ಬುಧವಾರ, ಆಗಸ್ಟ್ 28, 2013

ಧ್ಯಾನ್ ಚಂದ್

ಧ್ಯಾನ್ ಚಂದ್

ಧ್ಯಾನ್ ಚಂದ್ ವಿಶ್ವ ಕ್ರೀಡಾ ಇತಿಹಾಸದಲ್ಲಿ ಅವಿಸ್ಮರಣೀಯಯರು.  ಧ್ಯಾನ್ ಚಂದ್  ಜನಿಸಿದ್ದು ಆಗಸ್ಟ್ 29, 1905ರಲ್ಲಿ.  ಸ್ಥಳ ಉತ್ತರ ಪ್ರದೇಶದ ಪ್ರಯಾಗ.  ಅವರ ತಂದೆ ಭಾರತೀಯ ಬ್ರಿಟಿಷ್ ಸೈನ್ಯದಲ್ಲಿ ಹವಾಲ್ದಾರರಾಗಿದ್ದರು. 

ಧ್ಯಾನ್ ಚಂದ್ ಶಾಲೆಯಲ್ಲಿ ಓದಿದ್ದು ಅತೀ ಕಡಿಮೆ.  ಹದಿನಾರನೇ ವಯಸ್ಸಿಗೇ ಸೈನ್ಯಕ್ಕೆ ಸೇರಿದರು.  ಕ್ರೀಡೆಯಲ್ಲೂ ಅಂತಹ ವಿಶೇಷ ಪರಿಣತಿ ಇರಲಿಲ್ಲ.  ಸೈನ್ಯದಲ್ಲಿ ಸ್ನೇಹ ಪೂರ್ಣ ಪಂದ್ಯಗಳಲ್ಲಿ ಎಲ್ಲರೊಂದಿಗೆ ಆಡುತ್ತಿದ್ದರು.  ಈತ ಆಡುವ ಆಟದಲ್ಲಿ ಏನೋ ವಿಶೇಷವಿದೆ ಎಂದು ಕಂಡ ಸುಭೇದಾರ್ ಮೇಜರ್ ಭೋಲೇ ತಿವಾರಿ ಎಂಬುವರು ಧ್ಯಾನ್ ಚಂದ್ ಅವರಿಗೆ ವೈಯಕ್ತಿಕವಾಗಿ ನಿಗಾವಹಿಸಿ ಹಾಕಿ ಆಟದ ವಿಶೇಷತೆಗಳ ಬಗೆಗೆ ಉತ್ತಮ ತರಬೇತಿ ನೀಡಿದರು. 

ಅಂದಿನ ಭಾರತೀಯ  ಸೈನ್ಯದಲ್ಲಿ  ಹಾಗೂ ವಿವಿಧ ವಲಯಗಳ  ತಂಡಗಳ ಮಟ್ಟದಲ್ಲಿ ಆಡತೊಡಗಿದ ಧ್ಯಾನ್ ಚಂದ್,  ಹಲವು ಅಂತರರಾಷ್ಟ್ರೀಯ ಪಂದ್ಯಗಳ ಬಳಿಕ ಒಲಿಂಪಿಕ್ಸ್ ಪಂದ್ಯಾವಳಿಗೆ ತಲುಪಿ ತಾವು  ಆಡಿದ ಮೂರೂ ಒಲಿಂಪಿಕ್ಸ್ ಕ್ರೀಡೆಗಳಲ್ಲೂ ಭಾರತಕ್ಕೆ ಚಿನ್ನದ ಪದಕ ದೊರಕುವಲ್ಲಿ ಮಹತ್ತರವಾದ ಪಾತ್ರ ವಹಿಸಿದರು.

ಆಡಿದ ಮೂರು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಒಟ್ಟು ಹನ್ನೆರಡು ಪಂದ್ಯಗಳಲ್ಲಿ ಧ್ಯಾನ್ ಚಂದ್ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 33.

ಧ್ಯಾನ್ ಚಂದ್ ಎಂಬ ಹೆಸರು ಒಂದು ರೀತಿಯಲ್ಲಿ ದಂತ ಕಥೆಯೇಆಗಿದೆ. ಆ ಕಾಲದಲ್ಲಿ ಫುಟ್ ಬಾಲ್ ಆಟದಲ್ಲಿ ಪೀಲೆ, ಕ್ರಿಕೆಟ್ಟಿನಲ್ಲಿ ಡೊನಾಲ್ಡ್ ಬ್ರಾಡ್ ಮನ್ ಅವರ ಸಾಧನೆಗಳು ಎಂತಿವೆಯೋ ಅಂತದ್ದೇ ಮಟ್ಟದ ಹೆಸರು ಧ್ಯಾನ್ ಚಂದ್ ಅವರದ್ದು.

ಅವರ ಬಗೆಗಿರುವ ಕೆಲವು ಕಥಾನಕಗಳು ಹೀಗಿವೆ. 

ಒಮ್ಮೆ ಧ್ಯಾನ್ ಚಂದ್ ಅವರು ಆಡಿದ ಪಂದ್ಯದಲ್ಲಿ ಅವರಿಗೆ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲವಂತೆ.  ಕಡೆಗೆ ಧ್ಯಾನ್ ಚಂದ್ ಅವರು ಮ್ಯಾಚ್ ರೆಫರಿ ಅವರೊಂದಿಗೆ ವಾಗ್ವಾದ ಹೂಡಿ ನೇರವಾಗಿ ಈ ಕ್ರೀಡಾಂಗಣದಲ್ಲಿ ಇರುವ 'ಗೋಲ್ ಪೋಸ್ಟ್' ಅಳತೆ ಅಸಮರ್ಪಕವಾದುದು, ಹಾಕಿ ಆಟದ ಅಂತರರಾಷ್ಟ್ರೀಯ ನಿಯಮಾವಳಿಗಳಿಗೆ ವ್ಯತಿರಿಕ್ತವಾದದ್ದುಎಂದು ನುಡಿದರಂತೆ.  ಧ್ಯಾನ್ ಚಂದ್ ಅವರ ಅಭಿಪ್ರಾಯವನ್ನು ಮನ್ನಿಸಿ ನಿಜವಾದ ಅಳತೆ ಮಾಡಿದಾಗ ಧ್ಯಾನ್ ಚಂದ್ ಅವರ ಅಭಿಪ್ರಾಯ ಅಕ್ಷರಷಃ ನಿಜವಾಗಿತ್ತು.

1936ರ ಒಲಿಂಪಿಕ್ಸ್ ಪಂದ್ಯದಲ್ಲಿ  ಭಾರತ ತಂಡವು ಜಯಗಳಿಸಿದ ನಂತರದಲ್ಲಿ, ಎಲ್ಲೆಡೆಯಲ್ಲೂ ಧ್ಯಾನ್ ಚಂದ್ ಅವರ ಹಾಕಿ ಮಾಂತ್ರಿಕತೆಯ ಆಟ ಪ್ರಸಿದ್ಧಿ ಪಡೆದು, ಪ್ರೇಕ್ಷಕರು ಇವರ ಆಟ ನೋಡಲು ಮುಗಿಬೀಳುತ್ತಿದ್ದರು.  ಒಂದು ಜರ್ಮನ್ ಪತ್ರಿಕೆ ನೀಡಿದ ವರದಿ ಹೀಗಿತ್ತು.  "ಹಾಕಿ ಆಟ ಇದೀಗ ಮ್ಯಾಜಿಕ್ ಷೋ ಕೂಡಾ ಆಗಿದೆ.  ಭಾರತೀಯ ಹಾಕಿ ಆಟದ ಮ್ಯಾಜಿಕ್ ವ್ಯಕ್ತಿಯಾದ  ಧ್ಯಾನ್ ಚಂದ್ ಅವರ ಆಟ ನೋಡಲಿಕ್ಕೆ ಇಂದು ಹಾಕಿ ಕ್ರೀಡಾಂಗಣಕ್ಕೆ  ತಪ್ಪದೆ ಬನ್ನಿ".

ಬರ್ಲಿನ್ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಧ್ಯಾನ್ ಚಂದ್ ಅವರ ಆಟ ಕಂಡ ಅಡೋಲ್ಫ್ ಹಿಟ್ಲರ್ ಧ್ಯಾನ್ ಚಂದ್ ಅವರಿಗೆ ಜರ್ಮನಿ ತಂಡದ ಪರವಾಗಿ ಆಡಲು ನೀಡಿದ ಪ್ರಲೋಭನೆಗಳೆಂದರೆ "ಬ್ರಿಟಿಷ್ ಸೇನೆಯಲ್ಲಿ ಮೇಜರ್ ಹುದ್ದೆ, ಜರ್ಮನಿಯ ಪೌರತ್ವ, ಕೊಲೋನೆಲ್ ಗೌರವದ ಕೊಡುಗೆ.  ಆದರೆ ಇದನ್ನು ಧ್ಯಾನ್ ಚಂದರು ಸ್ವೀಕರಿಸಲಿಲ್ಲ.   

ಕ್ರಿಕೆಟ್ ಆಟದ ಸಾರ್ವಕಾಲಿಕ ತಾರೆ ಡಾನ್ ಬ್ರಾಡ್ ಮನ್ಒಮ್ಮೆ ಅಡಿಲೈಡ್ ನಲ್ಲಿ ಧ್ಯಾನ್ ಚಂದ್ ಅವರನ್ನು ಮುಖಾ ಮುಖಿಯಾದಾಗ ಕೇಳಿದರಂತೆ "ಏನಪ್ಪಾ, ನಾವು ಕ್ರಿಕೆಟ್ನಲ್ಲಿ ರನ್ ಬಾರಿಸುವಂತೆ ನೀನು ಗೋಲುಗಳನ್ನು ಬಾರಿಸುತ್ತೀಯಲ್ಲ" ಎಂದು.

ಧ್ಯಾನ್ ಚಂದ್ ಅವರಿಗೆ ಭಾರತದಲ್ಲಿ ಒಂದು ಪುತ್ಥಳಿ ಇರುವುದು ಏನೂ ವಿಶೇಷವಲ್ಲ ಬಿಡಿ.  ಅವರ ಪುತ್ಥಳಿಯನ್ನು ಮೊದಲು ಸ್ಥಾಪಿಸಿದ್ದು  ಆಸ್ಟ್ರಿಯಾದ ವಿಯೆನ್ನಾದಲ್ಲಿ ಎಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಪ್ರಸಿದ್ಧಿ ಎಷ್ಟಿತ್ತೆಂಬುದನ್ನು ಊಹಿಸಬಹುದಾಗಿದೆ.  

ಹೀಗೆ ಭಾರತದ ಒಬ್ಬ ಆಟಗಾರ ತನ್ನ ಮಹೋನ್ನತ ಸಾಧನೆಗಳಿಂದ ದಂತಕತೆಯಾಗಿರುವುದು ಭಾರತೀಯರಿಗೆಲ್ಲಾ ಮಹೋನ್ನತವಾದ ಹೆಮ್ಮೆ.  ಒಂದು ದುರದೃಷ್ಟವೆಂದರೆಆ ನಂತರದ ತಲೆಮಾರಿನವರು ಅಂತಹ ಆಟಗಾರನನ್ನು ಕಾಣಲಾಗದಿದ್ದುದು.  ಅವರು 1979ರ ಡಿಸೆಂಬರ್ 3ರಂದು ನಿಧನರಾದರು. 


ಈ ಮಹಾನ್ ಹಾಕಿ ಗಾರುಡಿಗರಿಗೆ ನಮ್ಮ ನಮನ.

Tag: Dhyanchand

ಕಾಮೆಂಟ್‌ಗಳಿಲ್ಲ: