ಭಾನುವಾರ, ಸೆಪ್ಟೆಂಬರ್ 1, 2013

ಪಿಟೀಲು ಚೌಡಯ್ಯನವರು

ಪಿಟೀಲು ಚೌಡಯ್ಯನವರು

ಬೆಂಗಳೂರಿನ ಮಲ್ಲೇಶ್ವರದಲ್ಲಿ ಇತ್ತಕಡೆ ಸ್ಯಾಂಕಿ ರಸ್ತೆಗೂ ಕಾಣುವಂತೆ ಪಿಟೀಲಿನ ಆಕಾರದ ಚೌಡಯ್ಯ ಮೆಮೋರಿಯಲ್ ಹಾಲ್ ಇದೆ.  ಅದು ಕರ್ಣಾಟಕ ಸಂಗೀತದ ಮಹಾನ್ ವಿದ್ವಾಂಸ, ಪ್ರಖ್ಯಾತ ವಯಲಿನ್ ವಾದಕ ತಿರುಮಕೂಡಲು ಚೌಡಯ್ಯನವರ ಸ್ಮಾರಕವಾಗಿದೆ.  ಪಿಟೀಲು ಚೌಡಯ್ಯ ಎಂದೇ ಅವರು ಪ್ರಖ್ಯಾತರು.  ಮೈಸೂರಿನ ಚಾಮರಾಜಪುರಂನಲ್ಲಿ ಈಗಲೂ ಪಿಟೀಲು ಚೌಡಯ್ಯನವರಿದ್ದ ಮನೆ ಇದೆ.   ಜನವರಿ 19 ಚೌಡಯ್ಯನವರ ಪುಣ್ಯ ಸ್ಮರಣೆಯ ದಿನವಾಗಿದೆ.   1894ರ ವರ್ಷದಲ್ಲಿ ಜನಿಸಿದ ಚೌಡಯ್ಯನವರು ಜನವರಿ 19, 1967ರ ವರ್ಷದಲ್ಲಿ ಈ ಲೋಕವನ್ನಗಲಿದರು.

ಪಿಟೀಲು ಚೌಡಯ್ಯನವರು ಸಪ್ತ ತಂತಿಗಳ ಪಿಟೀಲನ್ನು ನುಡಿಸುತ್ತಿದ್ದ ಖ್ಯಾತಿವಂತರು.  ಚೌಡಯ್ಯನವರ ಏಳು ತಂತಿ ಪಿಟೀಲಿನ ಕಲ್ಪನೆಯ ಬಗೆಗೆ, ಕೆಲಕಾಲ ಅವರ ಶಿಷ್ಯರಾಗಿದ್ದ ಕನ್ನಡದ ಪ್ರಸಿದ್ಧ ಕವಿ ವಿ. ಸೀತಾರಾಮಯ್ಯನವರ ವಿಚಾರ ಲಹರಿ ಇದು.  ಸಪ್ತಸ್ವರಗಳ ದೇವತೆಗಳು ಚೌಡಯ್ಯನವರಿಗೆ ಸಪ್ತತಂತಿಗಳ ಕಲ್ಪನೆಗೆ ಇಂಬು ಕೊಟ್ಟಿರಬೇಕು.     ತನ್ನ ಎರಡನೆಯ ಪ್ರಾಣವೆಂದೇ ಭಾವಿಸಿದ್ದ ಈ ಏಳು ತಂತಿಗಳ ವಾದ್ಯದಲ್ಲಿ ತಮ್ಮ ಇಷ್ಟ ದೇವತೆಯ ಇರವನ್ನು ಕಂಡುಕೊಂಡ ಅವರಿಗೆ ಅದರ ಮೇಲೆ ವಿಶೇಷವಾದ ಪ್ರೀತಿ.  ಅದರ ಮೇಲೆ ಅವರು ಪ್ರತಿದಿನವೂ ಪ್ರಾಮಾಣಿಕವಾಗಿ, ಶ್ರದ್ಧಾಪೂರ್ವಕವಾಗಿ ನುಡಿಸುತ್ತಿದ್ದರು.  ಪಿಟೀಲು ಚೌಡಯ್ಯನವರ ಗುರುಗಳು ಬಿಡಾರಂ ಕೃಷ್ಣಪ್ಪನವರು.  ಅವರ ಗುರುಗಳು ವೀಣೆ ಶೇಷಣ್ಣನವರು.  ಸ್ವಯಂ ವೀಣೆ ಶೇಷಣ್ಣನವರೇ  ಚೌಡಯ್ಯನವರ ಸಪ್ತತಂತಿಗಳಿಂದ ಮೂಡಿಬಂದ ನಾದ ಸೊಗಸಾಗಿದೆ ಎಂದು ಬೆನ್ನುತಟ್ಟಿದರು.

ದೀರ್ಘ, ಸುಸ್ಥಿರ, ಮೋಹಕ ದಾಖಲೆಯನ್ನು ಕರ್ಣಾಟಕ ಸಂಗೀತದಲ್ಲಿ ಮೂಡಿಸಿದ ಕೆಲವೇ ಕೆಲವು ಸಂಗೀತಕಾರರಲ್ಲಿ ತಿರುಮಕೂಡಲು ನರಸೀಪುರದ ಸಂಗೀತರತ್ನ ಚೌಡಯ್ಯನವರೂ ಪ್ರಮುಖರು.  ಉತ್ಕೃಷ್ಟ ಮಟ್ಟದ ಈ ವಯಲಿನ್ ವಾದಕರ ಐದು ದಶಕಗಳ ಸಾರ್ಥಕ ಸಂಗೀತ ಸೇವೆ ಸ್ಮರಣೀಯವಾದುದು.  ಸಾಮಾನ್ಯ ಜನತೆಯಿಂದ ಹಿಡಿದು ಸಂಗೀತದ ರಸಜ್ಞರನ್ನು ರಂಜಿಸಿದ ಕಲೋಪಾಸಕರವರು.

ಸಮಕಾಲೀನ ಸಂಗೀತ ಕಲಾವಿದರಾದ, ವಯಲಿನ್ ವಾದ್ಯದಲ್ಲಿ ವಿಕ್ರಮವನ್ನೇ ಸಾಧಿಸಿದ ದ್ವಾರಂ ವೆಂಕಟಸ್ವಾಮಿ ನಾಯ್ಡು, ಕುಂಭಕೋಣಂ ರಾಜಮಾಣಿಕ್ಯ ಪಿಳ್ಳೆಯಂತಹ ಪ್ರತಿಭಾವಂತ ಕಲಾವಿದರನ್ನು ವಿಸ್ಮಯಗೊಳಿಸಿದ ವೈಶಿಷ್ಟ್ಯ ಈ ಮೈಸೂರು ವಯಲಿನ್ ಗಾರುಡಿಗರದು.  ಚೌಡಯ್ಯನವರು ಬಹುಮುಖ ಪ್ರತಿಭೆಯ ಕಲಾವಿದ.  ಕಚೇರಿ ಕಲಾವಿದರಷ್ಟೇ ಅಲ್ಲದೆ ನಾವೀನ್ಯತೆಯ ಶಿಲ್ಪಿ, ಶಿಕ್ಷಕ, ಸಂಘಟನಾ ಚತುರ, ಗೀತರಚನಕಾರ-ಹಾಗೂ ನಟ.  ವಾಣಿಎಂಬ ಚಲನಚಿತ್ರದಲ್ಲಿ ಇವರ ಪಾತ್ರ-ಇಡೀ ಚಿತ್ರವನ್ನೇ ನಾದಮಯವನ್ನಾಗಿಸಿ, ಇವರಿಗೆ ಅದ್ಭುತ ಸಂಗೀತ ಕಲಾವಿದನೆಂಬ ಕೀರ್ತಿಯನ್ನು ತಂದಿತು.

ತನಿವಾದ್ಯದವರಾಗಿಯೂ ಪಕ್ಕವಾದ್ಯದವರಾಗಿಯೂ ಚೌಡಯ್ಯನವರು ಆಗಿನ ಹಿರಿಯ ಸಂಗೀತ ವಿದ್ವಾಂಸರಿಂದ ಮೆಚ್ಚುಗೆ ಗಳಿಸಿದ್ದರು.  ಮೂಲಹಾಡುಗಾರನ ಸೃಜನಶೀಲತೆಗೆ ನೆರವಾಗುವುದು ಪಕ್ಕವಾದ್ಯದವನ ಕರ್ತವ್ಯ ಎಂದು ತಿಳಿದು ಅವರು ತಮ್ಮ ಕಚೇರಿಗಳನ್ನು ನಿರ್ವಹಿಸುತ್ತಿದ್ದರು.  1954ರಲ್ಲಿ ಮದ್ರಾಸಿನ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕ ಉತ್ಸವದಲ್ಲಿ ಅಧ್ಯಕ್ಷ ಪೀಠದಿಂದ ಅವರು ಆಡಿದ ಕೆಲವು ಮಾತುಗಳು, ವಿಶೇಷವಾಗಿ ಪಕ್ಕವಾದ್ಯದವರನ್ನು ಕುರಿತು ಆಡಿದ ಮಾತುಗಳೇ ಆಗಿದ್ದವು.  ಮುಖ್ಯ ಕಲಾವಿದನನ್ನು ಮೀರಿ ಯಾವ ವಯಲಿನ್ ವಾದಕನೂ ನುಡಿಸಬಾರದು ಅವನನ್ನೇ ಹಿಂಬಾಲಿಸುತ್ತ, ಅವನು ಹೇಳಿರುವುದನ್ನು ಬಿಡದೆ, ಹೇಳದೆ ಇರುವುದನ್ನು ಅತಿಕ್ರಮಿಸಿ ನುಡಿಸದೆ ಎಚ್ಚರಿಕೆಯಿಂದ ಇರಬೇಕು.  ವಯಲಿನ್ನಿನವನ ಸ್ವರಗತಿಯ ವೇಗ ಹಾಡುವವನ ಸ್ವರವೇಗಕ್ಕೆ ಸಮನಾಗಿರಬೇಕು.  ಆ ಒಂದು ಪರಿಣತಿಯನ್ನು ಸಾಧಿಸಲು ವಯಲಿನ್ ವಾದಕ ಸಂಪೂರ್ಣ ಸಂಗೀತ ಜ್ಞಾನವನ್ನು ಹೊಂದಿರಬೇಕು.  ಬಾಯಿ ಹಾಡುಗಾರಿಕೆಯಲ್ಲೂ ಆತನಿಗೆ ತಕ್ಕ ಮಟ್ಟಿಗೆ ಪಾಠವಾಗಿರಬೇಕು.  ಅಂತಹ ಪಿಟೀಲುವಾದಕ ಮಾತ್ರ ವೈಜ್ಞಾನಿಕವಾಗಿ ವಾದ್ಯವನ್ನು ನುಡಿಸುತ್ತಾ, ಪಧಾನ ಕಲಾವಿದನಿಗೆ ಉತ್ತಮ ನೆರವು ನೀಡಬಲ್ಲನಲ್ಲದೆ, ತನಿಯಾಗಿಯೂ ಆತ ಯಶಸ್ವಿಯಾಗಿ ವಾದ್ಯವನ್ನು ನಿರ್ವಹಿಸಬಲ್ಲವನಾಗುತ್ತಾನೆ.  ಮೃದಂಗ ವಾದಕನಿಗೂ ಈ ಮಾತು ಅನ್ವಯಿಸುತ್ತದೆ.  ಯಾವುದೇ ಪಕ್ಕವಾದ್ಯ ಕಲಾವಿದನಿಗೆ ಕಡೆಯ ಪಕ್ಷ ವರ್ಣದವರೆಗಾದರೂ ಬಾಯಿ ಹಾಡಿಕೆಯ ಪಾಠವಾಗಿ, ಸಾಕಷ್ಟು ಅಭ್ಯಾಸ, ಪ್ರಯೋಗಗಳಾಗಿರಬೇಕು.  ಚೌಡಯ್ಯನವರ ಹಲವು ದಶಕಗಳ ದಾರಿದೀಪ. 

ಈ ಪ್ರಬುದ್ಧ ಕಲಾವಿದರು ಹಾಡುಗಾರರಿಗೂ ಎಚ್ಚರಿಕೆಯ ಮಾತನ್ನು ಹೇಳಿದ್ದಾರೆ.  ಕಚೇರಿಯಲ್ಲಿ ಸಹಕಲಾವಿದರಲ್ಲಿ ಪರಸ್ಪರ ಅರಿವು ಮೂಡಿಸದೆ, ಮುಖ್ಯ ಗಾಯಕ ತಾನು ಹಾಡುತ್ತಿರುವ ರಾಗ ಅಥವಾ ತಾಳ ಯಾವುದೆಂದು ಸರಿಯಾಗಿ ತಿಳಿಸದೆ ಕಣ್ಣಾಮುಚ್ಚಾಲೆಯಾಡುವುದರಿಂದ ಮುಖ್ಯಗಾಯಕ ತಾನು ಇತರರಿಗಿಂತ ಮೇಲು, ಪಕ್ಕವಾದ್ಯದವರನ್ನು ಸೋಲಿಸಿದೆ ಎಂಬ ಅಹಂ ಹೊಂದಿರಕೂಡದು.  ಇಂತಹ ಪ್ರಸಂಗಗಳು ಕಚೇರಿಗಳ ಇತಿಹಾಸದಲ್ಲಿ ಸಾಕಷ್ಟು ಕೇಳಿಬರುತ್ತವೆ.  ಅಷ್ಟೇಕೆ ಚೌಡಯ್ಯನವರದೇ ಒಂದು ಮುಖ್ಯ ಸಭೆಯಲ್ಲಿ ಮುಖ್ಯ ಗಾಯಕ ಮುಸುರಿಯವರು ನೀಡುತ್ತಿದ್ದ ಆಲಾಪನೆಯಲ್ಲಿ ಯಾವ ರಾಗ ಎಂಬುದು ಸೂಕ್ಷ್ಮವಾಗಿ, ಸಂದಿಗ್ಧದಲ್ಲಿದ್ದಾಗ ಪಕ್ಕವಾದ್ಯ ನುಡಿಸುತ್ತಿದ್ದ ಚೌಡಯ್ಯನವರು, ಏನೋ ಮಾತಿಗೆ ಮಾತು ಬಂದು ಚಕಮಕಿ ನಡೆದು ಸಭೆ ಗಂಭೀರ ಸ್ಥಿತಿಯಲ್ಲಿದ್ದಾಗ ಅದಿರಲಿ ಸ್ವಾಮಿ, ತಾವು ಹಾಡುತ್ತಿರುವುದು ವರಾಳಿಯೋ ಕಾಮವರ್ಧಿನಿಯೋಎಂದು ಕೇಳಿಯೇ ಬಿಟ್ಟರು.  ಇಂತಹ ಅನುಭವದಿಂದಲೇ ಚೌಡಯ್ಯನವರು ಮೂಲ ಗಾಯಕರನ್ನು ಕುರಿತು ಹೀಗೆ ಹೇಳಿರುವುದು.  ಈ ಅಧ್ಯಕ್ಷ ಭಾಷಣದಲ್ಲೇ ವಯಲಿನ್ ವಾದಕರು ಹೇಗೆ ಎಚ್ಚರಿಕೆಯಿಂದ ಪಿಟೀಲಿನ ಕಮಾನನ್ನು ಉಪಯೋಗಿಸಿ ತನ್ನ ಕಲಾ ಪ್ರೌಢಿಮೆಯನ್ನು ತೋರಬಹುದು ಎಂದೂ ಬಣ್ಣಿಸಿದರು.  ಅದೊಂದು ನಿರ್ದೇಶಾತ್ಮಕ ಭಾಷಣವೂ ಹೌದು.

ಚೌಡಯ್ಯನವರ ಶಿಷ್ಯರಾದ ವಯಲಿನ್ ವಿ. ಸೇತುರಾಮ್ ಅವರು ತಮ್ಮ ಗುರುವಿನ ಗುರು ಭಕ್ತಿಯನ್ನು ಸ್ಮರಿಸುತ್ತಾರೆ:  ಪ್ರತಿದಿನ ಪೂಜೆಯಾದ ನಂತರ ಬಿಡಾರಂ ಕೃಷ್ಣಪ್ಪನವರ ಭಾವಚಿತ್ರದ ಮುಂದೆ ಕುಳಿತು ಕೆಲ ಕಾಲ ಪಿಟೀಲು ನುಡಿಸಿ, ಗುರುವಿಗೆ ತಮ್ಮ ಭಕ್ತಿಯ ಕೈಂಕರ್ಯವನ್ನು ಸಲ್ಲಿಸಿ ನಂತರ ಊಟಕ್ಕೆ ಹೋಗುತ್ತಿದ್ದರು.  ಅವರಿಗೆ ಗುರುವಿನ ಮಾತೇ ಸರ್ವಸ್ವ.  ತಮ್ಮ ಗುರುಗಳು ಕಟ್ಟಿಸಿದ ರಾಮ ಮಂದಿರದಲ್ಲಿ ಪ್ರತಿ ವರ್ಷವೂ ತಮ್ಮ ಗುರುಗಳು ರಾಮ ನವಮಿ ಸಂದರ್ಭದಲ್ಲಿ ನಡೆಸುತ್ತಿದ್ದಂತೆ ಪೂಜೆ ಹಾಗೂ ಕಚೇರಿಗಳನ್ನು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿದ್ದರು.  ಹಿರಿಯ ಸಂಗೀತ ವಿದ್ವಾಂಸರು, ಕಿರಿಯರಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಶಿಷ್ಯರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳುತ್ತಿದ್ದುದೊಂದೇ ಅಲ್ಲದೆ ನುಡಿದಂತೆ ನಡೆದುಕೊಳ್ಳುತ್ತಿದ್ದರು.  ಒಮ್ಮೆ ನಾನು ಮೊದಲಬಾರಿಗೆ ಅರಿಯಾಕುಡಿಯವರಂತಹ ಮಹಾನ್ ಗಾಯಕರಿಗೆ ಪಕ್ಕವಾದ್ಯ ನುಡಿಸಲು ನಿಯೋಜಿತನಾಗಿದ್ದೆ.  ಇದನ್ನು ಕೇಳಿದ ನಮ್ಮ ಗುರುಗಳು ತನ್ನ ಶಿಷ್ಯನ ನುಡಿಕೆಯನ್ನು ಕೇಳಿ ಶುಭ ಹಾರೈಸಲು  ಮೈಸೂರಿನಿಂದ ಪುದುಕೋಟೆಗೆ ಬಂದಿದ್ದರು.  ಮದ್ರಾಸಿನ ಸಂಗೀತ ಅಕಾಡೆಮಿಯಲ್ಲಿ ನಡೆದ ಶಿಷ್ಯನಾದ ರಾಮನಾಥ ಕೃಷ್ಣನ್ ಕಚೇರಿಯಲ್ಲಿ ಗುರುಗಳೇ ಪಕ್ಕವಾದ್ಯ ನುಡಿಸಿದ್ದರು.  ಹೀಗಾಗಿ ನಮ್ಮ ಗುರುಗಳ ನುಡಿಗೂ ನಡೆಗೂ ಸಂಪೂರ್ಣ ಸಾಮರಸ್ಯವಿತ್ತು.”  ಇನ್ನು ಶಿಷ್ಯರಿಗೆ ಅವರು ನೀಡುತ್ತಿದ್ದ ಪಾಠದ ವೈಖರಿಯನ್ನು ಕುರಿತು ಪ್ರೊ. ವಿ. ರಾಮರತ್ನಂ ಅವರು ಹೇಳುವ ಮಾತುಗಳೂ ಗಮನಾರ್ಹ.  ನಮ್ಮ ಗುರುಗಳು ಶಿಷ್ಯರ ಅಭ್ಯಾಸಕ್ರಮದಲ್ಲಿ ಕಟ್ಟುನಿಟ್ಟು, ತ್ರಿಕಾಲದಲ್ಲಿ ವರ್ಣ ಹಾಡಿಕೆ ಪ್ರತಿದಿನವೂ ನಡೆಯಬೇಕು ಎಂದು ಒತ್ತಾಯಿಸುತ್ತಿದ್ದರು.  ತಮ್ಮ ಶಿಷ್ಯರೊಂದಿಗೆ ತಾವು ಬಲ್ಲ ಸಂಗೀತಜ್ಞಾನವನ್ನು ನಿರ್ವಂಚನೆಯಿಂದ ಹಂಚಿಕೊಳ್ಳುತ್ತಿದ್ದರು.  ಶಿಷ್ಯರು ಏನಾದರೂ ಸಮಸ್ಯೆಯನ್ನು ಎತ್ತಿದರೆ ಅದನ್ನು ನಿವಾರಿಸುವವರೆಗೂ ಅವರಿಗೆ ತೃಪ್ತಿಯಿಲ್ಲ.  ಸಮಸ್ಯೆಯ ಪರಿಹಾರಕ್ಕೆ ಅವರದು ಅವಿರತಶ್ರಮ.

ಚೌಡಯ್ಯನವರಿಗೆ ಅನೇಕ ಕೀರ್ತಿ ಗೌರವ ಪ್ರಶಸ್ತಿಗಳು ಸಂದಿದ್ದರೂ ಅವರು ಎಂದೂ ತಮ್ಮ ವಿದ್ವತ್ತಿನ ಬಗೆಗೆ ಸರಳ ಸೌಜನ್ಯ ವ್ಯಕ್ತಿ ಎಂದು ಶಿಷ್ಯ ಸೇತುರಾಮ್ ಒಂದು ಪ್ರಸಂಗವನ್ನು ನೆನಪಿಸುತ್ತಾರೆ.  ಮದ್ರಾಸಿನಲ್ಲಿ ಮಹಾರಾಜಪುರಂ ವಿಶ್ವನಾಥ ಅಯ್ಯರ್ ಅವರ ಕಚೇರಿ.  ಸಾವೇರಿರಾಗದ ಅದ್ಭುತವಾದ ಆಲಾಪನೆ ನಡೆದು ಪಕ್ಕವಾದ್ಯದವರಿಗೆ ಸರದಿಟ್ಟರು.  ನನ್ನ ಗುರು ಚೌಡಯ್ಯನವರು ಪಿಟೀಲನ್ನು ಕೆಳಗಿಟ್ಟು, “ನೀವು ಸಾವೇರಿಯನ್ನು ಇಷ್ಟೊಂದು ಮನಮೋಹಕವಾಗಿ ಹಾಡಿದ ಮೇಲೆ ಬೇರೆ ಯಾರೂ ಆ ರಾಗವನ್ನು ಸರಿಗಟ್ಟಲಾರರು.  ರಸಿಕ ಶೋತೃಗಳು ಕೂಡ ಅದನ್ನು ಮೆಚ್ಚಿಕೊಳ್ಳಲಾರರು ಎಂದು ನನ್ನ ನಂಬಿಕೆಎಂದು ವಿನಮ್ರರಾಗಿ ನುಡಿದು ಆ ಗಾನಭಾಸ್ಕರನಿಗೆ ನಮನ ಸಲ್ಲಿಸಿದರು.  ಇನ್ನೊಮ್ಮೆ ಮೈಲಾಪುರದಲ್ಲಿ ತಮ್ಮ ಸಪ್ತಶಿಷ್ಯರೊಂದಿಗೆ ಸಪ್ತತಂತಿಯ ಒಡನಾಟ ಏನು ಹೇಳಲಿನಮ್ಮ ಗುರುಗಳ ಸಂಗೀತ ಕಲಾವೈಖರಿ  ಎನ್ನುತ್ತಾರೆ.

ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಅವರು ಚೌಡಯ್ಯನವರಲ್ಲಿನ ಕಲಾ ಪ್ರತಿಭೆಯನ್ನು ಕಂಡುಕೊಂಡ ರೀತಿ ಇದು:  ವಯಲಿನ್ ನುಡಿಸುವುದರಲ್ಲಿ ಚೌಡಯ್ಯನವರಲ್ಲಿ ಕಾಣಬರುವ ಸೃಜನಶೀಲ ಕೌಶಲವನ್ನು, ಸರಿಗಟ್ಟಿದವರು ಕೆಲವರೇ ಕೆಲವರುಮೀರಿಸಿದವರ ಸಂಖ್ಯೆಯಂತೂ ತೀರ ವಿರಳ.  ತಮ್ಮ ವಾದ್ಯದ ಮೇಲೆ ವಿಶೇಷ ಪ್ರಭುತ್ವವನ್ನು ಹೊಂದಿದ್ದ ಅವರು ಮುಖ್ಯ ಕಲಾವಿದನಿಗೆ ಸಹಾಯಕರಾಗಿ ಅನುಸರಿಸುತ್ತಿದ್ದರು.  ಇಡೀ ಸಂಗೀತ ಸಭೆಯ ಒಟ್ಟಂದಕ್ಕೆ ಅವರು ನೀಡುತ್ತಿದ್ದ ಸಹಕಾರ ಅನುಪಮವಾದುದು.” 

ಪ್ರೊ. ಸಾಂಬಮೂರ್ತಿಯವರು ಚೌಡಯ್ಯನವರ ವಾದನದಲ್ಲಿ ನಾದ ದೇವತೆಯನ್ನು ಕಾಣುತ್ತಿದ್ದರು.  ಅವರು ಕಮಾನನ್ನು ಹಿಡಿದು ವಾದ್ಯಕ್ಕೆ ಸ್ಪರ್ಶಾನುಭವವನ್ನು ನೀಡಿದರೆಂದರೆ ಇಡೀ ಸಭೆಯಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತಿತ್ತು, ನಾದಮಯವಾಗುತ್ತಿತ್ತು, ಹೀಗಿದೆ ಸಂಗೀತರತ್ನ ಚೌಡಯ್ಯನವರ ಕಲಾಕೌಶಲ!

ಚೌಡಯ್ಯನವರ ಸಾಧನೆಗಳಲ್ಲಿ ಮತ್ತೊಂದು ಮುಖ್ಯ ಅಂಶವೆಂದರೆ ಮದ್ರಾಸ್ ಹಾಗೂ ಮೈಸೂರು ಕಲಾವಿದರೊಂದಿಗೆ ಸೇತುಬಂಧತಮಿಳುನಾಡಿನ ಆಗಿನ ಶ್ರೇಷ್ಠ ಕಲಾವಿದರಿಗೆಲ್ಲಾ ಚೌಡಯ್ಯನವರು ಪಕ್ಕವಾದ್ಯ ನೀಡಿದ್ದಾರೆ, ಅದೊಂದು ಮರೆಯಲಾಗದ ಭಾವಾನುಬಂಧವಾಗಿತ್ತು.  ಆ ನೆಪದಲ್ಲೇ ತಮಿಳುನಾಡಿನ ಎಷ್ಟೋ ಕಲಾವಿದರು ಆಗ ಸಂಗೀತದ ಕಣಜವೆನಿಸಿದ್ದ  ಮೈಸೂರಿಗೆ ಬಂದು ತಮ್ಮ ಅಪರೂಪದ ಕಚೇರಿಗಳನ್ನು ನೀಡಿದರು.  ಇದು ಚೌಡಯ್ಯನವರ ಸಾಧನೆ ಎಂದೇ ಹಲವಾರು ಬಲ್ಲವರ ಮತ.

ಒಮ್ಮೆ ಕಚೇರಿಯೊಂದರಲ್ಲಿ ಮಿತ್ರರು ಚೌಡಯ್ಯನವರನ್ನು ಅವರ ಆರೋಗ್ಯದ ಬಗ್ಗೆ ವಿಚಾರಿಸಿದಾಗ ಆರೋಗ್ಯವೆಲ್ಲಿ ಸ್ವಾಮಿ ವಾರದಿಂದ ಮೇಲೆದ್ದಿಲ್ಲ.  ಗುರುಗಳ ಸ್ಮರಣಾರ್ಥದ ಇಂದಿನ ಕಚೇರಿಯಲ್ಲಿ ತಪ್ಪಿಸಿಕೊಳ್ಳಲಾಗದೆ ಬಂದಿದ್ದೇನೆ.  ಈ ನನ್ನ ಪ್ರಿಯವಾದ್ಯವನ್ನು ನುಡಿಸುತ್ತಲೇ ಪ್ರಾಣ ಹೋದರೆ ಹೋಗಲೇಳಿ ಸ್ವಾಮಿಎಂದು ನುಡಿದ ನಾದೋಪಾಸಕ ಚೌಡಯ್ಯನವರು 1967ರ ಜನವರಿ 19ರಂದು ಮನೆಯಲ್ಲಿ ಜ್ಞಾನತಪ್ಪಿ ಬಿದ್ದರು.  ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಮೇಲೆ ಸ್ವಾಮಿ, ಈ ದಿನ ಚಂಬೈ ಅವರೊಂದಿಗೆ ಬೆಂಗಳೂರಿನಲ್ಲಿ ಕಚೇರಿ ಇದೆ.  ದಯವಿಟ್ಟು ಕಳುಹಿಸಿ ಕೊಡಿಎಂದು ಡಾಕ್ಟರನ್ನು ಕಾಡಿ ಬೇಡಿದರು.  ಆದರೆ ಅಂದು ರಾತ್ರಿಯೇ ಅವರು ತೀರಿಕೊಂಡರು.

ಚೌಡಯ್ಯನವರು ಹೇಗೆ ಸಂಪಾದಿಸಿದರೋ ಹಾಗೆಯೇ ನೀರಿನಂತೆ ಅದನ್ನು ದಾನಧರ್ಮಗಳಿಗೆ ವಿನಿಯೋಗಿಸಿದರು.  ಆಗಿನ ಕಾಲಕ್ಕೆ ಅವರ ಕಚೇರಿಗಳಿಗೆ ದೊರೆಯುತ್ತಿದ್ದ ಸಂಭಾವನೆ ಅತಿ ಹೆಚ್ಚಿನದು.  ಅವರ ಸ್ಮರಣಾರ್ಥ ಬೆಂಗಳೂರಲ್ಲಿ ರೂಪಗೊಂಡಿರುವ ಸ್ಮಾರಕ ಭವನ ಚೌಡಯ್ಯ ಹಾಲ್ ಸಾರ್ಥಕ ಸೌಧವಾಗಿದೆ.


ಆಧಾರ: ಡಾ. ಕೆ. ಶ್ರೀಕಂಠಯ್ಯನವರ ಬರಹ

Tag: Piteel Chowdaiah

ಕಾಮೆಂಟ್‌ಗಳಿಲ್ಲ: