚೇತನಕ್ಕೆ ನಮ್ಮ ನಮನ.


Tag: Shakuntala Devi

ಕಾಮೆಂಟ್‌ಗಳಿಲ್ಲ: