ಸೋಮವಾರ, ಆಗಸ್ಟ್ 26, 2013

ಆನಂದ ಕೆ. ಕುಮಾರಸ್ವಾಮಿ

ಆನಂದ ಕೆ. ಕುಮಾರಸ್ವಾಮಿ

ಭಾರತೀಯ  ಕಲೆ, ಸಂಸ್ಕೃತಿ,  ತತ್ವಶಾಸ್ತ್ರಗಳ ಮಹತ್ವವನ್ನು ವಿಶ್ವದೆಲ್ಲೆಡೆಯ  ಜನರಿಗೆ  ಮನದಟ್ಟಾಗುವಂತೆ ತಿಳಿಸಿಕೊಟ್ಟವರಲ್ಲಿ  ಆನಂದ  ಕೆಂಟಿಷ್ ಕುಮಾರಸ್ವಾಮಿ ಅವರ  ಹೆಸರು  ಚಿರವಿರಾಜಿತವಾದಂತದ್ದು. 

ಆನಂದ  ಕುಮಾರಸ್ವಾಮಿ  ಅವರ  ತಂದೆ  ಮುತ್ತು ಕುಮಾರಸ್ವಾಮಿ ಮೊದಲಿಯಾರರು   ತಮಿಳುನಾಡಿನಿಂದ ಸಿಂಹಳಕ್ಕೆ ಬಂದು ನೆಲೆಸಿದವರು. ಅಲ್ಲಿನ ಪ್ರಜೆಯಾಗಿ, ವಿಧಾನಸಭೆಯ ಸದಸ್ಯರೂ, ಖ್ಯಾತ ವಕೀಲರೂ  ಆಗಿದ್ದು, ಏಷ್ಯಾದಲ್ಲೇ ಮೊದಲ ಬಾರಿಗೆ ನೈಟ್‌ಹುಡ್ಪ್ರಶಸ್ತಿ ಪಡೆದವರು.  ಮುತ್ತು ಕುಮಾರಸ್ವಾಮಿಯವರು ಇಂಗ್ಲೆಂಡಿಗೆ ಕಾರ್ಯ ನಿಮಿತ್ತ ಬಂದಾಗ ಎಲಿಜಬೆತ್ ಕ್ಲೇ ಬೇವಿ ಎಂಬ ಆಂಗ್ಲ ತರುಣಿಗೂ ಅವರಿಗೂ ಪರಿಚಯವಾಗಿ  ಪ್ರೇಮ ವಿವಾಹವೇರ್ಪಟ್ಟಿತು.  ಸಿಂಹಳದಲ್ಲಿ   ಬಂದು ನೆಲೆಸಿದ ಈ  ದಂಪತಿಗಳಿಗೆ  1877ರ ಆಗಸ್ಟ್ 22ರಂದು  ಮಗ ಆನಂದ  ಕುಮಾರಸ್ವಾಮಿ ಹುಟ್ಟಿದನು.  ಮಗು  ಆನಂದ  ಕುಮಾರಸ್ವಾಮಿ  ಇನ್ನೂ  ಎರಡು  ವರ್ಷದವನಿದ್ದಾಗಲೇ ತಂದೆ  ಮುತ್ತು  ಕುಮಾರಸ್ವಾಮಿ ನಿಧನರಾದರು.  ಎಷ್ಟೇ ಕಷ್ಟಗಳು ಬರಲಿ, ಆನಂದ ಕುಮಾರಸ್ವಾಮಿಯನ್ನು ಚೆನ್ನಾಗಿ ಬೆಳೆಸಬೇಕು ಎಂದು ನಿರ್ಧರಿಸಿದ ತಾಯಿ ಎಲಿಜಬೆತ್   ಇಂಗ್ಲೆಂಡಿಗೆ ಹಿಂದಿರುಗಿ ಆನಂದ ಕುಮಾರ ಸ್ವಾಮಿಯ ಶಿಕ್ಷಣಕ್ಕೆ ವಿಶೇಷ ಗಮನ ಕೊಡತೊಡಗಿದಳು.  ವಿದೇಶಿಯಳಾದರೂ  ಭಾರತೀಯ  ಸಂಸ್ಕೃತಿಯಲ್ಲಿ  ಅಪಾರ  ಆಸ್ತೆ ಹೊಂದಿದ್ದ ಎಲಿಜಬೆತ್, ತನ್ನ  ಮಗುವಿಗೆ ಅವುಗಳಲ್ಲಿ  ಆಸಕ್ತಿ ಹುಟ್ಟುವಂತೆ ಮಾಡಿದಳು.   ತಾಯಿ ಎಲಿಜಬೆತ್‌ ಕುಮಾರಸ್ವಾಮಿಗೆ ಭಾರತದ ಪುಣ್ಯ ಪುರುಷರ ಕಥೆಗಳನ್ನು ದಿನವೂ ಆತನಿಗೆ ಗೊತ್ತಾಗುವ ಬಾಲ ಭಾಷೆಯಲ್ಲಿ ಹೇಳುತ್ತಿದ್ದಳು.

ತನ್ನ ತಾಯಿಯ ಆಶ್ರಯದಲ್ಲೇ ಬೆಳೆದು ದೊಡ್ಡವನಾದ ಆನಂದ ಕುಮಾರಸ್ವಾಮಿ, 1889ರಲ್ಲಿ ವಿಕ್ಲಿಫ್ ಕಾಲೇಜನ್ನು ಸೇರಿ, ಎಂಟು ವರ್ಷ ಅಲ್ಲಿ ವಿದ್ಯಾಭ್ಯಾಸ ಮಾಡಿದ.  ಪ್ರಾಯವಾದಂತೆ ಆನಂದ ಕುಮಾರಸ್ವಾಮಿ ಗಂಭೀರ ವ್ಯಕ್ತಿಯಾಗತೊಡಗಿದ. ತಾನಾಯಿತು. ತನ್ನ ಕಾಲೇಜಿನ ವ್ಯಾಸಂಗವಾಯಿತು. ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿ ಷಣ್ಮುಖನ ಪೂಜೆ ಮಾಡಿ, ಭಗವದ್ಗೀತೆಯ ಪಠನ ಮಾಡುತ್ತಿದ್ದ. ಬಿಡುವಿನ ವೇಳೆಯಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಗಳ ಗ್ರಂಥಗಳ ಅಧ್ಯಯನ ನಡೆಯಸುತ್ತಿದ್ದ. ಅವು ಇಂಗ್ಲೆಂಡಿನಲ್ಲಿ ಸಿಕ್ಕದಿದ್ದರೆ ಸಿಂಹಳ ಅಥವಾ ಭಾರತದಿಂದ ತರಿಸುತ್ತಿದ್ದ.  ಕತ್ತಿನ ತನಕ ಚಾಚಿರುವ ಗುಂಗುರು ಕೂದಲು, ನೀಳ ಮೂಗು, ಉದ್ದನೆಯ ಕೈಬೆರಳುಗಳು ಇದ್ದ ಕುಮಾರಸ್ವಾಮಿಯ ಸ್ವಭಾವ, ಗಂಭೀರ ನಡಿಗೆ, ಮಾತು ಎಲ್ಲವೂ ನಯ.

ಆನಂದ ಕುಮಾರಸ್ವಾಮಿ 1909ರಲ್ಲಿ ಲಂಡನ್ ವಿಶ್ವವಿದ್ಯಾನಿಲಯ ಸೇರಿದ. ಕಾಲೇಜಿನಲ್ಲಿ ವ್ಯಾಸಂಗಕ್ಕಾಗಿ ಆರಿಸಿಕೊಂಡ ವಿಷಯ ಭೂಗರ್ಭ ಶಾಸ್ತ್ರ ಮತ್ತು ಪ್ರಾಕೃತಿಕ ವಿಜ್ಞಾನ. ಆದರೆ ಭಾರತೀಯ ಶಿಲ್ಪಕಲೆ, ಶಿಲ್ಪಶಾಸ್ತ್ರ, ಚಿತ್ರಕಲೆ, ಸಂಗೀತ, ನೃತ್ಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಭಾರತೀಯ ಸಂಸ್ಕೃತಿಯ ಕಡೆ ಆತನಿಗೆ ಒಲವು ಅಪಾರ.   ತನ್ನ ಉಡುಗೆ ತೊಡುಗೆಗಳಲ್ಲೂ ಭಾರತೀಯನಂತೆ ಕಾಣಬೇಕೆಂಬ ಇಚ್ಛೆ. ವಿದೇಶೀ ಉಡುಗೆ ತೊಟ್ಟರೂ ಹಣೆಯಲ್ಲಿ ಗಂಧದ ಮೇಲೆ ಕುಂಕುಮದ ಬೊಟ್ಟು. ಭಾರತೀಯ ವೇದ, ಉಪನಿಷತ್, ಭಗವದ್ಗೀತೆ, ರಾಮಾಯಣ, ಮಹಾಭಾರತಗಳ ಅಧ್ಯಯನಗಳು  ಆನಂದ ಕುಮಾರಸ್ವಾಮಿಯಲ್ಲಿ ದಿನೇದಿನೇ ಭಾರತೀಯ ಸಂಸ್ಕೃತಿಯನ್ನು ಕುರಿತು ಭಕ್ತಿ, ಗೌರವ ಬೆಳೆಯಲು ಕಾರಣವಾಯಿತು. ಆನಂದ ಕುಮಾರಸ್ವಾಮಿಯ ಮನಸ್ಸು ಪಕ್ವಗೊಂಡಂತೆ, ವಿಚಾರಶಕ್ತಿ ಬೆಳೆದಂತೆ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಸರಳ ಜೀವನ, ಉತ್ತಮ ಚಿಂತನೆ ಆತನಲ್ಲಿ ಅಚ್ಚೊತ್ತಿತು.  ಕಾಲೇಜಿನಲ್ಲಿ  ತನ್ನ   ಅಭಿರುಚಿಗೆ  ಮನಸೋತ  ಈತಲ್  ಮೇರಿ  ಎಂಬಾಕೆಯನ್ನು ಆನಂದ ಕುಮಾರಸ್ವಾಮಿ  ವಿವಾಹವಾದರು.

ಮದುವೆಯಾದ ಮರುವರ್ಷ ಆನಂದ ಕುಮಾರಸ್ವಾಮಿ ಭೂಗರ್ಭ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. ಆ ವರ್ಷವೇ ಕೆಲಸವೂ ಸಿಕ್ಕಿ, ಸಿಂಹಳದ ಗಣಿ ಸಂಶೋಧನಾ ಅಧಿಕಾರಿಯಾಗಿ  ನೇಮಕ ಮಾಡಲ್ಪಟ್ಟರು. ತಾನು ಹುಟ್ಟಿದ, ತನ್ನ ತಂದೆ ಬಾಳಿ ಮೆರೆದ ನಾಡು ಸಿಂಹಳದಲ್ಲಿ  ಉದ್ಯೋಗ  ದೊರೆತದ್ದು  ಅವರಿಗೆ  ಅತೀವ  ಸಂತಸ ತಂದಿತ್ತು.  ನಿರ್ವಹಿಸಬೇಕಾದ ಕೆಲಸ ಭೂಗರ್ಭ ಸಂಶೋಧನೆಯಾದರೂ ಅವರು ನಡೆದ ದಾರಿ ಬೇರೆ.  ಬಂದ ಸ್ವಲ್ಪ ದಿನಗಳಲ್ಲೇ ಆನಂದ ಕುಮಾರಸ್ವಾಮಿ ಸಿಂಹಳದ ಹಾಳುಬಿದ್ದ ಗುಹೆಗಳಿಗೆ ಭೇಟಿಕೊಟ್ಟರು. ಹಾಳುಬಿದ್ದಿದ್ದ ಆ ಗುಹೆಗಳ ಕಲಾ ವೈಭವವನ್ನು ಕಂಡು ಅವರು ಬೆರಗಾದರು. ಈ ಕಲೆಯನ್ನು ಅಭ್ಯಾಸ ಮಾಡಬೇಕು, ಇದರ ಸೊಗಸನ್ನೂ ಅರ್ಥವನ್ನೂ ಹೊರಗಿನ ಜಗತ್ತಿಗೆ ವಿವರಿಸಬೇಕು ಎನ್ನಿಸಿತು ಅವರಿಗೆ.

ಸಿಂಹಳದ ಕಲೆಯ ಅಭ್ಯಾಸ ಪ್ರಾರಂಭ ಮಾಡಿದರು. ಹೆಂಡತಿ ಈಥಲ್ ಮೇರಿಯ ಸಹಕಾರವೂ ಇತ್ತು. ನಾಲ್ಕೈದು ವರ್ಷಗಳ ಕಾಲ ಸಿಂಹಳದ ಕಲೆಯ ಅಭ್ಯಾಸ ಮಾಡಿದರು. 1909ರಲ್ಲಿ ಅವರ ಅಸಾಧಾರಣ ಗ್ರಂಥ ಮಧ್ಯಯುಗದ ಸಿಂಹಳದ ಕಲೆಪ್ರಕಟವಾಯಿತು. ಪೂರ್ವ ದೇಶಗಳು ಅನಾಗರಿಕ ಎಂದು ನಂಬಿದ್ದ ಕಲೆ ಪಾಶ್ಚಾತ್ಯ ದೇಶಗಳವರ ಕಣ್ಣುಗಳನ್ನು ತೆರೆಸಿತು.  ಸಿಂಹಳೀ ಕಲೆಯ ಅಧ್ಯಯನ ನಡೆಸಿದಂತೆಲ್ಲಾ ಭಾರತೀಯ ಕಲೆ ಮತ್ತು ಸಂಸ್ಕೃತಿಗಳನ್ನು ಅಭ್ಯಾಸ ಮಾಡಬೇಕು ಎಂದು ತೋರಿತು. ಆ ಕೆಲಸವನ್ನೂ ಕೈಗೊಂಡರು. ಅಧ್ಯಯನ ಸಾಗಿದಂತೆ ಅವರಿಗೆ ಹೊಸದೊಂದು ಕಲೆಗಳ ಮತ್ತು ಸಂಸ್ಕೃತಿಗಳ ಜಗತ್ತೇ ಕಂಡುಬಂದಿತು. ಜೊತೆಯಲ್ಲೇ ಫ್ರೆಂಚ್, ಜರ್ಮನಿ, ಲ್ಯಾಟಿನ್, ಗ್ರೀಕ್, ಸಂಸ್ಕೃತ, ಪಾಲಿ ಮತ್ತು ಹಿಂದಿ ಭಾಷೆಗಳನ್ನು ಕಲಿತರು. ಇಟಾಲಿಯನ್, ಸ್ಪ್ಯಾನಿಷ್, ಡಚ್, ಪರ್ಷಿಯನ್ ಮತ್ತು ಸಿಂಹಳೀ ಭಾಷೆಗಳು ಅವರಿಗೆ ಕರತಲಾಮಲಕವಾಗಿದ್ದವು. ತಮ್ಮ ಮಾತೃಭಾಷೆ ಇಂಗ್ಲಿಷ್ ಅಲ್ಲದೆ ಹನ್ನೆರಡು ಭಾಷೆಗಳಲ್ಲಿ ಪಾಂಡಿತ್ಯ ಪಡೆದರು.  ಆದರೆ ಮತ್ತೊಂದೆಡೆಯಲ್ಲಿ  ಅವರ  ವೈವಾಹಿಕ  ಜೀವನದಲ್ಲಿ   ಬಿರುಕುಂಟಾಯಿತು.  ಯಾವಾಗಲೂ ಓದು, ಬರಹ ಮತ್ತು   ಸುದೀರ್ಘ  ಚಿಂತನೆಗಳಲ್ಲಿ  ಮುಳುಗಿದ್ದ  ಕುಮಾರಸ್ವಾಮಿ  ಅವರ  ನಡೆಯಿಂದ  ನಿರಾಶಳಾದ ಈಥಲ್ ಮೇರಿ ತನ್ನ  ತಾಯ್ನಾಡಿಗೆ ಹಿಂತಿರುಗಿದಳು.

ಕುಮಾರಸ್ವಾಮಿಯವರ ಅಧ್ಯಯನ ನಿರಂತರವಾಗಿ ಸಾಗಿತ್ತು. ಕೆಲವು ತಿಂಗಳುಗಳು ಕಳೆದವು. ಭಾರತೀಯ ಸಂಗೀತದ ಬಗ್ಗೆ ಆಸಕ್ತಿ ಮೊಳೆತು ಅಧ್ಯಯನದಲ್ಲಿ ತೊಡಗಿದ್ದರು. ಆಗ ರತ್ನಾದೇವಿ ಎಂಬ ಸಿಂಹಳದ ಕನ್ಯೆಯ ಪರಿಚಯವಾಯಿತು. ಸ್ವಲ್ಪ ಕಾಲದನಂತರ ಆನಂದ ಕುಮಾರಸ್ವಾಮಿ ಆಕೆಯನ್ನು ಮದುವೆಯಾದರು.  ಕುಮಾರಸ್ವಾಮಿಯವರಿಗೆ ಹಗಲಿರುಳೂ ಭಾರತೀಯ ಕಲೆ ಮತ್ತು ಸಂಸ್ಕೃತಿಗಳ ಅಧ್ಯಯನದ್ದೇ ಯೋಚನೆ. ಆದರೆ ಇದು ಕೇವಲ ಗ್ರಂಥಗಳ ಪಠನೆಯೊಂದರಿಂದಲೇ ಸಾಧ್ಯವಿಲ್ಲ, ಅದಕ್ಕೆ ಸಂಬಂಧಪಪಟ್ಟ ಸ್ಥಳಗಳ ಪ್ರತ್ಯಕ್ಷ ದರ್ಶನ ಮಾಡಬೇಕು ಎನ್ನಿಸಿತು. ಆದರೆ ಅವರು ಸಿಂಹಳದ ಸರ್ಕಾರದಲ್ಲಿ ಡೈರೆಕ್ಟರ್ ಆಫ್ ಮಿನರಲಾಜಿಕಲ್ ಸರ್ವೆಎಂಬ ಅಧಿಕಾರಸ್ಥಾನದ ಹೊಣೆಯನ್ನು ನಿರ್ವಹಿಸಬೇಕಾಗಿತ್ತು. ಆ ಕೆಲಸಕಾರ್ಯಗಳಿಗೆ ಬಹಳ ಕಾಲ ವ್ಯಯವಾಗುತ್ತಿತ್ತು. ಕಲೆಯ ಅಧ್ಯಯನಕ್ಕಾಗಿ ಆನಂದ ಕುಮಾರಸ್ವಾಮಿ ಕೆಲಸವನ್ನೇ ಬಿಟ್ಟುಬಿಟ್ಟರು.

ಆನಂದ ಕುಮಾರಸ್ವಾಮಿಯವರು ಅಧ್ಯಯನದಲ್ಲೇ ತೊಡಗಿದ್ದರೂ ಸುತ್ತಲಿನ ಜೀವನವನ್ನು ಮರೆತವರಲ್ಲ. ಸಮಾಜದಲ್ಲಿನ ದೋಷಗಳನ್ನು ಹೋಗಲಾಡಿಸಲು ಶ್ರಮಿಸಿದರು. ಸಿಂಹಳದ ಸಮಾಜ ಸುಧಾರಣಾ ಸಂಘಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಸಿಲೋನ್ ನ್ಯಾಷನಲ್ ರಿವ್ಯೂಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು.

ಆನಂದ ಕುಮಾರಸ್ವಾಮಿ ಪತ್ನಿ ರತ್ನಾದೇವಿಯೊಡನೆ ಯುರೋಪ್ ಮತ್ತು ಪೂರ್ವ ದೇಶಗಳ ಪರ್ಯಟನೆಗೆ ಹೊರಟರು. ಇಂಗ್ಲೆಂಡಿನಲ್ಲಿ ಬ್ರಾಡ್ ಕ್ಯಾಂಪ್ಡೆನ್ ಎಂಬ ಸ್ಥಳದಲ್ಲಿ ಒಂದು ಅಚ್ಚುಕೂಟವನ್ನು ಸ್ಥಾಪಿಸಿದರು. ಮಧ್ಯಯುಗದ ಸಿಂಹಳದ ಕಲೆಎಂಬ ಅವರ ಪುಸ್ತಕ ಇಲ್ಲಿಯೇ ಅಚ್ಚಾದದ್ದು. ಅಜಂತಾ, ಎಲ್ಲೋರಾಗಳನ್ನು ಸಂದರ್ಶಿಸಿದರು. ಅಲ್ಲಿ ಭಾರತೀಯ ಕಲಾ ವೈಭವವನ್ನು ಕಂಡು ಅವರಿಗೆ ಅಪಾರ ಸಂತೋಷವಾಯಿತು. ಭಾರತೀಯ ಸಂಸ್ಕೃತಿಯ ಪ್ರತ್ಯಕ್ಷ ಪರಿಚಯವಾಯಿತು.

1910ರಲ್ಲಿ ಸರ್ ಜಾರ್ಜ್ ಬರ್ಡ್‌ವುಡ್ ಎಂಬ ಒಬ್ಬ ಕಲಾ ವಿಮರ್ಶಕ,  ಪಶ್ಚಿಮ ದೇಶಗಳ ಮತ್ತು ಪೂರ್ವದೇಶಗಳ ಕಲೆಗಳನ್ನು ಕುರಿತ ತನ್ನ ಒಂದು ಉಪನ್ಯಾಸದಲ್ಲಿ,  “ಪೂರ್ವ ದೇಶಗಳಲ್ಲಿ ಕಲಾವಿದರು ಕಲಾಕೃತಿಗಳು ಎಂದು ಚಿತ್ರಗಳನ್ನು ಬರೆಯುತ್ತಾರೆ, ವಿಗ್ರಹಗಳನ್ನು ಮಾಡುತ್ತಾರೆ, ಆದರೆ ಸೌಂದರ್ಯ ಎಂದರೇನು ಎಂದೇ ಅವರಿಗೆ ತಿಳಿಯದು.  ಉದಾಹರಣೆ  ಪೂರ್ವ ದೇಶಗಳ ಬುದ್ಧ ವಿಗ್ರಹಗಳಲ್ಲಿ ಏನು ತಾನೇ ಸೌಂದರ್ಯವಿದೆ? ಮರದ ಹೊಟ್ಟಿನ ಕಡುಬುಗಳು ಇದ್ದ ಹಾಗಿವೆಎಂದು ಅಪಹಾಸ್ಯಮಾಡಿದ.

ಇದರಿಂದ ಆನಂದ ಕುಮಾರಸ್ವಾಮಿಯವರಿಗೆ ಬೇಸರವಾಯಿತು. ಪೂರ್ವ ದೇಶಗಳಲ್ಲಿ ಕಲೆ ಹೇಗೆ ಹುಟ್ಟಿತು, ಹೇಗೆ ಬೆಳೆಯಿತು ಎಂದು  ಯಾವುದನ್ನೂ ತಿಳಿದುಕೊಳ್ಳದೆ ತಮ್ಮ ದೇಶದ ದೃಷ್ಟಿಯಿಂದಲೇ ಇಂತಹ ಜನ ಮಾತನಾಡುತ್ತಾರೆ. ಪೂರ್ವ ದೇಶಗಳಲ್ಲಿನ ಹಲವು  ವಿದ್ಯಾವಂತರು ಸಹ ಇವರ ಮಾತನ್ನೇ ನಂಬಿ, ಇದೇ ಕಣ್ಣಿನಿಂದಲೇ ತಮ್ಮ ದೇಶವನ್ನು ಕಾಣತೊಡಗುತ್ತಾರೆ. ಇದು ಅನ್ಯಾಯ ಎನ್ನಿಸಿತು. ಪೂರ್ವ ದೇಶಗಳ ಕಲೆಗಳನ್ನು ವಿವರಿಸುವ ಅಗತ್ಯ ಇನ್ನೂ ಸ್ಪಷ್ಟವಾಯಿತು.  ಸ್ವಲ್ಪ ಕಾಲದನಂತರ ಬುದ್ಧ ವಿಗ್ರಹದ ಮೂಲಎಂಬ ಪುಸ್ತಕವನ್ನು ಬರೆದರು.

ಆನಂದ ಕುಮಾರಸ್ವಾಮಿಯವರಿಂದ ಭಾರತೀಯ ಕಲೆ ತನ್ನ ಪರಂಪರೆಯಲ್ಲಿ ಹೇಗೆ ಸಾಗಿಬಂತು ಎಂಬ ಸಂಗತಿಯನ್ನು ಕುರಿತಾದ ಅನೇಕ  ಲೇಖನಗಳು ಪ್ರಕಟವಾದವು. ಕಲೆ ಮತ್ತು ಸ್ವದೇಶಿಎಂಬ ಪುಸ್ತಕ ಹೊರಬಂತು. ಇದು ಆನಂದ ಕುಮಾರಸ್ವಾಮಿಯವರ ಪ್ರಪಂಚ ಪರ್ಯಟನೆಯ ಅನಂತರ ಹೊರಬಂದ ಮೊದಲ ಪುಸ್ತಕ. ಎಲ್ಲೆಡೆಯಿಂದಲೂ ಅದಕ್ಕೆ ಸ್ವಾಗತ ದೊರೆಯಿತು. ಜಗತ್ತಿನ ಶ್ರೇಷ್ಠ ವಿದ್ವಾಂಸರು ಆನಂದ ಕುಮಾರಸ್ವಾಮಿಯವರ ಗ್ರಂಥವನ್ನು ಹೊಗಳಿದರು. ಒಂದರ ನಂತರ ಒಂದು ಪುಸ್ತಕಗಳ ಪ್ರಕಟಣೆಯಾದವು. ಇವುಗಳಲ್ಲಿ ಒಂದು ಭಾರತೀಯ ಹಾಗೂ ಸಿಂಹಳೀ ಕಲೆ ಮತ್ತು ಶಿಲ್ಪಎಂಬ ಇನ್ನೂರೈವತ್ತು ಪುಟಗಳ ಸಚಿತ್ರ ಪುಸ್ತಕ. ಇದರಲ್ಲಿ ಭಾರತೀಯ ಶಿಲ್ಪ, ಚಿತ್ರಕಲೆ, ಶಿಲ್ಪಶಾಸ್ತ್ರ ಮತ್ತು ಕರಕುಶಲ ಕಲೆಗಳ ಬಗ್ಗೆ ಬರೆದರು.

1917ರ ಒಂದು ದಿನ ಅಮೆರಿಕಾದಿಂದ ಕುಮಾರ ಸ್ವಾಮಿಯವರಿಗೆ ಕರೆ ಬಂತು. ಅವರನ್ನು ಬಾಸ್ಟನ್ನಿನ ಲಲಿತಕಲಾ ಸಂಗ್ರಹಾಲಯದಲ್ಲಿ ಭಾರತೀಯ, ಪರ್ಷಿಯನ್ ಮತ್ತು ಮುಸ್ಲಿಂ ಕಲೆಗಳ ಸಂಶೋಧನಾತಜ್ಞರಾಗಿ ನೇಮಕ ಮಾಡುವುದಾಗಿ ಆಹ್ವಾನಿಸಲಾಗಿತ್ತು. ಕುಮಾರಸ್ವಾಮಿಯವರ ಜೀವನದಲ್ಲಿ ಅದೊಂದು ತಿರುವು.  ಸಂಸಾರ ಸಮೇತ ಬಾಸ್ಟನ್ನಿಗೆ ಹೊರಟರು. ಬಾಸ್ಟನ್ನಿನ ಜೀವನ ಬಹಳ ಉಲ್ಲಾಸಕರವಾಗಿತ್ತು. ಮಾಡಿದಷ್ಟೂ ಕೆಲಸ, ದುಡಿದಷ್ಟೂ ಫಲ. ಅಲ್ಲೇ  ಅವರಿಗೆ ಸ್ವಾಮಿ ವಿವೇಕಾನಂದರ  ಪರಮಶಿಷ್ಯೆ  ಸೋದರಿ ನಿವೇದಿತಾ ಆವರ ಪರಿಚಯವಾಯಿತು. ಈಕೆಯೊಡನೆ ಕೆಲಸ ಮಾಡಿ ಆನಂದ ಕುಮಾರ ಸ್ವಾಮಿಯವರು, ‘ಹಿಂದುಗಳ ಮತ್ತು ಬೌದ್ಧರ ದಂತ ಕಥೆಗಳುಎಂಬ ಗ್ರಂಥ ಬರೆದರು.  ಬಾಸ್ಟನ್ನಿನ ಕಲಾಶಾಲೆಯಲ್ಲಿ ಅವರ ಅದ್ಭುತ ಕಾರ್ಯಪಟುತ್ವವನ್ನು ಗಮನಿಸಿದ ಸರ್ಕಾರ ಅವರನ್ನು ಅಲ್ಲಿಯ ಮುಖ್ಯಾಧಿಕಾರಿಯನ್ನಾಗಿ ನೇಮಿಸಿತು.

ಕುಮಾರಸ್ವಾಮಿಯವರ ಮಗ ನಾರದ ಸಾಹಿತ್ಯಕ ಲೇಖನ ಬರೆಯುವುದರಲ್ಲಿ ಚೆನ್ನಾಗಿ ಪಳಗಿದ. ಒಳ್ಳೆಯ ಲೇಖಕನಾಗುವ ಸೂಚನೆಯೂ ಕಾಣಿಸುತ್ತಿತ್ತು. ಮಗಳು ರೋಹಿಣಿ ಸಂಗೀತ ಕಲಿಯುತ್ತಿದ್ದಳು. ಒಳ್ಳೆಯ ಸಂಗೀತ ವಿದುಷಿಯಾಗುವ ಭರವಸೆ ಕಾಣುತ್ತಿತ್ತು. ಕುಮಾರಸ್ವಾಮಿಯವರ ಸಂಸಾರ ಜೀವನ ಕೆಲವು ಕಾಲ ತುಂಬಾ ಸಂತೋಷದಿಂದ ಸಾಗಿತು.  ಆದರೆ ಮೋಡಗಳು ಕವಿಯಲಾರಂಭವಾಯಿತು. ರತ್ನಾ ದೇವಿಯ ಆರೋಗ್ಯ ದಿನೇದಿನೇ ಕೆಡುತ್ತಾ ಬಂತು. ನಾರದನಿಗೆ ಪ್ರಪಂಚಪರ್ಯಟನೆಯ ಹುಚ್ಚು. ಕುಮಾರ ಸ್ವಾಮಿಯವರು ಮಗನನ್ನು ಕುರಿತು ಹಾಸ್ಯ ಮಾಡುತ್ತಿದ್ದರು. ನಾರದನೆಂಬ ನಿನ್ನ ಹೆಸರು ಅನ್ವರ್ಥವಾಗಿದೆ. ಪುರಾಣದ ನಾರದ ತ್ರಿಲೋಕ ಸಂಚಾರಿ. ನೀನೂ ಹಾಗೇಎಂದು. ತಂದೆಯ ಮಾತಿಗೆ ನಾರದ ನಕ್ಕು ಸುಮ್ಮನಾಗುತ್ತಿದ್ದ. ಬಿಡುವಿನ ವೇಳೆಯಲ್ಲಿ ತಂದೆಯೊಡನೆ ಕುಳಿತು ತನಗೆ ತೊಡಕಾದ ವಿಚಾರಗಳನ್ನು ಚರ್ಚಿಸಿ ಅನುಮಾನ ಪರಿಹರಿಸಿಕೊಳ್ಳುತ್ತಿದ್ದ.  ಒಂದು ಸಲ ನಾರದ ವಿಮಾನದಲ್ಲಿ ಪ್ರಯಾಣ ಹೊರಟ. ಹಿಂತಿರುಗಿ ಬರಲಿಲ್ಲ. ಅವನು ಪ್ರಯಾಣ ಮಾಡುತ್ತಿದ್ದ ವಿಮಾನ ಅಪಘಾತಕ್ಕೆ ಈಡಾಗಿ ಅಪಮೃತ್ಯು ಅವನನ್ನು ನುಂಗಿತು. ವಿಷಯ ತಿಳಿದ ರತ್ನಾದೇವಿ ಮಗನ ಮರಣದ ದುಃಖ ತಾಳಲಾರದೆ ಎದೆಯೊಡೆದು ಸತ್ತಳು. ಅವರ  ಮಗಳು  ರೋಹಿಣಿ  ಅಮೆರಿಕದ  ಯುವಕನೊಬ್ಬನನ್ನು  ವಿವಾಹವಾಗಬಯಸಿದಾಗ,  ಮಗಳ  ಸಂತೋಷಕ್ಕೆ  ಅಡ್ಡಿಬರಲಾಗದೆ  ಸಮ್ಮತಿಯಿತ್ತರು.  ಹೀಗೆ    ಆನಂದ ಕುಮಾರ ಸ್ವಾಮಿಯವರಿಗೆ ವಿವಿಧರೀತಿಯಲ್ಲಿ  ಬರಸಿಡಿಲು ಬಡಿದಂತಾಯಿತು.  ಉಪನಿಷತ್ತು, ಗೀತೆಗಳ ಕಡೆಗೆ ತಿರುಗಿ, ಓದಿ, ಚಿಂತನೆ ಮಾಡಿ ಮನಸ್ಸನ್ನು ಸಮಾಧಾನಕ್ಕೆ ತಂದುಕೊಂಡರು. ಪುನಃ ಒಂಟಿಯಾದ   ಕುಮಾರಸ್ವಾಮಿ ಅವರಿಗೆ ಮನಸ್ಸಿಗೆ ಸಮಾಧಾನ ಕೊಡುತ್ತಿದ್ದ ಸಂಗತಿಯೆಂದರೆ ಗ್ರಂಥ ರಚನೆಯ ಕಾರ್ಯ. ಶಿವನೃತ್ಯ’, ‘ಪ್ರಕೃತಿಯಲ್ಲಿ ರೂಪ ಬದಲಾವಣೆ’, ‘ಕಲೆಯಲ್ಲಿ ಕ್ರೈಸ್ತ ಮತ್ತು ಪೌರ್ವಾತ್ಯ ತತ್ವಚಿಂತನೆ’, ‘ಭಾರತೀಯ ಮತ್ತು ಇಂಡೋನೇಷ್ಯ ಕಲೆಗಳ ಇತಿಹಾಸ’, ‘ಬುದ್ಧ ಮತ್ತು ಬೌದ್ಧರ ತತ್ವಬೋಧೆಎಂಬ ಗ್ರಂಥಗಳನ್ನು ರಚಿಸಿದರು.

ಸಂನ್ಯಾಸಿಯಂತಹ ಒಂಟಿ ಬದುಕು. ತಮ್ಮ ಕೈ ಅಡಿಗೆಯ ಊಟ. ತಮ್ಮ ಕೆಲಸಗಳನ್ನೆಲ್ಲ ತಾವೇ ಮಾಡಿಕೊಳ್ಳುವರು. ಜೊತೆಗೆ ಪುಸ್ತಕಗಳ ಅಧ್ಯಯನ, ಕಲೆಗಳ ಅಧ್ಯಯನ. ಹೀಗೆ ಸ್ವಲ್ಪ ಕಾಲ ನಡೆಯಿತು.  ಆನಂದ ಕುಮಾರಸ್ವಾಮಿಗಳಿಗೆ ಬಾಸ್ಟನ್ನಿನಲ್ಲಿ ನೆಲೆಸಿದ್ದ ಅರ್ಜಂಟೈನಾದ ಡೋನಾ ಲ್ಯೂಸಾ ಎಂಬಾಕೆಯ ಪರಿಚಯವಾಯಿತು. ಈಕೆ ವಿಧವೆ. ಇವಳು ತಾನಾಗಿ ಕುಮಾರ ಸ್ವಾಮಿಯವರರನ್ನು ನೋಡಿಕೊಂಡಳು. ನಿಷ್ಠಾವಂತ ಅರ್ಧಾಂಗಿ, ಸಹಧರ್ಮಚಾರಿಣಿ ಎಂದು ಕಾರ್ಯತಃ ತೋರಿಸಿಕೊಟ್ಟಳು. ಆನಂದ ಕುಮಾರಸ್ವಾಮಿಯವರ ಲೇಖನಗಳನ್ನು ಸಂಪಾದಿಸುವುದರಲ್ಲಿ ಅವಳ ಶ್ರಮ ಅಪಾರ. ಅವರು ಆಕೆಯೊಡನೆ ಜೀವನದಲ್ಲಿ ತಮ್ಮ ದುಃಖ ಮರೆತರು.  ಆಕೆಗೂ ಒಂದು ಗಂಡುಮಗು ಹುಟ್ಟಿತು. ಇವನಿಗೆ ರಾಮಎಂದು ನಾಮಕರಣ ಮಾಡಿದರು. ರಾಮನಿಗೆ ಭಾರತೀಯ ಪದ್ಧತಿಯ ವಿದ್ಯಾಭ್ಯಾಸ ಮಾಡಿಸಬೇಕೆಂದು ಹರಿದ್ವಾರದ ಗುರುಕುಲ ವಿಶ್ವವಿದ್ಯಾಲಯದಲ್ಲಿ ಸೇರಿಸಿದರು. ಅಲ್ಲಿ ಆತ ಪದವಿ ಪಡೆದರು. ಮುಂದೆ ಅಮೆರಿಕಾದ ಅಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷ ಪ್ರಾವೀಣ್ಯ ಪಡೆದ ರಾಮ ಅವರು   ಮುಂದೆ ಅಮೆರಿಕದಲ್ಲೇ ವೈದ್ಯರಾಗಿ ಸೇವೆ ಸಲ್ಲಿಸಿ 2006ರ ವರ್ಷದಲ್ಲಿ ನಿಧನರಾದರು.

ಆನಂದ ಕುಮಾರಸ್ವಾಮಿಯವರ ಬಾಳೆಲ್ಲ ಪೂರ್ವ ದೇಶಗಳ, ಮುಖ್ಯವಾಗಿ ಭಾರತದ, ಚಿತ್ರಕಲೆ-ನೃತ್ಯಕಲೆ-ನಾಟಕ-ಸಂಗೀತಗಳ ಅಧ್ಯಯನಕ್ಕೇ ಮುಡಿಪಾಗಿತ್ತು. ಅವರ ಕಡೆಯ ವರ್ಷಗಳಂತೂ ಒಂದು ತಪಸ್ಸೇ ಆಯಿತು. ಅವರು ಅಮೆರಿಕದ ಬಾಸ್ಟನ್ನಿನಲ್ಲಿದ್ದರೂ ಅವರ ಚೇತನ ಭಾರತದಲ್ಲೇ ಇತ್ತು. ಭಾರತದ ಚಿತ್ರಗಳು, ಭಾರತದ ನೃತ್ಯಗಳು, ಭಾರತದ ನಾಟಕಗಳು, ಭಾರತದ ಸಂಗೀತ, ಭಾರತದ ಧರ್ಮ ಗ್ರಂಥಗಳು, ಭಾರತದ ಸಾಹಿತ್ಯ, ಭಾರತದ ಸಂಸ್ಕೃತಿ - ಇವುಗಳೇ ಅವರ ಹೃದಯದ ತುಂಬಾ, ಮೆದುಳಿನ ತುಂಬಾ.  1947ರ ಸೆಪ್ಟೆಂಬರ್ 8 ರಂದು ಅವರು ಇದ್ದಕ್ಕಿದ್ದಂತೆ ತೀರಿಕೊಂಡರು.


ಬಹು ದೊಡ್ಡ ವಿಮರ್ಶಕರು ಎಂದು ಪಾಶ್ಚಾತ್ಯ ದೇಶಗಳಲ್ಲಿ ಪ್ರಸಿದ್ಧರಾದವರು ಭಾರತದ ಕಲೆಗಳನ್ನು ಅರ್ಥ ಮಾಡಿಕೊಳ್ಳದೆ, ಜವಾಬ್ದಾರಿ ಇಲ್ಲದೆ ಮಾತನಾಡುತ್ತಿದ್ದ ಕಾಲದಲ್ಲಿ ಅವರ ಕಣ್ಣು ತೆರೆಸಿದವರು ಆನಂದ ಕುಮಾರಸ್ವಾಮಿ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: Anand K. Coomaraswamy

ಕಾಮೆಂಟ್‌ಗಳಿಲ್ಲ: